ಎಣ್ಣುಕಗಳಲ್ಲಿ ತಿಟ್ಟಗಳನ್ನು ಕಾಪಿಡುವ ಹಾಗೂ ತೋರಿಸುವ ಬಗೆ
ಎಣ್ಣುಕಗಳ ನೆನಪಿನ ಮನೆಯಲ್ಲಿ ತಿಟ್ಟಗಳನ್ನು ಕಾಪಿಡುವುದು ಕೊಂಚ ತೊಡಕಿನ ಹಾಗೂ ಜಾಣತನದ ಕೆಲಸ. ತಿಟ್ಟಗಳನ್ನು (ಒಂದಂಕಿ) ಬಿಟ್ಗಳ ರೂಪದಲ್ಲಿ (Binary Format) ಸುಲಬವಾಗಿ ಸಂಗ್ರಹಿಸಿಡಬಹುದಾದರೂ ಆ ಬಿಟ್ಗಳನ್ನು ಪರದೆಯ ಮೇಲೆ ತಿಟ್ಟಗಳ ರೂಪದಲ್ಲಿ ತೋರಿಸುವ ಕೆಲಸ ಕೊಂಚ ಕಶ್ಟಸಾದ್ಯವೇ!
ಎಣ್ಣುಕಗಳಲ್ಲಿ ತಿಟ್ಟಗಳನ್ನು ಅಂಕೆಮಣೆಗಳ(Matrix) ರೂಪದಲ್ಲಿ ಸಂಗ್ರಹಿಸಿಡಲಾಗುತ್ತದೆ. ಎಣ್ಣುಕದಲ್ಲಿ ತಿಟ್ಟವನ್ನು ಪ್ರತಿನಿದಿಸುವ ಒಂದೊಂದು ಗಟಕಕ್ಕೂ ಪಿಕ್ಸೆಲ್ ಅತವಾ ಪೆಲ್ ಗಳೆಂದು ಕರೆಯಲಾಗುತ್ತದೆ. ಈ ಪ್ರತೀ ಪಿಕ್ಸೆಲ್ಗಳೂ ತಿಟ್ಟದ ಗುಣ, ಗುಣಮಟ್ಟ ಹಾಗೂ ಅವುಗಳ ಬಣ್ಣದ ಹೊದಿಕೆಗಳನ್ನು ನಿರ‍್ದರಿಸುತ್ತವೆ. ಈ ಪಿಕ್ಸೆಲ್ಗಳು ಒಂದು ಬಿಟ್ ನದಾಗಿರಬಹುದು ಅತವಾ ಅನೇಕ ಬಯ್ಟ್ ಗಳಿಂದಲೂ ಕೂಡಿರಬಹುದು. ಈ ರೀತಿಯ ಸಾವಿರಾರು ಪಿಕ್ಸೆಲ್ ಗಳ ಅಂಕೆಮಣೆಗಳ ರೂಪದ ಜೋಡಣೆಯೇ ತಿಟ್ಟವಾಗಿ ನಮ್ಮ ಮುಂದೆ ಮೂಡಿ ಬರುತ್ತದೆ.
ಎಣ್ಣುಕದಲ್ಲಿ ಕೂರುವ ತಿಟ್ಟಗಳು ಬೇರೆ ಬೇರೆ ರೀತಿಯಲ್ಲಿ ಕೂತಿರುತ್ತವೆ. ತಿಟ್ಟವನ್ನು ನೆನಪಿನಲ್ಲಿ ಕೂರಿಸುವ ಬೇರೆ ಬೇರೆ ವಿದಾನಗಳನ್ನು ಒಂದೊಂದಾಗಿ ನೋಡೋಣ.
ಒಂದಂಕಿ ತಿಟ್ಟಗಳು ಅತವಾ ಒಂದು ಬಣ್ಣದ ತಿಟ್ಟಗಳು:
ಇದು ತಿಟ್ಟವನ್ನು ಕೂರಿಸುವ ಅತ್ಯಂತ ಹಳೆಯ ಹಾಗೂ ಮೊದಲ ಮಾದರಿ. ಈ ರೀತಿಯ ತಿಟ್ಟಗಳಲ್ಲಿ ಪಿಕ್ಸೆಲ್ ಗಳು ಒಂದು ಬಿಟ್ ನದಾಗಿರುತ್ತವೆ. ಬಿಟ್ ಎಂದರೆ 0 ಅತವಾ 1 ಎಂದರ‍್ತ. ಒಂದು ಪಿಕ್ಸೆಲ್ ತನ್ನ ಬೆಲೆ 0 ಆಗಿದ್ದರೆ ಕಪ್ಪು ಬಣ್ಣವನ್ನೂ 1 ಆಗಿದ್ದರೆ ಬಿಳಿಯ ಬಣ್ಣವನ್ನೂ ಪ್ರತಿನಿದಿಸುತ್ತವೆ. ಒಂದು ಪಿಕ್ಸೆಲ್ ಒಂದು ಬಿಟ್ ನದಾಗಿರುವ ಕಾರಣ ಕಪ್ಪು ಮತ್ತು ಬಿಳಿ ಎರಡೇ ಬಣ್ಣಗಳಲ್ಲಿ ತಿಟ್ಟಗಳನ್ನು ಪರದೆಯ ಮೇಲೆ ತೋರಿಸಬೇಕಾಗುತ್ತದೆ. ಆದ್ದರಿಂದ ಎಲ್ಲಾ ಒಂದು ಬಿಟ್ ತಿಟ್ಟಗಳು ಕಪ್ಪು ಬಿಳುಪು ತಿಟ್ಟಗಳು. ಪಿಕ್ಸೆಲ್ ಗಳ ಬೆಲೆ ಯಾವಾಗಲೂ 0 ಆಗಿರುತ್ತದೆ. ಆದ್ದರಿಂದ ಕಪ್ಪು ಬಣ್ಣ ಸಾಮಾನ್ಯ (Default) ವಾಗಿದ್ದು ಬಿಳಿ ಬಣ್ಣವನ್ನು ಪ್ರತಿನಿದಿಸಲು ಪಿಕ್ಸೆಲ್ ಗಳ ಬೆಲೆಯನ್ನು 0 ಯಿಂದ 1 ಕ್ಕೆ ಬದಲಿಸುವುದರಿಂದ ಈ ರೀತಿಯ ತಿಟ್ಟಗಳನ್ನು ಒಂದು ಬಣ್ಣದ ತಿಟ್ಟಗಳು (Monochrome Image) ಎಂದು ಕರೆಯಲಾಗುತ್ತದೆ. ಇವು ಅತ್ಯಂತ ಮೂಲರೂಪದ ಹಾಗೂ ಮೊಟ್ಟಮೊದಲಿಗೆ ಎಣ್ಣುಕದ ಪರದೆಯ ಮೇಲೆ ತೋರಿಸಲ್ಪಟ್ಟ ತಿಟ್ಟಗಳು. (ತಿಟ್ಟ 1 ನ್ನು ನೋಡಿ)
ತಿಟ್ಟ 1
8 ಬಿಟ್ ನರೆ ತಿಟ್ಟ (ಗ್ರೇ ಸ್ಕೇಲ್ ಇಮೇಜ್):
ಈ ರೀತಿಯ ತಿಟ್ಟಗಳಲ್ಲಿ ಪಿಕ್ಸೆಲ್ ಗಳು 8 ಬಿಟ್ ಅತವಾ ಒಂದು ಬಯ್ಟ್ ನದಾಗಿರುತ್ತವೆ (8 ಬಿಟ್ = ಒಂದು ಬಯ್ಟ್). 8 ಬಿಟ್ ಎಂದರೆ (2ರ 8 ಮಡಿ = 256) ಅಂದರೆ ಪಿಕ್ಸೆಲ್ ಗಳ ಬೆಲೆ 0 ಇಂದ 256 ರವರೆಗೆ ಎಶ್ಟಾದರೂ ಇರಬಹುದು. ಪಿಕ್ಸೆಲ್ನ ಬೆಲೆ 0 ಗೆ ಹೆಚ್ಚು ಹತ್ತಿರ ಇದ್ದಶ್ಟು ಹೆಚ್ಚು ಕಪ್ಪು ಬಣ್ಣವನ್ನು ಪ್ರತಿನಿದಿಸುತ್ತದೆ; 256 ಕ್ಕೆ ಹೆಚ್ಚು ಹತ್ತಿರವಿದ್ದಶ್ಟೂ ಹೆಚ್ಚು ಬಿಳುಪು ಬಣ್ಣವನ್ನು ಪ್ರತಿನಿದಿಸುತ್ತದೆ. ಅಂದರೆ ಪಿಕ್ಸೆಲ್ನ ಬೆಲೆ ಹೆಚ್ಚಾದಶ್ಟೂ ಕಪ್ಪು ಬಣ್ಣದ ಆಳ ಕಡಿಮೆಯಾಗಿ ಬಿಳಿ ಬಣ್ಣದ ಕಾಂತಿ ಹೆಚ್ಚುತ್ತಾ ಹೋಗುತ್ತದೆ. ನರೆ ತಿಟ್ಟಗಳೂ ಕೂಡ ಕಪ್ಪು ಬಿಳುಪು ತಿಟ್ಟಗಳು. ಕಪ್ಪು ಬಿಳುಪು ಬಣ್ಣಗಳ ಆಳ ಮತ್ತು ಕಾಂತಿಗಳ ವ್ಯತ್ಯಯಗಳಿಗೆ ಅನುಗುಣವಾಗಿ ಈ ತಿಟ್ಟಗಳಲ್ಲಿ ಒಂದಂಕಿ ತಿಟ್ಟಗಳಿಗಿಂತ ಹೆಚ್ಚು ಸ್ಪಶ್ಟತೆ ಇರುತ್ತದೆ.
ಈ ರೀತಿಯ ಸಂಪೂರ‍್ಣ ತಿಟ್ಟವನ್ನು ಪಿಕ್ಸೆಲ್ ಗಳ ಎರಡು ಆಯಾಮದ ( 2 Dimensional) ಸಾಲುಗಳನ್ನಾಗಿ ಜೋಡಿಸಬಹುದು. ಈ ರೀತಿಯ ಜೊಡಿಸುವಿಕೆಯನ್ನು ಬಿಟ್ ಮ್ಯಾಪ್ (Bit Map) ಎಂದು ಕರೆಯುತ್ತಾರೆ. ಸಂಕ್ಶಿಪ್ತ ರೂಪ BMP. (ತಿಟ್ಟ 2 ನ್ನು ನೋಡಿ)
ತಿಟ್ಟ 2
24 ಬಿಟ್ ಬಣ್ಣತಿಟ್ಟಗಳು:
ಈ ರೀತಿಯ ತಿಟ್ಟಗಳಲ್ಲಿ ಪ್ರತೀ ಪಿಕ್ಸೆಲ್ 24 ಬಿಟ್ ಅತವಾ 3 ಬಯ್ಟ್ ನದಾಗಿರುತ್ತದೆ. ಜಗತ್ತಿನ ಎಲ್ಲಾ ಬಣ್ಣಗಳನ್ನು ಮೂರು ಮೂಲಬಣ್ಣಗಳಿಂದ ತಯಾರಿಸಬಹುದು. ಆ ಮೂರು ಮೂಲಬಣ್ಣಗಳೆಂದರೆ ಕೆಂಪು, ಹಸಿರು ಮತ್ತು ನೀಲಿ. ಒಂದು ಪಿಕ್ಸೆಲ್ ನ ಪ್ರತಿ ಬಯ್ಟ್ ಈ ಮೂರರಲ್ಲೊಂದು ಬಣ್ಣವನ್ನು ಪ್ರತಿನಿದಿಸುತ್ತದೆ. ಪ್ರತಿ ಬಣ್ಣವು 2ರ ಮಡಿ 8 = 256 ವಿವಿದ ಆಳಗಳಲ್ಲಿ ಕಂಡುಬರುತ್ತದೆ. ಈ ರೀತಿಯ ತಿಟ್ಟಗಳನ್ನು ಮೂರು ಆಯಾಮದ (3 Dimensional) ಸಾಲುಗಳನ್ನಾಗಿ ಕಲ್ಪಿಸಿಕೊಳ್ಳಬಹುದು. ಅಂದರೆ 256 X 256 X 256. ಅಂದರೆ ತಲಾ ಕೆಂಪು ಹಸಿರು ನೀಲಿ ಬಣ್ಣಗಳ 256 ವಿವಿದ ಮಟ್ಟದ ಆಳ ಮತ್ತು ಕಾಂತಿಗಳು.
ಉದಾಹರಣೆಗೆ ಕೆಂಪು ಹಸಿರು ನೀಲಿ ಬಣ್ಣಗಳ ಬೆಲೆ 0 ಆಗಿದ್ದರೆ ಆ ಪಿಕ್ಸೆಲ್ ಕಪ್ಪು ಬಣ್ಣವನ್ನು ಪ್ರತಿನಿದಿಸುತ್ತದೆ. ಕೆಂಪು ಹಸಿರು ಬಣ್ಣಗಳು 0 ಆಗಿದ್ದು ನೀಲಿ ಬಣ್ಣದ ಬೆಲೆ 230 ಆಗಿದ್ದರೆ ಆ ಪಿಕ್ಸೆಲ್ ಬಿರುಸಾದ ನೀಲಿ ಬಣ್ಣವನ್ನು ಪ್ರತಿನಿದಿಸುತ್ತದೆ. ಹಸಿರು ಮತ್ತು ಕೆಂಪು ಬಣ್ಣಗಳು ಕ್ರಮವಾಗಿ 100 ಹಾಗೂ 125 ಆಗಿದ್ದು ನೀಲಿಯ ಬೆಲೆ 10 ಆಗಿದ್ದರೆ ಆ ಪಿಕ್ಸೆಲ್ ನ ಬಣ್ಣ ತಿಳಿ ಹಳದಿ ಆಗಿರುತ್ತದೆ. ಈ ರೀತಿ ಮೂರೂ ಬಣ್ಣಗಳ ಮೊಗಬೆಲೆಯನ್ನು ಬದಲಾಯಿಸುತ್ತ ಹೋದಂತೆ 224 , 16, 777, 216 ಬಣ್ಣಗಳನ್ನು ಬಿಂಬಿಸಬಹುದು. ಹಸಿರು ನೀಲಿ ಹಾಗೂ ಕೆಂಪುಗಳ ಬಣ್ಣತಂಡವನ್ನು RGB (Red Green Blue ನ ಚಿಕ್ಕ ರೂಪ) ಎಂದು ಕರೆಯಲಾಗುತ್ತದೆ.
(24 ಬಿಟ್ ಬಣ್ಣತಿಟ್ಟ)
ವಿವಿದ ಬಣ್ಣ ಮಾದರಿಗಳು:
ಕೆಂಪು ಹಸಿರು ನೀಲಗಳಂತೆಯೇ ವಿವಿದ ಬಣ್ಣಗಳನ್ನು ಪ್ರತಿನಿದಿಸಲು ಈ ರೀತಿಯ ಮೂಲಬಣ್ಣಗಳ ಗುಂಪುಗಳಿವೆ. ಅವುಗಳಲ್ಲಿ ಅತ್ಯಂತ ಪ್ರಮುಕವಾದುದು CMY ( Cyon-> ಗಾಡ ನೀಲಿ ಮತ್ತು ಹಸಿರು ಬಣ್ಣಗಳ ಮಿಶ್ರಿತಬಣ್ಣ , Megenta -> ಕೆನ್ನೀಲಿ ಬಣ್ಣ, Yellow ->ಹಳದಿ ಬಣ್ಣ). RGB ಯಂತೆಯೇ CMY ಗಳಿಗೂ ಬೇರೆ ಬೇರೆ ಬೆಲೆಗಳನ್ನು ನೀಡಿ ವಿವಿದ ಬಣ್ಣಗಳನ್ನು ಹುಟ್ಟುಹಾಕಬಹುದು. RGB ಯನ್ನು ಬಲ (+VE) ಬಣ್ಣಗಳೆಂದು ಕರೆಯಲಾಗುತ್ತದೆ. RGB ಹಾಗೂ CMY ಪೂರಕ ಬಣ್ಣಗಳು. RGB ಗಳನ್ನು 1 ರಿಂದ ಕಳೆದರೆ CMY ಬಣ್ಣಗಳು ಸಿಗುತ್ತವೆ. ಆದ್ದರಿಂದ CMY ಬಣ್ಣಗಳನ್ನು ಎಡ ಬಣ್ಣಗಳೆನ್ನುತ್ತಾರೆ. CMY ನ ಮೂರು ಬಣ್ಣಗಳ ಬೆಲೆ 0 ಆಗಿದ್ದರೆ ಬಿಳಿ ಹಾಗೂ 1 ಇದ್ದರೆ ಪಿಕ್ಸೆಲ್ ಬೆಲೆ ಕಪ್ಪು ಆಗಿರುತ್ತದೆ ಅಂದರೆ RGB ಯ ಉಲ್ಟಾ.
(CMY)
ತಿಟ್ಟದ ಕಿರಿಗಾಣು (Image Resolution):
ತಿಟ್ಟದ ಕಿರಿಗಾಣು ಎಂದರೆ ಒಂದು ತಿಟ್ಟದಲ್ಲಿನ ಪಿಕ್ಸೆಲ್ ಗಳ ಒಟ್ಟು ಸಂಕ್ಯೆ. ಬಹುತೇಕ ತಿಟ್ಟಗಳು 4:3 ಅನುಪಾತದಲ್ಲಿರುತ್ತವೆ. ಇದು ಕಡ್ಡಾಯವಲ್ಲದಿದ್ದರೂ ನೋಡುವ ಕಣ್ಣುಗಳಿಗೆ ಸಹಜತೆ ಕಾಣಲು ಇದು ಅವಶ್ಯಕ ಎನ್ನಬಹುದು. ಡಿಜಿಟಲ್ ಕ್ಯಾಮೆರಾಗಳ ನಿಕರತೆಯನ್ನು ಹಾಗೂ ಗುಣಮಟ್ಟಗಳನ್ನು ಅಳೆಯುವಾಗ ನೀವು ಮೆಗಾಪಿಕ್ಸೆಲ್, 5 ಮೆಗಾಪಿಕ್ಸೆಲ್ ಕ್ಯಾಮೆರಾ ಎಂದು ಬಣ್ಣಸುವುದನ್ನು ಕೇಳಿರಬಹುದು. ಮೂಲ ರೂಪದ ಕ್ಯಾಮೆರಾ ಎಂದರೆ VGA (Vedio Graphical Array) ಕ್ಯಾಮೆರಾ. ಈ ಕ್ಯಾಮೆರಾದ ಮೂಲಕ ತೆಗೆದ ತಿಟ್ಟಗಳು 640 ಅಡ್ಡಸಾಲುಗಳ ಹಾಗೂ 480 ಉದ್ದ ಸಾಲುಗಳ ಅಂಕೆಮಣೆಗಳ ರೂಪದಲ್ಲಿರುತ್ತವೆ. ಇದರಲ್ಲಿ 640 X 480 = 307200 ಪಿಕ್ಸೆಲ್ ಗಳಿರುತ್ತವೆ. ಇದು ಮೂಲ ಅಳತೆ 640 X 480 ಅಳತೆ ಎಣುಕದ ಸಿ ಆರ್ ಟಿ ಪರದೆಗೆ ಸರಿಯಾಗಿ ಹೊಂದಿಕೆಯಾಗುತ್ತದೆ. ಇದರ ಎರಡುಪಟ್ಟು ಅಂದರೆ 1280 X 960 ಪಿಕ್ಸೆಲ್ ಗಳ ನಿಕರತೆಯನ್ನು 1.2 ಅತವಾ 1.3 ಮೆಗಪಿಕ್ಸೆಲ್ ಎನ್ನುತ್ತಾರೆ. ಏಕೆಂದರೆ ಈ ನಿಕರತೆಯಲ್ಲಿ 12,28,800 ಪಿಕ್ಸೆಲ್ ಗಳಿರುತ್ತವೆ. ಹಾಗೆಯೇ ಮೂಲ ಅಳತೆಯ ಮೂರು , ನಾಲ್ಕು ಪಟ್ಟು ಅಳತೆಗಳನ್ನು 2.5 ಮೆಗಾಪಿಕ್ಸೆಲ್ ಗಳೆಂದು ಗುರುತಿಸುತ್ತಾ ಹೋಗುತ್ತಾರೆ.
ಜನಪ್ರಿಯ ಕಡತ ಮಾದರಿಗಳು:
ಎಣ್ಣುಕಗಳಲ್ಲಿ ಬಹುತೇಕ ಮಾಹಿತಿಗಳನ್ನು ಕಡತಗಳ ರೂಪದಲ್ಲಿ ಸಂಗ್ರಹಿಸಿಡಲಾಗುತ್ತದೆ. ಅದೇ ರೀತಿಯಲ್ಲಿ ತಿಟ್ಟಗಳನ್ನೂ ಕೂಡ ಕಡತಗಳನ್ನಾಗಿ ಕಾಪಿಡಲಾಗುತ್ತದೆ. ಈ ರೀತಿಯ ವಿವಿದ ಕಡತಗಳ ಮಾದರಿಗಳೆಡೆಗೆ ಹಕ್ಕಿನೋಟ ಇಲ್ಲಿದೆ.
GIF ಮಾದರಿ:
Grapics Interchange Format ಎಂಬ ಈ ರೀತಿಯ ಕಡತಗಳ ಮಾದರಿಯನ್ನು ತಯಾರಿಸಿದವರು ಯುನಿಸಿಸ್ ಕಾರ‍್ಪೋರೇಶನ್ ಕಂಪನಿಯವರು. ಇದು 8 ಬಿಟ್ ತಿಟ್ಟಗಳನ್ನು ಸಂಗ್ರಹಿಸಲು ಹಾಗೂ ತೋರಿಸಲು ಮಾತ್ರ ಬಳಕೆಯಾಗುತ್ತದೆ. ಗ್ರಾಪಿಕ್ ಹಾಗೂ ಗೆರೆತಿಟ್ಟಗಳನ್ನೂ ಈ ಮಾದರಿಯಲ್ಲಿ ಶೇಕರಿಸಬಹುದು. HTML ನಂತಹ ಮಿಂಬಲೆ ಆದಾರಿತ ನುಡಿಗಳಲ್ಲಿ ಇದು ಅತ್ಯಂತ ಜನಪ್ರಿಯವಾಗಿ ಬಳಕೆಯಲ್ಲಿದೆ. ಈ ರೀತಿಯ ಕಡತ ಮಾದರಿಯನ್ನು ತೆರೆಯ ಹಿಂದೆ ಸರಿಸಲು ನಡುವೆ ಪ್ರಯತ್ನಿಸಲಾಗಿತ್ತಾದರೂ, ಇವು ಅನಿಮೇಶನ್ ಹಾಗೂ ಗ್ರಾಪಿಕ್ಸ್ ಗಳನ್ನು ಬೆಂಬಲಿಸುವುದರಿಂದ ಇಂದಿಗೂ ಮಿಂಬಲೆ ಜಾಹೀರಾತು ತೋರುಕಗಳಲ್ಲಿ ಜನಪ್ರಿಯತೆಯನ್ನು ಉಳಿಸಿಕೊಂಡಿದೆ.
PNG ಮಾದರಿ:
Portable Network Graphics ಎಂಬ ಈ ಕಡತ ಮಾದರಿಯು ಗ್ರಾಪಿಕ್ಸ್ ಹಾಗೂ ಅನಿಮೇಶನ್ ಗಳ ಬಳಕೆಗೆ ಪ್ರಸಿದ್ದಿಯಾಗಿದೆ. ಅನೇಕ ರೀತಿಯಲ್ಲಿ ಇದು GIF ಗಿಂತ ಉತ್ತಮವಾದದ್ದು. GIF ಗಿಂತ ಹೆಚ್ಚಿನ ವೇದಿಕೆಗಳಲ್ಲಿ ಅಂದರೆ ವಿವಿದ ರೀತಿಯ ಆಪರೇಟಿಂಗ್ ಸಿಸ್ಟಮ್ ಹಾಗೂ ಹಾರ್‍ಡವೇರ್‍ಗಳಲ್ಲಿ ಈ ಮಾದರಿಯನ್ನು ಬಳಸಬಹುದು. ಆದ್ದರಿಂದ ಇದು ಹೆಚ್ಚು ವೇದಿಕೆ ಹೊರತಾದ(Platform Independent) ಹಾಗೂ ಸಾಗಿಸಲ್ಪಡಬಲ್ಲ(Portable) ಕಡತ ಮಾದರಿ. ಈ ಮಾದರಿಯ ಕಡತಗಳು 48 ಬಿಟ್ ಅತವಾ 6 ಬಯ್ಟ್ ಗಳ ಬಣ್ಣ ಮಾಹಿತಿಯನ್ನು ಪ್ರತಿನಿದಿಸಬಲ್ಲವು. ಅಲ್ಲದೇ ತಿಟ್ಟವನ್ನು ಪರದೆಯ ಮೇಲೆ ಬಿಂಬಿಸುವಾಗ ಚಿಕ್ಕಪುಟ್ಟ ದೋಶಗಳಿದ್ದರೆ ಸ್ವಯಂ ಸರಿಪಡಿಸಿಕೊಳ್ಳಬಹುದಾದಂತೆ ಈ ಕಡತಮಾದರಿಯನ್ನು ಅಬಿವ್ರುದ್ದಿಪಡಿಸಲಾಗಿದೆ.
TIFF ಮಾದರಿ:
Tagged Image File Format . ಇದು PNG ಮಾದರಿ ಬರುವುದಕ್ಕೆ ಮುಂಚಿನ ದಿನಗಳಲ್ಲಿ ಅತ್ಯಂತ ಜನಪ್ರಿಯವಾಗಿತ್ತು. 1980 ರ ದಶಕದಲ್ಲಿ ಆಲ್ಡಸ್ ಕಾರ‍್ಪೋರೇಶನ್ ಈ ಮಾದರಿಯನ್ನು ಅಬಿವ್ರುದ್ದಿಪಡಿಸಿತು. ನಂತರ ಈ ಮಾದರಿಯನ್ನು ಮಯ್ಕ್ರೊಸಾಪ್ಟ್ ಅನುಮೋದಿಸಿತು. ಇದರ ವಿಶೇಶತೆ ಎಂದರೆ TAG. ನಾವು ಇದಕ್ಕೆ ಬಾಲಂಗೋಚಿ ಎನ್ನೋಣ. ಈ ಬಾಲಂಗೋಚಿಯು ತಿಟ್ಟವು ಯಾವ ರೂಪದಲ್ಲಿ ಸಂಗ್ರಹವಾಗಿದೆ ಎಂದು ತಿಳಿಸುತ್ತದೆ. ಈ ರೀತಿಯ ಕಡತದಲ್ಲಿ 1 ಬಿಟ್, ನರೆತಿಟ್ಟ, 8-ಬಿಟ್, 24-ಬಿಟ್ ಇತ್ಯಾದಿ ರೂಪಗಳಲ್ಲಿ ತಿಟ್ಟಗಳನ್ನು ಸಂಗ್ರಹಿಸಿಡಬಹುದು. ಬಾಲಂಗೋಚಿಯು ಈ ಮೇಲಿನ ಯಾವ ರೂಪದಲ್ಲಿ ತಿಟ್ಟವು ಕೂರಿಸಲ್ಪಟಿದೆ ಎಂದು ತಿಳಿಸುತ್ತದೆ.
EXIF ಮಾದರಿ:
Exchange Image File ಡಿಜಿಟಲ್ ಕ್ಯಾಮೆರಾಗಳಿಗಾಗಿ ಸಿದ್ದಪಡಿಸಿದ ಕಡತ ಮಾದರಿ ಇದು. ಮೊದಲು 1995 ರಲ್ಲಿ ಜಪಾನ್ ಎಲೆಕ್ಟ್ರಾನಿಕ್ ಅಂಡ್ ಇನ್ಪರ್‍ಮೇಶನ್ ಟೆಕ್ನಾಲಾಜಿ ಇಂಡಸ್ಟ್ರೀಸ್ ಅಸೋಸಿಯೇಶನ್ ಈ ಮಾದರಿಯನ್ನುಅಬಿವ್ರುದ್ದಿಪಡಿಸಿತು. ಈ ರೀತಿಯ ಕಡತ ಮಾದರಿಗಳಲ್ಲಿ ಚಾಯಾತಿಟ್ಟವನ್ನು ಜೆಪೆಗ್ (JPEG) ತಂತ್ರಗ್ನಾನದಿಂದ ಸಂಕುಚಿಸಿ ಸಂಗ್ರಹಿಸಲಾಗುತ್ತದೆ. ಚಾಯಾ ತಿಟ್ಟಗಳ ಮುದ್ರಣಕ್ಕಾಗಿ ಈ ಮಾದರಿಯ ಕಡತವನ್ನು ಉಪಯೋಗಿಸುವುದರಿಂದ ತಿಟ್ಟವನ್ನು ತೆಗೆಯುವಾಗಿನ ಬೆಳಕಿನ ಮೂಲ, ಪ್ಲ್ಯಾಶ್, ಗಾಜಿನ ನಡು ಇತ್ಯಾದಿ ಮಾಹಿತಿಗಳನ್ನು ತಿಟ್ಟದ ಜೊತೆಗೆ ಒದಗಿಸಲಾಗುತ್ತದೆ. ಅಚ್ಚು ಬಿಣಿಗೆಗಳು ಈ ಮಾಹಿತಿಯ ಆದಾರದ ಮೇಲೆ ತಿಟ್ಟವನ್ನು ಸಂಗ್ರಹಿಸುವಾಗ ಹಾಗೂ ವರ್‍ಗಾಯಿಸುವಾಗ ಆದ ತಪ್ಪುಗಳನ್ನು ಇಲ್ಲಗೊಳಿಸಿ ತಿಟ್ಟಗಳನ್ನು ಸ್ಪಶ್ಟವಾಗಿ ಮುದ್ರಿಸುತ್ತವೆ. ಅಲ್ಲದೆ ಈ ರೀತಿಯ ಕಡತಗಳಲ್ಲಿ ಆ ತಿಟ್ಟಕ್ಕೆ ಪೂರಕವಾದ ದ್ವನಿಯನ್ನು ಸಂಗ್ರಹಿಸುವ ವ್ಯವಸ್ತೆ ಮಾಡಲಾಗಿದೆ.
ಇತ್ತೀಚಿನ ಅನಿಸಿಕೆಗಳು