ಬಿತ್ತಿದ ಬೀಜ ಮೊಳೆಕೆ ಒಡೆದೀತು ಹೇಗೆ?

– ರತೀಶ ರತ್ನಾಕರ.

ಮಣ್ಣಿನಲ್ಲಿ ಬಿತ್ತಿರುವ, ನೀರಿನಲ್ಲಿ ಕಟ್ಟಿಟ್ಟಿರುವ ಇಲ್ಲವೇ ಮಣ್ಣಿನ ಮೇಲೆ ಬಿದ್ದಿರುವ ಬೀಜಗಳು ಮೊಳಕೆಯೊಡೆದಿರುವುದನ್ನು ನಾವು ನೋಡಿರುತ್ತೇವೆ. ಬೀಜವನ್ನು ಯಾವುದಾದರು ಒಂದು ಡಬ್ಬಿಯೊಳಗೆ ಹಾಗೆಯೇ ಇಟ್ಟಿದ್ದಲ್ಲಿ ಅದು ಯಾವ ಬದಲಾವಣೆಯೂ ಆಗದೆ ಹಾಗೆಯೇ ಇರುವ ಬೀಜವು ಮಣ್ಣಿನ ಇಲ್ಲವೇ ನೀರಿನ ಜಾಗಕ್ಕೆ ಬಿದ್ದೊಡನೆ ಮೊಳಕೆಯೊಡೆದು ಗಿಡವಾಗ ತೊಡಗುತ್ತದೆ. ತಾನಾಗಿಯೇ ಆಗುವ ಈ ಕೆಲಸ ಹಲವು ಹಂತಗಳಲ್ಲಿ ನಡೆಯುತ್ತದೆ. ಇದು ಹೇಗೆ ಎಂದು ತಿಳಿದುಕೊಳ್ಳೋಣ ಬನ್ನಿ.

ಬೀಜವು ಹೇಗೆ ಮೊಳಕೆಯೊಡೆಯುತ್ತದೆ ಎಂದು ಅರಿಯುವ ಮೊದಲು ಬೀಜದ ಇಟ್ಟಳದ (structure) ಬಗ್ಗೆ ತಿಳಿದುಕೊಳ್ಳೋಣ. ಯಾವುದೇ ಬೀಜದಲ್ಲಿ ಈ ಕೆಳಗಿನ ಮೂರು ಬಾಗಗಳಿರುತ್ತವೆ.

seed

ಬಸಿರ ಪೊರೆಕ (Endosperm) : ಬೀಜದ ಹೆಚ್ಚಿನ ಬಾಗವನ್ನು ಇದು ಪಡೆದುಕೊಂಡಿರುತ್ತದೆ. ಬೀಜದ ಬಸಿರಿಗೆ ಬೇಕಾಗುವ ಊಟವನ್ನು ಮತ್ತು ಆರಯ್ಕೆಯನ್ನು ಗಂಜಿಯ ರೂಪದಲ್ಲಿ ಈ ಬಸಿರ ಪೊರೆಕ ನೀಡುತ್ತದೆ, ಅಲ್ಲದೇ ಇದರಲ್ಲಿ ಎಣ್ಣೆ ಹಾಗು ಮುನ್ನು (protien) ಅಂಶಗಳು ಇರುತ್ತದೆ. ಇದು ಬಸಿರಿಗೆ ಬೇಕಾಗುವ ಆರಯ್ಕೆಯನ್ನು ಮಾಡುವುದಲ್ಲದೇ ಅದರ ಊಟವನ್ನು ಕೂಡಿಡುವ ಕೆಲಸವನ್ನು ಮಾಡುತ್ತದೆ. ಬೀಜದ ಹೆಚ್ಚಿನ ಬಾಗ ಬಸಿರ ಪೊರೆಕದಿಂದ ಕೂಡಿರುತ್ತದೆ.

ಬಸಿರು (Embryo): ಬೀಜದ ಬಸಿರು ಇದಾಗಿದ್ದು ಮುಂದೆ ಬೀಜವು ಮೊಳಕೆಯೊಡದು ಬೇರು, ಕಾಂಡ ಹಾಗು ಎಲೆಗಳಾಗಲು ಬೇಕಾಗುವಂತಹ ಗೂಡುಕಟ್ಟುಗಳನ್ನು (tissue) ಇದು ಹೊಂದಿರುತ್ತದೆ. ಜೊತೆಗೆ ಮೊಳಕೆ ಎಲೆಯ(cotyledon) ಗೂಡುಕಟ್ಟುಗಳು ಕೂಡ ಇರುತ್ತವೆ. ಇವು ಬೀಜದ ಬಸಿರಿಗೆ ಬೇಕಾಗಿರುವ ಊಟವನ್ನು ಪಕ್ಕದಲ್ಲಿರುವ ಬಸಿರ ಪೊರೆಕದಿಂದ ಬಸಿರಿಗೆ ಸಾಗಿಸುವಲ್ಲಿ ನೆರವಾಗುತ್ತವೆ. ಅಲ್ಲದೇ, ಬೀಜವು ಬಿಡುವ ಮೊದಲ ಎಲೆಯನ್ನು ಕಾಪಾಡಲು ಬೇಕಾಗಿರುವ ಕಾಪು (shield) ಈ ಮೊಳಕೆ ಎಲೆಯಲ್ಲಿ ಇರುತ್ತದೆ. ಬೀಜವು ಒಂದೆಲೆ ಗಿಡವಾಗಬೇಕೋ ಇಲ್ಲವೇ ಎರಡಲೆ ಗಿಡವಾಗಬೇಕೋ ಎಂಬುದು ಈ ಮೊಳಕೆ ಎಲೆಯ ಗೂಡುಕಟ್ಟುಗಳಲ್ಲೇ ಇರುತ್ತದೆ.

ಸಿಪ್ಪೆ: ಬಸಿರು ಹಾಗು ಬಸಿರ ಪೊರೆಕವನ್ನು ಸುತ್ತಿಕೊಂಡು ಎರವಾಗದಂತೆ ಕಾಪಾಡುವುದೇ ಸಿಪ್ಪೆ. ಸಿಪ್ಪೆಯು ಕೆಲವು ಬೀಜಗಳಲ್ಲಿ ತೆಳುವಾಗಿ (ಕಡಲೇ ಬೀಜದಲ್ಲಿರುವ ಹಾಗೆ), ಇನ್ನು ಕೆಲವು ಬೀಜಗಳಲ್ಲಿ ದಪ್ಪನಾಗಿ (ತೆಂಗಿನಕಾಯಿಯಲ್ಲಿರುವ ಹಾಗೆ) ಇರುತ್ತದೆ. ಹೊರಗಿನ ಹಾನಿಗಳಿಂದ ಬಸಿರನ್ನು ಕಾಪಾಡುವುದೇ ಇದರ ಮುಕ್ಯ ಕೆಲಸವಾಗಿರುತ್ತದೆ.

ಒಂದು ಬೀಜವು ಮೊಳಕೆಯೊಡಯಲು ಅದಕ್ಕೆ ತಕ್ಕನಾದ ಉಸಿರುಗಾಳಿ (oxygen), ನೀರು ಮತ್ತು ಬಿಸುಪು ಬೇಕಾಗುತ್ತದೆ. ಬೀಜವು ಯಾವ ತಳಿ ಎಂಬುದರ ಮೇಲೆ ಬೇಕಾಗಿರುವ ಗಾಳಿ, ನೀರು ಮತ್ತು ಬಿಸುಪು ತೀರ್ಮಾನವಾಗುತ್ತದೆ. ಕೆಲವು ಬಗೆಯ ಬೀಜಗಳು ಮೊಳಕೆ ಒಡೆಯುವಲ್ಲಿ ಬೆಳಕು ಕೂಡ ತನ್ನ ಪಾತ್ರ ವಹಿಸುತ್ತದೆ. ಒಂದು ಬೀಜವು ತಾನು ಮೊಳಕೆಯೊಡಯಲು ಬೇಕಾದ ನೀರು, ಉಸಿರುಗಾಳಿ ಮತ್ತು ಬಿಸುಪಿಗೆ ತೆರೆದುಕೊಳ್ಳುವವರೆಗೂ ಒರಗಿದ (dormant) ಸ್ತಿತಿಯಲ್ಲಿ ಇರುತ್ತದೆ. ಅದರ ಒಳಗಿರುವ ಬಸಿರಿಗೆ ಬಸಿರ ಪೊರೆಕ ಊಟ ಒದಗಿಸುತ್ತಿರುತ್ತದೆ, ಇದನ್ನು ಬಿಟ್ಟರೆ ಅದರಲ್ಲಿ ಯಾವ ಬೆಳವಣಿಗೆಯು ಆಗುತ್ತಿರುವುದಿಲ್ಲ. ಒಮ್ಮೆ ಬೇಕಾದ ನೀರು, ಉಸಿರುಗಾಳಿ ಹಾಗು ಬಿಸುಪಿಗೆ ತೆರೆದುಕೊಂಡಾಗ ಅದು ಮೊಳಕೆ ಒಡೆಯುವ ಕೆಲಸವನ್ನು ಆರಂಬಿಸುತ್ತದೆ.

ಬೀಜವು ಮೊಳಕೆ ಒಡೆಯಲು ಬೇಕಾದ ನೀರಿಗೆ ತಾಕಿದಾಗ ಹೊರಗಿನ ನೀರು ಬೀಜದ ಸಿಪ್ಪೆಯೊಳಗೆ ಒಳಹೀರಿಕೆಯ (imbibition) ಮೂಲಕ ಬರುತ್ತದೆ. ಸಿಪ್ಪೆಯೊಳಗೆ ಬಂದ ನೀರನ್ನು ಬಳಸಿಕೊಂಡು ಬಸಿರಿನಲ್ಲಿರುವ ಸೂಲುಗೂಡುಗಳು (cells) ತಮ್ಮ ತರುಮಾರ‍್ಪುವ (metabolism) ಕೆಲಸವನ್ನು ಹೆಚ್ಚುಗೊಳಿಸಿ ಹಿಗ್ಗಲಾರಂಬಿಸುತ್ತವೆ ಮತ್ತು ಕೆಲವು ಸೂಲುಗೂಡುಗಳು ಒಡೆದು ಹೆಚ್ಚಲಾರಂಬಿಸುತ್ತವೆ. ಬೆಳವಿಕ (auxins) ಮತ್ತು ಇತರೆ ಸುರಿಗೆಗಳು (harmones) ಕೂಡ ಬಸಿರಿನ ಬೆಳವಣಿಗೆಯನ್ನು ಹುರಿದುಂಬಿಸುತ್ತವೆ.

ಬೀಜದ ಒಳಗೆ ಬಂದಿರುವ ನೀರು, ನೀರ‍್ದೊಳೆ (hydrolytic Enzymes)ಗಳನ್ನು ಚುರುಕುಗೊಳಿಸುತ್ತವೆ ಇವು ಬಸಿರ ಪೊರೆಕದಲ್ಲಿರುವ ಎಣ್ಣೆ, ಮುನ್ನು (protien) ಮತ್ತು ಗಂಜಿಯನ್ನು ಒಡೆದು ಬಸಿರಿನ ತರುಮಾರ್ಪಿಗೆ ನೆರವಾಗುವಂತಹ ರಾಸಾಯನಿಕಗಳನ್ನು ಕೊಡುತ್ತವೆ. ಉಸಿರುಗಾಳಿ ಮತ್ತು ಬಿಸುಪು ಕೂಡ ಬಸಿರಿನ ತರುಮಾರ್ಪಿಗೆ ನೆರವಾಗುತ್ತವೆ. ಇವನ್ನೆಲ್ಲಾ ಬಳಸಿಕೊಂಡು ಬಸಿರು ಮತ್ತಶ್ಟು ಬೆಳೆಯುತ್ತಾ ಹೋಗುತ್ತದೆ. ಹೀಗೆ ಬೆಳೆಯುತ್ತಿರುವ ಬಸಿರಿಗೆ ಬೇಕಾಗಿರುವ ಆರಯ್ಕೆಯನ್ನು ಬಸಿರ ಪೊರೆಕ ಕೊಡುತ್ತಿರುತ್ತದೆ. ಮೊಳಕೆಯು ಒಡೆದು ಎಲೆಯನ್ನು ಬಿಟ್ಟು ನೇಸರನ ಬೆಳಕಿನ ನೆರವಿನಿಂದ ‘ಬೆಳಕಿನ ಒಂದುಗೆ’ (photosynthesis) ನಡೆಸಿ ತನ್ನ ಊಟವನ್ನು ತಾನೇ ಸಿದ್ದ ಮಾಡಿಕೊಳ್ಳುವವರೆಗೂ ಈ ಬಸಿರ ಪೊರೆಕ ನೋಡಿಕೊಳ್ಳುತ್ತಿರುತ್ತದೆ.

ಸಿಪ್ಪೆಯ ಒಳಗೆ ಬಸಿರು ಬೆಳೆಯುತ್ತಿದ್ದಂತೆ ಒಳಗಿನ ಒತ್ತಡ ಹೆಚ್ಚಾಗಿ ಸಿಪ್ಪೆಯು ಒಡೆದು ಬಿಡುತ್ತದೆ. ಸಿಪ್ಪೆಯನ್ನು ಒಡೆದ ಬಸಿರು ಮೊದಲು ತಾಯಿಬೇರಾಗಿ (radicle) ಹೊರಬರುತ್ತದೆ. ಈ ತಾಯಿಬೇರು ಸುತ್ತಲಿನಲ್ಲಿರುವ ಮಣ್ಣನ್ನು ಸೀಳಿಕೊಂಡು ಬೆಳೆಯತೊಡಗುತ್ತದೆ. ಮಣ್ಣಿನಲ್ಲಿರುವ ನೀರು, ಉಸಿರುಗಾಳಿ, ಬಿಸುಪು ಮತ್ತು ಆರಯ್ಕೆಗಳನ್ನು ಬಳಸಿಕೊಂಡು ಬಸಿರು ಮತ್ತಶ್ಟು ಬೆಳೆಯುತ್ತದೆ.

Seed1

 

ಒಮ್ಮೆ ತಾಯಿಬೇರಿನ ಬೆಳವಣಿಗೆ ಗಟ್ಟಿಗೊಂಡಮೇಲೆ ಎಳೆಗರಿಯ(plumule) ಬೆಳವಣಿಗೆ ಆರಂಬವಾಗುತ್ತದೆ. ಎಳೆಗರಿಯು ಮಣ್ಣಿನ ಒಳಗಿನಿಂದ ನೇಸರನ ಬೆಳಕನ್ನು ಹುಡುಕಿಕೊಂಡು ನೆಲದ ಮೇಲ್ಬಾಗಕ್ಕೆ ಬರುತ್ತದೆ. ಹಲವು ಬಗೆಯ ಮೊಳಕೆಗಳಲ್ಲಿ ಎಳೆಗರಿಯನ್ನು ಕಾಯಲು ಬೀಜದ ಸಿಪ್ಪೆಯ ಬಾಗಗಳು ಅಂಟಿಕೊಂಡಿರುತ್ತದೆ. ಎಳೆಗರಿಯು ಬೆಳೆದು ಮೊದಲ ಮೊಳಕೆ ಎಲೆಗಳನ್ನು (Cotyledons) ಬಿಡುತ್ತದೆ ಆಗ ಈ ಸಿಪ್ಪೆಯ ಬಾಗಗಳು ಉದುರಿ ಬೀಳುತ್ತವೆ. ಈ ಎಲೆಗಳು ನೇಸರನ ಬೆಳಕಿನ ನೆರವಿನಿಂದ ತಮ್ಮ ಊಟವನ್ನು ಸಿದ್ದಮಾಡಲಾರಂಬಿಸುತ್ತವೆ. ಈ ಹೊತ್ತಿನಲ್ಲಿ ತಾಯಿ ಬೇರುಕೂಡ ಕವಲೊಡೆದು ಹರಡಿಕೊಂಡು ಬೆಳೆಯುತ್ತಾ ಹೋಗುತ್ತದೆ. ಮುಂದೆ ಮೊಳಕೆಯೊಡೆದ ಬೀಜದ ಕಾಂಡ ಹಾಗು ಎಲೆಗಳು ಬಿಟ್ಟು ಬೆಳೆಯುತ್ತದೆ.

Seed2

ಹೀಗೆ ಒಂದು ಬೀಜವು ಮಣ್ಣಿಗೆ ಸೇರಿ ಮೊಳೆಕೆ ಒಡೆದು ಎಲೆಯಾಗುವವರೆಗೂ ಹಲವು ಹಂತಗಳಲ್ಲಿ ಬದಲಾವಣೆಗಳು ನಡೆಯುತ್ತಿರುತ್ತವೆ. ಈ ಕೆಲಸದಲ್ಲಿ, ಗಾಳಿ, ನೀರು, ಬಿಸುಪು ಮತ್ತು ಬೆಳಕು ದೊಡ್ಡ ಪಾತ್ರವನ್ನು ವಹಿಸುತ್ತವೆ.

(ಮಾಹಿತಿ ಸೆಲೆ : wikipedia.org), (ಚಿತ್ರ ಸೆಲೆ : commons.wikimedia.org)

 

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. 29/09/2014

    […] ಒಡೆಯುತ್ತದೆ ಎಂದು ವಿವರವಾಗಿ ನಾವು ‘ಬಿತ್ತಿದ ಬೀಜ ಮೊಳಕೆಯಾದೀತು ಹೇಗೆ?‘ ಬರಹದಲ್ಲಿ  ತಿಳಿಯಬಹುದು. ಬಿತ್ತಿದ […]

ಅನಿಸಿಕೆ ಬರೆಯಿರಿ:

%d bloggers like this: