ರಕ್ತ ಯಾರದಮ್ಮ?

ಸಿ.ಪಿ.ನಾಗರಾಜ

bloodbag 0001

ಇಂದಿಗೆ ಸುಮಾರು ಇಪ್ಪತ್ತು ವರುಶಗಳ ಹಿಂದೆ ಹಳ್ಳಿಯೊಂದರಲ್ಲಿ ನಡೆದ ಪ್ರಸಂಗವಿದು.

ನಗರದಲ್ಲಿದ್ದ ಕಾಲೇಜಿಗೆ ಪ್ರತಿನಿತ್ಯ ಹಳ್ಳಿಯೊಂದರಿಂದ ಜತೆಯಾಗಿ ಹೋಗಿ ಬರುತ್ತಿದ್ದ ನಾಲ್ಕು ಮಂದಿ ಹುಡುಗರಲ್ಲಿ… ಮೂರು ಮಂದಿ ಒಕ್ಕಲಿಗ ಹುಡುಗರು, ತಮ್ಮ ಗೆಳೆಯನ ಮನೆಯಲ್ಲಿ ಒಂದು ದಿನ ಊಟ ಮಾಡಿದರು. ಆತ ದಲಿತನಾಗಿದ್ದುದರಿಂದ ಈ ಸುದ್ದಿ ಕಾಳ್ಗಿಚ್ಚಿನಂತೆ ಊರಲ್ಲೆಲ್ಲಾ ಹಬ್ಬಿತು. ಇದೇ ರೀತಿ ಸಡಿಲಬಿಟ್ಟರೆ, ನಾಳೆ ಇನ್ನೊಂದು ಹಂತ ತಲುಪಿ, ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಮೇಲು-ಕೀಳಿನ ಜಾತಿ ಕಟ್ಟುಪಾಡುಗಳು ಹಾಳಾಗುತ್ತವೆಯೆಂಬ ಆತಂಕಕ್ಕೆ ಒಳಗಾದ ಒಕ್ಕಲಿಗರು, ಇಂತಾದ್ದನ್ನು ಮೊಳಕೆಯಲ್ಲೇ ಮುರಿದು ಹಾಕಬೇಕೆಂದು ನಿಶ್ಚಯಿಸಿದರು. ನಾಲ್ವರು ಹುಡುಗರನ್ನು ಮತ್ತು ಅವರ ತಂದೆತಾಯಿಗಳನ್ನು ಮಾರಿಗುಡಿಯ ಪಡಸಾಲೆಗೆ ಕರೆಸಿ, ಎಲ್ಲಾ ಜಾತಿಯ ತಲೆಯಾಳುಗಳ ಮುಂದೆ ನ್ಯಾಯಪಂಚಾಯ್ತಿ ಮಾಡಿ, ಊಟ ಹಾಕಿದ್ದ ದಲಿತ ಕುಟುಂಬದವರಿಗೆ ಎಚ್ಚರಿಕೆಯನ್ನು ನೀಡಿ, ಊಟ ಮಾಡಿದ್ದ ಒಕ್ಕಲಿಗ ಹುಡುಗರ ತಲೆ ಬೋಳಿಸಿ, ಕರ‍್ಮಾಂತರ ಮಾಡಿಸಿ, ಕುಲಕ್ಕೆ ಕೂಡಿಸಿಕೊಳ್ಳಬೇಕೆಂಬ ಅಪ್ಪಣೆಯನ್ನು ಹೊರಡಿಸಿದರು.

ತಲತಲಾಂತರದಿಂದ ಆಚರಣೆಯಲ್ಲಿ ಬಂದಿದ್ದ ಜಾತಿಪದ್ದತಿಯ ಪರವಾಗಿದ್ದ ಪಂಚಾಯ್ತಿದಾರರ ಮುಂದೆ… ಕಾಲೇಜು ಹುಡುಗರ “ಜಾತಿ ಎಂಬುದು ಒಂದು ಸುಳ್ಳು/ಒಂದು ಬ್ರಮೆ” ಎಂಬ ಮಾತುಗಳಿಗೆ ಯಾವುದೇ ಬೆಲೆ ಸಿಗಲಿಲ್ಲ. ಪಂಚಾಯ್ತಿಯ ತೀರ‍್ಮಾನವನ್ನು ಒಪ್ಪದಿದ್ದರೆ… ಊರಿನವರು ಒಟ್ಟಾಗಿ ತಮ್ಮ ಕುಟುಂಬದವರೆಲ್ಲರನ್ನೂ ಸಾಮಾಜಿಕವಾಗಿ ಹೊರಗಿಡುವ ಬೆದರಿಕೆಯನ್ನು ಹಾಕಿದ್ದುದರಿಂದ… ತಂತಮ್ಮ ತಂದೆತಾಯಂದಿರನ್ನು ಇಕ್ಕಟ್ಟಿನಿಂದ ಪಾರುಮಾಡಲೆಂದೋ ಇಲ್ಲವೇ ಸಂಪ್ರದಾಯದ ಹೆಸರಿನಲ್ಲಿ ಹಾಕಿರುವ ದಂಡನೆಯನ್ನು ಎದುರಿಸುವ ದಿಟ್ಟತನದ ನಿಲುವುಗಳನ್ನು ತೆಗೆದುಕೊಳ್ಳಲಾಗದ ಕಾರಣದಿಂದಲೋ… ಒಕ್ಕಲಿಗ ಹುಡುಗರು ತಲೆ ಬೋಳಿಸಿಕೊಂಡು ಜಾತಿ ಕಟ್ಟಲೆಗೆ ತಲೆಬಾಗಿದರು.
ಒಂದೆರಡು ವಾರಗಳಲ್ಲಿ ಈ ಸುದ್ದಿಯು ಒಬ್ಬರಿಂದ ಮತ್ತೊಬ್ಬರಿಗೆ ಹರಡಿ… ತಾಲ್ಲೂಕು, ಜಿಲ್ಲಾ ಮತ್ತು ರಾಜ್ಯಮಟ್ಟದ ದಿನಪತ್ರಿಕೆಗಳಲ್ಲಿ ಪ್ರಕಟಗೊಂಡಿತು. ಪೋಲಿಸಿನವರು ಈ ಹಳ್ಳಿಗೆ ಬಂದು ಮಾಹಿತಿಯನ್ನು ಕಲೆಹಾಕತೊಡಗಿದರು. ಇದರಿಂದ ಹಳ್ಳಿಯಲ್ಲಿ ಬಿಗುವಿನ ವಾತಾವರಣ ಉಂಟಾಗಿ, ಜಾತಿ ಹಗೆತನದ ಕಿಡಿಗಳು ಕೆದರತೊಡಗಿದವು. ಇನ್ನು ಮುಂದೆ ಬೇಸಾಯದ ಕೆಲಸಗಳಿಗೆ ದಲಿತರನ್ನು ಕರೆಯಬಾರದೆಂಬ ನಿರ‍್ಣಯವನ್ನು ಒಕ್ಕಲಿಗರು ಗುಟ್ಟಾಗಿ ಒಮ್ಮತದಿಂದ ಕಯ್ಗೊಂಡರು.

ಜಿಲ್ಲಾ ಕೇಂದ್ರದಲ್ಲಿ ನೆಲೆಸಿದ್ದ ದಲಿತರ ಸಣ್ಣಪ್ಪನವರಿಗೆ ಈ ಸುದ್ದಿ ಗೊತ್ತಾಗಿ ತುಂಬ ಸಂಕಟಕ್ಕೆ ಒಳಗಾದರು. ಮಣ್ಣಿನ ಮಕ್ಕಳಾಗಿ ಒಂದೇ ಊರಿನಲ್ಲಿ ಬಾಳುತ್ತಿರುವ ಶ್ರಮಜೀವಿಗಳಾದ ದಲಿತರ ಮತ್ತು ಒಕ್ಕಲಿಗರ ನಡುವೆ ಹೊಂದಾಣಿಕೆಯನ್ನು ಮೂಡಿಸಲು ಸಣ್ಣಪ್ಪನವರು ಮುಂದಾದರು. ಸಮಾನತೆಯ ಸಮಾಜದ ನಿರ‍್ಮಾಣಕ್ಕಾಗಿ” ಅರಿವು-ಒಗ್ಗಟ್ಟು-ಹೋರಾಟ” ಗಳ ಹಾದಿಯಲ್ಲಿ ಸಾಗಿದ್ದ ಅಂಬೇಡ್ಕರ್ ಅವರ ವಿಚಾರಗಳನ್ನು ಚೆನ್ನಾಗಿ ಓದಿಕೊಂಡಿದ್ದ ಸಣ್ಣಪ್ಪನವರಿಗೆ… ಗಾಂದೀಜಿಯವರ ಸತ್ಯ ಮತ್ತು ಅಹಿಂಸೆಯಿಂದ ಕೂಡಿದ ಶಾಂತಿಯುತವಾದ ಹೋರಾಟದ ಹಾದಿಯಲ್ಲಿಯೂ ಅಪಾರವಾದ ನಂಬಿಕೆಯಿತ್ತು. ನೂರಾರು ವರುಶಗಳಿಂದ ಜನಸಮುದಾಯದ ಮನದಲ್ಲಿ ನೆಲೆಗೊಂಡಿರುವ ಜಾತಿಯ ಬೇರುಗಳನ್ನು ತುಸುವಾದರೂ ಸಡಿಲಗೊಳಿಸಿ, ಹತ್ತೆಂಟು ಜಾತಿಗಳಿಗೆ ಸೇರಿದ ಜನರ ನಡುವೆ ಮೊದಲು ಪರಸ್ಪರ ಒಲವು ನಲಿವಿನ ನೆಂಟನ್ನು ಬೆಳೆಸುವುದರ ಕಡೆಗೆ ಹೆಚ್ಚು ಗಮನವನ್ನು ನೀಡುತ್ತಿದ್ದ ಸಣ್ಣಪ್ಪನವರು ಅನೇಕ ವರುಶಗಳಿಂದ ಜನಪರ ಕೆಲಸಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಒಡೆದ ಮನಸ್ಸುಗಳನ್ನು ಒಂದು ಮಾಡಲೆಂದು ಒಂದು ದಿನ ಬೆಳಗ್ಗೆ ಈ ಹಳ್ಳಿಗೆ ನಾಲ್ಕಾರು ಮಂದಿ ಹಿರಿಯರೊಡನೆ ಸಣ್ಣಪ್ಪನವರು ಬಂದರು. ಹಿರಿಯರ ಗುಂಪಿನಲ್ಲಿ ಬ್ರಾಹ್ಮಣ, ಒಕ್ಕಲಿಗ, ಶೆಟ್ಟಿ ಮುಂತಾದ ಜಾತಿಗಳಿಗೆ ಸೇರಿದ ಜನರಿದ್ದರು.

ಅಡ್ಡ ರಸ್ತೆಯ ಬಳಿ ಬಸ್ಸಿನಿಂದ ಇಳಿದು, ಉರಿಯುತ್ತಿರುವ ಬಿಸಿಲಿನಲ್ಲಿ ನಡೆದುಕೊಂಡು ನೇರವಾಗಿ ಊರ ಗವ್ಡರ ಮನೆಯ ಬಳಿಗೆ ಬಂದು ನಿಲ್ಲುತ್ತಿದ್ದಂತೆಯೇ… ಒಳಗಿನಿಂದ ಹೊರಕ್ಕೆ ಬಂದ ಹೆಂಗಸೊಬ್ಬರು ತಲಬಾಗಿಲಲ್ಲಿ ನಿಂತುಕೊಂಡು-
“ಮನೇಲಿ ಗವ್ಡರಿಲ್ಲ” ಎಂದರು.

“ಎಲ್ಲಿಗೆ ಹೋಗವ್ರೆ ತಾಯಿ ?”

“ಅದೆಲ್ಲಿಗೆ ಹೋಗಿದ್ದರೋ… ನಾವು ಕಾಣೋ” ಎಂದು ಅಸಡ್ಡೆಯಿಂದ ಉತ್ತರಿಸಿದರು. ಊರಿನಲ್ಲಿ ಒಗ್ಗಟ್ಟನ್ನು ಮೂಡಿಸಲೆಂದು ಬರಲಿದ್ದ ಗುಂಪಿನ ಸುಳಿವನ್ನು ಹೇಗೋ ಅರಿತಿದ್ದ ಗವ್ಡರು, ತಮ್ಮ ಹೆಂಡತಿಮಕ್ಕಳಿಗೆ ಬಂದವರ ಮುಂದೆ ಏನೊಂದು ಮಾತನ್ನು ಆಡದಂತೆ… ಏನನ್ನೇ ಕೇಳಿದರೂ ಬಾಯಿಬಿಡದಂತೆ ಎಚ್ಚರಿಕೆಯನ್ನು ನೀಡಿ, ಹೊತ್ತಿಗೆ ಮುಂಚೆಯೇ ಗದ್ದೆ ಕಡೆಗೆ ಹೋಗಿದ್ದರು.

ಸಣ್ಣಪ್ಪನವರ ಜತೆಯಲ್ಲಿ ಬಂದಿದ್ದ ನಡುವಯಸ್ಸಿನ ಹೆಂಗಸೊಬ್ಬರು… ಈಗ ಗವ್ಡರ ಮನೆಯ ಒಂದೆರಡು ಮೆಟ್ಟಿಲುಗಳನ್ನೇರಿ ನಿಂತು-
“ನೀವು ಗವ್ಡರಿಗೆ ಏನಾಗ್ಬೇಕು ?” ಎಂದು ಕೇಳಿದಾಗ… ಬಾಗಿಲಲ್ಲಿ ನಿಂತಿದ್ದ ಹೆಂಗಸು” ನಾವು ಅವರ ಮನೆಯವರು” ಎಂದು ಉತ್ತರಿಸಿದರು.

“ಹಾಗಾದ್ರೆ… ಬೇರೆ ಊರಿನಿಂದ ನಿಮ್ಮೂರಿಗೆ ಬಂದಿರುವ ನಮ್ಮನ್ನ ಈ ಬಿಸಿಲಿನಲ್ಲಿ ಬೀದಿಯಲ್ಲೇ ನಿಲ್ಲಿಸಿದ್ದೀರಲ್ಲ… ಪಡಸಾಲೆ ಮೇಲಕ್ಕಾದರೂ ಕರೆಯಿರಿ” ಎಂದು ಮುಗುಳ್ನಗುತ್ತಾ ನುಡಿದಾಗ… ಗವ್ಡತಿ ಕೆರಳಿ ಕೆಂಡವಾದರು.

“ಜಾತಿ ಕೆಡ್ಸಿ… ಊರನ್ನೆಲ್ಲಾ ಎಕ್ಕಹುಟ್ಟಿಸೋಕೆ ಬಂದಿದ್ದೀರಲ್ಲ… ಅದಕ್ಕೆ ನಿಮ್ಮನ್ನ… ಬನ್ರವ್ವ ಒಳಾಕೆ ಅಂತ ಆರತಿ ಎತ್ತಿ ಕರೀಬೇಕಾಗಿತ್ತೆ ?”

“ನಾವು ಹಾಗೆ ಊರಿಗೆ ಕೇಡು ಮಾಡೋಕೆ ಬಂದಿಲ್ಲ ಕಣ್ರಮ್ಮ” ಎಂದು ಸಣ್ಣಪ್ಪನವರು ಹೇಳಿದಾಗ-

“ಇನ್ನೇನು ಮಾಡೂದಕ್ಕೆ ಬಂದಿದ್ದೀರಿ ?… ದನವ ಎಮ್ಮೆ ಮಾಡೋಕೆ… ಎಮ್ಮೆಯ ದನ ಮಾಡೋಕೆ… ಬಂದಿದ್ದೀರ !” ಎಂದು ಒರಟೊರಟಾಗಿ ಅಬ್ಬರಿಸಿದರು.

ಅಲ್ಲಿಗೆ ಬಂದಿದ್ದ ಹಿರಿಯರಲ್ಲಿ… ಇಬ್ಬರು ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಬಾಗವಹಿಸಿದ್ದವರು. ಮತ್ತಿತರರು ಸಾಮಾಜಿಕ ಕಾರ‍್ಯಕರ‍್ತರಾಗಿ ಹಲವಾರು ಒಕ್ಕೂಟಗಳಲ್ಲಿ ದುಡಿದಿದ್ದವರು. ಇಂತಹ ಅಪಮಾನದ ಮಾತುಗಳನ್ನು ನಗುನಗುತ್ತಾ ಸಹಿಸಿಕೊಳ್ಳುವ ತಾಳ್ಮೆ ಅವರಲ್ಲಿತ್ತು. ಗವ್ಡತಿಯು ಇವರನ್ನು ಕಡೆಗಣಿಸಿ ನುಡಿಯುತ್ತಿದ್ದ ಸಮಯದಲ್ಲೇ ಮನೆಯ ಒಳಗಡೆಯಿಂದ ಎಳೆಯ ಮಗುವೊಂದು ಕಿಟಾರನೆ ಕಿರುಚಿದ ಶಬ್ದ ಕೇಳಿ ಬಂತು. ಕೂಡಲೇ ಗವ್ಡತಿಯು ಮನೆಯೊಳಕ್ಕೆ ಸರಿದರು. ಮಗುವಿನ ಅಳುವಿನ ಜತೆ ಜತೆಗೆ ಒಬ್ಬ ಹೆಂಗಸಿನ ನರಳುವಿಕೆಯೂ ಕೇಳಿಬರತೊಡಗಿತು.

ಬಂದಿದ್ದವರೆಲ್ಲರೂ ಈಗ ಪಡಸಾಲೆಯನ್ನೇರಿ ಕುಳಿತುಕೊಂಡರು. ಕೆಲವು ಗಳಿಗೆಯ ನಂತರ ಮತ್ತೆ ಹೊರಬಂದ ಗವ್ಡತಿ… ತಾವು ಕರೆಯದಿದ್ದರೂ… ತಮ್ಮ ಮನೆ ಪಡಸಾಲೆಯಲ್ಲಿ ಕುಳಿತುಕೊಂಡಿರುವವರನ್ನು ಕೆಕ್ಕರಿಸಿಕೊಂಡು ನೋಡತೊಡಗಿದರು. ಸಣ್ಣಪ್ಪನವರು ಗವ್ಡತಿಯನ್ನು ಕುರಿತು-
“ಮನೇಲಿ ಯಾರ‍್ಗಾದ್ರೂ ಮಯ್-ಸರಿ ಇಲ್ವೇನ್ರಮ್ಮ ?… ಯಾರೋ ಹೆಂಗಸರು ಒಳಗೆ ನರಳ್ತಾವ್ರಲ್ಲ ?… ಅವರಿಗೆ ಹುಶಾರಿಲ್ವೆ ?… ನೋಡಿ.. ನಿಮ್ ಜತೇಲಿ ಮೊದಲು ಮಾತನಾಡಿದ ಇವರು… ಒಳ್ಳೆ ಲೇಡಿ ಡಾಕ್ಟ್ರು. ಏನಾದ್ರೂ ತೊಂದರೆ ಇದ್ರೆ… ಇವರಿಗೆ ತೋರ‍್ಸಿ” ಎಂದರು. ಇದುವರೆಗೂ ಕೋಪತಾಪಗಳಿಂದ ಕುದಿಯುತ್ತಿದ್ದ ಗವ್ಡತಿಯ ಮೊಗದಲ್ಲಿ… ಇದೀಗ ಬದಲಾವಣೆಯು ಕಂಡು ಬಂದಿತು. ಒಂದೆರಡು ಗಳಿಗೆಯ ನಂತರ ಗವ್ಡತಿಯು ಡಾಕ್ಟರಮ್ಮನವರ ಕಡೆ ತಿರುಗಿ-

“ನನ್ ಮಗಳು ಎರಡು ತಿಂಗಳ ಬಾಣಂತಿ ಕಣವ್ವ. ಅವಳಿಗೆ ಮೊನ್ನೆ ಬಂದ ಜ್ವರ ಕಮ್ಮಿಯಾಗ್ಲೇ ಇಲ್ಲ. ಒಂದೇ ಸಮನೆ ಹಾಕೊಂಡು ಸೀಯ್ತಾವೆ ಕಣವ್ವ” ಎಂದು ನುಡಿಯುತ್ತಿದ್ದಂತೆಯೇ ಸಂಕಟ ತುಂಬಿ ಬಂದು ಸುಮ್ಮನಾದರು. ಈಗ ಡಾಕ್ಟರಮ್ಮ ತಾವಾಗಿಯೇ ಒಳಕ್ಕೆ ಹೋಗಿ, ರೋಗಿಯನ್ನು ಕೆಲಹೊತ್ತು ನೋಡಿ, ಅವಳೊಡನೆ ಮಾತನಾಡಿ, ಯಾವ ಯಾವ ಗುಳಿಗೆಗಳನ್ನು ತರಿಸಿ ತೆಗೆದುಕೊಳ್ಳಬೇಕೆಂಬುದನ್ನು ಬರೆದುಕೊಟ್ಟು, ಹೊರಕ್ಕೆ ಬಂದು ಕುಳಿತರು. ತುಸು ಸಮಯದ ನಂತರ ಗವ್ಡತಿಯು ಒಂದು ತಟ್ಟೆಯ ತುಂಬಾ ಬಾಳೆಯ ಹಣ್ಣುಗಳನ್ನು ತಂದು ಎಲ್ಲರ ಮುಂದಿಟ್ಟು-

“ತಕೊಳಿ… ಎಲ್ರೂ ಹಣ್ ತಿನ್ನಿ” ಎಂದರು.

“ನಿಮ್ ಮಗಳು ತುಂಬಾ ನಿಶ್ಶಕ್ತಿಯಾಗಿದ್ದಾಳೆ. ನಾನು ಬರೆದು ಕೊಟ್ಟಿರುವ ಮಾತ್ರೆಗಳನ್ನು ಈಗಲೇ ತರಿಸಿ, ಟಯ್‌ಮಿಗೆ ಸರಿಯಾಗಿ ಕೊಡಿ. ಜ್ವರ ಬಿಟ್ಟ ಮೇಲೆ ಟಾನಿಕ್ ಕೊಡಿ” ಎಂದು ಡಾಕ್ಟರಮ್ಮ ಮತ್ತೊಮ್ಮೆ ಸೂಚನೆ ನೀಡಿದರು.

“ಅವಳು ಮೊದಲಿನಿಂದಲೂ ಹಂಗೆ ಒಣೀಕೊಂಡವ್ಳೆ ಕಣವ್ವ. ಈ ಸತಿ ಚೊಚ್ಚಲ ಹೆರಿಗೇಲಿ ಬೋ ಕಶ್ಟವಾಗೋಯ್ತು. ಮಯ್ಸೂರಲ್ಲಿ ಆಸ್ಪತ್ರೆಗೆ ಸೇರಿಸಿದ್ದೊ… ಆಪ್ಲೇಶನ್ ಮಾಡಿ ಮಗ ತೆಗುದ್ರು ಕಣವ್ವ.”

“ಹಂಗಾದ್ರೆ… ಆಗ ರಕ್ತ ಬಹಳ ಹೋಗಿರ‍್ಬೇಕು. ಅದಕ್ಕೆ ಇಶ್ಟೊಂದು ನಿಶ್ಶಕ್ತಿ” ಎಂದು ಸಣ್ಣಪ್ಪನವರು ದನಿಗೂಡಿಸಿದಾಗ-

“ಹೂ ಕಣಪ್ಪ… ಆಗ ನನ್ನ ಮಗಳಿಗೆ ಆಸ್ಪತ್ರೇಲಿ ಮೂರು ಸೀಸ ರಕ್ತ ಕೊಟ್ಟರು”.

“ಮಗಳಿಗೆ ನಿಮ್ಮ ರಕ್ತಾನೆ ಕೊಟ್ರ ?”

“ಇಲ್ಲ ಕಣಪ್ಪ… ನಂದು ಆಗಲಿಲ್ಲ… ನಮ್ಮ ಗವ್ಡರದು ಆಗಲಿಲ್ಲ… ಅವಳ ಗಂಡಂದೂ ಹೊಂದೂದಿಲ್ಲ ಅಂದ್ಬುಟ್ರು ಡಾಕ್ಟರು.”

“ಹಂಗಾದ್ರೆ ರಕ್ತ ಯಾರ್ ಕೊಟ್ರು ?”

“ಆಸ್ಪತ್ರೇಲಿ ಯಾರ‍್ದೋ ಇತ್ತಂತೆ… ಅದನ್ನೇ ಕೊಟ್ಟು ನನ್ ಮಗಳ ಜೀವ ಉಳ್ಸುದ್ರು ಕಣಪ್ಪ ಪುಣ್ಯಾತ್ಮರು”

“ನಿಮ್ಮ ಮಗಳಿಗೆ ಕೊಟ್ಟ ರಕ್ತ ಯಾವ ಜಾತಿಯವರದಂತೆ ?” ಎಂದು ಸಣ್ಣಪ್ಪನವರು ಕೇಳಿದಾಗ… ಇದುವರೆಗೂ ನಿರಾಳವಾಗಿ ಮಾತನಾಡುತ್ತಿದ್ದ ಗವ್ಡತಿಯ ಗಂಟಲು… ಈಗ ಬಿಗಿದು ಕಟ್ಟಿದಂತಾಯಿತು.

“ನೋಡುದ್ರಾ… ಅವತ್ತು ನಿಮ್ಮ ಮಗಳ ಜೀವ ಉಳಿಸಿದ್ದು… ಹೆತ್ತ ತಾಯಿಯಾದ ನಿಮ್ಮ ರಕ್ತವಲ್ಲ… ನಿಮ್ಮ ನೆಂಟರಿಶ್ಟರದಲ್ಲ… ನಿಮ್ಮ ಜಾತಿಯ ಜನರದ್ದಲ್ಲ. ಯಾರೋ ನಾಲ್ಕು ಜನ… ನಮ್ಮಂಗೆ ನಿಮ್ಮಂಗೆ ಎಲ್ಲರಂಗೂ ಇರುವ ಮನುಶ್ಯರದು” ಎಂದು ಡಾಕ್ಟರಮ್ಮ ಹೇಳಿದ ಮಾತುಗಳನ್ನು ಕೇಳುತ್ತಿದ್ದಂತೆಯೇ ಗವ್ಡತಿಯ ಕಣ್ಣುಗಳು ಅರಳಿದವು.

(ತಿಟ್ಟ: http://raiseyoursleeve.files.wordpress.com/)

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. bhadravathi says:

    ಅಸಹ್ಯ ಹುಟ್ಟಿಸೋ, ಅತ್ಯಂತ ಶ್ರದ್ಧೆ, ಮುತುವರ್ಜಿಯಿಂದ ಪ್ರತಿಯೂಬ್ಬರೂ ಪಾಲಿಸಿ ಕೊಂಡು ಬರುತ್ತಿರುವ ಈ ವ್ಯವಸ್ಥೆಯನ್ನು ಕೊನೆಗಾಣಿಸಿ ಎಂದರೆ, ಇಲ್ಲಾ, ಅದು ಸಂವಿಧಾನದಲ್ಲಿ ಹಾಗೆ ಇಲ್ಲ. ಸಂವಿಧಾನದಲ್ಲಿ ಎಲ್ಲರೂ ಸಾಮಾನರು ಎಂದು ಭಾಷಣ ಬಿಗಿದು ‘ಸಮಾನ ನಾಗರೀಕ ಸಂಹಿತೆ’ uniform civil code’ ತರುವುದರ ಕುರಿತು ಅತೀವ ಕಾಳಜಿ ತೋರಿಸುತ್ತಾರೆ.

ಅನಿಸಿಕೆ ಬರೆಯಿರಿ: