ಮಹಾಪ್ರಾಣವು ಕನ್ನಡಿಗರ ಮಾತಿನಲ್ಲಿ ಇಲ್ಲ

– ಚೇತನ್ ಜೀರಾಳ್.

Mahaprana(ಇದು ದಟ್ಸ್ ಕನ್ನಡದಲ್ಲಿ ಮೂಡಿಬಂದ ಬರಹಕ್ಕೆ ನೀಡಿರುವ ಪ್ರತಿಕ್ರಿಯೆ.) 

ಉತ್ತರ ಕರ‍್ನಾಟಕದಲ್ಲಿ ಮಾತನಾಡಲಾಗುವ ಕನ್ನಡದಲ್ಲಿ ಮಹಾಪ್ರಾಣಗಳಿವೆ ಎಂಬ ಮಾತು ಇತ್ತೀಚೆಗೆ ಕೇಳಿಬಂತು. ಕನ್ನಡದ ಮಾತಿನಲ್ಲಿ ಮಹಾಪ್ರಾಣಗಳಿಲ್ಲ ಎಂದು ಹೇಳುವ ಮೂಲಕ ಉತ್ತರ ಕರ‍್ನಾಟಕ ಮತ್ತು ದಕ್ಶಿಣ ಕರ‍್ನಾಟಕದ ನಡುವೆ ಒಡಕು ಮೂಡಿಸಲಾಗುತ್ತಿದೆ ಎಂಬಂತಹ ಆಪಾದನೆಗಳನ್ನೂ ಮಾಡಲಾಯಿತು. ಈ ಬಗೆಯಲ್ಲಿ ಮೂಡಿಬರುತ್ತಿರುವ ವಾದಗಳ ಬಗ್ಗೆ ನನ್ನ ಕೆಲವು ಅನಿಸಿಕೆಗಳನ್ನು ಈ ಬರಹದ ಮೂಲಕ ಜನರ ಮುಂದಿಡುತ್ತಿದ್ದೇನೆ.

ಈ ಬರಹ ನುಡಿಯರಿಮೆಗೆ ಸಂಬಂದಿಸಿದ್ದರೂ, ಇದು ಜನರ ಜೀವನದ, ಸಾಮಾಜಿಕ ಹಾಗೂ ಸಾಂಸ್ಕ್ರುತಿಕ ಆಯಾಮ ಹೊಂದಿರುವ ಕಾರಣ ಜಾತಿಗಳ ಹೆಸರುಗಳನ್ನು ಬಳಸಿಕೊಂಡಿದ್ದೇನೆ. ಮೊದಲನೆಯದಾಗಿ ನಾನೂ ಕೂಡ ಉತ್ತರ ಕರ‍್ನಾಟಕದವನೇ. ನನ್ನ ಊರು ಕೊಪ್ಪಳ ಜಿಲ್ಲೆಯ ಮಸಬಹಂಚಿನಾಳ ಎಂಬ ಹಳ್ಳಿ. ನನ್ನ ಬದುಕಿನ ಹಲವಾರು ವರ‍್ಶಗಳನ್ನು ಉತ್ತರ ಕರ‍್ನಾಟಕದ ಬೇರೆ ಬೇರೆ ಜಿಲ್ಲೆಗಳಲ್ಲಿ ಕಳೆದಿದ್ದೇನೆ.

ಮೊದಲನೆಯದಾಗಿ, “ಉತ್ತರ ಕರ‍್ನಾಟಕದ ಕನ್ನಡದಲ್ಲಿ ಮಹಾಪ್ರಾಣ ಉಲಿಕೆಯಿದೆ” ಎನ್ನುವವರು ನೀಡುವ ಉದಾಹರಣೆಗಳನ್ನು ನೋಡೋಣ. ಖರೇ, ಖಿಡಕಿ, ಫಕ್ತ್, ಘಂಟಿ, ಝರಿ, ಝುಣಕ, ಭಾಮ್ಟ್ಯಾ, ಢೇಪ್ಯಾ, ಠೇವಣಿ, ಥಾಬಾಣ, ಧೋತ್ರ ಪದಗಳನ್ನು ನೋಡಿದರೆ ಇವುಗಳಲ್ಲಿ ಹೆಚ್ಚಿನವನ್ನು ಮರಾಟಿ ಬಾಶೆಯ ಪ್ರಬಾವಕ್ಕೆ ಒಳಗಾಗಿರುವವರು ಆಡುವುದು ಎಂಬುದು ಕಾಣುತ್ತದೆ. ಈ ತರಹದ ಪ್ರಬಾವವನ್ನು ಉತ್ತರ ಕರ‍್ನಾಟಕದ ಕೆಲವು ಕಡೆ, ಕೆಲವು ಮನೆತನಗಳಲ್ಲಿ ಹಾಗೂ ಜಾತಿಗಳಲ್ಲಿ ಕಾಣಬಹುದಾಗಿದೆ.

ಹಿಂದೆ ಪೇಶ್ವೆಯವರ ಆಡಳಿತ ದಾರವಾಡ ಜಿಲ್ಲೆಯವರೆಗೂ ಹಬ್ಬಿತ್ತು ಹಾಗೂ ಇದರ ಜೊತೆಗೆ ಬೇರೆ ಬೇರೆ ಸಂಸ್ತಾನಗಳು ಕೂಡ ಪೇಶ್ವೆ ಆಳ್ವಿಕೆಯನ್ನು ಒಪ್ಪಿಕೊಂಡಿದ್ದವು. ಆ ಸಮಯದಲ್ಲಿ ಮರಾಟಿ ಆಡಳಿತ ಬಾಶೆಯಾಗಿತ್ತು. ಆಗ ಕನ್ನಡ ಬಾಶೆಯ ಮೇಲೆ ಮರಾಟಿ ಪ್ರಬಾವ ತುಂಬಾ ಇತ್ತು ಹಾಗೂ ಅದರ ಹಲವಾರು ಪದಗಳು ಕನ್ನಡದಲ್ಲಿ ಹೊಕ್ಕಿವೆ (ಇದು ಹೆಚ್ಚಾಗಿ ಮುಂಬಯ್ ಕರ‍್ನಾಟಕದ ಬಾಗದಲ್ಲಿ ಕಾಣಿಸುತ್ತದೆ). ಆಗ ಅವರ ಅಡಿಯಲ್ಲಿ ಕೆಲಸ ಮಾಡುತ್ತಿದ ಹಲವಾರು ಮನೆತನಗಳ (ಇವರ ತಾಯಿನುಡಿ ಕನ್ನಡವಾಗಿತ್ತು) ಹಾಗೂ ಮಹಾರಾಶ್ಟ್ರದಿಂದ ವಲಸೆ ಬಂದು ನೆಲೆಸಿರುವ ಮನೆತನಗಳ (ಇವರ ತಾಯಿನುಡಿ ಮರಾಟಿಯಾಗಿದ್ದು ನಂತರ ಕನ್ನಡವನ್ನು ಒಪ್ಪಿಕೊಂಡವರು) ಹಾಗೂ ಒಂದಶ್ಟು ಬ್ರಾಹ್ಮಣ ಮನೆತನಗಳವರ ಮಾತುಗಳಲ್ಲಿ ಈ ತರಹದ ಪದಗಳನ್ನು ನೋಡಬಹುದು. ಕೆಲವು ಮನೆತನಗಳಲ್ಲಿ ಸಂಸ್ಕ್ರುತ ಬಾಶೆಯ ಪ್ರಬಾವ ಹಾಗೂ ಅವರ ಹಿಂದಿನ ಕಸುಬುಗಳು ಇಂತಹ ಪದಗಳನ್ನು ಬಳಸುತ್ತಿರುವುದಕ್ಕೆ ಕಾರಣವಿರಬಹುದು. ಇತ್ತೀಚಿಗೆ ಕೆಲವು ವರ‍್ಶಗಳಿಂದ ಮೂಡಿಬರುತ್ತಿದ್ದ ಮೂಡಲಮನೆ, ಮಹಾನವಮಿ ಮುಂತಾದ ದಾರಾವಹಿಗಳು ಮಹಾಪ್ರಾಣವಿರುವ ಬಾಶೆಯನ್ನು ಬಳಸಿದ್ದರಿಂದ ಜನರಿಗೆ ಉತ್ತರ ಕರ‍್ನಾಟಕದವರು ಮಹಾಪ್ರಾಣವಿರುವ ಕನ್ನಡವನ್ನು ಮಾತನಾಡುತ್ತರೆ ಅನ್ನುವ ಕಲ್ಪನೆ ಬಂದಿರಬಹುದು.

ಉತ್ತರ ಕರ‍್ನಾಟಕದ ಇತರೇ ಜಾತಿಯವರ (ಲಿಂಗಾಯಿತರು, ಕುರುಬರು, ಈಳಿಗೇರು, ಮಡಿವಾಳರು, ಮುಸಲ್ಮಾನರು, ಜಯ್ನರು, ಮುಂತಾದವರ) ಮನೆತನಗಳಲ್ಲಿ, ಅತವಾ ಮಹಾರಾಶ್ಟ್ರದಲ್ಲಿರುವ ಜತ್ತ, ಅಕ್ಕಲಕೋಟೆ, ಸೊಲ್ಲಾಪುರದ ಕನ್ನಡಿಗರಲ್ಲಾಗಲಿ ಈ ತರಹದ ಪದಗಳನ್ನು ಬಳಸುವ ಅತವಾ ಬಳಸಿದರೂ ಮಹಾಪ್ರಾಣಗಳನ್ನು ಬಳಸಿ ಮಾತನಾಡುವ ಬಗೆಯನ್ನು ಕೇಳಲು ಸಿಗುವುದಿಲ್ಲ.

ಉತ್ತರ ಕರ‍್ನಾಟಕದ ಕನ್ನಡ ಎಂದಿಗೂ ಮಹಾಪ್ರಾಣಗಳನ್ನು ನೆಚ್ಚಿಕೊಂಡು ಬಂದಿರುವ ಬಾಶೆಯಲ್ಲ. ಸಂಸ್ಕ್ರುತ, ಮರಾಟಿ, ಪಾರ‍್ಸಿ, ತೆಲುಗು, ಉರ‍್ದು ಬಾಶೆಗಳ ಪದಗಳು ಕನ್ನಡಕ್ಕೆ ಬಂದಿವೆ ಹಾಗೂ ಕನ್ನಡದ ಸೊಗಡಿಗೆ ಒಗ್ಗಿಕೊಂಡು ಕನ್ನಡದ ಪದಗಳೇ ಆಗಿವೆ. ಎತ್ತುಗೆಗೆ ನಮ್ಮ ಸೀಮೆಯಲ್ಲಿ ಕೋಣೆಗೆ ಕೋಲಿಯಂದು ಕರೆಯುತ್ತೇವೆ, ಇದು ಮರಾಟಿಯ ಖೋಲಿ ಪದದ ಕನ್ನಡ ರೂಪ. ಪಾತ್ರೆ ಸಾಮಾನುಗಳಿಗೆ ಬಾಂಡೆ ಸಾಮಾನು ಅನ್ನುತ್ತೇವೆ. ಇದು ಮರಾಟಿಯ ಭಾಂಡೆ ಯಿಂದ ಬಂದಿರುವ ಪದ. ನಾವು ನಿಜ ಅನ್ನುವುದಕ್ಕೆ ಕರೆ (ಖರೆ ಎಂದು ಕರೆಯುವುದಿಲ್ಲ) ಎಂದು ಅನ್ನುತ್ತೇವೆ. ಜನರು ಎಶ್ಟು ಗಂಟಿ ಆಗ್ಯೇತಿ ಅಂತ ಕೇಳ್ತಾರೇ ಹೊರತು ಎಷ್ಟು ಘಂಟೆ ಆಗ್ಯೇತಿ ಅಂತ ಕೇಳುವುದಿಲ್ಲ (ಗಮನಿಸಿ ಷ ದ ನಂತರ ಬರುವ ಘ ಎರಡನ್ನು ಒಂದೇ ಬಾರಿ ಇದ್ದಂತೆ ಹೇಳುವುದಕ್ಕೆ ತೊಂದರೆ ಎನ್ನಿಸುತ್ತದೆ). ಹೀಗೆ ಇಂತಹ ಎತ್ತುಗೆಗಳು ಹಲವಾರಿವೆ. ಉತ್ತರ ಕರ‍್ನಾಟಕದ ಎಲ್ಲರೂ ಮಹಾಪ್ರಾಣಗಳಿರುವ ಪದಗಳನ್ನು ಬಳಸುವುದಿಲ್ಲ. ಬೇರೆ ಬಾಶೆಯ ಪದಗಳನ್ನು ಸಹ ತಮ್ಮ ಆಡುನುಡಿಗೆ ಹತ್ತಿರುವಾಗುವಂತೆ ಬದಲಾಯಿಸಿಕೊಂಡಿದ್ದಾರೆ.

ಇನ್ನು ಉತ್ತರ ಕರ‍್ನಾಟಕದ ಸಾಹಿತ್ಯದಲ್ಲಿ ಮಾಹಾಪ್ರಾಣಗಳ ಬಳಕೆ ಹೆಚ್ಚು ಅನ್ನುವುದು ಕೂಡ ಬಾಲಿಶತನವಾಗಿ ಕಾಣಿಸುತ್ತದೆ. ಉತ್ತರ ಕರ‍್ನಾಟಕದ ಅನೇಕ ಬರಹಗಾರರ ಕತೆ, ಕಾದಂಬರಿ, ಕವಿತೆ ಮುಂತಾದವುಗಳಲ್ಲಿ ಬಳಕೆಯಾಗಿರುವ ಮಹಾಪ್ರಾಣಗಳ ಬಳಕೆ ಎಶ್ಟು? ಗಮನಿಸಿ ಉತ್ತರ ಕರ‍್ನಾಟಕದ ಸೊಗಡು ಎಂದಾಗ ಉತ್ತರ ಕರ‍್ನಾಟಕದ ಆಡುನುಡಿಯಂತೆ ಬರೆದಿರುವ ಸಾಹಿತ್ಯದಲ್ಲಿ ಎಶ್ಟರ ಮಟ್ಟಿಗೆ ಮಹಾಪ್ರಾಣಗಳು ಸಿಗುತ್ತವೆ? ಕಂಬಾರ, ಶಂಕರ ಮೊಕಾಶಿ ಪುಣೇಕರ್, ಶಂ. ಬಾ. ಜೋಶಿ, ಬೇಂದ್ರೆ, ಕಾರ್‍ನಾಡ, ಚನ್ನವೀರ ಕಣವಿ, ಹಿಂದಿನ ಕಲ್ಯಾಣದ ಶರಣರು, ಜೋಗೇರ್ ಪದಗಳು, ಶಿಶುನಾಳ ಶರೀಪರ ತತ್ವಪದಗಳು, ಜನಪದ ಗೀತೆಗಳು ಹೀಗೆ ಎಲ್ಲ ಪ್ರಕಾರದ ಸಾಹಿತ್ಯದಲ್ಲಿ ಇರುವ ಮಹಾಪ್ರಾಣಗಳ ಪಾಲೆಶ್ಟು? ತೀರಾ ಕಡಿಮೆ ಅನ್ನುವಶ್ಟಿದೆ.

ಡಾ. ಡಿ. ಎನ್. ಶಂಕರ್ ಬಟ್ ಅವರು ಎಲ್ಲೂ ಸಹ ಮಹಾಪ್ರಾಣಗಳನ್ನು ಬಳಸಲೇ ಕೂಡದು ಎಂದು ಕಟ್ಟಳೆಯನ್ನು ಹಾಕಿಲ್ಲ. ಹಾಗಾಗಿ ಬರಹಗಾರರು ಮಹಾಪ್ರಾಣಗಳನ್ನು ಬಳಸಿಕೊಂಡೇ ಬರಹಗಳನ್ನು ಮಾಡಬೇಕೆನಿಸಿದ್ದಲ್ಲಿ ಹಾಗೆ ಮಾಡಬಹುದು ಅದನ್ನು ಬೇಡ ಎಂದು ಹೇಳುವ ಹಕ್ಕು ಯಾರಿಗೂ ಇಲ್ಲ. ಹಾಗೆಯೇ ಬೇರೆಯವರು ತಮಗೆ ಬೇಕಾದ ಹಾಗೆ ಬರಹವನ್ನು ಆಡುನುಡಿಗೆ ಹತ್ತಿರವಾಗುವಂತೆ ಮಾಡಿಕೊಂಡರೆ ಯಾಕೆ ಬಾಶೆ ಹಾಳಾಯಿತು ಎಂದು ಹುಯಿಲೆಬ್ಬಿಸುವುದು? ಇಶ್ಟಕ್ಕೂ ನಾನು ಮಾತನಾಡುವ ಕನ್ನಡವೇ ಸರಿ ನೀವು ಮಾಡುತ್ತಿರುವುದು ತಪ್ಪು ಎನ್ನುವ ನಿಲುವಿಗೆ ಬಂದಿದ್ದಾದರೂ ಹೇಗೆ?

ನುಡಿಗೆ ಅನುಗುಣವಾಗಿ ಬರಹವಿರಬೇಕು, ಬರಹ ಎಲ್ಲಾ ಜನರ ನುಡಿಯನ್ನು ಒಳಗೊಳ್ಳುವಂತಿರಬೇಕು, ನುಡಿಗೆ ಜಾತಿ, ದರ‍್ಮ, ಸಂಸ್ಕ್ರುತಿ, ಕಟ್ಟಳೆಗಳನ್ನು ಅರಗಿಸಿಕೊಂಡು ಎಲ್ಲರ ನುಡಿಯಾಗಿ ನಿಲ್ಲುವ ಶಕ್ತಿಯಿದೆ, ಈ ಶಕ್ತಿಯನ್ನು ನಾವು ಬರಹಕ್ಕೂ ನೀಡಬೇಕಾದಲ್ಲಿ ಅದನ್ನು ನುಡಿಗೆ ಹತ್ತಿರವಾಗುವಂತೆ ಮಾಡಬೇಕು ಇದಕ್ಕೆ ಡಾ. ಡಿ. ಎನ್. ಶಂಕರ್ ಬಟ್ ಅವರ ಹೊಸ ಬರಹ ಮೊದಲ ಮೆಟ್ಟಿಲು. ಇನ್ನು ಅನೇಕರು ತಿಳಿದುಕೊಂಡಿರುವಂತೆ ಹೊಸಬರಹ ಕೇವಲ ಮಹಾಪ್ರಾಣಗಳನ್ನು, ಸಂಸ್ಕ್ರುತದ ಪದಗಳನ್ನು ಕಯ್ ಬಿಡಲು ಮಾತ್ರವೇ ಬಳಸುವುದಕ್ಕಲ್ಲ, ಬದಲಾಗಿ ಎಲ್ಲಾ ಕನ್ನಡ ಒಳನುಡಿಯ ಸೊಗಡನ್ನು ಹಿಡಿದುಕೊಳ್ಳಲು ಸಜ್ಜುಗೊಳಿಸುವುದು ಆಗಿದೆ. ವಾದ ಮಾಡಬೇಕೆಂಬ ಚಪಲಕ್ಕೆ ವಾದ ಮಾಡಬೇಕಾಗಿಲ್ಲ, ಈಗಿರುವ ಕನ್ನಡದಿಂದಲೇ ಕನ್ನಡಿಗರ ಏಳಿಗೆ ಸಾದ್ಯ ಅನ್ನುವ ನಿಲುವು ಬೇರೆಯವರದಾದರೆ ಸಂತೋಶ, ಇದಕ್ಕೆ ನಮ್ಮ ತಕರಾರೇನಿಲ್ಲ. ಹಾಗೆಯೇ ಎಲ್ಲರ ಕನ್ನಡದಿಂದ ಕನ್ನಡಿಗರ ಏಳಿಗೆ ಸಾದ್ಯ ಎನ್ನುವ ಗಟ್ಟಿಯಾದ ನಿಲುವು ನಮ್ಮದು, ಇದರ ಬಗ್ಗೆ ಬೇರೆಯವರು ಕೊಂಕು ನುಡಿದರೆ ನಮಗೇನು ಹಾನಿಯಿಲ್ಲ ಎಂದು ಮಾತ್ರ ಹೇಳಬಲ್ಲೆ.

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *