ಗಿನ್ನಿಸ್ ದಾಕಲೆಯ ಕೊಡಗಿನ ಹಾಕಿಹಬ್ಬ!

– ರತೀಶ ರತ್ನಾಕರ.

hcky

ಕೊಡಗಿನಲ್ಲಿ ಕೊಡವ ಮನೆತನದ ತಂಡಗಳ ನಡುವೆ ನಡೆಯುವ ಹಾಕಿ ಪಂದ್ಯ ಸರಣಿ ಒಂದು ಹಬ್ಬವೇ ಸರಿ. ಸುಮಾರು ಒಂದು ತಿಂಗಳುಗಳ ಕಾಲ ನಡೆಯುವ ಈ ಪಂದ್ಯ ಸರಣಿಯಲ್ಲಿ 50ಕ್ಕೊ ಹೆಚ್ಚು ಕೊಡವ ಮನೆತನಗಳು ಈ ಪಂದ್ಯ ಸರಣಿಯಲ್ಲಿ ಪಾಲ್ಗೊಳ್ಳುತ್ತಾರೆ. ಇಂಡಿಯಾದ ಹಾಕಿಯ ತೊಟ್ಟಿಲು ಎಂದೇ ಕರೆಸಿಕೊಳ್ಳುವ ಕೊಡಗಿನಲ್ಲಿ ಹಾಕಿ ಆಟಕ್ಕೆ ಎಲ್ಲಿಲ್ಲದ ಮನ್ನಣೆ. ಪ್ರತಿ ವರುಶ ನಡೆಯುವ ಈ ಪಂದ್ಯ ಸರಣಿನ್ನು ಜಗತ್ತಿನಲ್ಲಿಯೇ ಅತಿ ಹೆಚ್ಚು ತಂಡಗಳು ಪಾಲ್ಗೊಂಡು ನಡೆಯುವ ಪಂದ್ಯ ಸರಣಿ ಎಂದು ಗಿನ್ನಿಸ್ ದಾಕಲೆಯ ಹೊತ್ತಗೆಯಲ್ಲಿ ಗುರುತಿಸಲಾಗಿದೆ. ಇಶ್ಟು ದೊಡ್ಡ ಪಂದ್ಯ ಸರಣಿಯ ಹುಟ್ಟು ಮತ್ತು ಬೆಳವಣಿಗೆ ಹೇಗಾಯಿತು ಎಂದು ಕೊಂಚ ತಿಳಿಯೋಣ ಬನ್ನಿ.

ಹುಟ್ಟು ಮತ್ತು ಬೆಳವಣಿಗೆ:
ಕೊಡವರ ಹಾಕಿ ಹಬ್ಬ ಆರಂಬವಾಗಿದ್ದು 1997 ರಲ್ಲಿ. ಹಾಕಿ ಆಟದ ರೆಪ್ರಿ (First Division Hockey Referee) ಆಗಿದ್ದ ಪಾಂಡಂಡ ಕುಟ್ಟಪ್ಪನವರ ಕನಸಿನ ಕೂಸು ಈ ಹಾಕಿ ಹಬ್ಬ. ಕೊಡವ ಮನೆತನದವರಲ್ಲಿ ಇದ್ದ ಹಾಕಿ ಆಟದ ಮೇಲಿನ ವಿಶೇಶ ಆಸಕ್ತಿಯನ್ನು ನೋಡಿದ ಇವರು ಅದಕ್ಕೊಂದು ವೇದಿಕೆಯನ್ನು ಹುಟ್ಟುಹಾಕಲು ಈ ಹಾಕಿ ಹಬ್ಬವನ್ನು ಆಯೋಜಿಸಲು ಮುಂದಾದರು. ಅಲ್ಲದೇ, ಹೊಸ ಹಾಕಿ ಪಟುಗಳನ್ನು ಮೇಲೆ ತರಲು ಮತ್ತು ಕೊಡವ ಮನೆತನದವರನ್ನು ಒಂದೆಡೆ ಸೇರಿಸಿ ಒಗ್ಗಟ್ಟನ್ನು ಮೂಡಿಸಲು ಈ ಹಬ್ಬವನ್ನು ಹುಟ್ಟುಹಾಕಿದರು. ಹೀಗೆ ಮೊದಲ ಹಾಕಿ ಪಂದ್ಯ ಸರಣಿ ‘ಪಾಂಡಂಡ ಕಪ್’ 1997 ರಲ್ಲಿ ನಡೆಯಿತು. ಸುಮಾರು 60ಕ್ಕೂ ಹೆಚ್ಚು ಮನೆತನದವರು ಪಾಲ್ಗೊಂಡು ಈ ಪಂದ್ಯ ಸರಣಿ ಗೆಲುವನ್ನು ಪಡೆಯಿತು.

ಮುಂದೆ, ವರುಶದಿಂದ ವರುಶಕ್ಕೆ ಈ ಪಂದ್ಯ ಸರಣಿಯನ್ನು ಆಯೋಜಿಸುವ ಕೆಲಸವನ್ನು ಒಂದೊಂದು ಮನೆತನವರಿಗೆ ವಹಿಸಲಾಯಿತು, ಆ ಮನೆತನದವರ ಹೆಸರನ್ನೇ ಆ ವರುಶದ ಪಂದ್ಯ ಸರಣಿಗೆ ನೀಡಲಾಯಿತು. ಇದರ ಆಗುಹೋಗುಗಳನ್ನು ನೋಡಿಕೊಳ್ಳಲು ಕೊಡವ ಹಾಕಿ ಅಕಾಡೆಮಿಯನ್ನು ಹುಟ್ಟುಹಾಕಲಾಯಿತು. ಒಂದು ಹಾಕಿಯ ತಂಡದಲ್ಲಿ ಒಂದೇ ಮನೆತನದವರು ಇರಬೇಕು (ಒಂದೇ ಬಗೆಯ ಮನೆತನದ ಹೆಸರಿರುವವರು). ಹೆಣ್ಣುಮಕ್ಕಳಿಗೆ ಆಟದಲ್ಲಿ ಪಾಲ್ಗೊಳ್ಳುವ ಅವಕಾಶ ನೀಡಲಾಗಿದೆ. ಮದುವೆಯಾದ ಹೆಂಗಸರು ತನ್ನ ತಂದೆಯ ಮನೆತನ ಇಲ್ಲವೇ ಗಂಡನ ಮನೆತನದ ತಂಡದಲ್ಲಿ ಯಾವುದನ್ನು ಬೇಕಾದರೂ ಆಯ್ದುಕೊಳ್ಳುವ ಆಯ್ಕೆಯನ್ನು ನೀಡಲಾಗಿದೆ.

ಹೀಗೆ ವರುಶದಿಂದ ವರುಶಕ್ಕೆ ತನ್ನ ತಂಡಗಳನ್ನು ಹೆಚ್ಚಿಸುತ್ತ, ಹಾಕಿ ಆಟದ ಜೊತೆಗೆ ಇನ್ನಿತರ ಮನರಂಜನೆ ಕಾರ‍್ಯಕ್ರಮಗಳನ್ನು ಏರ‍್ಪಡಿಸಿ ಮಂದಿಯನ್ನು ಸೆಳೆಯುತ್ತ, ಈ ಹಬ್ಬವು ಒಂದು ವಿಶೇಶ ಆಗುಹವಾಗಿದೆ. ಈ ಪಂದ್ಯ ಸರಣಿಗಳನ್ನು ಯಾವ ವರುಶ ಯಾವ ಮನೆತನದವರು ನಡೆಸಿಕೊಟ್ಟರು ಎಂಬ ವಿವರ ಕೆಳಗಿನ ಪಟ್ಟಿಯಲ್ಲಿದೆ.

ವರುಶ ಹೆಸರು  ಜಾಗ  ಪಾಲ್ಗೊಂಡ ತಂಡಗಳು ಗೆದ್ದತಂಡ
1997 ಪಾಂಡಂಡ ಕರಡ 60 ಕಲಿಯಂಡ
1998 ಕೋಡಿರ ಕಡಂಗ 116 ಕುಲ್ಲೆಟ್ಟಿರ
1999 ಬಲ್ಲಚಂಡ ಕಾಕೋಟ್ ಪರಂಬು 140 ಕೂತಂಡ ಮತ್ತು ಕುಲ್ಲೆಟ್ಟಿರ
2000 ಚೆಪ್ಪುಡಿರ ಪೊನ್ನಂಪೇಟೆ 170 ಕೂತಂಡ
2001 ನೆಲ್ಲಮಕ್ಕಡ ಅಮ್ಮತ್ತಿ 220 ಕೂತಂಡ
2002 ಚೆಕ್ಕೆರ ಹುದಿಕೇರಿ 252 ಕುಲ್ಲೆಟ್ಟಿರ
2003 ಕಳಿಯಂಡ ನಾಪೋಕ್ಲು 280 ನೆಲ್ಲಮಕ್ಕಡ
2004 ಮಲ್ಲೆಯಂಡ ಮಾದಾಪುರ 235 ಕೂತಂಡ
2005 ಬಿದ್ದಂಡ ಮಡಿಕೇರಿ 222 ನೆಲ್ಲಮಕ್ಕಡ
2006 ಕಳ್ಳಿಚಂಡ ಪೊನ್ನಂಪೇಟೆ 217 ಪಲಂಗಡ
2007 ಮಂಡೇಟಿರ ಕಾಕೋಟ್ ಪರಂಬು 186 ಮಂದೆಪಂಡ
2008 ಅಲೆಮಂಗಡ ಪೊನ್ನಂಪೇಟೆ 216 ಅಂಜಪರವಂಡ
2009 ಮಂಡೇಪಂಡ ಅಮ್ಮತ್ತಿ 231 ನೆಲ್ಲಮಕ್ಕಡ
2010 ಮನೆಯಪಂಡ ಪೊನ್ನಂಪೇಟೆ 214 ಪಲಂಗಡ
2011 ಮಾಚಮಾಡ ಪೊನ್ನಂಪೇಟೆ 228 ಪಲಂಗಡ
2012 ಅಯ್ಚೆಟ್ಟಿರ ಅಮ್ಮತ್ತಿ 217 ಪಲಂಗಡ
2013 ಮಾಡಂಡ ಬಾಳುಗೋಡು 225 ಅಂಜಪರವಂಡ
2014 ತಾತಂಡ ಕಪ್ ವಿರಾಜಪೇಟೆ 240

 

2014 ರ ಹಾಕಿ ಹಬ್ಬ:

2014ರ ಹಾಕಿ ಹಬ್ಬ ಕೂಡ ಹಲವಾರು ವಿಶೇಶತೆಗಳನ್ನು ಹೊತ್ತುಕೊಂಡು ಮಂದಿಯನ್ನು ಸೆಳೆಯುತ್ತಿದೆ. ತಾತಂಡ ಮನೆತನದವರು ಈ ಬಾರಿಯ ಮೇಲುಸ್ತುವಾರಿ ವಹಿಸಿಕೊಂಡಿದ್ದಾರೆ ಹಾಗಾಗಿ ಇದು ಈ ಬಾರಿ ತಾತಂಡ ಹಾಕಿ ಹಬ್ಬ. 25 ದಿನಗಳ ಆಟದಲ್ಲಿ 250ಕ್ಕೂ ಹೆಚ್ಚು ತಂಡಗಳು ಪಾಲ್ಗೊಳ್ಳಲಿವೆ. ಸುಮಾರು 3000 ಸಾವಿರ ಆಟಗಾರರು ತಮ್ಮ ಆಟವನ್ನು ತೋರ‍್ಪಡಿಸಲಿದ್ದಾರೆ. ಆಟವು ಏಪ್ರಿಲ್ 20ರಿಂದ ಮೇ 18ರ ವರೆಗೆ ವಿರಾಜಪೇಟೆಯ ಜೂನಿಯರ್ ಕಾಲೇಜು ಆಟದ ಬಯಲಿನಲ್ಲಿ ನಡೆಯಲಿದೆ. ಈ ಬಾರಿಯೂ ಕೂಡ ಎಲ್ಲ ಆಟಗಾರರು ಹುರುಪಿನಿಂದ ಪಾಲ್ಗೊಂಡು ಒಳ್ಳೆಯ ಆಟ ಇವರಿಂದ ಬರಲಿ ಎಂದು ಹಾರಯ್ಸೋಣ.

(ಮಾಹಿತಿ ಸೆಲೆ: thathandahockey)

(ಚಿತ್ರ ಸೆಲೆ: perfectcoorg)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: