‘AAP’ ತೀರ‍್ಮಾನ ಅರಿಮೆಗೇಡಿನದು

ಚೇತನ್ ಜೀರಾಳ್.

ArvindKejriwal-380_AFP

ಬ್ರಶ್ಟಾಚಾರದ ಹೋರಾಟದಿಂದ ಮುಂಚೂಣಿಗೆ ಬಂದಿದ್ದ ಅರವಿಂದ ಕೇಜ್ರಿವಾಲ್ ಅವರು ಆರು ತಿಂಗಳ ಹಿಂದೆ ರಚಿಸಿದ ಆಮ್ ಆದ್ಮಿ ಪಕ್ಶವು ಮೊನ್ನೆ ನಡೆದ ದೆಹಲಿ ವಿದಾನಸಬೆ ಚುನಾವಣೆಯಲ್ಲಿ 28 ಸ್ತಾನಗಳನ್ನು ಪಡೆದು ಎರಡನೇ ಅತಿ ದೊಡ್ಡ ಪಕ್ಶವಾಗಿ ಹೊರ ಹೊಮ್ಮಿತ್ತು. ಈಗ ಕಾಂಗ್ರೆಸ್ ಪಕ್ಶದ ಬೆಂಬಲದೊಂದಿಗೆ ದೆಹಲಿಯಲ್ಲಿ ಸರಕಾರ ರಚಿಸಿರುವುದು ನಮಗೆಲ್ಲ ಗೊತ್ತಿದೆ.

ತಾವು ಸರಕಾರ ರಚಿಸುವುದಕ್ಕಿಂತ ಮುಂಚೆ ತಮ್ಮ ಪ್ರಣಾಳಿಕೆಯಲ್ಲಿ ಹೇಳಲಾಗಿರುವ 18 ಅಂಶಗಳನ್ನು ಜಾರಿಗೆ ತರಲಾಗುವುದು ಎಂದು ಆಮ್ ಆದ್ಮಿ ಪಕ್ಶದ ಹಿರಿಯಾಳು ಅರವಿಂದ್ ಕೇಜ್ರಿವಾಲ್ ಅವರು ಹೇಳಿದ್ದರು. ಅದೇ ರೀತಿಯಾಗಿ ಈಗ ದೆಹಲಿಯ ಜನರಿಗೆ ನೀಡಲಾಗಿರುವ ಮಿಂಚಿನ (ವಿದ್ಯುತ್) ಬಿಲ್ಲಿನಲ್ಲಿ ಶೇ 50 ರಶ್ಟು ಕಡಿತ ಹಾಗೂ ಪ್ರತಿ ಮನೆಗೆ 700 ಲೀಟರ್/ಪ್ರತಿ ದಿನ ಉಚಿತವಾಗಿ ನೀರನ್ನು ನೀಡಲಾಗಿದೆ. ಸಹಜವಾಗಿ ಇದು ಜನರಿಗೆ ಸರಕಾರ ತನ್ನ ಪ್ರಣಾಳಿಕೆಯಲ್ಲಿ ಹೇಳಿರುವುದನ್ನು ಮಾಡಿದರೆ ನಲಿವು ತರುತ್ತದೆ. ಇದು ಸರಕಾರದ ಕೆಲಸವು ಹವ್ದು.

ಆದರೆ ಸರಕಾರ ತಾನು ಜಾರಿಗೆ ತರಲು ಹೊರಟಿರುವ ಯೋಜನೆಯಿಂದ ತನಗಾಗುವ ಹೊರೆ, ಜನರಿಗೆ ಆಗುವ ಪ್ರಯೋಜನ ಮತ್ತು ಆ ಯೋಜನೆಯ ದೂರನೋಟದ ಬಗ್ಗೆ ಸರಿಯಾದ ತಿಳುವಳಿಕೆಯನ್ನು ಹೊಂದಿರಬೇಕು. ಇಲ್ಲವಾದಲ್ಲಿ ಜನರ ಒಳಿತಿಗೆ ಮಾಡಿರುವ ಯೋಜನೆಗಳು ಕೆಲವರಿಗೆ ಉಪಯೋಗವಾಗುವದರ ಜೊತೆಗೆ ಹಲವರಿಗೆ ತಲೆನೋವು ತಂದಿಡಬಹುದು. ಎತ್ತುಗೆಗೆ ಆಮ್ ಆದ್ಮಿ ಪಕ್ಶದ ಸರಕಾರ ನೀಡಿರುವ ಪ್ರತಿ ದಿನ, ಪ್ರತಿ ಮನೆಗೆ 700 ಲೀಟರ್ ನೀರು ನೀಡುವ ಯೋಜನೆಯ ಬಗ್ಗೆ ಹಣಕಾಸಿನ ಅರಿಗರು ತಕಾರಾರು ಎತ್ತಿದ್ದಾರೆ.
ಸಮಸ್ಯೆ ಏನು?

ಎ. ಎ. ಪಿ ಪಕ್ಶವು ಜನರಿಗೆ ಅವಶ್ಯಕವಾಗಿರುವ ನೀರನ್ನು ಪ್ರತಿದಿನ ಉಚಿತವಾಗಿ ಒದಗಿಸುವ ಯೋಜನೆಯನ್ನು ಅಳೆದು ತೂಗಿ ಮಾಡಿದ್ದೇವೆ ಎಂದು ಹೇಳಿಕೊಂಡಿದೆ. ಹಾಗಿದ್ರೆ ಇದು ಪ್ರತಿ ಮನೆಯ ಮೇಲು ಯಾವ ಪರಿಣಾಮ ಬೀರುತ್ತದೆ? ವಿವಿದ ಹಂತದ ಜನರು ಇದಕ್ಕೆ ಹೇಗೆ ಪ್ರತಿಕ್ರಿಯೆ ನೀಡುತ್ತಾರೆ? ಇದು ನಿಜಕ್ಕೂ ಬಡವರಿಗೆ ಹಾಗೂ ನಡು ಹಂತದ ಜನರಿಗೆ ಒಳಿತು ಮಾಡುತ್ತಾ? ಮುಂದೆ ನೋಡೋಣ.

ದೆಹಲಿಯಲ್ಲಿ ನೀರಿಗೆ ಹಾಕಲಾಗುವ ಬಿಲ್ ಮುಕ್ಯವಾಗಿ 3 ಅಂಶಗಳನ್ನು ಒಳಗೊಂಡಿದೆ.

  • ಬಳಸಲಾಗಿರುವ ನೀರಿನ ಬೆಲೆ: ಇದನ್ನು ನಾಲ್ಕು ಹಂತದಲ್ಲಿ ಗುರುತಿಸಲಾಗಿದೆ. ಹೆಚ್ಚು ಉಪಯೋಗಿಸಿದಶ್ಟು ಹೆಚ್ಚು ಹೆಚ್ಚಿನ ಹಣ ತೆರೆಬೇಕು
  • ಚರಂಡಿ ‍ನಿರ್ವಹಣೆ ಬೆಲೆ: ಇದು ಬಳಸಲಾಗಿರುವ ನೀರಿನ ಶೇ 60 ರಶ್ಟು
  • ನಿಗದಿತ ಸೇವಾ ಬೆಲೆ: ಬಳಸಲಾಗುವ ನೀರು ಯಾವ ಹಂತದಲ್ಲಿ ಬರುತ್ತದೋ ಅದರ ಮೇಲೆ ನಿಗದಿ ಮಾಡಲಾಗುತ್ತದೆ.

ಬಳಸಲಾಗುವ ನೀರಿನ ನಾಲ್ಕು ಹಂತಗಳು ಈ ಕೆಳಗಿನಂತಿವೆ:

ತಿಂಗಳು ಬಳಸಲಾಗುವ ನೀರು ಹಳೆಯ ಬೆಲೆಗಳು ಹಳೆಯ ನಿಗದಿತ ಬೆಲೆಗಳು
1 – 10 ಕಿಲೋ ಲೀಟರ್ 2.42 60.50
10 – 20 ಕಿಲೋ ಲೀಟರ್ 3.63 121
20 – 30 ಕಿಲೋ ಲೀಟರ್ 18.15 181.50
30 ಕಿಲೋ ಲೀಟರ್ ಗಿಂತ ಹೆಚ್ಚು 30.25 242

(1 ಕಿಲೋ ಲೀಟರ್ = 1000 ಲೀಟರ್)

ಈಗ ಎ.ಎ.ಪಿ ಸರಕಾರದ ಹೊಸ ನೀತಿಯ ಪ್ರಕಾರ ಮೊದಲೆರಡು ಹಂತದಲ್ಲಿ ಬಳಸಲಾಗುವ ನೀರಿನ ಬೆಲೆಯನ್ನು ಉಚಿತ ಮಾಡಲಾಗಿದೆ ಮತ್ತು ಮುಂದಿನೆರಡು ಹಂತದ ಬೆಲೆಗಳನ್ನು ಹೆಚ್ಚಿಸಲಾಗಿದೆ ಮತ್ತು ನಿಗದಿತ ಸೇವಾ ಬೆಲೆಯನ್ನು ಶೇ 10 ರಶ್ಟು ಹೆಚ್ಚಿಸಲಾಗಿದೆ. ಹಾಗೆಯೇ ನಾವು ಬಳಸುವ ನೀರು 20, 000 ಲೀಟರ್ ಗಿಂತ ಹೆಚ್ಚಿಗೆ ಬಳಸಿದಲ್ಲಿ ಮೊದಲೆರಡು ಹಂತದಲ್ಲಿ ನೀಡಲಾಗುವ ವಿನಾಯಿತಿಯನ್ನು ನೀಡಲಾಗುವುದಿಲ್ಲ ಮತ್ತು ಹೊಸ ದರದ ಅನ್ವಯವೇ ಲೆಕ್ಕ ಮಾಡಲಾಗುವುದು. ಹೊಸ ದರದ ಪಟ್ಟಿ ಈ ಕೆಳಗಿನಂತಿದೆ:

ತಿಂಗಳು ಬಳಸಲಾಗುವ ನೀರು ಹೊಸ ಬೆಲೆಗಳು ಹೊಸ ನಿಗದಿತ ಬೆಲೆ
1 – 10 ಕಿಲೋ ಲೀಟರ್ 00 00
10 – 20 ಕಿಲೋ ಲೀಟರ್ 00 00
20 – 30 ಕಿಲೋ ಲೀಟರ್ 19.97 199.65
30 ಕಿಲೋ ಲೀಟರ್ ಗಿಂತ ಹೆಚ್ಚು 33.28 266.20

ಹಾಗಿದ್ರೆ ಈ ಹೊಸ ದರದ ಅನ್ವಯ ದೆಹಲಿಯ ಜನರಿಗೆ ಯಾವ ರೀತಿಯ ಹೊರೆ ಬೀಳುತ್ತದೆ ಅನ್ನುವುದನ್ನು ಈ ಕೆಳಗಿನ ಪಟ್ಟಿಯಲ್ಲಿ ನೋಡಿ:

ಈ ಮೇಲಿನ ಅಂಶಗಳಿಂದ ತಿಳಿದು ಬರುವುದೇನು?

  • ಮೊದಲಿಗೆ ಹೆಚ್ಚು ನೀರು ಬಳಸಿದಂತೆ ಹೆಚ್ಚಿನ ದರ ಅನ್ವಯವಾಗುತ್ತಿತ್ತು. ಆದರೆ ಈಗ 21 ಕಿಲೋ ಲೀಟರ್ ಬಳಕೆಯ ಹಂತದಲ್ಲಿ ಹೆಚ್ಚಿನ ದರ ನೀಡಬೇಕಾಗುತ್ತದೆ.
  • 20 ಕಿಲೋ ಲೀಟರ್ ಪ್ರತಿ ತಿಂಗಳಿಗಿಂತ ಹೆಚ್ಚಿನ ನೀರನ್ನು ಬಳಸಿದಲ್ಲಿ ಈ ಮುಂಚೆ 308 ರೂಗಳನ್ನು ಪಾವತಿಸಬೇಕಾಗುತ್ತಿತ್ತು ಆದರೆ ಈ ಹೊಸ ನಿಯಮದಿಂದಾಗಿ 871 ರೂಗಳನ್ನು ಪಾವತಿಸಬೇಕಾಗುತ್ತದೆ.
  • ಮುಂಚಿನಿಂದಲೂ 20 – 30 ಕಿಲೋ ಲೀಟರ್ ನೀರು ಬಳಸುತ್ತಿದ್ದವರು ಶೇ 200 – 300 ರಶ್ಟು ಹೆಚ್ಚಿಗೆ ದುಡ್ಡು ತೆರಬೇಕಾಗುತ್ತದೆ.
  • 30 ಕಿಲೋ ಲೀಟರ್ ಗಿಂತ ಹೆಚ್ಚಿಗೆ ಬಳಸುವವರಿಗೆ ತಾವು ಮುಂಚೆ ಕಟ್ಟುತ್ತಿದ್ದ ದುಡ್ಡಿಗಿಂತ ಶೇ 30 – 80 ರಶ್ಟು ಮಾತ್ರ ಹೆಚ್ಚಿಗೆ ಕಟ್ಟಬೇಕಾಗುತ್ತದೆ. ಇದು ನ್ಯಾಯಯುತವಾದ ದರದ ಪಟ್ಟಿಯ ರೀತಿ ಕಾಣಿಸುತ್ತದೆಯೇ?
ಕ್ರಮ ಸಂಕ್ಯೆ              ಬಳಕೆ/ಪ್ರತಿ ತಿಂಗಳು (ಕಿಲೋ ಲೀಟರ್) ಹಳೆಯ ದರ ಹೊಸ ದರ ಹೊಸ ದರದಿಂದಾಗುವ ಹೆಚ್ಚಿನ ಹೊರೆ ಹೆಚ್ಚುವರಿ ದರ ಶೇ ಲೆಕ್ಕದಲ್ಲಿ
1 10 99 (99)
2 15 189 (189)
3 20 218 (218)
4 21 308 871 563 183%
5 22 337 903 566 168%
6 23 366 935 569 155%
7 24 395 967 572 145%
8 25 424 999 575 136%
9 26 453 1,031 578 128%
10 27 482 1,063 581 120%
11 28 511 1,095 583 114%
12 29 540 1,127 586 109%
13 30 569 1,159 589 104%
14 31 678 1,278 600 88%
15 35 872 1,491 620 71%
16 40 1,114 1,758 644 58%
17 45 1,356 2,024 668 49%
18 50 1,598 2,290 692 43%
19 55 1,840 2,557 716 39%
20 60 2,082 2,823 741 36%

AAP_water_impact

ತಪ್ಪು ಅಳತೆಗೂಡು (ಮೀಟರ್) :
ಇದರ ಜೊತೆಗೆ ದೆಹಲಿಯಲ್ಲಿ ಬಹುತೇಕ ಕಡೆಗಳಲ್ಲಿ ತಪ್ಪಾಗಿ ಕೆಲಸ ಮಾಡುವ ಅಳತೆಗೂಡುಗಳೇ ಹೆಚ್ಚಾಗಿವೆ. ಈ ಬರಹದ ಮೂಲ ಬರಹಗಾರರು ನೋಡಿರುವ ಪ್ರಕಾರ ತಾವು ಬಳಸಿದ ನೀರಿಗಿಂತ ಶೇ 25 – 40 ರಶ್ಟು ಹೆಚ್ಚಿಗೆ ನೀರು ಬಳಸಿರುವಂತೆ ಅಳತೆಗೂಡಿನಲ್ಲಿ ತೋರಿಸಲಾಗಿದೆಯಂತೆ. ಇದರ ಜೊತೆಗೆ ಈ ಅಳತೆಗೂಡುಗಳು ತಪ್ಪಾಗಿ ಕೆಲಸ ಮಾಡುತ್ತಿವೆ ಎಂದು ತೋರಿಸುವುದು ಸಹ ದೊಡ್ಡ ಸಾಹಸದ ಕೆಲಸವೇ.

ತಪ್ಪಾಗಿ ಕೆಲಸ ಮಾಡುವ ಇಂತಹ ಅಳತೆಗೂಡುಗಳು ದೆಹಲಿಯ ತುಂಬಾ ಇವೆ. ಇದೊಂದು ಕಾರಣವನ್ನು ಒಳಗೊಂಡರೆ ಪ್ರತಿ ದಿನ ಜನರಿಗೆ 500 ಲೀಟರ್ ನಶ್ಟು ನೀರು ಸಿಗಬಹುದು. ಇದರಿಂದಾಗಿ ಜನರಿಗೆ ಸಿಗಬೇಕಾದ ನೀರು ಸಿಗುವುದಿಲ್ಲ. ಇಂತಹ ಕೆಟ್ಟ ಅಳತೆಗೂಡುಗಳ ಜೊತೆಗೆ ಜನರು ಹೇಳಿದ ನೀರಿನ ಲೆಕ್ಕಕ್ಕಿಂತ ಕಡಿಮೆ ಇರಬೇಕೆಂದರೆ ಜನರು ತಪ್ಪು ದಾರಿ ತುಳಿಯುವ ಸಂಬವ ಹೆಚ್ಚು. ಇದು ಎ.ಎ.ಪಿ ಪಕ್ಶದ ಸಿದ್ದಾಂತಕ್ಕೆ ವಿರುದ್ದವಾಗಿರುವುದು.

ಮುಂದಿನ ಕೆಲವು ತಿಂಗಳಲ್ಲಿ ಜನರಿಗೆ ಈ ಹೊಸ ಯೋಜನೆಯ ನಿಜರೂಪ ಅರ್ತವಾಗಬಹುದು. ಇದರಿಂದ ದೆಹಲಿಯ ವಿವಿದ ವರ್ಗದ ಜನರ ಮೇಲೆ ಆಗಬಹುದಾದ ಪರಿಣಾಮವೇನು ಎಂಬುದನ್ನು ನೋಡೋಣ:

  1. ಮೊದಲನೆಯದಾಗಿ ಎ.ಎ.ಪಿ ಪಕ್ಶವನ್ನು ಹೆಚ್ಚಿನ ಮಟ್ಟಿಗೆ ಬೆಂಬಲಿಸಿದ್ದು ಇದೇ ಮದ್ಯಮ ವರ್ಗದ ಜನತೆ. ಆದರೆ ಈ ಹೊಸ ನಿಯಮದಿಂದ ಅವರಿಗೆ ಬೇಸರವಾಗಬಹುದು. ಅವರು ಪಡೆದುಕೊಳ್ಳುವುದಕ್ಕಿಂತ 2 – 3 ಪಟ್ಟು ಹೆಚ್ಚಿಗೆ ದುಡ್ಡು ತೆರಬೇಕಾಗುತ್ತದೆ
  2. 20 ಕಿಲೋ ಲೀಟರ್ ಗಿಂತ ಕಡಿಮೆ ನೀರು ಉಪಯೋಗಿಸುವವರು ಈ ಯೋಜನೆಯ ಪ್ರಯೋಜನ ಪಡೆಯುತ್ತಾರೆ. ಆದರೆ ಯಾವುದಾದರು ಒಂದು ತಿಂಗಳು ಹೆಚ್ಚಿನ ನೀರು ಬಳಸಿದರೆ (ಹಬ್ಬ, ಬೇಸಿಗೆಯಲ್ಲಿ ಎ.ಸಿ ಬಳಕೆ, ನೆಂಟರು ಬಂದರೆ) ಹಿಂದಿನ ತಿಂಗಳು ಉಳಿಸಿದ್ದೆಲ್ಲ ಈ ತಿಂಗಳ ಬಿಲ್ಲಿನಲ್ಲಿ ಕಟ್ಟಬೇಕಾಗುತ್ತದೆ.
  3. ಡಿ.ಜೆ.ಬಿ ಜನರಿಗೆ ತಾವೇ ಪರವಾನಿಗಿ ಪಡೆದ ಅಳತೆಗೂಡುಗಳನ್ನು ಅಳವಡಿಸಿಕೊಳ್ಳಲು ಅವಕಾಶ ನೀಡುತ್ತದೆ. ಆದರೆ ಮಾರುಕಟ್ಟೆಯಲ್ಲಿ ಎಲ್ಲ ರೀತಿಯ ಅಳತೆಗೂಡುಗಳು ಸಿಗುತ್ತವೆ ಮತ್ತು ಅವುಗಳನ್ನು ಸುಲಬವಾಗಿ ಡಿ.ಜಿ.ಬಿ ಅವರ ಹತ್ತಿರ ಪರವಾನಗಿ ಪಡೆದುಕೊಳ್ಳುವಂತೆ ಮಾಡಬಹುದು. ಇವುಗಳನ್ನು ಪರೀಕ್ಶೆ ಮಾಡಲು ಜನರನ್ನು ನೇಮಿಸಬೇಕಾಗುತ್ತದೆ

ಈ ಯೋಜನೆ ಎಲ್ಲವನ್ನು ಒಳಗೊಂಡಿಲ್ಲ:
ಆದರೆ ಈ ಯೋಜನೆಯು ಎಲ್ಲವನ್ನು ಒಳಗೊಂಡಿಲ್ಲ ಎಂಬುದನ್ನು ನಾವು ಗಮನಿಸಬೇಕು: ಎತ್ತುಗೆಗೆ ಎಲ್ಲರಿಗೂ ಈ ಯೋಜನೆಯ ಮೂಲಕ ನೀರು ಸಿಗುವಂತೆ ಮಾಡುತ್ತೇವೆ ಎಂದು ಹೇಳಿಲ್ಲ. ಶೇ 80 ನೀರನ್ನು ಬೇರೆ ರಾಜ್ಯಗಳಿಂದ ತರಿಸಲಾಗುತ್ತಿದೆ ಹಾಗಾಗಿ ಮುಂದಿನ ದಿನಗಳಲ್ಲಿ ನೀರಿನ ಮೂಲ ಯಾವುದು?, ಈಗಿರುವ ಎಲ್ಲಾ ನೀರಿನ ಸಂಪರ್ಕಕ್ಕೂ ಅಳತೆಗೂಡನ್ನು ಅಳವಡಿಸುವುದು, ಟ್ಯಾಂಕರ್ ನವರ ಹಾವಳಿ ತಪ್ಪಿಸುವುದು, ಸೋರಿಕೆಯನ್ನು ತಡೆಗಟ್ಟುವುದು ಮುಂತಾದ ವಿಶಯಗಳ ಬಗ್ಗೆ ಗಮನಹರಿಸಲಾಗಿಲ್ಲ.
ಗಮನಿಸಬೇಕಾದ ವಿಶಯವೆಂದರೆ ನೀರಿನ ದರಗಳು ದೆಹಲಿಯ ಜನರಿಗೆ ದೊಡ್ಡ ವಿಶಯವಾಗಿರಲಿಲ್ಲ. ಇದರಿಂದ ಜನತೆಗೆ ಬೇಡವಾದರೂ ಬಂದ ಯೋಜನೆ ಇದಾಗಿದೆ. ಇದೇ ಯೋಜನೆಯನ್ನು ಬೇರೆಡೆಗಳಲ್ಲಿ ಜಾರಿಗೆ ತರುವುದು ಕಶ್ಟದ ಕೆಲಸವಾಗುತ್ತದೆ.

ಈ ಹೊಸ ನೀರಿನ ಯೋಜನೆ ಜನವರಿಯಿಂದ ಮಾರ್ಚ್ ತಿಂಗಳವರೆಗೂ ಜಾರಿಯಲ್ಲಿದೆ. ಈ ನೀರಿನ ಮೊತ್ತದ ಚೀಟಿಗಳು ಜನರಿಗೆ ಏಪ್ರಿಲ್ ತಿಂಗಳಿನಲ್ಲಿ ಅಚ್ಚರಿ ಮೂಡಿಸುವುದು ಸಹಜವಾಗಿ ಕಾಣುತ್ತಿದೆ. ಲೋಕಸಬೆ ಚುನಾವಣೆಯ ಸಮಯದಲ್ಲಿ ಇದು ಎ.ಎ.ಪಿ ಪಕ್ಶಕ್ಕೆ ತಿರುಗುಬಾಣವಾಗುವ ಸಂಬವವೇ ಹೆಚ್ಚು. ಹಾಗಾಗಿ ಎ.ಎ.ಪಿ ಅವರು ಈ ಮುಂಚೆ ಇದ್ದಂತೆ ಮೊದಲೆರಡು ಹಂತದಲ್ಲಿದ್ದ ದರವನ್ನು ಮತ್ತೆ ಜಾರಿಗೆ ತರುವುದು ಉತ್ತಮವಾಗಿ ಕಾಣಿಸುತ್ತದೆ.

(ಮೂಲ ಸುದ್ದಿ: moneylife), (ತಿಟ್ಟಸೆಲೆ: firstpost)

ನಿಮಗೆ ಹಿಡಿಸಬಹುದಾದ ಬರಹಗಳು

4 Responses

  1. ಅರಿಮೆಗೇಡಿನ ಬೇಡ.. ಅದು ತುಂಬಾ ಬಲವಾಗಿ ಕೆಟ್ಟದಾಗಿದೆ. ಆರಿಮೆಯಲ್ಲದ, ಅರಿಮೆಯುಳ್ಳದ ಎಂದರೆ ಚೆನ್ನಿರುತ್ತೆ
    ಬರಹ ಚೆನ್ನಾಗಿದೆ.

  2. ಕನ್ನಡ ನುಡಿಯ ಬಗ್ಗೆ ನಾ ಡಿಸೋಜಾತಿಗಿರುವ ತಿಳಿಳಿಕೆಯ ಬಗ್ಗೆ ಅರಿವುಗೇಡಿ ಬರೆಹ ಇದು.

  3. ಕನ್ನಡ ನುಡಿಯ ಬಗ್ಗೆ ನಾ ಡಿಸೋಜಾರಿಗಿರುವ ತಿಳಿವಳಿಕೆಯ ಬಗ್ಗೆ ಅರಿವುಗೇಡಿ ಬರೆಹ ಇದು.

  4. chetanjeeral says:

    ಹರ‍್ಶಕುಮಾರ್ ಅವರೇ,
    ಈ ಬರಹದಲ್ಲಿ ಎಲ್ಲೂ ನಾ ಡಿಸೋಜಾ ರ ಬಗ್ಗೆ ಬರೆಯಲಾಗಿಲ್ಲ. ನೀವು ಏನು ಹೇಳಲು ಹೊರಟಿದ್ದೀರಿ ಅನ್ನೋದು ಗೊತ್ತಾಗಲ್ಲಿಲ್ಲ.

ಅನಿಸಿಕೆ ಬರೆಯಿರಿ: