ಕ್ರಿಕೆಟ್ ಚೆಂಡಿನ ಚಳಕ

ರಗುನಂದನ್.

Outswinger_cricket

ಕ್ರಿಕೆಟ್ ಆಟ ನೋಡಿರುವವರಿಗೆ ವೇಗಿಗಳು ಬಳಸುವ ಒಳ-ವಾಲು (in-swing) ಮತ್ತು ಹೊರ-ವಾಲು(out-swing)ಗಳ ಬಗ್ಗೆ ಗೊತ್ತಿರುತ್ತದೆ. ನೆನಪಿರಲಿ, ವೇಗಿ ಚೆಂಡನ್ನು ವಾಲುವಂತೆ ಮಾಡಿದರೆ ಸ್ಪಿನ್ನರ್‍ ಅದನ್ನು ತಿರುಗುವಂತೆ ಮಾಡುತ್ತಾನೆ. ಹೊಸ ಚೆಂಡು ಅಂದರೆ ಆಟದ ಮೊದಲ ಹತ್ತು-ಹದಿನಯ್ದು ಓವರುಗಳಲ್ಲಿ ಚೆಂಡು ವೇಗಿಯಿಂದಲೇ ಎಸೆಯಲ್ಪಡುತ್ತದೆ. ಹೀಗೆ ಮಾಡುವುದಕ್ಕೆ ಅರಿಮೆಯ ಹಿನ್ನಲೆ ಇದೆಯೇ? ಕೆಳಗಿನ ಬರಹ ಓದಿರಿ.

ನಾವು ಹಿಂದಿನ ಎರಡು (1 ಮತ್ತು 2) ಬರಹಗಳಲ್ಲಿ ಒಂದು ಮಯ್ವಿಯು (body) ಗಾಳಿಯಲ್ಲಿ ಹೋಗುತ್ತಿರಬೇಕಾದರೆ ಅರಿಮೆಯ ಕಟ್ಟಲೆಗಳನ್ನು (scientific principles) ಬಳಸಿ ಅದರ ಓಡಾಟವನ್ನು ನಮ್ಮ ಹಿಡಿತದಲ್ಲಿ ಇಟ್ಟುಕೊಳ್ಳುಬಹುದೆಂದು ತಿಳಿದುಕೊಂಡಿದ್ದೆವು. ಹೆಚ್ಚುಕಡಿಮೆ ಈ ಕಟ್ಟಲೆಗಳ ನೆಲೆಯಲ್ಲೇ ಕ್ರಿಕೆಟ್ ಚೆಂಡಿನ ವಾಲುವಿಕೆಯನ್ನು ಹೇಗೆ ನಮ್ಮ ಅಂಕೆಯಲ್ಲಿಟ್ಟುಕೊಳ್ಳಬಹುದು ನೋಡೋಣ.

ಮುಂದುವರೆಯುವ ಮುನ್ನ, ಈ ಬರಹದಲ್ಲಿ ಬಳಸುವ ಕೆಲವು ಪದಗಳ ಹುರುಳು ತಿಳಿದುಕೊಳ್ಳೋಣ:

ಹರಿವ –fluid; ಒತ್ತಡ – pressure; ಹುರುಪು – energy; ಚಳಕಿನರಿಮೆ – technology; ಗಾಳಿ – air, wind; ಅಳವು, ಮಟ್ಟ – potential; ಬಿರುಸು – velocity; ಬಿರುಸಿನ – kinetic; ಅಡಕ, ವಸ್ತು – matter; ಸಮ, ಮಾರ್‍ಪಡದ – constant; ಸಾಟಿ,ಈಡು – equal; ಈಡಾಗಿಸು – equate; ಈಡಾಗಿಸುವಿಕೆ, ಸಮೀಕರಣ – equation; ಹೇಳ್ಮೆ, ನಿಯಮ – theorem; ತೂಕ – weight; ದಟ್ಟಣೆ, ತಿಣ್ಮೆ, ಸಾಂದ್ರತೆ – density; ನುಣುಪು – smooth; ಒರಟು – rough.

ಮುಂದೆ ಬರುವ ಕೆಲವು ನುಡಿಗಟ್ಟು(phrase)ಗಳ ಬಗ್ಗೆ ತಿಳಿದುಕೊಳ್ಳೋಣ:

ಬಿರುಸಿನ ಹುರುಪು (Kinetic Energy): ಯಾವುದೇ ಅಡಕವು (matter) ತನ್ನ ಬಿರುಸಿನ(velocity) ದೆಸೆಯಿಂದ ಪಡೆಯುವ ಹುರುಪಿಗೆ ‘ಬಿರುಸಿನ ಹುರುಪು’ ಎಂದು ಕರೆಯಬಹುದು. ಹೆಚ್ಚು ಬಿರುಸು ಇದ್ದಶ್ಟು ಹೆಚ್ಚು ಹುರುಪು.

ಇದನ್ನು K.E = 1/2 mVಎಂಬ ಸಮೀಕರಣದಿಂದ(equation) ಅಳೆಯಬಹುದು.

ಮಟ್ಟದ ಹುರುಪು (Potential Energy): ಯಾವುದೇ ಅಡಕವು ತನ್ನ ನೆಲದ ಮೇಲಿನ ಎತ್ತರದ ದೆಸೆಯಿಂದ ಪಡೆಯುವ ಹುರುಪನ್ನು ‘ಮಟ್ಟದ ಹುರುಪು’ ಎಂದು ಕರೆಯಬಹುದು. ಹೆಚ್ಚು ಎತ್ತರವಿದ್ದಶ್ಟು ಹೆಚ್ಚು ಹುರುಪು.

ಇದನ್ನು P .E = m g H ಎಂದು ಈಡಾಗಿಸಬಹುದು.

ಒತ್ತಡದ ಹುರುಪು (Pressure Energy): ಯಾವುದೇ ಹರಿವ(fluid)ಕ್ಕೆ ತನ್ನ ಒತ್ತಡದ ದೆಸೆಯಿಂದ ಪಡೆಯುವ ಹುರುಪಿಗೆ ಒತ್ತಡದ ಹುರುಪು ಎನ್ನಬಹುದು. ಇದು ಎತ್ತರ (ಅದರಿಂದ ತೂಕ) ಮತ್ತು ದಟ್ಟಣೆಯ ಮೇಲೆ ತೀರ್‍ಮಾನವಾಗುತ್ತದೆ.

ಇದನ್ನು Pr .E = mp/D ಎಂಬ ಈಡಾಗಿಸುವಿಕೆಯಿಂದ ಅಳೆಯಬಹುದು.

ಒತ್ತಡದ ಹುರುಪಿನ ಬಗ್ಗೆ ಎರಡು ಎತ್ತುಗೆಗಳ ಮೂಲಕ ಬಿಡಿಸಿ ಹೇಳುತ್ತೇನೆ,

1) ಗಾಳಿ ಕೂಡ ಒಂದು ಹರಿವ (fluid). ಗಾಳಿಗೂ ತೂಕವಿರುತ್ತದೆ. ಒಂದು ಬಲೂನನ್ನು ನೀವು ಗಾಳಿ ತುಂಬಿಸಿ ದಪ್ಪ ಮಾಡಿ ತೂಕ ನೋಡಿದಾಗ ವ್ಯತ್ಯಾಸ ಕಾಣುತ್ತೆ. ನೆಲದ ಮೇಲಿರುವ ಗಾಳಿಗೆ ಹೆಚ್ಚು ತೂಕವಿರುತ್ತದೆ. ನೆಲದಿಂದ ಮೇಲೆ ಹೋದಶ್ಟು ತೂಕ ಕಡಿಮೆ ಆಗುತ್ತಾ ಹೋಗುತ್ತೆ. ಯಾಕಂದರೆ ಅದರ ಮೇಲಿರುವ ಗಾಳಿಯ ಮೊತ್ತ ಕಡಿಮೆ ಆಗುತ್ತಾ ಹೋಗುತ್ತೆ. ಆದ್ದರಿಂದ ನೆಲದಿಂದ ಮೇಲೆ ಹೋದಶ್ಟು ತೂಕ ಮತ್ತು ಒತ್ತಡ ಕಡಿಮೆಯಾಗುತ್ತೆ.

2) ಒಬ್ಬ ಮನುಶ್ಯನ ಕಾಲಿನಿಂದ ತಲೆಯವರಗೂ ನೆತ್ತರು ಹರಿಯುತ್ತದೆ. ಆದರೆ ಕಾಲಿನಲ್ಲಿರುವ ನೆತ್ತರಿನ ಒತ್ತಡ ಹೆಚ್ಚಿರುತ್ತದೆ.ಯಾಕಂದರೆ ಅಲ್ಲಿರುವ ನೆತ್ತರು ಇಡೀ ಮಯ್ಯಿನ ನೆತ್ತರನ್ನು ಹೊತ್ತಿರುತ್ತದೆ. ಆದ್ದರಿಂದ ಕಾಲಿನಲ್ಲಿರುವ ನೆತ್ತರಿಗೆ ಹೆಚ್ಚಿನ ಒತ್ತಡದ ಹುರುಪಿರುತ್ತದೆ.

ಮೇಲೆ ನಾವು ಮೂರು ಬೇರೆ ಬೇರೆ ಬಗೆಯ ಹುರುಪುಗಳನ್ನು ನೋಡಿದೆವು. ಈಗ ಅವುಗಳು ಒಂದನ್ನೊಂದು ಹೇಗೆ ನೆಚ್ಚಿಕೊಂಡಿವೆ ನೋಡೋಣ.

ಬರ್‍ನವ್ಲಿ ಹೇಳ್ಮೆಯ (Bernoulli’s Theorem) ಪ್ರಕಾರ ಯಾವುದೇ ಹರಿವಕ್ಕೆ ಈ ಮೂರು ಹುರುಪುಗಳ ಒಟ್ಟು ಮೊತ್ತ ಯಾವಾಗಲು ಒಂದೇ (constant) ಆಗಿರುತ್ತದೆ.

ಅಂದರೆ, K.E + P.E + Pr.E = constant;
ಬಿ.ಹು + ಮ.ಹು + ಒ.ಹು = ಒಂದೇ (ಮಾರ್‍ಪಡುವುದಿಲ್ಲ)

ಕ್ರಿಕೆಟ್ ಚೆಂಡು
ಕ್ರಿಕೆಟ್ ಚೆಂಡನ್ನು ಬೆಂಡು (cork) ಮತ್ತು ತೊಗಲು (leather) ತುಂಡುಗಳಿಂದ ಚಿಪ್ಪುಗಳಾಗಿ ಮಾಡಿ ಅದನ್ನು ಒಗ್ಗೂಡಿಸಿ ನಡುವಿನಲ್ಲಿ ದಪ್ಪದ ನೂಲಿನಿಂದ ಹೊಲೆಯಲಾಗುತ್ತದೆ. ಅ ದಪ್ಪನೆಯ ಹೊಲಿಗೆಗೆ ’ಸೀಮ್’ (seam) ಎಂದು ಕರೆಯುತ್ತಾರೆ.

ನೀವು ನೋಡಿರುತ್ತೀರಿ ಆಟ ಶುರು ಆಗುವ ಮುಂಚೆ ವೇಗಿಗಳಿಗೆ ಚೆಂಡನ್ನು ಕೊಟ್ಟಾಗ ಅದನ್ನು ಎಂಜಲು ಮಾಡಿ ತಮ್ಮ ಬಟ್ಟೆಗಳಿಗೆ ಉಜ್ಜುತ್ತಾರೆ. ಇಲ್ಲಿ ಗಮನಿಸಬೇಕಾದ್ದು ಏನೆಂದರೆ ಈ ಎಂಜಲು ಒರಸುವಿಕೆ ಮತ್ತು ಬಟ್ಟೆಗೆ ತಿಕ್ಕುವುದು ಚೆಂಡಿನ ಒಂದು ಕಡೆಯ ಚಿಪ್ಪಿಗೆ ಮಾತ್ರ! ಆ ಚೆಂಡಿನ ಬಾಗವನ್ನು ಆದಶ್ಟೂ ನುಣುಪಾಗಿ ಇರುವಂತೆ ನೋಡಿಕೊಳ್ಳುತ್ತಾರೆ ಮತ್ತು ಇನ್ನೊಂದು ಬಾಗ ಆದಶ್ಟೂ ಒರಟಾಗಿರುವಂತೆ ನೋಡಿಕೊಳ್ಳುತ್ತಾರೆ.

ಚೆಂಡು ಏಕೆ ವಾಲುತ್ತದೆ?
ಈಗ ವೇಗಿಯು ದೂರದಿಂದ ಬಂದು ಚೆಂಡನ್ನು ದಾಂಡಿಗನಿಗೆ ಎಸೆಯುತ್ತಾನೆ. ಇಲ್ಲಿ ಬರ್‍ನವ್ಲಿಯ ಹೇಳ್ಮೆ (Bernoulli’s Theorem) ಚೆಂಡು ಯಾವ ಕಡೆ ವಾಲುತ್ತದೆ ಎಂಬುದನ್ನು ತೀರ್‍ಮಾನಿಸುತ್ತದೆ.

ಬರ್‍ನವ್ಲಿಯ ಹೇಳ್ಮೆಯಂತೆ ಈ ಚೆಂಡು ಗಾಳಿಯಲ್ಲಿ ತೂರಿ ಬರುವಾಗ ಮೇಲೆ ಹೇಳಲ್ಪಟ್ಟ ಮೂರು ಹುರುಪುಗಳು ಚೆಂಡಿನ ಓಡಾಟ(movement)ವನ್ನು ತೀರ್‍ಮಾನಿಸುತ್ತವೆ. ಈ ಮೂರು ಹುರುಪುಗಳಲ್ಲಿ ನೆಲಕ್ಕೂ ಮತ್ತು ಚೆಂಡಿನ ಎತ್ತರಕ್ಕೂ ಹೆಚ್ಚು ಎಡೆಯಿಲ್ಲ (distance) ಎಂದುಕೊಂಡು ಮಟ್ಟದ ಹುರುಪನ್ನು(Potential Energy) ಕಡೆಗಣಿಸಬಹುದು. ಆಗ ಎರಡು ಹುರುಪುಗಳು ಉಳಿದುಕೊಳ್ಳುತ್ತವೆ. 1) ಬಿರುಸಿನ ಹುರುಪು 2) ಒತ್ತಡದ ಹುರುಪು. ಬರ್‍ನವ್ಲಿಯ ಹೇಳ್ಮೆಯ ಪ್ರಕಾರ ಈ ಎರಡು ಹುರುಪುಗಳ ಒಟ್ಟು ಮೊತ್ತ ಯಾವಾಗಲು ಒಂದೇ ಆಗಿರಬೇಕು. ಅಂದರೆ, K.E + Pr.E = constant.

ಇವೆರಡರ ಮೊತ್ತ ಒಂದೇ ಆಗಿರಬೇಕಾದ ಕಾರಣ ಒಂದರ ಮೊತ್ತ ಹೆಚ್ಚಾದರೆ ಮತ್ತೊಂದು ಕಡಿಮೆಯಾಗಬೇಕು. ಇದು ಚೆಂಡು ಸಾಗುತ್ತಿರಬೇಕಾದರೆ ಹೇಗೆ ಸಾದಿಸಬಹುದು ಎಂಬುದನ್ನು ನೋಡೋಣ. ಹೊಸ ಚೆಂಡನ್ನು ಕೊಂಚ ಮಟ್ಟಿಗೆ ಎಂಜಲು ಹಚ್ಚಿ ಬಟ್ಟೆಯ ಮೇಲೆ ಉಜ್ಜಿದ ಬಳಿಕ ಒಂದು ಕಡೆ ನುಣುಪಾಗುತ್ತದೆ ಮತ್ತೊಂದು ಕಡೆ ಒರಟಾಗುತ್ತದೆ. (ಕೆಳಗಿನ ತಿಟ್ಟವನ್ನು ನೋಡಿರಿ)

Picture1

ಈಗ ಈ ಕೆಳಗಿನ ತಿಟ್ಟವನ್ನು ಸರಿಯಾಗಿ ಗಮನಿಸಿ. ಈ ಚೆಂಡು ವೇಗಿಯ ಕಯ್ಯಿಂದ ಎಸೆಯಲ್ಪಟ್ಟು ಗಾಳಿಗೆ ತನ್ನ ಮಯ್ಯನ್ನು ಒಡ್ಡುತ್ತದೆ. ಗಾಳಿಯು ಆ ಚೆಂಡಿನ ಎರಡೂ ಚಿಪ್ಪುಗಳಿಗೆ ಸೋಕುತ್ತದೆ. ಆದರೆ ಗಾಳಿಯು ನುಣುಪಾದ ಚಿಪ್ಪಿನ ಮೇಲೆ ಬಂದಾಗ ಹೆಚ್ಚು ಬಿರುಸಾಗಿ ಓಡುತ್ತದೆ. ಆದರೆ ಒರಟಾದ ಚಿಪ್ಪಿನ ಮೇಲೆ ಮೆಲ್ಲಗೆ ಓಡುತ್ತದೆ. (ಮಕ್ಕಳು ಹೇಗೆ ನುಣುಪಾದ ಜಾರುಬಂಡೆಯ ಮೇಲೆ ಸಲೀಸಾಗಿ ಜಾರುತ್ತಾರೋ ಹಾಗೆ. ಒರಟಾದ ಚಿಪ್ಪಿನ ಮೇಲೆ ಸಣ್ಣ ಪುಟ್ಟ ಹಳ್ಳ ಕೊಳ್ಳಗಳಿರುತ್ತವೆ ಅಲ್ಲಿ ಗಾಳಿಯ ತುಣುಕುಗಳು ಹೋಗಿ ಕೂರುತ್ತವೆ ಮತ್ತು ತನ್ನ ಮೇಲೆ ಹೋಗುವ ಗಾಳಿಯನ್ನು ಎಳೆಯುತ್ತವೆ)

Picture2

ಆದ್ದರಿಂದ ನುಣುಪಾದ ಚಿಪ್ಪಿನ ಕಡೆ ಹೆಚ್ಚು ಬಿರುಸಿರುವ ಕಾರಣ ಬಿರುಸಿನ ಹುರುಪು (Kinetic Energy) ಕೂಡ ಹೆಚ್ಚಿರುತ್ತದೆ. ಒರಟು ಚಿಪ್ಪಿನ ಕಡೆ ವೇಗ ಕಡಿಮೆ ಇರುವುದರಿಂದ ವೇಗದ ಹುರುಪು ಕಡಿಮೆ ಇರುತ್ತದೆ.

Picture3

ಆದರೆ ಅದೇ ನುಣುಪಾದ ಚಿಪ್ಪಿನ ಕಡೆ ಬಿರುಸಿನ ಹುರುಪು (Kinetic Energy) ಹೆಚ್ಚಿರುವುದರಿಂದ ಒತ್ತಡದ ಹುರುಪು(Pressure Energy) ತಗ್ಗುತ್ತದೆ. (ಯಾಕಂದರೆ ಬರ್‍ನವ್ಲಿ ಹೇಳ್ಮೆಯ ಪ್ರಕಾರ ಒಂದು ಹೆಚ್ಚಾದರೆ ಇನ್ನೊಂದು ತಗ್ಗಬೇಕು). ಅದೇ ಪರಿಯಲ್ಲಿ ಒರಟು ಚಿಪ್ಪಿನ ಕಡೆ ಒತ್ತಡದ ಹುರುಪು ಹೆಚ್ಚಿರುತ್ತದೆ.

Picture4

ವಾಲುವಿಕೆ
ನಮಗೆ ತಿಳಿದಿರುವಂತೆ ಯಾವಾಗಲು ವಸ್ತುಗಳು/ಅಡಕಗಳು (matters) ಹೆಚ್ಚಿನ ಮಟ್ಟದಿಂದ (Higher Potential) ಕಡಿಮೆಯ ಮಟ್ಟದ (Lower Potential ) ಕಡೆಗೆ ಹರಿಯುತ್ತವೆ. ಎತ್ತುಗೆಗೆ: ನೀರು, ಮಿಂಚು(current).

ಈಗ ಒರಟು ಚಿಪ್ಪಿನ ಕಡೆ ಒತ್ತಡದ ಹುರುಪು ಹೆಚ್ಚಾದ್ದರಿಂದ ಚೆಂಡು ಒರಟು ಕಡೆಯಿಂದ ನುಣುಪಾದ ಕಡೆಗೆ ವಾಲುತ್ತದೆ.ಅದಕ್ಕೆ ಯಾವಾಗಲು ಚೆಂಡು ಕ್ರಿಕೆಟ್ಟಿನಲ್ಲಿ ಹೊಳಪಿರುವ ಕಡೆ ವಾಲುತ್ತದೆ.

Picture5

ಚೆಂಡು ಪಿಚ್ಚಿನ ಮೇಲೆ ಸಾಗುತ್ತಿರಬೇಕಾದರೆ ಕೆಳಗಿನ ತಿಟ್ಟದಂತೆ ವಾಲುತ್ತದೆ.

Picture6

ಮೇಲೆ ಹೇಳಿದವೆಲ್ಲವೂ ಬರ‍್ನವ್ಲಿಯ ಕಟ್ಟಲೆಯ ಮೇಲೆ ನಿಂತಿದೆ. ಇವಿಶ್ಟೆ ಅಂಶಗಳು ಚೆಂಡಿನ ವಾಲುವಿಕೆಯ ಪರಿಣಾಮ ಮಾಡಿದ್ದರೆ ಮೇಲಿನ ಬರ‍್ನವ್ಲಿಯ ಕಟ್ಟಲೆಯ ಪ್ರಕಾರ ಚೆಂಡು ನುಣುಪಾದ ಕಡೆ ವಾಲಬೇಕು ಮೇಲೆ ತೋರಿದ ಹಾಗೆ. ಆದರೆ ಇನ್ನೂ ಎರಡು ಅಂಶಗಳು ಇದರ ಮೇಲೆ ಪರಿಣಾಮ ಬೀಳುತ್ತದೆ. 1) ಹೊಲಿಗೆಯ ನಿಲುವು(seam position) 2) ಎಸೆಯುವಿಕೆಯ ಬಿರುಸು (bowling speed). ಆದರೆ ಕ್ರಿಕೆಟ್ ಆಟದ ಬಯಲಿನ ವಾತವರಣ ಯಾವುದೇ ಪರಿಣಾಮ ಬೀರುವುದಿಲ್ಲ.

ಮುಂಚೆ ಹೇಳಿದಂತೆ ಚೆಂಡು ಸಾಗುತ್ತಿರಬೇಕಾದರೆ ಒಂದು ನವಿರಾದ ಗಾಳಿಯ ಪದರ ಅದರ ಮೇಲೆ ಕೂತಿರುತ್ತದೆ. ಇದನ್ನು ಅರಿಮೆಯಲ್ಲಿ ಎಲ್ಲೆಯ ಪದರ(boundary layer) ಎಂದು ಹೇಳುತ್ತಾರೆ. ಈ ಎಲ್ಲೆಯ ಪದರ ಚೆಂಡನ್ನು ಯಾವಾಗ ತೊರೆಯುತ್ತದೆ ಎಂಬುದು ಮುಕ್ಯವಾಗುತ್ತದೆ ಮತ್ತೆ ಅದು ವಾಲುವಿಕೆಯನ್ನು ತೀರ‍್ಮಾನಿಸುತ್ತದೆ. ಈ ಎಲ್ಲೆಯ ಪದರದ ಹರಿವು ಎರಡು ಬಗೆ – ನವಿರಾದ ಹರಿವು (laminar flow) ಇಲ್ಲವೇ ಗದ್ದಲದ ಹರಿವು(turbulent flow).

1. ಸಾಂಪ್ರಾದಾಯಿಕ ವಾಲುವಿಕೆ (conventional swing): ಇದರಲ್ಲಿ ಹೊಲಿಗೆಯು(seam) ಯಾವ ಕಡೆ ಮುಕ ಮಾಡಿರುತ್ತದೋ ಚೆಂಡು ಆ ಕಡೆ ವಾಲುತ್ತದೆ. ಕೆಳಗಿನ ತಿಟ್ಟ ಗಮನಿಸಿ. ಕೆಳಗಿನ ಚಿಪ್ಪಿನಲ್ಲಿರುವ ನವಿರಾದ ಎಲ್ಲೆಯ ಪದರ ಚೆಂಡನ್ನು ಬೇಗಲೇ ತೊರೆಯುತ್ತಿದೆ. ಆದರೆ ಮೇಲಿನ ಚಿಪ್ಪಿನ ಮೇಲಿರುವ ಗದ್ದಲದ ಪದರ ಕೊಂಚ ತಡವಾಗಿ ಚೆಂಡನ್ನು ತೊರೆಯುತ್ತಿದೆ. ಇದು ಕೂಡ ಒತ್ತಡದ ಎಡೆಯನ್ನು (pressure differential) ಉಂಟುಮಾಡಬಲ್ಲುದು. ಹೊಲಿಗೆಯು ಸ್ಲಿಪ್(slip) ಕಡೆಗೆ ಇದ್ದರೆ ಚೆಂಡು ಆ ಕಡೆ ವಾಲುತ್ತದೆ, ಪಯ್ನ್ ಲೆಗ್(fine leg) ಕಡೆ ಮುಕ ಮಾಡಿದ್ದರೆ ಆ ಕಡೆ ವಾಲುತ್ತದೆ.

conventional swing

2. ತಿರುಗು ವಾಲುವಿಕೆ (reverse swing): ಈ ಬಗೆಯಲ್ಲಿ ಸಾಂಪ್ರಾದಾಯಿಕ ಸ್ವಿಂಗ್ ಬವ್ಲಿಂಗ್ ಗಿಂತ ಹೆಚ್ಚಿನ ಬಿರುಸಿನಲ್ಲಿ ಚೆಂಡು ಎಸೆಯಬೇಕಾಗುತ್ತದೆ. ಇದರಲ್ಲಿ ಒರಟು ಚಿಪ್ಪು ಮುಂದೆ ಇರುವಂತೆ ನೋಡಿಕೊಳ್ಳಬೇಕು. ಇದರಲ್ಲೂ ಕೂಡ ಒರಟು ಚಿಪ್ಪಿನ ಕಡೆ ಗದ್ದಲದ ಪದರ ಉಂಟಾಗಿ ಗಾಳಿಯ ಒತ್ತಡವನ್ನು ಕಡಿಮೆ ಮಾಡುತ್ತದೆ. ಆದರೆ ಅದರೊಟ್ಟಿಗೆ ಹೆಚ್ಚಿನ ಬಿರುಸಿರುವ ಕಾರಣ ನವಿರಾದ ಪದರದಲ್ಲೊ ಕೂಡ ಕೊಂಚ ಮಟ್ಟಿಗೆ ಗದ್ದಲ ಕಾಣಿಸಿಕೊಳ್ಳುತ್ತದೆ. ಹಾಗಾಗಿ ಇಲ್ಲಿಯೂ ಕೂಡ ಒರಟು ಚಿಪ್ಪಿನ ಕಡೆಗೆ ಚೆಂಡು ವಾಲುತ್ತೆ. ಆದರೆ ಸಾಂಪ್ರಾದಾಯಿಕ ಸ್ವಿಂಗಿಗೆ ವಿರುದ್ದವಾಗಿ ಇಲ್ಲಿ ಹೊಲಿಗೆಯ ಕಡೆ ಚೆಂಡು ವಾಲದೆ ಅದರ ಎದುರು ದಿಕ್ಕಿನಲ್ಲಿ ವಾಲುತ್ತದೆ. ಅದಕ್ಕೆ ಇದನ್ನು ರಿವರ‍್ಸ್ ಸ್ವಿಂಗ್ ಎಂದು ಕರೆಯುತ್ತಾರೆ. ಕೆಳಗಿನ ತಿಟ್ಟ ನೋಡಿ.

reverse swing

ಇದು ಬಲಗಯ್ ದಾಂಡಿಗನಿಗೆ (Right Handed Batsman) ಹೊರ-ವಾಲಾಗಿಯು (Out-swing) ಮತ್ತು ಎಡಗಯ್ ದಾಂಡಿಗನಿಗೆ (Left Handed Batsman) ಒಳ-ವಾಲಾಗಿ (In-swing) ಮಾರ್‍ಪಾಟಾಗುತ್ತದೆ.

Picture7

(ತಿಟ್ಟ ಸೆಲೆ: wikihow)

ನಿಮಗೆ ಹಿಡಿಸಬಹುದಾದ ಬರಹಗಳು

3 Responses

  1. ಚೆಂಡಿನ ವಾಲುವಿಕೆಗೆ ಬರ‍್ನವ್ಲಿ ಹೇಳ್ಮೆ ಕಾರಣ ಎಂಬುದು ದ್ಯಾವ್ರಾಣೆ ಗೊತ್ತಿರಲಿಲ್ಲ. ಓದುತ್ತ ಆಟ ಅನುಬವಿಸಿದಶ್ಟು ಸಲಿಸಾಗಿ ಸೊಗಸಾಗಿ ಬರೆದಿದ್ದಿರಿ. ಬೊಂಬಾಟ್ ಬರಹ ರಗುನಂದನ್!

  2. ram das says:

    ಬೊಂಬಾಟ್ ಬರಹ

  1. 09/12/2013

    […] ಹೇಗೆ ಹೆಚ್ಚು ಮೇಲಕ್ಕೆ ಏರುತ್ತದೆ? ಚಂಡಿನ ಚಳಕದ  ಹಿಂದಿನ ಬರಹವೊಂದರಲ್ಲಿ ಅರಿತುಕೊಂಡಂತೆ, ಗಾಳಿಯ […]

ಅನಿಸಿಕೆ ಬರೆಯಿರಿ: