ಕೇಂದ್ರ ಸರ‍್ಕಾರದ ನಡೆ ವಿ.ಹೆಚ್.ಪಿ ಮುಕಂಡರ ಹೇಳಿಕೆಗಿಂತ ಬೇರೆಯೇನಲ್ಲ
ವಿಶ್ವ ಹಿಂದೂ ಪರಿಶತ್ತಿನ ಮುಕಂಡರಾದ ಅಶೋಕ್ ಸಿಂಗಾಲ್ ಅವರು ಪ್ರತೀ ಹಿಂದೂ ಕುಟುಂಬವು ಕಡಿಮೆ ಎಂದರೂ 5 ಮಕ್ಕಳನ್ನು ಹೆರಬೇಕು, ಆ ಮೂಲಕ ಹಿಂದೂಗಳ ಎಣಿಕೆ ಹೆಚ್ಚಿಸಬೇಕು ಎನ್ನುವ ಹೇಳಿಕೆ ಮಾದ್ಯಮಗಳಲ್ಲಿ ವರದಿಯಾಗಿದೆ. ಈ ಹೇಳಿಕೆಗೆ ಬಾರೀ ಟೀಕೆಗಳು ಕೇಳಿಬರುತ್ತಿವೆ. ಕೂಡಣದಲ್ಲಿ ಹಲವು ಮತ, ಜಾತಿ, ನುಡಿ ಜನಾಂಗಳು ಇರುವುದು ಸಹಜ. ಹಾಗಿರುವಾಗ ಒಂದು ಮತದ ಅತವಾ ಜಾತಿಯ ಅತವಾ ನುಡಿಗರ ಎಣಿಕೆಯನ್ನು ಮಾತ್ರ ಹೆಚ್ಚಿಸಬೇಕು ಎನ್ನುವ ನಿಲುವು ಇತರೆ ಮತ ಅತವಾ ಜಾತಿಯ ಅತವಾ ನುಡಿ ಜನಾಂಗಕ್ಕೆ ಮಾರಕ. ಹಾಗಾಗಿ ವಿ.ಹೆಚ್.ಪಿ ಮುಕಂಡರ ಹೇಳಿಕೆಯನ್ನು ಕೇಂದ್ರದ ಕೆಲ ಮುಕಂಡರು ಹಾಗೂ ಮಾದ್ಯಮದವರು ವಿರೋದಿಸಿದ್ದಾರೆ.
ಅಂತೆಯೇ, ಇಂಡಿಯಾದಲ್ಲಿ ಹಲವು ನುಡಿಯಾಡುವ ನುಡಿ ಜನಾಂಗಗಳಿವೆ. ಹಾಗಿರುವಾಗ ಕೇಂದ್ರ ಸರ‍್ಕಾರವು ಬಾರತದ ಒಂದು ಬಾಗದ(ಉತ್ತರ ಬಾರತದ) ಮಂದಿಯ ಎಣಿಕೆಯನ್ನು ಮಾತ್ರ ಹೆಚ್ಚಿಸುವ ಗುರಿ ಹೊಂದಿರುವುದೂ ಸಹ ವಿ.ಹೆಚ್.ಪಿ ಮುಕಂಡರ ಹೇಳಿಕೆಗಿಂತ ಬೇರೆಯೇನಲ್ಲ ಎಂದೆನಿಸುತ್ತದೆ. ವಿ.ಹೆಚ್.ಪಿ. ನವರು ಬಾಯಿ ತೆಗೆದು ಹೇಳುತ್ತಿದ್ದಾರೆ, ಕೇಂದ್ರ ಸರ‍್ಕಾರದವರು ಸದ್ದಿಲ್ಲದೇ ಒಂದು ಬಾಗದ ಜನರ ಮಂದಿಯೆಣಿಕೆ ಹೆಚ್ಚಿರುವಂತೆ ದಕ್ಶಿಣ ಬಾಗದ ಜನರ ಮಂದಿಯೆಣಿಕೆ ಕಮ್ಮಿಯಾಗುತ್ತಾ ಸಾಗುವಂತೆ ನೋಡಿಕೊಳ್ಳುತ್ತಿದ್ದಾರೆ, ಅಶ್ಟೇ ವ್ಯತ್ಯಾಸ. ಯೋಜನಾ ಆಯೋಗದ ಮೂಲಕ ವ್ಯವಸ್ತಿತವಾಗಿ ಉತ್ತರದ ಕೆಲ ರಾಜ್ಯಗಳಿಗೆ ಮಂದಿಯೆಣಿಕೆಯ ಸಮತೋಲನ ಕಾಯ್ದುಕೊಳ್ಳಲು ಇರಬೇಕಾದ TFR ಪ್ರಮಾಣ 2.1 ಕ್ಕಿಂತಲೂ ಹೆಚ್ಚಿನ ಗುರಿಯನ್ನು ಕೊಟ್ಟು ಕರ‍್ನಾಟಕದಂತಹ ದಕ್ಶಿಣದ ರಾಜ್ಯಗಳಿಗೆ 2.1 ಕ್ಕಿಂತಲೂ ಕಡಿಮೆ TFR ಗುರಿ ನೀಡಲಾಗಿದೆ.
TFR ಎಂದರೇನು ?
ಟೋಟಲ್ ಪರ‍್ಟಿಲಿಟಿ ರೇಟ್ ಅತವಾ ರೀಪ್ಲೇಸ್ ಮೆಂಟ್ ರೇಟ್ ಅನ್ನುವುದು ಯಾವುದೇ ಒಂದು ಕೂಡಣದಲ್ಲಿ ಹೆಂಗಸೊಬ್ಬಳಿಗೆ ಆಕೆಯ ಜೀವಿತಾವದಿಯಲ್ಲಿ ಹುಟ್ಟುವ ಸರಾಸರಿ ಮಕ್ಕಳ ಎಣಿಕೆ ಎನ್ನಬಹುದು. ಅಂದರೆ ಒಂದು ಕುಟುಂಬದಲ್ಲಿ ಗಂಡ-ಹೆಂಡತಿ ಇಬ್ಬರಿದ್ದು, ಅವರು ತೀರಿದ ಬಳಿಕ ಮಂದಿಯೆಣಿಕೆ ಏರದೇ, ಇಳಿಯದೇ ಇರಲು ತಂದೆಯ ಜಾಗ ತುಂಬಲು ಒಂದು ಮಗು, ತಾಯಿಯ ಜಾಗ ತುಂಬಲು ಇನ್ನೊಂದು ಮಗು, ಒಟ್ಟು ಎರಡು ಮಕ್ಕಳಾಗಬೇಕಾಗುತ್ತದೆ. ಇದನ್ನೇ ಒಂದು ಇಡೀ ಜನಾಂಗಕ್ಕೆ ವಿಸ್ತರಿಸುವಾಗ ಇನ್ನೂ ಕೆಲ ಅಂಶಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳುತ್ತಾರೆ. ಅವುಗಳೆಂದರೆ ತಡವಾಗಿ ಆಗುವ ಮದುವೆ, ತಡವಾಗಿ ಹುಟ್ಟುವ ಮಕ್ಕಳು, ಹುಟ್ಟಿದ ಮಕ್ಕಳು ಚಿಕ್ಕ ವಯಸ್ಸಿನಲ್ಲೇ ತೀರಿ ಹೋಗುವುದು, ನೆರೆ-ಬರ, ಯುದ್ದಗಳಿಂದ ಅಲ್ಲಿನ ಮಂದಿಯೆಣಿಕೆ ಮೇಲಾಗುವ ಪರಿಣಾಮ ಇತ್ಯಾದಿ ಅಂಶಗಳೆಲ್ಲವನ್ನು ಲೆಕ್ಕಕ್ಕೆ ತೆಗೆದುಕೊಂಡು ಒಂದು ಜನಾಂಗ ತನ್ನ ಮಂದಿಯೆಣಿಕೆಯ ಸಮತೋಲನ ಕಾಯ್ದುಕೊಳ್ಳಲು ಇರಬೇಕಾದ TFR ಪ್ರಮಾಣ 2.1 ಎಂದು ಜಗತ್ತಿನ ಬಹುತೇಕ ದೇಶಗಳು ಒಪ್ಪಿಕೊಂಡಿವೆ. TFR 2.1 ಅಂದರೆ, ಒಟ್ಟಾರೆ 10 ಕುಟುಂಬಗಳಿದ್ದರೆ, ಆ ಕುಟುಂಬಗಳೆಲ್ಲದರಲ್ಲೂ ಇರುವ ಮಕ್ಕಳ ಎಣಿಕೆ 21 ಆಗಿರಬೇಕು.
ಬಾರತ ಸರ‍್ಕಾರವು ಉತ್ತರ ಬಾರತದ ನಾಡುಗಳಾದ ಉತ್ತರ ಪ್ರದೇಶ, ಬಿಹಾರ ಮತ್ತು ಮದ್ಯಪ್ರದೇಶಗಳಿಗೆ ಕ್ರಮವಾಗಿ 2.8, 3.2 ಮತ್ತು 3.0 TFR ಗುರಿಯನ್ನು ನಿಕ್ಕಿ ಮಾಡಿ ಕರ‍್ನಾಟಕಕ್ಕೆ 1.8 ಗುರಿಯನ್ನು ನಿಕ್ಕಿ ಮಾಡಿರುವುದು ಕರ‍್ನಾಟಕದ ಪಾಲಿಗೆ ಮುಳ್ಳಲ್ಲವೇ ? ಗಮನಿಸಿ, ಒಂದು ನುಡಿ ಜನಾಂಗ ತನ್ನ ಮಂದಿಯೆಣಿಕೆಯ ಸಮತೋಲನ ಕಾಯ್ದುಕೊಳ್ಳಲು ಇರಬೇಕಾದ TFR ಪ್ರಮಾಣ 2.1. ಆದರೆ ಕರ‍್ನಾಟಕಕ್ಕೆ ಕೊಟ್ಟಿರುವ ಗುರಿ 2.1 ಕ್ಕಿಂತಲೂ ಕಡಿಮೆ. ಕೇಂದ್ರವು ಕೊಟ್ಟಿರುವ ಗುರಿಯಂತೆ ಕರ‍್ನಾಟಕವು 1.8 ರ ಸರಾಸರಿಯನ್ನು ಕಾಯ್ದುಕೊಂಡರೆ ಕಾಲ ಕ್ರಮೇಣ ನಮ್ಮ ಕನ್ನಡನುಡಿ ಜನಾಂಗವೇ ಅಳಿಸಿಹೋದೀತು! ಈಗಾಗಲೇ ಹೆಚ್ಚು ಮಂದಿಯೆಣಿಕೆಯಿಂದ ಬಳಲುತ್ತಿರುವ ಉತ್ತರದ ರಾಜ್ಯಗಳಿಂದ ಕರ‍್ನಾಟಕದಂತಹ ಕಡಿಮೆ ಮಂದಿಯೆಣಿಕೆ ಇರುವ ಕಡೆಗೆ ತಡೆಯಿರದ ವಲಸೆ ಹೆಚ್ಚಾಗಿ ನಮ್ಮ ಅಸ್ತಿತ್ವಕ್ಕೇ ಕುತ್ತು ಬರುತ್ತಿದೆ.
1997 ರಿಂದ 2017 ರ ನಡುವಿನ ಪಂಚವಾರ‍್ಶಿಕ ಯೋಜನೆಗಳಲ್ಲಿ ಕೆಂದ್ರ ಸರ‍್ಕಾರವು ವಿವಿದ ನಾಡುಗಳಿಗೆ ಒಡ್ಡಿರುವ TFR ಗುರಿ ಇಂತಿದೆ (ಕೆಳಗಿರುವ ಚಿತ್ರ ನೋಡಿ). ಇಲ್ಲಿ ಉತ್ತರದ ನಾಡುಗಳಿಗೆ ಅಲ್ಲಿನ ಮಂದಿಯೆಣಿಕೆಯನ್ನು ಹೆಚ್ಚಿಸಲು ಅವರಿಗೆ ಮಾತ್ರ ಹೆಚ್ಚಿನ TFR ನಿಕ್ಕಿ ಮಾಡಿರುವುದನ್ನು ನಾವು ಗಮನಿಸಬಹುದು.
ಎಲ್ಲಾ ನುಡಿ ಜನಾಂಗವನ್ನು ಸಮಾನವಾಗಿ ಕಾಣಬೇಕಿರುವ ಬಾರತ ಸರ‍್ಕಾರ ಈ ರೀತಿಯಾಗಿ ಹಿಂದೀ ನುಡಿಗರ ಪರವಾಗಿ ವ್ಯವಸ್ತಿತವಾಗಿ ಇತರೆ ನುಡಿ ಜನಾಂಗಕ್ಕೆ ಮಾರಕವಾಗುವ TFR ಗುರಿ ಒಡ್ಡುವುದು ವ್ಯವಸ್ತಿತವಾದ ಸಂಚು ಎನಿಸುವುದಿಲ್ಲವೇ ? ಬಾರತ ಸರ‍್ಕಾರವು ನಿಜಕ್ಕೂ ಎಲ್ಲಾ ನುಡಿ ಜನಾಂಗವನ್ನು ಸಮಾನವಾಗಿ ಕಂಡಿದ್ದೇ ಆದಲ್ಲಿ ಎಲ್ಲರಿಗೂ ಒಪ್ಪುವಂತಹ ಸಮಾನವಾದ TFR ಗುರಿಯನ್ನು ಕೊಡಬೇಕಿತ್ತಲ್ಲವೇ ? ಒಕ್ಕೂಟ ಸರ‍್ಕಾರ ಈ ರೀತಿಯಾಗಿ ದಕ್ಶಿಣದ ನಾಡುಗಳ ಮಂದಿಯೆಣಿಕೆಯನ್ನು ವ್ಯವಸ್ತಿತ ಸಂಚಿನೊಂದಿಗೆ ಕುಗ್ಗಿಸಿ, ಉತ್ತರದ ನಾಡುಗಳ ಮಂದಿಯೆಣಿಕೆಯನ್ನು ಹೆಚ್ಚಿಸುವ ತಾರತಮ್ಯದ ದೋರಣೆಯ ವಿರುದ್ದ ಇದೇ ಕೇಂದ್ರ ಸರ‍್ಕಾರರದವರು ಏನೆನ್ನುತ್ತಾರೆ? ವಿ. ಹೆಚ್. ಪಿ ಮುಕಂಡರ ಹೇಳಿಕೆಯನ್ನು ವಿರೋದಿಸುವ ಮಾದ್ಯಮಗಳು ಕೇಂದ್ರ ಸರ‍್ಕಾರದ ಈ ತಾರತಮ್ಯದ ನೀತಿಯ ವಿರುದ್ದ ಏಕೆ ಸೊಲ್ಲೆತ್ತುವುದಿಲ್ಲ?
(ಚಿತ್ರ ಸೆಲೆ: viewpatna)
ಇತ್ತೀಚಿನ ಅನಿಸಿಕೆಗಳು