ಎರಡನೇ ಸರಕಾರಕ್ಕೂ ಕೆಲಸವಿದೆ
ನಮ್ಮ ನಾಡಿನಲ್ಲಿ ಮಂದಿಯಾಳ್ವಿಕೆಯ ತಳಹದಿಯೇ ಪಕ್ಶಗಳು. ಆದರೆ ಮಂದಿಯಾಳ್ವಿಕೆ ನೆಲೆಗಟ್ಟಿನಲ್ಲಿ ಸರಕಾರದ ಉತ್ತಮ ಆಡಳಿತ ನಡೆಸುವಲ್ಲಿ ಎರಡನೇ ಸರಕಾರ ಅಂದರೆ ವಿರೋದ ಪಕ್ಶಗಳೂ ಕೂಡ ಪ್ರಮುಕ ಪಾತ್ರವಹಿಸುತ್ತವೆ. ಚುನಾವಣೆಯಲ್ಲಿ ಬಹುಮತ ಪಡೆದ ಪಕ್ಶ ಸರಕಾರ ರಚಿಸಿದರೆ, ಇನ್ನೊಂದು ಪಕ್ಶ ಅತವಾ ಪಕ್ಶಗಳು ವಿರೋದಿ ಸ್ತಾನದಲ್ಲಿ ಕೂರಬೇಕಾಗುತ್ತದೆ. ಆಡಳಿತ ನಡೆಸುವ ಪಕ್ಶದ ಕೆಲಸದ ರೀತಿಯನ್ನು ಗಮನಿಸಿ ತೊಡಕುಗಳಿದ್ದಲ್ಲಿ ಅತ್ಯಂತ ಬದ್ದಿವಂತಿಕೆ ಮತ್ತು ಎಚ್ಚರಿಕೆಯಿಂದ ವಿರೋದಿಸುವ ಮೂಲಕ ತನ್ನ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಿ, ನಾಡಿನ ಏಳಿಗೆಗೆ ಕೆಲಸ ಮಾಡಿದಾಗ ಅದೊಂದು ಒಳ್ಳೆಯ ವಿರೋದ ಪಕ್ಶವಾಗಿ ಹೊರಹೊಮ್ಮುತ್ತದೆ.
ಅಲ್ಲದೇ ಮಂದಿಯ ಮಚ್ಚುಗೆ ಗಿಟ್ಟಿಸಿಕೊಳ್ಳುತ್ತದೆ. ಹೀಗಾಗಿ ಯಶಸ್ಶಿ ಆಡಳಿತಕ್ಕೆ ವಿರೋದ ಪಕ್ಶ ಅತ್ಯಂತ ಅವಶ್ಯಕ ಹಾಗೂ ಅನಿವಾರ್ಯ ಕೂಡ. ಆದರೆ ವಿರೋದ ಪಕ್ಶವೆಂಬ ಕಾರಣಕ್ಕೆ ವಿರೋದಕ್ಕಾಗಿಯೇ ವಿರೋದ ಮಾಡಬಾರದು. ಬದಲಾಗಿ ಆಡಳಿತ ನಡೆಸುವ ಪಕ್ಶ ಮಾಡುವ ತಪ್ಪುಗಳನ್ನು ಎತ್ತಿಹಿಡಿದು ರಚನಾತ್ಮಕ ಟೀಕೆ ಮತ್ತು ಸಕಾರಾತ್ಮಕ ವಿರೋದ ಮಾಡಬೇಕು. ಈ ಕಾರಣಕ್ಕಾಗಿಯೇ ಇಂಗ್ಲೆಂಡಿನಲ್ಲಿ ವಿರೋದ ಪಕ್ಶವನ್ನು ‘ನೆರಳಿನ ಸಂಪುಟ’ (Shadow Cabinet) ಎಂದು ಕರೆಯಲಾಗುತ್ತದೆ. ಅಂದರೆ ವಿರೋದ ಪಕ್ಶದ ಸದಸ್ಯರು ತಮ್ಮ ಸಾಮರ್ತ್ಯಕ್ಕೆ ಸಮನಾಗಿ ಕಾತೆಗಳನ್ನು ಹಂಚಿಕೊಂಡು ಸರಕಾರದ ಕೆಲಸಗಳನ್ನು ಸೂಕ್ಶ್ಮವಾಗಿ ಗಮನಿಸಿ ವಿಮರ್ಶೆ ಮಾಡುತ್ತಾರೆ.
ಈ ರೀತಿಯಲ್ಲಿ ವಿರೋದ ಪಕ್ಶವು ನೆರಳಿನ ಸಂಪುಟವಾಗಿ ಸರಕಾರವನ್ನು ಹಿಂಬಾಲಿಸುತ್ತದೆ. ಹೀಗಾಗಿಯೆ ಹಲವಾರು ರಾಜಕೀಯ ಚಿಂತಕರು ವಿರೋದ ಪಕ್ಶದ ಇರುವಿಕೆಯ ಹೆಚ್ಚುಗಾರಿಕೆಯನ್ನು ಗಮನಿಸಿ ವಿರೋದ ಪಕ್ಶವನ್ನು ‘ಕಾವಲು ನಾಯಿ’ ಎಂದು ಕರೆದಿದ್ದಾರೆ. ಆಡಳಿತ ನಡೆಸುವ ಪಕ್ಶ ಯಾವುದೇ ಕಾರಣದಿಂದ ಅದಿಕಾರದಿಂದ ಹಿಂದೆ ಉಳಿದುಕೊಂಡರೆ ಅಂತಹ ಸಮಯದಲ್ಲಿ ವಿರೋದ ಪಕ್ಶವು ಬಹುಮತ ಸಾಬೀತು ಪಡಿಸುವ ಮೂಲಕ ಸರಕಾರ ರಚಿಸಲು ಅವಕಾಶ ಸಿಗುತ್ತದೆ. ಆದ್ದರಿಂದಲೇ ವಿರೋದ ಪಕ್ಶಕ್ಕೆ ಎರಡನೇ ಸರಕಾರ ಎಂದು ಕರೆಯಲಾಗುತ್ತದೆ. ಕೆಲವು ನಾಡುಗಳಲ್ಲಿ ಎರೆಡು ಪಕ್ಶ ಪದ್ದತಿ ಜಾರಿಯಲ್ಲಿದ್ದು ಅಲ್ಲಿನ ನಾಡಿಗಳ ಆಳ್ವಿಕೆಯಲ್ಲಿ ವಿರೋದ ಪಕ್ಶಗಳು ಮುಕ್ಯ ಪಾತ್ರವಹಿಸುತ್ತದೆ.
ವಿರೋದ ಪಕ್ಶದ ಮುಕ್ಯ ಕೆಲಸಗಳು:
- ಮಂದಿಯಲ್ಲಿ ರಾಜಕೀಯದ ಬಗೆಗೆ ಆಸಕ್ತಿ ಮತ್ತು ಜಾಗ್ರುತಿ ಮೂಡಿಸುವುದು- ಎಂತಹ ಪ್ರತಿನಿದಿಗಳನ್ನು ಆರಿಸಬೇಕು, ಸರಕಾರದ ತಪ್ಪುಗಳ ವಿರುದ್ದ ಹೇಗೆ ಪ್ರತಿಬಟಿಸಬೇಕು, ನಮ್ಮ ನಾಡಿನ ರಾಜಕೀಯ ಪರಿಸ್ತಿತಿ ಹೇಗಿದೆ, ಆಳ್ವಿಕೆಯಲ್ಲಿ ಹೇಗೆ ಸುದಾರಣೆ ಕಾಣಬೇಕು, ಇದರಲ್ಲಿ ಮಂದಿಯ ಪಾತ್ರವೇನು, ಎಂಬುದರ ಬಗ್ಗೆ ಮಂದಿಯಲ್ಲಿ ಅರಿವು ಮೂಡಿಸಿ ಜಾಗ್ರುತಿಗೊಳಿಸಬೇಕು.
- ರಚನಾತ್ಮಕ ಟೀಕೆ- ಸರಕಾರದ ನೀತಿಯನ್ನು, ಯೋಜನೆಯನ್ನು, ಕೆಲಸಗಳನ್ನು ವಿಮರ್ಶಿಸಿ, ತಪ್ಪುಗಳು ಕಂಡುಬಂದಲ್ಲಿ ಸರಕಾರಕ್ಕೆ ಮನವರಿಕೆ ಮಾಡಿಕೊಡುವುದು ಅತವಾ ವಿರೋದಿಸುವುದು ವಿರೋದ ಪಕ್ಶದ ಕೆಲಸ.
- ಆಡಳಿತ ಪಕ್ಶ ವಿಸರ್ಜನೆಗೊಂಡಾಗ ಸರಕಾರ ರಚಿಸುವುದು- ಬಹುಮತ ಪಡೆದು ಅದಿಕಾರ ವಹಿಸಿಕೊಳ್ಳುವ ಪಕ್ಶ ಅವದಿಗಿಂತ ಮೊದಲು ಯಾವುದೇ ಕಾರಣಕ್ಕಾಗಿ ಅದಿಕಾರ ಮುಂದುವರೆಸಲು ಹಿಂದೆ ಸರಿದು ಸರಕಾರ ವಿಸರ್ಜನೆಗೊಂಡಾಗ, ವಿರೋದ ಪಕ್ಶವು ಎರಡನೇ ಸರಕಾರವಾಗಿ ಬಹುಮತ ಸಾಬೀತು ಪಡಿಸಿ ಅದಿಕಾರ ವಹಿಸಿಕೊಳ್ಳಬಹುದು.
- ಮಂದಿಯಬಿಪ್ರಾಯದ ಮಾದ್ಯಮ- ವಿರೋದ ಪಕ್ಶವು ಸರಕಾರದ ತಪ್ಪುಗಳನ್ನು ಎತ್ತಿಹಿಡಿದು ಮಂದಿಯ ಗಮನಸೆಳೆದು ಸರಕಾರದ ವಿಪಲತೆಗಳ ಕುರಿತು ಅಬಿಪ್ರಾಯ ಸಂಗ್ರಹಿಸಬೇಕು.
- ಮವ್ಲ್ಯಗಳ ಪ್ರತಿಪಾದನೆ- ಸರಕಾರದ ಆಡಳಿತದಲ್ಲಿ ಕಂಡುಬರುವ ವಯ್ಪಲ್ಯಗಳನ್ನು, ನಾಯಕರಲ್ಲಿ ದವ್ರಬಲ್ಯಗಳನ್ನು ಹಾಗೂ ಇತರ ತಪ್ಪುಗಳನ್ನು ನಿವಾರಿಸಲು ಉದಾತ್ತ ಮವ್ಲ್ಯಗಳ ಮೂಲಕ ತಮ್ಮ ಕೆಲಸಮಾಡಬೇಕು. ಆಡಳಿತದಲ್ಲಿ ಪಾರದರ್ಶಕತೆ, ಮಂದಿಯಾಳ್ವಿಕೆಯ ರಕ್ಶಣೆ, ಸ್ವಾತಂತ್ರ್ಯ, ಸಮಾನತೆ, ಆಡಳಿತದಲ್ಲಿ ವಿಕೇಂದ್ರೀಕರಣ, ಸಮಾಜದಲ್ಲಿ ಕೂಡಣದಲ್ಲಿ ಒಂದು ಎಂಬ ಅನಿಸಿಕೆ ಮೂಡಿಸುವುದು, ಬ್ರಶ್ಟಾಚಾರ ಮುಕ್ತ ಆಡಳಿತ ಈ ಎಲ್ಲಾ ಮವ್ಲ್ಯಗಳನ್ನು ವಿರೋದಪಕ್ಶವು ಪಾಲಿಸಬೇಕು.
- ನ್ಯಾಯಕ್ಕಾಗಿ ಹೋರಾಟ- ಸಮಾಜದಲ್ಲಿ ನಡೆಯುವ ದವ್ರಜನ್ಯ, ಶೋಶಣೆ, ಅನ್ಯಾಯ, ಬ್ರಶ್ಟಾಚಾರ ಇಂತಹ ಸಮಾಜ ವಿರೋದಿ ಕ್ರಮಗಳನ್ನು ಹತ್ತಿಕ್ಕಿ ತಪ್ಪಿತಸ್ತರ ವಿರುದ್ದ ಕ್ರಮ ಕಯ್ಗೊಳ್ಳುವಂತೆ ಮಾಡುವಂತೆ ಹೋರಾಟ ನಡೆಸಬೇಕು. ಇದರಿಂದ ಮಂದಿಯು ತಮಗಾದ ಅನ್ಯಾಯದ ವಿರುದ್ದ ಜಾಗ್ರುತಗೊಳ್ಳುತ್ತಾರೆ.
- ಸರಕಾರಕ್ಕೆ ಪೂರಕವಾದ ಕೆಲಸ ಮಾಡುವುದು- ವಿರೋದ ಪಕ್ಶದ ಹೆಚ್ಚುಗಾರಿಕೆಯನ್ನು ಅರಿತುಕೊಳ್ಳಬೇಕಾದರೆ ಅದು ಸರಕಾರದೊಂದಿಗೆ ವಿವಿದ ಸಮಯಗಳಲ್ಲಿ ಯಾವ ರೀತಿಯಾಗಿ ವರ್ತಿಸುತ್ತದೆ ಎಂಬುದನ್ನು ತಿಳಿದಾಗ ಮಾತ್ರ ಸಾದ್ಯ. ಕೆಲವೊಂದು ರಾಜಕೀಯ ಪಕ್ಶಗಳ ನಾಯಕರು ವಿರೋದಿ ಸ್ತಾನ ಅಲಂಕರಿಸಿದಾಗ ತಮ್ಮ ಗನತೆ, ಗವ್ರವ, ಪ್ರತಿಶ್ಟೆಗಾಗಿ ಆಳುವ ಪಕ್ಶದೊಂದಿಗೆ ಸಹಕರಿಸದೇ ತಮ್ಮ ಮನಸ್ಸಿಗೆ ಬಂದಹಾಗೆ ನಡೆದುಕೊಳ್ಳುತ್ತವೆ. ಇದರಿಂದ ನಾಡಿನ ಏಳಿಗೆಗೆ ತೊಡಕುಂಟಾಗುತ್ತದೆಯೇ ವಿನಹ, ವಯಕ್ತಿಕವಾಗಿ ಯಾವ ರಾಜಕಾರಿಣಿಯ ಮೇಲೂ ಪರಿಣಾಮ ಬೀರುವುದಿಲ್ಲ.
- ಮಂದಿಗೆ ನೀಡಿದ ಬರವಸೆಯನ್ನು ಸಾಕಾರಗೊಳಿಸುವುದು- ಆಯ್ಕಳಿಯ ಮೊದಲು ಪಕ್ಶ ಮಂದಿಗೆ ವಿವಿದ ಬರವಸೆಗಳನ್ನು ನೀಡಿ ಮತಪಡೆದಿರುತ್ತದೆ. ಆದರೆ ಆ ಪಕ್ಶ ಅದಿಕಾರಕ್ಕೆ ಬಂದರೆ ತನ್ನ ಪ್ರಣಾಳಿಕೆಯಲ್ಲಿ ಮಂದಿಗೆ ನೀಡಿದ ಬರವಸೆಗಳನ್ನು ಕಾರ್ಯರೂಪಕ್ಕೆ ತರುವಂತೆ ನೋಡಿಕೊಳ್ಳಬೇಕು, ಒಂದು ವೇಳೆ ಸರಕಾರ ತಮ್ಮ ಆಡಳಿತವನ್ನು ಸಂವಿದಾನಬದ್ದವಾಗಿ ಮತ್ತು ಕಾನೂನುಬದ್ದವಾಗಿ ಕೆಲಸ ಮಾಡದಿದ್ದರೆ ಸರಕಾರದ ಕ್ರಮಗಳನ್ನು ಹಾಗೂ ತಪ್ಪುಗಳನ್ನು ಪರಿಶೀಲಿಸಲು ತನಿಕಾ ಅಯೋಗ ರಚಿಸುವಂತೆ ಒತ್ತಾಯಪಡಿಸಬೇಕಾದದ್ದು ವಿರೋದ ಪಕ್ಶದ ಕೆಲಸ.
(ಚಿತ್ರ ಸೆಲೆ: likefun)
ಇತ್ತೀಚಿನ ಅನಿಸಿಕೆಗಳು