ಇಳಕಲ್ ಸೀರೆ – ಇದು ಸಿಂಗಾರಕ್ಕೊಂದು ಗರಿ
– ಪ್ರೇಮ ಯಶವಂತ.
ಕರ‍್ನಾಟಕದೆಲ್ಲೆಡೆ ಇನ್ನು ಹಬ್ಬಗಳ ಸಾಲು ಸಾಲು. ಎಲ್ಲೆಲ್ಲು ಸಡಗರ. ಈ ಹಬ್ಬಗಳು ಬಂತೆಂದರೆ ಬಣ್ಣ ಬಣ್ಣದ ಉಡುಗೆಗಳು, ಒಡವೆಗಳು, ತರಾವರಿ ತಿಂಡಿ ತಿನಿಸುಗಳು, ನೆಂಟರಿಶ್ಟರು ಅಬಬ್ಬಾ ಹೇಳುತ್ತಾ ಕುಳಿತರೆ ಕೊನೆಯೇ ಇಲ್ಲವೆನೋ ಅನ್ನಿಸುತ್ತದೆ. ಹೆಣ್ಣುಮಕ್ಕಳಿಗೂ ಸೀರೆಗಳಿಗೂ ಎಲ್ಲಿಲ್ಲದ ನಂಟು. ಇನ್ನು ಹೆಣ್ಣುಮಕ್ಕಳಿಗೆ ಸೀರೆಗಳನ್ನು ಕೊಳ್ಳಲು ಹಬ್ಬವೇ ಆಗಬೇಕಂತಿಲ್ಲ. ಈಗಿನ ಮಾರುಕಟ್ಟೆಯಲ್ಲಿ ಬರುವ ಹೊಸ ಬಗೆಯ ಸೀರೆಗಳು, ಅಪರೂಪದ ಶಯ್ಲಿಗಳು ಪ್ರತಿದಿನವು ಹೆಣ್ಣುಮಕ್ಕಳ ಕಣ್ಮನ ಸೆಳೆಯುತ್ತಿವೆ. ಇಂತ ಹಲವು ಬಗೆಯ ಸೀರೆಗಳಲ್ಲಿ ಮರೆಯಾಗಿದ್ದರೂ ಮರೆಯಲಾಗದ ಅಪರೂಪದ ಇಳಕಲ್ ಸೀರೆಯೂ ಒಂದು. ಇದರ ವಿಶೇಶತೆಯನ್ನು ಈ ಬರಹದಲ್ಲಿ ತಿಳಿದುಕೊಳ್ಳೋಣ.
ಇಳಕಲ್ ಎನ್ನುವುದು ನಮ್ಮ ಬಡಗಣ ಕರ‍್ನಾಟಕದ, ಬಾಗಲುಕೋಟೆ ಜಿಲ್ಲೆಯ ಒಂದು ಸಣ್ಣ ಊರು. ಕೈಮಗ್ಗದ ಸೀರೆಗಳಿಗೆ ಹೆಸರುವಾಸಿಯಾಗಿರುವ ಈ ಊರು, ಇಲ್ಲಿ ತಯಾರಗುವ ಸೀರೆಗಳಿಗೆ ತನ್ನ ಹೆಸರನ್ನಿಟ್ಟು ಮಂದಿಯ ಮೆಚ್ಚುಗೆ ಪಡೆದಿದೆ. ಸುಮಾರು 8 ನೇ ನೂರ‍್ಮಾನದಿಂದಲೇ ಕೈ ಮಗ್ಗವನ್ನು ಕಸುಬು ಮಾಡಿಕೊಂಡಿರುವ ಇಳಕಲ್, ಕೈ ಮಗ್ಗದಲ್ಲಿ ತನ್ನದೇ ಆದ ಶಯ್ಲಿಯನ್ನು ಹೊಂದಿದೆ. ಇಳಕಲ್ ಊರೊಂದರಲ್ಲೇ ಸುಮಾರು 20000 ಮಂದಿ ಈ ಸೀರೆಗಳನ್ನು ನೇಯುವ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇದು ಹೆಚ್ಚಾಗಿ ಒಳಮನೆಯ ಚಟುವಟಿಕೆಯಾದ್ದರಿಂದ (indoor activity) ಇಲ್ಲಿ ಕೆಲಸ ಮಾಡುವವರು ಹೆಂಗಸರೇ ಜಾಸ್ತಿ.
ಸಾಮನ್ಯವಾಗಿ ಇಳಕಲ್ ಜಾಡಿನ ಸೀರೆಗಳನ್ನು ಕುಳಿ ಮಗ್ಗದಲ್ಲಿ (pit loom) “ರೇಶಿಮೆ X ರೇಶಿಮೆ”, “ರೇಶಿಮೆ X ಹತ್ತಿ”, “ಕೌಶಲ ರೇಶಿಮೆ (art silk) X ಹತ್ತಿ” ಎಂಬ 3 ಬಗೆಯ ನೂಲುಗಳನ್ನು ಸೇರಿಸಿ ಮಾಡಲಾಗುತ್ತದೆ. ಈ ರೀತಿಯಲ್ಲಿ ಚಿಕ್ಕಿ ಪರಸ್, ಗೋಮಿ, ಜರಿ, ಗಡಿದಾಡಿ, ಗಾಯತ್ರಿ ಶಯ್ಲಿಯ ಸೀರೆಗಳು ತಯರಾಗುತ್ತಿವೆ. ಸೋಜಿಗವೆಂದರೆ ಕೈ ಮಗ್ಗದಲ್ಲಿ ಒಂದು ಸೀರೆ ನೇಯಲು ಬರೋಬ್ಬರಿ 7 ದಿನಗಳು ಬೇಕು. ಈ ಸೀರೆಗಳಲ್ಲಿ ವಿಶೇಶವೆಂದರೆ ಮಯ್ ಬಾಗದ ಸೀರೆಯನ್ನು ಮತ್ತು ಸೆರಗಿನ ಬಾಗವನ್ನು ಬೇರೆಬೇರೆಯಾಗಿ ಹೆಣೆದು, ಆಮೇಲೆ “ಟೋಪ್ ಟೇನಿ” ಮತ್ತು ಕೊಂಡಿ ಚಳಕವನ್ನು ಬಳಸಿ, ಗುಡಿ ಬಗೆಯ ಸೆರಗನ್ನು ಸೀರೆಯ ಉಳಿದ ಬಾಗಕ್ಕೆ ಎರಡು ಬಗೆಯ ಬಣ್ಣದ ನೂಲುಗಳನ್ನು ಬಳಸಿ ಕುಣಿಕೆ ಏರ‍್ಪಾಟು (loop system) ಹಾಗು ಉದ್ದಡ್ಡ (weft) ಹೆಣೆಯುವಿಕೆಯ ಮೂಲಕ ಬೆಸೆಯಲಾಗುತ್ತದೆ. ಈ ರೀತಿಯಲ್ಲಿ ನೇಕಾರರು 6 ಗಜ, 8 ಗಜ ಮತ್ತು 9 ಗಜದ ಸೀರೆಗಳನ್ನು ನೇಯುತ್ತಾರೆ.
ಬರೆ (stripe), ಆಯ (rectangle) ಮತ್ತು ಚೌಕ (square) ಮಯ್ ಬಾಗದ ಶಯ್ಲಿಯಾದರೆ, ಗೋಮಿ, ಪರಸ್ಪೆತ್ (ಚಿಕ್ಕಿ ಪರಸ್, ದೊಡ್ಡ ಪರಸ್), ಗಾಡಿ ಇವು ಸೀರೆ ಅಂಚಿನ ಶಯ್ಲಿಗಳು. ಅಂಚುಗಳು ಸರಿ ಸುಮಾರು 4-6 ಇಂಚಿದ್ದು ಕೆಂಪು ಅತವ ಕಂದು-ಕೆಂಪು (maroon) ಬಣ್ಣದ್ದಾಗಿರುತ್ತವೆ. ಸೆರಗಿನ ಬಾಗದಲ್ಲಿ ಸಾಮನ್ಯವಾಗಿ ಕೆಂಪು ಮತ್ತು ಬಿಳಿ ಬಣ್ಣವನ್ನು ಕಾಣಬಹುದು. ಸೆರಗಿನ ಕೊನೆ ಬಾಗವು ಹಣಿಗೆ (comb), ಕೋಟಿ ಕಮ್ಲಿ (fort ramparts), ತೋಪುತೆನೆ (jowar), ಬೆಟ್ಟಗಳ ಸಾಲುಗಳಂತಹ ಆಕಾರವನ್ನು ಹೊಂದಿದ್ದು 16-27 ಇಂಚಿನಶ್ಟಿರುತ್ತದೆ. ಇನ್ನು ಪಲ್ಲಕ್ಕಿ, ಆನೆ ತಾವರೆಯ ಕಸೂತಿ ಈ ಸೀರೆಗಳ ಹೆಚ್ಚುಗಾರಿಕೆ. ಕಸೂತಿಯ ವಿಶೇಶವೆಂದರೆ ಸೀರೆಯ ಎರಡು ಕಡೆ ಒಂದೇ ರೀತಿಯಾಗಿ ಕಾಣುತ್ತದೆ. ಕೇವಲ ಉತ್ತರ ಕರ‍್ನಾಟಕ, ಆಂದ್ರಪ್ರದೇಶ, ಮಹಾರಾಶ್ಟ್ರ ರಾಜ್ಯಗಳಲ್ಲಶ್ಟೆ ಹೆಚ್ಚಾಗಿ ಬಳಕೆಯಲ್ಲಿದ್ದ ಇಳಕಲ್ ಸೀರೆಗಳು ಈಗ ತನ್ನ ಹೊಸ ಶಯ್ಲಿಯಿಂದ ದೇಶದೆಲ್ಲೆಡೆ ಹೆಸರುವಾಸಿಯಾಗಿವೆ. ಇಳಕಲ್ ಸೀರೆಗಳು ಅಲಂಕಾರಕ್ಕೆ ಮತ್ತೊಂದು ಗರಿ ಎಂದರೆ ತಪ್ಪಾಗಲಾರದು.
(ಮಾಹಿತಿ ಸೆಲೆ: wikipedia)
ಪ್ರೇಮಾ ಅವರೇ,
ಹುಟ್ಟು ಹಬ್ಬದ ಶುಭಾಷಯಗಳು(ತಡವಾಗಿದ್ದಕ್ಕೆ ಕ್ಷಮೆ ಇರಲಿ).
ಇಲಕಲ್ ಸೀರಿ ಬಗ್ಗೆ ಭಾಳ ಛಂದ ಬರದಿರಿ, ಶುಭಾಶಯಗಳು.
ಅಲ್ಲಿಂದ ಬರಿ ೪೦. ಕಿ ಮಿ ದೂರದೊಳಗ ಗುಳೇದಗುಡ್ಡ ಅಂತ ಒಂದ ಸಣ್ಣ ಊರ್ ಅದರಿ. ಅಲ್ಲಿ ಈ ರೇಷ್ಮಿ ಸೀರಿ ಜೊತಿ ತೊಟ್ಕೊಳ್ಳೊ ಖಣ (ಕುಪ್ಪಸ) ತಯಾರ್ ಮಾಡ್ತಾರ್ ರೀ, ಅದರ ಬಗ್ಗೆನೂ ಸ್ವಲ್ಪ ಬರೀರಲಾ….
-ಗುರುರಾಜ