ಕನ್ನಡಿಗರ ನಾಳೆಗಳನ್ನು ಕಟ್ಟುವತ್ತ…
– ರತೀಶ ರತ್ನಾಕರ.
ಜಗತ್ತಿನ ಮುಂದುವರಿದ ನಾಡುಗಳ ನುಡಿಗಳು ನಾ ಮುಂದು ತಾ ಮುಂದು ಎಂದುಕೊಂಡು ಹೊಸ ಹೊಸ ಅರಿಮೆಯ ವಿಶಯಗಳನ್ನು ಅಳವಡಿಸಿಕೊಳ್ಳಲು ಮುನ್ನುಗ್ಗುತ್ತಿವೆ. ಬೇರೆ ಬೇರೆ ನುಡಿಸಮುದಾಯಗಳು ಅರಿಮೆ ಹಾಗು ಚಳಕಗಳ ವಿಶಯಗಳನ್ನು ಅವರದೇ ನುಡಿಯಲ್ಲಿ ಅರಿತುಕೊಂಡು ಹೊಸತೊಂದನ್ನು ಜಗತ್ತಿಗೆ ಕೊಡುಗೆಯಾಗಿ ಕೊಡುತ್ತಿವೆ. ಹೀಗೆ ಮುಂದಿನ ಸಾಲಿನಲ್ಲಿ ಓಡುತ್ತಿರುವ ಈ ನುಡಿಗಳ ಸಾಲಿನಲ್ಲಿ ಕನ್ನಡವನ್ನೂ ತಂದು ನಿಲ್ಲಿಸಬೇಕು, ಈ ನಿಟ್ಟಿನಲ್ಲಿ ಹೊನಲಿನಲ್ಲಿ ನಡೆಯುತ್ತಿರುವ ಕೆಲಸ ಸರಿಯಾದ ದಾರಿಯಲ್ಲಿ ಸಾಗಿದೆ.
ಜಾಗತೀಕರಣದ ಸವಾಲುಗಳನ್ನು ಎದುರಿಸಲು ಕನ್ನಡವನ್ನು ಅಣಿಗೊಳಸಲು, ಕನ್ನಡಿಗರ ಕಲಿಕೆ ಹಾಗು ದುಡಿಮೆಗಳು ಕನ್ನಡದಲ್ಲೇ ನಡೆಯುವಂತಾಗಲು ಎಲ್ಲರ ಕನ್ನಡದ ಅಳವಡಿಕೆ ಇಂದು ಕನ್ನಡಕ್ಕೆ ಬೇಕಾಗಿದೆ. ಎಲ್ಲರ ಕನ್ನಡವು ಹೆಚ್ಚಿನ ಕನ್ನಡಿಗರನ್ನು ಬರಹದಲ್ಲಿ ತೊಡಗಿಸುವಂತೆ ಮಾಡುವುದರಲ್ಲಿ, ಮಾತು ಮತ್ತು ಬರಹದ ನಡುವಿನ ಗೊಂದಲ ಕಡಿಮೆಗೊಳಿಸುವುದರಲ್ಲಿ, ಅರಿಮೆ ಹಾಗು ಚಳಕದ ವಿಶಯಗಳನ್ನು ಸುಲಿದ ಬಾಳೆಹಣ್ಣಿನಶ್ಟು ಸುಳುವಾಗಿಸುವುದರಲ್ಲಿ ನೆರವಾಗುವುದು. ಒಟ್ಟಾರೆಯಾಗಿ ಕನ್ನಡಿಗರ ಬದುಕನ್ನು ಕಟ್ಟಿಕೊಳ್ಳುವುದರಲ್ಲಿ ಕನ್ನಡವು ಬಹು ಮುಕ್ಯ ಪಾತ್ರ ವಹಿಸುವಂತಾಗಬೇಕು, ಆ ಮೂಲಕ ಕನ್ನಡವನ್ನು ಕೂಡ ಮುಂದಿನ ಸಾಲಿನ ನುಡಿಗಳ ಸಾಲಿಗೆ ತಂದು ನಿಲ್ಲಿಸಲು ಸಾದ್ಯ. ಈ ನಿಟ್ಟಿನಲ್ಲಿ ಹೊನಲು ತನ್ನ ಕೆಲಸವನ್ನು ಮಾಡುತ್ತಿದೆ, ಇದೊಂದು ಬರಹದ ಚಳುವಳಿ ಇದರಲ್ಲಿ ಎಲ್ಲರೂ ಪಾಲ್ಗೊಳ್ಳಬಹುದು, ಎಲ್ಲರೂ ಬನ್ನಿ, ಬರಹ ಮಾಡಿ, ಹೊನಲಿನ ಕೆಲಸದಲ್ಲಿ ಕಯ್ ಜೋಡಿಸಿ.
inna barli patela