ರಾಗಿಯ ತಿಂದು ಗಟ್ಟಿಯಾಗಿ
ಕನಕದಾಸರು ಮುಕ್ಯ ಹರಿದಾಸರಲ್ಲಿ ಒಬ್ಬರು. ಹಾಗೆಯೇ ಕನ್ನಡ ನುಡಿಯ ಪ್ರಸಿದ್ದ ಕವಿಗಳು ಮತ್ತು ಪುರಂದರದಾಸರೊಂದಿಗೆ ಕರ್ನಾಟಕ ಸಂಗೀತದ ಮೂಲಬೂತ ಸಿದ್ದಾಂತಗಳಿಗೆ ಕಾಣಿಕೆಯನ್ನಿತ್ತವರು. ಕನಕದಾಸರ ಒಂದು ಕತೆಯಲ್ಲಿ ಅಕ್ಕಿಗೂ ರಾಗಿಗೂ ಜಗಳವಾಗುವ ಪ್ರಸಂಗ, ನಾನು ಮೇಲು ನಾನು ಮೇಲೆಂದು ಎರಡೂ ದಾನ್ಯಗಳೂ ಜಗಳವಾಡುತ್ತ ಜಗಳ ಬಿಡಿಸಲು ಶ್ರೀ ರಾಮನಲ್ಲಿಗೆ ಹೋಗುತ್ತವೆ. ತಮ್ಮ ಗುಣಗಳನ್ನೆಲ್ಲ ಹೇಳಿಕೊಂಡು ನಮ್ಮಲ್ಲಿ ಯಾರು ಹೆಚ್ಚು ಎಂದು ರಾಮನನ್ನು ಕೇಳುತ್ತವೆ, ಅವುಗಳ ಜಗಳ ಬಿಡಿಸಲು ರಾಮನಿಗೂ ತಬ್ಬಿಬ್ಬಾಗುತ್ತದೆ. ಕಡೆಗೆ ಎಶ್ಟೇ ಗುಣಗಳಿದ್ದರೂ, ಕಾಲನ ಹೊಡೆತಕ್ಕೆ ಸಿಕ್ಕು ತನ್ನ ಗುಣಗಳನ್ನು ಉಳಿಸಿಕೊಳ್ಳಬಲ್ಲ ಶಕ್ತಿ ಇರುವ ದಾನ್ಯವೇ ಲೇಸಾಗಿರುವುದರಿಂದ, ಈ ಪರೀಕ್ಶೆಗೆ ಎರಡೂ ದಾನ್ಯಗಳೂ ಒಳಪಡಬೇಕೆಂದು ರಾಮನು ಹೇಳುವನು. ಗುಂಡಿಯೊಂದರಲ್ಲಿ ಎರಡೂ ದಾನ್ಯಗಳನ್ನು ಬುಟ್ಟಿಯಲ್ಲಿ ಹಾಕಿ ಹೂತಿಟ್ಟು ವರುಶದ ನಂತರ ತೆಗೆದು ನೋಡುವ ಪರೀಕ್ಶೆ. ಅದರಂತೆ ಎರಡೂ ದಾನ್ಯಗಳನ್ನು ಬುಟ್ಟಿಯೊಂದರಲ್ಲಿ ಹಾಕಿ, ಒಂದು ತೆಗ್ಗಿನ್ನು ತೋಡಿ ಅದರೊಳಗಿಟ್ಟು ಮುಚ್ಚಲಾಗುತ್ತದೆ. ವರುಶದ ಬಳಿಕ ತೆಗ್ಗನ್ನು ತೆರೆದು ಬುಟ್ಟಿ ಬಿಚ್ಚಿ ನೋಡಿದರೆ, ಅಕ್ಕಿ ಮುಗ್ಗುಲಾಗಿರುತ್ತದೆ. ರಾಗಿ ಎಂದಿನಂತೆ ತನ್ನ ಸಹಜ ಗುಣದಿಂದಿರುತ್ತದೆ. ಇದನ್ನು ನೋಡಿ ರಾಮ ರಾಗಿಯೇ ಮೇಲೆಂದು ಹೇಳುತ್ತಾನೆ. ಅಲ್ಲಿಗೆ ನಮ್ಮ ರಾಗಿಯ ಪ್ರಮುಕ್ಯತೆ ತಿಳಿಯುತ್ತದೆ.
ರಾಗಿ ಬೇಸಾಯದಲ್ಲಿ ಬಾರತಕ್ಕೆ ಜಗತ್ತಿನಲ್ಲಿಯೇ ಮೊದಲ ಸ್ತಾನವಿದೆ. ಬಾರತದಲ್ಲಿ ಕರ್ನಾಟಕ, ತಮಿಳುನಾಡು, ಮಹಾರಾಶ್ಟ್ರ, ಆಂದ್ರ ಪ್ರದೇಶ, ಬಿಹಾರ, ಉತ್ತರ ಪ್ರದೇಶ, ಒರಿಸ್ಸಾ, ಮದ್ಯ ಪ್ರದೇಶ, ಅಸ್ಸಾಂ, ಹಿಮಾಚಲ ಪ್ರದೇಶ ರಾಜ್ಯಗಳು ರಾಗಿಯನ್ನು ಬೆಳೆಯುತ್ತಿವೆ. ರಾಗಿಗೆ ದೇಶದಲ್ಲೇ ಅತ್ಯಂತ ಹೆಚ್ಚಿನ ಕ್ರುಶಿ ಪ್ರದೇಶ ಹೊಂದಿರುವ ನಾಡು ಕರ್ನಾಟಕ. ಕರ್ನಾಟಕದಲ್ಲಿ ಕೋಲಾರ, ಬೆಂಗಳೂರು, ಚಿತ್ರದುರ್ಗ, ತುಮಕೂರು, ಹಾಸನ ಮತ್ತು ಮೈಸೂರುಗಳಲ್ಲಿ ಬೆಳೆಯಲಾಗುತ್ತದೆ. ಇದು ಒಂದು ಉತ್ತಮ ಆಹಾರ ಬೆಳೆಯಾಗಿದೆ. ಇದು ಒಂದು ವರುಶದ ಬೆಳೆಯಾಗಿದ್ದು, ಒಂದು ಅತವಾ ಮಿಶ್ರಬೆಳೆಯಾಗಿಯೂ ಬೆಳೆಯಬಹುದು.
ಬೇಸಾಯದಲ್ಲಿ ರಾಗಿ ಒಕ್ಕಣೆ ಎಂಬುದು ಕಾಯಕದ ಸರಣಿ. ರಾಗಿ ಆಹಾರ ಬೆಳೆಯಾಗಿ, ಮತ್ತು ಜಾನುವಾರುಗಳಿಗೆ ಶಕ್ತಿದಾಯಕ ಮೇವಾಗಿ ದಶಕಗಳಿಂದಲೂ ಬೆಳೆಯುತ್ತಾ ಬಂದಿದೆ. ದೇಶದ ಬೇರೆ ಬೇರೆ ಬಾಗಗಳಲ್ಲಿ ಅಯಾ ಜಾಗದ ಹವಾಮಾನಕ್ಕೆ ತಕ್ಕಂತೆ ಬೆಳೆಯಲಾಗುತ್ತದೆ. ಮುಂಗಾರು ಮತ್ತು ಹಿಂಗಾರಿನ ಬೆಳೆಯಾಗಿಯೂ ಬೆಳೆಯಲಾಗುತ್ತದೆ.
ರಾಗಿಯಲ್ಲಿರುವ ಪೋಶಕಾಂಶಗಳ ವಿವರ:
ರಾಗಿ ಅತ್ಯದಿಕ ಕ್ಯಾಲ್ಸಿಯಂ ಮತ್ತು ಕಬ್ಬಿಣದ ಅಂಶಗಳನ್ನೊಳಗೊಂಡಿದೆ. 100 ಗ್ರಾಮ್ ರಾಗಿಯಲ್ಲಿನ ಪೋಶಕಾಂಶಗಳ ವಿವರ ಈ ಕೆಳಕಂಡಂತಿದೆ:
- ದೇಹಕ್ಕೆ ಅಗತ್ಯವಾಗಿರುವ ನೈಸರ್ಗಿಕ ಕಬ್ಬಿಣಾಂಶದ ಮೂಲ ರಾಗಿ, ಹಾಗಾಗಿ ರಕ್ತಹೀನತೆಗೆ ಅತ್ಯಂತ ಸೂಕ್ತವಾದ ದಾನ್ಯ.
- ದೇಹದ ಹೆಚ್ಚಿನ ಬಿಸುಪನ್ನು ಕಡಿಮೆ ಮಾಡುವಲ್ಲಿ ಇದು ಸಹಾಯಕಾರಿ. ಬೇಸಿಗೆ ಸಮಯದಲ್ಲಿ ದೇಹವನ್ನು ತಂಪಾಗಿಸುವ ಶಕ್ತಿ ರಾಗಿಗಿದೆ. ಬೇಸಿಗೆ ಸಮಯದಲ್ಲಿ ಕಂಡುಬರುವ ಹಲವಾರು ರೋಗಗಳಿಗೆ ಪರಿಣಾಮಕಾರಿ ಮದ್ದು ಸಹ ರಾಗಿಯಾಗಿದೆ.
- ದೇಹದ ರೋಗನಿರೋದಕ ಸಾಮರ್ತ್ಯವನ್ನು ಹೆಚ್ಹಿಸುವಲ್ಲಿ ಇದರಲ್ಲಿರುವ ಪ್ರೊಟೀನ್ ಹಾಗು ವಿಟಮಿನ್ಗಳು ಸಹಾಯ ಮಡುತ್ತವೆ
- ರಾಗಿ ಮುದ್ದೆಯಲ್ಲಿರುವ ನಾರಿನ ಗುಣ ಮಲಬದ್ದತೆಗೆ ಸಹಾಯಕಾರಿ.
- ಹೈಪೋತೈರಾಯ್ಡ್ ನಿಂಡ ಬಳಲುತ್ತಿರುವವರಿಗೆ ಇದು ಉತ್ತಮ ಆಹಾರ.
- ತಾಯಂದಿರ ಹಿಮೋಗ್ಲೋಬೀನ್ ಮಟ್ಟ ಸುದಾರಿಸಿ ಮಗುವಿಗೆ ಹಾಲುಣಿಸುವಲ್ಲಿ ರಾಗಿ ಸಹಕಾರಿಯಾದುದು.
- ರಾಗಿಯಲ್ಲಿರುವ ಅಮೀನೋ ಆಸಿಡ್ ಲೆಸಿತಿನ್ ಹಾಗೂ ಮೆತೊನಿನ್ ಜೀರ್ಣಾಂಗವ್ಯೂಹದಲ್ಲಿರುವ ಹೆಚ್ಚುವರಿ ಕೊಬ್ಬನ್ನು ಕೆಳಮಟ್ಟಕ್ಕೆ ತರುವ ಮೂಲಕ ಒಳ್ಳೆಯ ಕೊಲೆಸ್ಟ್ರಾಲ್ ಮಟ್ಟವನ್ನು ಕಾಪಾಡುವಲ್ಲಿ ರಾಗಿ ಒಳ್ಳೆಯ ಆಹಾರ.
- ಸಕ್ಕರೆ ರೋಗದ ಮೆಲ್ಲಿಟಸ್ ಮತ್ತು ಜೀರ್ಣಾಂಗವ್ಯೂಹದ ಅಸ್ವಸ್ತತೆಗಳ ಅಪಾಯ ಮಟ್ಟವನ್ನು ರಾಗಿ ಮುದ್ದೆ ಕಡಿಮೆ ಮಾಡುತ್ತದೆ ಹಾಗಾಗಿ ಸಕ್ಕರೆ ರೋಗಿಗಳಿಗಿದು ಸೂಕ್ತ ಆಹಾರ .
- ರಾಗಿ ಮುದ್ದೆಯ ಇನ್ನೊಂದು ಪರಿಣಾಮಕಾರಿ ಪ್ರಯೋಜನವೆಂದರೆ ನಿಮ್ಮ ಮೂಳೆಗಳನ್ನು ಬಲಪಡಿಸುವ ಶಕ್ತಿಯನ್ನು ಇದು ಹೊಂದಿದೆ. ಇದರಲ್ಲಿ ಹೆಚ್ಚು ಪ್ರಮಾಣದ ಕ್ಯಾಲ್ಶಿಯಂ ಮತ್ತು ವಿಟಮಿನ್ ಡಿ ಇದ್ದು, ಮಕ್ಕಳಿಗೆ ಹಾಗೂ ವಯಸ್ಸಾದವರಿಗೆ ಆವಶ್ಯಕವಾಗಿರುವ ಕೆಲವೊಂದು ಪ್ರಮುಕ ಅಂಶಗಳನ್ನು ಇದು ಹೊಂದಿದೆ.
(ಮಾಹಿತಿ ಸೆಲೆ: smallmillets.res.in)
(ಚಿತ್ರ ಸೆಲೆ: hearinternational.org)
“ಬೇಸಾಯದಲ್ಲಿ ರಾಗಿ ಒಕ್ಕಣೆ ಎಂಬುದು ಕಾಯಕದ ಸರಣಿ” heegandre Enu?
ಕಾಯಕದ ಸರಣಿ = ?
ರಾಗಿ ಒಕ್ಕಣೆ = ?