ಬೊಂಬಾಟ್ ‘ಬೂಮರಾಂಗ್’

ಶ್ರೀಕಿಶನ್ ಬಿ. ಎಂ.

boom-1

ಬೂಮರಾಂಗ್ ಬಗ್ಗೆ ತಿಳಿಯದವರು ನಮ್ಮಲ್ಲಿ ಕಡಿಮೆ ಅಂತಲೇ ಹೇಳಬಹುದು. ಮಕ್ಕಳ ಚಲ್ಲತಿಟ್ಟಗಳಲ್ಲಿ ಇಲ್ಲವೇ ಪುಸ್ತಕಗಳಲ್ಲೋ ದೂರದರ‍್ಶನದ ತಿಳಿವಿನ ಹಮ್ಮುಗೆಗಳಲ್ಲೋ ಇಂಗ್ಲಿಶ್ ಚಲನ ಚಿತ್ರಗಳಲ್ಲೋ ನೋಡಿರುತ್ತೇವೆ. ಬೂಮರಾಂಗ್ ಮಾನವ ಕುಲದ ಹಳಮೆಯಲ್ಲಿ ತುಂಬ ಹಿಂದಿನ ಗಾಳಿಗೆ-ಮೀರಿದ-ತೂಕದ ಹಾರುವ ಕಂಡುಹಿಡಿಯುವಿಕೆಗಳಲ್ಲಿ ಒಂದು.

ಹದಿನಾಲ್ಕನೆಯ ಕ್ರಿಸ್ತಹಿಂದಿನ ನೂರೇಡಿನಲ್ಲಿ ಬದುಕಿದ ಇಜಿಪ್ತ ದೊರೆ ಟುಟೆನ್ಕಮನ್ ಹಲವಾರು ಬೂಮರಾಂಗುಗಳ ಕಲೆತವಿಟ್ಟುಕೊಂಡಿದ್ದನು. ಸುಮಾರು ಹತ್ತುಸಾವಿರ ವರ‍್ಶಗಳಶ್ಟು ಹಿಂದೆಯೇ ಆಸ್ಟ್ರೇಲಿಯಾದ ಬುಡಕಟ್ಟಿನವರು ಬೂಮರಾಂಗನ್ನು ಬೇಟೆ ಕಾಳಗಗಳಿಗೆ ಬಳಸುತ್ತಿದ್ದ ಇರುಗುರುತುಗಳು (ಪುರಾವೆ) ಇವೆ. ಪೋಲಾಂಡ್‍ನ ಕಾರ‍್ಪತಿಯಾ ಬೆಟ್ಟಗಳಲ್ಲಿ ದೊರೆತ ಬೂಮರಾಂಗ್ ಇಪ್ಪತ್ತು ಸಾವಿರ ವರ‍್ಶಗಳಶ್ಟು ಹಳೆಯದೆಂದು ಎಣಿಕೆ ಮಾಡಲಾಗಿದೆ.

ಬೂಮರಾಂಗ್ ಎಂದೊಡನೆ, ಅದು ಮರಳಿಬರುವ ಗುಣ ಇರುವಂತದ್ದು ಅನುವುದೇ ಬೆರಗು ಮೂಡಿಸುತ್ತದೆ. ಆದರೆ ಬೂಮರಾಂಗುಗಳಲ್ಲಿ ಮರಳಿ ಬಾರದವುಗಳೂ ಇವೆ. ಕಾಳಗಗಳಿಗೆ, ಬೇಟೆಗಳಿಗೆ ಬಳಕೆಯಾಗುತ್ತಿದ್ದುವು ಮರಳಿ ಬಾರದವುಗಳೇ! ಮರಳಿ ಬರತಕ್ಕ ಬೂಮರಾಂಗುಗಳು ಕೂಡ, ಅದರ ಹಾರಾಟದದ ನಡುವೆ ಒಂದು ವಸ್ತುವಿಗೆ ತಾಕಿದಲ್ಲಿ, ಮರಳಿ ಬಾರವು.

ಮಂದಿಯರಿವಿಗರ ಹೇಳುಮೆಯಂತೆ, ಮೊದಲ ಬೂಮರಾಂಗುಗಳು, ಹೆಚ್ಚು ತೂಕದ ಹೊರಯೆಸೆಗೆಗಳಾಗಿದ್ದು (projectiles), ಬೇಟೆಗಾರರು ಅವುಗಳನ್ನು ಒಂದು ಪ್ರಾಣಿಯ ಮೇಲೋ ಮತ್ತೊಂದರ ಮೇಲೋ ಗುರಿಯಿಟ್ಟು ಬಿರುಸಿನಿಂದ ಬಡಿದು ಕೆಡವಲು ಬಳಸುತ್ತಿದ್ದರು. ಹೆಚ್ಚಾಗಿ ಚಪ್ಪಟೆ ಮಾಡಿದ ಕಡ್ಡಿಯಿಂದಲೋ ಆನೆಯ ಹಲ್ಲಿನಿಂದಲೋ ಮಾಡಲ್ಪಡುತ್ತಿದ್ದ, ಅವು ಮರಳಿ ಬರುವ ಎಣಿಕೆಯಿರಲಿಲ್ಲ. ಬಹುಶಹ ಒಬ್ಬ ತಿಳಿಯದೇ ಅದನ್ನು ಬೇರೊಂದು ಆಕಾರಕ್ಕೆ ಕೆತ್ತಿ ಅದು ಮರಳಿ ಹಾರುವಂತೆ ಮಾಡಿದ ಆಗುಹವಾಗಿರಬಹುದು.

ಬೂಮರಾಂಗ್‍ನ ಹಾರಾಟಕ್ಕೆ ತಕ್ಕ ಮಾಳ್ಪು (design) ಅದರ ರೆಕ್ಕೆಗಳಿಗಿರಬೇಕು. ಒಂದು ಎಂದಿನ ಮರದಕಡ್ಡಿಗೂ ಬೂಮರಾಂಗಿಗೂ ಇರುವ ಬೇರ‍್ಮೆಯೆಂದರೆ, ಸಾದಾರಣ ಕಡ್ಡಿ ಒಂದೇ ತುಂಡಿನಿಂದ ಕೂಡಿದ್ದರೆ, ಬೂಮರಾಂಗಿಗೆ ಕಡಿಮೆ ಎಂದರೂ ಎರಡು ಬಾಗಗಳಿರುತ್ತವೆ. ಒಂದು ನಡು ಮೊನೆಯ (central point) ತನ್ಸುತ್ತದಲ್ಲಿ (turning about something) ಇಡಿಯ ಬೂಮರಾಂಗ್ ಸುತ್ತುತ್ತದೆ.

boom-2

ಎಸೆಯಲ್ಪಟ್ಟ ಬೂಮರಾಂಗ್ ಹೀಗೆ ಸುತ್ತುತ್ತ ತನ್ನ ಪೊಡಪನ್ನು (motion) ನೆಲೆತಗೊಳಿಸಿಕೊಂಡು (stabilize) ಗಾಳಿನೇರದಲ್ಲಿ ಸಾಗುತ್ತದೆ. ಈ ನೆಲೆತದ ಆಗುಹದ ದೆಸೆಯಿಂದಲೇ ಬೂಮರಾಂಗುಗಳು (ಮರಳಿ ಬಾರದವು) ಒಂದು ಎಂದಿನ ನೇರವಾದ ಮರಕಡ್ಡಿ ಹಾರುವ ದೂರವನ್ನು ಮೀರಿಸಬಲ್ಲವು. ಇವುಗಳನ್ನು ಇನ್ನೂ ಸುಳುವಾಗಿ ಪರಿಣಾಮಕಾರಿಯಾಗಿ ಗುರಿಯಿಟ್ಟು ಬಿಸುಡಬಲ್ಲವಾದ್ದರಿಂದ ಲೇಸಾದ ಆಯುದಗಳಾಗಿ ಆಯ್ಕೆಗೊಂಡವು.

ಮರಳಿ ಬರುವ ಬೂಮರಾಂಗ್‍ಗೆ ಬೇರೆ ಬಗೆಯ ಮಾಳ್ಪು ಇರುತ್ತದೆ. ಒಂದು ಬಾಗಿಸಿದ ಮರಕಡ್ಡಿಯು ಎಸೆದರೆ ಮರಳದು. ಅಂತಹದ್ದೇನಿದೆ ಮರಳುವ ಬೂಮರಾಂಗಿನಲ್ಲಿ? ಗಾಳಿ ನಡುವಿನ ಹಾರಾಟ ಹೇಗೆ ನೆಲೆತಗೊಳ್ಳುತ್ತದೆ? ಹೇಗೆ ಹೆಚ್ಚು ಮೇಲಕ್ಕೆ ಏರುತ್ತದೆ? ಚಂಡಿನ ಚಳಕದ  ಹಿಂದಿನ ಬರಹವೊಂದರಲ್ಲಿ ಅರಿತುಕೊಂಡಂತೆ, ಗಾಳಿಯ ಮೇಲೊತ್ತಡ, ಇಲ್ಲವೆ ಒಂದು ದಿಕ್ಕಿನ ಒತ್ತಡ ಇದನ್ನು ಹೀಗೆ ಆಡಿಸುತ್ತದೆ.

ಬೂಮರಾಂಗಿನ ರೆಕ್ಕೆಗಳಿಗೆ ಹಾರುಗೆರೆಯ (aerofoil) ಮಾಳ್ಪಿರುತ್ತದೆ. ಅಂದರೆ, ಅದರ ರೆಕ್ಕಯ ಒಂದು ಬದಿಯಲ್ಲಿ ಗುಂಡಿಸಲಾಗಿರುತ್ತದೆ (rounded). ಮತ್ತೊಂದು ಬದಿ ಚಪ್ಪಟೆಯಾಗಿರುತ್ತದೆ. ಬಾನೋಡಗಳ ರೆಕ್ಕೆಗಳೂ ಇಂತಹ ಮಾಳ್ಪನ್ನೆ ಹೊಂದಿರುವುದು. ಇದರಿಂದ ಹಾರಾಟದ ನಡುವೆ ಹಾರುಗೆರೆಯ ಬದಿಯಲ್ಲಿ ಗಾಳಿಯ ಕಿರುತುಣುಕುಗಳು (particles) ಬಿರುಸಿನಿಂದ ಹಾದು, ಬಿರುಸಿನ ಹುರುಪು ಹೆಚ್ಚಿ, ಬರ‍್ನವ್ಲಿ ಹೇಳುಮೆಯ ಕಟ್ಟಲೆಗಳಂತೆ ಅದರ ಮತ್ತೊಂದು ಬದಿಗೆ ಗಾಳಿಯ ಒತ್ತಡ ಉಂಟಾಗುತ್ತದೆ.

ಹೀಗಿರಲು ಎಸೆದಾಗ ಹಾರುಗೆರೆಯ ಬದಿಯು ಮೇಲ್ಮೋರೆ ಮಾಡಿದ್ದರೆ, ಬೂಮರಾಂಗ್ ಹಾರುತ್ತಾ ಮೇಲೇರಿಕೆಗೆ ಒಳಪಡುತ್ತದೆ. ಮತ್ತೊಂದು ಇಂತಹ ಎತ್ತುಗೆಯನ್ನು ನೋಡಬೇಕೆಂದರೆ, ಹೆಲಿಕಾಪ್ಟರ ಒಂದರ ತಳ್ಳಲಗಿನ (ತಳ್ಳಲಗು – propeller) ತಿರುಗೋಲುಗಳು ತಿರುಗುತ್ತ ಅದರ ಮಯ್ ತೂಕವನ್ನೇ ಎತ್ತುತ್ತವೆ!

Boom-3

ಹಾರುಗೆರೆ ಎಂದೊಡನೆ ಅದರ ಎರಡು ತುದಿಗಳನ್ನು ಹೀಗೆ ಬಣ್ಣಿಸಬಹುದು: ‘ಒಯ್ಯುವ ತುದಿ’ (leading edge) ಅಂದರೆ ಗಾಳಿಗೆ ಮೊದಲು ತಾಕುವ ತುದಿ, ಹಾಗು ‘ಹಿಂಬರುವ ತುದಿ’ (trailing edge) ಇಲ್ಲವೇ ಹಿಂಬಾಲಿಸಿ ಕಡೆಯಲ್ಲಿ ಗಾಳಿ ಯನ್ನು ಸವರುವ ತುದಿ.

boom-4

boom-5

ಮರಳುವ ಬೂಮರಾಂಗನ್ನು ಎಸೆದಾಗ ನೆಲದ ಸರಿತೆರಪಿನಲ್ಲಿ (parallel) ಎಸೆಯುವುದಿಲ್ಲ, ಅದನ್ನು ಹೆಚ್ಚುಕಡಿಮೆ ನೆಲದ ನೆಟ್ಟಬದಿಯಲ್ಲಿ (perpendicular) ವಾಲಿಸಿ ಎಸೆಯುತ್ತಾರೆ. ಇದರಿಂದಲೇ ಅದು ತಿರುವು ಪಡೆದು ಸುತ್ತು ಹಾಕಿ ಮರಳಲು ಸಾದ್ಯ. ಇದರಿಂದ ಆಗುವುದೇನೆಂದರೆ, ಹಾರುವಾಗ ಒಯ್ಯುವ ತುದಿಯುಳ್ಳ ಮೇಲು ರೆಕ್ಕೆಯ ಮೇಲೆ ಕೆಳಗಿನ ರೆಕ್ಕೆಗಿಂತಲೂ ಹೆಚ್ಚು ಗಾಳಿಯೊತ್ತಡ ಬರುತ್ತದೆ.

ಈ ಆಟದಿಂದ ಮೇಲುರೆಕ್ಕೆ , ತಿರುಗಿಕೆಯ ನಟ್ಟಬದಿಯ (perpendicular) ದಿಕ್ಕಿನಲ್ಲಿ ತಳ್ಳಲ್ಪಟ್ಟು ವಾಲುತ್ತದೆ. ಅಂದರೆ, ಅದರ ಸುತ್ತುನಡು(axis)ವಿನ ದಿಕ್ಕಿನಲ್ಲಿ ವಾಲುತ್ತದೆ. ಇದಿಶ್ಟು ಅರೆ-ತಿರುಗಿಗಾದರೆ, ಒಂದೊಂದು ಅರೆತಿರುಗೂ ಹೀಗೇ ಬೂಮರಾಂಗನ್ನು ವಾಲಿಸುವುದು.

boom-6

ಹೀಗೆ ಮೇಲೆ-ಕೆಳಗಿನ ರೆಕ್ಕೆಗಳ ಮೇಲಿನ ಒತ್ತಡಗಳ ಬೇರ‍್ಮೆಯಿಂದಲೇ ಒಂದೇ ಬಗೆಯಾಗಿ ತಿರು-ತಿರುಗಿಗೂ ವಾಲಲ್ಪಟ್ಟು, ಕಡೆಗೆ ಹಾರುತ್ತ ಒಂದು ಸುತ್ತು ಮುಗಿಸಿ ಮರಳುತ್ತದೆ. ಹೆಚ್ಚು ದೂರ ಹಾರಿ ಮರಳುವ ಬೂಮರಾಂಗಿನ ದಾರಿಯ ಗೆರೆಯು, ನೀರಿನ ಹನಿಯ ಆಕಾರವನ್ನು ಹೋಲುವುದಂತೆ! ಮರಳುವ ಬೂಮರಾಂಗುಗಳಿಗೆ 3-4 ರೆಕ್ಕೆಗಳಿರುವುದು ಉಂಟು.

ಇಂದು ಇಂತಹವುಗಳು ಹೆಚ್ಚಾಗಿ ಆಟ ಪೋಟಿಗಳಿಗೆ ಮಾಡಲ್ಪಡುತ್ತವೆ. ಮರದ ತುಂಡು, ಆನೆಹಲ್ಲು, ಪ್ಲಾಸ್ಟಿಕ್ ಇಲ್ಲವೇ ಮತ್ತಿತರ ಸೇರಿಕೆಯ ವಸ್ತುಗಳನ್ನು ಬಳಸಿ ಬೂಮರಾಂಗುಗಳನ್ನು ಮಾಡುತ್ತಾರೆ.

(ಮಾಹಿತಿ ಮತ್ತು ತಿಟ್ಟಗಳ ಸೆಲೆ: popsci, wikipedia.org, howstuffworks)

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *