ಬೆರಗು ಮೂಡಿಸುವ ಸಂತ ಕ್ರುಜ್

ಸುನಿಲ್ ಮಲ್ಲೇನಹಳ್ಳಿ.

Natural Bridge

ನಾನಿರುವ ಸಂತಕ್ಲಾರವೂ ಸ್ಯಾನ್ ಪ್ರಾನ್ಸಿಸ್ಕೋ ಬೇ ಏರಿಯಾ ಹಾಗೂ ಸಿಲಿಕಾನ್ ವ್ಯಾಲಿ ಸಮುದಾಯದಲ್ಲಿನ ಚಿಕ್ಕ ಪಟ್ಟಣ. ಈ ಚಿಕ್ಕ ಪಟ್ಟಣದಲ್ಲಿ ವಿಮಾನ ನಿಲ್ದಾಣ ಇಲ್ಲವಾದ್ದರಿಂದ ಸ್ಯಾನ್ ಪ್ರಾನ್ಸಿಸ್ಕೋ ಅಂತರಾಶ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿದು ಇಲ್ಲಿಗೆ ಬರಬೇಕು. ಬೆಂಗಳೂರಿನಲ್ಲಿ ನಮಗೆ ಕಾಣುವಂತಹ ಹತ್ತಾರು ಅಂತಸ್ತುಗಟ್ಟಲೆ ಎತ್ತರದ ಕಟ್ಟಡಗಳಾಗಲಿ, ಅಪಾರ್‍ಟ್ ಮೆಂಟ್ ಗಳಾಗಲಿ ಸಂತಕ್ಲಾರದಲ್ಲಿ ನಮಗೆ ಕಾಣಸಿಗುವುದಿಲ್ಲವಾದ್ದರಿಂದ, ಬಂದ ಕೆಲದಿನಗಳವರೆಗೂ ಈ ಪಟ್ಟಣದ ಬಗ್ಗೆ ಯಾವುದೇ ತರಹದ ಆಕರ್‍ಶಣೀಯ ಮನೋಬಾವ ನನ್ನಲ್ಲಿ ಮೂಡಿರಲೇ ಇಲ್ಲ! ಆದರೆ ಕೆಲದಿನಗಳು ಕಳೆದ ಮೇಲೆ ಇಲ್ಲಿ ಏಕೆ ಕಟ್ಟಡಗಳನ್ನು, ಅಪಾರ್‍ಟ್ ಮೆಂಟ್ ಗಳನ್ನು ಅಂತಸ್ತುಗಟ್ಟಲೇ ಕಟ್ಟುವುದಿಲ್ಲ ಅನ್ನುವುದಕ್ಕೆ ಕಾರಣ ಗೊತ್ತಾದದ್ದು.

ಕ್ಯಾಲಿಪೋರ್‍ನಿಯಾದ ಉದ್ದಕ್ಕೂ “ಸ್ಯಾನ್ ಆಂಡ್ರಿಯಾಸ್” ಹೆಸರಿನ ಬೂ ತಪ್ಪು ರೇಕೆ (Earth Faultline) ಹಾದುಹೋಗಿದ್ದು, ಅದು ಈ ಪ್ರದೇಶದಲ್ಲಿ ಬೂ ಕಂಪನದ ಸಾದ್ಯತೆಯನ್ನು ಹೆಚ್ಚಿಸಿದೆ, ಅಲ್ಲದೆ ಆಗಾಗ ಚಿಕ್ಕದಾಗಿ ಬೂಮಿ ಕಂಪಿಸುವ ಅನುಬವವು ಆಗುತ್ತಿರುತ್ತೆ! ಹಾಗಾಗಿ ಈ ಊರಲ್ಲಿ ಅಂತಸ್ತುಗಟ್ಟಲೇ ಎತ್ತರದ ಕಟ್ಟಡಗಳನ್ನು ಕಟ್ಟುವ ಪ್ರಯತ್ನ ಮಾಡಿರುವುದು ಕಡಿಮೆ.

ಇಲ್ಲಿಗೆ ಬಂದ ಆರಂಬದಿಂದ ಈ ದಿನಗಳವರೆಗೂ ಸ್ನೇಹಿತರೊಡಗೂಡಿ ನೋಡಿ ಬಂದಿರುವ ಪ್ರವಾಸಿ ಸ್ತಳಗಳಲ್ಲಿ ಬಹುತೇಕ ಪೆಸಿಪಿಕ್ ಮಹಾಸಾಗರಕ್ಕೆ ಹೊಂದಿಕೊಂಡ ಅತವಾ ಅಲ್ಲಿಗೆ ತೀರ ಸಮೀಪದಲ್ಲಿರುವ ಸ್ತಳಗಳಾಗಿವೆ. ಅವುಗಳಲ್ಲಿ ಕೆಲ ಪ್ರವಾಸಿ ಸ್ತಳಗಳ ಹೆಸರಿಸುವುದಾದರೆ ಸಂತ ಕ್ರುಜ್, ಮಾಂಟೆರೇರಿ ಬೇ, 17ನೇ ಮಯ್ಲಿ ಡ್ರಯ್ವ್, ಬಿಗ್ ಸುರ್ ಹಾಗೂ ಪಾಯಿಂಟ್ ರೆಯೇಸ್ (Point Reyes), ನಂಬುವಿರೋ ಇಲ್ಲವೋ ಇಲ್ಲಿ ನಾನು ಬರೆದಿರುವ ಒಂದೊಂದು ತಾಣಕ್ಕೂ ನಾಲ್ಕಯ್ದು ಸಲ ಹೋಗಿಬಂದಿದ್ದೇನೆ. ಇಶ್ಟು ಸಲ ಹೋಗಿದ್ದರೂ, ಏಕೋ ಆ ತಾಣಗಳಿಗೆ ಮತ್ತೆ ಮತ್ತೆ ಹೋಗಬೇಕೆನ್ನುವ ಕಾತುರ ಮಾತ್ರ ಇದ್ದೇ ಇದೆ.

ಈ ತಾಣಗಳ ಬಗ್ಗೆ ನನ್ನಲ್ಲಿ ತುಂಬಿಕೊಂಡಿರುವ ಕುತೂಹಲಕ್ಕೆ, ಹಂಬಲಕ್ಕೆ ಮುಕ್ಯ ಕಾರಣಗಳೆಂದರೆ ಹೋಗುವ ಹಾದಿಯುದ್ದಕ್ಕೂ ಕಾಣಸಿಗುವ ಪರ್‍ವತಗಳ ಸಾಲು, ಇವುಗಳಲ್ಲಿ ಕೆಲವೆಡೆ ಹಸಿರು, ಇಲ್ಲವೇ ಒಣಗಿದ ಹುಲ್ಲಿನಿಂದ ಆವರಿಸಿದ ಬೋಳು ಪರ್‍ವತಗಳು, ಮತ್ತೆ ಕೆಲವೆಡೆ ಉದ್ದನೆಯ ಮರಗಳನ್ನು ದಟ್ಟವಾಗಿ ತುಂಬಿಕೊಂಡಿರುವ ಪರ್‍ವತಗಳು. ಆ ಪರ್‍ವತಗಳನ್ನು ಕಡಿದು ಇಲ್ಲವೇ ಕೊರೆದು ಮಾಡಿರುವ ಹಾವಿನ ಚಲನೆಯಾಕಾರ ದಂತೆ ಇರುವ ರೋಮಂಚನಬರಿಸುವ ರಸ್ತೆಗಳು ಹಾಗೂ ಹಾದಿಯುದ್ದಕ್ಕೂ ಅನತಿ ದೂರದಲ್ಲೇ ಆಗುವ ಆಗಾದ ಜಲರಾಶಿಯನ್ನು ತುಂಬಿ ಕೊಂಡಿರುವ ಪೆಸಿಪಿಕ್ ಮಹಾಸಾಗರದ ದಿಗ್ದರ್‍ಶನ! ನಿಜಕ್ಕೂ ಆ ದ್ರುಶ್ಯಾವಳಿಗಳನ್ನು ತುಂಬಿಕೊಳ್ಳಲು ಎರಡು ಕಣ್ಣುಗಳು ಸಾಲದೆಂದು ಅನ್ನಿಸುತ್ತದೆ.

ಸಂತಕ್ರುಜ್

ಸಂತಕ್ಲಾರಕ್ಕೆ ಮೂವತ್ತೆರಡು ಮಯ್ಲಿ ದೂರದಲ್ಲಿರುವ ಸಾಗರತೀರದ ಪ್ರೇಕ್ಶಣಿಯ ಸ್ತಳ ಸಂತಕ್ರುಜ್. ಅಲ್ಲಿಗೆ ಹೋಗಿಬರುವ ಯೋಜನೆಯನ್ನು ಕಾರ್‍ಯರೂಪಕ್ಕೆ ತರುವಾಗ, ನಮಗೆ ಅಲ್ಲಿನ ಕೊರೆಯುವ ಚಳಿಯದ್ದೆ ದೊಡ್ಡ ಚಿಂತೆಯಾಗಿತ್ತು! ಆದರೂ ದಯ್ರ್ಯಮಾಡಿ ಅಂದು ಬಾನುವಾರ, ಬೆಳಗಿನ ಉಪಹಾರ ತಿಂದು, ಮದ್ಯಾಹ್ನದ ಊಟದ ಬುತ್ತಿಯನ್ನು ಕಟ್ಟಿಕೊಂಡು ಸಂತ ಕ್ರುಜ್ಗೆ ಹೋಗಲೆಂದು ಕಾರನೊಳಗೆ ಕುಳಿತಾಗ ಗಂಟೆ ಹತ್ತಾಗಿತ್ತು. ಸಂತಕ್ಲಾರದಿಂದ ಸಂತ ಕ್ರುಜ್ಗೆ ಹೋಗುವ ಹಾದಿಯು ನೇರವಾಗಿರದೆ ಕ್ಲಿಶ್ಟಕರವಾದ ಹೆಚ್ಚು ತಿರುವುಗಳನ್ನು ಹೊಂದಿದೆ. ಈ ಹಾದಿಯಲ್ಲಿ ವಾಹನಗಳನ್ನು ಎಚ್ಚರಿಕೆಯಿಂದ ಚಾಲನೆ ಮಾಡಬೇಕು. ಬೆಟ್ಟ, ಕಣಿವೆ, ದಟ್ಟನೆಯ ಹಸಿರಿನ ಕಾಡು, ತಿರುವು-ಮುರುವಿನ ರಸ್ತೆ ಇವೆಲ್ಲವ ನೋಡಿಕೊಂಡು ಸಂತಕ್ರುಜ್ ತಲುಪಿದಾಗ ಗಂಟೆ 11.15 ಆಗಿತ್ತು. ನಮ್ಮ ಅದ್ರುಶ್ಟಕ್ಕೆ ಅಂದು ಚಳಿ ಜಾಸ್ತಿ ಇರದೇ ಸ್ವಲ್ಪ ಬೆಚ್ಚಗಿನ ವಾತಾವರಣವಿತ್ತು

ಮೊದಲ ನೋಟದಲ್ಲೇ ಯಾವುದೋ ಒಂದು ಹಳೆಪಟ್ಟಣದ ರೀತಿ ಕಂಡಿತು ಸಂತಕ್ರುಜ್. ಅಲ್ಲಿನ ಹಳೆ ಶಯ್ಲಿಯ ಕಟ್ಟಡಗಳು, ಮಾಸಲು ಬಣ್ಣದ ಮನೆಗಳು ಹಾಗೆ ನನಗನ್ನಿಸಲು ಕಾರಣ ಇದ್ದಿರಬಹುದು. ನಮ್ಮ ಮೋಟಾರು ಬಂಡಿಯನ್ನು ಒಂದುಕಡೆ ಪಾರ್‍ಕ್ ಮಾಡಿ ಸಂತಕ್ರುಜ್ ಅನ್ನುವ ಸಾಗರ ತಡಿಯ ಊರಿನ ವಿಹಾರ ಹೊರಟ ನಮ್ಮನ್ನು ಗಮನ ಸೆಳೆದದ್ದು ತುಂಡರಿಸಿದ ರೆಡ್ ವುಡ್ ಮರಗಳನ್ನು ಆದಾರ ಸ್ತಂಬವಾಗಿರಿಸಿಕೊಂಡು ಬರಿ ಮರದಲ್ಲಿಯೇ ಕಟ್ಟಿರುವ “ಬೀಚ್ ಬ್ರಾಡ್ ವಾಕ್”, ಇದು ಸಾಗರದೊಳಗೆ ಉದ್ದವಾಗಿ ನಾಲಗೆ ರೀತಿ ಚಾಚಿಕೊಂಡಿದೆ. ಅಲ್ಲಿ ಹಾಗೆಯೇ ನೆಡೆಯುತ್ತಾ ಹೋದರೆ ನಮ್ಮನ್ನು ಅಂದರೆ ನೋಡುಗರನ್ನು ಕಣ್ಮನ ಸೆಳೆಯುವ ಸಂಗತಿಗಳೆಂದರೆ ಕಣ್ಣಳತೆ ದೂರದಲ್ಲೇ ಕಾಣಸಿಗುವ ಸಮುದ್ರಸಿಂಹಗಳ (Sea Lion) ಗುಂಪು, ಬೀಚ್ ಬ್ರಾಡ್ ವಾಕ್ ಅನ್ನು ಕಟ್ಟಲು ಕೆಳಗೆ ಉಪಯೋಗಿಸಿರುವ ಮರದ ಆದಾರ ಪಟ್ಟಿಗಳ ಮೇಲೆ ಇವು ಗುಂಪಾಗಿ ನಿದ್ರಿಸುತ್ತಿರುತ್ತವೆ. ಅಲ್ಲಲ್ಲಿ ಕಾಣಸಿಗುವ ಶುಬ್ರ ಬಿಳಿ ಹಾಗೂ ಬೂದು ಬಣ್ಣದ ಸೀಗಲ್ (Seagull) ಎನ್ನುವ ಮುದ್ದಾದ ಪಕ್ಶಿ ಮತ್ತು ಜನಗಳನೇಕ ಕಪ್ಪು ಬಣ್ಣದ ಉಡುಗೆ ತೊಟ್ಟು ಸಾಗರದಲ್ಲಿ ಸರ್‍ಪಿಂಗ್ ಮಾಡುತ್ತಾ ಎಳುತ್ತಾ, ಬಿಳುತ್ತಾ, ತೇಲುತ್ತಿರುವುದು.

ಬೀಚ್ ಬ್ರಾಡ್ ವಾಕ್ ನಲ್ಲೇ ಹಿಂತಿರುಗಿ ಬಂದು ಬಲ ಪಕ್ಕದಲ್ಲಿ ಕೆಳಗಿಳಿದು ಹಾಗೆಯೇ ನೆಡೆಯುತ್ತಾ ಹೋದರೆ ಒಂದು ಕಡೆ ಅಬ್ಬರದ ಅಲೆಗಳಿರದ ಪ್ರಶಾಂತ ಪೆಸಿಪಿಕ್ ಸಾಗರ, ಹಸಿ ಮರಳಿನ ಮೇಲೆ ಓಡಾಡುತ್ತಾ ಇರುವ ಪಕ್ಶಿಗಳ ದೊಡ್ಡ ಸಮೂಹ ಮತ್ತೊಂದು ಕಡೆ ಅನತಿ ದೂರದಲ್ಲೇ ಹತ್ತಾರು ಕೋರ್‍ಟ್ ಗಳಲ್ಲಿ ಬೀಚ್ ವಾಲಿಬಾಲ್ ಆಡುತ್ತಿರುವ ತರುಣ-ತರುಣಿಯರು ಮತ್ತು ನಮ್ಮ ವಂಡರ್ ಲಾಕ್ಕಿಂತ ದೊಡ್ಡದಾದ ಹಾಗೂ ಮಯ್ ನವೀರೆಳಿಸುವ ಬಗೆಬಗೆಯ ಆಟಗಳಿರುವ ಗೇಮ್ ಪಾರ್‍ಕ್ ನಮಗಾಗಿ ದರ್‍ಶನ ತೋರಲು ಕಾದಿರುವವು. ಅಲ್ಲಿಂದ ಪ್ಲೇಸರ್ ಪಾಯಿಂಟ್ ಅನ್ನುವ ಸ್ತಳಕ್ಕೆ ಬಂದು ಸರ್‍ಪಿಂಗ್ ಮಾಡುತ್ತಿರುವವರನು ತೀರ ಹತ್ತಿರದಿಂದ ನೋಡಿ ಸಂಬ್ರಮಿಸಿ, ಅಲ್ಲೇ ಹಾಸುಗಲ್ಲಿನ ಮೇಲೆ ಕುಳಿತು ಮದ್ಯಾಹ್ನದ ಊಟ ಮುಗಿಸಿ ನ್ಯಾಚುರಲ್ ಬ್ರಿಡ್ಜ್ ಅನ್ನು ನೋಡಲು ಹೊರಟೆವು. ಉದ್ದವಾಗಿದ್ದ ಈ ಬ್ರಿಡ್ಜ್ ಕಾಲಕ್ರಮೇಣ ಸಾಗರದ ಅಲೆಗಳ ಸವೆತಕ್ಕೆ ಸಿಲುಕಿ ಚಿಕ್ಕದಾಗಿ ಹೋಗಿದೆ. ಲೇಕನದೊಟ್ಟಿಗೆ ಲಗತ್ತಿಸಿರುವ ಪೋಟೋದಲ್ಲಿ ತೋರಿಸಿರುವಶ್ಟು ಇದೆ.

ಒಟ್ಟಾರೆ ಸಂತ ಕ್ರುಜ್ ನ ಬಹುತೇಕ ಪ್ರವಾಸಿ ತಾಣಗಳನ್ನು ನೋಡಿ ನಲಿದು, ಆನಂದಿಸಿ ಅಲ್ಲಿಂದ ನಾಲ್ಕು ಮಯ್ಲಿಗಳ ದೂರದಲ್ಲಿ ದಟ್ಟಅರಣ್ಯದೊಳಗಿರುವ ಮಿಸ್ಟರಿ ಸ್ಪಾಟ್ (Mystery Spot) ಎಂಬ ಕುತೂಹಲಕಾರಿ ಸ್ತಳಕ್ಕೆ ಬಂದೆವು.

ಈ ಸ್ತಳದಲ್ಲಿ ಬವ್ತಿಕ ಹಾಗೂ ಗುರುತ್ವಾಕರ್‍ಶಣದ ನಿಯಮಗಳು ಅನ್ವಯಿಸುವುದಿಲ್ಲ ಅನ್ನುವ ಕಾರಣಕ್ಕೆ ತುಂಬಾ ಜನಪ್ರಿಯವಾಗಿದೆ. ನಾವು ಇಲ್ಲಿಗೆ ಬರುವ ವೇಳೆಗೆ ಸಂಜೆ ನಾಲ್ಕಾಗಿ ಸುತ್ತ ಮಬ್ಬುಮಬ್ಬು ಕತ್ತಲು ಆವರಿಸಿತ್ತು. ಮಿಸ್ಟರಿ ಸ್ಪಾಟ್ ಅನ್ನು ನೋಡಿಕೊಂಡು ಕಾರಿನೊಳಗೆ ಕೂತು, ಬೆಳಗಿನಿಂದ ನೋಡಿದ್ದೆಲ್ಲವ ವಿಚಾರ ಮಾಡುತ್ತಾ, ಸಂತಕ್ಲಾರದ ಹಾದಿಯನ್ನು ಹಿಡಿದಾಗ ಸಂಜೆ ಅಯ್ದರ ವೇಳೆಗೆ ಆಗಲೇ ರಾತ್ರಿಯಂತಾಗಿ ಕರಿ ಕಗ್ಗತ್ತಲು ತುಂಬಿಕೊಂಡಿತ್ತು. ಒಟ್ಟಾರೆ ಮತ್ತೆ ಹೋಗಿ ನೋಡಬೇಕೆನ್ನಿಸುವ ಪ್ರವಾಸಿ ಸ್ತಳಗಳಲ್ಲಿ ಸಂತಕ್ರುಜ್ ಒಂದೆಂದು ನನಗನ್ನಿಸಿತು.

(ಚಿತ್ರ ಸೆಲೆ: naturalbridge)Categories: ನಡೆ-ನುಡಿ

ಟ್ಯಾಗ್ ಗಳು:, , , , , , , , , , , , , , , , , , , , , , , , , , , , , , , , ,

ಅನಿಸಿಕೆ ಬರೆಯಿರಿ

Please log in using one of these methods to post your comment:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s