ನಮ್ಮ ಉಸಿರಾಟದ ಏರ‍್ಪಾಟು
ಉಸಿರಾಟದ ಏರ‍್ಪಾಟು-ಬಾಗ 1:
ಒಡಲರಿಮೆಯ ಸರಣಿ ಬರಹಗಳ ಸಾಲಿನ ಈ ಕಂತಿನಲ್ಲಿ, ಉಸಿರಾಟದ ಏರ‍್ಪಾಟಿನ ಬಗ್ಗೆ ತಿಳಿಯೋಣ.
ಉಸಿರಾಡುವುದು ಎಂದರೇನು?
ಗಾಳಿಯನ್ನು ಮೂಗು/ಬಾಯಿಯಿಂದ ಎಳೆದು ಕೊಳ್ಳುವುದು, ಹಾಗು ಹೊರ ಹಾಕುವುದು.
ನಾವು ಏಕೆ ಉಸಿರಾಡಬೇಕು?
ನಮ್ಮ ಮಯ್ಯೊಳಗಿನ ಪ್ರತಿಯೊಂದು ಸೂಲುಗೂಡು (cell) ಹದುಳವಾಗಿ ಕೆಲಸ ಮಾಡಲು ಕಸುವು (energy) ಬೇಕು. ಸೂಲುಗೂಡುಗಳ (cells) ಮಟ್ಟದಲ್ಲಿ ನಾವು ತಿನ್ನುವ ಕೂಳಿನ ಅಂಶಗಳನ್ನು ಕಸುವನ್ನಾಗಿಸುವ (energy) ಹಮ್ಮುಗೆಯನ್ನು ತರುಮಾರ‍್ಪಿಸುವಿಕೆ (metabolism) ಎಂದು ಕರೆಯುತ್ತಾರೆ. ತರುಮಾರ‍್ಪಿಸುವಿಕೆಗೆ ಬೇಕಾದ ಉಸಿರುಗಾಳಿಯನ್ನು (oxygen) ಒದಗಿಸಲು ಉಸಿರಾಟವು ನೆರವಾಗುತ್ತದೆ.
ಕಾರ‍್ಬನ್ ಡಯಾಕ್ಸಾಯಡ್ (carbon di-oxide) ತರುಮಾರ್‍ಪಿಸುವಿಕೆಯ ಹಮ್ಮುಗೆಯಲ್ಲಿ ಉಂಟಾಗುವ ಕಸಗಳಲ್ಲೊಂದು. ಕಾರ‍್ಬನ್ ಡಯಾಕ್ಸಾಯಡ್, ಮಯ್ಯೊಳಗೇ ಉಳಿದುಕೊಂಡರೆ ಮಯ್ಯಿಗೆ ಅದು ಕೆಡುಕುಂಟು ಮಾಡುತ್ತದೆ. ಸೂಲುಗೂಡುಗಳಿಂದ ಕಾರ‍್ಬನ್ ಡಯಾಕ್ಸಾಯಡ್ ಹೊರಹಾಕಲು ಉಸಿರೇರ‍್ಪಾಟು ಬೇಕೇಬೇಕು.
ನಾವು ಉಸಿರಾಡುವ ಹಮ್ಮುಗೆಯನ್ನು ಅರಿಯುವ ಮೊದಲು, ಈ ಉಸಿರಾಟದಲ್ಲಿ ಪಾಲ್ಗೊಳ್ಳುವ ಇಟ್ಟಳಗಳ (structures) ಬಗ್ಗೆ ತಿಳಿದುಕೊಳ್ಳುವುದು ಒಳಿತು.
ಉಸಿರೇರ‍್ಪಾಟಿನ ಒಡಲರಿಮೆಯಲ್ಲಿ (anatomy) ಮೂರು ಮುಕ್ಯ ಬಾಗಗಳಿವೆ: (ತಿಟ್ಟ 1 ನೋಡಿ)
1) ಗಾಳಿಜಾಡು (respiratory tract)
2) ಉಸಿರುಚೀಲಗಳು (lungs)
3) ಉಸಿರಾಟದ ಕಂಡಗಳು (respiratory muscles)
ಗಾಳಿಯಜಾಡು (respiratory tract): ಗಾಳಿಜಾಡನ್ನು, ಮೇಲ್ಗಾಳಿಜಾಡು (upper respiratory tract) ಹಾಗು ಕೆಳಗಾಳಿಜಾಡು (lower respiratory tract) ಎಂದು ಬೇರ‍್ಪಡಿಸಬಹುದಾಗಿದೆ. ಉಸಿರುಚೀಲ ಹಾಗು ಹೊರಗಿನ ವಾತಾವರಣಗಳ ನಡುವೆ, ಉಸಿರನ್ನು ಸಾಗಿಸಲು ಗಾಳಿಯಜಾಡು ನೆರವಾಗುತ್ತದೆ.
ಮೇಲ್ಗಾಳಿಜಾಡು (upper respiratory tract) ಮೂಗು, ಬಾಯಿ, ಗಂಟಲ್ಕುಳಿ (pharynx) ಮತ್ತು ಉಲಿಪೆಟ್ಟಿಗೆಗಳನ್ನು (larynx/voice box) ಒಳಗೊಂಡಿದೆ.
ಮೇಲ್ಗಾಳಿಜಾಡಿನ ಈ ಬಾಗಗಳ ಬಗ್ಗೆ ಈಗ ತಿಳಿದುಕೊಳ್ಳೋಣ.
1) ಮೂಗು ಮತ್ತು ಮೂಗಿನ ಕುಳಿ (nose & nasal cavity): (ತಿಟ್ಟ 1 & 2) ಮೂಗು ಉಸಿರೇರ‍್ಪಾಟಿನ ಹೊರಗಿನ ಹೊಳ್ಳೆ/ಕಂಡಿಯನ್ನು (external nasal opening) ಮಾಡುತ್ತದೆ. ಇವು ಗಾಳಿಜಾಡಿನ ಮೊದಲನೆಯ ಹಂತವೂ ಹವ್ದು.
ಮೂಗಿನ ಇಟ್ಟಳವು ಮೆಲ್ಲೆಲುಬು (cartilage), ಎಲುಬು (bone), ಕಂಡ (muscle) ಹಾಗು ತೊಗಲಿನಿಂದ (skin) ಮಾಡಲ್ಪಟ್ಟಿದೆ. ಇದು ಮೂಗಿನ ಕುಳಿಯ (nasal cavity) ಮುಂಬಾಗಕ್ಕೆ ಆನಿಕೆ (support) ಹಾಗು ಕಾಪನ್ನು (protection) ಒದಗಿಸುತ್ತದೆ.
ತಲೆಬುರುಡೆ ಹಾಗು ಮೂಗಿನೊಳಗೆ ಕಂಡು ಬರುವ ಟೊಳ್ಳಿನ ತಾಣವೇ ಮೂಗಿನ ಕುಳಿ (nasal cavity). ಈ ಕುಳಿಯ ಗೋಡೆಗಳ ಮೇಲೆ ಕೂದಲು ಹಾಗು ಲೋಳೆ ಪದರದ (mucus membrane) ಹೊದಿಕೆಯಿರುತ್ತದೆ.
ಮೂಗಿನ ಕುಳಿಯ ಮತ್ತೊಂದು ಮುಕ್ಯ ಇಟ್ಟಳವೆಂದರೆ ಮೂಗಿನ ಕೊಳಲೆಲುಬುಗಳು (nasal turbinate bones). ಇವು ಕಿರಿದಾದ ಗುಂಗುರಿನ ಆಕಾರದ ಹೀರುಗದೆಲುಬುಗಳು. ಕೊಳಲೆಲುಬುಗಳು (nasal turbinate) ಮೂಗಿನ ಕುಳಿಯನ್ನು ನಾಲ್ಕು ಕೊರಕಲಿನಂತಹ (groove-like) ಗಾಳಿದಾರಿಗಳನ್ನಾಗಿ ಬೇರ‍್ಪಡಿಸುತ್ತವೆ. ಹೀಗೆ ಮಾಡಲ್ಪಟ್ಟ ಗಾಳಿದಾರಿಯು ಎಳೆದುಕೊಂಡ ಗಾಳಿಯು ಒಂದೇ ತೆರನಾದ (steady) ಹಮ್ಮುಗೆಯಲ್ಲಿ ಸಾಗಲು ನೆರವಾಗುತ್ತದೆ.
ಮೂಗಿನ ಕುಳಿಯ (nasal cavity) ಮುಕ್ಯ ಕೆಲಸಗಳೆಂದರೆ,
- ಒಳಗೆ ಎಳೆದುಕೊಳ್ಳುವ ಗಾಳಿಯನ್ನು ಮಯ್ ಬಿಸುಪಿನ ಮಟ್ಟಕ್ಕೆ ಕಾಯಿಸುವುದು
- ಒಣಗಾಳಿಯ ನೀರಿನ ಅಂಶವನ್ನು ಹೆಚ್ಚಿಸುವುದು
- ಎಳೆದುಕೊಂಡ ಗಾಳಿಯು ಉಸಿರುಚೀಲವನ್ನು ತಲಪುವ ಮೊದಲು, ಗಾಳಿಯಲ್ಲಿ ಇರಬಹುದಾದ ನಂಜುಕಣಗಳು (toxic particles), ಆವಿ(gases), ದೂಳು, ಮಸಿ, ಬೂಸ್ಟು(fungus), ದಂಡಾಣು(bacteria) ಹಾಗು ನಂಜುಳಗಳನ್ನು(virus) ಸೋಸುವುದು. ಗಾಳಿಯು ಉಸಿರುಚೀಲಗಳಿಂದ(lungs) ಹೊರಹೋಗುವಾಗ, ಆವಿ ಹಾಗು ಬಿಸುಪನ್ನು ಮೂಗಿನ ಕುಳಿ (nasal cavity) ಹೀರಿಕೊಳ್ಳುತ್ತದೆ.
2) ಬಾಯಿ/ಬಾಯ್ಕುಳಿ (oral cavity): ಬಾಯ್ಕುಳಿ ಉಸಿರಾಟದ ಎರಡನೇ ಮಟ್ಟದ ಕಂಡಿ. ಸಾಮಾನ್ಯವಾಗಿ ಉಸಿರಾಟವು ಮೂಗಿನ ಮೂಲಕ ನಡೆಯುತ್ತದೆ. ಹೆಚ್ಚಿನ ಮಟ್ಟದಲ್ಲಿ ನಮ್ಮ ಮಯ್ಗೆ ಉಸಿರಾಟವು ಬೇಕಾದಾಗ, ಬಾಯ್ಕುಳಿಯ ಮೂಲಕವೂ ಉಸಿರನ್ನು ಎಳೆದುಕೊಳ್ಳಬಹುದು. ಮೂಗಿನ ಕುಳಿಗೆ (nasal cavity) ಹೋಲಿಸಿದರೆ ಬಾಯ್ಕುಳಿಯ ಉಸಿರುಜಾಡು ಗಿಡ್ಡದಿರುತ್ತದೆ. ಈ ಕಾರಣದಿಂದಾಗಿ, ಬಾಯಿಯಲ್ಲಿ ಎಳೆದುಕೊಳ್ಳುವ ಗಾಳಿಗೆ ಬಿಸುಪು ಹಾಗು ಆವಿಯನ್ನು ಸೇರಿಸಲಾಗುವುದಿಲ್ಲ.
ಬಾಯ್ಕುಳಿಯಲ್ಲಿ ಕೂದಲುಗಳು ಹಾಗು ಮಂದವಾದ ಅಂಟು ಲೋಳೆಯು ಇರದ ಕಾರಣ, ಬಾಯಿಯ ಮೂಲಕ ಒಳಗೆಳೆದುಕೊಳ್ಳುವ ಗಾಳಿಯು ಸೋಸುವಿಕೆಗೆ ಒಳಪಡುವುದಿಲ್ಲ. ಆದರೆ ಬಾಯ್ಕುಳಿಯ ಉಸಿರಾಟದಲ್ಲಿ ಒಂದು ಸಲೆ (advantage) ಇದೆ; ಬಾಯ್ಕುಳಿಯ ದುಂಡಳತೆ (diameter), ಮೂಗಿನ ಕುಳಿಗೆ ಹೋಲಿಸಿದರೆ, ತುಂಬಾ ದೊಡ್ಡದಿರುವುದರಿಂದ, ಬಾಯಿಯಲ್ಲಿ ಉಸಿರಾಡಿದಾಗ ಹೆಚ್ಚಿನ ಗಾಳಿಯನ್ನು ಕಡಿಮೆ ವೇಳೆಯಲ್ಲಿ ಎಳೆದುಕೊಳ್ಳಲು ಸಾದ್ಯ.
3) ಗಂಟಲ್ಕುಳಿ (pharynx): (ತಿಟ್ಟ 1 & 3) ಇದು ಕಂಡದ (muscular) ಆಲಿಕೆಯಂತಿದ್ದು (funnel), ಮೂಗಿನ ಕುಳಿಯ ಹಿಂತುದಿಯಿಂದ ಉಲಿಪೆಟ್ಟಿಗೆ (larynx/voice box) ಹಾಗು ಅನ್ನನಾಳದ (esophagus) ಮುಂತುದಿಯವರೆಗೂ ಚಾಚಿಕೊಂಡಿರುತ್ತದೆ.
ಗಂಟಲ್ಕುಳಿಯಲ್ಲಿ (pharynx) ಮೂರು ಬಾಗಗಳಿವೆ: ಮೂಗ್ಗಂಟಲು (nasopharynx), ಬಾಯ್ಗಂಟಲು (oropharynx) ಹಾಗು ಉಲಿಪೆಟ್ಟಿಗೆಗಂಟಲು (laryngopharynx).
ಮೂಗ್ಗಂಟಲು (nasopharynx) ಮೂಗಿನ ಕುಳಿಯ (nasal cavity) ಹಿಂಬದಿಯಲಿರುತ್ತದೆ. ಮೂಗಿನ ಕುಳಿಯ ಮೂಲಕ ಒಳಬರುವ ಗಾಳಿ, ಮೂಗ್ಗಂಟಲಿನಲ್ಲಿ (nasopharynx) ಹಾಯ್ದು, ಬಾಯ್ಕುಳಿಯ (oral cavity) ಹಿಂಬದಿಯಲ್ಲಿರುವ ಬಾಯ್ಗಂಟಲಿಗೆ (oropharynx) ಇಳಿಯುತ್ತದೆ. ಬಾಯ್ಕುಳಿಯಿಂದ ಒಳಬರುವ ಗಾಳಿಯು, ನೇರವಾಗಿ ಬಾಯ್ಗಂಟಲಿಗೆ (oropharynx) ಇಳಿಯುತ್ತದೆ. ಬಾಯ್ಗಂಟಲಿನಿಂದ ಗಾಳಿಯು ಉಲಿಪೆಟ್ಟಿಗೆಗಂಟಲೆಡೆಗೆ (laryngopharynx) ಸಾಗುತ್ತದೆ.
ಉಲಿಪೆಟ್ಟಿಗೆಗಂಟಲು ಸೇರಿದ ಗಾಳಿಯನ್ನು, ಕಿರುನಾಲಿಗೆಯು (epiglottis) ಉಲಿಪೆಟ್ಟಿಗೆಯ ಕಂಡಿಯೆಡೆಗೆ ತಿರುಗಿಸುತ್ತದೆ. ಕಿರುನಾಲಿಗೆ (epiglottis), ಹಿಂಪುಟಿವ ಮೆಲ್ಲೆಲುಬಿನಿಂದ (elastic cartilage) ಮಾಡಲ್ಪಟ್ಟಿರುವ ಮುಚ್ಚಳ; ಇದು ಅನ್ನನಾಳ (esophagus) ಹಾಗು ಉಸಿರುಗೊಳವೆಯ (trachea) ನಡುವಿನ ಗುಂಡಿಯಂತೆ (switch) ಕೆಲಸವನ್ನು ಮಾಡುತ್ತದೆ. ಗಂಟಲ್ಕುಳಿ (pharynx) ಉಸಿರನ್ನು ಸಾಗಿಸುವುದರ ಜೊತೆಗೆ, ಕೂಳನ್ನೂ ನುಂಗಲು ನೆರವಾಗುತ್ತದೆ.
ಉಸಿರಾಡುವಾಗ, ಕಿರುನಾಲಿಗೆ (epiglottis), ಅನ್ನನಾಳದ (esophagus) ಮೇಲ್ತುದಿಯ ಕಂಡಿಯನ್ನು ಮುಚ್ಚುವುದರ ಮೂಲದ, ಗಾಳಿಯನ್ನು ಉಸಿರುಗೊಳವೆಯೆಡೆಗೆ ತಿರುಗಿಸುತ್ತದೆ. ಕೂಳನ್ನು ನುಂಗುವ ಹಮ್ಮುಗೆಯಲ್ಲಿ, ಇದೆ ಕಿರುನಾಲಿಗೆ (epiglottis), ಉಸಿರುಗೊಳವೆಯನ್ನು ಮುಚ್ಚುತ್ತದೆ; ಈ ಬಗೆಯಾಗಿ ಕೂಳು ಅನ್ನನಾಳದೊಳಕ್ಕೆ ಸಾಗಲು ನೆರವಾಗುತ್ತದೆ. ಇದರಿಂದ ಕೂಳು ಉಸಿರುಗೊಳವೆಯನ್ನು ಹೊಕ್ಕುವುದರಿಂದ, ಆಗಬಹುದಾದ ತೊಂದರೆಯನ್ನು ತಪ್ಪಿಸುತ್ತದೆ.
4) ಗಂಟಲಗೂಡು/ಉಲಿಪೆಟ್ಟಿಗೆ (larynx/voice box): (ತಿಟ್ಟ 1, 4, 5, & 6 ) ಇದು ಉಲಿಪೆಟ್ಟಿಗೆಗಂಟಲು (laryngopharynx) ಹಾಗು ಉಸಿರುಗೊಳವೆಯನ್ನು (trachea) ಜೋಡಿಸುವ ಉಸಿರುಜಾಡಿನ (airway) ಬಾಗವಾಗಿದೆ.
ಮೇಲ್ಕೊರಳಿನ ಬಾಗದಲ್ಲಿ, ನಾಲಗೆಲ್ಲುವಿನ (hyoid bone) ತುಸು ಕೆಳಗೆ ಹಾಗು ಉಸಿರುಕೊಳವೆಯ (trachea) ಮೇಲೆ ಉಲಿಪೆಟ್ಟಿಗೆಯನ್ನು (larynx) ಕಾಣಬಹುದು. ಉಲಿಪೆಟ್ಟಿಗೆಯು ಹಲವು ಮೆಲ್ಲೆಲುಬಿನ (cartilage) ಇಟ್ಟಳಗಳಿಂದ ಮಾಡಲ್ಪಟ್ಟಿದೆ.
ಕಿರುನಾಲಿಗೆ (epiglottis) ಕೂಡ ಉಲಿಪೆಟ್ಟಿಗೆಯನ್ನು ಮಾಡುವ ಮೆಲ್ಲೆಲುಬುಗಳ ತುಂಡುಗಳಲ್ಲೊಂದು. ಕಿರುನಾಲಿಗೆಯ (epiglottis) ಕೆಳಬಾಗದಲ್ಲಿ, ಗುರಾಣಿಕ ಮೆಲ್ಲೆಲುಬು (thyroid cartilage) ಇರುತ್ತದೆ; ಇದನ್ನು ಆದಮನ್ನ ಸೇಬು (adam’s apple) ಎಂದೂ ಕರೆಯುವುದುಂಟು. ಈ ಇಟ್ಟಳವು ಗಂಡಸರಲ್ಲಿ ದೊಡ್ಡದಿರುತ್ತದೆ; ಆದ್ದರಿಂದ ಕೊರಳಿನ ಮುಂಬಾಗದಲ್ಲಿ, ಇದು ಮುಂಚಾಚಿದ ಇಟ್ಟಳದಂತೆ ಕಾಣಿಸುತ್ತದೆ.
ಗುರಾಣಿಕ ಮೆಲ್ಲೆಲುಬು (thyroid cartilage), ಉಲಿಪೆಟ್ಟಿಗೆಯ (larynx) ಮುಂತುದಿಯನ್ನು ತೆರೆದಿಡುವುದರ ಜೊತೆಗೆ, ಉಲಿನೆರಕೆಗಳನ್ನು (vocal folds) ಕಾಯುವ ಕೆಲಸವನ್ನೂ ಮಾಡುತ್ತದೆ. ಗುರಾಣಿಕ ಮೆಲ್ಲೆಲುಬಿನ ಕೆಳಗೆ ಉಂಗುರದ ಆಕಾರವಿರುವ ಉಂಗುರಬಗೆ ಮೆಲ್ಲೆಲುಬು (cricoid cartilage) ಇರುತ್ತದೆ. ಉಂಗುರಬಗೆ ಮೆಲ್ಲುಬು (cricoid cartilage), ಉಲಿಪೆಟ್ಟಿಗೆಯ (larynx) ಹಿಂಬಾಗವನ್ನು ತೆರೆದ ನಿಲುವಿನಲ್ಲಿ (position) ಇಡಲು ನೆರವಾಗುತ್ತದೆ.
ಮೆಲ್ಲೆಲುಬುಗಳಲ್ಲದೆ, ಉಲಿಪೆಟ್ಟಿಗೆಯಲ್ಲಿ ‘ಉಲಿನೆರಕೆ’ಗಳೆಂಬ (vocal folds) ಗೊತ್ತಾದ (special) ಇಟ್ಟಳವೊಂದಿದೆ. ಉಲಿನೆರಕೆಗಳು ಮಾತು ಮತ್ತು ಹಾಡಿನ ಸಪ್ಪಳಗಳನ್ನು ಹುಟ್ಟಿಸುತ್ತವೆ. ಉಲಿನೆರಕೆ (vocal folds), ಉಲಿ ಸಪ್ಪಳಗಳನ್ನು (vocal sounds) ಉಂಟುಮಾಡಲು ಮಿಡಿಯುವ (vibrate) ಲೋಳ್ಪದರದ (mucus membrane) ನೆರಗೆಗಳಾಗಿವೆ. ಉಲಿನೆರಕೆಗಳ ಬಿಗಿತ (tension) ಹಾಗು ಮಿಡಿತದ (vibration) ಒತ್ತರಗಳನ್ನು (speed) ಬದಲಾಯಿಸುವುದರ ಮೂಲಕ ಮಾತಿನ ಏರಿಳಿತವನ್ನು (pitch) ಬದಲಾಯಿಸಬಹುದು.
ಉಸಿರೇರ‍್ಪಾಟಿನ ಮುಂದಿನ ಕಂತಿನಲ್ಲಿ ಕೆಳಗಾಳಿಜಾಡು (lower respiratory tract), ಉಸಿರುಚೀಲಗಳು (lungs) ಹಾಗು ಉಸಿರೇರ‍್ಪಾಟಿನ ಕಂಡಗಳ ಒಡಲರಿಮೆಯನ್ನು (anatomy) ತಿಳಿಸಿಕೊಡುತ್ತೇನೆ.
(ಪದಗಳ ಮುಕ್ಯ ಸೆಲೆ: ಡಾ.ಡಿ.ಎಸ್.ಶಿವಪ್ಪ ಅವರ ವಯ್ದ್ಯ ಪದಕೋಶ)
(ತಿಳಿವಿನ ಮತ್ತು ತಿಟ್ಟ ಸೆಲೆಗಳು:
1.innerbody, 2.buzzle.com, 3.answers.com, 4.riversideonline.com, 5.intechopen.com)
1 Response
[…] ಹಿಂದಿನ ಬಾಗದಲ್ಲಿ ಮೇಲ್ ಗಾಳಿಜಾಡಿನ (upper respiratory tract) ಬಗ್ಗೆ […]