ಬದಲಾಗಬೇಕು ಸಂವಿದಾನದ 84ನೇ ವಿದಿ

ಮಲ್ಲೇಶ್ ಬೆಳವಾಡಿ ಗವಿಯಪ್ಪ.

law
ಇನ್ನೇನು ಬರಲಿರುವ ಲೋಕಸಬೆ ಚುನಾವಣೆಗೆ ಬೇರೆ-ಬೇರೆ ಬಣಗಳಿಂದ ಕರ‍್ನಾಟಕದ ಬೇರೆ-ಬೇರೆ ಕ್ಶೇತ್ರಗಳಿಂದ ಕಣಕ್ಕಿಳಿಯಲಿರುವ ಅಬ್ಯರ‍್ತಿಗಳ ಹೆಸರು ಕೇಳಿಬರುತ್ತಿವೆ. ಅಂತೆಯೇ ಚಿಕ್ಕಬಳ್ಳಾಪುರ ಕ್ಶೇತ್ರದಿಂದ ಕನ್ನಡೇತರರು ಸ್ಪರ‍್ದಿಸುವರೆಂಬ ಮಾತು ಕೇಳಿಬರುತ್ತಿದೆ. ಮೊದಲಿಗೆ ತೆಲುಗು ನಟ, ಸೀಮಾಂದ್ರದ ಚಿರಂಜೀವಿ ಅವರ ಹೆಸರು ಕೇಳಿ ಬನ್ದಿತ್ತು, ನಂತರ ಕಾಂಗ್ರೆಸ್ ಬಣದ ಉಪಾದ್ಯಕ್ಶ ರಾಹುಲ್ ಗಾಂದಿ ಅವರ ಹೆಸರು ಕೇಳಿಬರುತ್ತಿದೆ. ಈ ಸುದ್ದಿ ನಿಜವೇ ಆದಲ್ಲಿ ನಾಡಿನ ಜನತೆಗೆ ಇದು ನೋವಿನ ಸಂಗತಿ. ಈ ನಾಡು-ನುಡಿ-ನಾಡಿಗರ ಜೊತೆ ಒಡನಾಟವಿಲ್ಲದ ದೂರದ ಊರಿನ, ನಮಗೆ ನಂಟಿಲ್ಲದ ವ್ಯಕ್ತಿಯೋರ‍್ವ ನಮ್ಮ ನಾಡಿನ ಕ್ಶೇತ್ರವೊಂದರಿಂದ ಲೋಕಸಬೆಗೆ ಸ್ಪರ‍್ದಿಸಬಹುದೆನ್ನುವ ವ್ಯವಸ್ತೆಯ ಬಗ್ಗೆ ಬೇಸರವಾಗುತ್ತದೆ.

ಹೀಗೆ ಬಾರತದ ಯಾವುದೋ ಮೂಲೆಯಲ್ಲಿರುವ ವ್ಯಕ್ತಿಯೋರ‍್ವ ಬಾರತದ ಯಾವುದೇ ಕ್ಶೇತ್ರದಿಂದ ಲೋಕಸಬೆಗೆ(ರಾಜ್ಯಸಬೆಗೂ ಕೂಡ) ಸ್ಪರ‍್ದಿಸಬಹುದೆನ್ನುವ ಸಂವಿದಾನದ ವಿದಿಯಲ್ಲೇನಿದೆ ಎಂಬುದನ್ನು ನೋಡೋಣ.
ಬಾರತದ ಸಂವಿದಾನ 1949ರ 84ನೇ ವಿದಿಯ ಪ್ರಕಾರ, ರಾಜ್ಯಸಬೆ/ಲೋಕಸಬೆಯ ಸದಸ್ಯನಾಗಲು ಇರಬೇಕಾದ ಅರ‍್ಹತೆಗಳು ಹೀಗಿವೆ:
1. ಅಬ್ಯರ‍್ತಿಯು ಬಾರತೀಯನಾಗಿರಬೇಕು.
2. ಲೋಕಸಬೆ ಸದಸ್ಯನಾಗಲು 25 ವರ‍್ಶಗಳು ಮತ್ತು ರಾಜ್ಯಸಬೆ ಸದಸ್ಯನಾಗಲು 30 ವರ‍್ಶ ವಯಸ್ಸಾಗಿರಬೇಕು.
3. ಸಂಸತ್ತು ಹೇಳುವ/ಪಟ್ಟಿಮಾಡುವ ಇನ್ನಿತರ ಅರ‍್ಹತೆಗಳನ್ನು ಹೊಂದಿರಬೇಕು.

ಹೀಗೆ ಹೆಚ್ಚು ಕಡಿವಾಣಗಳಿಲ್ಲದೆ ಬಾರತದ ಯಾವ ಕ್ಶೇತ್ರದಿಂದಾದರೂ ಸರಾಗವಾಗಿ ವ್ಯಕ್ತಿಯೋರ‍್ವ ತನಗೆ ಕಿಂಚಿತ್ತೂ ನಂಟಿಲ್ಲದ ನುಡಿ ಸಮುದಾಯವನ್ನು ಲೋಕಸಬೆ/ರಾಜ್ಯಸಬೆಗಳಲ್ಲಿ ಪ್ರತಿನಿದಿಸಬಹುದು. ಸಂವಿದಾನದ ಈ ಹುಳುಕು ವಿದಿಯನ್ನು ಬಳಸಿಕೊಂಡು ಹಿಂದಿನಿಂದಲೂ ಕರ‍್ನಾಟಕದ ಬೇರೆ-ಬೇರೆ ಕ್ಶೇತ್ರಗಳಿಂದ ಈ ನಾಡಿಗೆ ಕಿಂಚಿತ್ತೂ ನಂಟಿಲ್ಲದ ಇಂದಿರಾಗಾಂದಿ, ಅಜಿತ್ ಪ್ರಸಾದ್ ಜಯ್ನ್(ಉತ್ತರ ಪ್ರದೇಶದವರು), ಸಿ.ಎಮ್.ಸ್ಟೀಪನ್(ಕೇರಳದವರು), ಸೋನಿಯಾಗಾಂದಿ ಮುಂತಾದವರು ಕಾಂಗ್ರೆಸ್ ಬಣದಿಂದ ಲೋಕಸಬೆಗೆ ಸ್ಪರ‍್ದಿಸಿದ್ದರು. ಅಂತೆಯೇ ಬಿ.ಜೆ.ಪಿ ಬಣದಿಂದ ಸುಶ್ಮಾ ಸ್ವರಾಜ್ ಲೋಕಸಬೆಗೆ, ವೆಂಕಯ್ಯ ನಾಯ್ಡು, ಹೇಮಾಮಾಲಿನಿ ಅಂತವರು ರಾಜ್ಯಸಬೆಗೆ ಕರ‍್ನಾಟಕದ ಕ್ಶೇತ್ರಗಳಿಂದ ಸ್ಪರ‍್ದಿಸಿದ್ದರು. ಇವರೆಲ್ಲರೂ ತಮ್ಮ ಹಾಗೂ ತಮ್ಮ ಬಣದ ವೈಯುಕ್ತಿಕ ಲಾಬಕ್ಕಾಗಿ, ಪ್ರತಿಶ್ಟೆಗಾಗಿ ಕರ‍್ನಾಟಕವನ್ನು ಬಳಸಿಕೊಂಡರು. ಇವರಾರೂ ಚುನಾವಣೆಯ ಬಳಿಕ ಇಲ್ಲಿಯ ಮಂದಿಯ ಕೋರಿಕೆಯನ್ನು ಆಲಿಸಲಿಲ್ಲ, ತಾವು ಪ್ರತಿನಿದಿಸಿದ ಕ್ಶೇತ್ರದ ಪ್ರಗತಿಗೆ ದುಡಿಯಲಿಲ್ಲ. ಒಮ್ಮೆ ಇತ್ತ ತಿರುಗಿಯೂ ನೋಡಲಿಲ್ಲ. ಇವರೆಲ್ಲರೂ ತಾವು ಸ್ಪರ‍್ದಿಸಿದ ಕ್ಶೇತ್ರಗಳನ್ನು ಬಳಸಿ ಎಸೆವ ವಸ್ತುವಿನಂತೆ ಕಂಡರಶ್ಟೆ. ಇತ್ತ ಸ್ತಳೀಯ ನಾಯಕರು ಹಯ್ ಕಮಾಂಡ್ ಹೇಳಿದಂತೆ ಹೊರಗಿನವರಿಗೆ ತಮ್ಮ ಸ್ತಾನವನ್ನು ಬಿಟ್ಟುಕೊಟ್ಟು ಶಾನುಬೋಗ ಹೇಳಿದ್ದಕ್ಕೆ ಹೆಬ್ಬೆಟ್ಟೊತ್ತುವ ಗುಲಾಮರಂತೆ ನಡೆದುಕೊಂಡು ನಾಡಿನ ಮಂದಿಯ ನಂಬುಗೆ, ವಿಶ್ವಾಸ ಕಳೆದುಕೊಂಡರು.

ಒಂದು ನಾಡಿನ ನುಡಿಯನ್ನೇ ಅರಿಯದ, ಆ ನಾಡಿನ ಮಂದಿಯ ಜೊತೆ ಒಡನಾಟವಿಲ್ಲದ ಅನಾಮಿಕ ಜನಪ್ರತಿನಿದಿಯು ಹೇಗೆ ತಾನೆ ಆ ನಾಡಿಗರ ಕೋರಿಕೆಯನ್ನು ಆಲಿಸಬಲ್ಲನು ? ತಾನು ಪ್ರತಿನಿದಿಸುವ ನಾಡಿನೊಂದಿಗೆ ಯಾವುದೇ ರೀತಿಯ ನಂಟಿರದ, ಆ ನಾಡಿನ ತೊಂದರೆಗಳನ್ನು ಅರಿಯದ, ಆ ನಾಡಿನ ನಾಡಿಗರ ಜನರ ಮಿಡಿತ ಅರಿಯದ ಜನಪ್ರತಿನಿದಿಯು ಹೇಗೆ ತಾನೆ ಆ ನಾಡಿನ, ನಾಡಿಗರ ತೊಂದರೆಗಳನ್ನು ಬಗೆಹರಿಸುವತ್ತ ಕೆಲಸ ಮಾಡಿಯಾನು ? ಇನ್ನಾದರೂ ಸ್ತಳೀಯ ಅರ‍್ಹ ಅಬ್ಯರ‍್ತಿಗಳು ಮಾತ್ರ ನಾಡಿನ ಮಂದಿಯನ್ನು ಪ್ರತಿನಿದಿಸಬೇಕು ಎನ್ನುವಂತೆ ಸಂವಿದಾನದ 84 ನೇ ವಿದಿಯ ತಿದ್ದುಪಡಿಯಾಗಲಿ. ಆ ಮೂಲಕ ಈಗಾಗುತ್ತಿರುವ ಸಂವಿದಾನದ 84 ನೇ ವಿದಿಯ ದುರುಪಯೋಗ ನಿಲ್ಲಲಿ.

(ಚಿತ್ರ ಸೆಲೆ: 2009wpfg)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: