ಕರ‍್ಣ

ಗೀತಾಮಣಿ

ಕುರುವಂಶದ ಕುಡಿಯ
ಸ್ನೇಹಕೆ ಮನಸೋತು,
ಸಂತಸದಿಂದ ಪ್ರಾಣವನ್ನೇ
ಅವನ ಹೆಸರಿಗೆ ಬರೆದುಬಿಟ್ಟ
ಗಂಗಾಸುತ ಕರ‍್ಣ!

ಪಿತ ಕೊಟ್ಟ ಎಚ್ಚರಿಕೆಯ
ಬದಿಗೊತ್ತಿ, ವೇಶದಾರಿಗೆ
ಕರ‍್ಣಕುಂಡಲ, ಕವಚಗಳ
ದಾರಾಳವಾಗಿ
ದೇಹದಿಂದ ಸುಲಿಸುಲಿದುಕೊಟ್ಟ
ದಾನವೀರ ಕರ‍್ಣ!

ತನ್ನ ಹುಟ್ಟಿನ ಗುಟ್ಟ
ಬಿಚ್ಚಿಟ್ಟ ತಾಯಿಗೆ,
ನೋವ ಮುಚ್ಚಿಟ್ಟು
ಉಳಿದಯ್ದು ಮಕ್ಕಳ
“ಕೊಲ್ಲೆ”ನೆಂಬ ಮಾತುಕೊಟ್ಟ
ಸೂರ‍್ಯಪುತ್ರ ಕರ‍್ಣ!

ಮಂದಿಯನಿಸಿಕೆಗೆ ಬೆದರಿ
ಹೆರುತ್ತಲೇ ನೀರುಪಾಲು
ಮಾಡಿದ ಹೆತ್ತಮ್ಮನನ್ನು
ಕ್ರವ್ರ್ಯಕ್ಕೆಳೆಸಿದ
ಅಸಹಾಯಕತೆಗೆ,
ಮುಳುಮುಳುಗಿ ತೇಲಿದ ಬದುಕು,
ಬರೆದಿರಬಹುದಾದ “ನಾಳೆ”ಯ
“ಅಳಿವ” ಅರಿವಿಗೆ,
ಒಂಟಿಯಾಗಿ ನರಳಿದ
ಕವ್ರವ ಸಕ ಕರ‍್ಣ!

ಹೆಪ್ಪುಗಟ್ಟಿದ ದುಕ್ಕದ
ಮಡುವಾದ ಹ್ರುದಯ!
ರೋಶ, ಆವೇಶ,
ಹತಾಶೆ, ವಿಶಾದಗಳ
ಕಡಲು ಅವನೊಡಲು!
“ನ್ಯಾಯ”ಕ್ಕಾಗಿ ನಡೆದ “ಹೋರಾಟ”ದಲ್ಲಿ
“ಅನ್ಯಾಯ”ವಾಗಿ ನಲುಗಿದ
ಪ್ರತಮ ಪಾಂಡವ ಕರ‍್ಣ!?

ನಿಜಕ್ಕೂ…….
ಅರ‍್ಜುನನ ಬಾಣಕ್ಕೇ
ಪ್ರಾಣ ತೆತ್ತನೇ
ಕುಂತೀಸುತ ಕರ‍್ಣ!?

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: