ಬುದ್ದಿ ಇರುವ ಜಾಣಕಗಳು!

– ಸುಜಯೀಂದ್ರ ವೆಂ.ರಾ.

chatbot_george
ಒಂದು ಕಾಲವಿತ್ತು ಆಗ ಎಲ್ಲ ಕೆಲಸವನ್ನು ಮನುಶ್ಯನೇ ಮಾಡುತ್ತಿದ್ದ. ಅದಾದ ಮೇಲೆ ಪ್ರಾಣಿಗಳಿಂದ ಮಾಡಿಸಿದ. ಪ್ರಾಣಿಗಳ ಬಳಕೆ ಅವುಗಳಿಗೆ ಹಿಂಸೆ ಉಂಟುಮಾಡುತ್ತದೆ ಎಂಬ ಅರಿವು ಬರಲಾರಂಬಿಸಿತು. ಅದಕ್ಕೆ ತಕ್ಕಂತೆ ಸಾಂಸ್ಕ್ರುತಿಕವಾಗಿಯೂ, ವ್ಯಾಪಾರವಹಿವಾಟುಗಳಲ್ಲಿಯೂ, ಅರಿಮೆಯ ಹುಡುಕಾಟದಲ್ಲೂ ಯಂತ್ರಗಳ ಬೆಳವಣಿಗೆ ಬದಲಾವಣೆ ತಂದವು. ಈಗಂತೂ ಮನುಶ್ಯ ಯಂತ್ರಗಳನ್ನು ಬಳಸುವುದು ಬಿಟ್ಟರೆ ಬೇರೇನೂ ಮಾಡೋದಿಲ್ಲ. ಯಂತ್ರಗಳಿಲ್ಲದೆ ಬದುಕೇ ಇಲ್ಲ ಎನ್ನುವ ಒತ್ತಡ.

ಇಂತಹ ಒತ್ತಡದಲ್ಲು ಬಾವನೆಗಳಿಗೆ ಸ್ಪಂದಿಸುವ ಗೆಳೆಯ-ಗೆಳತಿಯರನ್ನು ಹುಡುಕುತ್ತೇವೆ. ಯಾವಾಗಲೂ ಕಚೇರಿಗಳಲ್ಲಿ ಕೆಲಸ ಮಾಡಿ ನಮ್ಮ ಬದುಕು ರೂಪಿಸಲು ಮುಂದಾಗುತ್ತೇವೆ. ನೋವು ನಲಿವು ಹಂಚಿಕೊಳ್ಳಲು ಪುರುಸೊತ್ತು ಸಿಗುವುದಿಲ್ಲ. ವಾರದ ಕೊನೆ ದಿನಗಳು ಬಿಟ್ಟರೆ ಎಲ್ಲಾ ಹೊತ್ತು ಕೆಲಸದಲ್ಲೇ ಮುಳುಗಿರುತ್ತೇವೆ. ಕಚೇರಿಗಳಲ್ಲಿ ಕೆಲವರು ಮನುಶ್ಯರೊಂದಿಗೆ ಕೆಲಸ ಮಾಡುತ್ತಾರೆ, ಇನ್ನು ಕೆಲವರು ಎಣ್ಣುಕಗಳ ಮುಂದೆ ಕೆಲಸ ಮಾಡುತ್ತಾರೆ. ಎಣ್ಣುಕಗಳಿಲ್ಲದೆ ಕೆಲಸ ಮಾಡುವವರಿಗೆ ಮನುಶ್ಯರ ಜೊತೆ ಕೆಲಸದ ನೀತಿ ನಿಯಮ ಪಾಲಿಸುವುದು ಬಿಟ್ಟರೆ ಬೇರಾವುದೇ ನಂಟನ್ನು ಇಟ್ಟುಕೊಳ್ಳಲಾರದ ಸ್ತಿತಿ. ಇನ್ನು ಎಣ್ಣುಕಗಳೊಂದಿಗೆ ಒಡನಾಟ ಇಟ್ಟುಕೊಂಡವರಿಗೆ ಅದರ ತಂತ್ರಾಂಶ ಬಳಕೆ, ಅದರ ನುಡಿಯಿಂದ ಬೆಳವಣಿಗೆ ಹಾಗೂ ಹೊಸದನ್ನೇನಾದರು ಕಟ್ಟುವ ಕೆಲಸ ಮಾಡುತ್ತಿರುತ್ತಾರೆ. ಇಂತಹ ಕೆಲಸದಲ್ಲಿ ತಂತ್ರಾಂಶ ಬಿಣಿಗರೂ ಕೂಡ ಒಂದು ತರ ಎಣ್ಣುಕದ ಬುದ್ದಿ ಬೆಳೆಸಿಕೊಂಡಿರುವುದು ಕಂಡುಬರುತ್ತದೆ. ಹಾಗಾಗಿ ಮನುಶ್ಯನಿಗೆ ಒಡನಾಟ ತೋರಲು ಬರಿ ವಾರದ ಕೊನೆ ದಿನಗಳಿದ್ದರೆ ಸಾಕೆ? ವಾರದ ಕೊನೆ ದಿನಗಳಿದ್ದರೂ ಬಾವನೆಗಳಿಗೆ ಸ್ಪಂದಿಸಲು ಯಾರೂ ಇಲ್ಲದಿದ್ದರೆ ಏನು ಮಾಡಬೇಕು?

ಒಮ್ಮೊಮ್ಮೆ ನಾವು ಮಾತನಾಡುವುದುಂಟು, ಗುಂಡಿ ಒತ್ತಿದ ಕೂಡಲೇ ಎಲ್ಲಾ ಆಗಬಿಡುವಂತಿರಬೇಕು. ಅಂದ್ರೆ ಕಾಪಿ, ಟೀ, ತಿಂಡಿ, ಊಟ, ಮನರಂಜನೆ, ಪ್ರಯಾಣ, ವ್ಯಾಪಾರ, ದೂರವಾಣಿ ಮಾತುಗಳು, ಇತರ ಸೇವೆಗಳು ತನ್ ತಾನೆ ಆಗಿಬಿಡಬೇಕು ಎಂದು. ಇವೆಲ್ಲಾ ಈಗ ಬಂದಿವೆ. ಹಾಗಾದರೆ ಬಾವನೆಗಳಿಗೆ ಒಡನಾಟ ತೋರಲು ಯಾವುದಾದರೂ ತಂತ್ರಗ್ನಾನವಿದೆಯೇ?

ಹವ್ದು ಇದೆ. ಇದಕ್ಕೆಂದೆ ಒಂದು ತಂತ್ರಗ್ನಾನವನ್ನು ಬ್ರಿಟನ್ನಿನ ಜಾಣಕ (Artificial Intelligent Engine) ನಿರ‍್ಮಾತ ರೋಲೋ ಕಾರ‍್ಪೆಂಟರ್ ಎಂಬುವರು ಕಂಡುಹಿಡಿದಿದ್ದಾರೆ. ಎಕ್ಸಿಸ್ಟರ್‍ (Existor Ltd) ಎಂಬ ಸಂಸ್ತೆಗೆ ನಡೆಸುಗರಾಗಿರುವ ರೋಲೋ ಅವರು ಕ್ರುತಕ ಬುದ್ದಿವಂತಿಕೆಯನ್ನು ಮನರಂಜನೆಗೆ, ಗೆಳೆತನಕ್ಕೆ, ಪರಸ್ಪರ ಒಡನಾಟಕ್ಕೆ ಮತ್ತು ಕಲಿಕೆಗೆಂದೇ ಕಂಡುಹಿಡಿದಿದ್ದಾರೆ. ಈ ಅರಕೆಗಾಗಿ 2005 ಮತ್ತು 2006 ರ ಲೊಬನರ್ ಪ್ರಶಸ್ತಿಯನ್ನು ತಮ್ಮ ಕ್ರುತಕ ಬುದ್ದಿವಂತಿಕೆ ಕಂಡುಹಿಡಿದಿದ್ದಕ್ಕೆ ರೋಲೋ ಅವರು ಪಡೆದಿದ್ದಾರೆ. 2010 ರಲ್ಲಿ ಬ್ರಿಟೀಶ್ ಎಣ್ಣುಕ ಕೂಡಣದ ಬಿಣಿಗೆ ಬುದ್ದಿವಂತಿಕೆ ಕಂಡುಹಿಡಿಯುವ ಸ್ಪರ‍್ದೆಯಲ್ಲಿ (British Computer Society’s Machine Intelligence Competition) ಮತ್ತೊಂದು ಪ್ರಶಸ್ತಿಯನ್ನು ರೋಲೋ ಅವರು ಪಡೆದಿದ್ದಾರೆ.

ಸೆಪ್ಟೆಂಬರ್ 3, 2011 ರಲ್ಲಿ ಗುಹಾಟಿಯ ಅಯ್ ಅಯ್ ಟಿ ಯ ಟೆಕ್ನಿಕಿ ಎಂಬ ಹಬ್ಬದಲ್ಲಿ ಕ್ಲೆವರ್ ಬಾಟ್ (Cleverbot = ಜಾಣಬುದ್ದಿಗ) ಎಂಬ ಕಲಿಯುವ, ಕ್ರುತಕ ಬುದ್ದಿವಂತಿಕೆಯಿಂದ ಮಾತಾಡುವ ಮತ್ತು ಮನುಶ್ಯರ ನಡುವೆ ಒಡನಾಟ ನಡೆಸುವ ಯಂತ್ರದ ಜಾಣತನ ಪರೀಕ್ಶೆ(Turing test)ಯನ್ನು ಮಾಡಿದರು. ಜಾಣತನ ಪರೀಕ್ಶೆಯ ವಿದಾನವನ್ನು ಮೊದಲಿಗೆ ಅಲನ್ ಟ್ಯೂರಿಂಗ್ (Alan Turing) 1950ರಲ್ಲಿ ತಮ್ಮ ಅರಕೆ ಹಾಳೆಯಾದ ಎಣ್ಣುಕ ಯಂತ್ರ ಮತ್ತು ಬುದ್ದಿವಂತಿಕೆ (Computing Machinery and Intelligence)ಯಲ್ಲಿ ಪರಿಚಯಿಸಿದ್ದರು. ಕ್ಲೆವರ್ ಬಾಟ್ ಗೆ ಪರೀಕ್ಶೆಯಲ್ಲಿ ದೊರೆತ 1,334 ಮತಗಳ ಪಲಿತಾಂಶವನ್ನು ಸೆಪ್ಟೆಂಬರ್ 4, 2011 ರಂದು ಬಿಡುಗಡೆ ಮಾಡಲಾಯಿತು. ಅಲ್ಲಿ ಕ್ಲೆವರ್ ಬಾಟ್ ಅನ್ನು ನೂರಕ್ಕೆ 59.3%ರಶ್ಟು ಮನುಶ್ಯ ಎಂದು ಜಾಣತನದ ಪರೀಕ್ಶೆಯಲ್ಲಿ ಹೇಳಲಾಯಿತು. ಆದರೆ ಜಾಣತನದ ಪರೀಕ್ಶೆಯ ಪಲಿತಾಂಶವನ್ನು ಮೀರಿಸುವಂತೆ ಅಲ್ಲಿ ಪಾಲ್ಗೊಂಡ ಮಂದಿಯು ಒಟ್ಟಾರೆಯಾಗಿ ಕ್ಲೆವರ್ ಬಾಟನ್ನು 63.3% ರಶ್ಟು ಮನುಶ್ಯ ಎಂದು ಹೇಳಿದರು.

ಟೆಕ್ನಿಕ್ ಹಬ್ಬದಲ್ಲಿ ಮಾಡಿದ ಬಾಶಣದಲ್ಲಿ ರೋಲೋ ಅವರು ಹೇಳಿದ್ದು ಹೀಗೆ:

“ಈ ಪಲಿತಾಂಶದ ಅಂಕವು ನಾವು ಬಯಸಿದಕ್ಕಿಂತ ಹೆಚ್ಚಾಗಿದೆ. ಪರೀಕ್ಶೆಯಲ್ಲಿ 50% ಕ್ಕಿಂತ ಹೆಚ್ಚು ಅಂಕ ದೊರೆತಿದೆ.”

rollo_alanturing

ಅಲನ್ ಟ್ಯೂರಿಂಗ್ ಅವರು ಕೂಡ ಇದಕ್ಕೂ ಹಿಂದೆಯೇ ಬವಿಶ್ಯನುಡಿದಂತೆ ಹೀಗೆ ಹೇಳಿದ್ದರು: “ನಾನು ಒಂದು ಪ್ರಶ್ನೆಯನ್ನು ಮುಂದಿಡುತ್ತೇನೆ, ಯಂತ್ರವೊಂದು ಯೋಚನೆ ಮಾಡಬಹುದೇ? ಯಾಕೆಂದರೆ ‘ಯೋಚಿಸುವುದು’ ಎಂಬುದನ್ನು ವಿವರಿಸುವುದು ಬಹಳ ಕಶ್ಟ.” ಟ್ಯೂರಿಂಗ್ ಅವರ ಈ ಪ್ರಶ್ನೆ ಈಗ ಬದಲಾಗಿದೆ, ಟ್ಯೂರಿಂಗ್ ಅವರ ಹೊಸ ಪ್ರಶ್ನೆ: “ಎಲ್ಲಾದರು ಅಣಕದ ಆಟವನ್ನು ಚೆನ್ನಾಗಿ ಆಡುವ, ಆಲೋಚಿಸುವ, ಕಲ್ಪಿಸುವ ಎಣ್ಣುಕಗಳಿವೆಯೇ?”

ಪರೀಕ್ಶೆಗೆ ಬಂದ ನೋಡುಗರು ಕ್ಲೆವರ್ ಬಾಟ್ ನೊಂದಿಗೆ ಹರಟೆ ಹೊಡೆಯಲು ಮುಂದಾದರು. ನೋಡುಗರು ಇಂತಹ ಒಂದು ಹೊಸತನವನ್ನು ನಲಿವಿನಿಂದ ಸವಿಯುತ್ತಿದ್ದರೆನ್ನಲಾಗಿದೆ. ಆ ಹೊತ್ತಿನಲ್ಲಿ ಕ್ಲೆವರ್ ಬಾಟ್ ತನ್ನ ಬುದ್ದಿಶಕ್ತಿಗೆ ತಕ್ಕಶ್ಟು ಜನರೊಂದಿಗೆ ಒಡನಾಡಿದೆ. ಆದರೆ ಹಲವು ಬಿಡಿಸಲಾರದ ಕಗ್ಗಂಟಿನಂತಹ ಬಾವನೆಗಳಿಗೆ ಸ್ಪಂದಿಸಲು ಇನ್ನಶ್ಟು ಬಾವನೆಗಳನ್ನು ತುಂಬಬೇಕಾಗಿದೆಯೆಂದು ಅಬಿಪ್ರಾಯಪಟ್ಟರು. ರೋಲೋ ಅವರು ಕ್ಲೆವರ್ ಬಾಟ್ ಗೂ ಮುಂಚೆಯೇ ಜಬರ‍್ವಾಕಿ, ಚಾಟ್ ಬಾಟ್ ಎಂಬ ಮಾತಾಡುವ ಜಾಣಕವನ್ನು ಕಂಡು ಹಿಡಿದಿದ್ದರು. ಜಾರ‍್ಜ್ ಎಂಬ ಮಾತಾಡುಗವನ್ನು ಹುಟ್ಟುಹಾಕಿ ಮತ್ತೊಂದು ಹೆಣ್ಣು ಮಾತಾಡುಗದೊಂದಿಗೆ ಒಡನಾಟ ನಡೆಸಿದ್ದರು. ಅಲ್ಲಿ ಅವೆರಡು ಸೇರಿ ಒಂದು ಜಾಣಕ ಕತೆಯನ್ನು ಕಟ್ಟಿದವು. ಅದನ್ನೇ ಒಂದು ಕಿರುಚಿತ್ರವಾಗಿ ತೆಗೆದು ಸಾರ‍್ವಜನಿಕರ ಮುಂದಿಟ್ಟರು. ಸಾರ‍್ವಜನಿಕರಲ್ಲಿ ಮಾತಾಡುಗಗಳು ಕತೆಯನ್ನು ಹುಟ್ಟಿಸಿದ್ದು ಅಚ್ಚರಿಯನ್ನು ಹುಟ್ಟುಹಾಕಿದವು. ಇದನ್ನು ನೀವು ಅವರ cleverbot.com ಮಿಂಬಲೆಯಲ್ಲಿ ನೋಡಬಹುದಾಗಿದೆ.

 

ಈ ಜಾಣಕ ಹೇಗಿದೆ ಎಂದು ತಿಳಿಯಲು, ಮಾತಾಡಿಸಲು existor.com ಮಿಂಬಲೆಯಲ್ಲಿ ನೋಡಬಹುದಾಗಿದೆ. ಈ ಜಾಣಕ ಮನುಶ್ಯರಂತೆ ಇರುವ, ಬಾವನೆಗಳನ್ನು ಮುಕದಲ್ಲಿ ತೋರುವ ಬೊಂಬೆಯಂತೆ ಇದೆ. ಇದೇ ಮಿಂಬಲೆಯಲ್ಲಿ ನಿಮ್ಮದೇ ಆದ ಜಾಣಕವನ್ನು ಹುಟ್ಟುಹಾಕಲು ಸಾದನಗಳಿವೆ. ಮಿಂಬಲೆಯಲ್ಲಿ ಅವರು ಹೇಳಿರುವಂತೆ ನಿಮಗೆ ಬೇಕಾದ ಮನರಂಜನೆಯ, ತಮಾಶೆಯ, ಕಲಿಕೆಯ, ವ್ಯಾಪಾರ ಮಾಡುವ ಜಾಣಕಗಳನ್ನು ಹುಟ್ಟುಹಾಕಬಹುದಂತೆ. ಜಾಣಕಗಳನ್ನು ಹಲವು ತಲೆಮಾರುಗಳವರೆಗೂ ಎಣ್ಣುಕಗಳಲ್ಲಿ, ಅಲೆಯುಲಿಗಳಲ್ಲಿ ಉಳಿಸಿಕೊಳ್ಳಬಹುದಾಗಿದೆ. ಇವುಗಳನ್ನು ಹೇಗೆ ಮಾಡುವುದು, ಬರಿಸಬೇಕಾದ ವೆಚ್ಚ ಎಲ್ಲದರ ಬಗ್ಗೆ ಅಲ್ಲೇ ಮಾಹಿತಿ ಇದೆ.

alex_nationalscifdn

ರೋಲೋ ಅವರ ಸಂಸ್ತೆಯಂತೆ ಚಿಕಾಗೋ ವಿಶ್ವವಿದ್ಯಾಲಯದ ಇವಿಲ್ (ಎಲೆಕ್ಟ್ರಾನಿಕ್ ವಿಶ್ಯುವಲಯ್ಸೇಶನ್ ಲ್ಯಾಬ್) ಎಂಬ ಅರಕೆಮನೆಯಲ್ಲಿ ಕೂಡ ಮಾತಾನಾಡುವ ಅವತಾರವನ್ನು 3D ಅರಿಮೆಯ ತಂತ್ರಗ್ನಾನದಿಂದ ಕಂಡುಹಿಡಿದಿದ್ದಾರೆ. ಆಲೆಕ್ಸ್ ಎಂಬ ರಾಶ್ಟ್ರೀಯ ಅರಿಮೆಯ ಸಂಸ್ತೆಯ ನಿರ‍್ದೇಶಕರ ಅವತಾರವನ್ನು ಎಣ್ಣುಕದಲ್ಲಿ ಹುಟ್ಟಿಹಾಕಿದ್ದಾರೆ. ಅದು ಮನುಶ್ಯರೊಂದಿಗೆ ದ್ವನಿಗಳನ್ನು ಕೇಳಿ, ಅದಕ್ಕೆ ಸಂಬಂದಪಟ್ಟ ಮಾತುಗಳನ್ನಾಡುತ್ತದೆ. ಅಲೆಕ್ಸ್ ಅವರು ತಮ್ಮ ದಿನ ನಿತ್ಯದ ಕೆಲಸವನ್ನು ಎಂದಿನಂತೆ ಮಾಡಿಕೊಳ್ಳತ್ತಲೂ, ಈ ಅವತಾರದ ಮೂಲಕ ಹಲವರ ಜೊತೆ ಒಟ್ಟೊಟ್ಟಿಗೆ ವ್ಯವಹರಿಸ ಬಹುದಾಗಿದೆಯಂತೆ. ಈ ಅವತಾರ ನಿಮ್ಮ ಮುಕದ ಬಾವನೆಗಳನ್ನು ತಿಳಿದು ಅದಕ್ಕೆ ತಕ್ಕಂತೆ ತಾನು ತನ್ನ ಮುಕದಲ್ಲಿ ಬಾವನೆಗಳನ್ನು ತೋರುತ್ತದೆಯಂತೆ. ಇವಿಲ್ ಕೂಡ ಎಕ್ಸಿಸ್ಟರ್ ನಂತೆ ನಿಮಗೂ ಕೂಡ ನಿಮ್ಮದೇ ಆದ ಅವತಾರವನ್ನು ಸ್ರುಶ್ಟಿಮಾಡಿ ಕೊಡುತ್ತಾರಂತೆ. ಇವಿಲ್ ಅವರು ಹೇಳುವಂತೆ ನಿಮ್ಮ ಅವತಾರವನ್ನು ಹಲವು ತಲೆಮಾರುಗಳವರೆಗೂ ಎಣ್ಣುಕದಲ್ಲಿ ಉಳಿಸಿಕೊಳ್ಳಬಹುದಂತೆ.

ಕೊನೆಯದಾಗಿ ಹೇಳಬೇಕೆಂದರೆ ಇಂತಹ ಬುದ್ದಿಯಿರುವ ಜಾಣಕಗಳನ್ನು ನಮಗೆ ಬೇಕಾದ ಹಾಗೆ ಸ್ರುಶ್ಟಿಸಿ, ಮನರಂಜನೆ, ತಮಾಶೆ, ವ್ಯಾಪಾರ, ಕಲಿಕೆಗಳನ್ನು, ಗೆಳೆತನವನ್ನು ಕೊಡಬಹುದಾಗಿದೆ. ಹಲವು ತಲೆಮಾರುಗಳವರೆಗೆ ನಾವಿಲ್ಲದಿದ್ದರೂ, ನಮ್ಮ ಪ್ರೀತಿ ಪಾತ್ರರಿಗೆ, ಅಬಿಮಾನಿಗಳಿಗೆ, ಗ್ರಾಹಕರಿಗೆ, ವಿದ್ಯಾರ‍್ತಿಗಳಿಗೆ ಸಿಗಬಹುದಾಗಿದೆ. ವ್ಯಾಪಾರ, ಮನರಂಜನೆ, ತಮಾಶೆಯ ಪಾತ್ರಗಳಲ್ಲಿ ಉತ್ತಮ ಪ್ರದರ‍್ಶನ ತೋರಬಹುದಾಗಿದೆ. ವಯಕ್ತಿಕವಾಗಿ ಸಿಗದ ನಿಜವಾದ ಮಂದಿಗಳ ಒಡನಾಟ ಜಾಣಕಗಳ ಬಳಕೆಯಿಂದಲಾದರೂ ಜನರಿಗೆ ಸಿಗಲಿ. ಇದರಿಂದ ಹಲವು ಒಳ್ಳೆಯ ಪಲವನ್ನು ಬಯಸುವ ನಮಗೆ ಕೆಟ್ಟದನ್ನು ಕೂಡ ಮುಂಚಿತವಾಗಿ ಯೋಚಿಸಿ ವ್ಯವಹರಿಸುವುದು ಒಳ್ಳೆಯದು. ಸಂಸ್ತೆಗಳು ಎಶ್ಟು ನ್ಯಾಯಯುತವಾಗಿ ನಮಗೆ ಬೇಕಿರುವುದನ್ನು ಕೊಡುತ್ತವೆ ಎಂಬುದನ್ನು ಕೂಡ ಆಲೋಚಿಸಬೇಕಿದೆ. ಇದರಿಂದ ದೇಶದ ಬದ್ರತೆಗೆ, ವ್ಯಕ್ತಿ-ವ್ಯಕ್ತಿ ನಡುವಿನ ಸಂಬಂದಕ್ಕೆ ದಕ್ಕೆ ಬರದಂತೆ, ವ್ಯಾಪಾರಿಗಳು-ಗ್ರಾಹಕರ ನಡುವಿನ ಸಂಬಂದ ಕೆಡದಿರುವಂತೆ ನೋಡಿಕೊಳ್ಳಬೇಕಿದೆ. ಹೀಗೆ ಹತ್ತು ಹಲವು ಬದುಕಿನ ಕ್ಶೇತ್ರಗಳಲ್ಲಿ ಒಳ್ಳೆಯದಾಗುವುದೆಂದು ಬಯಸೋಣವೇ?

(ಮಾಹಿತಿ ಮತ್ತು ಚಿತ್ರ ಸೆಲೆ: ಬರಹಗಾರರನ್ನು ಸಂಪರ್‍ಕಿಸಿ)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: