ಜಗತ್ತಿನ ಹೊಸ ಏಳು ಬೆರಗುಗಳು

ಪ್ರೇಮ ಯಶವಂತ.

ನದಿ, ಬೆಟ್ಟ, ಕಾಡು, ಕಣಿವೆ ಮುಂತಾದವುಗಳಲ್ಲಿ ಬಗೆಬಗೆಯ ಬೆರಗುಗಳನ್ನು ನಮ್ಮ ಸುತ್ತಮುತ್ತಲಿನ ಪರಿಚೆಯಲ್ಲಿ (nature) ಕಾಣಬಹುದು. ಕಾಲ ಕಾಲಕ್ಕೆ ಮನುಶ್ಯನೂ ಕೂಡ ಪರಿಚೆಗೆ ಪೋಟಿಕರೆಯನ್ನು (challenge) ನೀಡುವಂತೆ ಹತ್ತು ಹಲವು ಬಗೆಯ ನೆನಪುಗೆಗಳನ್ನು (monuments) ಕಟ್ಟಿದ್ದಾನೆ. ಈ ಬಗೆಯಾಗಿ ಮನುಶ್ಯನು ಕಟ್ಟಿದ ಬೆರಗುಗೊಳಿಸುವ ನೆನಪುಗೆಗಳನ್ನು ಆಯ್ಕೆಮಾಡುಲು  2001-2007ರ ವೇಳೆಯಲ್ಲಿ ನಡೆಸಿದ ಹಮ್ಮುಗೆಯಿಂದ ಹುಟ್ಟಿದ ಪಟ್ಟಿಯೇ  “ಜಗತ್ತಿನ ಹೊಸ ಏಳು ಬೆರಗುಗಳು”. 200 ಆಯ್ದ ನೆನಪುಗೆಗಳ ಪಟ್ಟಿಯಿಂದ ಈ ಕೆಲಸವನ್ನು ಆರಂಬಿಸಲಾಯಿತು. ಈ ಹಮ್ಮುಗೆಯನ್ನು ಕೆನಡಿಯನ್ – ಸ್ವಿಸ್ ಬರ್‍ನಾರ್‍ಡ್ ವೆಬರ್ (Canadian-Swiss Bernard Weberr) ಸ್ವಿಟ್‍ಜರ್ ಲ್ಯಾಂಡ್‍ನಲ್ಲಿ, ನೆಲೆಸಿರುವ New7Wonders Foundation ಏರ್‍ಪಾಟಿನ ಅಡಿಯಲ್ಲಿ ನಡೆಸಲಾಯಿತು.

ಬೆರುಗಗಳ ಆಯ್ಕೆಯ ಬಗೆ

ನಡುಬಲೆ (internet) ಮತ್ತು ಗೆಂಟುಲಿಗಳ (telephone) ಮೂಲಕ ಸುಮಾರು 100 ದಶಲಕ್ಶ ಮತಗಳನ್ನು ಚಲಾಯಿಸಲಾಯಿತು. ನಡುಬಲೆಯಲ್ಲಿ ನಡೆದ ಆಯ್ಕೆಯಲ್ಲಿ  ಒಬ್ಬರಿಗೆ ಒಂದು ಮತವೆಂದೂ, ಗೆಂಟುಲಿಗಳ ಮೂಲಕ ಮತ ಹಾಕುವವರು ಒಂದಕ್ಕಿಂತ ಹೆಚ್ಚು ಮತಗಳನ್ನು ಚಲಾಯಿಸಬಹುದೆಂಬ ಕಟ್ಟಲೆಯನ್ನು ಮಾಡಲಾಯಿತು. ಈ ಬಗೆಯ ಕಟ್ಟಲೆಯಿಂದಾಗಿ ಬಹಳಶ್ಟು ಮಂದಿ ಆಯ್ಕೆಯನ್ನು ಅರಿಮೆಗೇಡಿನ (unscientific) ಆಯ್ಕೆ ಎಂದು ಜರಿದರು. ಈ ಹಮ್ಮುಗೆಯು ಹಲವು ಬಗೆಯ ಇದಿರೆಸಕಗಳಿಗೂ (reactions) ನಾಂದಿ ಹಾಡಿತು.

ಕೆಲವು ದೇಶಗಳು ತಮ್ಮ ಪೋಟಿಗಾರರನ್ನು (finalists) ಮುಂದಿಟ್ಟು ಹೆಚ್ಚು ಮತಗಳನ್ನು ಪಡೆಯಲು ಮುಂದಾದರೆ, ಇನ್ನು ಕೆಲವರು ಇಂತಹ ಒಂದು ಪೋಟಿಯು ತರವಲ್ಲವೆಂದು ತೆಗಳತೊಡಗಿದರು. ಆರಂಬದಲ್ಲಿ  ಯುನೆಸ್ಕೊ ನೆನಪುಗೆಗಳ ಆಯ್ಕೆಯಲ್ಲಿ ಸಲಹೆಗಳನ್ನು ಕೊಡುವ ಮೂಲದ ಈ ಹಮ್ಮುಗೆಯನ್ನು ಬೆಂಬಲಿಸಿತ್ತು. ಆದರೆ ನಂತರದ ದಿನಗಳಲ್ಲಿ  ಯುನೆಸ್ಕೊ ತನ್ನ ಒಳಕಟ್ಟಲೆಗಳ ಕಾರಣಗಳಿಂದ ಈ ಹಮ್ಮುಗೆಯಿಂದ ದೂರ ಉಳಿಯಿತು.

ಕೊನೆಯ ಸುತ್ತಿನ 21 ನೆನಪುಗೆಗಳ ಪಯ್ಕಿ, ಏಳು ಬೆರಗುಗಳನ್ನು ಆರಿಸಲಾಯಿತು. ಬರಹದ ಉಳಿದ ಬಾಗದಲ್ಲಿ ಕೊನೆಯದಾಗಿ ಆಯ್ಕೆಗೊಂಡ ಏಳು ಬೆರಗುಗಳ ಹೆಚ್ಚುಗಾರಿಕೆಯನ್ನು ತಿಳಿದುಕೊಳ್ಳೋಣ.

1. ಮಾಚು ಪಿಚ್ಚು

machu_pichu

ಮಾಚು ಪಿಚ್ಚು ಕಡಲಿನ ಮಟ್ಟಕ್ಕಿಂತ 2,430 ಮೀಟರ್ ಎತ್ತರದಲ್ಲಿರುವ 15ನೇ ಶತಮಾನದ ಇಂಕಾ ಪೊಳಲಿಕೆಯ (civilization) ನೆಲೆ. ಇದು “ಸೇಕ್ರೆಡ್” ಕಣಿವೆಯ ಬೆಟ್ಟಗಳ ಅಂಚಿನಲ್ಲಿದೆ. ಮಾಚು ಪಿಚ್ಚುವನ್ನು ಇಂಕಾ ದೊಡ್ಡರಸರ (1438-1472) ನೆಲಸೊಮ್ಮುಗೆಯಾಗಿ  (estate) ಕಟ್ಟಿಸಲಾದ ನೆಲೆ ಎಂಬುವುದು  ಬಹಳಶ್ಟು  ಪಳಮೆಯರಿಗರ (archaeologists) ನಂಬಿಕೆ. ಈ ನೆಲೆಯನ್ನು “ಲಾಸ್ಟ್ ಸಿಟಿ ಆಪ್ ಇಂಕಾಸ್” (lost city of Incas) ಎಂದೂ ಕರೆಯುವುದುಂಟು.

ಇಂಕರು ಈ ನೆಲಸೊಮುಗೆಯನ್ನು (estate) 1450ರಲ್ಲಿ ಕಟ್ಟಿಸಿದ್ದರಾದರು, ಶತಮಾನದ ನಂತರ ಸ್ಪಾನಿಶ್ಶರ ಹಾವಳಿಯಿಂದಾಗಿ, ಈ ನೆಲಸೊಮ್ಮುಗೆಯನ್ನು ತೊರೆದರು.  ಆದರೆ 20ನೇ ಶತಮಾನದವರೆಗೂ (1911) ಈ ನೆಲೆಯ  ಪರಿಚಯ ಹೊರಗಿನ ಪ್ರಪಂಚಕ್ಕೆ ಇರಲಿಲ್ಲ.  ಮಾಚು ಪಿಚ್ಚುವನ್ನು ನಾಡುನಡುವಿನ (international) ಮಟ್ಟದಲ್ಲಿ ಗುರುತಿಸುವಿಕೆಯ ಹೆಗ್ಗಳಿಕೆ ಅಮೆರಿಕಾದ ಹಿನ್ನಡವಳಿಯರಿಗ ( historian) ಹಿರಾಮ್ ಬಿಂಗ್ಹಾಮ್  ಅವರಿಗೆ ಸಲ್ಲುತ್ತದೆ. ಅಲ್ಲಿಂದೀಚೆಗೆ ಮಾಚು ಪಿಚ್ಚು ಪ್ರವಾಸಿಗರ ಸೆಳವುಗಳಲ್ಲೊಂದಾಗಿದೆ.

2. ಕ್ರಯ್‍ಸ್ಟ್ ದಿ ರಿಡೀಮರ್ (Christ the redeemer)

christ_redeemer

ಕ್ರಿಸ್ತ ದರ್‍ಮದ ಸಂಕೇತವಾಗಿರುವ ಬ್ರೆಜಿಲ್‍ನ ಈ ಕಟ್ಟಡ 98 ಅಡಿ ಉದ್ದವಿದ್ದು, ‘ತಿಜೂಕ’ ನಾಳ್ಕಾಡಿನ (national park), ಕಾರ್‍ಕೋವಾಡೋ ಬೆಟ್ಟದ ತುದಿಯಲ್ಲಿ ನೆಲೆಗೊಂಡಿದೆ. ಗಚ್ಚುಗಾರೆ (cement) ಮತ್ತು ನೊರತೆ ಕಲ್ಲಿನಿಂದ (soap stone) ಈ ಅಡರ್‍ಪನ್ನು (statue) ಮಾಡಲಾಗಿದೆ. ಕ್ರಿಸ್ತಶಕ 1850ರಲ್ಲಿ ಈ ನೆನಪುಗೆಯನ್ನು ಕಟ್ಟಲು ಕ್ರಯ್‍ಸ್ತ ತಮ್ಮಡಿಗಳು ಆ ಕಾಲದಲ್ಲಿ ಆಳುತ್ತಿದ್ದ ರಾಣಿಗೆ ಕೋರಿಕೆಯನ್ನು ಇಟ್ಟಿದ್ದರು. ರಾಣಿಯ ಕಡೆಯಿಂದ ಯಾವುದೇ ಹಣ ಬೆಂಬಲ ಸಿಗದೆ ಅಡರ್‍ಪನ್ನು ಕಟ್ಟುವ ಹಮ್ಮುಗೆಯನ್ನು ಕಯ್ ಬಿಡಲಾಗಿತ್ತು.  ಮುಂದೆ 1920ರಲ್ಲಿ ಬ್ರೆಜಿಲ್ ಮಂದಿಯಾಳ್ವಿಕೆಯಡಿ ಬಂದ ಮೇಲೆ ಈ ನೆನಪುಗೆಯನ್ನು ಕಟ್ಟಲು ಮತ್ತೊಮ್ಮೆ ಬೇಡಿಕೆ ಬಂದಿತು.  ಬ್ರೆಜಿಲ್‍ನ ಕ್ಯಾತೋಲಿಕ್ ಕೂಟಗಳು ಜನರಿಂದ ಹಣವನ್ನು ಕಲೆಹಾಕಿ ಈ ನೆನಪುಗೆಯನ್ನು ಕಟ್ಟಿದರು.

3. ಪೆಟ್ರ

petra

ಇದು ತೆಂಕಣ ಜೋರ್‍ಡಾನಿನ ಪ್ರಾಚೀನ ಮತ್ತು ಪಳಲರಿಮೆಯ (archeology) ಒಂದು ಸುಂದರ ಹೊಳಲು. ಈ ಹೊಳಲು ಕಲ್ಲಿನಲ್ಲಿ ಕೆತ್ತಿದ ಕಟ್ಟಡಗಳು ಹಾಗು ನೀರ್‍ಗಾಲುವೆ ಏರ್‍ಪಾಡಿಗೆ ಹೆಸರುವಾಸಿ. ಕಟ್ಟಡಗಳ ಕೆತ್ತನೆಯಲ್ಲಿ ಗುಲಾಬಿ ಬಣ್ಣದ ಕಲ್ಲುಗಳ ಬಳಕೆಯಿಂದಾಗಿ, ಈ ನಗರವನ್ನು “ಗುಲಾಬಿ ಹೊಳಲು” (Rose City) ಎಂದೂ ಕರೆಯುವುದುಂಟು. ಕ್ರಿಸ್ತಪೂರ್‍ವ 312ರಲ್ಲಿ ನಬಟಿಯನ್ನರ (Nabataeans) ನೆಲೆವೀಡಾಗಿ ನೆಲೆಗೊಂಡ ಈ ನೆನಪುಗೆಯು ಇಂದಿನ ಜೋರ್‍ಡಾನ್ ನಾಡಿನ ಹೆಮ್ಮೆಯ ಗುರುತು. ಇದು ಅತಿ ಹೆಚ್ಚು ಪ್ರವಾಸಿಗರನ್ನು ಸೆಳಯುತ್ತಿರುವ ತಾಣವೂ ಹವ್ದು. ಸ್ಮಿತ್ಸೋನಿಯನ್  ಗಡುಕಡತದ (Smithsonian magazine) ಪ್ರಕಾರ ಸಾಯುವ ಮೊದಲು ನೋಡಲೇಬೇಕಾದ 28 ನೆಲೆಗಳಲ್ಲಿ ಪೆಟ್ರ ಕೂಡ ಒಂದು.

4. ಕಲೋಸಿಯಮ್

colosseum

ರೋಮ್  ಹೊಳಲಿನ ನಡುಬಾಗದಲ್ಲಿರುವ ಈ  ಉದ್ದುರುಟಿನ (elliptical) ಬಯಲಾಟದಂಗಳವನ್ನು ಗಚ್ಚುಗಾರೆಯಿಂದ ಕಟ್ಟಲಾಗಿದೆ. ಇದು ಇಡಿಯೆಡೆಯ (universe) ಅತಿ ದೊಡ್ಡದಾದ ಬಯಲಾಟದಂಗಳ ಎಂಬ ಹೆಗ್ಗಳಿಕೆಯನ್ನು ಹೊಂದಿದೆ. ಈ ಕಟ್ಟಡವನ್ನು ಕ್ರಿಸ್ತಶಕ  70-80ರಲ್ಲಿ ಕಟ್ಟಲಾಯಿತು. ಅದಟ (gladiator) ಪೋಟಿಗಾಗಿ ಹೆಚ್ಚಾಗಿ ಬಳಕೆಯಾಗುತ್ತಿದ ಈ ಬಯಲಾಟದಂಗಳ 50,000-80,000 ನೋಟಗಾರರು ಕೂರುವಶ್ಟು ದೊಡ್ಡದು. ನೆಲನಡುಗುವಿಕೆ (earthquake) ಹಾಗು ಕಲ್ಲುಗಳ್ಳರ ಹಾವಳಿಯಿಂದಾಗಿ, ಈ ನೆನಪುಗೆಯು ಒಂದಶ್ಟು ಕೆಟ್ಟಿದೆಯಾರೂ, ಇದು ಇಂದಿಗೂ ರೋಮನ್ನರ ಹೆಚ್ಚುಗಾರಿಕೆಗೆ ಹಿಡಿದ ಕನ್ನಡಿ.

5. ಚಿಚೆನ್ ಇಟ್ಜ

800px-Chichen_Itza_3

ಮೆಕ್ಸಿಕೊ ನಾಡಿನ ಯುಕಾಟನ್ ರಾಜ್ಯದಲಿ ಕಂಡುಬರುವ ಈ ಪಳಲರಿಮೆಯ ನೆಲೆ (archeological site) ಮಾಯಾ ಪೂಳಲಿಗತನದ (maya civilization) ಒಂದು ದೊಡ್ಡ  ಹೊಳಲು. ಸದ್ಯದ ಮಟ್ಟಿಗೆ ಮೆಕ್ಸಿಕೊದಲ್ಲೇ ಅತಿ ಹೆಚ್ಚಾಗಿ ಜನರನ್ನು ಸೆಳೆಯುತ್ತಿರುವ ಪಳಲರಿಮೆಯ ನೆಲೆ ಇದಾಗಿದೆ; ವರುಶಕ್ಕೆ ಹೆಚ್ಚು-ಕಡಿಮೆ 1.2 ಮಿಲಿಯನ್ ಜನಗಳು ಈ ನೆಲೆಯನ್ನು ನೋಡಲು ಹೋಗುತ್ತಾರೆ.

6. ಚೀನಾದ ದೊಡ್ಡ ಗೋಡೆ

800px-The_Great_Wall_of_China_at_Jinshanling

 ಇದು ಬಡಗಣ ಚೀನಾ ಪೇರ್‍ನಾಡಿನ (empire) ಗಡಿ ಬಾಗಗಳನ್ನು ಕಾಪಾಡಲು, ಕಲ್ಲು ಮತ್ತು ಸುಟ್ಟ ಜೇಡಿಮಣ್ಣಿನಿಂದ ಕಟ್ಟಿದ ಕೋಟೆಗಳ ಸಾಲು. ಈ ಗೋಡೆಯನ್ನು ಕಾಲಕಾಲಕ್ಕೆ ಮರುಕಟ್ಟುವುದರ ಜೊತೆಗೆ, ಗೋಡೆಯ ಉದ್ದ ಹಾಗು ಅಗಲವನ್ನು ಏರಿಸಲಾಯಿತು. ಕ್ವಿನ್‍ ಶಿ ಹುವಾಂಗ್ ಎಂಬ ಮೊದಲನೆಯ ಚೀನಾದ ದೊಡ್ಡರಸು 220-206 ಯೇಸು ಪೂರ್‍ವದ (BC) ನಡುವಿನಲ್ಲಿ ಕಟ್ಟಿಸಿದ ಈ ಗೋಡೆಯು ಇವುಗಳಲ್ಲಿ ಮುಕ್ಯವಾದುದು. ಈಗಿರುವ ಗೋಡೆಯ ಹೆಚ್ಚಿನ ಬಾಗಗಳನ್ನು ಮಿಂಗ್ ರಾಜ ಮನೆತನದವರ ಕಾಲದಲ್ಲಿ ಕಟ್ಟಲಾಗಿದೆ.

7. ತಾಜ್ ಮಹಲ್

800px-Taj_Mahal_2012

ಶಹಜಹಾನ್ ಎಂಬ ದೊಡ್ಡರಸನು ಸತ್ತ ತನ್ನ ಹೆಂಡತಿಯ ನೆನಪಿನಲ್ಲಿ ಕಟ್ಟಿಸಿದ ಮೇಲ್ಮಟ್ಟದ ಹೂಳಿದೆಡೆಯೇ ಈ ತಾಜ್ ಮಹಲ್.  ಬಾರತದ ಆಗ್ರಾದಲ್ಲಿರುವ  ಈ ನೆನಪುಗೆಯನ್ನು ಬಿಳಿಯ ತಣ್ಗಲ್ಲಿನಿಂದ ಕಟ್ಟಲಾಗಿದೆ. ಕ್ರಿಸ್ತ ಶಕ 1632-1653ರ ವೇಳೆಯಲ್ಲಿ ಕಟ್ಟಲಾದ ಈ ನೆನಪುಗೆಯನ್ನು 1983 ರಲ್ಲಿ  ಯುನೆಸ್ಕೊ “world heritage site” ಪಟ್ಟಿಗೆ ಸೇರಿಸಲಾಯಿತು.

ಈ ಆಯ್ಕೆಯ ಬಗೆಯಲ್ಲಿ ರಗಳೆಗಳು ಏನೇ ಇದ್ದರೂ, ಆಯ್ಕೆಗೊಂಡ ನೆನಪುಗೆಗಳ ಹೆಚ್ಚುಗಾರಿಕೆಯನ್ನು ಕಡೆಗಣಿಸುವಂತಿಲ್ಲ.

(ಮಾಹಿತಿ ಮತ್ತು ತಿಟ್ಟಗಳ ಸೆಲೆ: en.wikipedia.org)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks