ಕನ್ನಡಕ್ಕೆ ಕಸುವು ತುಂಬುವ ಕೆಲಸ

– ಚೇತನ್ ಜೀರಾಳ್.

ಹೊನಲು ಮಿಂದಾಣಕ್ಕೆ ಇನ್ನೇನು ಒಂದು ವರುಶ ತುಂಬಲಿದೆ. ಕನ್ನಡಕ್ಕೆ ಕಸುವು ತುಂಬುವ ಕೆಲಸದಲ್ಲಿ ಹೊನಲು ನಿಜಕ್ಕೂ ಒಂದು ಮಾದರಿಯ ಪ್ರಯತ್ನವೇ ಸರಿ ಹಾಗೂ ಈ ಪ್ರಯತ್ನದಲ್ಲಿ ನಾವು ಗೆದ್ದಿದ್ದೇವೆ ಎಂದು ಹೇಳಲು ತುಂಬ ನಲಿವಾಗುತ್ತದೆ. ಕನ್ನಡ ಏನಿದ್ದರೂ ಸಾಹಿತ್ಯಕ್ಕೆ ಮಾತ್ರ ಹೆಚ್ಚು ಒಗ್ಗುತ್ತದೆ, ಅರಿಮೆ, ಕಲಿಕೆ ಮತ್ತು ಹೊರಜಗತ್ತಿನ ವಿಶಯಗಳನ್ನು ಅರಿಯಲು ಅಶ್ಟಾಗಿ ಸಾದ್ಯವಿಲ್ಲ ಅನ್ನುವ ಕೀಳರಿಮೆ ಒಳಗೊಳಗೇ ಕನ್ನಡಿಗರಲ್ಲಿ ಬೇರೂರುವಂತೆ ಆಗಿತ್ತು. ಆದರೆ ಕನ್ನಡಕ್ಕೂ ಆ ಮಾಡುಗತನವಿದೆ ಅನ್ನುವುದನ್ನು ಎಲ್ಲರ ಕನ್ನಡದ ಮೂಲಕ ಮಾಡಲು ಸಾದ್ಯ ಅನ್ನುವುದನ್ನು ಹೊನಲಿನ ಮೂಲಕ ಮಾಡಲು ಹೊರಟ ನಮ್ಮ ಮೊದಲ ಹೆಜ್ಜೆಗೆ ಪ್ರಪಂಚದ ಎಲ್ಲ ಕನ್ನಡಿಗರು ಬೆನ್ನು ತಟ್ಟಿದ್ದಾರೆ.

ಹೆಚ್ಚು ಹೆಚ್ಚು ಕನ್ನಡದ ಬೇರಿನ ಪದಗಳನ್ನೇ ಬಳಸುವ ಮೂಲಕ ಆಡುನುಡಿಗೆ ಹತ್ತಿರವಿರುವ ಬರಹಗಳ ಮೂಲಕ ಮಾತಾಡುವ ಮತ್ತು ಬರೆಯುವ ಕನ್ನಡದ ನಡುವೆ ಇರುವ ಕಂದಕವನ್ನು ಕಡಿಮೆ ಮಾಡುವ ಕೆಲಸ ಮಾಡುತ್ತಿದ್ದೇವೆ. ಒಂದು ಗಟ್ಟಿಯಾದ ಕನ್ನಡ ಸಮಾಜವನ್ನು ಕಟ್ಟಲು ಪ್ರತಿಯೊಬ್ಬ ಕನ್ನಡಿಗನಿಗೂ ಕಲಿಕೆ ಸಿಗಲೇಬೇಕು ಮತ್ತು ಅದರ ಮೂಲಕ ಕನ್ನಡಿಗರು ತಮ್ಮ ಕನಸಿನ ಸಮಾಜವನ್ನು ಕಟ್ಟಿಕೊಳ್ಳಲು ಸಾದ್ಯ. ಹೊನಲು ಇಂತಹ ಸಾದ್ಯತೆಯ ಮೊದಲ ಹಾದಿ ಎಂದರೆ ಹೆಚ್ಚುಗಾರಿಕೆಯಲ್ಲ.

ಬರುವ ವರುಶಗಳಲ್ಲಿ ಎಲ್ಲರ ಕನ್ನಡದ ಮೂಲಕ ಕನ್ನಡಿಗರನ್ನು ಏಳಿಗೆಯತ್ತ ಕೊಂಡ್ಯೊಯ್ಯುವ ಈ ಹೆಜ್ಜೆಯನ್ನು ಗಟ್ಟಿಗೊಳಿಸುವುದಕ್ಕೆ ನಿಮ್ಮ ಕಯ್ ಜೋಡಿಸುವಿಕೆ ನಮ್ಮ ಚಳುವಳಿಗೆ ಹೆಚ್ಚಿನ ಬಲವನ್ನು ನೀಡುತ್ತದೆ.

ಅನಿಸಿಕೆ ಬರೆಯಿರಿ:

This site uses Akismet to reduce spam. Learn how your comment data is processed.

%d bloggers like this: