ಬಸವಣ್ಣನವರ ಎಳವೆ – ಒಂದು ಕಿರುನೋಟ

– ಹರ‍್ಶಿತ್ ಮಂಜುನಾತ್.

Basava_Gaint_Statue_108_feet,_Basava_Kalyana

ಹಿಂದೆ ಕರ‍್ನಾಟಕದಲ್ಲಾದ ಸಾಮಾಜಿಕ ಮತ್ತು ದಾರ‍್ಮಿಕ ಬದಲಾವಣೆಗಳನ್ನೊಮ್ಮೆ ಅವಲೋಕಿಸಿ ನೋಡಿದಾಗ, ಬದಲಾವಣೆಗಳ ಹಿರಿಮೆ ಹೆಚ್ಚುಪಾಲು ಸಂದುವುದು ಶರಣ ಚಳುವಳಿಗೆ. ಈ ಚಳುವಳಿಯ ಸಾಮಾಜಿಕ ಮುಂದಾಳುತನ ವಹಿಸಿಕೊಂಡು ದುಡಿದವರಲ್ಲಿ ಮಹಾಪುರುಶ ಬಸವಣ್ಣನವರು ಪ್ರಮುಕರು. ಸರಳತೆ, ಶುದ್ದಜೀವನ, ಸಮಾನತೆಗಳನ್ನು ಜೀವನದಲ್ಲಿ ಅಳವಡಿಸಿಕೊಂಡು, ಸಾಮಾನ್ಯ ಮಂದಿಯನ್ನೂ ಬಕ್ತಿಯ ದಾರಿಗೆಳೆದ ಕೀರ‍್ತಿ ಬಸವಣ್ಣನವರಿಗೆ ಸಲ್ಲುತ್ತದೆ. ಅತ್ತ್ಯುನ್ನತ ಹಳಮೆ ಹೊಂದಿರುವ ಬಸವಣ್ಣನಂತಹ ಶ್ರೇಶ್ಟ ವ್ಯಕ್ತಿಯ ಜೀವನದ ಕುರಿತು ಬರೆಯುವುದು ಎಂತಹ ಬರಹಗಾರನಿಗೂ ಸುಲಬದ ಮಾತಲ್ಲ. ಏಕೆಂದರೆ ಇಲ್ಲಿ ಕತೆ, ಕವನಗಳಂತೆ ಕಲ್ಪನೆಗಳನ್ನು ಹರಿಬಿಡಲು ಸಾದ್ಯವಿಲ್ಲ. ಸತ್ಯಾಸತ್ಯತೆಗಳನ್ನು ಪರಿಶೀಲಿಸಿ, ನಯ್ಜತೆಯನ್ನು ಓದುಗರ ಮುಂದಿಡುವುದು ನಿಜಕ್ಕೂ ಸವಾಲಿನ ಸಂಗತಿ.

ಈಗಿನ ಬಿಜಾಪುರ ಜಿಲ್ಲೆಯ ಬಸವನ ಬಾಗೇವಾಡಿ ಹಿಂದಿನ ಕಾಲದಲ್ಲಿ ಒಂದು ಹೆಸರಾಂತ ಅಗ್ರಹಾರ. ಅಲ್ಲಿ ಮಂಡಗೆಯ ಮಾದಿರಾಜ ಮತ್ತು ಮಾದಲಾಂಬೆ ಎಂಬ ಇಬ್ಬರು ದಂಪತಿಗಳು ವಾಸವಾಗಿದ್ದರು. ಅವರಿಗೆ ಬಹಳ ಕಾಲ ಮಕ್ಕಳಾಗಲಿಲ್ಲ. ಹಾಗಾಗಿ ಈ ದಂಪತಿಗಳು ದೇವರ ಮೊರೆಹೋದರು. ಆ ಊರಿನಲ್ಲೊಂದು ಶಿವನ ದೇವಾಲಯವಿತ್ತು. ಶಿವಾಲಯದ ಶಿವಲಿಂಗದ ಮುಂದೆ ಕಲ್ಲಿನಿಂದ ಕೆತ್ತಿದ್ದ ನಂದಿಯ ವಿಗ್ರಹದ ಕೋಡುಗಳ ಮೂಲಕ ಮಂದಿ ಶಿವನ ದರ‍್ಶನ ಪಡೆಯುತ್ತಿದ್ದರು. ಕಾರಣ ಅಲ್ಲಿನ ಮಂದಿ ನಂದಿಯಲ್ಲಿ ಅಪಾರ ಬಕ್ತಿ ಹೊಂದಿದ್ದರು. ಮಾದಲಾಂಬೆಯು ನಂದಿಗೆ ಹರಕೆ ಹೊತ್ತಳು. ಸತತ ಒಂಬತ್ತು ದಿನಗಳ ಕಾಲ ನಂದಿಯನ್ನು ಪೂಜಿಸಿ, ‘ಮಗನಾದರೆ ನಿನ್ನ ಹೆಸರನ್ನೇ ಇಡುತ್ತೇನೆ’ ಎಂದು ಬೇಡಿಕೊಂಡಳು. ಇದರ ಪಲವೇನೋ ಎಂಬಂತೆ ಮಾದಲಾಂಬೆ ಬಸಿರಾಗಿ ತನ್ನ ತವರಾದ ಬಾಗೇವಾಡಿ ಸಮೀಪದ ಇಂಗಳೇಶ್ವರದಲ್ಲಿ ಗಂಡು ಮಗುವನ್ನು ಹೆತ್ತಳು. ತನ್ನ ಹರಕೆಯಂತೆಯೆ ತನ್ನ ಮಗನಿಗೆ ‘ಬಸವ’ (ನಂದಿ) ಎಂದು ಹೆಸರಿಟ್ಟಳು. ಬಸವಣ್ಣನವರಲ್ಲದೆ ಮಾದಲಾಂಬೆಗೆ ಇನ್ನಿಬ್ಬರು ಮಕ್ಕಳಿದ್ದರು. ಕೆಲ ವಿದ್ವಾಂಸರು ನಾಗಲಾಂಬಿಕೆ (ನಾಗಮ್ಮ) ಬಸವಣ್ಣನವರ ಅಕ್ಕ ಮತ್ತು ದೇವರಾಜ ಬಸವಣ್ಣನವರ ಅಣ್ಣ ಎಂದು ಪ್ರತಿಪಾದಿಸಿದರೆ, ಮತ್ತೆ ಕೆಲವು ವಿದ್ವಾಂಸರು ನಾಗಲಾಂಬಿಕೆ ಬಸವಣ್ಣನವರ ತಂಗಿ ಎಂದು ಹೇಳಿದ್ದಾರೆ.

ತಂದೆ ಮಾದಿರಾಜ ಸಂಸ್ಕ್ರುತ ವಿದ್ವಾಂಸ. ಬಸವನ ಬಾಗೇವಾಡಿಯು ವಯ್ಚಾರಿಕತೆ ಮತ್ತು ದರ‍್ಮ ಪರಿಪಾಲನೆಯ ತವರು. ಇದರಿಂದಾಗಿ ಬಸವಣ್ಣನವರು ಎಳೆಯ ಪ್ರಾಯದಿಂದಲೂ ಶ್ಲೋಕಗಳನ್ನು ಕರಗತ ಮಾಡಿಕೊಂಡಿದ್ದರು. ಹಾಗಾಗಿ ಬಸವಣ್ಣನವರು ಬೇರೆ ಸಾಮಾನ್ಯ ಮಕ್ಕಳಂತೆ ಬೆಳೆಯಲಿಲ್ಲ. ದ್ಯಾನದಲ್ಲಿ ಸಾದನೆ ಮಾಡುವುದರ ಜೊತೆಗೆ ವಯಸ್ಸಿಗೆ ಮೀರಿದ ಆಲೋಚನೆ ಅವರದು. ಶಿವಶರಣರ ಕತೆಗಳು ಬಸವಣ್ಣನವರ ಮನಸ್ಸನ್ನು ತುಂಬಾ ಸೆಳೆಯಿತು. ಕಪಟವಿಲ್ಲದ ಒಳ್ಳೆಯ ಮನಸ್ಸಿನ ಬೇಡರ ಕಣ್ಣಪ್ಪನ ಶಿವಬಕ್ತಿ, ದಾಸಿಮಯ್ಯ-ದುಗ್ಗಳೆಯರ ಬಟ್ಟೆದಾನ, ಸಿರಿಯಾಳ ಶೆಟ್ಟಿಯ ತ್ಯಾಗ, ಮಾದಾರ ಚೆನ್ನಯ್ಯನ ಶಿವನಿಶ್ಟೆ, ತಿರುನೀಲಕಂಟ ದಂಪತಿಗಳ ಶಪತ, ಸಿಂದು ಬಲ್ಲಾಳನ ಶಿವಪ್ರೇಮ ಮುಂತಾದ ಕತೆಗಳು ಬಸವಣ್ಣನವರ ಮನಸ್ಸಿನ ಮೇಲೆ ಬಾರಿ ಪರಿಣಾಮ ಬೀರಿತು.

ಶಿವನಿಗೆ ಯಾವುದೇ ಕುಲವಿಲ್ಲ, ಶಾಸ್ತ್ರ, ಸಂಪತ್ತು, ಆಡಂಬರ ಬೇಕಾಗಿಲ್ಲ. ಅವನಿಗೆ ಬೇಕಾಗಿರುವುದು ಮನದೊಳಗಿನ ಕಪಟವಿಲ್ಲದ ಬಕ್ತಿ ಮತ್ತು ಶಿವನ ಮೇಲಿನ ಪ್ರೀತಿ‘ ಎಂಬ ಸತ್ಯ ಕತೆಗಳು ಬಸವಣ್ಣನವರಿಗೆ ಹತ್ತಿರವಾದವು. ಆಗ ಅವರಿಗೆ ತಾನು ಶಾಸ್ತ್ರ ಸಂಪ್ರದಾಯಗಳ ಬಲೆ ಬಲೆಯಲ್ಲಿ ಸಿಕ್ಕಿ ಬಿದ್ದಿದ್ದೇನೆ. ಇವು ಶಿವನಿಂದ ತನ್ನನ್ನು ದೂರ ಕೊಂಡೊಯ್ಯತ್ತದೆಂಬ ಬಯ ಕಾಡತೊಡಗಿತು. ಇಂತಹ ಬಾವನೆ ಮುಂದೆ ಬಸವಣ್ಣನವರಿಗೆ ತಾನು ಹುಟ್ಟಿ ಬೆಳೆದ ಪರಿಸರದ ಬಗೆಗೆ ತಿರಸ್ಕಾರದ ಬಾವನೆ ಬಲವಾಗುತ್ತಾ ಹೋಯಿತು. ಅವರ ಯೋಚನೆಗಳು ಬದಲಾಗುತ್ತಾ ಹೋಗಿ, ಶಿವಬಕ್ತಿಯ ಹೊಸಲೋಕದ ಪ್ರವೇಶಕ್ಕೆ ಹವಣಿಸ ಪ್ರಾರಂಬಿಸಿದರು.

ಅದರೆ ಬಸವಣ್ಣನವರ ತಂದೆ ಬಸವಣ್ಣನವರನ್ನು ಒಬ್ಬ ಒಳ್ಳೆಯ ಗುರುವಿನ ಬಳಿ ಬಿಟ್ಟು ವಿದ್ಯಾವಂತನನ್ನಾಗಿ ಮಾಡ ಬಯಸಿದರು. ಅವರನ್ನು ಕಲಿಕೆಗಾಗಿ ಗುರುವಿನ ಬಳಿ ಕಳುಹಿಸುವ ಸಲುವಾಗಿ ಉಪನಯನವನ್ನು ಏರ‍್ಪಾಟು ಮಾಡಲಾಯಿತು. ಆದರೆ ಬಸವಣ್ಣನವರಿಗೆ ಇಂತಹ ಅಚಾರಗಳಲ್ಲಿ ಇಶ್ಟವಿರಲಿಲ್ಲ. ಹಾಗಾಗಿ ಇವು ಒಂದು ಬಂದನದ ಹಾಗೆ ಕಾಡ ತೊಡಗಿತು. ಉಪನಯನವೆಂಬುದು ಹುರುಳಿಲ್ಲದ ವ್ಯರ‍್ತ ಕೆಲಸವೆಂದು ಬಸವಣ್ಣನವರು ತಂದೆಯಲ್ಲಿ ವಾದಿಸಿದರು. ಆದರೆ ಮಾದಿರಾಜ ತನ್ನ ಪ್ರತಿಶ್ಟೆಯ ಸಲುವಾಗಿ ಒತ್ತಾಯದಿಂದ ಬಸವಣ್ಣನವರನ್ನು ಉಪನಯನಕ್ಕೆ ಅಣಿಗೊಳಿಸಿದರು. ಹೀಗೆ ಎಂಟನೇ ಪ್ರಾಯದಲ್ಲಿ ಬಸವಣ್ಣನವರ ಉಪನಯನ ತನ್ನ ಒಲ್ಲದ ಮನಸ್ಸಿನಿಂದಲೇ ನಡೆದುಹೋಗುತ್ತದೆ. ತನ್ನ ಹದಿನಾರನೇ ಪ್ರಾಯದ ವರೆಗೆ ಅಂದರೆ, ಉಪನಯನದಿಂದ ಮುಂದಿನ ಎಂಟು ವರುಶಗಳ ಕಾಲ ಪ್ರತಿನಿತ್ಯದ ಒಲ್ಲದ ಆಚಾರಗಳಿಗೆ ಬಲತ್ಕಾರವಾಗಿ ಒಗ್ಗಿಕೊಳ್ಳಲೇ ಬೇಕಾಯಿತು.

ಬಸವಣ್ಣನವರ ಬುದ್ದಿ ಬೆಳೆದಂತೆ ಅವರಿಗೆ ಸಮಾಜದಲ್ಲಿನ ಅಸಮಾನತೆಗಳು ಕಾಡತೊಡಗಿದವು. ಶೋಶಿತರ ಮೇಲೆ ನಡೆಯುತ್ತಿದ್ದ ದವ್ರ್ಜನ್ಯ ಮನಸ್ಸಿಗೆ ನೋವು ಮಾಡಿತು. ಅವರಲ್ಲಿ ಸಮಾನತೆಯ ಬಾವನೆ ಬೆಳೆದು, ಮುಂದೆ ಮಂದಿಯಲ್ಲಿ ಸಮಾನತೆಯ ಬಾವನೆಗಳನ್ನು ಬೆಳೆಸಿ, ಸಮಾಜಿಕ ಮತ್ತು ದಾರ‍್ಮಿಕ ಬದಲಾವಣೆಯನ್ಶು ತರುವ ಪಣ ತೊಟ್ಟರು. ಇದಕ್ಕೆ ತನಗಿಶ್ಟವಿಲ್ಲದ ವಯ್ಚಾರಿಕ ಬಂದನವನ್ನು ತೊರೆಯುವುದು ಬಿಟ್ಟು ಬೇರೆ ದಾರಿಯಿಲಲಿಲ್ಲ. ಹಾಗಾಗಿ ತನ್ನ ಹದಿನಾರನೆಯ ಪ್ರಾಯದಲ್ಲಿ ತಂದೆ, ತಾಯಿ, ತಾನು ಬೆಳೆದ ವಯ್ಚಾರಿಕ ಪರಿಸರ, ತನ್ನ ಕುಲ ಹೀಗೆ ಎಲ್ಲವನ್ನೂ ಬಿಡಲು ನಿರ‍್ದರಿಸಿದರು. ಇದೇ ಸಂದರ್‍ಬದಲ್ಲಿ ಬಸವಣ್ಣನವರ ತಂದೆ ತಾಯಿ ಸಾವನಪ್ಪಿದರು. ಮುತ್ತಬ್ಬೆಯೊಬ್ಬಳನ್ನು ಬಿಟ್ಟರೆ ಬೇರೆ ಯಾರೂ ಬಸವಣ್ಣನವರಿಗೆ ಇರಲಿಲ್ಲ. ಒಂದೆಡೆ ಒಲ್ಲದ ಕಟ್ಟುಪಾಡುಗಳು, ಇನ್ನೊಂದೆಡೆ ತನ್ನ ಜಾತಿಯವರಿಂದಲೇ ಬಸವಣ್ಣನವರ ಕುರಿತು ಅವಹೇಳನಗಳು. ಹೀಗೆ ಉಸಿರುಗಟ್ಟಿಸುವ ವಾತಾವರಣದಿಂದ ಹೊರಬರುವುದು ಬವಣ್ಣನವರಿಗೆ ತೀರ ಅನಿವಾರ‍್ಯವೆನಿಸಿತು. ಆ ಸಮಯದಲ್ಲಿ ಕಪ್ಪಡಿ ಸಂಗಮನ ನೆನಪಾಯಿತು. ತನ್ನ ಕಟ್ಟುಪಾಡುಗಳನ್ನು ತೊರೆದು, ಜಾತಿಯ ಹಂಗು ಹರಿದು, ಹೊಸ ದಾರಿ ಹಿಡಿದು ತನ್ನ ತಂಗಿ ನಾಗಲಾಂಬೆಯೊಂದಿಗೆ ಬಾಗೇವಾಡಿ ತೊರೆದು ಕಪ್ಪಡಿ ಸಂಗಮಕ್ಕೆ ಬಸವಣ್ಣನವರು ಬಂದರು.

ಹೀಗೆ ಅನೇಕ ಕಶ್ಟ, ತೊಂದರೆಗಳನ್ನು ದರ‍್ಯದಿಂದ ಎದುರಿಸಿ, ಮುಂದೆ ಬಸವಣ್ಣನವರು ಬಕ್ತಿಯ ಸಾದನೆಯನ್ನು ಉದ್ದೇಶವಾಗಿಟ್ಟುಕೊಂಡು ಸಾಮಾಜಿಕ ಕ್ರಾಂತಿಯನ್ನು ಮಾಡಿದ್ದು ಇಂದಿನ ಕಲಿಕೆಗೆ ಇತಿಹಾಸ ನೀಡಿದ ಮಹೋನ್ನತ ಕೊಡುಗೆಗಳಲ್ಲೊಂದು.

(ಮಾಹಿತಿ ಸೆಲೆ: kanaja)
(ಚಿತ್ರ ಸೆಲೆ: wikimedia)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: