ಕನ್ನಡದ ಅಬಿವ್ರುದ್ದಿಗೆ ಇಂಗ್ಲೀಶ್ ಮಾನದಂಡವೇ?
ಮಡಿಕೇರಿಯ 80ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅದ್ಯಕ್ಶರಾಗಿರುವ ಲೇಕಕ, ಪರಿಸರ ತಜ್ನ ನಾ. ಡಿಸೋಜ ಅವರು ಹೇಳಿದ ಕೆಲವು ಮಾತುಗಳು ನಿಜಕ್ಕೂ ನನ್ನಲ್ಲಿ ಕೆಲವು ಪ್ರಶ್ನೆಗಳನ್ನು ಮೂಡಿಸಿದೆ. “ಅಂತರಾಶ್ಟ್ರೀಯ ಬಾಶೆ ಇಂಗ್ಲೀಶನ್ನು ಕಡೆಗಣಿಸದೇ ಕನ್ನಡದ ಅಬಿವ್ರುದ್ದಿಗೆ ಬಳಸಬೇಕು” ಎಂದಿರುವುದು ನನಗೆ ಹಾಸ್ಯವಾಗಿ ಕಾಣುತ್ತದೆ. ಹಾಗಾದರೆ ಕನ್ನಡ ಬಾಶೆಯು ಅಬಿವ್ರುದ್ದಿಯಾಗಬೇಕೆಂದರೆ ಇಂಗ್ಲೀಶ್ ಬಾಶೆಯನ್ನು ಮಾನದಂಡವಾಗಿ ಪರಿಗಣಿಸಬೇಕೆ?
ನೀವು ಹೇಳಿರುವಂತೆ ಇಂಗ್ಲೀಶ್ ಜಗತ್ತು ಸ್ವೀಕರಿಸಿರುವ ಬಾಶೆ ನಿಜ ಆದರೆ ನಾವು ಕರ್‍ನಾಟಕದಲ್ಲಿದ್ದುಕೊಂಡು ಮೊದಲು ಕನ್ನಡವನ್ನು ಸ್ವೀಕರಿಸಬೇಕಾದದ್ದು ನಮ್ಮ ಕರ್‍ತವ್ಯವಲ್ಲವೇ? ಪ್ರಾನ್ಸ್ ದೇಶ ಇಂಗ್ಲೀಶ್ ಬಳಸಿಕೊಂಡು ಪ್ರಂಚ್ ಅಬಿವ್ರುದ್ದಿ ಪಡಿಸಿರಬಹುದು ಆದರೆ ಕನ್ನಡದ ಅಬಿವ್ರುದ್ದಿಗೆ ಇಂಗ್ಲೀಶ್ ನ ಅನುಕರಣೆಯ ಅಗತ್ಯ ಇದೆಯೇ? ಇಂಗ್ಲೀಶಿನ ಅನೇಕ ಕತೆ, ಕಾದಂಬರಿ, ಸಾಹಿತ್ಯ ಮತ್ತು ವಿಜ್ನಾನ ಕುರಿತಾದ ಪುಸ್ತಕಗಳನ್ನು ಕನ್ನಡಕ್ಕೆ ಅನುವಾದಿಸಬೇಕು ಎಂಬಂತಿದ್ದ ನಿಮ್ಮ ನಿಲುವು ಕನ್ನಡದ ಮಹಾನ್ ಸಾಹಿತಿ, ಬರಹಗಾರರ ತಾಕತ್ತನ್ನು ಪ್ರಶ್ನಿಸಿದಂತಾಗಲಿಲ್ಲವೇ?
ತಮಿಳರಿಗೆ ತಮಿಳು ಪ್ರಾದಿಕಾರದ ಅಗತ್ಯವಿಲ್ಲದಿರಬಹುದು. ಆದರೆ ನಮಗೆ ಕನ್ನಡ ಪ್ರಾದಿಕಾರದ ಅಗತ್ಯ ಕಂಡಿತ ಇದೆ. ಏಕೆಂದರೆ ಕನ್ನಡ ಪ್ರಾದಿಕಾರವಿರುವುದು ಕೇವಲ ಕನ್ನಡದ ರಕ್ಶಣೆಗೆ ಮಾತ್ರವಲ್ಲದೇ ನಮ್ಮಂತ ಕಿರಿಯರಿಗೆ, ಕನ್ನಡ ತಿಳಿದವರಿಗೆ ಮತ್ತು ಕನ್ನಡದ ಬಗ್ಗೆ ತಿಳಿಯ ಬಯಸುವವರಿಗೆ, ಕನ್ನಡ ಕಲಿಸಿ ಅದರ ಮಹತ್ವ ಮತ್ತು ಮವ್ಲ್ಯವನ್ನು ಮನದಟ್ಟು ಮಾಡಿಸುವಲ್ಲಿ ಪ್ರಮುಕ ಪಾತ್ರ ವಹಿಸುತ್ತದೆ. ಹೀಗಿರುವಾಗ ನಿಮಗೆ ಇದು ನಾಚಿಕೆಗೇಡಿನ ಸಂಗತಿಯಾಗಿ ಕಾಣಿಸಿದ್ದು ಹೇಗೆ?
ಇಂಗ್ಲೀಶ್ ಜಗತ್ತಿನ ಮೂಲೆ ಮೂಲೆಯಲ್ಲಿ ಬಳಸಲ್ಪಡುವ ಬಾಶೆಯಾಗಿರಬಹುದು ಆದರೆ ಜಗತ್ತಿನ ಬೇರೆ ಬೇರೆ ದೇಶದವರು ಒಂದು ಸಣ್ಣ ಪ್ರಾಂತ್ಯದ ಮಾತ್ರು ಬಾಶೆಯಾಗಿರುವ ನಮ್ಮ ಕನ್ನಡ ಬಾಶೆಯನ್ನು ಕಲಿಯಲು ಇಚ್ಚಿಸುತ್ತಾರೆ. ಹಾಗಾದರೆ ಅವರಿಗಿಂತ ನಮ್ಮ ಬಾಶೆಯ ಹಿರಿಮೆ ದೊಡ್ಡದಲ್ಲವೇ? ಹೀಗಿರುವಾಗ ಅತ್ಯಂತ ಸುಲಬವಾದ, ಶ್ರೇಶ್ಟವಾದ, ಮತ್ತು ಪಾರಂಪರಿಕವಾದ ನಮ್ಮ ಕನ್ನಡ ಬಾಶೆಗೆ ಇಂಗ್ಲೀಶನ್ನು ಊರುಗೋಲನ್ನಾಗಿಸ ಹೊರಟಿರುವುದು ನಿಮ್ಮ ತಪ್ಪಲ್ಲವೇ?
ನಾ.ಡಿಸೋಜ ಅವರೇ, ಬಹುಶಹ ನೀವು ಮರೆತಿರಬಹುದು, ಕನ್ನಡ ಬಾಶಾ ಸಾಹಿತ್ಯದ ಇತಿಹಾಸಕ್ಕೆ ಕಿರೀಟ ಎಂಬಂತೆ ನಮ್ಮ ಬಾಶೆಗೆ ಬಂದಿರುವುದು ಬರೋಬರಿ ಒಟ್ಟು 8 ಜ್ನಾನಪೀಟ ಪ್ರಶಸ್ತಿಗಳು, ಆದರೆ ಕನ್ನಡ ಬಿಟ್ಟು ಬೇರೆ ಯಾವ ಬಾಶೆಗೆ ಇಶ್ಟು ಜ್ನಾನಪೀಟ ಪ್ರಶಸ್ತಿಗಳು ಬಂದಿದೆ? ಇದರ ಬದಲು, ನಮ್ಮಿಂದಲೇ ಇಂಗ್ಲೀಶಿ ನ ತುಳಿತಕ್ಕೆ ಸಿಕ್ಕಿ ನಲುಗಿರುವ ನಮ್ಮ ಮಾತ್ರು ಬಾಶೆ ಕನ್ನಡದ ಏಳಿಗೆಗೆ ಹಿರಿಯರಾಗಿದ್ದುಕ್ಕೊಂಡು ಕೆಲವು ಕನ್ನಡ ಪರ ಸಲಹೆಗಳನ್ನು ನೀವು ಕೊಡಬಹುದಿತ್ತಲ್ಲವೇ?
ನೆನಪಿರಲಿ, ನಮ್ಮದು ನೂರಾರು ವರ್‍ಶಗಳ ಪರಂಪರೆ, ಇತಿಹಾಸ ಹೊಂದಿರುವ ಬಾಶೆ. ಕಬ್ಬಿಣದ ಕಡಲೆಯಂತ್ತಿದ್ದ ನಮ್ಮ ಕನ್ನಡ ಬಾಶೆಯನ್ನು ಇಶ್ಟರ ಮಟ್ಟಿಗೆ ಹದಗೊಳಿಸಿ ಸುಂದರವಾಗಿಸಿದ್ದರಲ್ಲಿ ಬಹಳಶ್ಟು ಹಿರಿಯ ಮಹಾನ್ ವ್ಯಕ್ತಿಗಳ ಪರಿಶ್ರಮವಿದೆ. ಇದನ್ನು ನೆನಪಿನಲ್ಲಿಟ್ಟುಕ್ಕೊಂಡು ನಮ್ಮ ಬಾಶೆಯ ಅಬಿವ್ರುದ್ದಿಗೆ ಉತ್ತೇಜನ ನೀಡುವುದು ನಮ್ಮ ಅತಿಮುಕ್ಯ ಕರ್‍ತವ್ಯವಾಗಿದೆ. ಇದಕ್ಕೆ ಪರರ ಸಹಾಯಕ್ಕಿಂತ ನಮ್ಮ ಸ್ವಂತಿಕೆಯ ಅಗತ್ಯವಿದೆ ಅಲ್ಲವೇ?
(ಚಿತ್ರ ಸೆಲೆ: k5learning.com)
ಇತ್ತೀಚಿನ ಅನಿಸಿಕೆಗಳು