ಟಾಟಾ ಕನಸು ನನಸಾಗಿಸುತ್ತಿದ್ದ ಕಾರ‍್ಲ್ ಸ್ಲಿಮ್ ಇನ್ನಿಲ್ಲ

ಜಯತೀರ‍್ತ ನಾಡಗವ್ಡ.

karl-slim

ಬಾರತದ ತಾನೋಡಗಳ ದೊಡ್ಡ ಕೂಟ ಟಾಟಾ ಮೋಟಾರ‍್ಸ್ ಗೆ ಬಾನುವಾರ ಒಳ್ಳೆಯ ದಿನವಾಗಿರಲಿಲ್ಲ. ಕೂಟದ ಮೇಲಾಳು ಕಾರ‍್ಲ್ ಸ್ಲಿಮ್ (Karl Slym) ಇದ್ದಕಿದ್ದಂತೆ ಕೊನೆಯುಸಿರೆಳೆದಿದ್ದಾರೆ. ಟಾಟಾ ಮೋಟಾರ‍್ಸ್ ಅಶ್ಟೇ ಯಾಕೆ ತಾನೋಡಗಳ ಕಯ್ಗಾರಿಕೆಯಲ್ಲಿರುವ ಪ್ರಮುಕರಿಗೆ ಈ ಸುದ್ದಿ ಅಚ್ಚರಿ ಮೂಡಿಸಿದೆ.

ಟಾಟಾ ಮೋಟಾರ‍್ಸ್ ತಾಯ್ಲಾಂಡ್ ಕೂಟದ ಮಾತುಕತೆಯೊಂದರಲ್ಲಿ ಬಾಗವಹಿಸಲು ಬ್ಯಾಂಕಾಕ್ ಗೆ ತೆರಳಿದ್ದ ಸ್ಲಿಮ್ ತಾವು ತಂಗಿದ್ದ ಶಾಂಗ್ರಿಲಾ ಹೋಟೆಲ್ ನ 22ನೇ ಮಹಡಿಯಿಂದ 4 ನೇ ಮಹಡಿಗೆ ಕುಸಿದು ಸಾವನ್ನಪ್ಪಿದ್ದಾರೆ. ಅವರ ಸಾವಿನ ಕಾರಣ ಇನ್ನೂ ತಿಳಿದುಬಂದಿಲ್ಲ. ಅವರು ಆತ್ಮಹತ್ಯೆ ಮಾಡಿಕೊಂಡಿರುವ ಸಾದ್ಯತೆಯನ್ನು ಬ್ಯಾಂಕಾಕ್ ಪೊಲೀಸರು ತಳಿಹಾಕಿಲ್ಲ.

ಬಾನುವಾರ ಬಿಡುವಿನ ದಿನವಿದ್ದರೂ ಬಾರತದ ಹೆಸರುವಾಸಿ ಕೂಟದ ಮೇಲಾಳುವೊಬ್ಬರು ತೀರಿದ ಸುದ್ದಿ ಕಾಳ್ಗಿಚ್ಚಿನಂತೆ ಹಬ್ಬಿತು. ತಾನೋಡಗಳ ಕಯ್ಗಾರಿಕೆ ಅಲ್ಲದೇ ಈ ಸುದ್ದಿ ಹಣಕಾಸು ಮತ್ತು ಇತರೆ ಸಂಬಂದಿಸಿದೆಡೆಗಳಲ್ಲೂ ತಲ್ಲಣ ಉಂಟುಮಾಡಿದೆ. ಕಾರ‍್ಲ್ ಸ್ಲಿಮ್ ಸಾವಿನ ಸುದ್ದಿ ಬರುತ್ತಿದ್ದಂತೆ ಕೆಲವೇ ಗಂಟೆಗಳಲ್ಲಿ ಟಾಟಾ ಮೋಟಾರ‍್ಸ್ ನ ಶೇರುಗಳ ಬೆಲೆ ಇಳಿಮುಕ ಕಂಡಿದ್ದು ಇದಕ್ಕೆ ಹಿಡಿದ ಕನ್ನಡಿ.

ಕಾರ‍್ಲ್ ಸ್ಲಿಮ್ ಬ್ರಿಟಿಶ್ ಮೂಲದ ಮನುಶ್ಯ. 1984ರಲ್ಲಿ ತಮ್ಮ ಕಲಿಕೆ ಮುಗಿಸಿ ಟೋಯೋಟಾ ಬ್ರಿಟನ್ ನಲ್ಲಿ ತಮ್ಮ ಕೆಲಸ ಆರಂಬಿಸಿದ್ದರು. ಅಲ್ಲಿಯೇ ಮೇಲಿನ ಹುದ್ದೆಗಳಿಗೇರುತ್ತ 1995ರಲ್ಲಿ, ಅಂದು ಜಗತ್ತಿನಲ್ಲಿ ಮೊದಲ ಸ್ತಾನದ ತಾನೋಡವಾಗಿದ್ದ ಜನರಲ್ ಮೋಟಾರ‍್ಸ್ ನ ಒಪೆಲ್ ಮಾದರಿ ತಯಾರಿಸುವ ಹೊಣೆಹೊತ್ತಿದ್ದರು. ಮುಂದೆ ಅಲ್ಲಿಯೇ ತಯಾರಿಕೆ ವಿಬಾಗದ ಮುಕ್ಯಸ್ತನಾಗಿ ಮುಂದಾಳತ್ವ ವಹಿಸಿದ್ದರು. ಒಪೆಲ್ ಪೋಲ್ಯಾಂಡ್ ನಿಂದ 1999 ರಲ್ಲಿ ಕೆನಡಾದ ಜನರಲ್ ಮೋಟಾರ‍್ಸ್ ನಲ್ಲಿ ತಮ್ಮ ಕೆಲಸದ ಪಯಣ ಮುಂದುವರೆಸಿದರು.

2007-2011 ಹೊತ್ತು ಸ್ಲಿಮ್ ಪಾಲಿಗೆ ಮಹತ್ವದ್ದು, ಈ ಹಂತದಲ್ಲಿ ಜನರಲ್ ಮೋಟಾರ‍್ಸ್ ಮೊದಲ ಸ್ತಾನದಿಂದ ಕೆಳಗೆ ತಳ್ಳಲ್ಪಟ್ಟು ದಿವಾಳಿಯತ್ತ ಮುಕಮಾಡಿತ್ತು. ಒಳ್ಳೆಯ ಮುಂದಾಳತ್ವದ ಗುಣಗಳಿಂದ ಕೂಡಿದ್ದ ಸ್ಲಿಮ್ ಅವರಿಗೆ ಏಶಿಯಾ ವಿಬಾಗದ ಮೇಲಾಳಾಗುವಾಗ ಹುದ್ದೆ ಒಲಿದುಬಂತು. ತಮ್ಮ ಜಾಣ್ಮೆಯ ನಡೆಗಳಿಂದ ಕಶ್ಟದ ಹೊತ್ತಿನಲ್ಲೂ ಜನರಲ್ ಮೋಟಾರ‍್ಸ್ ಏಶಿಯಾದಲ್ಲಿ ನೆಲೆಗೊಳ್ಳುವಂತೆ ಮಾಡಿದ್ದು ಸ್ಲಿಮ್.

ಬಾರತದಲ್ಲಿ ಜನರಲ್ ಮೋಟಾರ‍್ಸ್ ಹೊಸ ಮಾದರಿಗಳನ್ನು ಬಿಡುಗಡೆ ಮಾಡುತ್ತ ಬೆಂಗಳೂರಿನಲ್ಲೇ ತನ್ನ ಅರಕೆಮನೆಯನ್ನು ಕಟ್ಟಿಕೊಂಡಿತು. ಇದರಲ್ಲಿ ಕಾರ‍್ಲ್ ಸ್ಲಿಮ್ ಪಾತ್ರ ದೊಡ್ಡದು. 2009ರಲ್ಲಿ ಜಿ.ಎಮ್ ನ ಹಲವು ಮಾದರಿಗಳ ಟಿ.ವಿ.ಬಯಲರಿಕೆಗಳಲ್ಲಿ ಕಾರ‍್ಲ್ ಸ್ಲಿಮ್ ಕಾಣಿಸಿಕೊಂಡು ಮಾರುಕಟ್ಟೆ ಹೆಚ್ಚಿಸಲು ತಾವೇ ಮುಂದಾಗಿದ್ದು ನೀವು ನೋಡಿರಬಹುದು.

ಕೆಲಸದ ಬದುಕಿನಲ್ಲಿ ಹೊಸ ಏಣಿಗಳನ್ನು ಏರುತ್ತಲೇ ಸಾಗಿದ ಸ್ಲಿಮ್ ಸೆಪ್ಟೆಂಬರ್ 2012 ರಲ್ಲಿ ಬಾರತದ ದಿಗ್ಗಜ ಟಾಟಾ ಮೋಟಾರ‍್ಸ್ ಸೇರಿಕೊಂಡರು. ಅಮೇರಿಕಾ, ಜರ‍್ಮನಿ, ಬ್ರಿಟನ್ ನಾಡುಗಳಲ್ಲಿ ಹುಟ್ಟಿದ ಕೂಟಗಳಲ್ಲಿ ಕೆಲಸ ಮಾಡಿದ್ದ ಸ್ಲಿಮ್ ಅವರಿಗೆ ಬಾರತ ಮೂಲದ ಟಾಟಾ ಮೋಟಾರ‍್ಸ್ ಪಣವೊಡಿತ್ತು. ಆದಾಗ್ಯೂ ಸೇರಿಕೊಂಡ ಕೆಲವೇ ದಿನಗಳಲ್ಲಿ ಹತ್ತು ಹಲವು ಬದಲಾವಣೆ ಮಾಡುತ್ತ ಟಾಟಾ ಮೋಟಾರ‍್ಸ್ ನಲ್ಲಿ ಬಲತುಂಬಿದ್ದರು ಸ್ಲಿಮ್.

ಇವರ ಬರುವಿಕೆಯಿಂದ ಟಾಟಾ ಕೂಟ ಚೇತರಿಸಿಕೊಳ್ಳುವತ್ತ ಸಾಗಿತ್ತೆಂದು ಕೂಟದ ಹತ್ತಿರದವರು ಹೇಳಿಕೊಂಡಿದ್ದರು. ಹೊಸ ಮಾದರಿಗಳನ್ನು ಮಾರುಕಟ್ಟೆಯಲ್ಲಿ ತರುವುದರ ಮೂಲಕ ಟಾಟಾ ಕೂಟವನ್ನು ಹಣಕಾಸಿನ ಹಿಂಜರಿಕೆಯಲ್ಲೂ ಮೇಲ್ಮಟ್ಟಕ್ಕೆ ತರುವುದಾಗಿ ಕಾರ‍್ಲ್ ಸ್ಲಿಮ್ ಪಣತೊಟ್ಟಿದ್ದರು.

ಸ್ಲಿಮ್ ಅವರನ್ನು ಹತ್ತಿರದಿಂದ ಕಂಡ ಹಲವರು ಸರಳ, ನೇರ ನಡೆಯ ಮತ್ತು ಸದಾ ನಗುವ ಬದುಕಿನ ಮನುಶ್ಯ ಎಂದು ಹೇಳಿದ್ದಾರೆ. ಈ ಹೊತ್ತಿನಲ್ಲಿ ದೇವರು ಸ್ಲಿಮ್ ಅವರ ಹೆಂಡತಿ, ಮಕ್ಕಳು ಮತ್ತು ಬಳಗದವರಿಗೆ ಕಶ್ಟ ಸಹಿಸಿಕೊಳ್ಳುವ ಬಲನೀಡಲಿ.

(ತಿಟ್ಟಸೆಲೆ: actualites.ch.msn.com)

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. 07/02/2014

    […] ಬಂಡಿ ತಯಾರಕ ಟಾಟಾ ಮೋಟಾರ‍್ಸ್ ನ ಮೇಲಾಳು ಕಾರ‍್ಲ್ ಸ್ಲಿಮ್ ರವರ ಅಸಹಜ ಸಾವು, ಜನರಲ್ ಮೋಟಾರ‍್ಸ್ ನ ಹೊಗೆ ಕಳ್ಳಾಟದ […]

ಅನಿಸಿಕೆ ಬರೆಯಿರಿ: