ಅವಳು ಮತ್ತು ಅವನು

– ಹರ‍್ಶಿತ್ ಮಂಜುನಾತ್.

Two-Friend-Celebrate-Friendship-Day-Together-

ಗೆಳೆತನ ಎಂಬುವುದು ಒಂದು ಒಳ್ಳೆಯ ನಂಟು ಮತ್ತು ಜೀವನದ ಒಂದು ಅತಿಮುಕ್ಯ ಬಾಗವೂ ಹವ್ದು. ಕವ್ಟುಂಬಿಕ ನಂಟು ಹುಟ್ಟಿನಿಂದ ಪರಿಚಿತವಾಗಿ ಬಂದರೆ, ಗೆಳೆತನ ಎಂಬುದು ಹೆಚ್ಚಾಗಿ ಅಪರಿಚಿತರ ನಡುವೆ ಹಟ್ಟುವ ಒಂದು ಅಪರೂಪದ ನಂಟು. ಅದರಲ್ಲೂ ಕೆಲವೊಮ್ಮೆ ಕವ್ಟುಂಬಿಕವಾಗಿ ಪರಿಚಿತರ ನಡುವೆ ಗೆಳೆತನ ಬೆಳೆದರೆ ಅದು ಇನ್ನೂ ವಿಶೇಶವಾಗಿ ಕಾಣುತ್ತದೆ. ಇದೇ ಸಾಲಿನಲ್ಲಿ ಒಂದು ನಯ್ಜ ಗಟನೆ ನಿಮ್ಮ ಮುಂದೆ.

ನಮ್ಮ ನಾಡಿನ ಚಿಕ್ಕ ಹಳ್ಳಿಯಲ್ಲಿ ಇನಿತ್ ಮತ್ತು ಇಂಪನ ಎಂಬ ಇಬ್ಬರು ಗೆಳೆಯರು. ಎದುರು ಬದುರು ಮನೆಯಲ್ಲಿ ವಾಸವಾದರೂ ಒಂದೇ ಕುಟುಂಬದವರು. ಆದರೂ ಕವ್ಟುಂಬಿಕ ಸಂಬಂದಕ್ಕಿಂತ ಗೆಳೆತನದಲ್ಲಿ ಹೆಚ್ಚಿನ ನಂಬಿಕೆ ಇಟ್ಟವರು. ಇಬ್ಬರು ಒಂದೇ ತರಗತಿಯಲ್ಲಿ ಓದುತ್ತಿದ್ದರಿಂದ ಮನೆಯಿಂದ ನಾಲ್ಕಯ್ದು ಮಯ್ಲಿ ದೂರದಲ್ಲಿರುವ ಸ್ಕೂಲಿಗೆ ದಿನನಿತ್ಯ ಜೊತೆಯಲ್ಲೇ ಹೋಗಿಬರುವುದು ರೂಡಿ. ಕೇವಲ ವಯಸ್ಸಿನಲ್ಲಿ ಕೆಲವು ಅಂತರ ಬಿಟ್ಟರೆ ಯೋಚನೆ, ಮನಸ್ತಿತಿ, ಮತ್ತು ಗೆಳೆತನದಲ್ಲಿ ಯಾವ ಏರುಪೇರೂ ಇರಲಿಲ್ಲ. ಇಬ್ಬರೂ ಸದಾ ಓದಿನಲ್ಲಿ ಮುಂದು, ಗೆಳೆತನ ಮತ್ತು ಒಗ್ಗಟ್ಟಿನಲ್ಲಿ ಒಂದು. ಒಟ್ಟಿನಲ್ಲಿ ಎಲ್ಲರಲ್ಲೂ ಅಸೂಹೆ ಮೂಡಿಸುವಂತಾ ಗೆಳೆತನ ಇವರದು.

ಯಾವುದೇ ಸಂಬಂದದಲ್ಲಿಯೂ ಮುನಿಸು, ವಯ್ಮನಸ್ಸು ತೀರಾ ಸಾಮಾನ್ಯವಾದದು. ಅದು ಇವರ ಗೆಳೆತನದಲ್ಲೂ ಹೊರತಾಗಿರಲಿಲ್ಲ. ಕೆಲವೊಮ್ಮೆ ಇವರ ಮುನಿಸಿನ ಸಮಯದಲ್ಲಿ ಇವರಿಬ್ಬರನ್ನೂ ಒಂದುಗೂಡಿಸಲು ಸ್ಕೂಲಿನ ಮಕ್ಕಳು ಮತ್ತು ಕಲಿಸುಗರ ತಂಡವೂ ಹರಸಾಹಸಪಡುತ್ತಿತ್ತು. ಆದರೆ ಆ ಮುನಿಸು ಕೆಲವು ಸಮಯದ ವರೆಗೆ ಮಾತ್ರ. ಬಳಿಕ ಇಬ್ಬರೂ ಒಂದೇ ದೋಣಿಯ ಪ್ರಯಾಣಿಕರು. ಹೀಗೆ ಬಲು ಸಂತಸದೊಳಗೆ ತುಸು ಮುನಿಸನ್ನು ಬೆರೆಸಿಕೊಂಡು ಗೆಳೆತನದ ಸವಿಯು ಮುಂದುವರೆದಿತ್ತು.

ಗೆಳೆತನದ ಸವಿಯುಂಡು ಉಬ್ಬಿದ್ದ ಇವರ ಮೇಲೆ, ಯಾವುದೇ ಮಹತ್ವವೇ ಇರದ ವಿಚಾರವನ್ನೇ ನೆಪಮಾಡಿಕೊಂಡು ಇವರನ್ನೇ ಕಾದು ಕುಳಿತಿದ್ದ ಮುನಿಸು ಬರಸಿಡಿಲಂತೆ ಬಡಿದಿತ್ತು. ಆದರೆ ಈ ಬಾರಿ ಮಾತ್ರ ಕೆಲವು ದಿನಗಳ ಬದಲು, ಕೆಲವು ತಿಂಗಳ ವರೆಗೆ ಇವರಿಬ್ಬರನ್ನು ಕೊಂಚ ದೂರವಿರುಸುತ್ತದೆಂದು ಯಾರಿಗೂ ಊಹೆ ಇರಲಿಲ್ಲ. ಒಟ್ಟಿನಲ್ಲಿ ಇಬ್ಬರ ನಡುವೆ ಮಾತಿಲ್ಲ, ನಗುವಿಲ್ಲ, ಒಬ್ಬರಿಗೊಬ್ಬರು ಇಟ್ಟುಕೊಂಡಿದ್ದ ಅಡ್ಡ ಹೆಸರನ್ನು ಕರೆಯುವಂತಿಲ್ಲ, ಅಪರಿಚಿತರಂತೆಯೇ ದಿನಗಳು ಕಳೆಯುತ್ತಿದ್ದರೂ, ಏನನ್ನೋ ಕಳೆದುಕೊಂಡಂತೆ ಬಾಸವಾಗುತ್ತಿತ್ತು. ದಿನಗಳೂ ಉರುಳಿದಂತೆ ಮುನಿಸು ಇವರಿಬ್ಬರ ಮನಸ್ಸಿಗೆ ಹೆಚ್ಚೆಚ್ಚು ಬಾರವಾಗುತ್ತಾ ಹೋಯಿತು. ತಾವು ಒಬ್ಬರಿಗೊಬ್ಬರು ಮತ್ತೆ ಮಾತಾಡಿಕೊಳ್ಳಬೇಕು, ಎಲ್ಲವೂ ಸರಿಯಾಗಿ ಮತ್ತೆ ತಾವು ಮೊದಲಿನಂತಾಗಬೇಕು ಎಂದು ಎಶ್ಟೋ ಬಾರಿ ತಮ್ಮ ತಮ್ಮ ಮನಸ್ಸಿನಲ್ಲಂದುಕೊಂಡರೂ ಸ್ವಾಬಿಮಾನ ಎಂಬುದು ಈ ಗೆಳೆಯರ ನಡುವೆ ಗೋಡೆಯಾಗಿ ಅಡ್ಡ ನಿಂತಿತ್ತು. ಕೆಲವೊಮ್ಮೆ ಸ್ವಾಬಿಮಾನವೇ ಪಯ್ಪೋಟಿಯಾಗಿ ಬದಲಾಗುತ್ತಿತ್ತು. ಈ ನಡುವೆ ಸ್ಕೂಲಿನ ಮಕ್ಕಳು ಮತ್ತು ಗೆಳೆಯರು, ಕಲಿಸುಗರ ತಂಡ ಹೀಗೆ ಯಾರ ಪ್ರಯತ್ನವೂ ಪಲಿಸುವ ಯಾವುದೇ ಲಕ್ಶಣಗಳು ಗೋಚರಿಸುತ್ತಿರಲಿಲ್ಲ. ಮುನಿಸಿನ ನೆಪದಲ್ಲಿ ಸ್ವಾಬಿಮಾನದ ಮೇಲಾಟಕ್ಕೆ ಗೆಳೆತನ ಬೇಯುತಿತ್ತು.

ಅಶ್ಟರಲ್ಲಾಗಲೇ ಅಂತಿಮ ಪರೀಕ್ಶೆಗಳು ಮುಗಿದು ಕೆಲವು ದಿನಗಳ ನಂತರ ಪಲಿತಾಂಶ ಪ್ರಕಟಗೊಂಡಿತ್ತು. ಪಲಿತಾಂಶ ನೋಡಲೆಂದು ಮತ್ತೆ ಇಬ್ಬರೂ ಶಾಲೆಯ ಮಟ್ಟಿಲೇರಿದ್ದರು. ನಿರೀಕ್ಶೆಯಂತೆ ಉತ್ತಮ ಅಂಕಗಳೊಂದಿಗೆ ಇಬ್ಬರೂ ಮುಂದಿನ ಹಂತಕ್ಕೆ ತೇರ್‍ಗಡೆ ಹೊಂದಿದ್ದರು. ಇದೇ ಸಂಬ್ರಮದಲ್ಲಿದ್ದ ಇಬ್ಬರೂ, ‘ಇಂದು ಒಬ್ಬರಿಗೊಬ್ಬರು ಮಾತಾಡಿಕೊಳ್ಳಲೇಬೇಕು’ ಎಂದು ಮನಸ್ಸಿನಲ್ಲಿಯೇ ಲೆಕ್ಕಾಚಾರ ಹಾಕಿ ಶಾಲೆಯಿಂದ ಹೊರನಡೆದರು. ಅದೇ ಸಮಯಕ್ಕೆ ಶಾಲೆಯ ಮುಂದೆ ನೀರ್‍ಗಲ್ಲ ಮಿಟಾಯಿ (ice candy) ಮಾರುವವನ ಸಯ್ಕಲ್ ನಿಂದ ಗಂಟೆ ರಿಂಗಣಿಸಿತ್ತು. ‘ಹೇಗಿದ್ದರೂ ಇಂದು ಒಬ್ಬರಿಗೊಬ್ಬರು ಕಂಡಿತಾ ಮಾತಾಡಿಕೊಳ್ಳುತ್ತೇವೆ, ಅದಕ್ಕಿಂತ ಮುಂಚೆ ಆಕೆಯನ್ನು ಕೊನೆಯದಾಗಿ ಕೊಂಚ ಕಾಡೋಣ’ ಎಂದು ಮನದಲ್ಲೇ ಅಂದುಕೊಂಡು ಮೆಲ್ಲನೆ ಸಯ್ಕಲ್ ನತ್ತ ಹೆಜ್ಜೆ ಹಾಕಿದ ಇನಿತ್, ಎರಡು ನೀರ್‍ಗಲ್ಲ ಮಿಟಾಯಿಯನ್ನು ಕರೀದಿಸಿ ಒಂದನ್ನು ಯಾರಿಗೂ ತಿಳಿಯದಂತೆ ತನ್ನ ಚೀಲದೊಳಗೆ ಇಂಪನಳಿಗಾಗಿ ಬಚ್ಚಿಟ್ಟು, ತಾನು ಒಂದೇ ನೀರ್‍ಗಲ್ಲ ಮಿಟಾಯಿಯನ್ನು ಕರೀದಿಸಿದ್ದು ಎಂಬಂತೆ ಮತ್ತೊಂದನ್ನು ಆಕೆಯ ಎದುರಿಗೆ ಬಗೆ ಬಗೆಯಾಗಿ ಸವಿಯುತ್ತಾ ನಿಂತ.  ಅಶ್ಟರಲ್ಲಿ ಇಂಪನಾಳು ಕೂಡ ನೀರ್‍ಗಲ್ಲ ಮಿಟಾಯಿಯನ್ನು ಕರೀದಿಸಿ ಆತನ ಮುಂದೆ ಸವಿಯುತ್ತಾ ಒಬ್ಬರಿಗೊಬ್ಬರು ಪಯ್ಪೋಟಿಗೆ ಇಳಿಯುತ್ತಿದ್ದಂತೆ ಬಸ್ ಬಂತು. ಆತ ಬೇಸಿಗೆಯ ಎರಡು ತಿಂಗಳ ರಜೆ ಕಳೆಯಲೆಂದು ಇನಿತ್ ಮರುದಿನ ತನ್ನ ಅಜ್ಜಿ ಮನೆಗೆ ಹೋಗುವವನಿದ್ದ. ಆದ್ದರಿಂದ ಬಸ್ ಇಳಿದು ಮನೆಗೆ ಹೋಗುವವರೆಗಿನ ಸಮಯ ಬಿಟ್ಟರೆ ಮತ್ತೆ ಒಬ್ಬರಿಗೊಬ್ಬರು ಮಾತಾಡಿಕೊಳ್ಳಲು ಇನ್ನೂ ಎರಡು ತಿಂಗಳು ಕಾಯಬೇಕಾಗುತ್ತದೆ ಎಂಬ ಅರಿವು ಇಬ್ಬರಲ್ಲಿಯೂ ಇತ್ತು.

ಈ ಯೋಚನೆಯಲ್ಲಿಯೇ ಬಸ್ ಇಳಿದ ಇಬ್ಬರೂ ಮೊದಲು ಹೇಗೆ ಮಾತು ಪ್ರಾರಂಬಿಸುವುದೆಂದೇ ಚಿಂತಿಸುತ್ತಾ ಮುಂದೆ ಸಾಗಿದರು. ಕೊನೆಗೆ ಎಲ್ಲಾ ಸ್ವಾಬಿಮಾನ, ಆತ್ಮ ಗವ್ರವಗಳನ್ನು ಬದಿಗಿರಿಸಿ ತಾನೇ ಮೊದಲು ಮಾತನಾಡಿಸುತ್ತೇನೆಂದು ನಿರ್‍ದರಿಸಿದ ಇನಿತ್ ತನ್ನ ಚೀಲದೊಳಗೆ ಇಂಪನಾಳಿಗಾಗಿ ಇಟ್ಟಿದ್ದ ನೀರ್‍ಗಲ್ಲ ಮಿಟಾಯಿಯನ್ನು ಆಕೆಯ ಕಯ್ಗಿತ್ತನು. ಕೊಂಚ ಆಶ್ಚರ್‍ಯದಿಂದಲೇ ನೀರ್‍ಗಲ್ಲ ಮಿಟಾಯಿಯನ್ನು ತೆಗೆದುಕೊಂಡ ಆಕೆ, ಆತನಿಗೂ ಒಂದು ಆಶ್ಚರ್‍ಯವನ್ನು ಹೊತ್ತುತಂದಿದ್ದಳು. ತಾನು ನಿರ್‍ಗಲ್ಲ ಮಿಟಾಯಿಯನ್ನು ಕರೀದಿಸುವಾಗ ಆತನಿಗೂ ಒಂದನ್ನು ಕರೀದಿಸಿ, ಯಾರೋ ಕೊಟ್ಟಿದ್ದ ಗಾರಿಗೆ(biscuit)ಯನ್ನು ಜೊತೆಗಿರಿಸಿ ಯಾರಿಗೂ ತಿಳಿಯದಂತೆ ತನ್ನ ಚೀಲದಲ್ಲಿ ಅಡಗಿಸಿ ತಂದಿದ್ದಳು. ಹೀಗೆ ನೀರ್‍ಗಲ್ಲ ಮಿಟಾಯಿ ಮತ್ತು ಗಾರಿಗೆಯನ್ನು ಆತನ ಕಯ್ಗಿಡುತ್ತಿದ್ದಂತೆಯೇ, ‘ಅವನ ಮತ್ತು ಅವಳ’ ಎರಡು ತಿಂಗಳ ಮುನಿಸಿಗೆ ತೆರೆಬಿದ್ದಿತ್ತು. ಇಬ್ಬರ ಮೊಗದಲ್ಲೂ ನಗು ಮೂಡಿತ್ತು. ಮತ್ತೆ ಮಾತು ಮುಂದುವರಿದಿತ್ತು…

ದಿನ ಮೂಡುವ ತುಸು ಮುನಿಸದು
ಅಸು ನೀಗುವ ಕ್ಶಣದ ಮರ್‍ಮವು
ಬಾಲ್ಯ ಕಟ್ಟಿದೆ ನೆನಪ ಕುಸುರಿಯ
ಸ್ನೇಹದ ಹೊನಲನು ಹರಿಸುತಲಿ
ಬಾಂದವ್ಯ ತುಂಬುವ ಬರವಸೆಯಲಿ
ಬವಣಿಸೊ ಮುನಿಸು ಮರೆಯಾಗಲಿ
ಸಲುಗೆಯ ಮೇಲಾಟ ಮುಂದುವರಿಯಲೀ.

(ಚಿತ್ರ: www.imgion.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: