ಗಂಗಾ ಸಾಗರದ ಸ್ತಳ ಪುರಾಣ

ರಾಗವೇಂದ್ರ ಅಡಿಗ.

ಗಂಗಾ ಸಾಗರ

ಬಾರತೀಯರಿಗೆ ಪವಿತ್ರ ದಯ್ವ ಸಮಾನವಾದ ನದಿ ಗಂಗಾ. ‘ಗಂಗಾ ಮಾತೆ’ ಎನ್ನುವುದಾಗಿ ಕರೆಯಿಸಿಕೊಳ್ಳುವ ಈ ನದಿ ಉತ್ತರದ ಕಾಶ್ಮೀರದಿಂದ ದಕ್ಶಿಣದ ತುದಿಯ ಕನ್ಯಾಕುಮಾರಿಯವರೆಗಿನ ಸರ್‍ವ ಹಿಂದೂ ದರ್‍ಮೀಯರಿಗೂ ಪೂಜನೀಯವಾದುದು. ಇಂತಹಾ ನದಿಯು ಉತ್ತರಕಾಶಿಯ ಸಮೀಪದ ಗಂಗೋತ್ರಿಯಲ್ಲಿ ಹುಟ್ಟಿ ನೂರಾರು ಮಯ್ಲು ಹರಿದು ಪಶ್ಚಿಮ ಬಂಗಾಳದ ರಾಜದಾನಿ ಕೋಲ್ಕತ್ತಾದ ದಕ್ಶಿಣದಲ್ಲಿ ಸುಮಾರು 100 ಕಿಲೋಮೀಟರ್ ಅಂತರದಲ್ಲಿರುವ ಗಂಗಾಸಾಗರವೆನ್ನುವಲ್ಲಿ ಸಮುದ್ರವನ್ನು ಸೇರುತ್ತದೆ.ಗಂಗೆಯು ಸಮುದ್ರ ಸಂಗಮವಾಗುವ ಈ ಗಂಗಾ ಸಾಗರ ಕ್ಶೇತ್ರಕ್ಕೆ ಸಹ ಗಂಗೆಯ ಜನ್ಮಸ್ತಳ ಗಂಗೋತ್ರಿಯಶ್ಟೆ ಪಾವಿತ್ರ್ಯತೆ ಇದೆ. ಹಿಂದೂ ಪುರಾಣಗಳಲ್ಲಿ ಗಂಗಾ ಸಾಗರದ ಮಹಿಮೆಯನ್ನು ನಾನಾ ವಿದಗಳಲ್ಲಿ ಕೊಂಡಾಡಲಾಗಿದೆ.

ಅಯೋದ್ಯಾಪುರವನ್ನಾಳುತ್ತಲಿದ್ದ ಸಗರ ಚಕ್ರವರ್‍ತಿಗೆ ಕೇಶಿನಿ ಮತ್ತು ಸುಮತಿಯರೆನ್ನುವ ಇಬ್ಬರು ಮಡದಿಯರಿದ್ದರು. ಒಮ್ಮೆ ಅವ್ರವ ಮಹರ್‍ಶಿಗಳು ಸಗರನ ಆಸ್ತಾನಕ್ಕೆ ಬೇಟಿಯಿತ್ತ ಸಮಯದಲ್ಲಿ ಅಲ್ಲಿನ ಅತಿತಿ ಸತ್ಕಾರಕ್ಕೆ ಮೆಚ್ಚಿ ಸಗರನ ರಾಣಿಯರೀರ್‍ವರಿಗೆ ಎರಡು ವರಗಳನ್ನು ಅನುಗ್ರಹಿಸಿದರು. ಅದರಂತೆ ಬಹಳ ಗುಣಶಾಲಿ, ಬಲಶಾಲಿಯೂ ಆದ ಓರ್‍ವ ಪುತ್ರ ಸಂತಾನ , ಆತನು ಮುಂದೆ ಸಗರನ ಸಾಮ್ರಾಜ್ಯಕ್ಕೆ ಚಕ್ರವರ್‍ತಿಯಾಗುವ ಎಲ್ಲಾ ಗುಣಲಕ್ಶಣವನ್ನು ಹೊಂದಿರುತ್ತಾನೆ. ಇನ್ನೊಂದು ವರದಂತೆ ಹದಿನಾರು ಸಾವಿರ ಪುತ್ರರು. ಈ ಎರಡು ವರಗಳಲ್ಲಿ ಯಾವ ರಾಣಿಗೆ ಯಾವ ವರವು ಬೇಕಿದೆಯೋ ಅದನ್ನು ಆಯ್ಕೆ ಮಾಡಿಕೊಳ್ಳಿರೆನ್ನಲು ಹಿರಿಯ ರಾಣಿಯಾದ ಕೇಶಿನಿದೇವಿಯು ತಾನು ಮೊದಲನೆಯ ವರವನ್ನು ಆಯ್ಕೆ ಮಾಡಿಕೊಳ್ಲುತ್ತಾಳೆ. ಮತ್ತು ಎರಡನೆ ರಾಣಿಯಾದ ಸುಮತಿದೇವಿಯು ತಾನು ಹದಿನಾರು ಸಾವಿರ ಮಕ್ಕಳಿಗೆ ಜನ್ಮ ನೀಡುತ್ತಾಳೆ.

ಹೀಗೆ ಕಾಲವು ಸರಿದಂತೆ ಸುಮತಿಯಲ್ಲಿ ಜನಿಸಿದ ಆ ಹದಿನಾರು ಸಾವಿರ ಮಕ್ಕಳು ತಾವು ಸಗರನ ಉತ್ತಮ ಶಾಂತಿಯುತ ಆಡಳಿತಕ್ಕೆ ಬಂಗ ತರುವ ಕಾರ್‍ಯದಲ್ಲಿ ನಿರತರಾಗುತ್ತಾರೆ. ಅವರ ಉಪಟಳಗಳಿಂದ ಇಂದ್ರಾದಿ ದೇವತೆಗಳಿಂದ ಹಿಡಿದು ಬೂಲೋಕ ವಾಸಿಗಳಾದ ಸಾಮಾನ್ಯ ಜನರೂ ತಾವು ಸುಕದಿಂದ ಬದುಕು ನಡೆಸುವುದು ಕಶ್ಟವೆನ್ನಿಸುತ್ತದೆ.

ಆಗ ದೇವೇಂದ್ರನು “ಈ ಸಮಸ್ಯೆಯಿಂದ ತಾವು ಪಾರಾಗುವುದು ಹೇಗೆ?” ಎನ್ನುವುದಾಗಿ ಮಹಾ ತಪಸ್ವಿಗಳಾದ ಕಪಿಲ ಮಹರ್‍ಶಿಗಳ ಬಳಿಯಲ್ಲಿ ಸಲಹೆ ಕೇಳುತ್ತಾನೆ. ಆಗ ಕಪಿಲ ಮುನಿಗಳು ಇದಕ್ಕೊಂದು ಉಪಾಯವನ್ನು ಹೂಡಿ ಅದರಂತೆ ತಾವು ಸಗರ ಚಕ್ರವರ್‍ತಿಯನ್ನು ಬೇಟಿ ಮಾಡಿ “ಹೇ ರಾಜನ್ ನಿನ್ನ ರಾಜ್ಯವು ಇಂದು ಉತ್ತಮ ಆಡಳಿತದಿಂದ ಮೂಲೋಕಗಳಲ್ಲಿಯೂ ಹೆಸರು ಗಳಿಸಿದೆ. ಇಂತಹಾಸಾಮ್ರಾಜ್ಯದ ಕೀರ್‍ತಿ ಇನ್ನಶ್ಟು ಎತ್ತರಕ್ಕೇರಬೇಕೆಂದರೆ ನೀನೊಂದು ಅಶ್ವಮೇದ ಯಾಗವನ್ನು ಮಾಡಬೇಕು” ಎನ್ನುವ ಸಲಹೆಯನ್ನು ನೀಡಿದರು.

ಮಹರ್‍ಶಿಗಳ ಸಲಹೆಯನ್ನು ಶಿರಸಾ ಪಾಲಿಸುವುದಾಗಿ ತಿಳಿಸಿದ ಸಗರ ಚಕ್ರವರ್‍ತಿಯು ಅದರಂತೆ ಅಶ್ವಮೇದ ಯಾಗಕ್ಕಾಗಿ ಸಕಲ ಸಿದ್ದತೆಯಲ್ಲಿ ತೊಡಗಿದನು. ಒಳ್ಳೆಯ ದಶ್ಟ ಪುಶ್ಟವಾದ ಕುದುರೆಯೊಂದನ್ನು ಯಾಗಕ್ಕಾಗಿ ಆರಿಸಿಕೊಂಡು ತನ್ನ ಹದಿನಾರು ಸಾವಿರ ಮಕ್ಕಳಿಗೆ ಅದರ ರಕ್ಶಣೆಯ ಬಾರವನ್ನು ವಹಿಸಿಕೊಟ್ಟನು. ಅದರಂತೆ ಆ ಹದಿನಾರು ಸಾವಿರ ಜನರ ರಕ್ಶಣೆಯಲ್ಲಿ ಕುದುರೆಯು ನಾನಾ ದೇಶಗಳನ್ನು ಹಾದು ಹೋಯಿತು. ಸಗರ ಚಕ್ರವರ್‍ತಿಯ ಮೇಲಿನ ಗವ್ರವ ಹಾಗೂ ಬಯದ ಕಾರಣಾದಿಂದ ಯಾವುದೇ ದೇಶದ ರಾಜರೂ ಈ ಯಜ್ನದ ಕುದುರೆಯನ್ನು ಕಟ್ಟಿ ಹಾಕುವ ದಾರ್‍ಶ್ಟ್ಯವನ್ನು ತೋರಲಿಲ್ಲ.

ಹೀಗಿರಲು ಅದೊಂದು ದಿನ ದೇವೇಂದ್ರನು ತಾನು ಆ ಯಜ್ನಾಶ್ವವನ್ನು ತನ್ನ ಕುಟಿಲತನದಿಂದ ಅಪಹರಿಸಿ ಕಪಿಲ ಮುನಿಗಳ ಆಶ್ರಮದ ಆವರಣಾದಲ್ಲಿ ಕಟ್ಟಿ ಹಾಕಿದನು. ಕಪಿಲ ಮುನಿಗಳು ತಾವು ದ್ಯಾನದಲ್ಲಿ ತಲ್ಲೀನರಾಗಿದ್ದ ಸಂದರ್‍ಬದಲ್ಲಿ ಸಗರನ ಆ ಹದಿನಾರು ಸಾವಿರ ಪುತ್ರರು ತಮ್ಮ ನಡುವಿದ್ದ ಯಜ್ನಾಶ್ವಕ್ಕಾಗಿ ಹುಡುಕುತ್ತಾ ಆ ಆಶ್ರಮದ ಬಳಿ ಸಾರಲು ಆಶ್ರಮದ ಆವರಣಾದಲ್ಲಿ ಬಂದಿಯಾಗಿರುವ ಯಜ್ನ ಹಯವು ಅವರಿಗೆ ಗೋಚರವಾಯಿತು. ಇದರಿಂದಾಗಿ ಸಹಜವಾಗಿ ಕೆರಳಿ ಕೆಂಡದಂತಾದ ಆ ಸಗರ ಕುಮಾರರು “ಎಲಾ ಈ ಮುನಿಗದೆಶ್ಟು ದಯ್ರ್ಯ? ಯಾವ ವೀರ ಕ್ಶತ್ರಿಯ ರಾಜ, ಮಹಾರಾಜರೂ ತಮ್ಮ ಯಜ್ನಾಶ್ವವನ್ನು ಕಟ್ಟಿ ಹಾಕಲು ಹಿಂಜರಿದಿದ್ದ ಸಮಯದಲ್ಲಿ ಈ ಸಾಮಾನ್ಯ ಸಾದುವೋರ್‍ವನು ಈ ಕುದುರೆಯನ್ನು ಕಟ್ಟಿ ಹಾಕಿರುವನಲ್ಲ?” ಎಂದುಕೊಳ್ಳುತ್ತಲೇ ಕ್ರೋದತುಂದಿಲರಾಗಿ ಆಶ್ರಮವನ್ನು ಪ್ರವೇಶಿಸಿ ದ್ಯಾನದಲ್ಲಿದ್ದ ಮುನಿಗಳ ಬಳಿ ಸಾರಿ ನಾನಾ ವಿದದಲ್ಲಿ ಹಿಂಸಿಸಲು ಆರಂಬಿಸಿದರು.

ಈ ಕ್ರುತ್ಯದಿಂದ ದ್ಯಾನ ಬಂಗವಾಗಿ ಎಚ್ಚರಗೊಂಡ ಕಪಿಲ ಮಹರ್‍ಶಿಗಳು ತಾವು ಕಡುಕೋಪಗೊಂಡು ತಮ್ಮ ಕಣ್ಣುಗಳನ್ನು ತೆರೆದಾಗ ಅವರ ಆ ನೇತ್ರಗಳಿಂದ ಬಂದ ಶಾಕ ಪೂರಿತ ಪ್ರಬೆಗೆ ಸಗರ ಚಕ್ರವರ್‍ತಿಯ ಪುತ್ರರಾದ ಆ ಹದಿನಾರು ಸಾವಿರ ಮಂದಿಯೂ ಸುಟ್ಟು ಬಸ್ಮವಾಗಿ ಹೋದರು.

ಈ ಸುದ್ದಿಯನ್ನು ತಿಳಿದ ಸಗರ ಚಕ್ರವರ್‍ತಿಯು ತಾನು ಕುಪಿತಗೊಂಡು ತಕ್ಶಣವೇ ಕಪಿಲರ ಆಶ್ರಮದತ್ತ ದಾವಿಸಿ ಬಂದು ಅವರಲ್ಲಿ ಆದ ತಪ್ಪಿಗಾಗಿ ಕ್ಶಮೆ ಯಾಚಿಸಲು ಮಹರ್‍ಶಿಗಳು “ತನ್ನಿಂದಾದ ಕ್ರುತ್ಯಕ್ಕಾಗಿ ನಾನು ಸಹ ಪರಿತಪಿಸುತ್ತೇನೆ. ಆದರೆ ನಿನ್ನ ಪುತ್ರರನ್ನು ಮತ್ತೆ ಮೊದಲಿನಂತೆ ಮಾಡಲು ಸಾದ್ಯವಿಲ್ಲ. ಬದಲಾಗಿ ನಿಮ್ಮ ವಂಶದಲ್ಲಿ ಮುಂದೆ ಬಗೀರತನೆನ್ನುವವನು ಹುಟ್ಟಲಿದ್ದು ಅವನಿಂದ ದೇವಲೋಕದಲ್ಲಿನ ಗಂಗೆಯು ಬೂಲೋಕಕ್ಕೆ ಬರುವವಳಿದ್ದಾಳೆ, ಅವಳ ಆಗಮನ ಮತ್ತು ಅವಳ ಸ್ಪರ್‍ಶ ಮಾತ್ರದಿಂದ ನಿನ್ನ ಈ ಹದಿನಾರು ಸಾವಿರ ಪುತ್ರರಿಗೆ ಶಾಶ್ವತ ಮೋಕ್ಶವು ಪ್ರಾಪ್ತಿಸುತ್ತದೆ” ಎಂದು ನುಡಿದರು.

ಅದರಂತೆ ಹಲವು ನೂರು ವರುಶಗಳ ತರುವಾಯ ಸಗರನ ವಂಶದಲ್ಲಿ ಜನ್ಮಿಸಿದ ಬಗೀರತ ಮಹಾರಾಜನು ತಾನು ವಿಶ್ಣು ಮತ್ತು ಪರಮೇಶ್ವರರನ್ನು ಕುರಿತು ಗಾಡವಾದ ತಪಸ್ಸನ್ನಾಚರಿಸಿ ಅವರಿಂದ ದೇವಲೋಕದಲ್ಲಿದ್ದ ಗಂಗೆಯನ್ನು ಬೂಲೋಕಕ್ಕೆ ತಂದು ತನ್ನ ಪೂರ್‍ವಜರು ಶಾಶ್ವತ ಮೋಕ್ಶವನ್ನು ಹೊಂದುವಂತೆ ಮಾಡಿದನು. ಅಂದು ಕಪಿಲರ ಆಶ್ರಮವಿದ್ದ ಸ್ತಳವೇ ಇಂದಿನ ಗಂಗಾ ಸಾಗರವೆನ್ನುವುದಾಗಿ ತಿಳಿಯಲಾಗಿದೆ. ಮತ್ತು ಗಂಗಾ ನದಿಯು ತಾನು ಸಮುದ್ರದೊಂದಿಗೆ ಸಂಗಮಿಸುವ ಈ ಸ್ತಳವು ಹಿಂದೂಗಳ ಪಾಲಿನ ಪವಿತ್ರ ಕ್ಶೇತ್ರವೆನಿಸಿದೆ. ಇಲ್ಲಿ ನಡೆಯುವ ಮಹಾ ಕುಂಬಮೇಳದ ಸಂದರ್‍ಬ ಸೇರಿದಂತೆ ಅನೇಕ ಪುಣ್ಯ ದಿನಗಳಲ್ಲಿ ಲಕ್ಶ ಸಂಕ್ಯೆಯ ಬಕ್ತಾದಿಗಳು ನೆರೆದು ಈ ಪಾವನ ಸಂಗಮ ತೀರ್‍ತದಲ್ಲಿ ಮಿಂದು ದನ್ಯತಾ ಬಾವ ತಾಳುತ್ತಾರೆ.

(ಚಿತ್ರ ಸೆಲೆ: westbengaltourism.gov.in)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: