‘ಕ್ಯಾಪಿಟಲಿಸಂ’ ಎಂದರೇನು?

– ಚೇತನ್ ಜೀರಾಳ್.

capitalism

ಕ್ಯಾಪಿಟಲಿಸಂ ಬಗ್ಗೆ ಹಲವಾರು ತರಹದ ನಂಬಿಕೆಗಳು, ಅರೋಪಗಳು, ವಿವಾದಗಳು ನಮ್ಮ ಸಮಾಜದಲ್ಲಿ ಇವೆ. ಇನ್ನು ನಮ್ಮ ದೇಶದಲ್ಲಿ ಕ್ಯಾಪಿಟಲಿಸಂ ಬಗ್ಗೆ ಇನ್ನೂ ಹೆಚ್ಚಿನ ತಪ್ಪು ನಂಬಿಕೆಗಳಿವೆ. ಹಲವಾರು ಸಮಯಗಳಲ್ಲಿ ನಮ್ಮ ಸರಕಾರಗಳು ತಗೆದುಕೊಳ್ಳುವ ನಿರ‍್ದಾರಗಳನ್ನು ತೆಗಳುತ್ತಾ ಹಲವಾರು ಜನರು ಸರಕಾರ ಕ್ಯಾಪಿಟಲಿಸಂ ಪರವಾಗಿದೆ ಅತವಾ ಎಂ.ಎನ್.ಸಿ ಗಳ ಏಜಂಟು ಎಂದು ಅರೋಪಿಸುವುದನ್ನು ನಮ್ಮ ಸುದ್ದಿಹಾಳೆಗಳಲ್ಲಿ ಸಹ ನೋಡಿರುತ್ತೇವೆ.

ವಿದೇಶ ನೇರ ಬಂಡವಾಳ ಹೂಡಿಕೆ, ಹಲವಾರು ಕ್ಶೇತ್ರಗಳಲ್ಲಿ ವಿದೇಶದ ಹೂಡಿಕೆಯ ಬಗ್ಗೆ ಸರಕಾರದ ನಿರ‍್ದಾರಗಳನ್ನು ಟೀಕಿಸುವುದರ ಬಗ್ಗೆ ನಾವು ಓದಿರುತ್ತೇವೆ. ಬಾರತದಲ್ಲಿ ಮನಮೋಹನ್ ಸಿಂಗ್, ಪಿ ಚಿದಂಬರಂ ಹಾಗೂ ಆರ್‍.ಬಿ.ಅಯ್ ಮತ್ತು ಸಿ.ಅಯ್.ಅಯ್ ಮುಂತಾದ ಸಂಸ್ತೆಗಳು ಕ್ಯಾಪಿಟಲಿಸಂ ಪರವಾಗಿದ್ದಾರೆ ಎಂದು ಆರೋಪಿಸಲಾಗುತ್ತದೆ. ಹಾಗಿದ್ರೆ ಕ್ಯಾಪಿಟಲಿಸಂ ಎಂದರೇನು? ಇದರ ಜೊತೆ ಇರುವ ಬೇರೆ ಬೇರೆ ಸಿದ್ದಾಂತಗಳೇನೆಂದು ಈ ಬರಹದಲ್ಲಿ ನೋಡೋಣ.

ಆಸ್ಟ್ರಿಯನ್ ಸ್ಕೂಲ್ ಆಪ್ ಎಕನಾಮಿಕ್ಸ್, ಕ್ಯಾಪಿಟಲಿಸಂ ಅನ್ನು “ಸೀಮಿತ ಸರಕಾರ” ಮತ್ತು “ಸರಿಯಾದ ದುಡ್ಡು” ಎಂದು ಎರಡು ಪದಗಳಲ್ಲಿ ಹೇಳುತ್ತದೆ. ಸೀಮಿತ ಸರಕಾರವೆಂದರೆ ಒಂದು ವ್ಯವಸ್ತೆಯಲ್ಲಿ ಸರಕಾರದ ಕೆಲಸ ಜನರ ಆಸ್ತಿಪಾಸ್ತಿಗಳನ್ನು ಒಳಗಿನ/ಹೊರಗಿನ ತಂಟೆಕೋರರಿಂದ ಕಾಪಾಡುವುದು ಮತ್ತು ತಾನು ಮಾಡಿರುವ/ಮಾರುಕಟ್ಟೆಯ ನಿಯಮಗಳನ್ನು ಎಲ್ಲರು ಸರಿಯಾಗಿ ಪಾಲಿಸುವಂತೆ ನೋಡಿಕೊಳ್ಳುವುದು ಮಾತ್ರ. ಇದರ ಒಳಗಡೆಯೇ ಪೋಲಿಸ್ ಮತ್ತು ನ್ಯಾಯಾಂಗ ವ್ಯವಸ್ತೆಗಳು ಸರಿಯಾಗಿ ಕೆಲಸ ಮಾಡುವಂತೆ ನೋಡಿಕೊಳ್ಳುವುದು ಸೇರಿರುತ್ತದೆ.

ಯಾವ ಸಮಾಜ ಈ ಮೇಲಿನ ಎರಡು ನಿಯಮಗಳನ್ನು ಪಾಲಿಸುತ್ತದೋ ಅದನ್ನು ಕ್ಯಾಪಿಟಲಿಸ್ಟ್ ಸಮಾಜ ಎಂದು ಕರೆಯಬಹುದು. ಹಾಗಿದ್ರೆ ಇದನ್ನ ಕ್ಯಾಪಿಟಲಿಸಂ ಎಂದು ಕರೆದವರು ಯಾರು ಅನ್ನೋದನ್ನ ತಿಳಿದುಕೊಳ್ಳೋಣ. ಹಣದರಿಮೆಯಲ್ಲಿ ಮುಕ್ಯವಾಗಿ ನಾಲ್ಕು ತರಹದ ಸಿದ್ದಾಂತಗಳಿವೆ. ಮಾರ‍್ಕ್ಸಿಸಂ (ಅತಿ ಎಡ ಪಂತೀಯ), ಕೀನೇಸಿಯಾನಿಸಂ (ನಡು-ಎಡ ಪಂತೀಯ), ಮಾನೇಟರಿಸಂ (ನಡು-ಬಲ ಪಂತೀಯ) ಮತ್ತು ಆಸ್ಟ್ರಿಯನ್ ಶಾಲೆ (ಅತಿ ಬಲ ಪಂತೀಯ) ಮತ್ತು ಇವುಗಳ ಎಡದಿಂದ ಬಲದಕಡೆ ನಡೆಯುವಿಕೆಯನ್ನು ಕಮ್ಯುನಿಸಂ ನಿಂದ ಕ್ಯಾಪಿಟಲಿಸಂ ಕಡೆಗೆ ಎಂದು ಕರೆಯಬಹುದು. (ಇವುಗಳ ಕುರಿತು ಹೆಚ್ಚಿನ ಮಟ್ಟದಲ್ಲಿ ಮುಂದಿನ ಬರಹಗಳಲ್ಲಿ ನೋಡೋಣ).

ಈ ಸಿದ್ದಾಂತಗಳನ್ನು ನೋಡಿದ ಮೇಲೆ, ಕ್ಯಾಪಿಟಲಿಸಂ ಸಮಾಜದ ಕಟ್ಟು ಪಾಡುಗಳನ್ನು ತಿಳಿದುಕೊಂಡ ಮೇಲೆ ನಾವು ಅಮೇರಿಕಾವನ್ನು ಕ್ಯಾಪಿಟಲಿಸ್ಟ್ ದೇಶವೆಂದು ಕರೆಯುವುದು ಸರಿಯೇ? ಇಲ್ಲ. ಅಮೇರಿಕಾ ಪೂರ‍್ತಿಯಾಗಿ ಕ್ಯಾಪಿಟಲಿಸಂ ಅನ್ನು ಒಪ್ಪಿಕೊಂಡಿದೆಯೇ? ಉತ್ತರ ಇಲ್ಲ.

ಹಲವಾರು ಅರಿಕೆಗಳು ಕಂಡುಕೊಂಡಿರುವಂತೆ ಕ್ಯಾಪಿಟಲಿಸಂ ಸಮಾಜವನ್ನು ಏಳಿಗೆಯಡೆಗೆ ಕೊಂಡ್ಯೊಯುತ್ತದೆ ಎಂದು ತಿಳಿಸಿವೆ. ಅಂತಹ ಸಮಾಜದಲ್ಲಿ ಜನರು ಪಡೆಯುವ ತಲಾದಾಯದ ಕಂದಕವು ತುಂಬಾ ಕಡಿಮೆಯಾಗಿರುತ್ತದೆ (ಆದರೆ ಅಮೇರಿಕಾ 1971 ರಲ್ಲಿ ಗೋಲ್ಡ್ ಸ್ಟ್ಯಾಂಡರ್‍ಡ್ ಅನ್ನು ಬಿಟ್ಟ ಮೇಲೆ ಈ ಕಂದಕ ಹೆಚ್ಚಾಗಿದೆ). ಆಡಂ ಸ್ಮಿತ್ ಹೇಳುವಂತೆ ಇಂತಹ ಸಮಾಜದಲ್ಲಿ ಕಾಣದ ಕಯ್ಗಳು ಎಲ್ಲರನ್ನು ಮೇಲೆತ್ತುವ ಕೆಲಸ ಮಾಡುತ್ತಲೇ ಇರುತ್ತವೆ.

ಎತ್ತುಗೆಗೆ, ಒಬ್ಬ ಉದ್ದಿಮೆದಾರ ಒಂದು ಸಾಮಾನನ್ನು ಮಾರುಕಟ್ಟೆಗೆ ತಂದರೆ ಅದರಿಂದ ಅವನು ಲಾಬವನ್ನು ಪಡೆಯಲೇ ಬೇಕು ಎಂಬ ಉದ್ದೇಶ ಹೊಂದಿರುತ್ತಾನೆ. ಈ ಉದ್ದೇಶದಿಂದಲೇ ಅವನು ಮಾರುಕಟ್ಟೆಯಲ್ಲಿ ಒಳ್ಳೆಯ ಗುಣಮಟ್ಟದ ಸಾಮಾನುಗಳನ್ನು ಸಾದ್ಯವಾದಶ್ಟು ಕಡಿಮೆ ಬೆಲೆಗೆ ಮಾರುತ್ತಾನೆ. ಕೊಳ್ಳುಗನು ಸಹ ತಾನು ಕಡಿಮೆ ದುಡ್ಡಿನಲ್ಲಿ ಒಳ್ಳೆಯ ಗುಣಮಟ್ಟದ ಸಾಮಾನನ್ನು ಕೊಂಡ ಕುಶಿಯಲ್ಲಿರುತ್ತಾನೆ. ಹೀಗೆ ಇಲ್ಲಿ ಕೊಳ್ಳುಗ ಮತ್ತು ಮಾರಾಟಗಾರರಿಬ್ಬರು ಸಂತೋಶದಿಂದಿದ್ದಾರೆ.

ನಮ್ಮ ರಾಜಕೀಯ ಪಕ್ಶಗಳ ನಿಲುವೇನು?
ಬಾರತದಲ್ಲಿರುವ ಎಲ್ಲಾ ರಾಜಕೀಯ ಪಕ್ಶಗಳು – ಕಾಂಗ್ರೆಸ್, ಬಿಜೆಪಿ, ಕಮ್ಯುನಿಸ್ಟ್, ಎ.ಎ.ಪಿ, ಜೆ.ಡಿ.ಎಸ್, ಅಣ್ಣ ಡಿಎಂಕೆ, ಡಿಎಂಕೆ ಸೇರಿದಂತೆ ಎಲ್ಲಾ ಪಕ್ಶಗಳು ಸಹ ಕೀನೇಸಿಯನ್ ಮತ್ತು/ಅತವಾ ಅದರ ಎಡದ ನಿಲುವು ಹೊಂದಿದ್ದಾರೆ. ನಡುವಿನ ಮತ್ತು ಬಲ-ನಡುವಿನ ನಿಲುವು ಹೊಂದಿರುವ ಪಕ್ಶ ಯಾವುದು ಇಲ್ಲ ಅನ್ನುವುದೇ ಸತ್ಯ.

ಯಾವ ಕಾಂಗ್ರೆಸ್ ಅತವಾ ಬಿಜೆಪಿ ತಾವು ಎಶ್ಟೇ ಅಬಿವ್ರುದ್ದಿ ಪರ ಎಂದು ಹೇಳಿಕೊಂಡರು ಅವರು ಜಾರಿಗೆ ತರುವ ಕೂಳು ಬದ್ರತಾ ಕಾಯ್ದೆ, ಕೂಲಿಗಾಗಿ ಕಾಳು ಯೋಚನೆ, ಅನ್ನ ಬಾಗ್ಯ, ಶಾದಿ ಬಾಗ್ಯ, ಕುಂಕುಮ ಬಾಗ್ಯ ಮುಂತಾದ ಯೋಜನೆಗಳೆಲ್ಲವೂ ಜನರನ್ನು ಮರುಳು ಮಾಡಲೆಂದೇ ಎನ್ನುವುದನ್ನು ನಾವು ಅರ್‍ತ ಮಾಡಿಕೊಳ್ಳಬೇಕು.

ಹೀಗೆ ಹಣದರಿಮೆಯಲ್ಲಿ ಹಲವು ಸಿದ್ದಾಂತಗಳು ಅಸ್ತಿತ್ವದಲಿವೆ. ಆಯಾ ನಾಡುಗಳು ಆರಿಸಿಕೊಳ್ಳುವ ಸಿದ್ದಾಂತದ ಮೇಲೆ ಅಯಾ ನಾಡಿನ ಬೆಳವಣಿಗೆಯ ಗತಿ ನಿರ‍್ದಾರವಾಗುತ್ತದೆ. ಒಂದು ನಾಡಿನ ಬೆಳವಣಿಗೆಯಲ್ಲಿ ದುಡಿಮೆಯ ಪಾತ್ರ ಬಹಳ ಮುಕ್ಯವಾಗುತ್ತದೆ. ಹೆಚ್ಚು ಉದ್ದಿಮೆಗಳನ್ನು ಹುಟ್ಟುಹಾಕಬೇಕು, ಅದಕ್ಕೆ ತಕ್ಕಂತೆ ದುಡಿಯುವ ಜನರನ್ನು ತಯಾರು ಮಾಡಬೇಕು ಅದಕ್ಕೆ ಬೇಕಾಗಿರುವ ಕಲಿಕೆಯನ್ನು ಕಟ್ಟಬೇಕು, ಜನರ ದುಡಿಮೆಗೆ ತಕ್ಕ ಪ್ರತಿಪಲ ದೊರೆಯಬೇಕು.

ಹಾಗಾಗಿ ನಮ್ಮ ನಾಡಿಗೆ ಎಂತಹ ಸಿದ್ದಾಂತವನ್ನು ನಾವು ಆರಿಸಿಕೊಳ್ಳುತ್ತೇವೆ ಅನ್ನೋದು ನಮಗೆ ಬಿಟ್ಟಿದ್ದು. ಅಲ್ಲವೇ?

(ತಿಟ್ಟಸೆಲೆ: notenoughgood.com)

ನಿಮಗೆ ಹಿಡಿಸಬಹುದಾದ ಬರಹಗಳು

2 Responses

  1. ಎ.ಎ.ಪಿ ಹೊಂದಿರುವ ಹಣದ ಸಿದ್ದಾಂತದ ಕುರಿತು ನೀವು ಎ.ಎ.ಪಿ ಯ ಪ್ರಣಾಳಿಕೆಯನ್ನು ಆದರಿಸಿ ಹೇಳಿದ್ದೀರ? ಇಲ್ಲವೆ ಈ ಪಕ್ಶದಲ್ಲಿರುವ ವ್ಯಕ್ತಿಗಳು ಹೊಂದಿರುವ ಸಿದ್ದಾಂತದ ಆದಾರದ ಮೇಲೆ ಹೇಳಿದ್ದೀರ? ನನಗೆ ತಿಳಿಸಿ. ಏಕೆಂದರೆ ಅದು ಇನ್ನೂ ಸರ್ಕಾರವನ್ನು ರಚಿಸಿಯೇ ಇಲ್ಲ ಮತ್ತು ಯೋಜನೆಗಳನ್ನು ರೂಪಿಸಿಯೇ ಇಲ್ಲವಾಗಿರುವುದರಿಂದ ನೀವು ಹೇಗೆ ಇದನ್ನು ಅಂದಾಜಿಸಿದಿರಿ? ಮತ್ತು ಈ ನಾಲ್ಕು ಹಣದ ಸಿದ್ದಾಂತಗಳ ಬೇರ್ಮೆ, ಒಂದೇತನ, ಅನುಕೂಲ, ಅನಾನುಕೂಲ …ಹೀಗೆ ಮತ್ತೊಂದು ಈ ಕುರಿತು ಲೇಕನವನ್ನು ಬರೆಯಲು ಮನವಿ.

  2. ಶ್ರೀನಿವಾಸಮೂರ‍್ತಿ ಅವರೇ, ಎ.ಎ.ಪಿ ಯ ದೆಹಲಿ ಚುನಾವಣ ಪ್ರಣಾಳಿಕೆ ನೋಡಿದರೆ ಉಚಿತವಾಗಿ ೭೦೦ ಲೀಟರ್ ನೀರು, ಮಿಂಚಿನ (ವಿದ್ಯುತ್) ದರದಲ್ಲಿ ಶೇ 50 ರಶ್ಟು ರಿಯಾಯಿತಿ ಹೀಗೆ ಹಲವಾರು ಅಂಶಗಳಿವೆ. ಇದು ಹಣದರಿಮೆಯ ಎಡ ಅತವಾ ನಡು ಎಡದಲ್ಲಿರುವ ಸಿದ್ದಾಂತ ಹೊಂದಿರುವ ಪಕ್ಶಕ್ಕೆ ಸೇರುವಂತೆ ಮಾಡುತ್ತದೆ.

    ಬೇರೆ ಹಣದ ಸಿದ್ದಾಂತಗಳ ಬಗ್ಗೆ ಮುಂದೆ ಬರೆಯಲು ಪ್ರಯತ್ನ ಪಡುತ್ತೇನೆ. ನನ್ನಿ.

ಅನಿಸಿಕೆ ಬರೆಯಿರಿ:

%d bloggers like this: