ಶಂಕರ ಬಟ್ಟರ ವಿಚಾರಗಳ ಬಗ್ಗೆ ನನ್ನ ಅನಿಸಿಕೆ

ರಗುನಂದನ್.

ನನ್ನ ನಿಲುವು

ನನ್ನ ಹೆಸರು ರಗುನಂದನ್. ನನ್ನ ಹುಟ್ಟೂರು ಮಯ್ಸೂರು. ನನ್ನ ಮೊದಲ ಕಲಿಕೆಯಿಂದ ಹಿಡಿದು ಬಿ.ಇ ವರೆಗೂ ಮಯ್ಸೂರಿನಲ್ಲಿಯೇ ಓದಿದ್ದು. ಕೆಲಸ ಮತ್ತು ಓದಿಗಾಗಿ ತೆಂಕಣ ಬಾರತದ ಎಲ್ಲಾ ರಾಜ್ಯಗಳಲ್ಲಿಯೂ ಇರುವ ಅವಕಾಶ ದೊರಕಿತ್ತು. ಅಲ್ಲಿದ್ದಾಗ ಹೊಸ ನುಡಿ ಮತ್ತು ಲಿಪಿಗಳ ಪರಿಚಯವಾಯಿತು ಮತ್ತು ಅದರ ಕುರಿತು ಹೆಚ್ಚು ತಿಳಿದುಕೊಳ್ಳುವ ಆಸಕ್ತಿ ಬೆಳೆಯಿತು. ಈಗ ನಾನು ಅಯ್.ಅಯ್.ಟಿ ಮದರಾಸಿನಲ್ಲಿ ಜಲ್ಲಿಯರಿಮೆ(ಮೆಟಲರ‍್ಜಿ)ಯ ವಿಶಯದಲ್ಲಿ ಪಿ.ಎಚ್.ಡಿ ಮಾಡುತ್ತಿದ್ದೇನೆ.

ನಾನು ಶಂಕರ ಬಟ್ಟರ ವಿಚಾರಗಳನ್ನು ಕಳೆದ ಎರಡು ಮೂರು ವರುಶಗಳಿಂದ ಗಮನಿಸುತ್ತಾ ಬಂದಿದ್ದೇನೆ. ’ಮಯೂರ’ ಮಾಸಿಕದಲ್ಲಿ ಅವರ ಒಂದು ಮಾತುಕತೆಯನ್ನು ಓದಿದ ಮೇಲೆ ಈ ವಿಶಯದಲ್ಲಿ ಹೆಚ್ಚು ಹುರುಪು ಬಂತು. ಬಳಿಕ ಪೇಸ್ಬುಕ್ಕಿನಲ್ಲಿ ಈ ಬಗೆಯ ಅನಿಸಿಕೆಯನ್ನೇ ಹೊಂದಿದ್ದ ಕೆಲವು ಕನ್ನಡದ ಗೆಳೆಯರ ಪರಿಚಯವಾಯಿತು. ಅವರ ಬೆಂಬಲದಿಂದ ನಾನು ಕೂಡ ಈ ವಿಶಯಗಳ ಕುರಿತು ತಿಳಿಯಲು ಶುರುಮಾಡಿದೆ ಮತ್ತು ’ತಾಯಿನಾಡುನುಡಿ’ ಎಂಬ ಬ್ಲಾಗನ್ನೂ ಬರೆಯುತ್ತಿದ್ದೆ. ಈಗ ’ಹೊನಲು’ ಮಿಂಬಾಗಿಲಿಗೆ ಅರಿಮೆ, ಆಟೋಟ ಕುರಿತಾದ ಬರಹಗಳನ್ನು ಬರೆಯುತ್ತೇನೆ.

ಶಂಕರ ಬಟ್ಟರ ವಿಚಾರಗಳು ಯಾಕೆ ಮುಕ್ಯ ಎಂದು ಅಯ್ದು ಕವಲುಗಳ ಮೂಲಕ ತಿಳಿದುಕೊಳ್ಳೋಣ.

ಲಿಪಿ ಸುದಾರಣೆ

ಇಂಡಿಯಾದ ಎಲ್ಲಾ ಮುಕ್ಯ ನುಡಿಗಳು ಬ್ರಾಹ್ಮಿ ಲಿಪಿಯಿಂದಲೇ ತನ್ನ ಬರಿಗೆಗಳನ್ನು ಪಡೆದುಕೊಂಡಿರುವುದು. ಹಾಗಾಗಿ ಎಲ್ಲಾ ನುಡಿಗಳ ನಡುವೆ ಅಕ್ಶರಮಾಲೆಯ ವಿಚಾರವಾಗಿ ಸಾಕಶ್ಟು ಹೋಲಿಕೆಯಿದೆ. ಆದರೆ ಬರಿಗೆಗಳ ದ್ರುಶ್ಟಿಯಿಂದಲೇ ಒಂದು ನುಡಿಯನ್ನು ನೋಡಲಾಗುವುದಿಲ್ಲ. ಲಿಪಿಯಿಲ್ಲದ ಬಾಶೆಗಳು ಅದೆಶ್ಟೋ ಇವೆ. ಅಕ್ಶರಮಾಲೆಯ ಏರ‍್ಪಾಡಿನಲ್ಲಿ ಹೋಲಿಕೆಯಿದ್ದರೂ ಕೂಡ ಎಲ್ಲಾ ನುಡಿಗಳು ಒಂದೇ ಮೂಲದಿಂದ ಬಂದಿವೆ ಎಂದು ಹೇಳಲು ಬರುವುದಿಲ್ಲ. ಬಾರತದಲ್ಲಿಯೇ ಮೂರ‍್ನಾಲ್ಕು ನುಡಿ-ಗುಂಪುಗಳಿದ್ದು ಅದರಲ್ಲಿ ದ್ರಾವಿಡ ಮತ್ತು ಇಂಡೋ-ಆರ‍್ಯ ನುಡಿ-ಗುಂಪುಗಳು ಹೆಚ್ಚು ಆಡುಗರನ್ನು ಹೊಂದಿದೆ.

ಕಳೆದ ನೂರಯ್ವತ್ತು ವರುಶಗಳಿಂದ ನಡೆದ ಅರಕೆಗಳ ನೆಲೆಯಿಂದ ಕನ್ನಡ ಮತ್ತು ಬೇರೆ ತೆಂಕಣ ಬಾರತದ ನುಡಿಗಳು ದ್ರಾವಿಡ ನುಡಿ-ಗುಂಪಿಗೆ ಸೇರುತ್ತದೆ ಎಂದು ನುಡಿಯರಿಗರು ತೋರಿಸಿದ್ದಾರೆ. ಈ ಗುಂಪಿನ ನುಡಿಗಳಲ್ಲಿ ಮಹಾಪ್ರಾಣಗಳು ಇಲ್ಲದಿರುವುದು ವಿಶೇಶ. ಅಚ್ಚಕನ್ನಡ ಪದಗಳಲ್ಲಿ ಮಹಾಪ್ರಾಣ ಇಲ್ಲದಿರುವುದು ಇಲ್ಲಿ ನೆನೆಯಬೇಕಾದ ವಿಚಾರ. ಮಂದಿ ಮಾತಾನಾಡುವಾಗಲೂ ಕೂಡ ಈ ಮಹಾಪ್ರಾಣಗಳನ್ನು ಉಲಿಯುವುದಿಲ್ಲ, ಸರಿಯಾಗಿ ಗಮನಿಸಿದರೆ ತಿಳಿಯಬಹುದು. ಈ ಮಾತಿನ ಏರ‍್ಪಾಟನ್ನು ಬರಹಕ್ಕೂ ಇಳಿಸಿದರೆ ಬರಿಗೆಗಳ ಕಲಿಯುವಿಕೆ-ಕಲಿಸುವಿಕೆ ಸರಳವಾಗುತ್ತದೆ.

ಈಗ ಕನ್ನಡದಲ್ಲಿ ಬರಹ ಕಲಿತವರ ಎಣಿಕೆ ನೂರಕ್ಕೆ 75. ಇಪ್ಪತ್ತು ವರುಶಗಳ ಹಿಂದೆ ಅದು 50 ಆಗಿತ್ತು. ಹಾಗೆ ಹಿಂದೆ ಹಿಂದೆ ಹೋದಶ್ಟು ಬರಹ ಬಲ್ಲವರ ಎಣಿಕೆ ಕಡಿಮೆಯೇ ಆಗಿತ್ತು ಎಂದು ತಿಳಿಯಬಹುದು. ಅರಸರ ಕಾಲದಲ್ಲಿ ಕೂಡಣದಲ್ಲಿ ಇದ್ದ ಕುಲಕಸುಬಿನ ಏರ‍್ಪಾಟಿನ ಸಲುವಾಗಿ ಹೆಚ್ಚಾಗಿ ಬ್ರಾಹ್ಮಣರು ಮತ್ತು ಅರಸನ ಮನೆಯವರು ಓದು-ಬರಹ ಕಲಿಯುತ್ತಿದ್ದರು. ಹಾಗಾಗಿ ಅಯ್ತಿಹಾಸಿಕವಾಗಿ ನುಡಿ ಎಂಬುದು ಹೆಚ್ಚಾಗಿ ಮಾತು ಎಂಬುದನ್ನೇ ನಾವು ಅರಿತುಕೊಳ್ಳಬೇಕು.

ಸ್ಪೆಲ್ಲಿಂಗ್ ತಪ್ಪುಗಳು

ಅಯ್ತಿಹಾಸಿಕ ಕಾರಣಗಳು ಏನೇ ಇರಲಿ, ಅದು ಈಗ ಯಾಕೆ ಬೇಕು ಎಂಬುದು ಮುಕ್ಯವಾದ ವಿಚಾರ. ಮಹಾಪ್ರಾಣವಿರುವ ಪದಗಳು ಹೆಚ್ಚಾಗಿ ಸಂಸ್ಕ್ರುತ, ಪಾರ‍್ಸಿ, ಅರೇಬಿಕ್ ನುಡಿಯಿಂದ ಪಡೆದ ಎರವಲು ಪದಗಳಲ್ಲಿ ಹೆಚ್ಚು ಕಾಣಸಿಗುತ್ತವೆ. ಯಾಕೆಂದರೆ ಮುಂಚೆ ಹೇಳಿದಂತೆ ಅಚ್ಚಕನ್ನಡದಲ್ಲಿ ಮಹಾಪ್ರಾಣಗಳು ಇಲ್ಲ. ಮಕ್ಕಳಿಗೆ ಅತವಾ ಮಂದಿಗೆ ಎಲ್ಲಿ ಅಲ್ಪಪ್ರಾಣ ಬಳಸಬೇಕು ಎಲ್ಲಿ ಮಹಾಪ್ರಾಣ ಬಳಸಬೇಕು ಎಂಬುದು ಗೊಂದಲವಾಗಿರುತ್ತದೆ. ಹಾಗಾಗಿ ಕನ್ನಡದಲ್ಲಿ ಸ್ಪೆಲ್ಲಿಂಗ್ ತಪ್ಪುಗಳು ಹೆಚ್ಚಿನವು ಈ ಅಲ್ಪಪ್ರಾಣ-ಮಹಾಪ್ರಾಣ ಗೊಂದಲದಿಂದ ಉಂಟಾದವು.

ಇದು ’ಶ’ ಮತ್ತು ’ಷ’ ಬರಿಗೆಗಳ ಅದಲು-ಬದಲು ಮಾಡುವಿಕೆಗೂ ಅನ್ವಯಿಸುತ್ತದೆ. ಮಹಾಪ್ರಾಣಗಳನ್ನು ಬಳಸದಿದ್ದರೆ ಈ ’ಸ್ಪೆಲ್ಲಿಂಗ್ ತಪ್ಪು” ಗಳನ್ನು ಕಡಿಮೆ ಮಾಡಬಹುದು. ಉಚ್ಚರಿಸಿದಂತೆ ಬರೆದರೆ ಈ ತಪ್ಪುಗಳು ಕಡಿಮೆಯಾಗುತ್ತಾ ಹೋಗುತ್ತದೆ.

ಉಲಿದಂತೆ ಬರೆಯೋಣ

ಸ್ಪೆಲ್ಲಿಂಗ್ ತಪ್ಪಾದರೆ ಅದು ಬಾಶೆಯ ತಪ್ಪಲ್ಲ ಕಲಿಸಿಕೊಟ್ಟವರ ಮತ್ತು ಕಲಿತುಕೊಂಡವರ ತಪ್ಪು ಎಂಬುದು ಕೆಲವರ ವಾದ. ಅದು ಹಾಗಲ್ಲ. ಮನುಶ್ಯನ ಮಿದುಳಿನಲ್ಲಿ ಒಂದು ಬಾಗ ಗೆರೆಗಳು, ಚಿತ್ರಗಳು ಮತ್ತು ರೂಪಗಳನ್ನು ಹೆಚ್ಚಾಗಿ ಗುರುತಿಸಿ ನೆನಪಿನಲ್ಲಿಟ್ಟುಕೊಳ್ಳುತ್ತದೆ. ಇನ್ನೊಂದು ಬಾಗ ಅರ‍್ತ, ಕಾರಣ ಮತ್ತು ದೂಸರು ಮುಂತಾದವುಗಳನ್ನು ಹೆಚ್ಚಾಗಿ ಗುರುತಿಸುತ್ತದೆ. ಒಂದು ಪದದಲ್ಲಿ ಅಲ್ಪಪ್ರಾಣ ಬಳಸಬೇಕೋ ಇಲ್ಲವೇ ಮಹಾಪ್ರಾಣ ಬಳಸಬೇಕೋ ಎಂಬ ಗೊಂದಲ ಉಂಟಾದಾಗ ಮಗುವು ಆ ಪದದ ಬರಿಗೆಗಳನ್ನು ’ಚಿತ್ರ/ಆಕಾರ’ವಾಗಿ ನೆನಪಿನಲ್ಲಿಟ್ಟುಕೊಳ್ಳುವುದಕ್ಕೆ ಪ್ರಯತ್ನಿಸುತ್ತದೆ. ಆಗ ಆ ಪದದ ಅರ‍್ತವನ್ನು ತಿಳಿಯಲು ಹೋಗದೆ ಅದರ ಸ್ಪೆಲ್ಲಿಂಗ್ ಬಗ್ಗೆ ಹೆಚ್ಚು ಗಮನ ಕೊಡಲು ಆರಂಬಿಸುತ್ತದೆ. ಇದು ಹೆಚ್ಚು ಪದಗಳಿಗೆ ಮಾಡಬೇಕಾದಾಗ ಮಕ್ಕಳು ಗಟ್ಟು ಹೊಡೆಯುವ ಕೆಟ್ಟ ಚಾಳಿಯನ್ನು ಬೆಳೆಸಿಕೊಳ್ಳುತ್ತಾರೆ. ಮಕ್ಕಳಿಗೆ ತಮ್ಮ ತಾಯ್ನುಡಿಯೇ ಸರಿಯಾಗಿ ಬರೆಯಲು ಬರುವುದಿಲ್ಲ ಎಂಬ ಕೀಳರಿಮೆ ಬಂದರೆ ಅವರು ಆ ನುಡಿಯನ್ನು ಹೆಚ್ಚು ಹೆಚ್ಚು ಬಳಸುವುದಕ್ಕೆ ಹಿಂಜರಿಯುತ್ತಾರೆ. ಅಚ್ಚಕನ್ನಡದ್ದೇ ಆದ ಪದಗಳನ್ನು ಬಳಸಿದರೆ ಈ ತೊಂದರೆ ಕಡಿಮೆ.

ಕನ್ನಡದ್ದೇ ಪದಗಳು

ಮಹಾಪ್ರಾಣಗಳನ್ನು ತೆಗೆದುಹಾಕಿದರೆ ಒಂದೇ ಪದಕ್ಕೆ ಬೇರೆ ಬೇರೆ ಅರ‍್ತಗಳು ಬರುವ ಸಾದ್ಯತೆ ಇದೆ ಎಂಬುದು ಕೆಲವರ ಅನಿಸಿಕೆ. ಎತ್ತುಗೆ – ’ಧನ’ ಮತ್ತು ’ದನ’. ನಾವು ಪದಗಳನ್ನು ಬಳಸುವಾಗ ಅದನ್ನು ಆ ಸನ್ನಿವೇಶಕ್ಕೆ ತಕ್ಕುದಾಗಿ ಬಳಸಿರುತ್ತೇವೆ. ಹಾಗಾಗಿ ಈ ಬಗೆಯ ತೊಂದರೆಗಳು ತುಂಬಾ ಕಡಿಮೆ. ಅದಕ್ಕಿಂತ ಹೆಚ್ಚಾಗಿ ಅಚ್ಚಕನ್ನಡದಲ್ಲಿಯೇ ಈ ಬಗೆಯ ಪದಗಳಿವೆ. ’ಕರಿ’ ಎಂದರೆ ’ಕೂಗು’, ’ಕಪ್ಪು’ ಮತ್ತು ’ಎಣ್ಣೆಯಲ್ಲಿ ಕರಿ’ ಎಂಬ ಮೂರು ಬೇರೆ ಬೇರೆ ಹುರುಳುಗಳು ಬರುತ್ತವೆ. ಆದರೆ ಅದನ್ನು ನಾವು ಬಳಸುವಾಗ ಎಂದಿಗೂ ಗೊಂದಲ ಆಗಿಲ್ಲ ಅಲ್ಲವೇ?

ಕನ್ನಡದಲ್ಲಿ ’ಱ’ ಮತ್ತು ’ೞ’ ಎಂಬ ಬರಿಗೆಗಳು ಬಿಟ್ಟು ಹೋದ ಮೇಲೆ ಒಂದೇ ಸ್ಪೆಲ್ಲಿಂಗ್ ಇದ್ದು ಬೇರೆ ಬೇರೆ ಹುರುಳು ಕೊಡುವ ಸಾಕಶ್ಟು ಪದಗಳಿವೆ. ಆದರೆ ಕನ್ನಡಿಗರಿಗೆ ಅದನ್ನು ಬಳಸುವಾಗ ಎಂದಿಗೂ ತೊಂದರೆಯಾಗಿಲ್ಲ. ಇದಕ್ಕಿಂತ ಹೆಚ್ಚಾಗಿ ತಪ್ಪು ಎನಿಸುವ ಮಹಾಪ್ರಾಣ-ಅಲ್ಪಪ್ರಾಣಗಳನ್ನು ಬಳಸುವ ಬದಲು ಅಚ್ಚಕನ್ನಡದ್ದೇ ಪದಗಳನ್ನು ಬಳಸಿದರೆ ಈ ಗೊಂದಲಗಳು ಇಲ್ಲವಾಗುತ್ತವೆ. ಎತ್ತುಗೆಗೆ ಧನ ಎಂಬ ಪದದ ಬದಲು ಹಣ, ದುಡ್ಡು, ರೊಕ್ಕ ಎಂಬ ಪದಗಳನ್ನು ಬಳಸಬಹುದು. ಹಾರ‍್ದಿಕ ಎಂಬ ಪದವನ್ನು ಹಾರ್ಧಿಕ ಎಂದು ಬರೆಯುವ ಬದಲು ನಲುಮೆಯ ಎಂಬ ಕನ್ನಡದ್ದೇ ಪದ ಬಳಸಬಹುದು. ಹಾಗಾದರೆ ಸಂಸ್ಕ್ರುತ ಎಶ್ಟು ಬೇಕು ಎಶ್ಟು ಬೇಡ ?

ಕನ್ನಡದ್ದೇ ಸೊಲ್ಲರಿಮೆ

ಆದಶ್ಟೂ ಕನ್ನಡದ್ದೇ ಪದಗಳನ್ನು ಬಳಸಿದರೆ ಒಳಿತು. ಒಂದು ಬರಹದಲ್ಲಿ ನೂರಕ್ಕೆ 85ರಿಂದ 90ರಶ್ಟು ಪದಗಳು ಕನ್ನಡದ್ದೇ ಆಗಿರಲಿ. ಹೊಸ ಪದಗಳನ್ನು ಕಟ್ಟುವುದಾದರೂ ಹೇಗೆ? ಇಂದಿನ ಕನ್ನಡದ ಸೊಲ್ಲರಿಮೆಯಲ್ಲಿ ಬೇಡದ ವಿಶಯಗಳನ್ನು ಮಕ್ಕಳಿಗೆ ಕಲಿಸಲಾಗುತ್ತಿದೆ. ಸೇರಿಕೆ ಕಟ್ಟಲೆಗಳಲ್ಲಿ ಕನ್ನಡ ಮತ್ತು ಸಂಸ್ಕ್ರುತದ ನಡುವೆ ಇರುವ ವ್ಯತ್ಯಾಸಗಳನ್ನು ಮಕ್ಕಳಿಗೆ ಹೇಳಿಕೊಡುವುದು. ತೊಡಕಾದ ಸಂಸ್ಕ್ರುತ ಸೇರಿಕೆ ಕಟ್ಟಲೆಗಳನ್ನು ಕಲಿಸಿಕೊಡುವುದಕ್ಕೆ ಹೆಚ್ಚು ಬಳಸದ ಸಂಸ್ಕ್ರುತ ಪದಗಳನ್ನು ಎತ್ತುಗೆಗಳಾಗಿ ತೆಗೆದುಕೊಳ್ಳಲಾಗುತ್ತದೆ. ಇವು ಉಲಿಯಲು ಕಶ್ಟವಾದ ಕಾರಣ ಮಕ್ಕಳು ಗಟ್ಟು ಹೊಡೆಯಲು ಶುರುಮಾಡುತ್ತಾರೆ.

ಕನ್ನಡಕ್ಕೆ ಎಶ್ಟು ಬೇಕೋ ಅಶ್ಟು ಹೇಳಿಕೊಟ್ಟು ಮಕ್ಕಳಿಗೆ ಕನ್ನಡದ್ದೇ ಆದ ಪದಗಳಿಂದ ಪದಕಟ್ಟಣೆಯನ್ನು ಮಾಡುವ ಕಲೆ ಬೆಳೆಸಬೇಕು. ಆಗ ತಮಗೆ ಇಶ್ಟವಿರುವ ವಿಶಯಗಳಲ್ಲಿ ಮುಂದೆ ಅವರು ಹೊಸಹೊಸ ಕನ್ನಡ ಪದಗಳನ್ನು ಕಟ್ಟಲು ಮುಂದಾಗುತ್ತಾರೆ. ಹೀಗೆ ತಾನೇ ನುಡಿ ಬೆಳೆಯುವುದು. ಹೆಚ್ಚು ಹೆಚ್ಚು ಎರವಲು ಪಡೆಯುವುದರಿಂದ ಮಕ್ಕಳಿಗೆ ಪದಕಟ್ಟಣೆಯ ಕಯ್ಗಾರಿಕೆ ಇಲ್ಲವಾದಂತಾಗುತ್ತದೆ.

ಅಳಕುಗಳು

ಕೆಲವರಿಗೆ ಈ ಎಲ್ಲರಕನ್ನಡ ಮತ್ತು ಹೊಸಬರಹದ ಕುರಿತಾಗಿ ಅಳಕುಗಳಿವೆ. ಇದು ಸಂಸ್ಕ್ರುತ ದ್ವೇಶಿಗಳ ಹುನ್ನಾರ, ಇದರಿಂದ ಕನ್ನಡ ನುಡಿ ಬಡವಾಗುತ್ತದೆ, ಇದು ತಮಿಳಿನ ಅನುಕರಣೆ ಎಂದೆಲ್ಲಾ ಕೆಲವರು ಹೇಳುವುದುಂಟು. ಯಾವುದೇ ನುಡಿಯು ತನ್ನಲ್ಲಿರುವ ಬರಿಗೆಗಳ ಎಣಿಕೆಗಳಿಂದ ಬಡವಾದ ನುಡಿ ಎಂದು ಅನಿಸಿಕೊಳ್ಳುವುದಿಲ್ಲ. ಬಡ ನುಡಿ ಎಂದೇ ಯಾವುದೂ ಇಲ್ಲ. ಎಲ್ಲ ನುಡಿಗಳಿಗೂ ಅದರದೇ ಆದ ಸೊಗಡು ಇದ್ದೇ ಇರುತ್ತದೆ. ಇಂಗ್ಲಿಶಿನಲ್ಲಿ ಬರಿಯ ಇಪ್ಪತ್ತಾರು ಬರಿಗೆಗಳಿದ್ದರೂ ಅದೇನು ಬಡ-ನುಡಿಯಾಗಿಲ್ಲ.

ಸಂಸ್ಕ್ರುತ ಪದಗಳು ಬೇಡವೇ ಬೇಡ ಎಂಬುದು ಈ ಚಳುವಳಿಯ ನಿಲುವಲ್ಲ. ಕೆಲವೊಂದು ಕಡೆ ಸಂಸ್ಕ್ರುತ ಪದಗಳ ಬಳಕೆ ಆಗಲೇ ಬೇಕಾಗಬಹುದು. ಹಾಗಾಗಿ ಸಂಸ್ಕ್ರುತ ಪದಗಳೂ ಇರಲಿ. ಅದಕ್ಕೆ ಒಂದು ಅಂಕೆಯಿರಲಿ ಅಶ್ಟೆ. ಹಾಗೆ ನೋಡಿದರೆ ಸಂಸ್ಕ್ರುತದ ಪದ ಬೇಡವೆನ್ನುವುದಾದರೆ ಹೊಸಬರಹ ಬೇಕಾಗುವುದೇ ಇಲ್ಲ, ಅಲ್ಲವೇ?

ತಮಿಳಿನ ಏರ‍್ಪಾಟಿಗೂ ಕನ್ನಡದ ಹೊಸಬರಹಕ್ಕೂ ಸಾಕಶ್ಟು ವ್ಯತ್ಯಾಸಗಳಿವೆ. ತಮಿಳಿನಲ್ಲಿ ಕ-ಗ, ಚ-ಜ, ತ-ದ, ಟ-ಡ, ಪ-ಬ ಒಂದೇ ಬರಿಗೆಯಿಂದ ಗುರುತಿಸಲ್ಪಡುತ್ತದೆ. ಆದರೆ ಕನ್ನಡದಲ್ಲಿ ಅದು ಬೇರೆಯಾಗಿಯೇ ಉಳಿಯುತ್ತದೆ. ತಮಿಳಿನಲ್ಲಿ ಹೆಚ್ಚಿನ ಮೂಗುಲಿಗಳು ಬಳಕೆಯಾಗುತ್ತದೆ(ಞ ಮತ್ತು ಙ). ಆದರೆ ಕನ್ನಡದಲ್ಲಿ ಅವುಗಳು ಇರುವುದಿಲ್ಲ. ಮುಂಚಿನಂತೆಯೇ ಈ ಎರಡು ಮೂಗುಲಿಗಳ ಬದಲು ’ಂ’ (ಅನುಸ್ವಾರ) ಎಂಬ ಗುರುತೇ ಬಳಸಲಾಗುತ್ತದೆ. ತಮಿಳಿನಲ್ಲಿ ಒತ್ತಕ್ಕರಗಳು ಬರಿಗೆಯ ಪಕ್ಕದಲ್ಲಿ ಬರೆಯಲಾಗುತ್ತದೆ. ಆದರೆ ಕನ್ನಡದಲ್ಲಿ ಅದು ಹಾಗೆಯೇ ಉಳಿಯುತ್ತದೆ. ಹಾಗಾಗಿ ತಮಿಳಿನ ಲಿಪಿ ಏರ‍್ಪಾಟಿಗೂ ಮತ್ತು ಹೊಸಬರಹಕ್ಕೂ ತುಂಬಾ ವ್ಯತ್ಯಾಸಗಳಿವೆ.

ಎಲ್ಲರಕನ್ನಡ ಮತ್ತು ಹೊಸಬರಹದಿಂದ ಕನ್ನಡಕ್ಕೆ ಸಾಕಶ್ಟು ಒಳಿತಾಗುತ್ತದೆ ಎಂಬುದು ನನ್ನ ಗಟ್ಟಿಯಾದ ಅನಿಸಿಕೆ. ಕಲಿಕೆ ಸುಳುವಾದಶ್ಟೂ ಸಾಕ್ಶರತೆ ಹೆಚ್ಚುತ್ತದೆ. ಮತ್ತು ಹೆಚ್ಚು ಕನ್ನಡ ಪದಗಳ ಬಳಕೆಯಿಂದ ಮಕ್ಕಳಿಗೆ ಕನ್ನಡದ ಅಳವಿನ ಮೇಲೆ ನಂಬಿಕೆ ಹೆಚ್ಚುತ್ತದೆ. ಅದು ಉನ್ನತ ಕಲಿಕೆಗೂ ಮುಂದುವರಿದರೆ ಕನ್ನಡವು ಜಗತ್ತಿನ ಯಾವುದೇ ನುಡಿಗೆ ಕಡಿಮೆ ಇಲ್ಲದಂತೆ ತನ್ನ ಹರವನ್ನು ಹೆಚ್ಚಿಸಿಕೊಳ್ಳಬಹುದು. ಎಲ್ಲಕ್ಕಿಂತ ಹೆಚ್ಚಾಗಿ ಸಾವಿರಾರು ವರುಶಗಳಿಂದ ಓದು-ಬರಹದಿಂದ ವಂಚಿತರಾದ ಕೆಳವರ‍್ಗದ ಮಕ್ಕಳಿಗೆ ಅರಿಮೆ-ಕಲಿಕೆಯ ಗಟ್ಟಿ ಅಡಿಪಾಯದ ಮೂಲಕ ಏಳಿಗೆ ಕಾಣುವಂತೆ ಆಗಬೇಕು ಎಂಬುದು ನನ್ನ ಹೆಬ್ಬಯಕೆ. ಯಾವ ಏರ‍್ಪಾಡು ಅರಿಮೆಯಿಂದ ಕೂಡಿರುತ್ತದೋ ಮತ್ತು ಮಂದಿಯಾಳ್ವಿಕೆಯನ್ನು ಗಣನೆಗೆ ತೆಗೆದುಕೊಳ್ಳುತ್ತದೋ ಅದು ಹೆಚ್ಚಿನ ಕಾಲ ಗಟ್ಟಿಯಾಗಿ ನೆಲೆ ನಿಲ್ಲುತ್ತದೆ.

(ಚಿತ್ರ ಸೆಲೆ: hiroboga.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: