ಬರಹದಲ್ಲಿ ಯಾವುದು ಸರಿ, ಯಾವುದು ತಪ್ಪು?
ನುಡಿಯರಿಮೆಯ ಇಣುಕುನೋಟ – 20
ಕನ್ನಡದಲ್ಲಿ ಬಳಕೆಯಾಗುವ ಪದಗಳು ಮತ್ತು ಪದರೂಪಗಳು ಸರಿಯೋ ತಪ್ಪೋ ಎಂಬುದನ್ನು ತೀರ‍್ಮಾನಿಸುವಲ್ಲಿ ನಾವು ಯಾವ ಕಟ್ಟಲೆಗಳನ್ನು ಬಳಸಬೇಕು? ಕನ್ನಡದ ಕಟ್ಟಲೆಗಳನ್ನೇ ಬಳಸಬೇಕೆಂದು ಯಾರೂ ಹೇಳಬಹುದು. ಆದರೆ, ಇವತ್ತು ಹಲವು ಮಂದಿ ಕನ್ನಡದ ವಿದ್ವಾಂಸರಿಗೆ ಇದು ಒಪ್ಪಿಗೆಯಾಗುವುದಿಲ್ಲ. ಸಂಸ್ಕ್ರುತದಿಂದ ಎರವಲಾಗಿ ಪಡೆದ ಪದಗಳನ್ನು ಕನ್ನಡದಲ್ಲಿ ಬಳಸುವಾಗ ಸಂಸ್ಕ್ರುತದ ಕಟ್ಟಲೆಗಳನ್ನೇ ತಪ್ಪದೆ ಬಳಸಬೇಕೆಂಬುದಾಗಿ ಅವರು ಹೇಳುತ್ತಾರೆ. ಕನ್ನಡದ ವಿದ್ವಾಂಸರಲ್ಲಿ ಹಿಂದಿನ ಕಾಲದಿಂದಲೂ ಬೆಳೆದುಬಂದಿರುವ ಕನ್ನಡದ ಕುರಿತಾಗಿರುವ ಕೀಳರಿಮೆ ಮತ್ತು ಸಂಸ್ಕ್ರುತದ ಕುರಿತಾಗಿರುವ ಅತಿಯಾದ ಆದರ ಮತ್ತು ಅಬಿಮಾನಗಳೇ ಇದಕ್ಕೆ ಕಾರಣ.
ಎತ್ತುಗೆಗಾಗಿ, ಸೊಲ್ಲರಿಗರನ್ನು ಸೂಚಿಸಲು ಸಂಸ್ಕ್ರುತದಲ್ಲಿ ಎರಡು ಪದಗಳಿವೆ. ಇವುಗಳಲ್ಲಿ ‘ವಯ್ಯಾಕರಣಃ’ ಎಂಬುದು ಗಂಡಸರನ್ನು ಸೂಚಿಸುತ್ತದೆ ಮತ್ತು ‘ವಯ್ಯಾಕರಣೀ’ ಎಂಬುದು ಹೆಂಗಸರನ್ನು ಸೂಚಿಸುತ್ತದೆ. ಆದರೆ, ಕನ್ನಡದಲ್ಲಿ ಗಂಡಸರನ್ನು ಸೂಚಿಸುವುದಕ್ಕಾಗಿಯೂ ‘ವಯ್ಯಾಕರಣಿ’ ಎಂಬ ಪದವೇ ಬಳಕೆಗೆ ಬಂದಿದೆ. ಇದನ್ನು ಕಿಟ್ಟೆಲ್ ಅವರ ಡಿಕ್ಶನರಿಯಲ್ಲಿ ನೋಡಬಹುದು. ಆದರೆ ಇದು ತಪ್ಪು, ಗಂಡಸರನ್ನು ಸೂಚಿಸಲು ‘ವಯ್ಯಾಕರಣ’ ಎಂಬುದನ್ನೇ ಬಳಸಬೇಕು ಎಂಬುದಾಗಿ ಕೆಲವರು ಕನ್ನಡದ ವಿದ್ವಾಂಸರು ವಾದಿಸುತ್ತಾರೆ.
ಇದಕ್ಕೆ ಅವರಿಗೆ ಸಂಸ್ಕ್ರುತ ವ್ಯಾಕರಣದ ಕಟ್ಟಲೆಯೇ ಆದಾರ. ಆದರೆ ನಿಜಕ್ಕೂ ಇದು ಸರಿಯಲ್ಲ. ಯಾಕೆಂದರೆ, ಯಾವ ನುಡಿಯಿಂದಲೇ ಆಗಲಿ ಒಂದು ಪದವನ್ನು ಎರವಲಾಗಿ ಪಡೆದ ಮೇಲೆ, ಅದನ್ನು ಯಾವ ರೀತಿಯಲ್ಲಿ ಮತ್ತು ಯಾವ ರೂಪದಲ್ಲಿ ಬಳಸಬೇಕು ಎಂಬುದಕ್ಕೆ ಎರವಲಾಗಿ ಪಡೆದ ನುಡಿಯಲ್ಲಿರುವ ಬಳಕೆಯ ಕಟ್ಟಲೆಗಳೇ ಆದಾರವಾಗಬೇಕಲ್ಲದೆ ಎರವಲು ಕೊಟ್ಟ ನುಡಿಯ ಕಟ್ಟಲೆಗಳಲ್ಲ.
ಎತ್ತುಗೆಗಾಗಿ, ಸಂಸ್ಕ್ರುತದಿಂದ ಹಲವು ನಾಮಪದಗಳನ್ನು ನಾವು ಕನ್ನಡಕ್ಕೆ ಎರವಲಾಗಿ ಪಡೆದು ಬಳಸುತ್ತೇವೆ. ಇವುಗಳಲ್ಲಿ ಕೆಲವಕ್ಕೆ ಇಸು ಒಟ್ಟನ್ನು ಸೇರಿಸಿ ಕ್ರಿಯಾಪದಗಳಾಗಿ ಮಾಡಿಯೂ ಬಳಸುತ್ತೇವೆ (ಜಪ-ಜಪಿಸು, ಕೋಪ-ಕೋಪಿಸು, ರುಚಿ-ರುಚಿಸು). ಆದರೆ, ಈ ಬಳಕೆಗೆ ಕನ್ನಡದ ಕಟ್ಟಲೆಗಳು ಆದಾರವಲ್ಲದೆ ಸಂಸ್ಕ್ರುತದ ಕಟ್ಟಲೆಗಳಲ್ಲ.
ಸಂಸ್ಕ್ರುತದಿಂದ ಎರವಲಾಗಿ ಪಡೆದ ಪದಗಳ ಲಿಂಗವನ್ನು ನಿರ‍್ದರಿಸುವಲ್ಲೂ ನಾವು ಕನ್ನಡದ ಕಟ್ಟಲೆಗಳನ್ನು ಬಳಸುತ್ತೇವಲ್ಲದೆ ಸಂಸ್ಕ್ರುತದ ಕಟ್ಟಲೆಗಳನ್ನಲ್ಲ. ಎತ್ತುಗೆಗಾಗಿ, ಸಂಸ್ಕ್ರುತದಲ್ಲಿ ಪುಲ್ಲಿಂಗದಲ್ಲಿರುವ ದೇಶ, ಮಾರ‍್ಗ, ದೀಪ ಮೊದಲಾದ ಪದಗಳನ್ನು, ಮತ್ತು ಸ್ತ್ರೀಲಿಂಗದಲ್ಲಿರುವ ನದಿ, ಲಿಪಿ, ಚರ‍್ಚೆ ಮೊದಲಾದ ಪದಗಳನ್ನು ನಾವು ನಪುಂಸಕ ಲಿಂಗದಲ್ಲಿ ಬಳಸುತ್ತೇವಲ್ಲದೆ ಪುಲ್ಲಿಂಗ ಇಲ್ಲವೇ ಸ್ತ್ರೀಲಿಂಗದಲ್ಲಲ್ಲ. ಸಂಸ್ಕ್ರುತದಲ್ಲಿ ನಾಮಪದಗಳಿಂದ ಬೇರಾದ ಗುಣಪದಗಳೆಂಬ ಪದಗಳಿಲ್ಲ.
ಹೀಗಿದ್ದರೂ, ಸಂಸ್ಕ್ರುತದಿಂದ ಎರವಲಾಗಿ ಪಡೆದ ಪದಗಳಲ್ಲಿ ವ್ಯಾವಹಾರಿಕ, ಸಾಮಾಜಿಕ, ಯಾಂತ್ರಿಕ ಮೊದಲಾದ ಹಲವು ಪದಗಳನ್ನು ನಾವು ನಾಮಪದಗಳಿಂದ ಬೇರಾಗಿರುವ ಗುಣಪದಗಳಾಗಿ ಬಳಸುತ್ತೇವೆ. ಹಾಗಾಗಿ, ವಯ್ಯಾಕರಣಿಯಂತಹ ಪದಗಳ ಮಟ್ಟಿಗೂ ನಾವು ಇದೇ ಕ್ರಮವನ್ನು ಅನುಸರಿಸುವುದು ಸರಿಯಾದ ದಾರಿ. ಕನ್ನಡದಲ್ಲಿ ಅವು ಯಾವ ರೀತಿಯಲ್ಲಿ ಬಳಕೆಗೆ ಬಂದಿವೆ ಎಂಬುದು ನಮಗೆ ಮುಕ್ಯವಲ್ಲದೆ ಆ ಬಳಕೆ ಸಂಸ್ಕ್ರುತದ ನಿಯಮಗಳಿಗೆ ಅನುಸಾರವಾಗಿದೆಯೇ ಇಲ್ಲವೇ ಎಂಬುದು ಮುಕ್ಯವಲ್ಲ.
ಸಂಸ್ಕ್ರುತದಿಂದ ಎರವಲಾಗಿ ಪಡೆದ ಪದಗಳಲ್ಲಿ ಬರುವ ಮಹಾಪ್ರಾಣ, ಷಕಾರ, ಋಕಾರ ಮೊದಲಾದ ಕೆಲವು ಬರಿಗೆಗಳು ಹೆಚ್ಚಿನ ಕನ್ನಡಿಗರ ಓದಿನಲ್ಲಿ ಇಲ್ಲವೇ ಮಾತಿನಲ್ಲಿ ಕಾಣಿಸುವುದಿಲ್ಲ; ಹಾಗಿದ್ದರೂ ‘ಅವನ್ನು ಸಂಸ್ಕ್ರುತದಲ್ಲಿರುವ ಹಾಗೆಯೇ ಬರೆಯಬೇಕು; ಇಲ್ಲವಾದರೆ ಅದು ತಪ್ಪಾಗುತ್ತದೆ’ ಎಂದು ಹೇಳುವುದೂ ಸಂಸ್ಕ್ರುತದ ಕಟ್ಟಲೆಗಳನ್ನು ಕನ್ನಡದ ಮೇಲೆ ಹೊರಿಸುವ ತಪ್ಪು ದಾರಿಯಾಗಿದೆ. ಹೆಚ್ಚಿನ ಕನ್ನಡಿಗರ ಓದಿನಲ್ಲಿ ಇಲ್ಲವೇ ಮಾತಿನಲ್ಲಿ ಈ ಎರವಲು ಪದಗಳು ಹೇಗೆ ಕಾಣಿಸುತ್ತವೆಯೋ ಹಾಗೆ ಬರೆಯುವುದೇ ಕನ್ನಡದ ಮಟ್ಟಿಗೆ ಸರಿಯಾದ ದಾರಿ.
ಇನ್ನೊಂದು ಬಗೆಯ ‘ತಪ್ಪು’ಗಳು ಆಡುನುಡಿಯಿಂದ ಪದಗಳನ್ನು ಇಲ್ಲವೇ ಪದರೂಪಗಳನ್ನು ಬರಹಕ್ಕೆ ತಂದು ಬಳಸುವಲ್ಲಿ ಕಾಣಿಸಿಕೊಳ್ಳುತ್ತವೆ. ಆಡುನುಡಿಯೆಂಬುದು ಊರಿನಿಂದ ಊರಿಗೆ ಮತ್ತು ಜಾತಿಯಿಂದ ಜಾತಿಗೆ ಬೇರೆ ಬೇರಾಗಿರುತ್ತದೆ. ಆದರೆ, ಬರಹದ ನುಡಿ ಎಲ್ಲಾ ಊರು ಮತ್ತು ಜಾತಿಗಳಿಗೂ ಸಮಾನವಾಗಿರಬೇಕೆಂದು ನಾವು ಬಯಸುತ್ತೇವೆ. ಯಾಕೆಂದರೆ, ಹಾಗಿಲ್ಲವಾದರೆ ಒಂದು ಊರಿನ ಮತ್ತು ಜಾತಿಯ ಬರಹಗಾರರು ಬರೆದುದನ್ನು ಇನ್ನೊಂದು ಊರಿನ ಮತ್ತು ಜಾತಿಯ ಜನರಿಗೆ ಓದಿ ಅರ‍್ತಮಾಡಿಕೊಳ್ಳಲು ಕಶ್ಟವಾಗುತ್ತದೆ.
ಈ ಸಮಾನತೆಯನ್ನು ಉಳಿಸಿಕೊಳ್ಳುವುದಕ್ಕಾಗಿ ಬರಹದ ನುಡಿಯಲ್ಲಿ ಎಂತಹ ಮಾರ‍್ಪಾಡನ್ನು ನಡೆಸುವುದಿದ್ದರೂ ಅದು ಎಲ್ಲಾ ಊರು ಮತ್ತು ಜಾತಿಗಳಿಗೆ ಸೇರಿದ ಜನರಿಗೂ ಒಪ್ಪಿಗೆಯಾಗುವಂತಹದಾಗಿರಬೇಕು. ಎಲ್ಲಾ ಬರಹಗಾರರೂ ತಮಗೆ ಅನಿಸಿದ ಹಾಗೆ ತಮ್ಮ ಬರಹದ ನುಡಿಯಲ್ಲಿ ಮಾರ‍್ಪಾಡುಗಳನ್ನು ಮಾಡಹೊರಟರೆ ಈ ಸಮಾನತೆ ಪೂರ‍್ತಿ ಅಳಿದು ಹೋದೀತು.
ಬರಹದಲ್ಲಿ ತಪ್ಪು-ಸರಿ ಎಂಬ ಪರಿಕಲ್ಪನೆಯನ್ನು ಈ ಅರ‍್ತದಲ್ಲಿ ಬಳಸಲು ಸಾದ್ಯವಿದೆ. ಕನ್ನಡದ ಕೆಲವು ಆಡುನುಡಿಗಳಲ್ಲಿ ಪದಗಳ ಮೊದಲಿನ ಹಕಾರ ಬಿದ್ದುಹೋಗಿದೆ; ಹಾಲು ಎಂಬುದು ಆಲು ಎಂದಾಗಿದೆ, ಹಣ್ಣು ಎಂಬುದು ಅಣ್ಣು ಎಂದಾಗಿದೆ, ಹುಳ ಎಂಬುದು ಉಳ ಎಂದಾಗಿದೆ. ಈ ರೀತಿ ಕೆಲವರು ಕನ್ನಡಿಗರು ತಮ್ಮ ಆಡುನುಡಿಯ ಪದಗಳಲ್ಲಿದ್ದ ಹಕಾರವನ್ನು ಕಳೆದುಕೊಂಡುದರಲ್ಲಿ ತಪ್ಪಾಗಿರುವಂತಹದು ಏನೂ ಇಲ್ಲ. ಅದು ಅವರ ಆಡುನುಡಿಯಲ್ಲಿ ಸ್ವಾಬಾವಿಕವಾಗಿ ನಡೆದಿರುವ ಒಂದು ಮಾರ‍್ಪಾಡು ಮಾತ್ರ. ಇದಲ್ಲದೆ, ಅದು ಅವರ ಆಡುನುಡಿಯನ್ನು ಕೆಡಿಸಿಲ್ಲ; ಅದರ ಜೀವಂತಿಕೆಯನ್ನು ಉಳಿಸಿದೆ.
ಆದರೆ, ಕನ್ನಡದ ಬೇರೆ ಹಲವು ಆಡುನುಡಿಗಳಲ್ಲಿ ಪದಗಳ ಮೊದಲಿನ ಹಕಾರ ಈ ರೀತಿ ಬಿದ್ದುಹೋಗಿಲ್ಲ; ಹಾಗಾಗಿ, ಇವತ್ತು ಎಲ್ಲಾ ಊರು ಮತ್ತು ಜಾತಿಗಳಿಗೂ ಸಮಾನವಾಗಿರಬೇಕಾದ ಬರಹದ ಕನ್ನಡದಲ್ಲಿ ಹಕಾರವನ್ನು ಉಳಿಸಿಕೊಳ್ಳಬೇಕೇ ಇಲ್ಲವೇ ಬಿದ್ದುಹೋಗಲು ಬಿಡಬೇಕೇ ಎಂಬುದನ್ನು ನಿರ‍್ದರಿಸಬೇಕಾಗುತ್ತದೆ. ಉಳಿಸಬೇಕೆಂದು ಹೆಚ್ಚಿನ ಕನ್ನಡಿಗರೂ ಬಯಸುವುದಾದರೆ, ಬರಹದಲ್ಲಿ ಹಕಾರವನ್ನು ಬಳಸದಿರುವುದು (ಇಲ್ಲವೇ ಬೇಡದಲ್ಲಿ ಬಳಸುವುದು) ‘ತಪ್ಪಾ’ಗುತ್ತದೆ.
ಇದೇ ರೀತಿಯಲ್ಲಿ, ಇವತ್ತು ಬಡಗ ಕರ‍್ನಾಟಕದ ಕೆಲವು ಆಡುನುಡಿಗಳಲ್ಲಿ ನಾಮಪದಗಳ ಕೊನೆಯಲ್ಲಿದ್ದ ಎಕಾರ ಇಕಾರವಾಗಿದೆ. ಮನೆ ಎಂಬುದು ಮನಿ ಎಂದಾಗಿದೆ, ಕಾಗೆ ಎಂಬುದು ಕಾಗಿ ಎಂದಾಗಿದೆ, ಕುದುರೆ ಎಂಬುದು ಕುದ್ರಿ ಎಂದಾಗಿದೆ. ಆದರೆ ಕನ್ನಡದ ಬೇರೆ ಆಡುನುಡಿಗಳಲ್ಲಿ ಈ ಮಾರ‍್ಪಾಡು ನಡೆದಿಲ್ಲ. ಇಲ್ಲೂ ಕೂಡ, ಎಲ್ಲರಿಗೂ ಸಮಾನವಾಗಿರಬೇಕಾದ ಬರಹದ ಕನ್ನಡಕ್ಕೆ ಈ ಮಾರ‍್ಪಾಡನ್ನು ತರಬೇಕೇ ಬೇಡವೇ ಎಂಬುದನ್ನು ತೀರ‍್ಮಾನಿಸಬೇಕಾಗುತ್ತದೆ, ಮತ್ತು ಬೇಡವೆಂದು ತೀರ‍್ಮಾನಿಸಿದಲ್ಲಿ ಹಾಗೆ ತರುವುದು ಬರಹದ ಮಟ್ಟಿಗೆ ‘ತಪ್ಪು’ ಎಂಬುದಾಗಿ ಶಾಲೆಗಳಲ್ಲಿ ಮಕ್ಕಳಿಗೆ ಕಲಿಸಬೇಕಾಗುತ್ತದೆ.
ಆದರೆ, ಇಂತಹ ಯಾವ ಮಾರ‍್ಪಾಡೂ ಬರಹದ ಕನ್ನಡವನ್ನು ಕೆಡಿಸುವುದಿಲ್ಲ ಎಂಬುದನ್ನು ಇಲ್ಲಿ ಗಮನಿಸುವುದು ಅವಶ್ಯ. ಆಲು ಇಲ್ಲವೇ ಮನಿ ಎಂಬ ಪದರೂಪದಲ್ಲಿಲ್ಲದಂತಹ ನುಡಿಯ ಬಳಕೆಗೆ ಅವಶ್ಯವಾಗಿರುವ ಯಾವ ಅಂಶವೂ ಹಾಲು ಇಲ್ಲವೇ ಮನೆ ಎಂಬ ಪದರೂಪದಲ್ಲಿಲ್ಲ. ಇಲ್ಲಿ ತಪ್ಪು ಮತ್ತು ಸರಿ ಎಂಬವುಗಳು ಎಂತಹ ಬರಹ ನಮ್ಮೊಳಗೆ ಸಮಾನವಾಗಿ ಉಳಿಯಬೇಕು ಎಂಬ ತೀರ‍್ಮಾನವನ್ನಶ್ಟೇ ಅವಲಂಬಿಸಿದೆ. ಇವತ್ತು ಬಳಕೆಯಲ್ಲಿರುವ ತೀರ‍್ಮಾನವನ್ನು ನಾವು ಅವಶ್ಯವೆಂದೆನಿಸಿದಲ್ಲಿ ಮಾರ‍್ಪಡಿಸಬಲ್ಲೆವು, ಮತ್ತು ಹಾಗೆ ಮಾರ‍್ಪಡಿಸಿದಾಗ ಇವತ್ತು ತಪ್ಪು ಎಂದು ತಿಳಿದಿರುವ ಪದರೂಪಗಳು ಸರಿಯೆಂದೆನಿಸಬಲ್ಲುವು.
ಸಂಸ್ಕ್ರುತ ಎರವಲುಗಳನ್ನು ಹೆಚ್ಚು ಕಡಿಮೆ ಸಂಸ್ಕ್ರುತದಲ್ಲಿರುವ ಹಾಗೆಯೇ ಬರೆಯಬೇಕು ಎಂಬ ಕಟ್ಟಲೆ ಕನ್ನಡದ ಮಟ್ಟಿಗೆ ತೀರ ಅನವಶ್ಯಕವಾದುದು ಮಾತ್ರವಲ್ಲ, ಕನ್ನಡ ಬರಹವನ್ನು ಎಲ್ಲಾ ಕನ್ನಡಿಗರೂ ಸುಲಬವಾಗಿ ಕಲಿತು ತಮ್ಮದಾಗಿಸಿಕೊಳ್ಳುವಲ್ಲಿ ಒಂದು ದೊಡ್ಡ ತೊಡಕಾಗಿದೆ; ಕೆಲವೇ ಕೆಲವು ಜನರಶ್ಟೇ ಬರಹವನ್ನು ಬಳಸುತ್ತಿದ್ದ ಹಿಂದಿನ ಕಾಲದಲ್ಲಿ ಈ ಕಟ್ಟಲೆ ಹೆಚ್ಚು ತೊಡಕಿನದೆಂದು ಅನಿಸುತ್ತಿರಲಿಲ್ಲ. ಆದರೆ, ಇವತ್ತು ಎಲ್ಲಾ ಕನ್ನಡಿಗರೂ ಬರಹಬಲ್ಲವರಾಗಬೇಕಾಗಿದೆ; ಹಾಗಾಗಿ, ಕನ್ನಡಕ್ಕೆ ಬೇಡದ ಈ ಸಂಸ್ಕ್ರುತದ ಹೊರೆಯನ್ನು ತೆಗೆದುಹಾಕುವುದೇ ಒಳ್ಳೆಯದು.
(ಈ ಬರಹ ವಿಜಯ ಕರ‍್ನಾಟಕ ಸುದ್ದಿಹಾಳೆಯ ’ಎಲ್ಲರ ಕನ್ನಡ’ ಅಂಕಣದಲ್ಲಿ ಮೊದಲು ಮೂಡಿಬಂದಿತ್ತು)
1 Response
[…] << ನುಡಿಯರಿಮೆಯ ಇಣುಕುನೋಟ – 20 […]