ಬೋತ್ಸ್ ವಾನ, ಬಾರತ ಮತ್ತು ನುಡಿ ಸಮಾನತೆ

– ಅನ್ನದಾನೇಶ ಶಿ. ಸಂಕದಾಳ.

Flag-Pins-Botswana-India

 

ಆಪ್ರಿಕಾದ ತೆಂಕಣ ದಿಕ್ಕಿನಲ್ಲಿ ಬೋತ್ಸ್ ವಾನ ಎಂಬ ದೇಶವೊಂದಿದೆ. ಬ್ರಿಟೀಶರ ಆಳ್ವಿಕೆಯಡಿ ಇದ್ದ ಈ ದೇಶ 1966 ರ ಸೆಪ್ಟೆಂಬರ್ 30 ರಂದು ಬಿಡುಗಡೆ ಹೊಂದಿತು. ಅಲ್ಲಿ ತ್ಸ್ವಾನ (ಸೆತ್ಸ್ ವಾನ), ಕಲಂಗ, ಸೇಸುಬಿಯ, ಶೇಕ್ ಗಲಗಾರಿ ಮತ್ತು ಇನ್ನು ಹಲವು ನುಡಿಯಾಡುವವರಿದ್ದಾರೆ. ಮೇಲೆ ತಿಳಿಸಿದ ನುಡಿಗಳು ಬುಡಕಟ್ಟು ಮಂದಿಯ ನುಡಿಗಳು ಎಂದು ಹೇಳಲಾಗುತ್ತದೆ. ಹೆಚ್ಚಾಗಿ ಬುಡಕಟ್ಟು ನುಡಿಯಾಡುವ ಮಂದಿಯನ್ನೇ ಈ ದೇಶ ಹೊಂದಿದೆಯಂತೆ. ಇಂಗ್ಲೀಶ್ ಮತ್ತು ತ್ಸ್ವಾನ ನುಡಿಗಳು ಬೋತ್ಸ್ ವಾನದ ಅದಿಕ್ರುತ ನುಡಿಗಳು.

ಆಳ್ವಿಕೆಗೆ ಅನುಕೂಲವಾಗಲೆಂದು ಹಲವಾರು ವಲಯಗಳನ್ನು ಮತ್ತು ವಲಯಗಳ ಕೌನ್ಸಿಲ್ ಗಳನ್ನು ಈ ದೇಶ ಹೊಂದಿದೆ. “ಸೆಲೆಬಿ ಪಿಕ್ವೆ ವೆಸ್ಟ್” ಕೌನ್ಸಿಲ್ ಅವುಗಳಲ್ಲಿ ಒಂದು. ಆ ಕೌನ್ಸಿಲ್ ನ, ಬೋತ್ಸ್ ವಾನ ಕಾಂಗ್ರೆಸ್ ಪಾರ‍್ಟಿಗಿಲ್ಸನ್ ಸಲೆಶಂಡೊ ಎಂಬುವವರು, ನಾಡಿನ ಒಡೆತನದಲ್ಲಿರುವ ಸಂಪರ‍್ಕ ಮಾದ್ಯಮಗಳಲ್ಲಿ ಸುದ್ದಿಯನ್ನು ಆ ನಾಡಿನ ಇತರೆ ನುಡಿಗಳಲ್ಲೂ ಬಿತ್ತರಿಸುವ ಹಾಗೆ ಮಾಡಬೇಕು ಎಂಬ ಪ್ರಸ್ತಾವನೆಯನ್ನು ಬೋತ್ಸ್ ವಾನದ ಸಂಸತ್ತಿನಲ್ಲಿ ಮುಂದಿಟ್ಟಿದ್ದರಂತೆ. ಆದರೆ ಜನರಿಗೆ, ಅವರವರ ನುಡಿಯಲ್ಲೇ ಸುದ್ದಿ ಮುಟ್ಟಿಸುವ ಏರ‍್ಪಾಡು ಬೋತ್ಸ್ ವಾನದ ಏಕತೆಗೆ ದಕ್ಕೆ ತಂದು, ನಾಡನ್ನು ಬುಡಕಟ್ಟುಗಳ ನೆಲೆಗಳ ಮೇಲೆಯೇ ಒಡೆಯಬಹುದು ಎಂಬ ನೆಪ ಮುಂದು ಮಾಡಿ ಈ ಪ್ರಸ್ತಾವನೆಯನ್ನು ತಳ್ಳಿಹಾಕಿರುವ ಸುದ್ದಿಯೊಂದು ಬಂದಿದೆ. ಇದೊಂದೇ ಅಲ್ಲದೇ, ಸಲೆಶಂಡೊ ಅವರೇ ಹಿಂದೊಮ್ಮೆ ಪ್ರಸ್ತಾಪಿಸಿದ್ದ  “ತಾಯ್ನುಡಿಯಲ್ಲೇ ಮೊದಲ ಹಂತದ ಕಲಿಕೆ ಇರಲಿ” ಎಂಬ ಪ್ರಸ್ತಾವನೆಯನ್ನೂ ಕೂಡ ಅಲ್ಲಿನ ಸಂಸತ್ತು ಒಪ್ಪಲಿಲ್ಲ ಎಂಬುದೂ ತಿಳಿದುಬಂದಿದೆ.

“ಬೇರೆ ಬೇರೆ ನುಡಿಗಳ ಬಳಕೆಗೆ ಅನುವು ಮಾಡಿಕೊಟ್ಟರೆ, ಬೋತ್ಸ್ ವಾನ ಒಡೆಯುತ್ತದೆ” ಎಂಬ ಅಂಜಿಕೆ ಅತಿರೇಕದ್ದು ಮತ್ತು ಅತಿಶಯವಾದದ್ದು ಎಂದು ನುಡಿ ಸಮಾನತೆ ಬಯಸುವ ಅಲ್ಲಿನ ಜನರು ಹೇಳುತ್ತಾರೆ. ಬೇರೆ ಬೇರೆ ನುಡಿಗಳಲ್ಲಿ ಸುದ್ದಿ ಬಿತ್ತರಿಸುವದರಿಂದ, ಆ ನಾಡಿನ ಬೇರೆ ಬೇರೆ ನುಡಿಗಳ ಬಗ್ಗೆ ಜನರಲ್ಲಿ ಅರಿವು ಮೂಡಿ ಆ ನುಡಿಯಾಡುವವರನ್ನು ಹೆಚ್ಚು ಅರಿಯಲು ಅನುಕೂಲವಾಗುತ್ತದೆ ಎಂಬುದು ನುಡಿ ಹಲತನವನ್ನು ಗೌರವಿಸಬೇಕು ಎನ್ನುವ ಮಂದಿಯ ಅನಿಸಿಕೆ.

“ಒಂದು ನಾಡಿನ ಜನರ ತಾಯ್ನುಡಿಗಳನ್ನು ಸಮನಾಗಿ ಕಾಣದಿರುವುದು, ಆ ನುಡಿಗಳ ಜನರ ಬಲ ತಗ್ಗಿಸುವ ಮತ್ತು ಅವರನ್ನು ಮಾನಸಿಕವಾಗಿ ಕುಗ್ಗಿಸುವ ತಂತ್ರ”

ಎನ್ನುವ ಅವರು, ಬಿಡುಗಡೆ ಹೊಂದುವ ಮುನ್ನ ತಮ್ಮನ್ನು ಆಳಿದ ಬ್ರಿಟೀಶರು, ಆಳ್ವಿಕೆಯಲ್ಲಿ ಇಂಗ್ಲೀಶನ್ನು ಬಳಸಿದ್ದು ಇದೇ ಕಾರಣಕ್ಕಾಗಿ ಎಂದೂ ಹೇಳುತ್ತಾರೆ. ತಮ್ಮ ತೆರಿಗೆ ಹಣದಿಂದಾನೆ ನಡೆಯುವ ಸಂಪರ‍್ಕ ಮಾದ್ಯಮಗಳಿಂದ ತಮ್ಮ ನುಡಿಗಳಲ್ಲಿ ಮಾಹಿತಿ ಪಡೆಯಲಾಗದಿರುವ ಏರ‍್ಪಾಡು ಸರಿಯಾದುದಲ್ಲ ಎಂದು ಅವರು ಅಸಮಾದಾನ ಹೊಂದಿದ್ದಾರೆ .

“48 ವರುಶದ ದೇಶವೊಂದು, ತನ್ನದೇ ಆದ ಮತ್ತೊಂದು ನುಡಿಯನ್ನು ಗುರುತಿಸಿ ಗೌರವಿಸಿದರೆ ಒಗ್ಗಟ್ಟು ಮುರಿಯುತ್ತದೆ ಎಂದು ತಿಳಿದಿದ್ದರೆ, ಆ ದೇಶ ಮತ್ತು ರಾಶ್ಟ್ರೀಯತೆ ಎಶ್ಟು ಟೊಳ್ಳು ಅಂತ ತೋರಿಸಿಕೊಟ್ಟ ಹಾಗೆ ತಾನೇ”

ಎಂದು ಅವರು ಮರುಪ್ರಶ್ನೆ ಹಾಕುವರು!

ಬಾರತ ಮತ್ತು ಬೋತ್ಸ್ ವಾನ ದೇಶಗಳ ನಡುವೆ ಕೆಲವು ವಿಚಾರಗಳಲ್ಲಿ ಹೋಲಿಕೆ ಇದೆ ಎಂದು ಹೇಳಬಹುದು. ಎರಡೂ ನಾಡುಗಳು ವಸಾಹತುಶಾಹಿಗಳ ಆಳ್ವಿಕೆಗೆ ಒಳಪಟ್ಟ ನಾಡುಗಳು. ಬೋತ್ಸ್ ವಾನ ದಲ್ಲಿ ಇಂಗ್ಲೀಶ್ ಮತ್ತು ತ್ಸ್ವಾನ ಅದಿಕ್ರುತ ನುಡಿಗಳು. ಹಿಂದಿ ಮತ್ತು ಇಂಗ್ಲೀಶ್ ಬಾರತ ಕೇಂದ್ರ ಸರಕಾರದ ಅದಿಕ್ರುತ ನುಡಿಗಳು . ಬಾರತ ಸಂವಿದಾನವೇ ಗುರುತಿಸಿರುವ ಹಲವಾರು ನುಡಿಗಳಿದ್ದರೂ, ಹಿಂದಿ ಎಂಬ ಬಾರತದ ಪ್ರಾದೇಶಿಕ ನುಡಿ ಮಾತ್ರ ಅದಿಕ್ರುತ ನುಡಿ ಪಟ್ಟ ಹೊಂದಿದೆ. ಬೋತ್ಸ್ ವಾನದಲ್ಲಿ ಮಂದಿಯ ತೆರಿಗೆ ಹಣ ಬಳಸಿದರೂ, ಸಂಪರ‍್ಕ ಮಾದ್ಯಮಗಳಲ್ಲಿ ಉಳಿದ ನುಡಿಗಳಲ್ಲಿ ಸುದ್ದಿ ಬಿತ್ತರಿಸುತ್ತಿಲ್ಲ. ಬಾರತದಲ್ಲಿ ಹಿಂದಿಯೇತರ ಮಂದಿಯ ತೆರಿಗೆ ದುಡ್ಡು, ಅವರ ಮೇಲೆಯೇ ಹಿಂದಿ ಹೇರಲು ಬಳಕೆಯಾಗುತ್ತದೆ. ಬಾರತದಲ್ಲಿ ಕೇಂದ್ರ ಸರ‍್ಕಾರದ ಸಾರ‍್ವಜನಿಕ ಸೇವೆಗಳು ಹಿಂದಿ ಎಂಬ ಬಾರತದ ನುಡಿ ಬಿಟ್ಟು ಬೇರೆ ಯಾವ ಬಾರತೀಯ ನುಡಿಗಳಲ್ಲಿ ಸಿಗುವುದಿಲ್ಲ.ಬಾರತದ ಸಂವಿದಾನವನ್ನೇ, ಹಿಂದಿಯನ್ನು ಹೆಚ್ಚು ಬಳಸುವಂತೆ ಮತ್ತು ಆ ನುಡಿಯನ್ನೇ ಈ ದೇಶದ ಮುಕ್ಯವಾಹಿನಿಯಾಗಿ ಮಾಡುವಂತೆ ಬರೆಯಲಾಗಿದೆ. ನುಡಿ ಸಮಾನತೆಯನ್ನು ಕಾಪಾಡುವುದರಲ್ಲಿ ಎಡವಿರುವ ಈ ಎರಡೂ ನಾಡುಗಳು ಆರ‍್ತಿಕವಾಗಿ ಇನ್ನೂ “ಏಳಿಗೆ ಹೊಂದಬೇಕಿರುವ” ನಾಡುಗಳ ಪಟ್ಟಿಯಲ್ಲಿದೆ ಎಂಬುದು ಗಮನಿಸಬಹುದಾದ ಮತ್ತೊಂದು ಹೋಲಿಕೆ. ಹಾಗೆಯೇ, ಹಲವಾರು ನುಡಿಗಳನ್ನು ಹೊಂದಿರುವ ಮುಂದುವರಿದ ನಾಡುಗಳನ್ನು ನೋಡಿದಾಗ, ಅವರು ನುಡಿ ಸಮಾನತೆಗೆ ಒತ್ತು ಕೊಟ್ಟು, ಅದನು ಕಾಪಾಡಿಕೊಂಡು ಬಂದಿರುವುದನ್ನು ಕಾಣಬಹುದಾಗಿದೆ.

ತಾಯ್ನುಡಿಯಲ್ಲಿ ಎಲ್ಲವನ್ನು ಪಡೆಯುವುದು ಆ ನುಡಿಯಾಡುವವರ ಹಕ್ಕಾಗಿದ್ದು, ಅದನ್ನು ಬೇರೆ ಏನೋ ನೆಪವೊಡ್ಡಿ, ಹತ್ತಿಕ್ಕುವುದರಿಂದ ಸಮಾಜದಲ್ಲಿ ಅಶಾಂತಿ ಉಂಟಾಗಿ ನಾಡಿನ ಏಕತೆಗೆ ದಕ್ಕೆ ಬರುವ ಅಳುಕು ಇದ್ದೇ ಇರುತ್ತದೆ. ಆದ್ದರಿಂದ, ಆ ನಾಡಿನ ನುಡಿಗಳನ್ನು ಗುರುತಿಸಿ ಅವುಗಳನ್ನು ಸಮನಾಗಿ ಉಪಚರಿಸಿ ಆ ನುಡಿಗಳನ್ನಾಡುವ ಮಂದಿಯನ್ನು ಆ ದೇಶದ ಸಮಾಜದಲ್ಲಿ ಒಳಗೊಳ್ಳುವುದಕ್ಕೆ ಅನುವು ಮಾಡಿಕೊಡಬೇಕಾದುದು ಆಳ್ವಿಕೆಯಲ್ಲಿರುವವರ ಹೊಣೆಗಾರಿಕೆಯಾಗಿದೆ. ನುಡಿಗಳ ಹಲತನಕ್ಕೆ ಬೆಲೆ ಕೊಟ್ಟು, ನುಡಿಗಳ ಮಹತ್ವ ಅರಿತು, ನುಡಿ ಸಮಾನತೆಯನ್ನು ಕಾಪಾಡಲು ಹಾಕಿಕೊಳ್ಳುವ ಹಮ್ಮುಗೆಗಳು ಆ ನಾಡನ್ನು ಏಳಿಗೆಯತ್ತ ಕೊಂಡೊಯ್ಯಲು ನೆರವಾಗುತ್ತದೆ. ಬಾರತ ಮತ್ತು ಬೋತ್ಸ್ ವಾನ ಎರಡೂ ನಾಡುಗಳು ಈ ವಿಶಯವನ್ನು ಬೇಗನೇ ತಿಳಿದರೆ ಜನರಿಗೆ ಒಳಿತು.

( ಮಾಹಿತಿ ಸೆಲೆ: mmegi.bwwikipedia-Tswanawikipedia-Botswana )

( ಚಿತ್ರ ಸೆಲೆ: crossed-flag-pins.com )

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.