ಹರಿವ ತೊರೆ

– ರತೀಶ ರತ್ನಾಕರ.

Flowing stream

ಎಲ್ಲಿ ಹುಟ್ಟಿತೋ? ಮೂಲ ಅರಿಯದು
ಹನಿಗೂಡಿ ಹರಿಯುತಿದೆ ಸಾಗಲು ಬಲುದೂರ
ಕೊರಕಲು ಸರಕಲುಗಳ ನುಗ್ಗಿ ನಗೆಯುತಿದೆ
ಮೊರೆವ ತೊರೆಯಾಗುವ ತುಡಿತದಲಿ|

ಹರಿವ ಹಾದಿಯಲಿ ಸಿಕ್ಕ
ಕಲ್ಲುಗಳೆನಿತು? ಮುಳ್ಳುಗಳೆನಿತು?
ಕೊಳಚೆ, ಕೆಸರುಗಳೆನಿತು?
ಎಲ್ಲವನು ತೊಳೆದು ಹೊಳೆಯಾಗಿ ಹರಿಯಿತು|

ದಡಕ್ಕೆ ದೂಡಿದ ಸಾರದ ಮಣ್ಣು
ತಳದಲ್ಲಿ ಸೋಸಿಟ್ಟ ತಿಳಿಯಾದ ಬಿಳಿಮರಳು|
ಬೆಳೆಗಳಿಗೆ ಉಸಿರು, ಉಸಿರಿಗೆ ನೀರು
ತನ್ನೊಳಗೆ ಬೆಳೆಸಿದ ಬದುಕುಗಳ ತವರೂರು|

ಹರಿದಳು ನೋಡು ಬಿಳಿಯಾದ ನೊರೆಯಂತೆ
ಹುದುಗಿದ್ದರು ಕೋಟಿ ನೋವಿನ ಕಂತೆ|
ಸಾಕುವಳು ಸಲುಹುವಳು ಎಲ್ಲವನು ಮಗುವಂತೆ
ಹರಿವ ನೀರಿವಳು ಇವಳ ಹೆಣ್ ಎನ್ನುವರಂತೆ|

(ಚಿತ್ರ: www.fws.gov)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: