ಎತ್ತಿನ ಹೊಳೆ ಯೋಜನೆ ಎತ್ತ ಹೊರಟಿದೆ?

– ಚೇತನ್ ಜೀರಾಳ್.

Netravati_River

ಈ ಬರಹ ಬರೆಯುವ ಹೊತ್ತಿಗೆ ಡಾ. ಜಿ. ಎಸ್. ಪರಮಶಿವಯ್ಯನವರು ತೀರಿಹೋದರೆಂದು ಸುದ್ದಿ ಮಾದ್ಯಮದಲ್ಲಿ ನೋಡಿದೆ. ನಾಡಿಗೆ ಅವರು ನೀಡಿರುವ ಕೊಡುಗೆಯನ್ನು ನೆನೆಯುತ್ತ ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಕೋರುತ್ತೇನೆ.

ಇತ್ತೀಚಿಗೆ ಕನ್ನಡ ನಾಡಿಗೆ ಸಂಬಂದಿಸಿದಂತೆ ಬಹುಚರ‍್ಚೆಗೆ ಒಳಪಟ್ಟಿರುವ ವಿಶಯ ಎತ್ತಿನಹೊಳೆ ಯೋಜನೆ. ಈ ಯೋಜನೆ ಏನು ಎತ್ತ ಎಂದು ನೋಡುವುದಕ್ಕೂ ಮೊದಲು ಕನ್ನಡ ನಾಡಿನಲ್ಲಿ ಹರಿಯುತ್ತಿರುವ ನದಿಗಳು ಹಾಗೂ ಅದರಿಂದ ನಮಗೆ ಬಳಕೆಗೆ ಸಿಗುತ್ತಿರುವ ನೀರಿನ ಪ್ರಮಾಣವೆಶ್ಟು ಎಂದು ನೋಡೋಣ.

ನಮ್ಮ ನಾಡಿನಲ್ಲಿರುವ ನದಿಪಾತ್ರಗಳು:

ನಮ್ಮ ನಾಡಿನಲ್ಲಿ ಒಟ್ಟು ಏಳು ನದಿಪಾತ್ರಗಳು, ತಮ್ಮ ಕೂಡುಹೊಳೆಗಳೊಂದಿಗೆ ಹರಿಯುತ್ತಿವೆ. ಆ ನದಿಗಳ ಹೆಸರು ಮತ್ತು ಅವು ಒಳಗೊಂಡಿರುವ ಒಟ್ಟು ಪ್ರದೇಶ ಈ ಕೆಳಗಿನಂತಿದೆ:

ಕ್ರಮ ಸಂಕ್ಯೆ

ನದಿ ಪಾತ್ರ

ಒಟ್ಟು ಹರಿವು

1000 ಚ. ಕಿಮಿ

ಶೇ

1

ಗೋದಾವರಿ

4.41

2.31

2

ಕ್ರಿಶ್ಣ

113.29

59.48

3

ಕಾವೇರಿ

34.27

17.99

4

ಉತ್ತರ ಪೆನ್ನಾರ್

6.94

3.64

5

ದಕ್ಶಿಣ ಪೆನ್ನಾರ್

4.37

2.29

6

ಪಾಲಾರ್

2.97

1.56

7

ಪಶ್ಚಿಮ ದಿಕ್ಕಿಗೆ ಹರಿಯುವ ನದಿಗಳು

24.25

12.73

ಒಟ್ಟು

190.50

100

ಈ ಮೇಲೆ ಹೇಳಿರುವ ನದಿಗಳಲ್ಲಿ ಕ್ರಿಶ್ಣ ನದಿ ಎಲ್ಲಾ ನದಿಗಳಿಗಿಂತ ಹೆಚ್ಚಿನ ಪ್ರದೇಶದಲ್ಲಿ ಹರಿಯುತ್ತದೆ. ಈ ಬರಹದಲ್ಲಿ ನಾನು ಮುಕ್ಯವಾಗಿ ಪಶ್ಚಿಮ ದಿಕ್ಕಿಗೆ ಹರಿಯುತ್ತಿರುವ ನದಿಗಳ ಬಗ್ಗೆ ಮಾತನಾಡುತ್ತಿದ್ದೇನೆ.

ಪಶ್ಚಿಮ ದಿಕ್ಕಿಗೆ ಹರಿಯುವ ನದಿಗಳು:

ಹೆಸರೇ ಹೇಳುವಂತೆ ಪಶ್ಚಿಮ ಗಟ್ಟದ ತುದಿಯಲ್ಲಿ ಹುಟ್ಟುವ ನದಿಗಳು ಗಟ್ಟದ ಮೂಲಕ ಹರಿದು ಅರಬ್ಬಿ ಸಮುದ್ರವನ್ನು ಸೇರುತ್ತವೆ. ಈ ಪ್ರದೇಶದಲ್ಲಿ ಅತಿ ಹೆಚ್ಚು ಮಳೆಯಾಗಲು ಇಲ್ಲಿರುವ ಪಶ್ಚಿಮ ಗಟ್ಟದ ಕಾಡು ತುಂಬಾ ಸಹಕಾರಿಯಾಗಿದೆ. ಇಲ್ಲಿ ಹುಟ್ಟುವ ನದಿಗಳು ಪಶ್ಚಿಮ ದಿಕ್ಕಿನಲ್ಲಿ ಹರಿದು ಸುಮಾರು 50 ರಿಂದ 300 ಕಿಮಿ ದೂರ ಕ್ರಮಿಸಿ ಅರಬ್ಬಿ ಸಮುದ್ರಕ್ಕೆ ಸೇರುತ್ತವೆ. ಈ ನದಿಗಳು ಸಮುದ್ರ ಸೇರಲು ಹತ್ತಿರವಿರುವಾಗ ಸಮತಟ್ಟಾದ ನೆಲದಲ್ಲಿ ಹರಿಯುತ್ತವೆ. ಇದಕ್ಕಿಂತ ಮುಂಚೆ ತುಂಬಾ ಕಡಿದಾದ ಪ್ರದೇಶದಲ್ಲಿ ಹರಿಯುತ್ತವೆ. ಈ ನದಿಗಳಲ್ಲಿ ಪ್ರಮುಕವಾಗಿರುವ ನದಿಗಳು ಮಹದಾಯಿ, ಕಾಳಿನದಿ, ಬೇಡ್ತಿ, ಅಗನಾಶಿನಿ, ಶರಾವತಿ, ವರಾಹಿ, ನೇತ್ರಾವತಿ, ಬರಪೊಳೆ.

ಏನಿದು ಎತ್ತಿನಹೊಳೆ ಯೋಜನೆ?

ಹಿಂದಿನಿಂದಲೂ ಕರ‍್ನಾಟಕ ಸರಕಾರ ಪಶ್ಚಿಮ ದಿಕ್ಕಿನಲ್ಲಿ ಹರಿಯುವ ನದಿ ನೀರನ್ನು ಉಪಯೋಗಿಸುವ ಬಗ್ಗೆ ಯೋಚಿಸುತ್ತಾ ಬಂದಿದೆ. ಈ ನಿಟ್ಟಿನಲ್ಲಿ ಕರ‍್ನಾಟಕ ಸರಕಾರ ಡಾ. ಜಿ. ಎಸ್. ಪರಮಶಿವಯ್ಯ ಅವರ ಮುಂದಾಳ್ತನದಲ್ಲಿ ಸಮಿತಿಯೊಂದನ್ನು ಮಾಡಿತು. ಈ ಸಮಿತಿಯು ಯೋಜನೆಯೊಂದನ್ನು ರೂಪಿಸಿ ಅದರ ಅನುಗುಣವಾಗಿ ಪಶ್ಚಿಮ ದಿಕ್ಕಿಗೆ ಹರಿಯುವ ನದಿ ನೀರನ್ನು ತಿರುಗಿಸಿ ಬಯಲು ಸೀಮೆಯ ಕೋಲಾರ, ಬೆಂಗಳೂರು, ತುಮಕೂರು, ರಾಮನಗರ, ಚಿಕ್ಕಮಗಳೂರು, ಚಿಕ್ಕಬಳ್ಳಾಪುರ ಮುಂತಾದ ಜಿಲ್ಲೆಗಳಿಗೆ ನೀರು ಒದಗಿಸುವುದು ಎಂದು ತನ್ನ ವರದಿಯಲ್ಲಿ ಹೇಳಿತ್ತು.

ಇದರ ಪ್ರಕಾರವಾಗಿ ಕುಮಾರದಾರ ನದಿಯ (ಈ ನದಿಯು ಮುಂದೆ ನೇತ್ರಾವತಿ ನದಿಯನ್ನು ಸೇರಿಕೊಳ್ಳುತ್ತದೆ) ಕೂಡುನದಿಯಾಗಿರುವ ಗುಂಡ್ಯ ನದಿ ನೀರನ್ನು ಮೂಡಣದಲ್ಲಿರುವ ಜಿಲ್ಲೆಗಳಿಗೆ ಉಣಬಡಿಸುವುದು. ಇದರಲ್ಲಿ ಎರಡು ಹಂತಗಳಲ್ಲಿ ಎಂಟು ಆಣೆಕಟ್ಟೆಗಳನ್ನು ಕಟ್ಟಿ ನದಿಯ ನೀರನ್ನು ತಿರುಗಿಸಿ ಈ ಯೋಜನೆಯ ಮೂಲಕ ಒಟ್ಟು 24 ಟಿ.ಎಂ.ಸಿ ನೀರನ್ನು ಮೇಲೆ ಹೇಳಿದ ಜಿಲ್ಲೆಗಳಿಗೆ ಒದಗಿಸಲಾಗುವುದು ಎಂದು ಸರಕಾರ ಹೇಳುತ್ತಾ ಬಂದಿದೆ.

ಹಾಗಿದ್ದರೆ ಈ ಯೋಜನೆಗೆ ವಿರೋದವೇಕೆ?

ಈ ಯೋಜನೆಗೆ ವಿರೋದ ಹಲವಾರು ಕಡೆಗಳಿಂದ ಬರುತ್ತಿದೆ. ಮುಕ್ಯವಾಗಿ ದಕ್ಶಿಣ ಕನ್ನಡ ಜನರು, ಪರಿಸರವಾದಿಗಳು, ಹಲವಾರು ಎನ್.ಜಿ.ಒ ಗಳು ಈ ಯೋಜನೆಯನ್ನು ವಿರೋದ ಮಾಡುತ್ತಿದ್ದಾರೆ. ಇದಕ್ಕೆ ಅವರುಗಳು ಹಲವಾರು ಕಾರಣಗಳನ್ನು ಕೊಡುತ್ತಾರೆ ಅವುಗಳಲ್ಲಿ ಮುಕ್ಯವಾಗಿ:

  • ನೇತ್ರಾವತಿ ನದಿಯು ಮಂಗಳೂರು ಮತ್ತು ದಕ್ಶಿಣ ಕನ್ನಡದ ಹಲವು ಬಾಗಗಳಿಗೆ ಕುಡಿಯುವ ನೀರಿನ ಮೂಲವಾಗಿದೆ, ಈ ಯೋಜನೆ ಜಾರಿಗೆ ಬಂದರೆ ಈಗಾಗಲೇ ತೊಂದರೆ ಅನುಬವಿಸುತ್ತಿರುವ ಜನರಿಗೆ ನೀರಿಲ್ಲದಂತಾಗುತ್ತದೆ
  • ಈ ಯೋಜನೆ ಜಾರಿಗೆ ತರಲು ನೂರಾರು ಎಕರೆ ಕಾಡು ನಾಶವಾಗುತ್ತದೆ, ಈಗಾಗಲೇ ಹಲವಾರು ಸೂಕ್ಶ್ಮ ಜೀವಿಗಳನ್ನು ಹೊಂದಿರುವ ಪಶ್ಚಿಮಗಟ್ಟದ ಕಾಡಿಗೆ ತೊಂದರೆಯಾಗುತ್ತದೆ
  • ಸಿಹಿನೀರಿನ ಹರಿವು ಸಮುದ್ರಕ್ಕೆ ಕಡಿಮೆಯಾಗಿ ಮೀನುಗಳ ಸಂತತಿ ಅಳಿಸುವ ಅಪಾಯವಿದೆ ಹಾಗೂ ಇದರಿಂದ ಮೀನುಗಾರರ ಕುಟುಂಬಕ್ಕು ತೊಂದರೆಯಾಗುತ್ತದೆ
  • ಈ ಯೋಜನೆ ಆರ‍್ತಿಕವಾಗಿ ಮತ್ತು ತಾಂತ್ರಿಕವಾಗಿ ಜಾರಿಗೆ ತರಲು ಸಾದ್ಯವಿಲ್ಲ. ಇದರ ಪರಿಣಾಮ ಪಶ್ಚಿಮ ಗಟ್ಟದ ಮೇಲು ಮತ್ತು ಪೂರ‍್ವದ ಬಯಲು ಸೀಮೆಯ ಜೀವಿಗಳ ಮೇಲೂ ಇರುತ್ತದೆ
  • ಇಲ್ಲಿಂದ ಪಡೆಯುವ ನೀರನ್ನು ಕೇವಲ ಕುಡಿಯುವ ಸಲುವಾಗಿ ಮಾತ್ರ ಬಳಸಲಾಗುತ್ತಿಲ್ಲ ಬದಲಾಗಿ ಕಯ್ಗಾರಿಕೆಗಳಿಗೂ ಬಳಸಲಾಗುತ್ತಿದೆ

ಹೀಗೆ ಹಲವಾರು ವಿಶಯಗಳಲ್ಲಿ ಈ ಯೋಜನೆಯ ಬಗ್ಗೆ ಪೂರ‍್ತಿ ಮಾಹಿತಿ ಜನರಿಗಿಲ್ಲವೆನ್ನಿಸುತ್ತದೆ. ಇನ್ನೊಂದೆಡೆ ಬಯಲುಸೀಮೆಯ ಜನರು ಈ ಯೋಜನೆಗೆ ವಿರೋದ ಮಾಡುತ್ತಿರುವ ದಕ್ಶಿಣ ಕನ್ನಡದ ಜನರ ಬಗ್ಗೆ ಸಿಟ್ಟಾಗಿದ್ದಾರೆ. ಕುಡಿಯುವ ನೀರಿನ ಯೋಜನೆಗೂ ಅನುವುಮಾಡಿಕೊಡುತ್ತಿಲ್ಲ ಎನ್ನುವ ಆರೋಪ ಅವರದು. ಬಯಲು ಸೀಮೆಯ ಬರಗಾಲದ ಸ್ತಿತಿ, ಸಾವಿರ ಅಡಿಗಳಶ್ಟು ಅಗೆದರು ಸಿಗದ ನೀರು. ನೀರು ಸಿಕ್ಕರು ಅದು ಕುಡಿಯುವುದಕ್ಕೆ ಯೋಗ್ಯವಿಲ್ಲ. ಹೆಚ್ಚುತ್ತಿರುವ ಪ್ಲೋರಯ್ಡ್ ಅಂಶ, ಇದರಿಂದ ಕಾಯಿಲೆ ಬೀಳುತ್ತಿರುವ ಜನರು. ಹಾಗಾಗಿ ಎತ್ತಿನ ಹೊಳೆ ಯೋಜನೆಯಿಂದಾಗಿ ತಮಗೆ ಕುಡಿಯಲು ನೀರು ಸಿಗುತ್ತದೆ ಅನ್ನುವುದು ಅವರ ಆಸೆ. ಹಾಗಾಗಿಯೇ ಈ ಯೋಜನೆ ಜಾರಿಗೆ ಬರಲೇಬೇಕು ಎಂದು ಹೋರಾಟಗಳನ್ನು ಮಾಡುತ್ತಿದ್ದಾರೆ.

ಜನಪ್ರತಿನಿದಿಗಳು ಮುಂದಾಳ್ತನ ವಹಿಸಬೇಕು:

ಈ ಮೇಲೆ ಮಲೆನಾಡಿನ ಜನರಾಗಲಿ ಅತವಾ ಬಯಲುಸೀಮೆಯ ಜನರಾಗಲಿ ಎತ್ತುತ್ತಿರುವ ಕೇಳ್ವಿಗಳು ಅತವಾ ಅವರು ಮಾಡುತ್ತಿರುವ ಹೋರಾಟಗಳು ತಪ್ಪೆಂದು ತೀರ‍್ಮಾನಕ್ಕೆ ಬರುವುದು ಸುಲಬವಲ್ಲ. ಎರಡೂ ಕಡೆಯ ಜನರು ತಮ್ಮ ಒಳಿತಿಗೆ ಯಾವುದು ಸರಿ ಅತವಾ ಯಾವುದು ತಪ್ಪು ಅನ್ನುವ ಗೊಂದಲದಲ್ಲಿದ್ದಾರೆ. ಗಾಯಕ್ಕೆ ಉಪ್ಪು ಸುರಿದಂತೆ ಈ ಚುನಾವಣೆ ಹತ್ತಿರ ಬರುತ್ತಿರುವ ಸಂದರ‍್ಬದಲ್ಲಿ ಕಾಂಗ್ರೆಸ್ ಸರಕಾರ ತರಾತುರಿಯಲ್ಲಿ ಯೋಜನೆಗೆ ಅಡಿಗಲ್ಲು ಹಾಕಲು ನಿಂತಿದೆ. ಇನ್ನೊಂದೆಡೆ ಈ ಪ್ರದೇಶಗಳಿಗೆ ಸಂಬಂದಿಸಿದ ಜನಪ್ರತಿನಿದಿಗಳು ಸಹ ವಹಿಸಬೇಕಾದಶ್ಟು ಕಾಳಜಿ ತೋರುತ್ತಿಲ್ಲ. ಇಂತಹ ನಡೆ ಜನರನ್ನು ಇನ್ನೂ ಹೆಚ್ಚು ಗೊಂದಲಕ್ಕೆ ಈಡು ಮಾಡುತ್ತದೆ.

ಇಂತಹ ಸಮಯದಲ್ಲಿ ಎರಡೂ ಕಡೆಯ ಜನರನ್ನು ಒಂದೇ ವೇದಿಕೆಯ ಮೇಲೆ ತಂದು ಅವರಿಗಿರುವ ಸಂದೇಹ, ಕೇಳ್ವಿಗಳಿಗೆ ಉತ್ತರ ಕೊಡಬೇಕಾಗಿದ್ದ ಜನಪ್ರತಿನಿದಿಗಳು ಹಾಗೂ ಸರಕಾರ ಮಾಡಬೇಕಾಗಿದ್ದ ಕೆಲಸ. ಆದರೆ ಸರಕಾರಕ್ಕಾಗಲಿ, ಅಲ್ಲಿನ ಜನಪ್ರತಿನಿದಿಗಳಿಗಾಗಲಿ ಅತವಾ ರಾಜ್ಯದ ನಾಯಕರುಗಳಿಗಾಗಲಿ ಈ ಸಮಸ್ಯಯನ್ನು ಬಗೆಹರಿಸುವ ಕೆಲಸ ಮಾಡುತ್ತಿಲ್ಲ. ಇಲ್ಲಿ ಬೇಕಾಗಿರುವುದು ನಿಜವಾದ ಮುಂದಾಳ್ತನ, ಇದನ್ನು ರಾಜಕೀಯ ನಾಯಕರುಗಳು ಮಾತ್ರ ಮಾಡಲು ಸಾದ್ಯ. ಇಲ್ಲಿ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಪಕ್ಶಗಳನ್ನು ಬದಿಗಿಟ್ಟು ಎರಡು ಸೀಮೆಯ ಜನರಿಗೆ ಒಪ್ಪಿಯಾಗುವಂತಹ, ಒಳಿತಾಗುವಂತಹ ಯೋಜನೆಯನ್ನು ಜಾರಿಗೆ ತರುವ ಕೆಲಸವಾಗಬೇಕು. ಬದಲಾಗಿ ಇಲ್ಲಿ ಒಳಗಿಂದೊಳಗೇ ಜನರನ್ನು ಒಬ್ಬರ ಎದುರು ಒಬ್ಬರನ್ನು ಎತ್ತಿ ಕಟ್ಟುವ ಕೆಲಸವಾಗುತ್ತಿದೆಯಾ ಅನ್ನುವ ಸಂಶಯ ಕಾಡುತ್ತಿದೆ. ಜನರ ಕಾಳಜಿಗಿಂತ ರಾಜಕೀಯದ ಮೇಲಾಟವೇ ಎದ್ದು ಕಾಣುತ್ತಿದೆ.

ಕೊನೆಯದಾಗಿ ಒಬ್ಬರ ಒಳಿತಿಗಾಗಿ ಇನ್ನೊಬ್ಬರ ಒಳಿತನ್ನು ಬಲಿಕೊಡಬಾರದು. ಇಲ್ಲಿ ನಾವೆಲ್ಲರೂ ಒಂದೇ ನಾಡಿನ ಮಕ್ಕಳು, ಬಯಲುಸೀಮೆಯ ಜನರಿಗೆ ಎತ್ತಿನಹೊಳೆ ಯೋಜನೆಯಿಂದ ಅವರ ನೀರಿನ ದಾಹ ತೀರಿಸಬಹುದು ಅನ್ನುವುದಾದರೆ ಅದಕ್ಕೆ ವಿರೋದ ಬೇಡ. ಅದೇ ನಿಟ್ಟಿನಲ್ಲಿ ಈ ಯೋಜನೆಯನ್ನು ಜಾರಿಗೆ ತರಲು ಪಶ್ಚಿಮ ಗಟ್ಟದ ಕಾಡನ್ನು, ಕಾಡು ಪ್ರಾಣಿಗಳನ್ನು ಬಲಿಕೊಡುವುದು ಬೇಕಾಗಿಲ್ಲ. ಬದಲಾಗಿ ಅರಿಮೆಯ ಗರಿಶ್ಟ ಮಟ್ಟದ ಉಪಯೋಗ ಇಲ್ಲಿ ಆಗಬೇಕು. ಪ್ರಪಂಚದ ಹಲವೆಡೆ ಇಂತಹ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಅಲ್ಲಿ ಇದಕ್ಕೆ ಬಳಸಲಾಗಿರುವ ಚಳಕಗಳನ್ನು ನಾವು ಬಳಸಿಕೊಳ್ಳಬೇಕು. ಎಲ್ಲರಿಗೂ ಒಳಿತಾಗುವ ದಾರಿಯೊಂದನ್ನು ಹುಡುಕಬೇಕು. ಹುಡುಕಬಹುದು. ಹುಡುಕೋಣ!!!

(ಚಿತ್ರ ಸೆಲೆ: Wikimedia)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: