ಗೊಂಬೆಗಳ ಪ್ರೀತಿ…! – ಸಣ್ಣಕತೆ

ವಿನೋದ್ ಕುಮಾರ್

kdec08bombe

ನಾನೊಬ್ಬನೇ ನಾಯಕ , ನನ್ನ ಮಾತೇ ಎಲ್ಲರೂ ಕೇಳಬೇಕೆಂಬುದು “ಗೊಂಬೆಗಳ ಅರಮನೆ ” ಎಂಬ ಹೆಸರಿನ ಅಂಗಡಿಯ  ಹೊಸ ವರ್‍ಶದ ಪ್ರದರ‍್ಶನದಲ್ಲಿ  ಮಿಂಚುತ್ತಿದ್ದ ಗಂಡು ಗೊಂಬೆಯ ಪೊಗರು. ಈ ಅಂಗಡಿಗೆ ಬಂದು ಆರು ತಿಂಗಳಾದರು , ಈ ಗೊಂಬೆಯನ್ನು ಯಾರೊಬ್ಬರೂ ಕೊಂಡೋಗಲಿಲ್ಲ.. ಅಲ್ಲಿರುವ ಎಲ್ಲಾ ಗೊಂಬೆಗಳ ಮೇಲೂ ಅದಿಕಾರ ಚಲಾಯಿಸುವ ದಿಮಾಕಿರುವುದು ಕೇವಲ ಈ ಗೊಂಬೆಗೆ ಮಾತ್ರ. ನೋಡಲು ಗಂಬೀರವಾದ ಮೊಗಬಾವದಿಂದ ಕೂಡಿದ ಈ ಗಂಡು ಗೊಂಬೆ, ಆಕಾರದಲ್ಲಿ ಗಟ್ಟುಮುಟ್ಟು, ಎತ್ತರದಲ್ಲಿ ಉಳಿದೆಲ್ಲವುಗಳಿಗಿಂತ ಉದ್ದ.. ಸವಾರುಗಾರನ ಟೋಪಿಯನ್ನು ತೆಗೆದರೆ ಬೋಳು ತಲೆ..!

ಹೊಸ ವರ್‍ಶದ ಸಂಬ್ರಮಕ್ಕೆ ಅಂಗಡಿಯ ಕೆಲಸಗಾರ‍್ತಿಯೊಬ್ಬಳು ಚಂದ ಗೊಂಬೆಗಳನ್ನೆಲ್ಲಾ ಅಂಗಡಿಯ ಮುಕದ್ವಾರದೆದುರಿಗೆ ಜೋಡಿಸಿಟ್ಟಳು. ಅದರಲ್ಲೂ ನೋಡಿ, ಈ ಗಂಡು ಗೊಂಬೆಯದ್ದೇ ದರ್‍ಬಾರು. ಅವನೇ ನಾಯಕನಂತೆ ಎಲ್ಲ ಗೊಂಬೆಗಳ ನಡುವೆ ರಾಜನಂತೆ ಟೀವಿಯಿಂದ ನಿಂತಿದ್ದ. “ಹೊಸ ಸರಬರಾಜು ಬಂದಿದೆ, ಇಳಿಸ್ರಪ್ಪ” ಅಂತ ಅಂಗಡಿಯ ಮಾಲಿಕ ಕಾಲಿನ ಮೇಲೆ ಕಾಲಾಕಿಕೊಂಡು ತನ್ನ ಕುರ‍್ಚಿಯಿಂದಲೇ ಕಿರುಚಿ ಹೇಳಿದ.  ಸರಬರಾಜು ಇಳಿಸುವ ಸಮಯದಲ್ಲಿ ಗೊಂಬೆಗಳನ್ನು ಜೋಡಿಸುತ್ತಿದ್ದ ಕೆಲಸದವಳ ಕಣ್ಣಿಗೆ ಒಂದು ಸುಂದರ ಹೆಣ್ಣು ಬೊಂಬೆ ಕಾಣಿಸಿತು. ಗಿರಿಗೆಯ ತನಕ ಹೊಲಿದಿದ್ದ ಬೆಳ್ಳೆನೆಯ ರೇಶ್ಮೆಯ ಉಡುಪು ಬೊಂಬೆಯ ಸವ್ಂದರ‍್ಯವನ್ನು  ಹೆಚ್ಚಿಸಿತ್ತು. ಹಾಲಿನ ಬಣ್ಣ, ತುಟಿಯ ಪಕ್ಕದ ದ್ರುಶ್ಟಿ ಬೊಟ್ಟು ಮತ್ತು ಸವ್ಮ್ಯತೆಯ ಬಿಂಬ ಹೆಣ್ಣು ಬೊಂಬೆಯ ಮೊಗದಲ್ಲಿ ತವರಾಗಿ ಬಿಟ್ಟಿತ್ತು. ಹೆಣ್ಣು ಬೊಂಬೆಯನ್ನು ಕಯ್ಗೆತ್ತಿಕೊಂಡ ಕೆಲಸದವಳು ಜೋಡಿಸುತ್ತಿದ್ದ ಗೊಂಬೆಗಳ ಜೊತೆ ಇಡಲಿಕ್ಕೆ ಹೊರಟಳು. ಬೊಂಬೆಗೆ ಸರಿಯಾದ ಜಾಗಕ್ಕಾಗಿ ಹುಡುಕುತ್ತಾ , ಗಂಡು ಗೊಂಬೆಯ ಪಕ್ಕದಲ್ಲಿರಿಸಿದಳು. “ವ್ಹಾ ..! ಎಂತ ಜೋಡಿ!” ಎಂದ ಅಲ್ಲಿದ್ದ ಕೆಲಸದವನೊಬ್ಬ. ಆಕೆ ತನ್ನ ಮೂತಿ ತಿರುಗಿಸಿ ” ಏನ್ ಮಹಾ ಜೋಡಿ? ಕ್ರೂರಿಯ ಪಕ್ಕ ಸುಂದರಿ.. ಗಂಡು ಗೊಂಬೆ ನಕ್ಕು ಅದೆಶ್ಟೋ ದಿನಗಳಾದಂತ್ತಿದೆ” ಎಂದಳು.

“ಗೊಂಬೆಗಳ ಜೋಡಿ ಬಿಡು , ನಮ್ಮ ಜೋಡಿಯ ಬಗ್ಗೆ ಏನಾದರೂ ಯೋಚ್ನೆ ಮಾಡಿದ್ಯಾ?” ಎಂದ ಆತ.

“ನಾವೂ ಈ ಗೊಂಬೆಗಳ ಹಾಗೆಯೇ. ಕೊಳ್ಳುವವರು ಬಂದಾಗ ಹೋಗಲೇ ಬೇಕು. ಆಸೆಗಳಿಗಿಲ್ಲಿ ಜಾಗವಿಲ್ಲ. ಮತ್ತೆ  ಹೊಸ ವರುಶದ ಶುಬಾಶಯಗಳು” ಎಂದು ಹೇಳಿ ತನ್ನ ಕೆಲಸ ಮುಂದುವರಿಸಿದಳು.

ಮಾರನೆಯ ದಿನದ ವರೆಗೂ ಆ ಗೊಂಬೆಗಳು ಅಂಗಡಿಗೆ ಅಲಂಕಾರ ವಸ್ತುಗಳಾಗಿ ಗ್ರಾಹಕರನ್ನು ಸೆಳೆಯುತ್ತಿತ್ತು. ಕೆಲಸದವಳು ಗೊಂಬೆಗಳನ್ನು ಮಾರಾಟಕ್ಕೆಂದು ಜೋಡಿಸುವಾಗ ಆ ಎರಡೂ ಗೊಂಬೆಗಳನ್ನು ಮಾತ್ರ ಒಟ್ಟಾಗೇ ಇಟ್ಟಳು. “ಜೋಡಿಯನ್ನು ಬೇರೆ ಮಾಡಲು ಮನಸ್ಸಾಗಲಿಲ್ಲವೇ?” ನಗುತ್ತಾ ಕೆಲಸದವ ಅವಳೆದುರಿಗೆ ಬಂದ. “ಇರುವಶ್ಟು ಕಾಲ ಜೊತೆಗಿರಲಿ ಅಂತ ಅಶ್ಟೆ” ಎಂದು ಆತ  ನಕ್ಕ ಅರ‍್ದದಶ್ಟು ನಗೆಯನ್ನು ಮಾತ್ರ ನಗುತ್ತಾ ಮುಂದಕ್ಕೆ ಸರಿದಳು. ಅಂಗಡಿಯ ಸಮಯ ಮುಗಿದು ಬೆಳಕನ್ನು ನಂದಿಸಿ ಎಲ್ಲರೂ ಹೊರಟ ಮೇಲೆ , ಹೆಣ್ಣು ಬೊಂಬೆ “ಹೊಸ ವರುಶದ ಶುಬಾಶಯಗಳು” ಎಂದು ಸಿಹಿಯಾದ ದನಿಯಲ್ಲಿ ತನ್ನ ಪಕ್ಕದಲ್ಲಿದ್ದ ಗಂಡು ಗೊಂಬೆಗೆ ಹೇಳಿತು. ಒರಟು ಸ್ವಬಾವವನ್ನೇ ಮಯ್ಗೂಡಿಸಿಕೊಂಡಿದ್ದ ಗಂಡು ಗೊಂಬೆ , ತನ್ನ ಪಕ್ಕ ಹೆಣ್ಣು ಬೊಂಬೆ ನಿಂತಿರುವುದನ್ನು ತನ್ನ ದರ‍್ಬಾರಿಗೆ  ಕುತ್ತು ತರುವ ವಿಶಯವೆಂದೆನಿಸಿ ಏನೂ ಮಾತಾಡದೆ ಸುಮ್ಮನೆಯೇ ನಿಂತಿತ್ತು. ಹೆಣ್ಣು ಬೊಂಬೆ ಮತ್ತೊಮ್ಮೆ ಹೊಸ ವರುಶದ ಶುಬಾಶಯಗಳು ಎಂದು ಹೇಳಿತು. ಆಗ ತನ್ನ ಗರ‍್ವವನ್ನು ಬಿಡದೆ ಉತ್ತರಿಸಲು ಯೋಚಿಸುತ್ತಾ ಗಂಡು ಗೊಂಬೆಯು “ಅದು ನಿನ್ನೆಗೆ ಆಗಿಹೋಯ್ತಲ್ಲ, ಇನ್ನೇನು ಹೊಸ ವರುಶ?” ಎಂದು ಕಡಕ್ ದನಿಯಿಂದ ಉತ್ತರಿಸಿತು. ” ಒಳ್ಳೇದ್ ಹೇಳೋಕೆ ಒಂದ್ ದಿನ ತಡವಾದರೆ ಏನು ತಪ್ಪಿಲ್ಲ, ನೀನೇಕೆ ಯಾವಾಗಲೂ ಗಂಟು ಮುಕದಲ್ಲೇ ಇರುತ್ತಿಯಾ?” ಎಂದು ಹೆಣ್ಣು ಬೊಂಬೆ ನಿದಾನವಾಗಿ ಕೇಳಿತು.

“ಹಾಗೇನೂ ಇಲ್ಲ. ನಾನು ಸರಿಯಾಗೇ ಇದ್ದೇನೆ.”

“ನೋಡು ನೋಡು.. ಈಗಲೂ ಸಹ ಹಾಗೇ ಇದೆ ನಿನ್ನ ಮುಕ” ಎನ್ನುತ್ತಾ ಮೆಲ್ಲ ದನಿಯಲ್ಲಿ ನಗಲಾರಂಬಿಸಿತು.

ತಾನೆಂದೂ ಕೇಳಿರದ ಸಿಹಿಯಾದ ದನಿಯನ್ನು ಕೇಳಿದ ಗಂಡು ಗೊಂಬೆ ಹೆಣ್ಣು ಬೊಂಬೆಯ ಸವ್ಂದರ‍್ಯ ಲಹರಿಗೆ ಮಾರುಹೋಯಿತು. “ನೀನು ಗಂಟು ಮುಕದಲ್ಲಿದ್ದರೆ , ಅಜ್ಜನಂತೆ ಕಾಣುತ್ತೀಯ.. ಸ್ವಲ್ಪ ನಗು” ಎಂದು ದರ‍್ಬಾರಿನ ರಾಜನಿಗೆ ದರ‍್ಬಾರು  ಮಾಡಿತು ಹೆಣ್ಣು ಬೊಂಬೆ. ತನ್ನ ಬದುಕಿನ ಮೊಟ್ಟ ಮೊದಲ ನಗು ಅದಾಗಿತ್ತು. ಮೊದಲ ಚುಂಬನಕ್ಕೂ ಹೆಚ್ಚಿನ ಸಂತೋಶ ಅವೆರಡೂ ಗೊಂಬೆಗಳಲ್ಲಿ..!

ಬೆಳಗಿನ ಸಮಯದಲ್ಲಿ ಸುಮ್ಮನ್ನಿದ್ದು, ಅಂಗಡಿಯ ಕೆಲಸಗಾರರನ್ನು ಗಮನಿಸುತ್ತಾ ಕಾಲ ಕಳೆಯುವ ಗೊಂಬೆಗಳು ಅಂಗಡಿ ಮುಚ್ಚಿದ ಬಳಿಕ ತಮ್ಮ ಮಾತನ್ನು ಶುರುಮಾಡುತ್ತಿದ್ದವು.. ಕೆಲವೇ ದಿನಗಳಲ್ಲಿ ಆವೆರಡೂ ಗೊಂಬೆಗಳು ಪ್ರತೀ ದಿನೇ ಅಂಗಡಿಯು ಮುಚ್ಚುವ ವೇಳೆಗಾಗಿ ಕಾಯತೊಡಗಿದವು. ಬೆಳಗಿನ ಹೊತ್ತಿನಲ್ಲಿ ಅವರಿಗಿದ್ದ ಏಕಯ್ಕ ಮನರಂಜನೆಯೆಂದರೆ ಕೆಲಸಗಾರ ಮತ್ತು ಕೆಲಸಗಾರ‍್ತಿಯ ಒಡನಾಟ. ಅವರಿಬ್ಬರೂ ಒಬ್ಬರಿಗೊಬ್ಬರು ಇಶ್ಟ ಪಡುತ್ತಿದ್ದರೂ, ಹೇಳಿ ಹೇಳದಂತೆ ಜೊತೆಗಿರುತ್ತಿದ್ದರು. ಆ ಒಂದು ದಿನ, ಕೆಲಸಗಾರ ಅವಳಲ್ಲಿಗೆ ಬಂದು “ನೀನಿರದೆ ನನ್ನಿಂದ ಇರಲಿಕ್ಕಾಗಲ್ಲ. ನಾವಿಬ್ಬರೂ ಮದುವೆಯಾಗೋಣ.” ಎಂದು ಹೇಳಿಯೇ ಬಿಟ್ಟ.

“ದಾರಿ ಬಿಡು. ನನಗೆ ಕೆಲಸವಿದೆ. ಇದೆಲ್ಲಾ ಸರಿಹೋಗದು” ಎಂದ ಆಕೆ ಆತನನ್ನು ದೂಡಿ ಮುನ್ನಡೆದಳು.

“ಏಕೆ?. ನಾನೆಂದರೇ ನಿನಗೆ ಇಶ್ಟವಿಲ್ಲವೇ ?”

“ಇಶ್ಟಕ್ಕಿಂತ  ಮೇಲೆ ವಿದಿಯಿದೆಯೆಲ್ಲಾ. ಇದು ಸರಿಹೋಗದು. ಬೇಡ!”

ಅವರಿಬ್ಬರ ಆ ಮಾತುಗಳನ್ನಾಲಿಸಿದ ಗೊಂಬೆಗಳು ರಾತ್ರಿಯ ವೇಳೆಗೆ ಆ ವಿಶಯವನ್ನು ಎತ್ತಿದವು.

“ಅವರಿಬ್ಬರ ಬಗ್ಗೆ ಏನೆನ್ನಿಸುತ್ತದೆ ನಿನಗೆ?” ಎಂದು ಹೆಣ್ಣು ಬೊಂಬೆ ಯಾವತ್ತೂ ಇಲ್ಲದ ಬೇಸರದಿಂದ ಕೇಳಿತು.

“ಹುಡುಗಿಗೆ ಇಶ್ಟವಾದರೂ ಒಪ್ಪುತ್ತಿಲ್ಲ ಅವಳು. ಆತ ನೋವಿಡುವ ಸಂಗತಿಯನ್ನು ನೋಡಲಾಗುತ್ತಿಲ್ಲ”. ಗಂಡು ಗೊಂಬೆಯೂ ಯಾವತ್ತೂ ಇರದ ಕನಿಕರದಿಂದ ನುಡಿಯಿತು.

“ನೋವಿಟ್ಟು ಪ್ರಯೋಜನವೇನು? ಈ ಮನುಶ್ಯರಿಗೆ ತಾವು ಇಶ್ಟಪಟ್ಟ ಬದಕನ್ನು ಬದುಕಲು ಬರುವುದಿಲ್ಲ.. ಅವರಿಗೆ ಬಯ. ಯಾರೇನೆನ್ನುತ್ತಾರೋ ಎಂಬ ಅಳುಕು. ಕನಸಿಲ್ಲದ ಕುರುಡು ಜೀವಿಗಳು.” ಹೆಣ್ಣು ಬೊಂಬೆಯ ಮಾತನ್ನು ಕೇಳಿದ ಗೊಂಬೆ ಒಂದೆರಡು ಕ್ಶಣ ದಿಗ್ಬ್ರಮೆಯಲ್ಲಿ ನಿಂತಿತ್ತು.. ತನ್ನ ಕಿವಿಯನ್ನು ನಂಬಲಾರದೆ.

“ಏಕೆ ಹಾಗೆನ್ನುತ್ತಿಯಾ? ಕನಸಿಲ್ಲದ ಕುರುಡರೇ?”

“ಹವ್ದು ಮತ್ತೆ. ತಾ ಕಾಣುವ ಕನಸನ್ನು ನಿಜ ಮಾಡಿಕೊಳ್ಳುವವನೇ , ಅತವಾ ಪ್ರಯತ್ನಿಸುವವನೇ ನಿಜವಾದ ಮನುಶ್ಯ”. ಎಂದಿತು ಹೆಣ್ಣು ಬೊಂಬೆ.

“ನಿನಗೇನಾದರೂ ಕನಸುಗಳಿವೆಯೇ?” ಎಂದು ಅಚ್ಚರಿಯಿಂದ ಕೇಳಿತು ಗಂಡು ಗೊಂಬೆ.

” ಇಲ್ಲದೇ ಮತ್ತೆ. ನನಗೆ ಒಂದು ಬಾರಿಯಾದರೂ ಸಿನಿಮಾದಲ್ಲಿ ಕಾಣಿಸಿಕೊಳ್ಳಬೇಕೆಂಬ ಆಸೆ. ಅದು ನಡೆದೇ ನಡೆಯುತ್ತದೆ.. ನೀ ಬೇಕಾದರೆ ನೋಡು” ಎಂದು ತನ್ನ ಅರಳಿದ ಮೊಗದಿಂದ ಏನೋ ಸಂತೋಶದ ಬರವಸೆಯಲ್ಲಿ ಹೇಳುತ್ತಾ “ನಿನಗ್ಯಾವ ಕನಸಿಲ್ಲವೇ? ಎಂದು ಗಂಡು ಗೊಂಬೆಯನ್ನು ಕೇಳಿತು.

“ನನಗೆ ನಿನ್ನ ಜೊತೆಯಲ್ಲಿರಲು ಮಾತ್ರ ಆಸೆ ” ಎಂದು ಹೇಳಬೇಕೆನಿಸಿತು, ಆದರೆ ಹೇಳಲಿಲ್ಲ.. ಸುಮ್ಮನಾಯಿತು.

ಹೆಣ್ಣು ಬೊಂಬೆಗೆ ಗಂಡು ಗೊಂಬೆಯ ಮವ್ನದ ಅರಿವಾಗಲಿಲ್ಲ.. ಅದು ತನ್ನ ಮುಂದಿನ ಸಿನಿ ಬದುಕನ್ನು ಕಸನು ಕಾಣ ತೊಡಗಿತು.

ಕೆಲ ದಿನಗಳ ಬಳಿಕ, ಆ ಅಂಗಡಿಯ ಕೆಲಸಗಾರ‍್ತಿಯು ಅಂಗಡಿಯವರೆಲ್ಲರಿಗೂ ತನ್ನ ಮದುವೆಯ ಆಮಂತ್ರಣ ಪತ್ರಿಕೆಯನ್ನು ಹಂಚುತ್ತಿದ್ದಳು. ಅಲ್ಲಿರುವ ಕೆಲಸಗಾರನೊಬ್ಬನನ್ನು ಹೊರತು ಪಡಿಸಿ. ಆತ ಆಡಲು ಮಾತಿಲ್ಲದೆ ಸುಮ್ಮನಾಗಿ ಕುಳಿತಿದ್ದ. ಈಕೆ ಆತನನ್ನು ಮಾತಾಡಿಸುವಶ್ಟು ದಯ್ರ‍್ಯ ಮಾಡಲಿಲ್ಲ.. ಆಕೆಗೆ ತಿಳಿದಿತ್ತು, ಈ ಕಾಲ ಬಂದೇ ಬರುತ್ತದೆ ಎಂದು. ಅಶ್ಟರಲ್ಲಿ  ಅಂಗಡಿಯ ಮುಂದೆ ಒಂದು ದೊಡ್ಡ ಗಾಡಿ ಬಂದು ನಿಂತಿತ್ತು. ಗಾಡಿಯಿಂದ ಇಳಿದ ಒಂದೆರಡು ಮಂದಿ ಮಾಲಿಕನ ಬಳಿ ಎಂತದೋ ಗುಸು ಗುಸು ಮಾತನಾಡಿ , ಒಮ್ಮೆಲೇ ಅಲ್ಲಿದ್ದ ಗೊಂಬೆಗಳು ಕೆಲವನ್ನು ಗಾಡಿಯೊಳಗೆ ರವಾನಿಸಲು ಶುರು ಮಾಡಿದರು. ಅಂಗಡಿಯ ಮಾಲಿಕ “ಹುಶಾರಾಗಿ ಸಾಗಿಸ್ರಪ್ಪ..” ಅಂತ ಕೇಳಿಕೊಂಡ. ಕೆಲಸದವ ಮಾಲಿಕನ ಮೇಜಿನ ಮೇಲಿದ್ದ ಪತ್ರಿಕೆಯನ್ನು ಕಯ್ಗೆತ್ತಿಕೊಂಡು ನೋಡುತ್ತಿದ್ದಾಗ , ಗೊಂಬೆಯನ್ನು ಸಾಗಿಸಲು ಬಂದವರಲ್ಲಿ ಒಬ್ಬ ಆತನನ್ನು ಕರೆದ. ಕಯ್ಯಲ್ಲಿದ್ದ ಪತ್ರಿಕೆಯನ್ನು ಹಾಗೆ ಬಿಟ್ಟು ಕೆಲಸದವ ಅವನಲ್ಲಿಗೆ ಹೋಗಿ “ಎಲ್ಲಿಗೆ ಗೊಂಬೆಗಳನ್ನ ಸಾಗಿಸ್ತಿದೀರ?” ಎಂದ.

“ಇಲ್ಲೇ ಪಕ್ಕದಲ್ಲೇ, ರಾಜ್ ಮಹಲ್ ರಸ್ತೆಯಲ್ಲಿ ಸಿನಿಮಾ ಶೂಟಿಂಗ್ ನಡೀತಿದೆ. ಮನೆಯೊಂದನ್ನು ಗೊಂಬೆಗಳಿಂದ ಅಲಂಕರಿಸುವ ದ್ರುಶ್ಯ. ಅದಕ್ಕಾಗಿ.”

ಕೆಲಸದವನ ಮನಸ್ಸು ಇಲ್ಲಿರಲೇ ಇಲ್ಲ. ಗೊಂಬೆಗಳನ್ನೆಲ್ಲಾ ದೊಡ್ಡ ಡಬ್ಬಿಯೊಂದರಲ್ಲಿ ತುಂಬುತ್ತಿದ್ದ. ಸಿನಿಮಾ ಮಂದಿಯವನನೊಬ್ಬ, ಈ ಜೋಡಿ ಗೊಂಬೆಗಳನ್ನು, ಉಳಿದ ಗೊಂಬೆಗಳ ಜೊತೆ ಎತ್ತಿಕೊಂಡು ಡಬ್ಬಿಯಲ್ಲಿಡಲು ಬರುವಾಗ ಕೆಳಗೆ ಬಿದ್ದಿದ್ದ ಪತ್ರಿಕೆಯ ಮೇಲೆ ಕಾಲಿಟ್ಟು, ಕಾಲು ಜಾರಿ ಕಯ್ಯಲ್ಲಿದ್ದ ಗೊಂಬೆಗಳನ್ನು ನೆಲಕ್ಕುರುಳಿಸುವುದರಲ್ಲಿದ್ದ. ಮಂಡಿಯೂರಿ ಕಯ್ಗೆ ಸಿಕ್ಕ ವಸ್ತುವನ್ನು ಗಾಳಿಯಲ್ಲೇ ತಿರುಗಿಸಿ ಗಟ್ಟಿಯಾಗಿ ಹಿಡಿದುಕೊಂಡ. ಉಳಿದ ಗೊಂಬೆಗಳು ದಿಕ್ಕಿಗೊಂದು ಹಾರಿದವು. ಕಯ್ಯಲ್ಲಿ ಉಳಿದದ್ದು ಹೆಣ್ಣು ಬೊಂಬೆ ಮಾತ್ರ. . . !

ಕೆಳಗೆ ಬಿದ್ದ ಗಂಡು ಗೊಂಬೆಗೆ ಜೋರಾದ ಪೆಟ್ಟಾಗಿತ್ತು. ಬಲವಾದ ಏಟಿನಿಂದ ತನ್ನ ಟೋಪಿ ಕಳಚಿ ಬೋಳು ತಲೆಯು ಕುರ‍್ಚಿಯ ಕೆಳಗೆ ನಸುಕಿ ಹೋಗಿತ್ತು. ಇಡೀ ಅಂಗಡಿಯು ಒಂದು ಕ್ಶಣ ಮಿಂಚೊಡೆದಂತೆ ನಿಂತಿತ್ತು. ಒಡೆದ ಗೊಂಬೆಗಳನ್ನು ಪಕ್ಕದಲ್ಲಿಟ್ಟು ಅದಕ್ಕೂ ಸೇರಿ ರೊಕ್ಕ ವಸೂಲಿ ಮಾಡಿದ ಅಂಗಡಿಯ ಮಾಲಿಕ. ಉಳಿದ ಗೊಂಬೆಗಳ ಜೊತೆ , ಹೆಣ್ಣು ಬೊಂಬೆಯೂ ಅಂಗಡಿಯಿಂದ ಹೊರ ನಡೆಯಲು ಸಿದ್ದವಾಗಿತ್ತು. ಆಮಂತ್ರಣ ಪತ್ರಿಕೆಯನ್ನು ಎಲ್ಲರಿಗೂ ಕೊಟ್ಟು ಕೆಲಸದವಳು ಸಹ ಅಂಗಡಿಯಿಂದ ಹೊರ ನಡೆದಳು. ಸಿನಿಮಾ ತಂಡ ಅಂಗಡಿಯನ್ನು ಬಿಟ್ಟೋದ ಬಳಿಕ , ಅಲ್ಲಿದ್ದ ಕೆಲಸದವ ಗಂಡು ಗೊಂಬೆಯನ್ನು ಎತ್ತಿಡಿದು ಅದರ ಸ್ತಳದಲ್ಲಿ ಇಡಲು ಹೋದ.  ಅಶ್ಟರಲ್ಲಿ ಅಂಗಡಿಯ ಮಾಲಿಕ ” ಅಯ್ಯೋ ಬಿಡಪ್ಪ , ಇನ್ನೇನ್ ಆ ಗೊಂಬೇನ ಅಲ್ಲಿಡ್ತಿಯಾ? ಅದಕ್ಕೆ ಈಗ ಜೋಡಿ ಗೊಂಬೇನೂ ಇಲ್ಲ.. ಹೇಗೋ ಅದಕ್ಕೆ ಎರಡರಶ್ಟು ವಸೂಲಿ ಮಾಡಿದೀನಿ ಬಿಡು” ಎಂದು ನಗುತ್ತಾ ತನ್ನ ಕುರ‍್ಚಿಯಲ್ಲಿ ಕಾಲ ಮೇಲೆ ಕಾಲಾಕಿಕೊಂಡು ಕುಳಿತ. ಕೆಲಸದವ ಗೊಂಬೆಯನ್ನು ಕಯ್ಯಲ್ಲಿಟ್ಟುಕೊಂಡು ನೆಲದ ಮೇಲೆ ಕುಳಿತ. ಕುಳಿತ ಎನ್ನುವುದಕ್ಕಿಂತ ಕುಸಿದು ಬಿದ್ದ ಎನ್ನಬಹುದು. ಎಲ್ಲಾ ಬೊಂಬೆಗಳು ಅವನನ್ನು ನೋಡಿ ನಗುವಂತೆ ಆತನಿಗೆ ಬಾಸವಾಯಿತು. ಈ ಗಂಡು ಗೊಂಬೆಯನ್ನು ಬಿಟ್ಟು. ಆತನಿಗೆ ತನ್ನ ಅಳಲನ್ನು ಈ ಗೊಂಬೆಯ ಬಳಿ ಹೇಳಬೇಕೆನಿಸಿತು. ” ಹುಡ್ಗೀರ್ ಇರೋದ್ ನಾವ್ ಅವ್ರ್ನ ಇಶ್ಟ ಪಡೋಕೆ, ನಮ್ನ ಅವ್ರು ಇಶ್ಟಾಪಡೋಕೆ ಅಲ್ಲ. ಅಲ್ವಾ?” ಅವನ ಕಣ್ಣೀರು ಗೊಂಬೆಯ ಬೋಳು ತಲೆಯ ಮೇಲೆ ಬಿದ್ದು ಅದು ಜಾರಿ ಗೊಂಬೆಯ ಕಣ್ಣಿನಿಂದ ಬರುವಂತೆ ಕಾಣುತಿತ್ತು. ಆತನ ಕೊರಗಿಗೆ ಗೊಂಬೆಯ ಪ್ರತಿದನಿಸುತ್ತಿದ್ದರೂ ಆ ದನಿ ಕೇಳಿಸುತ್ತಿರಲಿಲ್ಲ. ಆತ ಮಾಲಿಕನಿಗೂ ಏನೂ ಹೇಳದೆ ಆಗೊಂಬೆಯನ್ನು ಅಲ್ಲೇ ಇಟ್ಟು ಅಂಗಡಿಯಿಂದ ಒಂದೇ ಸಮನೆ ಹೊರ ನಡೆದ. ಮಾಲಿಕನ ಕೂಗನ್ನು ಲೆಕ್ಕಿಸದೆ.

ಸ್ವಲ್ಪೋತ್ತಿನಲ್ಲಿ ಸಿನಿಮಾ ಗುಂಪಿನವ ಮತ್ತೊಬ್ಬ ಬಂದ. ” ರೀ ರೀ .. ಸ್ವಾಮಿ ಒಡೆದ ಗೊಂಬೆಗಳೆಲ್ಲ ಎಲ್ಲಿ ??” ಅಂತ ಮಾಲಿಕನ ಮುಂದೆ ಚಟಪಡಿಸಿದ.

“ಯಾಕಪ್ಪ.? ಅದಕ್ಕೇ ಆವಾಗ್ಲೇ ರೊಕ್ಕ ಕೊಟ್ರಲ್ಲ.. ”

“ಅಯ್ಯೋ ರೊಕ್ಕ ಅಲ್ಲ ಸ್ವಾಮಿ. ಅಲ್ಲಿ ಡಯ್ರೆಕ್ಟ್ರು ಕೂಗ್ತಾವ್ರೆ.. ” ಇನ್ನು ತನ್ನ ದನಿಯನ್ನು ಸುದಾರಿಸುವುದರಲ್ಲೇ ಇದ್ದ ಆತ.

“ನೋಡಪ್ಪ, ನಾನೇನು ಮೋಸ ಮಾಡಿಲ್ಲ.. ಅದರ ಬೆಲೆನೇ ಅಶ್ಟು” ಮಾಲಿಕ ತನ್ನ ಕಾಲನ್ನು ಕೆಳಗಿರಿಸಿದ.

“ಸರ್, ನೀವ್ ತುಂಬಾ ಒಳ್ಳೇವ್ರೆ. ಆದ್ರೆ ಬಡ್ಡಿ ಮಗ ಡಯ್ರೆಕ್ಟ್ರು.! ಅವ್ನು ನಿಮ್ ಅಂಗಡೀಲಿ ಯಾವ್ದೋ ಜೋಡಿ ಗೊಂಬೆ ನೋಡಿದ್ನಂತೆ. ಹೆಣ್ಣು ಬೊಂಬೆ ಮಾತ್ರ ಇದೆ ಗಂಡಿಲ್ಲ ಅಂತ ಕೂಗ್ತಿದಾನೆ.”

” ಅವೆಲ್ಲಾ ಒಡೆದೋಯ್ತಲ್ಲಪ್ಪಾ..! ?”

“ಪರವಾಗಿಲ್ವಂತೆ .. ಆ ಗೊಂಬೆಗಳನ್ನ ಸ್ವಲ್ಪ ಕೊಟ್ಬಿಡಿ ಸರ್.”

” ಅದಕ್ಕೇನಂತೆ , ಅಲ್ಲೇ ಬಿದ್ದಿದೆ ತಂಗೊಂಡ್ ಹೋಗು” ಅಂಗಡಿಯ ಮಾಲಿಕ ಮತ್ತೆ ಕಾಲ ಮೇಲೆ ಕಾಲಾಕಿಕೊಂಡು ನಗುತ್ತಾ ಹೇಳಿದ.

* * * * * * *

ಕ್ಯಾಮೆರ ಶುರುವಾಯಿತು ಆಯಿತು. ಕುಕ್ಕು ಯಂತ್ರದ ಪಕ್ಕದಲ್ಲಿದ್ದವರು ಪೂರ್‍ತಿ ಏಕಾಗ್ರತೆಯಿಂದ ಅದನ್ನು ನಿಯಂತ್ರಿಸುತ್ತಿದ್ದಾರೆ. ಬೆಳ್ಳಿ ಉಡುಪಿನ ಹೆಣ್ಣು ಬೊಂಬೆಯು ಕ್ಯಾಮೆರಾಗೆ ಒಳ್ಳೆ ನಿಲುವು ಕೊಡುತ್ತಿದೆ. ಅದರ ಪಕ್ಕದಲ್ಲಿ ಟೋಪಿ ದರಿಸಿದ ಬೋಳು ತಲೆಯ ಗಂಡು ಗೊಂಬೆಯೊಂದು ತನ್ನ ದಾಟಿಯಲ್ಲೇ ನಿಂತಿದೆ. ಕ್ಯಾಮೆರ ಹಿಂದಕ್ಕೆ ಸರಿಯುತ್ತ ಮನೆಯ ದೊಡ್ಡ ಬಾಗಿಲ ಬಳಿ ಬರುತ್ತಿದೆ. “ನೋಡಿದ್ಯ ನಾನ್ ಸಿನಿಮಾದಲ್ಲಿ ಕಾಣಿಸ್ಕೋತೀನಿ… ” ಅನ್ನೋ ಹೆಣ್ಣು ಬೊಂಬೆಯ ದನಿ ಕೇಳಿಸುತ್ತೆ.

(ಚಿತ್ರ: www.prajavani.net )

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. smhamaha says:

    ಸಕ್ಕತ ಆಗಿ ಇದೆ .. ವಿನೋದಣ್ಣ ನಿಮ್ಮ ಬಾಳಿನಲ್ಲಿ ನಡಿದ ಗಟನೆ ಇದ್ದಂಗೆ ಕಾಣುತ್ತೆ .. ಅಸ್ಟು ಆಳವಾಗಿ ತಟ್ಟುತ್ತೆ “ಹುಡ್ಗೀರ್ ಇರೋದ್ ನಾವ್ ಅವ್ರ್ನ ಇಶ್ಟ ಪಡೋಕೆ, ನಮ್ನ ಅವ್ರು ಇಶ್ಟಾಪಡೋಕೆ ಅಲ್ಲ. ಅಲ್ವಾ” ……….ಹಿಂಗೆ ಹೆಚ್ಚು ಬರಲಿ

ಅನಿಸಿಕೆ ಬರೆಯಿರಿ: