ಮಕ್ಕಳಿಗೆ ಓದಲು ಕಲಿಸುವ ಬಗೆ

ಡಿ.ಎನ್.ಶಂಕರ ಬಟ್.

ನುಡಿಯರಿಮೆಯ ಇಣುಕುನೋಟ – 16

nudi_inukuಎಲ್ಲಾ ಮಕ್ಕಳೂ ತಮ್ಮ ತಾಯ್ನುಡಿಯಲ್ಲಿ ಮಾತನಾಡಲು ತಾವಾಗಿಯೇ ಕಲಿತುಕೊಳ್ಳುತ್ತಾರೆ; ಕೆಲವರು ಈ ಕಲಿಕೆಯನ್ನು ಬೇಗನೆ ನಡೆಸಬಹುದು, ಮತ್ತು ಕೆಲವರು ಅದಕ್ಕಾಗಿ ಸ್ವಲ್ಪ ಹೆಚ್ಚು ಸಮಯ ತೆಗೆದುಕೊಳ್ಳಬಹುದು. ಆದರೆ ಮಿದುಳಿನ ತೊಂದರೆಯಿಲ್ಲದ ಯಾವ ಮಗುವೂ ತನ್ನ ತಾಯ್ನುಡಿಯಲ್ಲಿ ಮಾತನಾಡಲು ಕಲಿಯದಿರುವುದಿಲ್ಲ.

ಹಾಗಾಗಿ, ಮಾತಿನ ಕಲಿಕೆಯನ್ನು ಮಕ್ಕಳು ಹುಟ್ಟಿನಿಂದಲೇ ಪಡೆದುಕೊಂಡು ಬಂದ ಅಳವೆಂದು ಹೇಳಲಾಗುತ್ತದೆ. ಆದರೆ, ಓದಿನ ಕಲಿಕೆ ಆ ರೀತಿಯದಲ್ಲ; ಹೆಚ್ಚಿನ ಮಕ್ಕಳಿಗೂ ಓದುವ ಬಗೆಯನ್ನು ಯಾರಾದರೂ ಕಲಿಸಿಕೊಟ್ಟಲ್ಲಿ ಮಾತ್ರ ಅವರು ಅದನ್ನು ಕಲಿಯುತ್ತಾರೆ. ಸಯ್ಕಲ್ ತುಳಿಯುವುದು, ಈಜುವುದು ಮೊದಲಾದವುಗಳ ಹಾಗೆ, ಓದು ಹುಟ್ಟಿನಿಂದ ಬರುವ ಅಳವಲ್ಲ; ಕಲಿತು ಪಡೆಯುವ ಅಳವು.

ಬರಹಗಳನ್ನು ಸಲೀಸಾಗಿ ಓದಲು ಕಲಿಯಬೇಕಾದರೆ, ಮಕ್ಕಳು ಕೆಲವು ಚಳಕ(ಕವ್ಶಲ್ಯ)ಗಳನ್ನು ತಮ್ಮದಾಗಿಸಿಕೊಳ್ಳಬೇಕಾಗುತ್ತದೆ: ಮಾತಿನಲ್ಲಿ ಬರುವ ಪದಗಳನ್ನೆಲ್ಲ ಉಲಿಗಳ ಸೇರಿಕೆಯಿಂದ ಉಂಟುಮಾಡಲಾಗಿದೆ ಎಂಬುದನ್ನು ಅವರು ಗಮನಿಸಬೇಕು, ಮತ್ತು ಪುಟಗಳಲ್ಲಿ ಬರುವ ಗುರುತುಗಳಿಗೂ ಈ ಮಾತಿನ ಉಲಿಗಳಿಗೂ ನಡುವೆ ಎಂತಹ ಸಂಬಂದವಿದೆ ಎಂಬುದನ್ನು ಅವರು ತಿಳಿದುಕೊಳ್ಳಬೇಕು.

ಇದಲ್ಲದೆ, ಪುಟಗಳಲ್ಲಿ ಬರುವ ಈ ಗುರುತುಗಳ ಜೋಡಣೆಗಳಲ್ಲಿ ಪದ, ಪದಕಂತೆ ಮತ್ತು ಸೊಲ್ಲುಗಳನ್ನು ಕಾಣಲು, ಮತ್ತು ಅವುಗಳಿಂದ ಬರಹಗಾರನು ಏನು ಹೇಳುತ್ತಿದ್ದಾನೆ ಎಂಬುದನ್ನು (ಎಂದರೆ ಬರಹದ ಹುರುಳನ್ನು) ತಿಳಿಯಲು ಅವರು ಕಲಿಯಬೇಕು.

ಮಾತಿನಲ್ಲಿ ಬರುವ ಪದಗಳು ಉಲಿಗಳ ಸೇರಿಕೆಯಿಂದ ಉಂಟಾಗುತ್ತವೆ ಎಂಬುದನ್ನು ಗಮನಿಸುವಂತೆ ಮಾಡಲು ಮಕ್ಕಳಿಗೆ ಕೆಲವು ಆಟಗಳನ್ನು ಕಲಿಸಬಹುದು: ಮನೆ, ಮಾತು, ಮೋಡ, ಮುಗಿಲು ಎಂಬಂತಹ ಪದಗಳಲ್ಲೆಲ್ಲ ಮೊದಲಿಗೆ ಮಕಾರ ಬಂದಿದೆ, ಕೆಲವು ಪದಗಳಿಂದ ಈ ಮಕಾರವನ್ನು ತೆಗೆದು ಹಾಕಿದರೆ ಬೇರೊಂದು ಪದ ಸಿಗುತ್ತದೆ (ಮತ್ತೆ-ಅತ್ತೆ, ಮಾಡು-ಆಡು, ಮಿಡಿ-ಇಡಿ), ಕೆಲವು ಪದಗಳಲ್ಲಿ ಮಕಾರದ ಬದಲು ಕಕಾರವನ್ನು ಬಳಸಿದರೆ ಬೇರೆ ಪದ ಸಿಗುತ್ತದೆ (ಮತ್ತೆ-ಕತ್ತೆ, ಮಾಡು-ಕಾಡು, ಮಿಡಿ-ಕಿಡಿ) ಎಂಬಂತಹ ವಿಶಯಗಳನ್ನು ಅವರು ಗಮನಿಸುವ ಹಾಗೆ ಮಾಡಬಹುದು, ಮತ್ತು ಪದಗಳನ್ನು ಉಲಿಗಳಾಗಿ ಒಡೆಯುವ ಬಗೆಯನ್ನು ಕಲಿಸಬಹುದು. ಇದರಿಂದ, ಪದಗಳಿಗೂ ಉಲಿಗಳಿಗೂ ನಡುವಿರುವ ಸಂಬಂದವನ್ನು ಅವರು ತಿಳಿಯುವ ಹಾಗೆ ಮಾಡಬಹುದು.

ಕನ್ನಡ ಬರಹದ ಪುಟಗಳಲ್ಲಿ ಕಾಣಿಸುವ ಗುರುತು(ಬರಿಗೆ)ಗಳಿಗೂ ಅವನ್ನು ಓದುವಲ್ಲಿ ಬಳಕೆಯಾಗುವ ಉಲಿಗಳಿಗೂ ನಡುವೆ ನೇರವಾದ ಸಂಬಂದವಿದೆ; ಇಂಗ್ಲಿಶ್ ಬರಹದಲ್ಲಿರುವ ಹಾಗೆ ಅದು ತೊಡಕು ತೊಡಕಾಗಿಲ್ಲ. ಹಾಗಾಗಿ, ಕನ್ನಡ ಬರಹಗಳನ್ನು ಓದಲು ಕಲಿಯುವ ಮಕ್ಕಳು ಬರಿಗೆಗಳಿಗೂ ಉಲಿಗಳಿಗೂ ನಡುವಿರುವ ಸಂಬಂದವನ್ನು ಗಮನಿಸುವಂತೆ ಮಾಡುವುದು ಹೆಚ್ಚು ತೊಡಕಿನ ಕೆಲಸವಲ್ಲ. ಆದರೆ, ಸಂಸ್ಕ್ರುತದ ಎರವಲು ಪದಗಳಲ್ಲಿ ಬಳಕೆಯಾಗುತ್ತಿರುವ ಅಲ್ಪಪ್ರಾಣ-ಮಹಾಪ್ರಾಣ, ರು-ಋ, ಶ-ಷ ಮೊದಲಾದ ಹಲವು ವ್ಯತ್ಯಾಸಗಳು ಓದಿನಲ್ಲಿ ಕಾಣಿಸುವುದಿಲ್ಲ, ಮತ್ತು ಇವುಗಳಿಂದಾಗಿ ಉಲಿಗಳಿಗೂ ಬರಿಗೆಗಳಿಗೂ ನಡುವಿರುವ ಸಂಬಂದವನ್ನು ಗಮನಿಸುವಲ್ಲಿ ಹೆಚ್ಚಿನ ಮಕ್ಕಳೂ ಗೊಂದಲದಲ್ಲಿ ಬೀಳುತ್ತಾರೆ. ಹಾಗಾಗಿ, ಕನ್ನಡದ ಮಟ್ಟಿಗೆ ಅನವಶ್ಯಕವಾಗಿರುವ ಈ ವ್ಯತ್ಯಾಸಗಳನ್ನು ಮಕ್ಕಳ ಓದಿನಿಂದ ದೂರ ಇರಿಸುವುದು ಒಳ್ಳೆಯದು.

ಬರಿಗೆಗಳಿಗೂ ಉಲಿಗಳಿಗೂ ನಡುವಿರುವ ಸಂಬಂದವನ್ನು ತಿಳಿಯುವುದು ಬರಹವನ್ನು ಓದಲು ಕಲಿಯುವಲ್ಲಿ ತುಂಬಾ ಮುಕ್ಯವಾದ ಕೆಲಸ. ಈ ನಂಟನ್ನು ತಿಳಿದುಕೊಂಡವರಿಗೆ ತಮಗೆ ಗೊತ್ತಿರುವ ಪದಗಳನ್ನು ಮಾತ್ರವಲ್ಲದೆ ಗೊತ್ತಿಲ್ಲದ ಪದಗಳನ್ನೂ ಓದಲು ಬರುತ್ತದೆ. ಈ ನಂಟನ್ನು ತಿಳಿಯದ ಮಕ್ಕಳು ಪದಗಳನ್ನು ಚಿತ್ರಗಳ ಹಾಗೆ ಇಡಿ ಇಡಿಯಾಗಿ ಓದಲು ಹೋಗುತ್ತಾರೆ, ಮತ್ತು ಇದರಿಂದಾಗಿ ಬರಹದಲ್ಲಿ ಹೊಸ ಪದಗಳು ಕಾಣಿಸಿಕೊಂಡಾಗ ಅವರ ಓದು ಮುಂದೆ ಸಾಗುವುದಿಲ್ಲ.

ಇತ್ತೀಚೆಗೆ ನಡೆಸಿದ ಹಲವು ಮಿದುಳಿನ ಅರಕೆಗಳು ಓದಿನಲ್ಲಿ ಬೇಗನೆ ಮುಂದೆ ಹೋಗುವ ಮಕ್ಕಳಿಗೂ ಹಿಂದೆ ಬೀಳುವ ಮಕ್ಕಳಿಗೂ ನಡುವೆ ಅವರು ಪದಗಳನ್ನು ಓದುವ ಬಗೆಯಲ್ಲೇ ಇಂತಹ ವ್ಯತ್ಯಾಸವಿದೆಯೆಂಬುದನ್ನು ಸ್ಪಶ್ಟವಾಗಿ ತೋರಿಸಿಕೊಟ್ಟಿವೆ. ಓದಿನಲ್ಲಿ ಬೇಗನೆ ಮುಂದೆ ಹೋಗುವ ಮಕ್ಕಳು ಓದುತ್ತಿರುವಾಗ, ಅವರ ಮಿದುಳಿನಲ್ಲಿ ಮೂರು ಜಾಗಗಳು ಮಿಂಚುತ್ತಿರುತ್ತವೆ: ಬರಿಗೆಗಳನ್ನು ಗುರುತಿಸುವ ಕಣ್ಣಿಗೆ ಸಂಬಂದಿಸಿದ ಜಾಗ, ಅವನ್ನು ಉಲಿಗಳೊಂದಿಗೆ ಜೋಡಿಸುವ ಕಿವಿಗೆ ಸಂಬಂದಿಸಿದ ಜಾಗ, ಮತ್ತು ಅವನ್ನು ಹುರುಳಿನೊಂದಿಗೆ ಸಂಬಂದಿಸುವ ಮಿದುಳಿನ ಹಿಂಬಾಗದಲ್ಲಿರುವ ಜಾಗ. ಓದಿನಲ್ಲಿ ಹಿಂದೆ ಬೀಳುವ ಮಕ್ಕಳು ಓದುತ್ತಿರುವಾಗ, ಅವರ ಮಿದುಳಿನಲ್ಲಿ ಕಣ್ಣಿಗೆ ಮತ್ತು ಹುರುಳಿಗೆ ಸಂಬಂದಿಸಿದ ಜಾಗಗಳು ಮಾತ್ರ ಮಿಂಚುತ್ತಿರುತ್ತವಲ್ಲದೆ, ಕಿವಿಗೆ ಸಂಬಂದಿಸಿದ ಜಾಗ ಮಿಂಚುತ್ತಿರುವುದಿಲ್ಲ. ಎಂದರೆ, ಪದಗಳನ್ನು ಬರಿಗೆಗಳಾಗಿ ಒಡೆದು, ಅವನ್ನು ಉಲಿಗಳೊಂದಿಗೆ ಸಂಬಂದಿಸಿ ಓದುವುದು ಹೇಗೆ ಎಂಬುದನ್ನು ಅವರು ಕಲಿತಿಲ್ಲ.

ಒಮ್ಮೆ ಪದಗಳನ್ನು ಬರಿಗೆಗಳಾಗಿ ಬಿಡಿಸಿ, ಅವನ್ನು ಉಲಿಗಳೊಂದಿಗೆ ಸಂಬಂದಿಸಲು ಕಲಿತಮೇಲೆ, ಆಗಾಗ ಬರುವ ಪದಗಳನ್ನು ಇಡಿ ಇಡಿಯಾಗಿ ಗುರುತಿಸಿ ಓದುವ ಬಗೆಯನ್ನೂ ಮಕ್ಕಳು ಕಲಿತುಕೊಳ್ಳಬೇಕಾಗುತ್ತದೆ; ಯಾಕೆಂದರೆ, ಬರಹಗಳನ್ನು ಬೇಗನೆ ಮತ್ತು ಸಲೀಸಾಗಿ ಓದಲು ಇಂತಹ ಕಲಿಕೆಯೂ ಬೇಕಾಗುತ್ತದೆ. ಆದರೆ, ಆಮೇಲೆಯೂ, ಅಪರೂಪಕ್ಕೆ ಬರುವ ಪದಗಳನ್ನು ಮತ್ತು ಹೊಸ ಪದಗಳನ್ನು ಓದಲು ಅವನ್ನು ಬರಿಗೆಗಳಾಗಿ ಒಡೆದು ಉಲಿಗಳೊಂದಿಗೆ ಸಂಬಂದಿಸುವ ಬಗೆ ಅವರಿಗೆ ಬೇಕಾಗುತ್ತದೆ.

ಬರಹಗಳಲ್ಲಿ ಬರುವ ಪದಗಳನ್ನು ಓದುವ ಬಗೆ ಹೇಗೆ ಎಂಬುದನ್ನು ಕಲಿತರೆ ಸಾಲದು, ಅವನ್ನು ಪದಕಂತೆಗಳಾಗಿ ಮತ್ತು ಸೊಲ್ಲುಗಳಾಗಿ ಜೋಡಿಸಿ, ಅವುಗಳಿಂದ ಹುರುಳನ್ನು ಪಡೆಯುವುದು ಹೇಗೆ ಎಂಬುದನ್ನೂ ಮಕ್ಕಳು ಕಲಿಯಬೇಕಾಗುತ್ತದೆ. ಅವರ ಓದು ಬೇಗನೆ ಮತ್ತು ಸಲೀಸಾಗಿ ನಡೆಯುತ್ತಿದೆಯಾದರೆ ಮಾತ್ರ ಅವರಿಗೆ ಈ ರೀತಿ ತಮ್ಮ ಓದಿನಿಂದ ಹುರುಳನ್ನು ಪಡೆಯಲು ಬರುತ್ತದೆ. ತುಂಬಾ ಮೆಲ್ಲಗೆ ಓದುವ ಮಕ್ಕಳಿಗೆ ಪದಗಳು ಮಾತ್ರ ಕಾಣಿಸುತ್ತವಲ್ಲದೆ ಪದಕಂತೆಗಳು ಇಲ್ಲವೇ ಸೊಲ್ಲುಗಳು ಕಾಣಿಸುವುದಿಲ್ಲ.

ಓದಲು ಕಲಿಯುತ್ತಿರುವ ಮಕ್ಕಳ ಮಿದುಳಿನಲ್ಲಿ ಮಾತಿನ ಪದನೆರಕೆ (ಪದಕೋಶ) ಮತ್ತು ಓದಿನ ಪದನೆರಕೆ ಎಂಬುದಾಗಿ ಎರಡು ಬಗೆಯ ಪದನೆರಕೆಗಳು ನೆಲೆಗೊಳ್ಳುತ್ತವೆ; ಇವುಗಳಲ್ಲಿ ಓದಿನ ಪದನೆರಕೆಯನ್ನು ಹಿಗ್ಗಿಸುವ ಮೂಲಕ ಮಕ್ಕಳು ಓದಿನಲ್ಲಿ ಮುಂದೆ ಬರುವಂತೆ ಮಾಡಬಹುದು. ಬಗೆ ಬಗೆಯ ಬರಹಗಳನ್ನು, ಮತ್ತು ಹೆಚ್ಚು ಹೆಚ್ಚು ಬರಹಗಳನ್ನು ಅವರು ಓದುವ ಹಾಗೆ ಮಾಡುವ ಮೂಲಕ ಅವರ ಈ ಓದಿನ ಪದನೆರಕೆಯನ್ನು ಹಿಗ್ಗಿಸಲು ಬರುತ್ತದೆ.

ಕೆಲವು ಮಂದಿ ತಾಯ್ತಂದೆಯರು ಪಟ್ಯಪುಸ್ತಕಗಳನ್ನು ಹೊರತುಪಡಿಸಿ ಬೇರೆ ಯಾವುದನ್ನೂ ಮಕ್ಕಳು ಓದಬಾರದೆಂದು ಕಟ್ಟಲೆ ಮಾಡುತ್ತಾರೆ; ಕತೆ ಕಾದಂಬರಿಗಳನ್ನು ಓದಿ ಸಮಯ ಹಾಳುಮಾಡಬಾರದೆಂದು ಆಗಾಗ ಮಕ್ಕಳಿಗೆ ಹೇಳುತ್ತಿರುತ್ತಾರೆ. ಆದರೆ, ಬರೇ ಪಟ್ಯಪುಸ್ತಕಗಳನ್ನು ಮಾತ್ರವೇ ಓದುತ್ತಿದ್ದರೆ ಮಕ್ಕಳ ಓದಿನ ಪದನೆರಕೆ ತುಂಬಾ ಚಿಕ್ಕದಾಗಿಯೇ ಉಳಿಯುತ್ತದೆ. ಅದನ್ನು ಹಿಗ್ಗಿಸಬೇಕಿದ್ದಲ್ಲಿ ಅವರು ಎಲ್ಲಾ ಬಗೆಯ ಬರಹಗಳನ್ನೂ ಓದುತ್ತಿರಬೇಕು. ಹಾಗಾಗಿ, ಹೆಚ್ಚು ಹೆಚ್ಚು ಪುಸ್ತಕಗಳನ್ನು ಮತ್ತು ಬೇರೆ ಬಗೆಯ ಬರಹಗಳನ್ನು ಅವರು ಓದುವಂತೆ ಮಾಡಬೇಕು.

ಓದಿನಲ್ಲಿ ತಮಗೆ ತಿಳಿಯದ ಪದ ಬಂದಾಗ, ಅದರ ಹುರುಳನ್ನು ಪದನೆರಕೆಯ ನೆರವಿನಿಂದ ಕಂಡುಹಿಡಿಯುವುದು ಹೇಗೆ ಎಂಬುದನ್ನೂ ಅವರಿಗೆ ತೋರಿಸಿಕೊಡಬೇಕು. ಪದನೆರಕೆಗಳಲ್ಲಿ ಪದಗಳಿಗೆ ಹಲವು ಹುರುಳುಗಳನ್ನು ಕೊಟ್ಟಿರುತ್ತಾರೆ. ಇವುಗಳಲ್ಲಿ ತಮ್ಮ ಓದಿಗೆ ಹೊಂದಿಕೆಯಾಗುವಂತಹದನ್ನು ಆರಿಸಿಕೊಳ್ಳುವುದು ಹೇಗೆ ಎಂಬುದನ್ನೂ ಅವರಿಗೆ ತೋರಿಸಿಕೊಡಬೇಕು. ಈ ರೀತಿ ತಮ್ಮ ಓದಿಗೆ ಪದನೆರಕೆಯ ನೆರವನ್ನು ಪಡೆಯಲು ಕಲಿತ ಮಕ್ಕಳ ಓದಿನ ಪದನೆರಕೆಯೂ ಬೇಗನೆ ಹಿಗ್ಗುತ್ತದೆ.

ಓದಿನಲ್ಲಿ ಹಿಂದೆ ಬೀಳುವ ಮಕ್ಕಳು ಬೇರೆ ವಿಶಯಗಳಲ್ಲೂ ಹಿಂದೆ ಬೀಳುತ್ತಾರೆ; ಯಾಕೆಂದರೆ, ಈ ಎಲ್ಲಾ ವಿಶಯಗಳ ಕಲಿಕೆಯನ್ನೂ ಅವರು ಓದಿನ ಮೂಲಕವೇ ನಡೆಸಬೇಕಾಗುತ್ತದೆ. ಹಾಗಾಗಿ, ಮಕ್ಕಳು ಬೇಗನೆ ಮತ್ತು ಸಲೀಸಾಗಿ ಓದಲು ಕಲಿಯುವಂತೆ ಮಾಡುವುದು, ಮತ್ತು ಇದಕ್ಕಾಗಿ ಅವರ ಓದು ಸರಿಯಾದ ಕ್ರಮದಲ್ಲಿ ಮುಂದುವರಿಯುವಂತೆ ಮಾಡುವುದು ತುಂಬಾ ಮುಕ್ಯವಾದ ಕೆಲಸವಾಗಿದೆ.

(ಈ ಬರಹ ವಿಜಯ ಕರ‍್ನಾಟಕ ಸುದ್ದಿಹಾಳೆಯ ’ಎಲ್ಲರ ಕನ್ನಡ’ ಅಂಕಣದಲ್ಲಿ ಮೊದಲು ಮೂಡಿಬಂದಿತ್ತು)

<< ನುಡಿಯರಿಮೆಯ ಇಣುಕುನೋಟ – 15

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. 27/11/2013

    […] << ನುಡಿಯರಿಮೆಯ ಇಣುಕುನೋಟ – 16 […]

ಅನಿಸಿಕೆ ಬರೆಯಿರಿ: