ಹೊತ್ತಗೆ ಬಿಡುಗಡೆ – ’ಅರಿಮೆಯ ಹೊನಲು’

ಪ್ರಶಾಂತ ಸೊರಟೂರ.

arimeya-honalu-Mumputa

 (PDF ಕಡತ ಇಳಿಸಿಕೊಳ್ಳಲು ಮೇಲಿನ ತಿಟ್ಟವನ್ನು ಇಲ್ಲವೇ ಇಲ್ಲಿ ಒತ್ತಿ.)

ನಲ್ಮೆಯ ಕನ್ನಡಿಗರೆ,

ನಮ್ಮ ನಾಡು-ನುಡಿ ಹಿಂದೆಂದೂ ಎದುರಿಸದ ಸವಾಲುಗಳನ್ನು ಇಂದು ಎದುರಿಸುತ್ತಿದೆ. ಹಲವು ಸಾವಿರ ವರುಶಗಳ ಹಿನ್ನೆಲೆಯಿದ್ದರೂ ನಮ್ಮ ನುಡಿ ಇಂದು ನಲುಗುತ್ತಿರುವುದಕ್ಕೆ ಮುಕ್ಯ ಕಾರಣ ಅದನ್ನಾಡುವ ನಾವು ಕನ್ನಡವನ್ನು ಬರೀ ಅಬಿಮಾನಕ್ಕೆ, ಒಡನಾಟಕ್ಕೆ ಎಂದುಕೊಂಡಿರುವುದು. ನುಡಿಯೇ ನುಡಿಯಾಡುಗರ ಎಲ್ಲ ಬಗೆಯ ಏಳಿಗೆಗೆ ಅಡಿಪಾಯ ಅನ್ನುವುದನ್ನು ಮರೆತಿರುವುದಕ್ಕೆ ಕನ್ನಡಿಗರಿಂದು ಬೆಳವಣಿಗೆಯ ಮೆಟ್ಟಿಲುಗಳನ್ನು ಹತ್ತಲು ಆಗುತ್ತಿಲ್ಲ, ನಮ್ಮ ನಾಡನ್ನು ’ಮುಂದುವರೆದ’ ನಾಡುಗಳ ಸಾಲಿಗೆ ಸೇರಿಸಲಾಗುತ್ತಿಲ್ಲ.

ಅಳತೆಯಲ್ಲಿ ಕರ‍್ನಾಟಕಕ್ಕೆ ಹೋಲಿಸಬಹುದಾದ ಜರ‍್ಮನಿ, ಜಪಾನ್, ಪ್ರಾನ್ಸ್, ಇಸ್ರೇಲ್, ಕೋರಿಯಾದಂತಹ ನಾಡುಗಳು ಮುಂದುವರೆಯುವುದಕ್ಕೆ ಕಾರಣ, ಅವರು ತಮ್ಮ ನುಡಿಯಲ್ಲಿಯೇ ಎಲ್ಲವನ್ನೂ ಕಟ್ಟಿಕೊಂಡಿರುವುದೇ ಆಗಿದೆ. ಮೊದಲ ಹಂತದ ಕಲಿಕೆಯಿಂದ ಹಿಡಿದು ಮೇಲ್ಮಟ್ಟದ ಕಲಿಕೆಯವರೆಗೂ ತಮ್ಮ ನುಡಿಯನ್ನು ಬೆಳೆಸಿರುವ ಆ ನಾಡುಗಳು ಏಳಿಗೆಹೊಂದಿರುವುದಕ್ಕೆ ನೇರವಾದ ಕಾರಣಗಳು.

ಸಾಯನ್ಸ್ ಮತ್ತು ಟೆಕ್ನಲಾಜಿಯ ಎಂತದೇ ವಿಶಯವನ್ನು ಜರ‍್ಮನ್ ನುಡಿಯಲ್ಲಿ ಕಲಿಯಬಹುದೆನ್ನುವಂತ ವಾತಾವರಣವನ್ನು ಜರ‍್ಮನಿಗರು ಮಾಡಿಕೊಂಡಿದ್ದರೆ, ಜಪಾನಿಗರ ಎಲ್ಲ ಬಗೆಯ ಕಲಿಕೆಗೆ ಜಪನೀಸ್ ಸಜ್ಜುಗೊಂಡಿದೆ. ಅಶ್ಟೇ ಏಕೆ ಪುಟಾಣಿ ನಾಡು ಪಿನಲ್ಯಾಂಡ್ ಕೂಡ ಇತ್ತೀಚಿನ ಕೆಲವು ಹತ್ತು ವರುಶಗಳಲ್ಲಿಯೇ ಪಿನಿಶ್ ನುಡಿಗೆ ಎಲ್ಲ ಬಗೆಯ ಕಸುವು ತುಂಬಿದೆ, ಹಾಗಾಗಿಯೇ ಆ ನಾಡು ಮುಂದುವರೆದಿದೆ.

ಕನ್ನಡಿಗರಿಂದು ಕನ್ನಡದಲ್ಲಿ ಇಂತದೇ ಕೆಲಸವನ್ನು ಬಿರುಸಾಗಿ ಮಾಡಬೇಕಿದೆ. ಎಣಿಕೆಯಲ್ಲಿ ಕೆಲವು ಲಕ್ಶಗಳಿರುವ ನಾಡುಗಳಿಗೆ ಮಾಡಲು ಆಗಿರುವಂತಹ ಕೆಲಸವನ್ನು ಈಡೇರಿಸಲು ಹಲವು ಕೋಟಿಗಳಿರುವ ಕನ್ನಡಿಗರಿಗೆ ಆಗದಿರದು. ಕನ್ನಡಿಗರು ಕನ್ನಡದ ಹೆಚ್ಚುಗಾರಿಕೆಯನ್ನು ಅರಿತು ಒಟ್ಟಾಗಿ ದುಡಿಯಬೇಕಶ್ಟೆ.

ಕನ್ನಡದಲ್ಲಿ ಸಾಯನ್ಸ್ ಮತ್ತು ಟೆಕ್ನಲಾಜಿ ಬರಹಗಳ ಹೊನಲು ಹರಿಸುವತ್ತ ನಾವೆಲ್ಲರೂ ಹೆಜ್ಜೆ ಇಟ್ಟಿದ್ದೆವು, ಅದಕ್ಕೀಗ ಒಂದು ವರುಶ. ಹಲವು ಕನ್ನಡಿಗರ ಪಾಲ್ಗೊಳ್ಳುವಿಕೆಯಿಂದ ಬೆಳೆಯುತ್ತಿರುವ ಹೊನಲಿನಲ್ಲಿ ಅರಿಮೆ ಮತ್ತು ಚಳಕದ  (science & technology) ಬಗೆ-ಬಗೆಯ ಬರಹಗಳು ಮೂಡಿಬಂದಿವೆ.

ಕನ್ನಡದಲ್ಲಿ ಅದರದೇ ಸೊಗಡನ್ನು ಬಳಸಿಕೊಂಡು ಇಶ್ಟೊಂದೆಲ್ಲಾ ಬರೆಯಬಹುದಾ ಅನ್ನುತ್ತಾ ಬೆರಗುಗೊಂಡಿರುವ, ನಲಿವಾಗಿರುವ ಓದುಗರು ಒಂದೆಡೆಯಾದರೆ, ಕನ್ನಡಿಗರ ನಾಳೆಗಳನ್ನು ಬೆಳಗಬಲ್ಲ ಈ ಕಟ್ಟಣೆಗೆ ನಾನೂ ಕಯ್ ಜೋಡಿಸುವೆ ಎನ್ನುತ್ತಾ ಮುಂದೆ ಬಂದ ಬರಹಗಾರರೂ ಹಲವರಿದ್ದಾರೆ. ಇದೇ ಹೊನಲು ಹುಟ್ಟುಹಾಕುವುದರ ಹಿಂದಿದ್ದ ಮುಕ್ಯ ಗುರಿ, ಕನ್ನಡಿಗರೆಲ್ಲರೂ ಪಾಲ್ಗೊಂಡು ನಮ್ಮದೇ ನುಡಿ ಕನ್ನಡಕ್ಕೆ ಕಸುವು ತುಂಬುವುದಕ್ಕೆ ಹಾಸಿದ್ದ ಹೆದ್ದಾರಿ.

ಕಳೆದ ಒಂದು ವರುಶದಲ್ಲಿ ಸರಿಸುಮಾರು 250 ಸಾಯನ್ಸ್ ಮತ್ತು ಟೆಕ್ನಾಲಜಿ ಬರಹಗಳು ಹೊನಲಿನಲ್ಲಿ ಹರಿದುಬಂದಿವೆ. ಮದ್ದರಿಮೆ (medical science), ಬಾನರಿಮೆ (astronomy), ಮಿಂಚರಿಮೆ (electrical science), ನುಡಿಯರಿಮೆ (linguistics), ಎಣಿಕೆಯರಿಮೆ (mathematics), ತಾನೋಡದರಿಮೆ (automobile), ಆಟದರಿಮೆ, ಉಳುಮೆಯರಿಮೆ (agricultural science) ಹೀಗೆ ಹೊನಲಿನಲ್ಲಿ ’ಅರಿಮೆ’ಯ ಹಲವು ಕವಲುಗಳು ಮೊಳಕೆಯೊಡೆದಿವೆ.

ಇವುಗಳಲ್ಲಿ ಆಯ್ದ ಕೆಲವು ಬರಹಗಳ ಹೊತ್ತಗೆ ಇದೋ ನಿಮ್ಮ ಮುಂದಿದೆ. ಇಳಿಸಿಕೊಳ್ಳಿ, ಓದಿ, ಹಂಚಿ, ಪಾಲ್ಗೊಳ್ಳಿ…

(ತಿಟ್ಟಕಟ್ಟಣೆ: ಹರಿಪ್ರಸಾದ್ ಹೊಳ್ಳ)Categories: ಅರಿಮೆ

ಟ್ಯಾಗ್ ಗಳು:, , , , , , , , , , , , , , ,

ಅನಿಸಿಕೆ ಬರೆಯಿರಿ

Please log in using one of these methods to post your comment:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s