ನೇಸರನ ಬೆಳಕಿನಿಂದ ಹಯ್ಡ್ರೋಜನ್ ಉರುವಲು

ಸಂಗನಗವ್ಡ ಕೆ.

image25
ಪೆಟ್ರೋಲ್, ಡೀಸೆಲ್‍ನಂತ ಪೆಟ್ರೋಲಿಯಮ್ ಉರುವಲು ಹಾಗು ಇತರ ಹುಗಿದು ಹೋದ ಉರುವಲು(fossil fuel)ಗಳು ನಮ್ಮ ಬೂಮಿಯ ಬಿಸಿ ಇಪ್ಪತ್ತನೆ ಶತಮಾನದಲ್ಲಿ ಸತತ ಏರಿರುವದಕ್ಕೆ ಕಾರಣವಾಗಿವೆ. ಇಂದಿನ ದಿನಗಳಲ್ಲಿ ಇವಕ್ಕೆ ಪರ‍್ಯಾಯ ದಾರಿಗಳು ಎಲೆಕ್ಟ್ರಿಕ್ ಮತ್ತು ಹಯ್ಡ್ರೋಜನ್ ಕಾರುಗಳು, ಯಾಕೆಂದರೆ ಇವು ಗಾಳಿಯನ್ನು ಕೊಳೆ ಮಾಡುವುದಿಲ್ಲ, ಮತ್ತು ಪೆಟ್ರೋಲಿಯಮ್ ಉರುವಲಿನ ಬೆಲೆ ದಿನದಿಂದ ದಿನಕ್ಕೆ ಏರುತ್ತಿರುವದರಿಂದ, ಸೂರ‍್ಯಶಕ್ತಿ ಬಳಸಿ ಇವನ್ನು(ಕರೆಂಟ್ ಮತ್ತು ಹಯ್ಡ್ರೋಜನ್) ನಾವು ಮಾಡಿಕೊಳ್ಳಬಹುದು.

ನಾನು ಇಲ್ಲಿ ಮುಕ್ಯವಾಗಿ ಹಯ್ಡ್ರೋಜನ್ ಕಾರಿನ ಬಗ್ಗೆ ಹೇಳಬೇಕೆಂದಿದ್ದೇನೆ. ಇವುಗಳಲ್ಲಿ ಎರಡು ಬಗೆ;

1) ಹಯ್ಡ್ರೋಜನ್ ಇಂಟರ್‍ನಲ್ ಕಂಬಶ್ಚನ್ ಎಂಜಿನ್

2) ಹಯ್ಡ್ರೋಜನ್ ಪ್ಯುಎಲ್ ಸೆಲ್ ಎಂಜಿನ್

ನನ್ನ ಒಲವಿರುವದು ಹಯ್ಡ್ರೋಜನ್ ಇಂಟರ್‍ನಲ್ ಕಂಬಶ್ಚನ್ ಎಂಜಿನ್ ಬಗ್ಗೆ, ಯಾಕೆಂದರೆ ಇದಕ್ಕೆ ನಮ್ಮ ಇರುವ ಕಾರನ್ನೇ ಬದಲಾವಣೆ ಮಾಡಿಕೊಳ್ಳಬಹುದು. ಎರಡನೇ ಬಗೆಯದು ಎಲೆಕ್ಟ್ರಿಕ್ ಕಾರೇ ಆಗಿದೆ, ಆದರೆ ಹಯ್ಡ್ರೋಜನ್ ಉರಿದು ಬ್ಯಾಟರಿಯನ್ನು ತುಂಬಿಸುತ್ತದೆ, ಬ್ಯಾಟರಿಯಿಂದ ಕಾರು ಓಡುತ್ತದೆ. ಎಲೆಕ್ಟ್ರಿಕ್ ಕಾರು ಅತವಾ ಹಯ್ಡ್ರೋಜನ್ ಪ್ಯೂಯಲ್ ಸೆಲ್ ಕಾರುಗಳು ಮೊದಲನೆಯದಾಗಿ ತುಟ್ಟಿ, ಎರಡನೇಯದು ಇವುಗಳ ಬ್ಯಾಟರಿಯನ್ನು ಪ್ರತಿ ಮೂರರಿಂದ ಅಯ್ದು ವರ‍್ಶಕ್ಕೆ ಬದಲಿಸಬೇಕು. ಹಾಗಾಗಿ ಇವು ಹುಗಿದೋದ ಉರುವಲು ಕಾರಿನಿಂದ ಮುಕ್ತಿ ಕೊಟ್ಟರೂ ತೆರುವ ಬೆಲೆ ಅವಕ್ಕಿಂತ ಹೆಚ್ಚು, ಹಾಗಾಗಿ ಅವು ಪರಿಸರ ಕಾಳಜಿಗೆ ಹೆಚ್ಚಿನ ಹಣ ತೆರಬೇಕು ಎಂಬ ಅನಿಸಿಕೆ ಹುಟ್ಟಿಸುತ್ತವೆ.

ಹಯ್ಡ್ರೋಜನ್ ಒಂದು ಗ್ಯಾಸ್, ಇದು ಗಾಳಿಗಿಂತ ಹಗುರ, ಹೊರಬಾನುವಿನೆಲ್ಲೆಡೆ ಅತೀ ಹೆಚ್ಚು ದೊರಕುವ ವಸ್ತು ಹಯ್ಡ್ರೋಜನ್, ಹಾಗಾಗಿ ರಾಕೇಟುಗಳಲ್ಲಿ ಹಯ್ಡ್ರೋಜನ್ ಬಳಕೆ ಹೆಚ್ಚಾಗಿ ಕಂಡು ಬರುತ್ತದೆ. ನಮ್ಮ ರೆಗುಲರ್ ಪೆಟ್ರೋಲ್/ಡಿಸೇಲ್ ಕಾರುಗಳಲ್ಲಿ ಕೊಂಚ ಬದಲಾವಣೆ ಮಾಡಿಕೊಂಡು ಹಯ್ಡ್ರೋಜನ್ ಉರಿದು ಓಡಿಸಬಹುದು, ಆದರೆ ಹಯ್ಡ್ರೋಜನ್ ಬಲು ಬೇಗ ಉರಿದು ಹೋಗುವದರಿಂದ, ಹೆಚ್ಚು ಉರುವಲು ಬೇಕಾಗುತ್ತದೆ.

ಈ ನಿಟ್ಟಿನಲ್ಲಿ ಕೆಲ ಸಂಶೋದನೆಗಳಾಗಿದ್ದು, ಒಂದು ಅಂದಾಜು ಲೆಕ್ಕ ಕೊಡುವದಾದರೆ, ಮಹಿಂದ್ರರವರ delhy 3w ಎಂಬ ರಿಕ್ಶಾ ಒಂದು ಕಿಲೋ ಹಯ್ಡ್ರೋಜನ್ ಗೆ 85 ಕಿ.ಮಿ ಓಡುತ್ತದೆ. ಅಂದರೆ ಕೊಂಚ ಹೊಸತಾದ ತಂತ್ರಜ್ನಾನ ಬಳಸಿದರೆ ಸಾಮಾನ್ಯ ಕಾರು 60 ಕಿ.ಮೀ/ಕಿಲೋ ಹಯ್ಡ್ರೋಜನ್ ಮಯ್ಲೇಜ್ ಕೊಡಲಿದೆ ಅಂತ ಇಟ್ಟುಕೊಳ್ಳಬಹುದು. ಇದು ಸರಾಸರಿ ಒಂದು ದಿನಕ್ಕೆ 60 ಕಿ.ಮಿ ಓಡಿಸುತ್ತೇವೆ ಅಂತ ಇಟ್ಟುಕೊಳ್ಳೋಣ. ಅಂದರೆ ಹೆಚ್ಚು ಕಮ್ಮಿ ಒಂದು ಕಿಲೋ ಹಯ್ಡ್ರೋಜನ್ ಒಂದು ದಿನಕ್ಕೆ ಬೇಕು.

ಇನ್ನು ದಿನವೊಂದಕ್ಕೆ ಒಂದು ಕಿಲೋ ಹಯ್ಡ್ರೋಜನ್ ತಯಾರಿಸುವದರ ಬಗ್ಗೆ ಮಾಹಿತಿ ಕಲೆ ಹಾಕುವದೊಂದು ಹರ ಸಾಹಸವಾಗಿತ್ತು. ಎಲೆಕ್ಟ್ರೋಲಿಸಿಸ್ ಸರಳ ವಿದಾನವಾಗಿದೆ. ಉಪ್ಪಿನ ನೀರಿನಲ್ಲಿ ಎರಡು ಪ್ಲೇಟ್‍ಗಳನ್ನು ಬಿಟ್ಟು, ಒಂದಕ್ಕೆ ಪೊಸಿಟೀವ್ ಮತ್ತೊಂದಕ್ಕೆ ನಿಗೆಟಿವ್ ತಂತಿ ಜೋಡಿಸಿದರೆ, ಆ ನೀರಿನ ಮೇಲೆ ಗುಳ್ಳೆಯ ರೂಪದಲ್ಲಿ ಹಯ್ಡ್ರೋಜನ್ ಶೇಕರಣೆಗೊಳ್ಳುತ್ತದೆ. ಆದರೆ ಈ ವಿದಾನ ತುಂಬ ತುಟ್ಟಿ, ಎಶ್ಟು ತುಟ್ಟಿಯೆಂದರೆ 1 ಕಿಲೋ ಹಯ್ಡ್ರೋಜನ್ ತಯಾರಿಕೆಗೆ ಸುಮಾರು ಎಪ್ಪತ್ತೆರಡು ಸಾವಿರ ಯುನಿಟ್ ಕರೆಂಟ್ ಬೇಕು!

ಸರಳ ಮತ್ತು ಅಗ್ಗ ವಿದಾನ ನಾನು ಕಂಡುಕೊಂಡಿದ್ದೆಂದರೆ, ಸೋಲಾರ್ ತರ್‍ಮೊಲಿಸಿಸ್‍(solar thermolysis) ನ ಮೂಲಕ, ಸೋಲಾರ್ ಒಗ್ಗೂಡಕ(solar concentrator – ಹಿಮ್ಮೊಗ ಮಾಡಿದ ಚತ್ರಿಯಾಕಾರದ ಕನ್ನಡಿಗಳು ಸವ್ರಶಕ್ತಿಯನ್ನು ಒಂದೆಡೆ ಸೇರಿಸುತ್ತವೆ) ಬಳಸಿ ನೀರನ್ನು 2 ಸಾವಿರ ಡಿಗ್ರಿಗಿಂತಲೂ ಹೆಚ್ಚು ಬಿಸಿಗೆ ಏರಿಸಿದಾಗ, ನೀರು, ಹಯ್ಡ್ರೋಜನ್ ಮತ್ತು ಆಕ್ಸಿಜೆನ್ ಆಗಿ ಒಡೆಯುತ್ತದೆ. ಇದರಿಂದ ಒಂದು ಗಂಟೆಗೆ ಒಂದು ಕಿಲೋ ಹಯ್ಡ್ರೋಜನ್ ತಯಾರಿಸಬಹುದೆಂದು ಹೇಳಲಾಗಿದೆ.  ಆದರೆ 100 meter square ಸೋಲಾರ್ ಒಗ್ಗೂಡಕ ನಿಮ್ಮ 30*40 ಮನೆಯ ಜಾಗ ಹಿಡಿಯುತ್ತದೆ, ಹಾಗಾಗಿ ಇದರ ನಾಕು ಪಟ್ಟು ಚಿಕ್ಕ 25 ಮೀಟರ್ ಸ್ಕ್ವೇರ್ ಸೋಲಾರ್ ಒಗ್ಗೂಡಕ ನಾಲ್ಕರಿಂದ ಅಯ್ದು ಗಂಟೆಯಲ್ಲಿ 1 ಕಿಲೋ ಹಯ್ಡ್ರೋಜನ್ ನೀಡಬೇಕು(ನನ್ನ ಗಣಿತ ಸರಿ ಇದ್ದಲ್ಲಿ). ಇಂತ 25 ಚ.ಮೀ ಸೋಲಾರ್ ಒಗ್ಗೂಡಕವನ್ನು ಕೂರಿಸಲು ಅಂದಾಜು ಸುಮಾರು 4 ಲಕ್ಶ ಹಣ ತಗುಲಬಹುದು.

(ಮಾಹಿತಿ ಸೆಲೆ: wikipediayaahoanswersiitd)

(ಚಿತ್ರ ಸೆಲೆ: intechopen)

 

1 ಅನಿಸಿಕೆ

  1. ಒಳ್ಳೆಯ ಮಾಹಿತಿ.. ಹೆಚ್ಚು ತಿಳಿದುಕೊಳ್ಳಲು ‌ಪ್ರಯತ್ನಿಸುತ್ತೇನೆ.. ನೀವು ಹಾಕಿರುವ ಫೊಟೋ ಮಲ್ಟಿಜಂಕ್ಷನ್ ಟ್ಯಾಂಡೆಮ್ ಸೋಲಾರ್ ಫೊಟೊವೋಲ್ಟಾಯಿಕ್ ಸೆಲ್ಲುಗಳದ್ದು.. ಇದರಲ್ಲಿ ನೇಸರನ ಬೆಳಕನ್ನು(Photon Energy) ವಿದ್ಯುತ್ ತಯಾರಿಸಲು ಉಪಯೋಗಿಸಲಾಗುತ್ತದೆ, ಬೆಳಕನ್ನು ಒಗ್ಗೂಡಿಸಿ ನಡುವೆ ಇರುವ ಫೊಟೊವೋಲ್ಟಾಯಿಕ್ ಸೆಲ್ ಮೇಲೆ ಬಿಡಲಾಗುತ್ತದೆ.. ಇದರಲ್ಲಿ ಕೇವಲ ಸಿಲಿಕಾನ್ ಅಲ್ಲದೇ ಬೇರೆ (ಗೇಲಿಯಂ, ಕ್ಯಾಡ್ಮಿಯಂ, ಇಂಡಿಯಂ) ಪದರಗಳು ಇರುತ್ತವೆ.. ಬೇರೆ ಬೇರೆ ಬ್ಯಾಂಡ್ ವಡ್ತಿನ ಬೆಳಕನ್ನು ಬೇರೆ ಬೇರೆ ಪದರಗಳು ಹೀರಿಕೊಂಡು ಬೆಳಕನ್ನು ವಿದ್ದುತ್ತಾಗಿ ಪರಿವರ್ತಿಸುತ್ತವೆ.
    ನೀವು ಹೇಳಿರುವ ನೀರಿನ ತಾಪಮಾನ ಹೆಚ್ಚಿಸುವ ಸಾದನದಲ್ಲಿ ಸೂರ್ಯನ ಸುಡುವ (Thermal Energy) ಗುಣವನ್ನ ಬಳಸಿ ನೀರನ್ನು ಬಿಸಿ ಮಾಡಲಾಗುತ್ತದೆ

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.