ಅಲ್ಲಗಳೆಯುವ ಒಟ್ಟುಗಳು – 2

ಡಿ.ಎನ್.ಶಂಕರ ಬಟ್.

ಇಂಗ್ಲಿಶ್ ಪದಗಳಿಗೆ ಸಾಟಿಯಾಗಿ ಕನ್ನಡದಲ್ಲೇನೇ ಹೊಸಪದಗಳನ್ನು ಕಟ್ಟುವುದು-13

(ಇಂಗ್ಲಿಶ್ ಪದಗಳಿಗೆ…-12ರಿಂದ ಮುಂದುವರಿದುದು)

(8) mis ಒಟ್ಟು:

ಈ ಒಟ್ಟಿಗೆ ಮುಕ್ಯವಾಗಿ ತಪ್ಪು ಇಲ್ಲವೇ ತಪ್ಪಾದ ಮತ್ತು ಕೆಟ್ಟ ಎಂಬ ಎರಡು ಹುರುಳುಗಳಿವೆ; ಕೆಲವು ಕಡೆಗಳಲ್ಲಿ ಇದಕ್ಕೆ ಈ ಎರಡು ಹುರುಳುಗಳೂ ಕಾಣಿಸಿಕೊಳ್ಳುವುದಿದೆ.
ಈ ಒಟ್ಟನ್ನು ಬಳಸಿರುವ ಪದಗಳಿಗೆ ಸಾಟಿಯಾದ ಕನ್ನಡ ಪದಗಳನ್ನು ಉಂಟುಮಾಡುವಲ್ಲಿ ಕೆಳಗೆ ಕೊಟ್ಟಿರುವ ಹಮ್ಮುಗೆಗಳನ್ನು ಬಳಸಿಕೊಳ್ಳಬಹುದು:

(ಕ) ಹೆಸರುಪದಗಳಿಗೆ ತಪ್ಪು ಇಲ್ಲವೇ ಕೆಟ್ಟ ಎಂಬ ಪದಗಳನ್ನು ಮುನ್ನೊಟ್ಟಿನ ಜಾಗದಲ್ಲಿ ಬಳಸಲು ಬರುತ್ತದೆ:

match ಎಣೆ mismatch ತಪ್ಪೆಣೆ
cast ಪಾಂಗು miscast ತಪ್ಪು ಪಾಂಗು
trial ಒರೆಹಚ್ಚಿಕೆ mistrial ತಪ್ಪೊರೆಹಚ್ಚಿಕೆ
quotation ಎತ್ತುಗೆ misquotation ತಪ್ಪೆತ್ತುಗೆ
conduct ನಡತೆ misconduct ಕೆಟ್ಟ ನಡತೆ
deed ಕೆಲಸ misdeed ಕೆಟ್ಟ ಕೆಲಸ
fortune ಸಯ್ಪು misfortune ಕೆಟ್ಟ ಸಯ್ಪು
deal ಹರದು misdeal ಕೆಟ್ಟ ಹರದು

(ಚ) ಎಸಪದಗಳಿಗೆ ಕೆಲವೆಡೆಗಳಲ್ಲಿ ತಪ್ಪು ಎಂಬುದನ್ನು ಮುನ್ನೊಟ್ಟಿನ ಜಾಗದಲ್ಲಿ ಬಳಸಲು ಬರುತ್ತದೆ; ಆದರೆ ಬೇರೆ ಕೆಲವೆಡೆಗಳಲ್ಲಿ ತಪ್ಪಿ ಇಲ್ಲವೇ ತಪ್ಪಾಗಿ ಎಂಬುದನ್ನು ಬಳಸಬೇಕಾಗುತ್ತದೆ:

apprehend ತಿಳಿ misapprehend ತಪ್ಪು ತಿಳಿ
conceive ನೆನಸು misconceive ತಪ್ಪು ನೆನಸು
inform ತಿಳಿಸು misinform ತಪ್ಪು ತಿಳಿಸು
use ಬಳಸು misuse ತಪ್ಪು ಬಳಸು
direct ದಾರಿ ತೋರು misdirect ತಪ್ಪುದಾರಿ ತೋರು
calculate ಎಣಿಕೆ ಹಾಕು miscalculate ತಪ್ಪೆಣಿಕೆ ಹಾಕು
behave ನಡೆ misbehave ತಪ್ಪಿ ನಡೆ
hit ಹೊಡೆ mishit ತಪ್ಪಿ ಹೊಡೆ
place ಇಡು misplace ತಪ್ಪಾಗಿ ಇಡು
manage ಸಂಬಾಳಿಸು mismanage ತಪ್ಪಾಗಿ ಸಂಬಾಳಿಸು

(ಟ) ಎಸಕಪದದ ಅಲ್ಲಗಳೆಯುವ ಪರಿಚೆರೂಪವನ್ನು ಬಳಸಿಯೂ ಕೆಲವೆಡೆಗಳಲ್ಲಿ ಸಾಟಿಯಾದ ಕನ್ನಡ ಪದಗಳನ್ನು ಉಂಟುಮಾಡಲು ಬರುತ್ತದೆ:

fit ಒಪ್ಪುವ misfit ಒಪ್ಪದ
trust ನಂಬು mistrust ನಂಬದಿಕೆ

(9) mal ಒಟ್ಟು:
ಈ ಒಟ್ಟಿನ ಬಳಕೆ ಹೆಚ್ಚುಕಡಿಮೆ mis ಒಟ್ಟಿನ ಹಾಗೆಯೇ ಇದೆ; ಇದನ್ನು ಬಳಸಿರುವ ಪದಗಳಿಗೆ ಸಾಟಿಯಾಗಿ ಕನ್ನಡದಲ್ಲಿ ತಪ್ಪು ಇಲ್ಲವೇ ಕೆಟ್ಟ ಪದಗಳನ್ನು ಬಳಸಿ ಹೊಸ ಪದಗಳನ್ನು ಉಂಟುಮಾಡಲು ಬರುತ್ತದೆ; ಕೆಲವೆಡೆಗಳಲ್ಲಿ ಎಸಕಪದದ ಅಲ್ಲಗಳೆಯುವ ಪರಿಚೆರೂಪವನ್ನೂ ಬಳಸಲು ಬರುತ್ತದೆ:

function ನಡೆ malfunction ತಪ್ಪು ನಡೆ
practice ಬಳಕೆ malpractice ತಪ್ಪು ಬಳಕೆ
content ತಣಿದ malcontent ತಣಿಯದ
odorous ನಾತದ malodorous ಕೆಟ್ಟ ನಾತದ

ತಿರುಳು:
(1) ಅಲ್ಲಗಳೆಯುವ ಒಟ್ಟುಗಳನ್ನು ಸೇರಿಸಲು ಬಳಸಿರುವ ಇಂಗ್ಲಿಶ್ ಪದಕ್ಕೆ ಸಾಟಿಯಾಗಿ ಕನ್ನಡದಲ್ಲಿ ಹೆಸರುಪದ ಇಲ್ಲವೇ ಪರಿಚೆಪದವನ್ನು ಬಳಸಬೇಕಾಗುತ್ತದೆಯಾದರೆ, ಅವನ್ನು ಸೇರಿಸಿರುವ ಇಂಗ್ಲಿಶ್ ಪದಕ್ಕೆ ಸಾಟಿಯಾಗಿ ಕನ್ನಡದಲ್ಲಿ ಇಲ್ಲದ ಇಲ್ಲವೇ ಅಲ್ಲದ ಎಂಬುದನ್ನು ಹೆಸರುಪದ ಇಲ್ಲವೇ ಪರಿಚೆಪದಗಳನ್ನು ಬಳಸಲು ಬರುತ್ತದೆ;

(2) ಇದಕ್ಕೆ ಬದಲು, ಅದಕ್ಕೆ ಸಾಟಿಯಾಗಿ ಕನ್ನಡದಲ್ಲಿ ಎಸಕಪದದ ಪರಿಚೆರೂಪವನ್ನು ಬಳಸಬೇಕಾಗುತ್ತದೆಯಾದರೆ, ಈ ಒಟ್ಟುಗಳನ್ನು ಸೇರಿಸಿರುವ ಇಂಗ್ಲಿಶ್ ಪದಕ್ಕೆ ಸಾಟಿಯಾಗಿ ಕನ್ನಡದಲ್ಲಿ ಎಸಕಪದದ ಅಲ್ಲಗಳೆಯುವ ಪರಿಚೆರೂಪವನ್ನು ಬಳಸಲು ಬರುತ್ತದೆ;

(3) ಕೆಲವೆಡೆ ಹೆಚ್ಚಿನ ಹುರುಳನ್ನು ಕೊಡಬೇಕಾಗಿರುವಲ್ಲಿ ಕಳೆ, ಕೆಡಿಸು, ತಗ್ಗಿಸು ಮೊದಲಾದ ಎಸಕಪದಗಳಲ್ಲೊಂದನ್ನೂ ಬಳಸಬೇಕಾಗುತ್ತದೆ;

(4) ಈ ಒಟ್ಟುಗಳನ್ನು ಬಳಸಿರುವ ಪದಗಳು ಮಂದಿಯನ್ನು ಹೆಸರಿಸುತ್ತಿವೆಯಾದರೆ, ಅವುಗಳ ಹುರುಳನ್ನವಲಂಬಿಸಿ ಇಲಿ ಎಂಬ ಒಟ್ಟನ್ನು ಇಲ್ಲವೇ ಎದುರಿ ಎಂಬ ಪದವನ್ನು ಬಳಸಲು ಬರುತ್ತದೆ;

(5) mis ಮತ್ತು mal ಎಂಬ ಒಟ್ಟುಗಳನ್ನು ಬಳಸಿರುವಲ್ಲಿ ತಪ್ಪು ಇಲ್ಲವೇ ಕೆಟ್ಟ ಎಂಬ ಪದಗಳನ್ನು ಬಳಸಬೇಕಾಗುತ್ತದೆ.

ಬೇರೆ ಬಗೆಯ ಮುನ್ನೊಟ್ಟುಗಳು

ಮೇಲೆ ವಿವರಿಸಿದ ನಾಲ್ಕು ಬಗೆಯ ಮುನ್ನೊಟ್ಟುಗಳು ಮಾತ್ರವಲ್ಲದೆ ಬೇರೆಯೂ ಕೆಲವು ಮುನ್ನೊಟ್ಟುಗಳು ಇಂಗ್ಲಿಶ್‌ನಲ್ಲಿ ಬಳಕೆಯಲ್ಲಿವೆ. ಇವು ಕೊಡುವ ಹುರುಳುಗಳು ಬೇರೆ ಬೇರೆ ಬಗೆಯವಾಗಿದ್ದು, ಅವನ್ನು ಮೇಲೆ ಕೊಟ್ಟಿರುವ ಒಟ್ಟುಗಳ ಹಾಗೆ ಅವುಗಳ ಹುರುಳನ್ನವಲಂಬಿಸಿ ಗುಂಪಿಸುವ ಬದಲು ಒಟ್ಟಿಗೆ ಒಂದೇ ಗುಂಪಿನಲ್ಲಿ ಇರಿಸಿ ವಿವರಿಸಲಾಗಿದೆ:

(1) auto ಒಟ್ಟು:
ತಾನು ಇಲ್ಲವೇ ತನ್ನ ಎಂಬ ಹುರುಳನ್ನು ಕೊಡಬಲ್ಲ ಈ ಒಟ್ಟಿಗೆ ಸಾಟಿಯಾಗಿ ಕನ್ನಡದಲ್ಲಿ ತಾನು ಎಂಬ ಪದವನ್ನು ಮುನ್ನೊಟ್ಟಿನ ಜಾಗದಲ್ಲಿ ಬಳಸಲು ಬರುತ್ತದೆ:

ignition ಉರಿತ autoignition ತಾನವುರಿತ
start ತೊಡಗು autostart ತಾನತೊಡಗು

(2) vice ಒಟ್ಟು:
ಈ ಒಟ್ಟಿಗೆ ಕೆಳಗಿನ ಹಂತದ ಎಂಬ ಹುರುಳಿದ್ದು, ಕನ್ನಡದಲ್ಲಿ ಇದಕ್ಕೆ ಸಾಟಿಯಾಗಿ ಕೆಳ ಎಂಬ ಪದವನ್ನು ಮುನ್ನೊಟ್ಟಿನ ಜಾಗದಲ್ಲಿ ಬಳಸಲು ಬರುತ್ತದೆ:

president ತಲೆಯಾಳು vice-president ಕೆಳತಲೆಯಾಳು
captain ಮುಂದುಗ vice-captain ಕೆಳಮುಂದುಗ
chairman ಮೇಲಾಳು vice-chairman ಕೆಳಮೇಲಾಳು

ಕೆಳಗೆ ಕೊಟ್ಟಿರುವ a, be, ಮತ್ತು en/em ಎಂಬ ಮೂರು ಒಟ್ಟುಗಳಿಗೆ ಅವುಗಳದೇ ಆದ ಹುರುಳಿಲ್ಲ; ಹೆಸರುಪದಗಳನ್ನು ಎಸಕಪದಗಳಾಗಿ ಮಾರ‍್ಪಡಿಸುವ ಕೆಲಸವನ್ನಶ್ಟೇ ಅವು ನಡೆಸುತ್ತವೆ.

(3) a ಒಟ್ಟು:
ಹೆಸರುಪದಗಳಿಗೆ ಈ ಒಟ್ಟನ್ನು ಸೇರಿಸಿ ಎಸಕಪದಗಳನ್ನು ಪಡೆಯಲಾಗುತ್ತದೆ; ಕನ್ನಡದಲ್ಲಿ ಇದಕ್ಕೆ ಸಾಟಿಯಾಗಬಲ್ಲ ಹೊಸಪದಗಳನ್ನು ಕಟ್ಟಲು ಕೂಡುಪದಗಳನ್ನು ಉಂಟುಮಾಡುವ ಹಮ್ಮುಗೆಯನ್ನು ಬಳಸಬೇಕಾಗುತ್ತದೆ:

credit ನಂಬಿಕೆ accredit ನಂಬಿಕೆಯಿಡು
custom ಬಳಕೆ accustom ಬಳಕೆಯಾಗು
forest ಕಾಡು afforest ಕಾಡುಬೆಳೆ
mass ಕಲೆತ amass ಕಲೆಹಾಕು
portion ಪಾಲು apportion ಪಾಲುಹಚ್ಚು

(4) be ಒಟ್ಟು:
ಈ ಒಟ್ಟನ್ನು ಹೆಸರುಪದಗಳಿಂದ ಇಲ್ಲವೇ ಪರಿಚೆಪದಗಳಿಂದ ಎಸಕಪದಗಳನ್ನು ಪಡೆಯಲು ಬಳಸಲಾಗಿದೆ; ಇಂತಹ ಪದಗಳಿಗೆ ಸಾಟಿಯಾಗಿ ಕನ್ನಡದಲ್ಲಿ ಅವು ಕೊಡುವ ಎಸಕದ ಹುರುಳನ್ನವಲಂಬಿಸಿ ಕೂಡುಪದಗಳನ್ನು ಕಟ್ಟಬೇಕಾಗುತ್ತದೆ:

calm ನೆಮ್ಮದಿ becalm ನೆಮ್ಮದಿಗೊಳಿಸು
head ತಲೆ behead ತಲೆಕಡಿ
spatter ಹನಿ bespatter ಹನಿಹನಿಸು
witch ಮಾಟಗಾರ‍್ತಿ bewitch ಮಾಟಮಾಡು
wail ಗೋಳು bewail ಗೋಳಾಡು

(5) en/em ಒಟ್ಟು:
ಹೆಸರುಪದಗಳಿಗೆ ಇಲ್ಲವೇ ಪರಿಚೆಪದಗಳಿಗೆ ಈ ಒಟ್ಟನ್ನು ಸೇರಿಸಿ ಎಸಕಪದಗಳನ್ನು ಉಂಟುಮಾಡಲಾಗುತ್ತದೆ; ಇದಕ್ಕಾಗಿ ಇಂಗ್ಲಿಶ್‌ನಲ್ಲಿ ಎಲ್ಲಾ ಬಗೆಯ ಹೆಸರುಪದಗಳನ್ನೂ ಬಳಸಲಾಗುತ್ತದೆ.
ಈ ಒಟ್ಟನ್ನು ಬಳಸಿರುವ ಎಸಕಪದಗಳಿಗೆ ಸಾಟಿಯಾಗಿ ಕನ್ನಡದಲ್ಲಿ ಕೂಡುಪದಗಳನ್ನು ಉಂಟುಮಾಡಬೇಕಾಗುತ್ತದೆ:

bitter ಕಹಿ embitter ಕಹಿತುಂಬು
body ಮಯ್ embody ಮಯ್ದಾಳು
power ಅಳವು empower ಅಳವೀಯು
title ಹಕ್ಕು entitle ಹಕ್ಕುಪಡೆ
throne ಗದ್ದುಗೆ enthrone ಗದ್ದುಗೆ ಸೇರಿಸು
slave ತೊತ್ತು enslave ತೊತ್ತಾಗಿಸು
sure ಕಂಡಿತ ensure ಕಂಡಿತಪಡಿಸು
mesh ಬಲೆ enmesh ಬಲೆಯೊಡ್ಡು

ತಿರುಳು
ಈ ಒಳಪಸುಗೆಯಲ್ಲಿ ಬಂದಿರುವ ಮೊನ್ನೊಟ್ಟುಗಳಲ್ಲಿ ಮೊದಲಿನ ಎರಡು ಒಟ್ಟುಗಳ ಬಳಕೆಯಾಗಿರುವಲ್ಲಿ ತಾನು ಮತ್ತು ಕೆಳ ಪದಗಳನ್ನು, ಮತ್ತು ಉಳಿದೆಡೆಗಳಲ್ಲಿ ಕೂಡುಪದಗಳನ್ನು ಕನ್ನಡದಲ್ಲಿ ಬಳಸಲು ಬರುತ್ತದೆ.

<< ಬಾಗ-12

ನಿಮಗೆ ಹಿಡಿಸಬಹುದಾದ ಬರಹಗಳು

1 Response

ಅನಿಸಿಕೆ ಬರೆಯಿರಿ:

Enable Notifications OK No thanks