ಹೊರನಾಡಿನಲ್ಲಿ ಕಂಗೊಳಿಸಿದ ನಾಣ್ಣುಡಿ
ನಮ್ಮ ಕನ್ನಡದ ಗ್ರಾಹಕ ಚಳುವಳಿಯ ನಾಟುವಿಕೆಯನ್ನು ನಾವು ತಿಳಿಯಾಗಿ ಕಾಣುತ್ತಿರುವುದರ ಹಿನ್ನೆಲೆಯಲ್ಲಿ ನಮ್ಮ ನುಡಿಯ ಬಳಕೆಯನ್ನು ಕುರಿತು ಹೇಳುವುದೊಂದಿದೆ. ಇತ್ತೀಚೆಗೆ ಆಸ್ಟ್ರೇಲಿಯಾಗೆ ಹೋಗಿ ಬಂದ ನಾನು ಅಲ್ಲಿ ಅಚ್ಚರಿ ತರಿಸುವ ಒಂದನ್ನು ನೋಡಿದೆ. ಅಲ್ಲಿರುವಾಗ ಅಲ್ಲಿನ ಬಾರತೀಯ ಊಟ- ಅಡುಗೆ ಪದಾರ‍್ತಗಳ ಅಂಗಡಿಯೊಂದರಿಂದ ಕೆಲ ಸಾಮಗ್ರಿಗಳನ್ನು ಒಂದು ದಿನ ಕೊಂಡೊಯ್ದಿದ್ದೆ. ಅವುಗಳಲ್ಲಿ ಗುಜರಾತು / ಮಹಾರಾಶ್ಟ್ರಗಳಲ್ಲಿ ಮೆಚ್ಚುಗೆಯ ತಿಂಡಿಯಾದ ’ಕಾಕ್ರಾ’ ಕೂಡ ಇದ್ದಿತ್ತು. ಇದು ನಮ್ಮ ಹಪ್ಪಳದಂತೆ ಗರಿಗರಿಯಾಗಿ ಇರುತ್ತದೆ. ಈ ಪದಾರ‍್ತಗಳು ಎಲ್ಲಿಂದ ಬಂದಿರುವುವು, ಇದನ್ನು ಮಾಡಿದವರ ಬಗ್ಗೆ ತಿಳಿಯಲು ಕುತೂಹಲವಾಗಿ ಕಾಕ್ರಾ ದ ಪೊಟ್ಟಣದ ಹಿಂಬದಿಯಲ್ಲಿ ಬರೆದುದ್ದನ್ನು ಓದುತ್ತಿದ್ದೆ. ಆ ಬರಹವನ್ನು, ಬರಿಗೆಗಳನ್ನು ನೋಡಿ ಒಂದು ಗಳಿಗೆ ಮಿಂಚು ಹರಿದಂತಾಯಿತು.
ಇಲ್ಲಿ ಓದುತ್ತಾ ನೋಡಿದೆ, ಇಂಗ್ಲಿಶ್, ಪ್ರೆನ್ಚ್, ಚಯ್ನೀಸ್, ಅರಾಬಿಕ್ ಇವುಗಳ ನುಡುವೆ ಹೊಳೆಯುತ್ತಿದ್ದ ಕನ್ನಡ! ಇದು ಅಚ್ಚರಿ ತಂದಿತು. ಕೂಡಲೆ ಕಣ್ಣು ಹೊರಳಿಸಿದ್ದು ಇದರ ಮಾಡುಗರು ಯಾರೆಂಬುದನ್ನು ತಿಳಿಯಲು. ಇದನ್ನು ತಯಾರಿಸಿದ್ದು ಗುಜರಾತಿನಲ್ಲಿ. ಗುಜರಾತಿ ನುಡಿಯಲ್ಲೂ ಕೂಡ ಇಲ್ಲಿ ಏನೂ ಕಾಣದು, ಅಲ್ಲದೇ ಹಿಂದಿಯನ್ನೇ ’ಕಡೆಗಣಿಸ’ಲಾಗಿದೆ! ಇಮಾಮು ಸಾಬಿಗೂ ಗೋಕುಲಾಶ್ಟಮಿಗೂ ಏನಪ್ಪಾ ನಂಟು ಅನ್ನುವಂತೆ, ಆಸ್ಟ್ರೇಲಿಯಾದ ಬ್ರಿಸ್ಬೇನಿಗೂ, ಇಲ್ಲಿ ಜಗತ್ತಿನ ನುಡಿಗಳಿಗೆ ಸಮತಟ್ಟಿನಲ್ಲಿ ರಾರಾಜಿಸುತ್ತಿದ್ದ ನಮ್ಮ ನುಡಿಗೂ ಏನಪ್ಪ ನಂಟು, ಎಂದು ಇದೊಂದು ಒಳ್ಳೆಯ ಸೋಜಿಗ ಎಂದೆನಿಸಿತು.
ಇಲ್ಲಿನ ಕನ್ನಡ ಬರಿಗೆಗಳೇನೋ ನಾವು ಎಂದಿನಂತೆ ಬಳಸುವ ಬಗೆಯದಲ್ಲ… ಎಲ್ಲೋ ನುಡಿಮಾರಿನ ನವಿರೆಣಿಯಲ್ಲಿ (software) ಸರಿಯಾಗಿ ಬಂದಿಲ್ಲವಶ್ಟೆ. ಆದರೂ ಕನ್ನಡ ಬಲ್ಲವನು ಇದನ್ನು ಓದಲಾರನೇ? ಅಶ್ಟಕ್ಕೂ ಪೇಸ್ಬುಕ್ಕಿನಲ್ಲಿ ಇದೇ ಬಗೆಯ ಸರಳ ಕನ್ನಡದ ಬರಹವನ್ನು ಸಾರುವ ಒಂದು ಗುಂಪನ್ನೇ ನೋಡಿದ್ದೇವೆ! ಕಾಕ್ರಾದಲ್ಲಿ ಬಳಕೆಯಾದ ಪದಾರ‍್ತಗಳನ್ನು ಓದುತ್ತಾ, ಇಂಗ್ಲಿಶಿನಲ್ಲಿ ‘ಪೆನುಗ್ರೀಕ್’ (Fenugreek) ಎನ್ನುವುದನ್ನು ಓದಿದೆ, ಎಲ್ಲೋ ಮಿಡ್ಳು ಸ್ಕೂಲಿನಲ್ಲೋ ಮತ್ತೆಲ್ಲೋ ಓದಿದ ನೆನಪು, ಆದರೆ ಅದೇನೆಂದೇ ನೆನಪಿಲ್ಲ… ಆದರೆ ಇಲ್ಲಿನ ಕನ್ನಡ ಬರಹದ ಜಾಡು ಹಿಡಿದಂತೆಯೇ ಅದು ಮೆಂತ್ಯ ಎಂದು ಅರಿತೆ! ಗ್ರಾಹಕರಿಗೆ ಮಾರುವ ನಿಟ್ಟಿನಲ್ಲಿ ಈ ರೀತಿಯ ನೆರವನ್ನು ನೀಡುವುದನ್ನು ಕುರಿತೇ ಅಲ್ಲವೇ ಚಳುವಳಿ ಇರುವುದು!
ಇದರ ಮಾಡುವಳಿ (manufacture) ಎಲ್ಲೆಂದು ನೋಡಿದರೆ, ಅಹಮದಾಬಾದು. ಇಲ್ಲಿಂದ ಬ್ರಿಸ್ಬೇನಿಗೆ ಪೊರಮಾರು (export) ಆಗುತ್ತಿದೆ.
ಕುತೂಹಲಕ್ಕೆ ಇವರ ಮಿಂದಾಣಕ್ಕೆ ಹೋಗಿ ನೋಡಿದೆ. ಕರ‍್ನಾಟಕ್ಕಾಗಲೀ ಕನ್ನಡಕ್ಕಾಗಲೀ, ಸಂಬಂದ ಕಾಣದು. ಇವರು, ಅಂದರೆ ಮಾಡುವಳಿ ಕೂಟದವರು ಕರ‍್ನಾಟಕದಲ್ಲಿ ನೆಲೆಸಿದ್ದಿರಬಹುದು. ಇಲ್ಲವೇ ಬ್ರಿಸ್ಬೇನಿನಲ್ಲಿ ನನಗೆ ತಿಳಿದ ಮಟ್ಟಿಗೆ ನೆಲೆಸಿರುವ ಹಲವು ಕನ್ನಡ ಮಂದಿಯನ್ನು ಸೆಳೆಯಲೋ ನೆರವು ನೀಡಲೋ ಇರಬಹುದು… ಅದು ಹೇಗೇ ಇದ್ದರೂ ಒಂದು ಮಟ್ಟಿನ ಊಹೆ ಮಾಡಬಹುದಶ್ಟೆ. ಅದೂ ಅಲ್ಲದೇ ಆಸ್ಟ್ರೇಲಿಯದಲ್ಲಿ ನೆಲೆಸಬೇಕೆಂದರೆ ಇಂಗ್ಲಿಶ್ ಬರದೇ ಯಾರೂ ಹೋಗರು. ಹಾಗೆಂದಮೇಲೆ ಇಂಗ್ಲಿಶು, ಬಾರತದ ಒಂದೋ ಎರಡೋ ನುಡಿಗಳು (ಮುಕ್ಯವಾಗಿ ಇದು ಇಲ್ಲಿಯ ಅಡುಗೆಯಾದ್ದರಿಂದ), ಅದರ ಜೊತೆಗೆ ಪ್ರೆಂಚ್, ಚಯ್ನೀಸ್, ಇಲ್ಲವೇ ಅರಾಬಿಕ್, ಇನ್ನಿತರ ಜಗತ್ತಿನ ನಾಡುಮಟ್ಟದ, ನಾಡುನಡುವಿನ ನುಡಿಗಳನ್ನು ಕೊಟ್ಟಲ್ಲಿ ತಕ್ಕುದಾಗಿರುತ್ತದೆ. ಇಲ್ಲಿ ಬಾರತದ ನುಡಿಯಾಗಿ ಕನ್ನಡದ ಇರವು ಇದೆ. ಬಾರತದ ನುಡಿ ಅಂದರೆ ಹಿಂದಿಯೇ ಆಗಬೇಕಿಲ್ಲ ಅನ್ನುವ ನಿಲುವು ಇದರ ಹಿನ್ನೆಲೆಯಲ್ಲಿ ಕಾಣದೇ ಇರದು. ಕನ್ನಡ ನುಡಿಯುವ ಗ್ರಾಹಕರಿದ್ದಾರೆ, ಅವರ ನುಡಿಯಲ್ಲಿ ಮಾಹಿತಿ ನೀಡೋಣ- ಅನ್ನುವ ನಿಲುವು. ಇದು ಬಾರತದ ಬೇರ‍್ಮೆಯನ್ನು, ಹಲನುಡಿ ಮಂದಿಯ ಲಕ್ಶಣವನ್ನು ಸಾರುತ್ತದೆ. ಹೊರ ನಾಡಿನಲ್ಲಿ ಇಂತಹ ಮನ್ನಣೆ ಸಿಗುವ ಕನ್ನಡ ನುಡಿಗೆ, ಅದರ ನಾಡಿನಲ್ಲೇ ಸಿಗದ ಹಲವು ಎತ್ತುಗೆಗಳು ಕಾಣುತ್ತವೆ. ಇದು ಮನ್ನಣೆ ಅನ್ನುವುದಕ್ಕೂ ಮಿಗಿಲಾಗಿ, ಬಳಕೆಯ ಹುರುಪು, ಇದನ್ನು ನುಡಿಯಾಡುಗರು ತೋರಬೇಕು.
ಸ್ವಲ್ಪ ವಿಚಾರ ಸರಿಸಿ, ಆದರೂ ಇದೇ ಬದಿಯ ಹೊಳಹಿಗೆ ಹೊಂದುವ ಮತ್ತೊಂದು ಎತ್ತುಗೆ ನೀಡುತ್ತೇನೆ. ಆಸ್ಟ್ರೇಲಿಯದಿಂದ ಮರಳಿ ಬರುವಾಗ ತಾಯ್ ಏರ‍್ವೇಸ್ (Thai airways) ನಲ್ಲಿ ಬಂದೆ. ಪ್ರಯಾಣದ ಆರಂಬದಲ್ಲಿ ಅಲ್ಲಿಯ ಬಾನೋಡ ಗೆಳತಿಯರಿಂದ (ಏರ್ ಹಾಸ್ಟೆಸ್) ಪಾಲಿಸಬೇಕಾದ ನಿಯಮ ಮತ್ತಿತರ ಬಗೆಗಿನ ಸುರಕ್ಶತೆಯ ವಿದಿವಿದಾನಗಳನ್ನು ತಿಳಿಸಿಕೊಡುವಾಗ, ಮೊದಲು ತಾಯ್, ಬಳಿಕ ಇಂಗ್ಲಿಶಿನಲ್ಲಿ ವಿವರಿಸಲಾಗಿ, ಬಳಿಕ, ಪ್ರಯಾಣದ ನಡುವಿನಲ್ಲಿ ಬರುವ ಎಲ್ಲ ಸಾರುಕರೆಗಳನ್ನು (announcements) ಬರಿಯ ತಾಯ್ ನಲ್ಲಿಯೇ ಕೊಡಲಾಯಿತು. ಅದರ ಬಗ್ಗೆ ಕೆಲ ಕೇಳುಗರಿಗೆ ಪಿಚ್ಚೆಂದು ಅನ್ನಿಸಿದ್ದಿರಬಹುದು. ಆದರೆ ಅದನ್ನು ಕಡೆಗಣಿಸಲು ಬಾರದು. ಅದು ಆ ಬಾನೊಯ್ಯುಕಕ್ಕೆ (airways) ಬಿಟ್ಟಿದ್ದು. ಅದನ್ನು ವಿಶಾಲ ನೋಟದಿಂದ ನೋಡತಕ್ಕದ್ದು.
ಕೊನೆಗೆ ಇಲ್ಲಿ ನೋಡಬೆಕಾದದ್ದು ಏನೆಂದರೆ, ತಮ್ಮದೇ ಜನರ ಮುಂದೆ ಅಬಿವ್ಯಕ್ತಿಯ ಮಾತು ಇಲ್ಲವೆ ಬರಹದಲ್ಲಿ, ಆ ಮಂದಿಯ ತಾಯ್ನುಡಿಯ, ನಾಣ್ಣುಡಿಯ ಬಳಕೆಯ ಹೊಣೆಗಾರಿಕೆ ಇರತಕ್ಕದ್ದು, ಎನ್ನುವುದು. ಹೀಗಿರಬೇಕಾದ ಹಿನ್ನೆಲೆಯಲ್ಲಿಯೇ ಕನ್ನಡ ಗ್ರಾಹಕ ಚಳುವಳಿಯ ಪ್ರಾಮುಕ್ಯತೆ ಕಾಣುತ್ತದೆ.
ಇಂಡಿಯದಲ್ಲಿ ಇಂಟರ್ನೆಟ್ ಅಂಬೆಗಾಲಿಡುತ್ತಿದ್ದ ಹಿಂದಿನ ವರ್ಶಗಳಲ್ಲಿ ಕನ್ನಡ ಇರುವದರಲ್ಲಿ ಟೆಕ್ನಾಲಾಜಿ ಸರಳಗೊಳಿಸಿಕೊಂಡಿತ್ತು, 2004, 05 ರಲ್ಲಿ ಹಲವು ತೆಲುಗು ವೆಬ್ಸೈಟುಗಳು ಕನ್ನಡ ಫಾಂಟ್ ಬಳಸುತ್ತಿದ್ದವು ಮತ್ತು ಆಗ ಕನ್ನಡಿಗರು ಹೆಚ್ಚಿನ ಚಟುವಟಿಕೆ ತೋರುತ್ತಿದ್ದರು. ಯಾಕಂದರೆ ಬೆಂಗಳೂರು ಐ.ಟಿ ನಗರವಾಗಿ ಇಂಡಿಯಾದಲ್ಲಿ ಮೊದಲು ಹೊಮ್ಮಿದೆ. ಅದು ನೇರವಾಗಿ ಕನ್ನಡಕ್ಕೆ ಒಳ್ಳೆಯದು ಮಾಡಿದೆ. ಹಾಗಾಗಿ ಆಗ ಕನ್ನಡ ಫಾಂಟ್ ಆ ಕಂಪನಿಗೆ ಹೊಂದಿಸಿಕೊಳ್ಳಲು ಅನುಕೂಲಕರವಾಗಿ ತೋರಿದ್ದೀತು. ಇಲ್ಲಿ ಕನ್ನಡ ಸರಿಯಾಗಿ ಮೂಡಿರದೇ ಇರುವದೂ ಇದನ್ನೇ ಪುಶ್ಟೀಕರಿಸುತ್ತದೆ. ಅದನ್ನು ಹಾಗೇ ಅವರು ಮುಂದುವರೆಸಿಕೊಂಡು ಬಂದಿದ್ದಾರೆ.