ಕಣ್ಮರೆಯಾದ ಕನ್ನಡದ ಕುರುಹುಗಳು
– ಸಂದೀಪ್ ಕಂಬಿ.
ಈಗಿನ ಬಡಗಣ ಮಹಾರಾಶ್ಟ್ರದ ಕಾನದೇಶ, ನಾಸಿಕ ಜಿಲ್ಲೆ, ಮತ್ತು ಅವರಂಗಾಬಾದ ಜಿಲ್ಲೆಯ ಪ್ರದೇಶಗಳಲ್ಲಿ ಕಣ್ಮರೆಯಾದ ಕನ್ನಡದ ಕುರುಹುಗಳನ್ನು ಕಾಣಬಹುದೆಂದು ಶಂಬಾ ಜೋಶಿಯವರ ಅರಕೆಗಳು ತಿಳಿಸಿಕೊಟ್ಟಿವೆ. ಈ ಕುರುಹುಗಳನ್ನು ಮುಕ್ಯವಾಗಿ ಅಲ್ಲಿನ ಊರಿನ ಹೆಸರುಗಳು, ಅವುಗಳ ಮೂಲ, ಅಲ್ಲಿರುವ ಕೆಲವು ಜನಾಂಗಗಳು, ಅವರ ನುಡಿಗಳು, ಮತ್ತು ಅವರ ಕೆಲವು ನಂಬಿಕೆ/ ಆಚರಣೆಗಳ ಮೂಲಕ ಅರಸಬಹುದು.ಇಂತಹುದೇ ಅರಕೆಯನ್ನು ಡಾ|| ಎಂ. ಚಿದಾನಂದ ಮೂರ್‍ತಿಯವರು ಕೂಡ ನಡೆಸಿ ಅದರ ಬಗ್ಗೆ ತಮ್ಮ ಪುಸ್ತಕ “ಬಾಶಿಕ ಬ್ರುಹತ್ ಕರ್‍ನಾಟಕ” ಎಂಬುದರಲ್ಲಿ ಬರೆದಿದ್ದಾರೆ.
ಊರ ಹೆಸರುಗಳು
ಊರ್/ ಊರು ಪದಗಳಿಂದ ಕೊನೆಗೊಳ್ಳುವ ಊರ ಹೆಸರುಗಳು ಈ ಪ್ರದೇಶದಲ್ಲಿ ಸಿಗುತ್ತವೆ. ಹಾಗೆಯೇ ವಾಡ/ ವಾಡಿ ಪದಗಳಿಂದ ಕೊನೆಗೊಳ್ಳುವ ಊರ ಹೆಸರುಗಳೂ ಇವೆ. ಈ ಪದವು ಸಂಸ್ಕ್ರುತ/ ಪ್ರಾಕ್ರುತ ಮೂಲದ ‘ವಾಟಿಕಾ’ದಿಂದ ಬಂದಿರಬಹುದೆಂದು ನಂಬಲಾಗಿತ್ತಾದರೂ ಇದು ದ್ರಾವಿಡ ಮೂಲದ ಪದ ಎಂದು ಈಗ ಹೆಚ್ಚು ಕಡಿಮೆ ಎಲ್ಲ ತಿಳಿವಿಗರೂ ಒಪ್ಪಿರುವ ಮಾತು.
ನಾಸಿಕ ಜಿಲ್ಲೆಯಲ್ಲಿ ಗೋದೂರ್, ಕೋಟೂರ್, ನಂಪೂರ್, ವಿಂಚೂರ್ ಎಂಬ ಊರುಗಳಿವೆ. ಕುಂಟೆವಾಡಿ, ದೇವಳಾ, ದೇವಳವಾಡಿ ಎಂಬ ಊರುಗಳೂ ಇವೆ. ಕಾನದೇಶದಲ್ಲಿ ಲಾಸೂರ್ ಎಂಬ ಊರಿದೆ. ಅದೇ ಜಿಲ್ಲೆಯಲ್ಲಿ ಬೆಟವಾಡ ಎಂಬ ಊರಿದೆ. ಈ ಹೆಸರುಗಳು ಮೂಲವಾಗಿ ಕನ್ನಡ/ ದ್ರಾವಿಡ ಎಂಬುದು ಅನುಮಾನವಿಲ್ಲ. ಇಲ್ಲಿನ ಮಾಲೆಗಾವ್, ಮಾಲಯ್ ಗಡ್ ಎಂಬ ಊರ ಹೆಸರುಗಳಲ್ಲಿ ‘ಮಲೆ’ (ಬೆಟ್ಟ) ಪದದ ಮೂಲ ಕಾಣಿಸುತ್ತದೆ. ನಾಸಿಕ ಜಿಲ್ಲೆಯಲ್ಲಿ ಶತಮಲ ಎಂಬ ಇದೇ ಮಲೆ ಮೂಲದ ಹೆಸರೂ ಇದೆ.
ಕನ್ನಡದಲ್ಲಿ ‘ಏರ್’ ಎಂದರೆ ದಿಬ್ಬ. ಏರ್, ಏರಿ ಪದಗಳಿಂದ ಕೊನೆಗೊಳ್ಳುವ ಹಲವು ಊರುಗಳು ಈ ಪ್ರದೇಶದಲ್ಲಿ ಕಾಣಸಿಗುತ್ತವೆ. ಅಂಜನೇರಿ, ತಾಲೇರ್, ಮುಲ್ಹೇರ್, ಎಂಬ ಊರುಗಳಲ್ಲಿ ಬೆಟ್ಟದ ತುದಿಯಲ್ಲಿ ಕೋಟೆಯಿರುವುದು ವಿಶೇಶ. ಹಾಗೆಯೇ ಕಾನದೇಶ ಪ್ರದೇಶದಲ್ಲಿ ಅಮಲ್ನೇರ್, ಪಿಂಪಲ್ನೇರ್, ಬಾಮೇರ್, ದೇಹೇರ್, ರಾವೇರ್, ಟಾಳ್ನೇರ್, ಜಮ್ನೇರ್, ಸಿಂದ್‍ಕೇರ್ ಎಂಬ ಊರುಗಳಿದ್ದು ಇವುಗಳೆಲ್ಲಲ್ಲ ಬೆಟ್ಟಗಳಿದ್ದು ಅವುಗಳ ಮೇಲೆ ಕೋಟೆಗಳಿವೆ.
ಬೂಸಾವಾಳ್ ಎಂಬ ಇನ್ನೊಂದು ಗಮನ ಸೆಳೆಯುವ ಊರ ಹೆಸರು ಕಾನದೇಶದಲ್ಲಿದೆ. ಇಲ್ಲಿ ಪಾಳ್, ವಾಳ್, ಹಾಳ್ ಪದಗಳಿಂದ ಕೊನೆಗೊಳ್ಳುವ ಕರ್‍ನಾಟಕದ ಹಲವು ಊರಹೆಸರುಗಳು ನೆನಪಿಗೆ ಬರುತ್ತವೆ (ಬೂದಿಹಾಳ, ಸಿಸುವಿನಾಳ, ಬದನವಾಳು).
ಅವರಂಗಾಬಾದ ಜಿಲ್ಲೆಯಲ್ಲಿ ಕನ್ನಡ ಎಂಬ ತಾಲ್ಲೂಕು ಕೇಂದ್ರವು ಇದೆ. ಇದು ಕೂಡ ಕನ್ನಡ ನಾಡಿನ ಮೂಲದ ಕುರುಹು ಎಂದು ಶಂಬಾ ಜೋಶಿಯವರು ತಿಳಿಸುತ್ತಾರೆ. ಆದರೆ ಚಿದಾನಂದ ಮೂರ್‍ತಿಗಳು ಇದನ್ನು ಒಪ್ಪುವುದಿಲ್ಲವಾದರೂ ಇದರ ಮೂಲದ ಹೆಸರು ಕನ್ನವಾಡ (ಕ್ರಿಶ್ಣ ವಾಡ -> ಕನ್ಹವಾಡ -> ಕನ್ನಡ) ಎಂದು ತಿಳಿಸುತ್ತಾರೆ.
ನಡೆ-ನುಡಿಯ ಕುರುಹುಗಳು
ನಾಸಿಕ ಜಿಲ್ಲೆಯಲ್ಲಿ ಮಕ್ಕಳನ್ನು ಮುದ್ದಿನಿಂದ ‘ಬಾಳಂಬಟ್ಟ’ (ಬಾಳಮ್ಮ ಬಟ್ಟ, ಬಾಳಪ್ಪ ಬಟ್ಟ) ಎಂಬಂತಹ ಹೆಸರುಗಳಿಂದ ಕರೆಯುವ ರೂಡಿಯಿದೆ. ಮಕ್ಕಳು ತಂದೆಯರನ್ನು ‘ಅಣ್ಣಾ’ ಎಂದು ಕರೆಯುತ್ತಾರೆ. ಹಾಗೆಯೇ ಇಲ್ಲಿನ ಜನರು ತಮ್ಮ ನಾಯಿಗಳಿಗೆ ‘ಕರಿಯ’ ಎಂಬ ಹೆಸರನ್ನಿಡುವುದೂ ಉಂಟು. ಕಾನಡ – ಕಾನಡಿ ಎಂಬ ಹೆಸರಿನ ಬುಡಕಟ್ಟು ಮಂದಿಯೂ ಇಲ್ಲಿ ಸಾಕಶ್ಟು ಇರುವರು.
ಮೇಲೆ ಹೆಸರಿಸಿರುವ ನಾಸಿಕ ಜಿಲ್ಲೆಯ ಕೋಟೂರಿನಲ್ಲಿ ಮಲ್ಹಾರ ದೇವನ ಗುಡಿ ಇದೆ. ಇದು ಕನ್ನಡ ನಾಡಿನಲ್ಲಿ ಪೂಜಿಸಲಾಗುವ ಮಯ್ಲಾರ ದೇವನೇ. ಮಯ್ಲಾರಿಯನ್ನು ಕಂಡೋಬ ಎಂಬ ಹೆಸರಿನಲ್ಲಿ ಪೂಜಿಸುವ ಮಹಾರಾಶ್ಟ್ರದಲ್ಲಿ ಕನ್ನಡ ಮೂಲದ ಹೆಸರಾದ ಮಲ್ಹಾರವನ್ನು ಬಳಸುವುದು ವಿಶೇಶ.
ನಾಸಿಕ ಜಿಲ್ಲೆಯಲ್ಲಿ ವೀಳ್ಯದೆಲೆಯನ್ನು ಬೆಳೆಯುವ ತಿರ್‍ಗುಳರು (ತಿಗುಡರು) ಎಂಬ ಜನಾಂಗವಿದೆ. ಕರ್‍ನಾಟಕದಲ್ಲಿ ವೀಳ್ಯದೆಲೆಯನ್ನು ಬೆಳೆಯುವ ಕನ್ನಡ ಮಾತಾಡುವ ಜನಾಂಗವಾದ ತಿಗುಳರನ್ನು ಇವರು ಹೋಲುತ್ತಾರೆ. (ಎರಡು ಕೋಲುಗಳ ನಡುವೆ ಕಟ್ಟಲಾದ) ಹಗ್ಗದ ಮೇಲೆ ನಡೆಯುವುದು ಮುಂತಾದ ದೊಂಬರಾಟವನ್ನಾಡಿ ಬದುಕು ಕಟ್ಟಿಕೊಂಡಿರುವ ‘ಕೊಲ್ಹಾಟಿ’ ಎಂಬ ಜನಾಂಗವನ್ನು ಇಲ್ಲಿ ಕಾಣಬಹುದು. ಇವರು ಕನ್ನಡ, ಗುಜರಾತಿ ಬೆರೆಸಿದ ಮರಾಟಿ ನುಡಿಯನ್ನಾಡುತ್ತಾರೆ. ಕನ್ನಡ ಸಾಹಿತ್ಯದ ಹಳೆಯ ಕಾವ್ಯಗಳಲ್ಲಿ ಕೊಲ್ಲಟಿ/ ಕೊಲ್ಲಟಿಗರನ್ನು ಹೆಸರಿಸಲಾಗಿದೆ. ‘ಕೋಲು’ ಮತ್ತು ‘ಆಡು’ ಎಂಬ ಪದಗಳಿಂದ, ದೊಂಬರಾಟವನ್ನು ಆಡುವ, ಈ ಜನಾಂಗಕ್ಕೆ ಈ ಹೆಸರು ಬಂದಿರಬಹುದು.
ಈ ಪ್ರದೇಶಗಳಲ್ಲಿ ಹಲವು ಲಿಂಗಾಯತ ಜನಾಂಗಗಳಿವೆ. ಅಲ್ಲದೆ ‘ಬಿಲ್ಲರು’ ಎಂಬ ಅಲೆಮಾರಿ ಜನಾಂಗವೂ ಇದೆ. ಈ ಹೆಸರು ಕನ್ನಡದ ‘ಬಿಲ್’ ಪದವನ್ನು ಹೋಲುತ್ತದೆ. ಇವರು ಪೂಜಿಸುವ ಹೆಣ್ಣು ದೇವತೆಗಳ ಹೆಸರುಗಳು ಹತಿಪವ, ಹಾಲ್ಕ್ ಮಾತಾ, ಹಳ್ಳಾಮ್, ಹಾಯಿನ್ವನ ಎಂಬುದಾಗಿದೆ. ಈ ಹೆಸರುಗಳಲ್ಲಿ ಕನ್ನಡದ ಅಮ್ಮ-ಅವ್ವ ಎಂಬ ಪದಗಳು ತಿಳಿಯಾಗಿ ಕಾಣುತ್ತದೆ. ಹೀಗೆ ಹುಡುಕುತ್ತ ಹೋದರೆ ಕಲ್ಬರಹ, ನಲ್ಬರಹ ಕಾಲದ ಮೊದಲೇ ಕನ್ನಡವು ಗೋದಾವರಿಯ ಬಡಗಣಕ್ಕೂ ಇದ್ದಿತೆಂದು ಮೇಲೆ ಹೇಳಿದ ಕುರುಹುಗಳ ಮೂಲಕ ತಿಳಿಯಬಹುದಾಗಿದೆ.
(ತಿಳಿವಿನ ಸೆಲೆ: ಬಾಶಿಕ ಬ್ರುಹತ್ ಕರ್‍ನಾಟಕ, ಡಾ|| ಎಂ. ಚಿದಾನಂದ ಮೂರ್‍ತಿ; ಕಣ್ಮರೆಯಾದ ಕನ್ನಡ, ಶಂಬಾ ಜೋಶಿ)
(ಚಿತ್ರ ಸೆಲೆ: frontline.in)
ರಾಶ್ಟ್ರಕೊಟರ ಕಾಲದ ಕನ್ನಡದ ಮಹಾರಾಶ್ಟ್ರದ ಕುರಿತು ಸಾದ್ಯವಾದರೆ ತಿಳಿಸಿ