ಮನಸ್ಸು, ಮನಸ್ಸಿನ ತೊಂದರೆಗಳು ಮತ್ತು ಮಾನವೀಯ ಮವ್ಲ್ಯಗಳು

ಡಾ.ಎಂ.ಕಿಶೋರ್.
ಎನ್.ರುಕ್ಮಿಣಿಬಾಯಿ.

manassu_1

’ಮನಸ್ಸು’ ಎಂದರೇನು? ಅದು ಯಾವ ವಯಸ್ಸಿನಲ್ಲಿ ರೂಪಗೊಳ್ಳಲು ಪ್ರಾರಂಬಿಸುತ್ತದೆ? ಮನಸ್ಸು ಮತ್ತು ಅದರ ಹೊರಗಿನ ಪರಿಸರ ಇವುಗಳ ಸಂಬಂದವೇನು? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರವನ್ನು ನಿಕರವಾಗಿ ಮತ್ತು ಸರಳವಾಗಿ ವ್ಯಕ್ತಪಡಿಸುವುದು ಕಶ್ಟ ಸಾದ್ಯ.

’ಮನಸ್ಸು’ ಒಂದು ವಿಶಾಲವಾದ ಅಂಗಳವಿದ್ದಂತೆ. ಅಲ್ಲಿ ಒಬ್ಬ ವ್ಯಕ್ತಿಯ ಬೆಳವಣಿಗೆಯಿಂದ ಹಿಡಿದು, ಆತನಲ್ಲಿ ಆಗುವ ಪ್ರತಿಕ್ಶಣದ ಗ್ರಹಿಕೆ, ಹಾಗೂ ಅನುಬವ, ನೆನಪು, ಜ್ನಾನ, ತನ್ನ ಹೊರಗಿನ ಜಗತ್ತಿನೊಂದಿಗೆ ಆಗುವ ಸಂವಾದ, ತನ್ನ ದೇಹ ಅದರಲ್ಲೂ ಮೆದುಳಿನಲ್ಲಿ ಆಗುವ ಎಲ್ಲಾ ರಾಸಾಯನಿಕ ಕ್ರಿಯೆಗಳು, ಅನುವಂಶಿಕ ಗುಣಗಳು, ತಲೆತಲಾಂತರದಿಂದ ಬರುವ ಜಯ್ವಿಕ ಜ್ನಾನ, ಆದ್ಯಾತ್ಮಿಕ ಮತ್ತು ದಯ್ವಿಕ ಜ್ನಾನ ಹೀಗೆ ಇವೆಲ್ಲಾ ಒಂದುಗೂಡಿ ಮನಸ್ಸಿನ ಅಂಗಳದಲ್ಲಿ ಬೇರೂರಿ, ಅದನ್ನು ಸತತವಾಗಿ ಕಾರ‍್ಯೋನ್ಮುಕವಾಗಿರುವಂತೆ ಪ್ರೇರೇಪಿಸುತ್ತದೆ.

ಯಾವ ವಯಸ್ಸಿನಲ್ಲಿ ಮನಸ್ಸು ರೂಪಗೊಳ್ಳುತ್ತದೆ?

ಜೀವದ ಉಗಮದಿಂದ ಪ್ರಾರಂಬವಾಗುವ ಈ ಕ್ರಿಯೆ ಸರಿಸುಮಾರು ಎರಡು ವರ‍್ಶದ ಹೊತ್ತಿಗೆ ಮನಸ್ಸಿನ ಕಾರ‍್ಯಾಗಾರ ಚುರುಕಾಗುತ್ತದೆ. ಆದುದರಿಂದ ಅತಿ ಚಿಕ್ಕ ವಯಸ್ಸಿನಿಂದಲೇ ಮನಸ್ಸಿನ ಮೇಲೆ ಪ್ರಬಾವ ಬೀರುವ ಹೊರಗಿನ ಸಮಗ್ರ ಪರಿಸರವು ಸಾದ್ಯವಾದಶ್ಟು ಸ್ವಚ್ಚ ಮತ್ತು ಸಮ್ರುದ್ದವಾಗಿರಬೇಕು. ಮುಕ್ಯವಾದ ಅಂಶವೆಂದರೆ ಮನಸ್ಸು ಮತ್ತು ಹೊರಗಿನ ಪರಿಸರ ನಮಗೆ ಕಾಣದಂತೆ ಸದಾ ಸಂವಾದದಲ್ಲಿ ಇರುತ್ತದೆ. ಈ ಹೊರಗಿನ ಪರಿಸರವೆಂದರೆ ದೇಹದ ಹೊರಗಿರುವ ಗಾಳಿ, ನೀರು, ವಾತಾವರಣ, ಪೋಶಕರು, ಸಂಬಂದಿಕರು, ಸ್ನೇಹಿತರು, ಸಮಾಜ, ಆರ‍್ತಿಕ, ರಾಜಕೀಯ ಮತ್ತು ಆದ್ಯಾತ್ಮಿಕ ಸ್ತಿತಿ ಹೀಗೆ ಪ್ರತಿಯೊಂದೂ ಪರಿಸರ ಎಂಬ ವಿಶಾಲ ಅರ‍್ತದಲ್ಲಿ ಪರಿಗಣಿಸಲ್ಪಡುತ್ತವೆ.

ಈ ನಿಕಟವಾದ ಸಂಬಂದದಿಂದ ನಮ್ಮ ಮನಸ್ಸು, ನಮ್ಮ ನಡವಳಿಕೆಗಳಿಂದ ನಮ್ಮ ಪರಿಸರದ ಮೇಲೂ ಮತ್ತು ಪರಿಸರ ನಮ್ಮ ಮನಸ್ಸಿನ ಮೇಲೂ ಸದಾ ಪರಸ್ಪರ ಪರಿಣಾಮ ಬೀರುತ್ತಿರುತ್ತವೆ. ಇದರ ಪಲವಾಗಿ ಮನಸ್ಸಿನ ಆಲೋಚನೆಗಳೂ, ವ್ಯಕ್ತಿತ್ವ, ಮಾನವೀಯ ಮವ್ಲ್ಯಗಳೆಲ್ಲವೂ ವ್ಯಕ್ತಿಯನ್ನೂ, ಸಮಾಜವನ್ನೂ ಕಾಲಕಾಲಕ್ಕೆ ಅನುಗುಣವಾಗಿ ರೂಪಿಸುತ್ತವೆ.

ಇನ್ನೊಂದು ಸಮಸ್ಯೆ ಎಂದರೆ, ಬಹುಜನರಿಗೆ ಕಶ್ಟ ಎನಿಸುವುದು ಮನಸ್ಸಿನ ಸಾಮಾನ್ಯ ತಳಮಳ ಮತ್ತು ತೀವ್ರ ತೊಂದರೆಗಳಿಗೂ ಇರುವ ಅಂತರ ಏನೆಂಬುದು? ಮನಸ್ಸಿನ ತಳಮಳ ಸಾದಾರಣವಾಗಿ ಎಲ್ಲರಲ್ಲಿಯೂ ಕಾಣಬಹುದು. ಬಹಳಶ್ಟು ಬಾರಿ ಅದು ಉಪಯುಕ್ತವಾಗಿರುವುದು, ಕೆಲವೊಮ್ಮೆ ಆತಂಕಕಾರಿಯಾಗಿರಬಹುದು. ಇದು ಸತತವಾಗಿ ವ್ಯಕ್ತಿಯನ್ನು ಮತ್ತು ಆತನ ಜೀವನದಲ್ಲಿ ನಡೆಯುವ ಅನೇಕ ಸನ್ನಿವೇಶಗಳು ಮತ್ತು ಪರಿಸ್ತಿತಿಗಳ ನಿರ‍್ವಹಣಾ ಶಕ್ತಿಯನ್ನು ರೂಪಿಸುತ್ತದೆ.

ವಯ್‍ಜ್ನಾನಿಕವಾಗಿ ಮತ್ತು ವಿಶ್ವ ಆರೋಗ್ಯ ಸಂಸ್ತೆಯ ವ್ಯಾಕ್ಯಾನದ ಪ್ರಕಾರ ಮನಸ್ಸಿನ ತೊಂದರೆಗಳು ಎಂದರೆ, ಬಹುಜನರಲ್ಲಿ ಒಂದೇ ತರಹದ ಗುಣಲಕ್ಶಣಗಳಿದ್ದು ಒಂದು ನಿಗದಿತ ಅವದಿಗಿಂತ ಹೆಚ್ಚು ಸಮಯ ಸತತವಾಗಿ ಇದ್ದು, ಇವು ನಿರ‍್ದಿಶ್ಟ ತೊಂದರೆಗಳನ್ನು ಮಾಡಿದಾಗ ಮಾತ್ರ ಅವುಗಳು ಮನಸ್ಸಿನ ತೊಂದರೆಗಳು ಅತವಾ ರೋಗಗಳು ಅತವಾ ಕಾಯಿಲೆಗಳು ಎಂದು ಕರೆಯಲ್ಪಡುತ್ತವೆ.

(ಈ ಬರಹ  ಮನಸ್ಸು, ಮನಸ್ಸಿನ ತೊಂದರೆಗಳು ಮತ್ತು ಮಾನವೀಯ ಮವ್ಲ್ಯಗಳು ಹೊತ್ತಗೆಯಲ್ಲಿ ಮೂಡಿಬಂದಿದೆ)

(ಚಿತ್ರಸೆಲೆ: www.123rf.com)

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. ನಾಗರಾಜ says:

    ಸಂಕ್ಶಿಪ್ತ ಮತ್ತು ಅರ್ಥಪೂರ್ಣ ವಾಗಿದೆ. ಧನ್ಯವಾದಗಳೊಂದಿಗೆ

ಅನಿಸಿಕೆ ಬರೆಯಿರಿ:

%d bloggers like this: