ಕಲಿಕೆ ಮತ್ತು ಅರಕೆ

– ಡಿ. ಎನ್. ಶಂಕರ ಬಟ್.

ನುಡಿಯರಿಮೆಯ ಇಣುಕುನೋಟ – 19

nudi_inukuಯಾವುದಾದರೂ ಒಂದು ವಿಶಯವನ್ನು ಕಲಿಯುವುದಕ್ಕೂ, ಅದರ ಮೇಲೆ ಅರಕೆ (ಸಂಶೋದನೆ) ನಡೆಸುವುದಕ್ಕೂ ನಡುವೆ ಕೆಲವು ಮುಕ್ಯವಾದ ವ್ಯತ್ಯಾಸಗಳಿವೆ; ನಾವು ಎತ್ತಿಕೊಂಡ ವಿಶಯದ ಮೇಲೆ ಬೇರೆ ಬೇರೆ ಹೊತ್ತಗೆಗಳಲ್ಲಿ, ಬಿಡಿ ಬರಹಗಳಲ್ಲಿ, ಮತ್ತು ಅವನ್ನು ಓದಿ ತಿಳಿದುಕೊಂಡಿರುವ ತಿಳಿವಿಗರಲ್ಲಿ ಸಾಕಶ್ಟು ತಿಳಿವುಗಳು ಕಲೆತಿರುತ್ತವೆ. ಅಂತಹ ಹೊತ್ತಗೆ ಮತ್ತು ಬಿಡಿ ಬರಹಗಳನ್ನು ಓದಿ, ತಿಳಿವಿಗರು ಹೇಳುವುದನ್ನು ಕೇಳಿ, ಆ ವಿಶಯದ ಕುರಿತು ತಿಳಿವನ್ನು ಕಲೆಹಾಕುವುದಕ್ಕೆ ಕಲಿಕೆ ಎಂದು ಹೆಸರು.

ಅರಕೆ ಎಂಬುದು ಇದಕ್ಕಿಂತ ತೀರ ಬೇರಾದುದು; ಒಂದು ವಿಶಯದ ಕುರಿತು ತಮ್ಮ ಸಮಾಜದಲ್ಲಿ ಕಲೆತಿರುವ ತಿಳಿವಿನಲ್ಲಿ ತಪ್ಪುಗಳು ಏನಾದರೂ ಇವೆಯೇ, ಮತ್ತು ಆ ವಿಶಯದ ಕುರಿತಾಗಿ ಯಾರಿಗೂ ತಿಳಿಯದಿರುವಂತಹ ಹೊಸ ಸಂಗತಿಗಳೇನಾದರೂ ಇವೆಯೇ ಎಂಬುದನ್ನು ಕಂಡುಹಿಡಿಯುವುದೇ ಅರಕೆ.

ಈ ವ್ಯತ್ಯಾಸದಂತೆ, ಒಂದು ವಿಶಯವನ್ನು ನಮಗೆ ಕಲಿಯಬೇಕೆಂದಿದ್ದಲ್ಲಿ ಅದಕ್ಕೆ ಕಲಿಸುಗರ ನೆರವು ಬೇಕಾಗುತ್ತದೆ; ಆದರೆ, ಒಂದು ವಿಶಯದ ಕುರಿತು ಅರಕೆಯನ್ನು ನಡೆಸಬೇಕೆಂದಿದ್ದಲ್ಲಿ, ಅದಕ್ಕೆ ನಮಗೆ ‘ದಾರಿತೋರುಗರ’ ನೆರವು ಬೇಕಾಗುತ್ತಲ್ಲದೆ ಕಲಿಸುಗರ ನೆರವು ಬೇಕಾಗುವುದಿಲ್ಲ.

ಕಲಿಯುವವರ ಮಟ್ಟಿಗೆ ಕಲಿಸುಗರೆಂದರೆ ಎಲ್ಲವನ್ನೂ ತಿಳಿದವರು; ಕಲಿಯುವವರಲ್ಲಿ ಏಳುವ ಸಂಶಯಗಳನ್ನೆಲ್ಲ ಇಲ್ಲವಾಗಿಸುವ ಅಳವು ಅವರಿಗಿದೆ; ಹಾಗಾಗಿ, ಅವರು ಏನು ಹೇಳುತ್ತಿದ್ದಾರೆ ಎಂಬುದನ್ನು ಕಿವಿಗೊಟ್ಟು ಕೇಳಿ, ಅದನ್ನು ಸರಿಯಾಗಿ ತಿಳಿದುಕೊಳ್ಳುವುದೇ ಕಲಿಗರು ಮಾಡಬೇಕಾಗಿರುವ ಮುಕ್ಯ ಕೆಲಸ.

ಆದರೆ, ಅರಕೆಯನ್ನು ನಡೆಸುವವರ ಮಟ್ಟಿಗೆ ಎಲ್ಲವನ್ನೂ ತಿಳಿದವರು ಯಾರೂ ಇಲ್ಲ; ದಾರಿತೋರುಗರು ಅವರಿಗೆ ಯಾವ ರೀತಿಯಲ್ಲಿ ಅರಕೆಯನ್ನು ನಡೆಸಬಹುದು ಎಂಬುದನ್ನು ತಿಳಿಸಬಲ್ಲರಲ್ಲದೆ, ಅರಕೆಯ ಕೊನೆಯ ತೀರ‍್ಮಾನ ಹೇಗಿರಬಹುದು, ಇಲ್ಲವೇ ಹೇಗಿರಬೇಕು ಎಂಬುದನ್ನು ತಿಳಿಸಲಾರರು. ಅದನ್ನು ತಮ್ಮ ಅರಕೆಗಳ ಮೂಲಕ ಹೊಸದಾಗಿ ಕಂಡುಹಿಡಿಯುವುದೇ ಅರಕೆಯನ್ನು ನಡೆಸುವವರ ಮುಕ್ಯ ಕೆಲಸ. ಈ ರೀತಿ, ಯಾರಿಗೂ ಗೊತ್ತಿಲ್ಲದಿರುವ ಸಂಗತಿಗಳನ್ನು ಕಂಡುಹಿಡಿಯುವ ಮೂಲಕ, ಮತ್ತು ತಪ್ಪು ತಪ್ಪಾಗಿ ತಿಳಿದುಕೊಂಡಿರುವ ಸಂಗತಿಗಳನ್ನು ಸರಿಪಡಿಸುವ ಮೂಲಕ ಸಮಾಜದಲ್ಲಿರುವ ತಿಳಿವಿನ ಬೊಕ್ಕಸವನ್ನು ಹಿರಿದಾಗಿಸುವುದೇ ಅರಕೆ ನಡೆಸುವವರ ಕೆಲಸವಾಗಿದೆ.

ಕಲಿಕೆಗೂ ಅರಕೆಗೂ ನಡುವೆ ವ್ಯತ್ಯಾಸವಿರುವ ಹಾಗೆ, ಕಲಿಕೆಯನ್ನು ಕೊಡಿಸುವ ಕಲಿಸುಗರಿಗೂ ಅರಕೆಯನ್ನು ನಡೆಸಲು ದಾರಿತೋರುಗರಿಗೂ ನಡುವೆ ವ್ಯತ್ಯಾಸವಿರುವುದು ಅವಶ್ಯ. ಕಲಿಸುಗನೊಬ್ಬ ತಾನು ಕಲಿಸುವ ವಿಶಯವನ್ನು ಸರಿಯಾಗಿ ತಿಳಿದಿರಬೇಕು ಮಾತ್ರವಲ್ಲ, ತಾನು ತಿಳಿದಿರುವುದೆಲ್ಲವೂ ಸರಿ ಎಂಬ ಆತ್ಮವಿಶ್ವಾಸವೂ ಆತನಲ್ಲಿರಬೇಕು. ಈ ವಿಶಯದಲ್ಲಿ ಸ್ವಲ್ಪವಾದರೂ ಸಂಶಯವಿದೆಯಾದರೆ, ಆತ ಎದೆಗಾರಿಕೆಯಿಂದ ಕಲಿಗರಿಗೆ ಕಲಿಸಿಕೊಡಲಾರ.

ಆದರೆ, ಅರಕೆಯನ್ನು ನಡೆಸುವವರು, ಮತ್ತು ಅರಕೆಗೆ ದಾರಿ ತೋರಿಸುವವರು ಯಾವ ಹೇಳಿಕೆಯನ್ನೂ ಪೂರ‍್ತಿಯಾಗಿ ಸರಿಯೆಂದು ತಿಳಿದುಕೊಳ್ಳಬಾರದು. ಎಲ್ಲವನ್ನೂ ಸಂಶಯದಿಂದ ನೋಡಿದಾಗ ಮಾತ್ರ ಅವರ ಅರಕೆ ಮುಂದೆ ಹೋಗಬಲ್ಲುದು. ಎಂತಹ ದೊಡ್ಡ ತಿಳಿವಿಗರು ಹೇಳಿದ್ದನ್ನೂ ಹಾಗೆಯೇ ಒಪ್ಪಿಕೊಳ್ಳದೆ ವಿಚಾರಣೆಗೆ ಒಳಪಡಿಸಲು ಅವರು ಅಣಿಯಾಗಿರಬೇಕು.

ಈ ಕಾರಣಕ್ಕಾಗಿ, ಪರೀಕ್ಶೆಗಳಲ್ಲಿ ರ‍್ಯಾಂಕ್ ಗಳಿಸುವ ಕಲಿಗ ಉತ್ತಮ ಅರಕೆಗಾರನಾಗಬೇಕೆಂದೇನಿಲ್ಲ. ಇದೇ ರೀತಿಯಲ್ಲಿ, ಕಲಿಗರ ಅಚ್ಚುಮೆಚ್ಚಿನ ಕಲಿಸುಗ ಅರಕೆಗಳಿಗೆ ಒಳ್ಳೆಯ ದಾರಿತೋರುಗನಾಗಬೇಕೆಂದೂ ಇಲ್ಲ. ಕಲಿಯುವುದಕ್ಕೆ ಮತ್ತು ಕಲಿಸುವುದಕ್ಕೆ ಬೇಕಾಗುವ ಮನೋಬಾವ ಅರಕೆಗೆ ಮತ್ತು ಅದರ ದಾರಿತೋರಿಕೆಗೆ ಬೇಕಾಗುವ ಮನೋಬಾವಕ್ಕಿಂತ ತೀರ ಬೇರಾಗಿರುವುದೇ ಇದಕ್ಕೆ ಕಾರಣ.

ನಮ್ಮ ವಿಶ್ವವಿದ್ಯಾಲಯಗಳಲ್ಲಿ ಈ ಎರಡು ಕೆಲಸಗಳನ್ನೂ ಒಬ್ಬರೇ ಮಾಡಬೇಕಾಗುವುದರಿಂದ, ಹೆಚ್ಚಿನೆಡೆಗಳಲ್ಲೂ ಅರಕೆಯ ಹೆಸರಿನಲ್ಲಿ ಕಲಿಕೆ ಮಾತ್ರ ನಡೆಯುವುದು ಕಾಣಿಸುತ್ತದೆ. ಈ ಎರಡು ಬಗೆಯ ಕೆಲಸಗಳನ್ನು ಒಬ್ಬರಿಗೇನೇ ನಡೆಸಿಕೊಂಡು ಹೋಗಲು ಹೆಚ್ಚಿನವರಿಗೂ ಸಾದ್ಯವಾಗದಿರುವುದೇ ಇದಕ್ಕೆ ಕಾರಣ.

ಒಮ್ಮೆ ನನ್ನ ಮಿತ್ರರೊಬ್ಬರು ಡಾಕ್ಟರೇಟ್ ಪದವಿಗಾಗಿ ತಾವು ಬರೆದ ಪೆರ‍್ಬರಹವನ್ನು ನನಗೆ ತೋರಿಸಿದರು. ಅದನ್ನು ಓದಿದಾಗ ನನಗೆ ತುಂಬಾ ಆಶ್ಚರ‍್ಯವಾಯಿತು: ಮೂವತ್ತು ವರ‍್ಶಗಳಶ್ಟು ಹಳೆಯ ಸಿದ್ದಾಂತಗಳನ್ನು ಬಳಸಿ ಅವರು ಅದನ್ನು ಬರೆದಿದ್ದರು. ಆ ಸಿದ್ದಾಂತಗಳಲ್ಲಿ ಹೆಚ್ಚಿನವೂ ಸರಿಯಲ್ಲ ಎಂದು ಅವರಿಗೆ ಸ್ಪಶ್ಟವಾಗಿ ತಿಳಿದಿದ್ದರೂ ಅವರು ಹೀಗೆ ಮಾಡಿದ್ದರು. “ಇದು ಯಾಕೆ ಹೀಗೆ?” ಎಂದು ನಾನು ಕೇಳಿದಾಗ ಅವರು ಹೇಳಿದರು, “ನನ್ನ ದಾರಿತೋರುಗರು ತಮ್ಮ ಡಾಕ್ಟರೇಟ್ ಪೆರ‍್ಬರಹದಲ್ಲಿ ಈ ಸಿದ್ದಾಂತಗಳನ್ನು ಬಳಸಿದ್ದಾರೆ; ಈಗ ನಾನು ಹೊಸ ಸಿದ್ದಾಂತಗಳನ್ನು ಬಳಸಿದಲ್ಲಿ, ಅವರು ಹಿಂದೆ ಬರೆದಿದ್ದ ಪೆರ‍್ಬರಹ ಸರಿಯಲ್ಲ ಎಂಬುದಾಗಿ ನಾನು ಹೇಳಿದ ಹಾಗಾದೀತು. ಹಾಗೆ ಮಾಡಿದಲ್ಲಿ, ನನ್ನ ಪೆರ‍್ಬರಹಕ್ಕೆ ಅವರ ಒಪ್ಪಿಗೆ ಸಿಗಲಾರದು.”

ನಮ್ಮ ವಿಶ್ವವಿದ್ಯಾಲಯಗಳಲ್ಲಿ ಜಾಗತಿಕ ಮಟ್ಟದ ಅರಕೆಗಳು ನಡೆಯದಿರುವುದಕ್ಕೆ ಒಂದು ಮುಕ್ಯವಾದ ಕಾರಣವನ್ನು ಇದು ಬಹಳ ಸ್ಪಶ್ಟವಾಗಿ ತಿಳಿಸುತ್ತದೆ. ತಮ್ಮ ದಾರಿತೋರಿಕೆಯಲ್ಲಿ ಪೆರ‍್ಬರಹಗಳನ್ನು ಬರೆಯುತ್ತಿರುವ ಅರಕೆಗಾರರು ತಾವು ಬರೆದಿರುವ ಪೆರ‍್ಬರಹಕ್ಕಿಂತ ಒಂದು ಹೆಜ್ಜೆ ಮುಂದೆ ಹೋದರೂ ಬೇಸರಪಟ್ಟುಕೊಳ್ಳುವ ತಿಳಿವಿಗರಿರುವಶ್ಟು ದಿವಸ ನಮ್ಮ ವಿಶ್ವವಿದ್ಯಾಲಯಗಳಲ್ಲಿ ಅರಕೆಗಳನ್ನು ನಡೆಸುವುದು ಅಸಾದ್ಯವೆಂದೇ ಹೇಳಬಹುದು. ತನ್ನ ಕಲಿಗನಿಂದ ಸೋಲನ್ನು ಬಯಸುವ ತಿಳಿವಿಗರು ಮಾತ್ರ ನಿಜಕ್ಕೂ ಅರಕೆಗೆ ದಾರಿತೋರಿಸಬಲ್ಲರು. ಅಂತಹ ತಿಳಿವಿಗರು ನಮ್ಮಲ್ಲಿ ಬೆರಳೆಣಿಕೆಯಶ್ಟೂ ಇಲ್ಲ ಎಂಬುದು ಬೇಸರದ ಸಂಗತಿ.

ಈ ಮಾತು ಎಶ್ಟು ಸರಿ ಎಂಬುದನ್ನು ಕನ್ನಡದ ಸೊಲ್ಲರಿಮೆಯ (ವ್ಯಾಕರಣದ) ಕುರಿತಾಗಿ ನಡೆದಿರುವ ಅರಕೆಗಳನ್ನು ಪರಿಶೀಲಿಸಿದಲ್ಲಿ ಗೊತ್ತಾಗಬಹುದು. ಕೇಶಿರಾಜನೇ ಮೊದಲಾದ ಕನ್ನಡದ ಸೊಲ್ಲರಿಗರು ಏನು ಹೇಳಿದ್ದಾರೆ ಎಂಬುದನ್ನು ಚರ‍್ಚಿಸುವುದು ಸೊಲ್ಲರಿಮೆಯ ಕಲಿಕೆಯಲ್ಲದೆ ಅರಕೆಯಲ್ಲ. ಅವರು ಬರೆದಿರುವ ಸೊಲ್ಲರಿಮೆಯ ಕಟ್ಟಲೆಗಳಲ್ಲಿ ತಪ್ಪುಗಳೇನಾದರೂ ಇವೆಯೇ? ಇದ್ದರೆ ಅವನ್ನು ಇಲ್ಲವಾಗಿಸುವುದು ಹೇಗೆ? ಅವರು ಹೇಳದೇ ಇರುವಂತಹ ಸೊಲ್ಲರಿಮೆಯ ಕಟ್ಟಲೆಗಳು ಯಾವುವಾದರೂ ಇವೆಯೇ? ಇದ್ದರೆ ಅವು ಎಂತಹವು? ಎಂಬಂತಹ ವಿಶಯಗಳ ಕುರಿತು ಚರ‍್ಚೆ ನಡೆದಲ್ಲಿ ಮಾತ್ರ ಈ ಸೊಲ್ಲರಿಮೆಗಳ ಮೇಲೆ ಅರಕೆ ನಡೆದಿದೆಯೆಂದು ಹೇಳಬಹುದು.

ಹಳೆಗನ್ನಡದಲ್ಲಿ ದ, ದಪ, ಮತ್ತು ವ ಎಂಬ ಮೂರು ಹೊತ್ತಿನ ಒಟ್ಟುಗಳು (ಕಾಲಪ್ರತ್ಯಯಗಳು) ಬಳಕೆಯಾಗುತ್ತವೆ, ಮತ್ತು ಇವು ಹಿಂಬೊತ್ತು (ಬೂತ), ಈಪೊತ್ತು (ವರ‍್ತಮಾನ), ಮತ್ತು ಮುಂಬೊತ್ತು (ಬವಿಶ್ಯತ್) ಎಂಬ ಮೂರು ಹೊತ್ತುಗಳನ್ನು ತಿಳಿಸುತ್ತವೆ ಎಂಬುದಾಗಿ ಕೇಶಿರಾಜನೇ ಮೊದಲಾದ ಎಲ್ಲಾ ಕನ್ನಡದ ಸೊಲ್ಲರಿಗರೂ ಹೇಳುತ್ತಾರೆ. ಆದರೆ, ನಿಜಕ್ಕೂ ಈ ಹೇಳಿಕೆ ಸರಿಯಲ್ಲ; ಎತ್ತುಗೆಗಾಗಿ, ಪಂಪಬಾರತದ “ಸೆರಗಂ ಬಗೆದೊಡೆ ಸಾವಾದಪುದು” ಎಂಬ ಸೊಲ್ಲಿಗೆ ‘ಸಹಾಯವನ್ನು ಬಯಸಿದರೆ ಸಾವಾಗುತ್ತದೆ’ ಎಂಬ ಹುರುಳಿದ್ದು, ಅದರಲ್ಲಿ ಬಂದಿರುವ ದಪ ಒಟ್ಟಿಗೆ ಮುಂದೆ ಏನಾಗಬಲ್ಲುದು ಎಂಬುದನ್ನು ತಿಳಿಸುವ ಮುಂಬೊತ್ತಿನ ಹುರುಳಿದೆಯಲ್ಲದೆ ಈಗ ಏನಾಗುತ್ತಿದೆ ಎಂಬುದನ್ನು ತಿಳಿಸುವ ಈಪೊತ್ತಿನ ಹುರುಳಿಲ್ಲ.

ಆದರೆ, ಹಳೆಗನ್ನಡದ ಸೊಲ್ಲರಿಮೆಯ ಕುರಿತಾಗಿ ಅರಕೆ ನಡೆಸಿದವರು ಯಾರೂ ಇದನ್ನು ಗಮನಿಸಿದ ಹಾಗೆ ಕಾಣಿಸುವುದಿಲ್ಲ. ಇಂತಹ ಇನ್ನೂ ಹಲವಾರು ತಪ್ಪುಗಳು ಕೇಶಿರಾಜನೇ ಮೊದಲಾದ ಕನ್ನಡದ ಸೊಲ್ಲರಿಗರು ತಿಳಿಸುವ ಸೊಲ್ಲರಿಮೆಯ ಕಟ್ಟಲೆಗಳಲ್ಲಿ ಕಾಣಿಸುತ್ತವೆ; ಇದಲ್ಲದೆ, ಅವರು ಹೇಳದಿರುವಂತಹ ಬೇರೆ ಹಲವು ಕಟ್ಟಲೆಗಳೂ ಹಳೆಗನ್ನಡದ ಸೊಲ್ಲರಿಮೆಯನ್ನು ವಿವರಿಸಲು ಬೇಕಾಗುತ್ತವೆ. ಇವುಗಳಲ್ಲಿ ಕೆಲವನ್ನಾದರೂ ಪಟ್ಟಿಮಾಡಬಲ್ಲವರು ಮಾತ್ರ ನಿಜಕ್ಕೂ ಹಳೆಗನ್ನಡದ ಮೇಲೆ ಅರಕೆ ನಡೆಸಿದ್ದಾರೆಂದು ಹೇಳಲು ಬರುತ್ತದೆ.

ಬೇರೆ ಬಗೆಯ ತಿಳಿವುಗಳ ಕುರಿತಾಗಿಯೂ ನಮ್ಮ ವಿಶ್ವವಿದ್ಯಾಲಯಗಳಲ್ಲಿ ಮತ್ತು ಬೇರೆ ಬಗೆಯ ಅರಕೆಮನೆಗಳಲ್ಲಿ ಇವತ್ತು “ಅರಕೆ”ಗಳು ನಡೆಯುತ್ತಿವೆ; ಆದರೆ, ಇವುಗಳಲ್ಲಿ ಹೆಚ್ಚಿನವೂ ಮೇಲೆ ವಿವರಿಸಿದ ಹಾಗೆ ದಾರಿತಪ್ಪಿರುವ ಅರಕೆಗಳು; ಹೊಸ ತಿಳಿವನ್ನು ಕಂಡುಹಿಡಿಯುವ ಇಲ್ಲವೇ ಹಳೇ ತಿಳಿವನ್ನು ಸಾಣೆಗೆ ಹಿಡಿಯುವ ಉದ್ದೇಶ ಅವಕ್ಕಿಲ್ಲ. ಹಾಗಾಗಿ, ಅರಕೆಗಾರರಿಗೆ ಒಂದು ಡಿಗ್ರಿಯನ್ನು ಕೊಡಿಸುವ ಕೆಲಸವನ್ನಶ್ಟೇ ಅವು ನಡೆಸಬಲ್ಲುವು.

(ಈ ಬರಹ ವಿಜಯ ಕರ‍್ನಾಟಕ ಸುದ್ದಿಹಾಳೆಯ ’ಎಲ್ಲರ ಕನ್ನಡ’ ಅಂಕಣದಲ್ಲಿ ಮೊದಲು ಮೂಡಿಬಂದಿತ್ತು)

<< ನುಡಿಯರಿಮೆಯ ಇಣುಕುನೋಟ – 18

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. 18/12/2013

    […] << ನುಡಿಯರಿಮೆಯ ಇಣುಕುನೋಟ – 19 […]

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *