ನಾಸಾ: ಹೀಗೊಂದು ಬಾನರಿಮೆಯ ಹಗರಣ

– ಸುಜಯೀಂದ್ರ.ವೆಂ.ರಾ.

ನಾಸಾ ಇತ್ತೀಚೆಗೆ ಅಪರ‍್ಚುನಿಟಿ (Opportunity) ಬಾನಲೆಬಂಡಿ (rover) ಮಂಗಳದಲ್ಲಿ ಸುತ್ತಾಡಿ ಹತ್ತು ಏಡುಗಳಾದ ಸಂಬ್ರಮದಲ್ಲಿ, ಅಪರ‍್ಚುನಿಟಿ ರೋವರ್‍ ನೆದುರಿಗೆ ಕಲ್ಲೊಂದು ಕಾಣಿಸಿಕೊಂಡ ಬಗ್ಗೆ ಚಿತ್ರವೊಂದರ ಮೂಲಕ ಪ್ರಚಾರಗಯ್ದಿತ್ತು. ಇದರ ಬಗ್ಗೆ ನಾಸಾ ಒಂದು ನೇರವಾದ ಹೇಳಿಕೆ ನೀಡಿತ್ತು. ಅದೇನೆಂದರೆ, ಇದ್ದಕ್ಕಿದ್ದಂತೆ ಕಂಡಂತಹ ಈ ಕಲ್ಲು, ರೋವರ್‍ ನ ಹತ್ತಿರದಲ್ಲೆಲ್ಲೊ ಯಾವುದೋ ಬಾನ್ಗಲ್ಲಿನ ಅಪ್ಪಳಿಸುವಿಕೆಯಿಂದ ಬಂದು ಬಿದ್ದಂತಹದಿರಬಹುದೆಂದು ಇಲ್ಲವೇ ರೋವರ್‍ ಅದನ್ನು ನೆಲದಿಂದ ಎಬ್ಬಿಸಿ, ಚಿಮ್ಮಿಸಿರಬಹುದೆಂದು.

ಅಪರ‍್ಚುನಿಟಿ ರೋವರ್‍ ಜನವರಿ 24,2004ರಲ್ಲಿ ಮಂಗಳ ಸುತ್ತುಗದಲ್ಲಿನ ಜೀವಿಗಳ, ನೀರಿನ, ವಾತಾವರಣದ ಬಗ್ಗೆ ತಿಳಿಯಲು ಮಂಗಳನೆಡೆಗೆ ಕಳುಹಿಸಲಾಯಿತು. ಅಪರ‍್ಚುನಿಟಿ ಮಂಗಳದಲ್ಲಿ ಇಳಿದ ಮೇಲೆ ಬರಿ 90 ದಿನಗಳಿಗಾಗಿ ಮಾತ್ರ ಮಂಗಳನ ತಿಳಿಯಲು ಯೋಜಿಸಿದ್ದು. ಆದರೆ ಆಪರ‍್ಚುನಿಟಿ 90 ದಿನಗಳಾದ ಮೇಲೂ ಮಂಗಳದ ಅಂಗಳದಲ್ಲಿ ತಿರುಗಾಡಿ ತಿಟ್ಟಗಳನ್ನು ಬೂಮಿಗೆ ಕಳುಹಿಸುತ್ತಿದೆ. ರೋವರ್‍ ಗೆ ಮುಂದಿನ-ತಿಟ್ಟಕ, ಹಿಂದಿನ-ತಿಟ್ಟಕ, ದಿಕ್ಸೂಚಿ-ತಿಟ್ಟಕ, ಹರವು ನೋಟದ ತಿಟ್ಟಕ, ಸೀರುತೋರ‍್ಪಿನ ತಿಟ್ಟಕ ಅಳವಡಿಸಲಾಗಿದ್ದು. ಇವುಗಳಿಂದ ಬೇರೆ ಬೇರೆ ತಿಟ್ಟಗಳನ್ನು ಸೆರೆಹಿಡಿಯಲಾಗುತ್ತಿದೆ. ಹೀಗೆ ಸಾಮಾನ್ಯವಾಗಿ ಹುಡುಕಾಟ ನಡೆಸಿ, ತೆಗೆದ ತಿಟ್ಟಗಳಲ್ಲಿ ಮೇಲೆ ತಿಳಿಸಿದ ಕಲ್ಲಿನ ತಿಟ್ಟವೂ ಒಂದು.

ಇದುವರೆವಿಗೂ ಅಂತಹ ಯಾವುದೇ ವಿವಾದ ಹುಟ್ಟಿಸದ ತಿಟ್ಟಗಳಲ್ಲಿ ಈ ತಿಟ್ಟ ನಾಸಾದ ಪಾಲಿಗೆ ತಾನೆ ಮಾಡಿಕೊಂಡಿರುವ ಒಂದು ಹಗರಣದಂತೆ ಕಂಡಿತು. ನಾಸಾ ಅಪರ‍್ಚುನಿಟಿಯ ತಿಟ್ಟಗಳನ್ನು ತನ್ನ ಮಿಂದಾಣದಲ್ಲಿ ದಾಕಲಿಸಿ ಎಲ್ಲರಿಗೂ ನೋಡಲು ಅನುವುಮಾಡಿಕೊಟ್ಟಿತ್ತಾದರೂ ಹೀಗೆ ಎಲ್ಲರಿಗೂ ನೋಡಲು, ಅದರ ಬಗ್ಗೆ ಅರಿಮೆ ವಿಚಾರಗಳನ್ನು ಹಂಚಿಕೊಳ್ಳಲು ಬಿಟ್ಟಿರುವ ತಿಟ್ಟಗಳು ಇಲ್ಲಿಯವರೆಗೂ ಯಾರು ನೋಡಿರಲಿಕ್ಕಿಲ್ಲ, ನೋಡಿದ್ದರೂ ಅಂತಹ ಕುತೂಹಲ ಎಲ್ಲರಲ್ಲಿ ಹುಟ್ಟಿಸಿರಲಿಕ್ಕಲ್ಲ ಎಂದುಕೊಂಡಿತ್ತು ನಾಸಾ.

sol28_40mysteriousrockmarsopp

(ತಿಟ್ಟಗಳು: ಸೋಲ್-3540 ಜನವರಿ 8, 2014 ಮತ್ತು ಸೋಲ್-3528 ಡಿಸೆಂಬರ್‍ 26,2013)

ಆದರೆ ಹಾಗಾಗಿಲ್ಲ. ತನ್ನನ್ನು ಅರಿಗನೆಂದು ಬಣ್ಣಿಸಿಕೊಳ್ಳುವ ರಾನ್ ಜೊಸೆಪ್, ಕೆಲವು ಮಾರಾಟಗೊಳ್ಳುವ ಹೊತ್ತಗೆಗಳ ಬರಹಗಾರನೆಂದು ಹೇಳಿಕೊಳ್ಳುತ್ತಾ, ಬೇರೆಸುತ್ತುಗದುಸುರಿ (ಅನ್ಯಗ್ರಹಜೀವಿ) ಇಂದ ಹಿಡಿದು ಸೆಪ್ಟೆಂಬರ್‍ 11ರ ಉಗ್ರರ ದಾಳಿಯವರೆವಿಗೂ ಹೊತ್ತಗೆಗಳ ಬರೆದವನೆಂದು ಹೇಳಿಕೊಳ್ಳುತ್ತಾರೆ. ಅವರ ಪ್ರಕಾರ ಅಪರ‍್ಚುನಿಟಿ ಕಳುಹಿದ ತಿಟ್ಟದಲ್ಲಿರುವುದು ಕಲ್ಲಲ್ಲ, ಕಲ್ಲಿನಂತೆ ಕಾಣುವ ಒಂದು ಜೀವಿ. ಇದರ ಬಗ್ಗೆ ನಾಸಾದ ಅರಿಗರ ಮೇಲೆ ಜೊಸೆಪ್ ಕಾನೂನು ದಾವೆ ಹೂಡಿದವರು. ಜೊಸೆಪ್ ಬಾನರಿಮೆ ಪತ್ರಿಕೆಯೊಂದಿಗೆ ಹೆಚ್ಚಾಗಿ ನಂಟನ್ನು ಇಟ್ಟಿಕೊಂಡಿದ್ದು, ಅದರಲ್ಲಿ ನೇರವಾಗಿ ಹುಡುಕಾಟದ ಲೇಕನಗಳನ್ನು ಪ್ರಕಟಿಸುತ್ತಾರೆನ್ನಲಾಗಿದೆ.

ಜೊಸೆಪ್ ತಮ್ಮ ದಾವೆಯನ್ನು 27 ಜನವರಿ, 2014ರಂದು ಕ್ಯಾಲಿಪೋರ‍್ನಿಯಾ ನ್ಯಾಯಾಲಯದಲ್ಲಿ ಹೂಡಿದ್ದರು. ಆ ದಾವೆಯಲ್ಲಿ (lawsuit) ನಾಸಾ ಮತ್ತು ಅದರ ಆಡಳಿತಗಾರರಾದ ಚಾರ‍್ಲ್ಸ್ ಬೊಲ್ಡೆನ್ ರನ್ನು ಗುರಿಯಾಗಿಸಿ, ಅವರಲ್ಲಿ ಸಾರ‍್ವಜನಿಕರಿಗೆ ಕಾಣುವಂತೆ, ಅರಿಮೆಯನ್ನು ಬಳಸಿ, ದಿಟವಾದ ಕೆಲಸ ನಡೆಸಲು ಮನವಿ ಮಾಡಲಾಗಿತ್ತು. ಆ ಕೆಲಸಗಳೇನೆಂದರೆ ತಿಟ್ಟಗಳನ್ನು ತೀರ ಹತ್ತಿರದಲ್ಲಿ ದಿಟ್ಟಿಸಿ, ಅರಿಮೆಯ ಪ್ರಕಾರ ತಿಳಿದು, ಬೇರೆಸುತ್ತುಗದುಸಿರಿಯನ್ನು ತಿಳಿಯುವುದು ಆಗಿತ್ತು.

ಜೊಸೆಪ್ ತಮ್ಮ ದಾವೆಯಲ್ಲಿ ಹೀಗೆ ಹೇಳುತ್ತಾರೆ,

ಈ ರಚನೆಯನ್ನು ತೀರ ಹತ್ತಿರದಲ್ಲಿ ದಿಟ್ಟಿಸಿದಾಗ ಬಹಳ ತಿಳಿಯಾಗಿ ಒಂದು ಉಸಿರಿಯ ಮೊಳಕೆಯಂತೆ ಕಾಣುತ್ತದೆ. ದಾವೆಯ ಪ್ರಕಾರ ಈ ರಚನೆ ಮೊದಲಿನಿಂದಲೂ ಅಲ್ಲೇ ಇತ್ತು, ಆದರೆ ಅದು ಬಹಳ ಚಿಕ್ಕದಾಗಿದ್ದು ಆಮೇಲಾಮೇಲೆ ಬೆಳೆದು ಕಣ್ಣಿಗೆ ಕಾಣುವಂತಾಗಿದೆ. ನಾಸಾ ಈ ರಚನೆಯನ್ನು ಬೇರೆ ಬೇರೆ ದಿಕ್ಕುಗಳಿಂದ ದಿಟ್ಟಿಸಿ ನೋಡಲು ನಿರಾಕರಿಸಿದೆ, ಸೀರುತೋರ‍್ಪುಕ (microscopic) ಚಿತ್ರಗಳನ್ನು ಕೂಡ ತೆಗೆಯಲು ನಿರಾಕರಿಸಿದೆ, ಹಾಗೆಯೇ ರಚನೆಯ ಇನ್ನೂ ತಿಳಿಯಾದ ತಿಟ್ಟಗಳನ್ನು ಬಿಡುಗಡೆಗೊಳಿಸಲು ನಿರಾಕರಿಸಿದೆ, ಇದೊಂದು ತರಹ ತಿಳಿಸಲಾರದ, ಜಾಗರೂಕತೆಯಿಲ್ಲದ, ವಿಚಿತ್ರ ನಡೆಯಾಗಿದೆ.

ನಾಸಾದ ಮಂಗಳ ಹುಡುಕಾಟದ ಮುಂದಾಳಾದ ಸ್ಟೀವ್ ಸ್ಕ್ವೇರಿಸ್ ಜವವರಿ 23, 2014, ಹತ್ತು ವರುಶಗಳ ಸಂಬ್ರಮದ ಕಾರ‍್ಯಕ್ರಮದಲ್ಲಿ ಆಡಿದ ಮಾತಿನ ಬಗೆ ಈ ವಿಶಯದಲ್ಲಿ ಇನ್ನೂ ಕೂತೂಹಲ ಹುಟ್ಟಿಸಿತ್ತು. ಅವರ ಆಡಿದ ಮಾತುಗಳು,

ಈ ಕಲ್ಲು ಹಿಂದೆಂದೂ ಕಾಣದ, ಒಂದು ವಡೆಯಾಕಾರದ(jelly doughnut) ಕಲ್ಲು, ಹೇಳಬೇಕೆಂದರೆ…, ಒಮ್ಮೆ ತಡಿಯಿರಿ, ಅರೆ ಇದು ಈ ಹಿಂದೆ ಇರಲಿಲ್ಲ, ಹವ್ದು ಆ ಜಾಗದಲ್ಲಿ ಇದು ಇರಲೇ ಇಲ್ಲ. ಇದು ನಿಜವಾಗಿರಲಿಕ್ಕಿಲ್ಲ. ಓ ದೇವರೇ ಇದು ಅಲ್ಲಿರಲೇ ಇಲ್ಲವಲ್ಲ! ನಾವು ಬೆಕ್ಕಸಬೆರಗಾಗಿದ್ದೇವೆ.

ರೋವರ್‍ ಆ ಜಾಗದ ಮೇಲೆ ಹರಿದಿಲ್ಲ, ಹಾಗಾದರೆ ಈ ಕಲ್ಲು ಎಲ್ಲಿಂದ ಬಂತು. ಈ ಕಾರಣದಿಂದ ನಾಸಾದ ಅರಿಗರು ಈ ಕಲ್ಲನ್ನು ’ಪಿನಾಕಲ್ ಅಯ್ ಲ್ಯಾಂಡ್’ ಕರೆದಿದ್ದಾರೆ. ಅಂದರೆ ದೂರ ಆಳದ ಕಡಲಿನ ನಡುವಿನಲ್ಲಿರುವ ತಿಳಿಯದ ದ್ವೀಪವೆಂದು.

ಸ್ಕ್ವೇರಿಸ್ ರ ಪ್ರಕಾರ ಎರಡು ಸಾದ್ಯತೆಗಳಿವೆಯಂತೆ:

1) ರೋವರ್‍ ಹರಿಯುವಾಗ ತನ್ನ ತಿರುಗುವ ಗಾಲಿಗೆ ಸಿಕ್ಕಿ ಚಿಮ್ಮಿರಬಹುದು
ಇಲ್ಲವೆ,
2) ಎಲ್ಲಿಂದಲೋ ಬಂದು ಬಿದ್ದಿರಬಹುದು, ಅದು ಮಂಗಳದ ನೆಲದ ಮೇಲೆ ಬಾನ್ಗಲ್ಲಿನ ಬಡಿತದಿಂದ ಆಗಿರಬಹುದು.

ನನ್ನ ಒಂದು ಅಂದಾಜು ಏನೆಂದರೆ, ರೋವರ್‍ ಅಲ್ಲಿಂದ ಒಂದು ಅಡಿ ಇಲ್ಲವೆ ಎರಡು ಅಡಿಯಲ್ಲಿ ತಿರುಗಿದೆ, ಆಗ ಇದು ನಡೆದಿರಬಹುದು.

ನಾಸಾದ ಪ್ರಕಾರ ಇದೊಂದು ಎಲ್ಲೂ ಸಿಗದ ಕಲ್ಲು, ಹಲವು ರಾಸಾಯನಿಕಗಳನ್ನು, ಗುಣಗಳನ್ನು ಹೊಂದಿದ ಕಲ್ಲೆಂದು ತಮ್ಮ ಹುಡುಕಾಟದಿಂದ ತಿಳಿಸಿದ್ದಾರೆ. ಈ ಕಲ್ಲು ಮಂಗಳದ ಎಂಡಿವರ್‍ ಕುಳಿಯ ಗೋಡೆಯ ಬಳಿ ಸಾಗುತ್ತ ಸಿಗುವ ಮುರ್‍ರೆ ಏಣಿಯಲ್ಲಿದೆ (Murray Ridge). ರಾಸಾಯನಿಕ ತಿಳುವಳಿಕೆ ಪ್ರಕಾರ, ಕಲ್ಲಿನಲ್ಲಿ ಹೆಚ್ಚಾಗಿ ಗಂದಕ ಕಂಡುಬಂದಿದೆ, ಜೊತೆಗೆ ಮೆಗ್ನಿಶಿಯಂ ಮತ್ತು ಇವೆರಡಕ್ಕೂ ಎರಡು ಪಟ್ಟು ಮ್ಯಾಂಗನೀಸ್ ಕೂಡ ಹೊಂದಿದೆ.

ಜೊಸೆಪ್ ಹೇಳೋದೇನೆಂದರೆ ತಾನೊಬ್ಬ ಪಿ. ಹೆಚ್ ಡಿ ಪದವಿದರ, ಅರಿಲ್ಲುಸಿರಿಯರಿಗ(astrobiologist), ಈಗಾಗಲೇ ಹಲವಾರು, ಕೇಳ್ವಿಗೆ ಎಡೆಮಾಡಿಕೊಡುವ ಬರಹಗಳನ್ನು ಪತ್ರಿಕೆಗಳಲ್ಲಿ ಪ್ರಕಟಿಸಿದ್ದೇನೆ, ಅವು ಹೆಸರುವಾಸಿಯಾಗಿವೆ. 1970ರಿಂದಲೂ ಮಿದುಳಿನ ಕೊಣಿಕೆಗಳ ಮೇಲೆ, ನಡವಳಿಕೆಗಳ ಮೇಲೆ, ಪರಿಸರ ಹಾಗೂ ಮಿದುಳಿನ ಮೇಲಿನ ಕಲಿಕೆಯ ಪರಿಣಾಮಗಳ ಮೇಲೆ ಅನೇಕ ಬರಹಗಳನ್ನು ಬರೆದಿದ್ದೇನೆ. ನನ್ನ ಅರಿಮೆಯ ಕಣ್ಣು ಅಚ್ಚರಿಯ ಈ ಕಲ್ಲನ್ನು ಒಂದು ಜಾತಿಯ ಅಣಬೆ ಎನ್ನುತ್ತಿದೆ. ಅದರಲ್ಲಿ ಹಲವು ಸಯನೊಬ್ಯಾಕ್ಟೀರಿಯಾ ಮತ್ತು ಲಿಚೆನ್ಗಳ ನೆಲಸೆಗಳಿವೆ (colonies) ಎಂದು ಕರಾರುವಾಕ್ಕಾಗಿ ಹೇಳಬಲ್ಲೆ.

ತಮ್ಮ ದಾವೆಯಲ್ಲಿ ಮನವಿ ಮಾಡುತ್ತಾ ಜೊಸೆಪ್ ನಾಸಾದೊಂದಿಗೆ ವಯಕ್ತಿಕ ನಿಂದನೆಗೂ ಇಳಿದಿದ್ದೂ ಇನ್ನು ಅಚ್ಚರಿ. ಅಲ್ಲಿ ಅವರು ಹೇಳುವುದು ಹೀಗೆ

ಯಾವುದೇ ಬುದ್ದಿ ಇರುವ ಚಿಂಪಾಜಿ, ಕೋತಿ, ನಾಯಿ, ಇಲಿಯೂ ಕೂಡ ಹತ್ತಿರ ಹೋಗಿ ಪತ್ತೆ ಹಚ್ಚುತ್ತದೆ ಅಂತದರಲ್ಲಿ ನಾಸಾ ಇದನ್ನು ಕಲ್ಲು ಅನ್ನುತ್ತಿದೆ.

ಜೊಸೆಪ್ ಇದರ ಸಲುವಾಗಿ ನಾಸಾದ ಬೇರೆ ಬೇರೆ ಕೆಲಸಗಾರರನ್ನು ಕಂಡಿದ್ದಾರಂತೆ. ಅವರೆಲ್ಲರಿಗೂ ಇದೇ ಪುರಾವೆಗಳನ್ನು ಒದಗಿಸಿದ್ದಾರೆಂದು ದಾವೆಯಲ್ಲಿ ಹೇಳಲಾಗಿದೆ. ಆದರೆ ಸಿಬ್ಬಂದಿ ಪ್ರತಿಕ್ರಯಿಸಲಿಲ್ಲವಂತೆ. ನಾಸಾದೆದುರು ಜೊಸೆಪ್ ಅವರ ಬೇಡಿಕೆ ಹೀಗಿತ್ತು,

ಅ) ಮೊದಲಿಗೆ ಸೋಲ್3540 (ಸೋಲ್ ಎಂದರೆ ಮಂಗಳದಲ್ಲಿನ ದಿನ) ತಿಟ್ಟದಲ್ಲಿ ತೋರಿಸಿದ ರಚನೆಯನ್ನು ನೂರು ತಿಳಿಯಾದ, ಸರಿಯಾದ ತಿಟ್ಟಗಳನ್ನು ಹತ್ತಿರದಲ್ಲಿ, ಬೇರೆ ಬೇರೆ ದಿಕ್ಕಿನಲ್ಲಿ, ಅಕ್ಕ-ಪಕ್ಕ, ಮೇಲೆ-ಕೆಳಗೆ ಮತ್ತು ಇದನ್ನು ಒಂದು ಸರಿಯಾದ ಬೆಳಕಿನಲ್ಲಿ ತೆಗೆಯಬೇಕು.

ಆ) ಕಡಿಮೆಯಾದರು 24 ಸೀರುತೋರ‍್ಪುಕ ತಿಟ್ಟಗಳನ್ನು ಬಳಸಿ ರಚನೆಯ ತುಟಿ, ಗೋಡೆ, ಮತ್ತು ಒಳಗಿನ ಬಾಗಗಳನ್ನು ಸರಿಯಾದ ಬೆಳಕಿನಲ್ಲಿ ತೆಗೆಯಬೇಕು.

ಇ) ನಾಸಾದ ರೋವರ್‍ ತಂಡ ಎಲ್ಲರೆದುರಿಗೆ ಹೇಳಬೇಕು ಮತ್ತು ದಾವೆ ಹೂಡಿದವರಿಗೆ ತಿಳಿಯಾದ ಸರಿಯಾದ ತಿಟ್ಟಗಳನ್ನು ಮತ್ತು ಪುರಾವೆಗೆ ಕೊಟ್ಟಂತಹ ತೋರ‍್ಪಡಿಕೆ ಎ) ಮತ್ತು ಬಿ) ಯನ್ನು ಕೊಡಬೇಕು.

joseph_pinnacle_AB

ನ್ಯಾಯಾಲಯವು ಈ ದಾವೆಯ ಸಲುವಾಗಿ ನಾಸಾಗೆ ಕೊಟ್ಟ ಅಪ್ಪಣೆ ಏನೆಂದರೆ:

ಜೊಸೆಪ್ ದಾವೆಯಲ್ಲಿ ಹೇಳಿದ ಮೇಲಿನ ಮೂರು ಮನವಿಯ ಜೊತೆಗೆ ನಾಸಾ ದಾವೆ ಮೂಲಕ ಕಂಡುಹಿಡಿದ ರಚನೆಯನ್ನು ಉಸಿರಿಯೆಂದು ಹೇಳಿದ್ದಾದಲ್ಲಿ, ಎಲ್ಲರೆದುರಿಗೆ ಇದನ್ನು ಕಂಡುಹಿಡಿದವರು ದಾವೆ ಹೂಡಿದವರಾದ ಜೊಸೆಪ್ ಎಂದು ಗವ್ರವಿಸಬೇಕು, ಒಪ್ಪಬೇಕು ಮತ್ತು ದಾವೆ ಹೂಡಿದವರೇ ಮೊದಲ ಬರಹಗಾರರು ಮತ್ತು ಅವರ ಆರು ಬರಹಗಳಿಗೆ ಕೊನೆಯದಾಗಿ ನಾಸಾದ ಪತ್ರಿಕಾ ಪ್ರಕಟಣೆಯಲ್ಲಿ ಜಾಗ ಸಿಗಬೇಕು, ಹಾಗೂ ಹಾಕಬೇಕು.

pinnacle_island_origin

ನಾಸಾ ಇದೇ ದಾವೆಯನ್ನೇ ಸವಾಲಾಗಿ ತೆಗೆದುಕೊಂಡು ಸೀರುತೋರ‍್ಪುಕ ತಿಟ್ಟಗಳನ್ನು ತೆಗೆಯಲು, ರಾಸಾಯನಿಕವಾಗಿಯೂ ಇನ್ನೂ ತಿಳಿಯಲು ಮುಂದಾಯಿತು. ಅವುಗಳನ್ನು ಜೊಸೆಪ್ ಗೆ ನೋಡಲೂ ಸಹ ಮಿಂದಾಣದಲ್ಲಿ ಹಾಕಿತು. ಮತ್ತಶ್ಟು ಪುರಾವೆಗಳನ್ನು ಇವೆಲ್ಲದಕ್ಕೂ ಹೇಳ್ವಿಕೆಯಾಗಿ ನಾಸಾ ಪೆಬ್ರವರಿ 14,2014ರಂದು ತೆಗೆದ ತಿಟ್ಟವನ್ನು ಪತ್ರಿಕೆಯಲ್ಲಿ ತೋರಿಸಿದೆ. ಅದರಲ್ಲಿ ಅಪರ‍್ಚುನಿಟಿ ತನ್ನ ಗಾಲಿಯಿಂದ ಎಬ್ಬಿಸಿದ ಜಾಗವನ್ನು ತಿಟ್ಟದಲ್ಲಿ ಸೆರೆಹಿಡಿದಿದೆ. ಈ ಕುರಿತು ಅರಿಗರ ಹೇಳಿದ್ದು ಇಶ್ಟು

ಅಪರ‍್ಚುನಿಟಿ ಪಿನಾಕಲ್ ಅಯ್ ಲ್ಯಾಂಡ ನಿಂದ ಸ್ವಲ್ಪ ದೂರ ಹೋದಾಗ ಅಲ್ಲೊಂದು ಸಣ್ಣ ದಿಣ್ಣೆಯ ಬಳಿ ಅದೇ ತರಹದ ಕಲ್ಲೊಂದು ಕಂಡುಬಂತು. ಹವ್ದು, ಅಲ್ಲೆ ಗಾಲಿಯು ಹರಿದ ಗುರುತು ಇದೆ. ಹವ್ದು ನಾವು ಅದರ ಮೇಲೆ ಹೋಗಿದ್ದೆವು, ಅಲ್ಲಿಂದಲೇ ಪಿನಾಕಲ್ ಅಯ್ ಲ್ಯಾಂಡ್ ಬಂದಿದ್ದು

mars_reconnaisance_orbitor_endeavour

ಮತ್ತೆ, ಬಾನ್ಗಲ್ಲಿನ ಬಡಿತದ ಅನುಮಾನವನ್ನು ನಾಸಾ ಬಗೆಹರಿಸಿದ್ದು ಅದೇ ದಿನ ಪೆಬ್ರವರಿ 14,2014ರಂದು ನಾಸಾದ ಮಂಗಳ ರೆಕೊನಯ್ಸಾಂನ್ಸ್ ಆರ‍್ಬಿಟರ್‍ (Mars Reconnaissance Orbiter) ಎಂಡಿವೋರ್‍ ಕುಳಿಯ ಹೊರಬಾನಿನಿಂದ ತೆಗೆದ ತಿಟ್ಟದಿಂದ. ಅಲ್ಲಿ ರೋವರ್‍ ನ ಓಡಾಟದ ಗುರುತುಗಳನ್ನು ಕಾಣಬಹುದಾಗಿದೆ. ಆದರೆ ಯಾವುದು ಬಾನ್ಗಲ್ಲಿನ(meteorite) ಬಡಿತದ ಕುರುಹುಗಳು ಕಾಣುವುದಿಲ್ಲ.

ಹೀಗೆ ದಾವೆಗೆ ಒದಗಿಸಿದ ಪುರಾವೆಗಳಿಂದ ತಿಳಿದುಬಂದದ್ದೇನೆಂದರೆ ನಾಸಾ ತನ್ನ ಮೇಲೆ ಬಂದ ಅಪವಾದಗಳನ್ನು, ಹಗರಣಗಳನ್ನು ಹೇಗೆ ಅರಿಮೆಯ ಮೂಲಕವೇ ಹೇಳಿಕೆ ಕೊಟ್ಟು, ತನ್ನಲ್ಲೇನೂ ಅರಿಮೆಯ ಬಗ್ಗೆ ಅರಕೆ ಮಾಡಲು ತೊಡಕಿಲ್ಲ ಎಂದು ತೋರಿಸಿರುವುದು. ಚಂದ್ರನ ಮೇಲೆ ಕಾಲಿಟ್ಟಾಗಲೂ ಇದೇ ರೀತಿ ವಿವಾದ ಹುಟ್ಟಿಕೊಂಡಿತ್ತಲ್ಲವೆ. ಚಂದ್ರನ ಮೇಲೆ ಕಾಲಿಟ್ಟಿದ್ದೂ ಕೂಡ ದಿಟವೆಂದು ತನ್ನ ಅರಿಮೆಯಿಂದ ಹೇಳ್ವಿಕೆ ಕೊಟ್ಟಿತ್ತು. ಮತ್ತೆ ಅದೇ ನಾಸಾ ಈ ಪುರಾವೆಯ ಮೂಲಕ ಬೇರೆಸುತ್ತುಗದುಸುರಿ ಮಂಗಳದಲ್ಲಿರುವುದನ್ನು ತಳ್ಳಿಹಾಕಿದೆ, ದಾವೆಗಾರನಿಗೆ ಸರಿಯಾದ ಹೇಳ್ವಿಕೆ ಕೊಟ್ಟಿದೆ.

ದಾವೆ ಹೂಡಿದ ಜೊಸೆಪ್ ಆದರೇನು, ನಾಸಾ ಆದರೇನು ಕೊನೆಗೆ ಗೆಲ್ಲುವುದು ದಿಟವಾದ ಅರಿಮೆಯೆ ಎಂದು ಮತ್ತೊಮ್ಮೆ ನಿಕ್ಕಿಯಾಗಿದೆ.

(ತಿಳಿವಿನ ಮತ್ತು ತಿಟ್ಟ ಸೆಲೆಗಳು: popsci, NASA)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: