ಕಾಪಿ ಒಣಗಿಸಲೊಂದು ಚುರುಕಿನ ಚಳಕ

ರತೀಶ ರತ್ನಾಕರ.

ಕರ‍್ನಾಟಕದ ಹಲವು ಮುಕ್ಯ ಬೆಳೆಗಳಲ್ಲಿ ಕಾಪಿಯೂ ಒಂದು. ಪಡುವಣ ಬೆಟ್ಟದ ಸಾಲುಗಳಲ್ಲಿ ಹೆಚ್ಚಾಗಿ ಬೆಳೆಯುವ ಬೆಳೆಯಾಗಿದ್ದು ವರುಶಕ್ಕೆ ಒಂದು ಬಾರಿ ಮಾತ್ರ ಕುಯ್ಲಿಗೆ ಬರುವ ಬೆಳೆ. ಮಳೆಯ ಆದಾರದ ಮೇಲೆ ಕೆಲವು ಕಡೆ ನವೆಂಬರ್‍ ಕೊನೆಯ ವಾರಕ್ಕೆ ಕುಯ್ಲಿಗೆ ಬಂದರೆ ಇನ್ನು ಕೆಲವು ಕಡೆ ಡಿಸೆಂಬರ್‍ ಕೊನೆಯ ವಾರಕ್ಕೆ ಕಾಪಿ ಹಣ್ಣು ಕುಯ್ಲಿಗೆ ಬರುತ್ತದೆ. ಹಾಗಾಗಿ ನವೆಂಬರ್‍ ಕೊನೆಯ ವಾರದಿಂದ ಜನವರಿಯ ಸುಗ್ಗಿ ಹಬ್ಬದವರೆಗೂ ಕಾಪಿ ಕುಯ್ಲಿನ ಕಾಲ ಎಂದು ಹೇಳಬಹುದು. ಹೀಗೆ ಕುಯ್ದ ಕಾಪಿಯನ್ನು ಮಾರುಕಟ್ಟೆಗೆ ಸಾಗಿಸುವ ಮೊದಲು ಅದನ್ನು ಒಣಗಿಸಲಾಗುತ್ತದೆ.

ಸದ್ಯಕ್ಕೆ ಕಾಪಿ ಬೆಳೆಗಾರರ ಮನೆಗಳ ಅಂಗಳದಲ್ಲಿ ನೇಸರನ ಬಿಸಿಲಿಗೆ ಹರಡಿ ಕಾಪಿಯನ್ನು ಹಲವು ದಿನಗಳ ಕಾಲ ಒಣಗಿಸಲಾಗುತ್ತದೆ. ಹೀಗೆ ಒಣಗಿಸುವುದಕ್ಕೆ, ಸಾಕಶ್ಟು ಜಾಗ ಹಾಗು ಮಯ್ಗೆಲಸದ ಅವಶ್ಯಕತೆ ಇದೆ. ಆದರೆ ಇತ್ತೀಚಿನ ದಿನಗಳಲ್ಲಿ ಹೊಸ ಚಳಕಗಳನ್ನು ಬಳಸಿ ಕಾಪಿಯನ್ನು ಅತಿ ಕಡಿಮೆ ಜಾಗದಲ್ಲಿ, ಕಡಿಮೆ ಮಯ್ಗೆಲಸದಲ್ಲಿ, ಆದಶ್ಟು ಬೇಗ ಒಣಗಿಸುವ ವಿದಾನಗಳನ್ನು ಕಂಡುಕೊಂಡಿದ್ದಾರೆ. ಅಂತಹ ಒಂದು ವಿದಾನವನ್ನು ಇಲ್ಲಿ ನೋಡೋಣ ಬನ್ನಿ.

ಕಾಪಿಯ ಕುಯ್ಲು ಮುಗಿದ ಮೇಲೆ ಕೆಲವರು ಇಡೀ ಕಾಪಿಯನ್ನು ಸಿಪ್ಪೆಯ ಜೊತೆಗೆ ಒಣಗಿಸಿ ಮಾರುಕಟ್ಟೆಗೆ ಸಾಗಿಸಿದರೆ ಇನ್ನು ಕೆಲವರು ಹಸಿಯಾಗಿರುವ ಕಾಪಿ ಹಣ್ಣಿನ ಸಿಪ್ಪೆಯನ್ನು ಒಂದು ಬಿಣಿಗೆಯ ನೆರವಿನಿಂದ ಸಿಪ್ಪೆಯನ್ನು ತೆಗೆದು ಬಳಿಕ ಒಳಗಿನ ಕಾಳುಗಳನ್ನು ಒಣಗಿಸಿ ಮಾರುತ್ತಾರೆ. ಎರಡಕ್ಕೂ ಅವುಗಳದ್ದೇ ಆದ ಬೆಲೆಗಳಿವೆ. ಹೀಗೆ ಇಡಿಯಾಗಿ ಒಣಗಿಸಿದ ಕಾಪಿಯನ್ನು ಚೆರ‍್ರಿ ಎಂದು ಸಿಪ್ಪೆ ತೆಗೆದ ಕಾಪಿಯನ್ನು ಪಾರ‍್ಚ್ ಮೆಂಟ್ ಎಂದು ಕರೆಯುತ್ತಾರೆ.

Coffee cherry and parchment

ಹಸಿಯಾಗಿರುವ ಕಾಪಿಯಲ್ಲಿ ಸುಮಾರು 50% ನಿಂದ 70% ನಶ್ಟು ನೀರಿನ ಪಸೆ (moisture) ಇರುತ್ತದೆ. ಕಾಪಿಯು ಚೆನ್ನಾಗಿ ಒಣಗಿ ಮಾರುಕಟ್ಟೆಗೆ ಸಾಗಿಸಲು ಯೋಗ್ಯ ಎಂದು ಕರೆಸಿಕೊಳ್ಳಲು ಅದರ ಪಸೆ ಸುಮಾರು 10% ನಿಂದ 12% ಮಾತ್ರ ಇರಬೇಕು. ಕಾಪಿಯನ್ನು ಒಣಗಿಸುವುದರಲ್ಲಿ ಅದರ ಪಸೆಯನ್ನು 70% ನಿಂದ 10% ಗೆ ಇಳಿಸುವುದಾಗಿರುತ್ತದೆ.

ಒಂದು ಕಾಪಿಬೀಜದ ಪಸೆಯ ಆರುವಿಕೆ ಎರಡು ಹಂತದಲ್ಲಿ ನಡೆಯುತ್ತದೆ. ಮೊದಲು ಸಿಪ್ಪೆಯ ಒಳಗಿನ ಬಾಗದ ಪಸೆಯು ಆರಿ ಹೊರಬಾಗಕ್ಕೆ ಬರುತ್ತದೆ, ಬಳಿಕ ಹೊರಬಾಗದ ಪದರದಲ್ಲಿರುವ ಪಸೆಯು ಆರಿ ಸುತ್ತಲಿನ ಗಾಳಿಗೆ ಸೇರಿಕೊಳ್ಳುತ್ತದೆ. ಹೀಗೆ ಎರೆಡು ಹಂತಗಳಲ್ಲಿ ಕಾಪಿಯು ಒಣಗಬೇಕಾದರೆ ಅದಕ್ಕೆ ಬಿಸಿಗಾಳಿಯನ್ನು ಹರಿಸುವುದರ ಮೂಲಕ ಪಸೆಯನ್ನು ಆರಿಸಿ ಒಣಗಿಸಬಹುದು ಎಂದು ಕಂಡುಕೊಂಡಿದ್ದಾರೆ.

ಯಾವುದೇ ಕಾಳುಗಳನ್ನು ಚೆನ್ನಾಗಿ ಒಣಗಿಸಲು ಗಾಳಿಯು ಈ ಮೂರು ಗುಣಗಳನ್ನು ಹೊಂದಿರಬೇಕು. ಅವು ಗಾಳಿಯು ಒಣಗಿರಬೇಕು (ಯಾವುದೇ ಪಸೆ ಗಾಳಿಯಲ್ಲಿ ಇರಬಾರದು), ಬಿಸಿಯಾಗಿರಬೇಕು ಮತ್ತು ಹರಿಯುತ್ತಿರಬೇಕು (ಒಂದೇ ಕಡೆ ನಿಂತಿರುವ ಗಾಳಿ ಕಾಳುಗಳ ಪಸೆಯನ್ನು ಹೊರಗಿನ ತಣ್ಣನೆಯ ಗಾಳಿಗೆ ಸಾಗಿಸಲಾಗದು). ಈ ಎಲ್ಲಾ ವಿವರಗಳನ್ನು ಕಲೆ ಹಾಕಿದಾಗ, ಕಾಪಿಯ ಪಸೆಯನ್ನು 10% ರಿಂದ 12% ಗೆ ಇಳಿಸಬೇಕಾದರೆ ಗಾಳಿಯನ್ನು 40 ಡಿಗ್ರಿ ಯಿಂದ 60 ಡಿಗ್ರಿಯಶ್ಟು ಬಿಸಿಯಾಗಿ ಹಾಯಿಸಿದಾಗ ಅದು ಆದಶ್ಟು ಬೇಗ ಮತ್ತು ಚೆನ್ನಾಗಿ ಒಣಗುತ್ತದೆ. (ಎಶ್ಟು ಹೊತ್ತು ಈ ಬಿಸಿಗಾಳಿಯನ್ನು ಹಾಯಿಸಬೇಕು ಎಂಬುದನ್ನು ಮುಂದೆ ತಿಳಿಯೋಣ)

ಈಗ, ಕಾಳಿನ ಒಣಗುವಿಕೆಯ ಹಂತಗಳು ಮತ್ತು ಗಾಳಿಗೆ ಇರಬೇಕಾದ ಬಿಸುಪಿನ ಬಗ್ಗೆ ತಿಳಿದೆವು. ಇನ್ನು ನೇಸರನ ಬೆಳಕು ಇಲ್ಲವೇ ಇತರ ಉರುವಲಿನ ನೆರವನಿಂದ ಬಿಸಿಗಾಳಿಯನ್ನು ಕಾಪಿಯ ಮೇಲೆ ಹಾಯಿಸಿ ಅದನ್ನು ಒಣಗಿಸುವ ಬಗೆಯನ್ನು ಅರಿಯೋಣ.

ಹೊಸಬಗೆಯ ಒಣಗಿಸುವಿಕೆಯಲ್ಲಿ ಎರೆಡು ಬಗೆಗಳಲ್ಲಿ ಬಿಸಿಗಾಳಿಯನ್ನು ಹಾಯಿಸಬಹುದು, ಒಂದು ನೇಸರನ ಬೆಳಕಿನಿಂದ ಮತ್ತೊಂದು ಉರುವಲುಗಳಿಂದ (ಬಯೋಮಾಸ್, ಸವ್ದೆ ಮತ್ತಿತರೆ ಉರುವಲು). ಚಿತ್ರ 1 ರಲ್ಲಿ ಇದರ ಮಾದರಿಯನ್ನು ನೀಡಲಾಗಿದೆ. ಅದರ ಒಂದೊಂದು ಬಾಗಗಳು ಮತ್ತು ಒಣಗಿಸುವುದರಲ್ಲಿ ಅವುಗಳ ಕೆಲಸವನ್ನು ತಿಳಿಯೋಣ.

Coffee Drying 1

(ಕಾಪಿಯನ್ನು ಒಣಗಿಸುವ ಮಾದರಿ)

ಒಣಗಿಸುವ ಕೋಣೆ: ಒಣಗಿಸುವ ಕೋಣಯು ಬೇಕಾದಶ್ಟು (ಎತ್ತುಗೆಗಾಗಿ 20×30 (ಉದ್ದ x ಅಗಲ)ರಶ್ಟು) ಜಾಗದಲ್ಲಿ ಕಟ್ಟಿರಬೇಕು. ಕೋಣೆಯ ಒಳಗಿನ ಗೋಡೆಗಳಿಗೆ ಮರದ ಹಲಗೆ (ಪ್ಲಯ್ ವುಡ್) ಹೊಡೆದಿರಬೇಕು, ಇದು ಬಿಸಿಗಾಳಿಯನ್ನು ಹೊರಗೆ ಹೋಗದಂತೆ ತಡೆಯುತ್ತದೆ. ಕೋಣೆಯ ಮಾಡು (ಸೂರು) ಮೂಡಣ ಮತ್ತು ಪಡುವಣ ದಿಕ್ಕುಗಳಿಗೆ ಮುಕ ಮಾಡಿರಬೇಕು, ಇದರಿಂದ ಹೆಚ್ಚು ಹೊತ್ತು ನೇಸರನ ಬೆಳಕು ಮಾಡಿನ ಮೇಲೆ ಬೀಳುವಂತಾಗುತ್ತದೆ. (ಚಿತ್ರ 2 ನ್ನು ನೋಡಿ)

Coffee Drying 2

 (ನೇಸರ ಪಟ್ಟಿ, ಬಿಸಿಗಾಳಿ ಕೊಳವೆಯ ಸೀಳುನೋಟ)

ನೇಸರ ಪಟ್ಟಿ: ಕೋಣೆಯ ಮಾಡಿನ ಮೇಲೆ ಮರದ ಹಲಗೆಗಳನ್ನು (ಪ್ಲಯ್ ವುಡ್) ಹೊಡೆದು ಅದರ ಮೇಲೆ ಮರದ ಪಟ್ಟಿಯನ್ನು ಮಾಡಿನ ಇಳಿಜಾರಿಗೆ ಅಡ್ಡಲಾಗಿ ಹೊಡೆದಿರಬೇಕು (ಎತ್ತುಗೆಗೆ ಸುಮಾರು 3 ಇಂಚುಗಳಶ್ಟು ದಪ್ಪದ ಮರದ ಪಟ್ಟಿ). ಈ ಮರದ ಪಟ್ಟಿಗಳ ಮೇಲೆ ನೇಸರ ಪಟ್ಟಿಗಳನ್ನು ಹೊಡೆಯಬೇಕು (ಸಾಮಾನ್ಯವಾಗಿ ಕಪ್ಪು ಬಣ್ಣದ ತಗಡಿನ ಪಟ್ಟಿಗಳನ್ನು ಬಳಸಲಾಗುವುದು). ಈಗ ನೇಸರ ಪಟ್ಟಿ ಮತ್ತು ಮಾಡಿನ ಹಲಗೆಯ ನಡುವೆ ಸಣ್ಣ ಜಾಗ ಇರುತ್ತದೆ. ಈ ಜಾಗದಲ್ಲಿ ಗಾಳಿಯು ಸುಳಿದಾಡುತ್ತದೆ. ಗಾಳಿಯು ತೆಂಕಣ/ಬಡಗಣ ದಿಕ್ಕಿನಿಂದ ಬಡಗಣ ಇಲ್ಲವೇ ತೆಂಕಣ ದಿಕ್ಕಿನ ಮೂಲಗ ಈ ಜಾಗದ ಒಳಗೆ ಬರುತ್ತಿರುತ್ತದೆ. (ಚಿತ್ರ 2 ನ್ನು ನೋಡಿ)

ಬಿಸಿಗಾಳಿ ಕೊಳವೆ: ನೇಸರ ಪಟ್ಟಿ ಮತ್ತು ಮಾಡಿನ ನಡುವೆ ಉಂಟಾಗುವ ಬಿಸಿಗಾಳಿಯನ್ನು ಕೋಣೆಯ ಒಳಗೆ ಸಾಗಿಸಲು ದೊಡ್ಡದ್ದಾದ ಒಂದು ಕೊಳವೆಯನ್ನು ಚಿತ್ರದಲ್ಲಿ ತೋರಿಸಿದಂತೆ ಮಾಡಿಗೆ ಸೇರಿಸಬೇಕು. ಈ ಕೊಳವೆಯು ಬಿಸಿಯನ್ನು ಹೊರಹಾಕದಿರುವ ವಸ್ತುವಿನಿಂದ ಮಾಡಿರಬೇಕು.

ಬಲೆ/ಬುಟ್ಟಿ: ಇದರಲ್ಲಿ ಕಾಪಿ ಬೀಜಗಳನ್ನು ಒಣಗಿಸಲು ಹಾಕಲಾಗುವುದು. ಬಿಸಿಯನ್ನು ತಡೆದುಕೊಳ್ಳುವ ವಸ್ತುವಿನಿಂದ ಇದನ್ನು ಮಾಡಿರಬೇಕು. ಇದರ ಬುಡದಲ್ಲಿ ಸಣ್ಣ ಕಿಂಡಿಗಳಿದ್ದು, ಗಾಳಿಯ ಒಳಬರುವಂತಿರಬೇಕು (ಬಲೆಯ ಹಾಗೆ ಸಣ್ಣ ಸಣ್ಣ ಕಿಂಡಿಗಳಿರಬೇಕು)

ಬೀಸಣಿಕೆ: ಕೊಳವೆಯಿಂದ ಬಂದ ಬಿಸಿಗಾಳಿಯನ್ನು ಒಣಗಲು ಹಾಕಿರುವ ಕಾಪಿ ಬೀಜದ ಬುಟ್ಟಿಯ ಕಡೆ ಜೋರಾಗಿ ಹಾಯಿಸಲು ಮತ್ತು ಗಾಳಿಯ ಬಿಸುಪನ್ನು ಆದಶ್ಟೂ ಹೆಚ್ಚಿನ ಬಿಸುಪಿನಲ್ಲಿ ಕಾದಿಡಲು ಇದು ನೆರವಾಗುತ್ತದೆ.

ಬಯೋಮಾಸ್/ಉರುವಲಿನ ಒಲೆ: ಬಯೋಮಾಸ್/ಉರುವಲಿನ ಒಲೆಯಿಂದ ಹೊರಗಿನ ಗಾಳಿಯನ್ನು ಬಿಸಿಮಾಡಿ ಹಾಯಿಸ ಬಹುದಾಗಿದೆ. ಬಗೆಬಗೆಯ ಉರುವಲಿನ/ಬಯೋಮಾಸ್ ಒಲೆಗಳು ಮಾರುಕಟ್ಟೆಯಲ್ಲಿ ಸಿಗಲಿದ್ದು, ಗಾಳಿಯನ್ನು 40 ಡಿಗ್ರಿಯಿಂದ 60 ಡಿಗ್ರಿಯವರೆಗೆ ಕಾಯಿಸುವ ಸಾಮರ್‍ತ್ಯವುಳ್ಳ ಒಲೆಗಳನ್ನು ಬಳಸಬೇಕಾಗುತ್ತದೆ.

ಇದು ಹೇಗೆ ಕೆಲಸ ಮಾಡುತ್ತದೆ:

ಮೊದಲು ನೇಸರನಿಂದ ಬಿಸಿಗಾಳಿಯನ್ನು ಪಡೆದು ಒಣಗಿಸುವ ಬಗೆಯನ್ನು ನೋಡೋಣ. ನೇಸರನ ಬೆಳಕು ಪಟ್ಟಿಯ ಮೇಲೆ ಬಿದ್ದೊಡನೆ ಪಟ್ಟಿಯ ಮೇಲ್ಬಾಗ ಮತ್ತು ಕೆಳಬಾಗದಲ್ಲಿರುವ ಗಾಳಿಯು ಬಿಸಿಯಾಗುತ್ತದೆ. ನೇಸರನ ಪಟ್ಟಿಯ ಸುತ್ತ ಗಾಳಿಯ ಬಿಸುಪು ಹೆಚ್ಚಿದಂತೆ ಗಾಳಿಯು ಕಡಿಮೆ ಬಿಸುಪಿನ ಕಡೆಗೆ ನಡೆಯುತ್ತದೆ. ಬಿಸಿಗಾಳಿಯ ಕೊಳವೆಯಲ್ಲಿ ಪಟ್ಟಿಯ ಬಳಿಗಿಂತ ಕಡಿಮೆ ಬಿಸುಪು ಇರುತ್ತದೆ, ಅಲ್ಲದೇ ಬೀಸಣಿಕೆಯು ಗಾಳಿಯನ್ನು ಕೊಳವೆಯಿಂದ ಸೆಳೆದು ಕಾಪಿ ಬುಟ್ಟಿಯ ತಳಕ್ಕೆ ಸಾಗಿಸುತ್ತಿರುತ್ತದೆ.

ಇದರಿಂದ ಬೀಸಣಿಕೆಯಿರುವ ಕೊಳವೆಯ ಬಾಗದ ಗಾಳಿಯ ಒತ್ತಡವು ನೇಸರನ ಪಟ್ಟಿಯ ಕೆಳಗಿನ ಗಾಳಿಯ ಒತ್ತಡಕ್ಕಿಂತ ಕಡಿಮೆಯಾಗುತ್ತದೆ. ಹಾಗಾಗಿ ನೇಸರನ ಪಟ್ಟಿಯ ಸುತ್ತಲಿರುವ ಬಿಸಿಗಾಳಿಯು ಕೊಳವೆಯಲ್ಲಿ ಸಾಗಿ ಬೀಸಣಿಕೆಯ ಬಳಿ ಬರುತ್ತದೆ. ಈ ಬೀಸಣಿಕೆಯು ದೊಡ್ಡ ಕೊಳವೆಯಿಂದ ಬಂದ ಬಿಸಿಗಾಳಿಯನ್ನು ತನ್ನ ಮುಂದಿನ ಸಣ್ಣಕೊಳವೆಗೆ ಜೋರಾಗಿ ಸಾಗಿಸುತ್ತದೆ. ಈ ಗಾಳಿಯು ಬುಟ್ಟಿಯಲ್ಲಿರುವ ಕಾಪಿ ಬೀಜಗಳ ನಡುವೆ ಸಾಗಿ ಅದರ ಪಸೆಯನ್ನು ಆರಿಸತೊಡಗುತ್ತದೆ. ಮೇಲೆ ಬಂದ ಪಸೆ(Moisture)ಯು ಕೋಣೆಯ ಗಾಳಿಗೆ ಸೇರಿಹೋಗುತ್ತದೆ.

ಕಾಪಿ ಒಣಗಿಸುವ ಹಂತಗಳು:
ಕಾಪಿಯನ್ನು ಎರಡು ಹಂತಗಳಲ್ಲಿ ಒಣಗಿಸಲಾಗುತ್ತದೆ.
1. ಮೊದಲು ಹಸಿಯಾದ ಕಾಪಿಯಲ್ಲಿರುವ ನೀರಿನ ಅಂಶವನ್ನು ತೆಗೆಯಬೇಕಾಗುತ್ತದೆ ಅದಕ್ಕಾಗಿ ಕಾಪಿಯನ್ನು ಒಂದು ಬುಟ್ಟಿಗೆ ಹಾಕಿ ಬುಟ್ಟಿಯ ಮೇಲಿನಿಂದ ಸಾಮಾನ್ಯಗಾಳಿ ಇಲ್ಲವೇ ಕೊಂಚ ಬಿಸಿ ಇರುವ ಗಾಳಿ(40 ಡಿಗ್ರಿಗಿಂತ ಕಡಿಮೆ)ಯನ್ನು ಹಾಯಿಸಲಾಗುತ್ತದೆ. ನೀರಿನಿಂದ ಕೂಡಿರುವ ಕಾಪಿಯ ಮೇಲೆ 40 ಡಿಗ್ರಿಗಿಂತ ಬಿಸಿ ಇರುವ ಗಾಳಿಯನ್ನು ಹಾಯಿಸಿದರೆ ಅದು ಕಾಪಿಯ ಬಣ್ಣ ಮತ್ತು ಪರಿಮಳದ ಮೇಲೆ ಕೆಟ್ಟ ಪರಿಣಾಮ ಬೀರುವ ಸಾದ್ಯತೆಗಳಿವೆ. ಹೀಗೆ ಕಾಪಿಯ ಬುಟ್ಟಿಯ ಮೇಲಿನಿಂದ ಗಾಳಿಯನ್ನು ಹಾಯಿಸಿದಾಗ ಅದರ ಮೇಲಿರುವ ನೀರಿನಂಶವು ಬುಟ್ಟಿಯ ಕೆಳಗಿಳಿದು ಬುಟ್ಟಿಯ ತೂತುಗಳಲ್ಲಿ ಹರಿದು ಹೊರಹೋಗುತ್ತದೆ.

ಸುಮಾರು ಎರಡರಿಂದ ಮೂರು ಗಂಟೆಗಳ ಕಾಲ ಹೀಗೆ ಗಾಳಿಯನ್ನು ಹಾಯಿಸಿ ನೀರನ್ನು ಹೊರತೆಗೆಯಬೇಕಾಗುತ್ತದೆ. ಈ ಬಗೆಯನ್ನು ಮುನ್ನಾರಿಕೆ(ಪ್ರೀ-ಡ್ರಯಿಂಗ್) ಎಂದು ಕರೆಯಲಾಗುತ್ತದೆ. ಸಾಮಾನ್ಯವಾಗಿ 6×6 ಅಡಿಗಳಶ್ಟು ದೊಡ್ಡದಿರುವ ಕಾಪಿ ಬುಟ್ಟಿಯಲ್ಲಿ ಒಂದು ಅಡಿಗಳಶ್ಟು ದಪ್ಪನಾಗಿ ಕಾಪಿಯನ್ನು ಹರಡಿ ನೀರನ್ನು ತೆಗೆಯಲು 1.5 ಹಾರ‍್ಸ್ ಪವರ್‍ ಸಾಮರ‍್ತ್ಯ ಹೊಂದಿರುವ ಮತ್ತು 18 ಇಂಚು ದುಂಡಳತೆ ಇರುವ ಬೀಸಣಿಕೆಯನ್ನು ಬಳಸಲಾಗುತ್ತದೆ.

2. ಎರಡನೆಯ ಹಂತದಲ್ಲಿ ನೀರನ್ನು ಆರಿಸಿದ ಕಾಪಿಯನ್ನು ಬಿಸಿಗಾಳಿ ಬರುವ ಬುಟ್ಟಿಗೆ ಹಾಕಿ ಒಣಗಿಸಲಾಗುತ್ತದೆ. ಈ ಬುಟ್ಟಿಯೂ ಕೂಡ ಮುನ್ನಾರಿಕೆಯಲ್ಲಿ ಬಳಸಿದಶ್ಟು ದೊಡ್ಡದಾಗಿಯೇ ಇದ್ದು, 40-60 ಡಿಗ್ರಿ ಬಿಸುಪಿರುವ ಗಾಳಿಯನ್ನು ಮಾತ್ರ ಬುಟ್ಟಿಯ ತಳಬಾಗದಿಂದ ಹಾಯಿಸಲಾಗುತ್ತದೆ. ಇದರಲ್ಲೂ ಕೂಡ ಬೀಸಣಿಕೆಯ ಸಾಮರ‍್ತ್ಯವು 1.5 ಹಾರ‍್ಸ್ ಪವರ್‍ ಇದ್ದು 18 ಇಂಚು ದುಂಡಳತೆ ಹೊಂದಿರುತ್ತದೆ.

Coffee Drying 3

(ಕಾಪಿ ಒಣಗುವ ಪಟ್ಟಿಗಳು)

ಕಾಪಿ ಒಣಗುವುದು ಒಣಗಿಸುವ ಬುಟ್ಟಿ ಇಲ್ಲವೇ ಬಲೆಯ ಆದರಾದ ಮೇಲೆ ಬೇರೆ ಬೇರೆ ಪಟ್ಟಿಗಳಲ್ಲಿ ಒಣಗುತ್ತಾ ಬರುತ್ತದೆ. ಚಿತ್ರ 3ಅ ನಲ್ಲಿ ತೋರಿಸುರುವಂತೆ ಬುಟ್ಟಿಯಲ್ಲಿ ಕಾಪಿಯನ್ನು ದಪ್ಪನಾಗಿ ಹಾಕಿದ್ದಾಗ, ಬಿಸಿಗಾಳಿಯು ಕೆಳಗಿನಿಂದ ಮೇಲಕ್ಕೆ ಹರಿಯುತ್ತಿರುತ್ತದೆ. ಬಿಸಿಗಾಳಿಯು ಮೊದಲು ಬುಡದಲ್ಲಿರುವ ಕಾಪಿಯ ಪಸೆ (moisture)ಯನ್ನು ಹೀರುಕೊಳ್ಳುತ್ತಾ ಬರುತ್ತದೆ, ಹೀಗೆ ಹೀರಿಕೊಳ್ಳುವ ಗಾಳಿಯು ಬುಟ್ಟಿಯಲ್ಲಿ, ಕಾಳುಗಳ ನಡುವೆ ಮೇಲೆ ಸರಿದಂತೆ ತನ್ನ ಬಿಸುಪನ್ನು ಕಳೆದುಕೊಳ್ಳುತ್ತಾ ಹೋಗುತ್ತದೆ. ಹಾಗಾಗಿ, ಮೇಲಿನ ಬಾಗದಲ್ಲಿರುವ ಕಾಪಿಯೂ ಕೆಳಗಿನ ಬಾಗದ ಕಾಪಿಗಿಂತ ಬೇಗ ಒಣಗುವುದಿಲ್ಲ.

ಹೀಗೆ ಬುಟ್ಟಿಯಲ್ಲಿ ದಪ್ಪನಾಗಿ ಹಾಸಿ ಒಣಗಿಸುವ ಬಗೆಯಲ್ಲಿ ಮೊದಲಿಗೆ ಮೂರು ಪಟ್ಟಿಗಳು ಮೂಡುತ್ತವೆ ಅವು ಒಣಗಿದ ಪಟ್ಟಿ, ಒಣಗುತ್ತಿರುವ ಪಟ್ಟಿ ಮತ್ತು ಒಣಗಿರದ ಪಟ್ಟಿಗಳು. ಈ ಪಟ್ಟಿಗಳ ಅಗಲವು ಕಾಪಿಯಲ್ಲಿರುವ ಪಸೆ, ಹರಿಯುತ್ತಿರುವ ಗಾಳಿಯ ಬಿಸುಪು ಮತ್ತು ಗಾಳಿಯ ವೇಗಕ್ಕೆ ತಕ್ಕಂತೆ ಬೇರೆ ಬೇರೆಯಾಗಿರುತ್ತದೆ. ಹಾಗಾಗಿ ಕಾಪಿಯ ಸರಿಯಾದ ಒಣಗುವಿಕೆಗೆ ಬುಟ್ಟಿಯಲ್ಲಿರುವ ಕಾಳುಗಳನ್ನು ಕೆಲವು ಗಂಟೆಗಳ ಅಂತರದಲ್ಲಿ ಮಗುಚುತ್ತಿರಬೇಕು. ಆಗ ಒಣಗಿದ ಕಾಪಿ ಮೇಲೆ ಬಂದು ಒಣಗಿರದ ಕಾಪಿ ತಳಕ್ಕೆ ಹೋಗಿ ಒಣಗಲಾರಂಬಿಸುತ್ತದೆ.

ಇನ್ನು ತೆಳುವಾಗಿ ಹಾಸಿ ಒಣಗಿಸುವ ಬಗೆಯಲ್ಲಿ ಚಿತ್ರ 3ಇ ನಲ್ಲಿ ತೋರಿಸುರುವಂತೆ ಕೇವಲ ಒಂದೇ ಪಟ್ಟಿ ಇದ್ದು ಅದು ಒಣಗುತ್ತಿರುವ ಪಟ್ಟಿಯಾಗಿರುತ್ತದೆ. ಗಾಳಿಗೆ ಕಾಳುಗಳ ನಡುವೆ ಸಾಗಲು ಸಾಕಶ್ಟು ಜಾಗ ಇರುವುದರಿಂದ ಇದು ಬಲೆ/ಬುಟ್ಟಿಯಲ್ಲಿ ಹರಡಿರುವ ಎಲ್ಲಾ ಕಾಳುಗಳನ್ನು ಒಂದೇ ಬಗೆಯಲ್ಲಿ ಒಣಗಿಸುತ್ತದೆ.

ಕಾಪಿಯನ್ನು ಒಣಗಿಸುವ ಬುಟ್ಟಿಯ ಅಳತೆ, ಬೀಸಣಿಕೆಯ ಸಾಮರ‍್ತ್ಯ ಎಲ್ಲವೂ ಮತ್ತು ಒಣಗಿಸಲು ಬೇಕಾದ ಜಾಗವು ಬೆಳೆಗಾರರು ವರುಶಕ್ಕೆ ಎಶ್ಟು ಬೆಳೆ ಬೆಳೆಯುತ್ತಾರೆ ಎಂಬುದರ ಮೇಲೆ ತೀರ‍್ಮಾನಿಸಬೇಕಾಗುತ್ತದೆ. ಹಲವು ಅರಕೆಗಳ ಮೂಲಕ ಈ ಕೆಳಗಿನ ಸಲಹೆಗಳನ್ನು ನೀಡಲಾಗಿದೆ.

  1. ವರುಶಕ್ಕೆ ಒಬ್ಬ ಬೆಳೆಗಾರ 200 ಮೂಟೆ (10000 ಕಿಲೋ) ಕಾಪಿ ಬೆಳೆಯುತ್ತಿದ್ದರೆ, ಆತ 10×10 ಆಡಿಗಳಶ್ಟು ದೊಡ್ಡ ಬುಟ್ಟಿಗಳಲ್ಲಿ ಒಣಗಿಸಬೇಕಾಗುತ್ತದೆ (ಇದರಲ್ಲಿ ಸುಮಾರು 250 ಕಿಲೋ ಕಾಪಿ ಹಿಡಿಯುತ್ತದೆ).
  2. ಬೀಸಣಿಕೆಯ ಸಾಮರ‍್ತ್ಯವು 100 ಸಿ. ಎಪ್. ಎಮ್ (ಕ್ಯುಬಿಕ್ ಪೀಟ್ ಪರ್‍ ಮಿನಿಟ್) ಪರ್‍ ಸ್ಕ್ವಯರ್‍ ಪರ್‍ ಡ್ರಯಿಂಗ್ ಏರಿಯಾ. ಅಂದರೆ 10×10 ಅಡಿಗಳಶ್ಟು ದೊಡ್ಡದಾದ ಬುಟ್ಟಿಯಲ್ಲಿ ಒಂದು ಅಡಿಗಳಶ್ಟು ದಪ್ಪನಾಗಿ ಹರಡಿರುವ ಕಾಪಿಗೆ ಒಂದು ಇಂಚಿನಶ್ಟು ಒತ್ತಡದಲ್ಲಿ ಗಾಳಿಯನ್ನು ಹಾಯಿಸಲು 1000 ಸಿ.ಎಪ್.ಎಮ್ ಸಾಮರ‍್ತ್ಯ ಹೊಂದಿರುವ ಬೀಸಣಿಕೆ ಬಳಸಬೇಕಾಗುತ್ತದೆ.
  3. ಗಾಳಿಯನ್ನು 10 ರಿಂದ 60 ಡಿಗ್ರೀ ಬಿಸುಪಿನಲ್ಲಿ ತಡೆಯಿಲ್ಲದೇ ಹರಿಸಿದರೆ, 10×10 ಬುಟ್ಟಿಯಲ್ಲಿ ಒಂದು ಅಡಿ 24 ಗಂಟೆಗಳಲ್ಲಿ ಕಾಪಿಯ ಪಸೆಯು 10% ರಿಂದ 12%ಗೆ ಇಳಿದು, ಕಾಪಿಯು ಒಣಗಿ ಸಿದ್ದವಾಗುತ್ತದೆ. ಇಶ್ಟೇ ಕಾಪಿಯನ್ನು ಅಂಗಳದಲ್ಲಿ ನೇರವಾದ ನೇಸರನ ಬಿಸಿಲಿನಲ್ಲಿ ಒಣಗಿಸಲು ಸುಮಾರು 4 ರಿಂದ 5 ದಿನಗಳು ತಗಲುತ್ತವೆ. ಮತ್ತು ಅದಕ್ಕೆ ಹೆಚ್ಚಿನ ಮಯ್ಗೆಲಸದ ಅವಶ್ಯಕತೆ ಇದೆ. ಅಲ್ಲದೇ ಪಡುವಣ ಬೆಟ್ಟದ ಸಾಲಿನಲ್ಲಿ ಡಿಸೆಂಬರ್‍ ಹಾಗು ಜನವರಿ ಮೊದಲವಾರ ಕೆಲವೊಮ್ಮೆ ಮಳೆಯಾಗುವ ಸಾದ್ಯತೆಗಳು ಇರುವುದರಿಂದ ಕಾಪಿಯನ್ನು ಒಣಗಿಸಲು ಹರಸಾಹಸ ಪಡಬೇಕಾಗುತ್ತದೆ.

ಕಾಪಿ ಬೆಳೆಯುವ ಜಾಗದಲ್ಲಿ ಎಲ್ಲಾ ದಿನಗಳೂ ಒಂದೇ ಬಗೆಯ ಬಿಸಿಲು ಇರುವುದಿಲ್ಲ, ಹಾಗಾಗಿ 40 ರಿಂದ 60 ಡಿಗ್ರಿ ಬಿಸುಪಿನಲ್ಲಿ ಯಾವಗಲೂ ಗಾಳಿಯನ್ನು ಹಾಯಿಸಲು ಆಗುವುದಿಲ್ಲ ಇದಕ್ಕಾಗಿ ಬಯೋಮಾಸ್/ಉರುವಲಿನ ಒಲೆಯ ನೆರವನ್ನು ಪಡೆಯಬಹುದು. ಇರುಳಿನಲ್ಲಿ ನೇಸರ ಬಿಸಿಲು ಸಿಗದೇ ಇರುವುದರಿಂದ ಈ ಒಲೆಗಳ ನೆರವಿನಿಂದ ಬಿಸಿಗಾಳಿಯನ್ನು ಹಾಯಿಸಿ ಒಣಗಿಸಬಹುದು. ಹೀಗೆ ಬಿಟ್ಟಿಯಾಗಿ ಸಿಗುವ ನೇಸರನ ಬಿಸಿಲು ಮತ್ತು ಕಡಿಮೆ ಬೆಲೆಯಲ್ಲಿ ಸಿಗುವ ಉರುವಲುಗಳನ್ನು ಬಳಸಿ ಬಿಸಿಗಾಳಿಯನ್ನು ಒದಗಿಸಿ ಕಾಪಿಯನ್ನು ಕಡಿಮೆ ಮಯ್ಗೆಲಸ ಮತ್ತು ಹೆಚ್ಚಿನ ಗುಣಮಟ್ಟದಲ್ಲಿ ಒಣಗಿಸಬಹುದು.

ಬೆಳೆಗಾರರು ವರುಶಕ್ಕೆ ಬೆಳೆಯುವ ಕಾಪಿಯ ಅಳತೆ, ಆ ಜಾಗದಲ್ಲಿನ ಬಿಸುಪು ಮತ್ತು ಹಣಕಾಸಿನ ವಿವರಗಳನ್ನು ಕಲೆಹಾಕಿ ಪರಿಣಾಮಕಾರಿಯಾದ ಒಣಗಿಸುವ ಬಗೆಗಳನ್ನು ಕಟ್ಟಿಕೊಳ್ಳಬಹುದು. ಹಾಗೆಯೇ ಈ ಬಗೆಯಿಂದ ಕಾಪಿ ಒಂದೇ ಅಲ್ಲ ಬೇರೆ ಬೇರೆ ಕಾಳುಗಾಳನ್ನು ಒಣಗಿಸುವ ಬಗೆಗಳನ್ನು ಕಟ್ಟಿಕೊಳ್ಳಬಹುದು.

(ಮಾಹಿತಿಸೆಲೆ: academic.uprm.edu, aee-intec.at)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: