ಕಣ್ಣಿನ ಮಾತು

– ಹರ‍್ಶಿತ್ ಮಂಜುನಾತ್.

eye-06

ಸ್ವಪ್ನಗಳಾ ಹೊಸ ಕಾತೆಯನು
ಕಣ್ಗಳಲೇ ತೆರೆದೆ,
ಬಣ್ಣಗಳಾ ಹೊಸ ಲೋಕವನು
ನೋಟದಲೇ ಬರೆದೆ.

ಮನಸು ಮವ್ನಕ್ಕೆ ಜಾರಿದಂತೆ
ಕಣ್ಗಳೇ ಮಾತನು ಮುಗಿಸುತಿದೆ,
ಮಾತು ಮವ್ನಕ್ಕೆ ಅಂಟಿದಂತೆ
ಕಣ್ಣಿಗೆ ರಂಗು ಹೆಚ್ಚುತ್ತಿದೆ.

ಮನದ ದನಿ ಮಾರ್‍ದನಿಯಾಗಿ
ಕಣ್ಗಳೊಳಗೇ ಸೇರುತಿದೆ,
ಬಸಿರು ಕಟ್ಟಿದ ಮೋಡಗಳಿಂದ
ಮಳೆಯು ಮಾತಾಗಿ ಸುರಿಯುತಿದೆ.

ಆ ರವಿಯು ನಿತ್ಯ ಸಾಯುವನು
ಈ ಬುವಿಗೆ ಏನೋ ಹೇಳಲಾಗದೇ,
ಕಣ್ಣಿನ ಬಾಶೆಯ ಅರಿತರೆ ರವಿಯು
ಮವ್ನದೇ ಪ್ರೀತಿಯ ಗೆಲ್ಲುವನು.

ಹೂವಿಗು ದುಂಬಿಗು ಏನಿಂತು ಪ್ರೀತಿ
ಮಾತೇ ಇರದ ಸಮಾಗಮದ ರೀತಿ,
ಅದಕೇ ಪ್ರೀತೀಲಿ ಮವ್ನವು ಹೀಗೆ
ಕಣ್ಗಳೇ ಎಲ್ಲಾ ಹೇಳುತಿರಲು.

ಮಾಯಾಜಿಂಕೆಯನೂ ಹಿಡಿದಂತೆ
ಶಬ್ದವೇದಿಯನೂ ಕಲಿತಂತೆ,
ಕನಸ ಕುಸುರಿಯನು ಕಟ್ಟಿದಂತ
ಕಣ್ಣಿನ ಮಾತು ಪ್ರೇಮಿಗೇ ಸ್ವಂತ …!

(ಚಿತ್ರ: www.orinfor.gov.rw )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: