ಹಿಂದಿ ದಿವಸ್ – ಒಕ್ಕೂಟ ಬಾರತಕ್ಕೆ ಕಪ್ಪು ಚುಕ್ಕಿ

– ವಲ್ಲೀಶ್ ಕುಮಾರ್.

hindi divas

ಇಂದು ಸೆಪ್ಟೆಂಬರ್ 14. ಇವತ್ತು ದೇಶದಾದ್ಯಂತ ಕೇಂದ್ರ ಸರ‍್ಕಾರದ ಕಚೇರಿಗಳಲ್ಲಿ “ಹಿಂದಿ ದಿವಸ್” ಆಚರಿಸಲಾಗುತ್ತದೆ. ಅಂತೆಯೇ ಸೆಪ್ಟೆಂಬರ್ ತಿಂಗಳ ಮೊದಲೆರಡು ವಾರ “ಹಿಂದಿ ಪಕ್ವಾಡ” ಅಂತಲೂ ಮತ್ತು ಎರಡನೇ ವಾರವನ್ನು “ಹಿಂದಿ ಸಪ್ತಾಹ್” ಎಂದೂ ಕೇಂದ್ರ ಸರ‍್ಕಾರ ಗುರುತಿಸಿದೆ. ಆದರೆ ಇಂತಹ ಒಂದು ಆಚರಣೆಯ ಹಿಂದಿನ ಉದ್ದೇಶ ಮತ್ತು ಹಿಂದಿ ಕೇಂದ್ರಿತ ಆಡಳಿತದಿಂದ ಕೇಂದ್ರ ಸರ‍್ಕಾರದ ಸೇವೆಗಳು ಹಿಂದಿಯೇತರ ನುಡಿ ಸಮುದಾಯಗಳ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತಿವೆ ಅನ್ನುವುದು ಪ್ರಸ್ತುತ ನಮ್ಮ ಮುಂದಿರುವ ಪ್ರಶ್ನೆ.

ಕೇಂದ್ರ ಸರ‍್ಕಾರ ಕೊಡುತ್ತಿರುವ ಅನೇಕ ಸೇವೆಗಳು ಅಂದರೆ ಬ್ಯಾಂಕ್, ರೈಲು, ಅಂಚೆ, ವಿಮೆ, ವಿಮಾನಯಾನ ಇತ್ಯಾದಿ – ಇವುಗಳಲ್ಲಿ ಸಿಗುವ ಸೇವೆಯನ್ನು ಬಾಶಾ ಆಯಾಮದಿಂದ ನೋಡಿದಾಗ ಕಾಣುವ ಸತ್ಯವೆಂದರೆ – ಹಿಂದಿ ಆಚರಣೆಯ ಜೋರಿನಲ್ಲಿ ಈ ಸೇವೆಗಳು ಜನ ಸಾಮಾನ್ಯರನ್ನು ಪರಿಣಾಮಕಾರಿಯಾಗಿ ತಲುಪುತ್ತಲೇ ಇಲ್ಲ. ಕರ‍್ನಾಟಕದ ಒಳಗಿನ ಊರುಗಳ ನಡುವೆ ರೈಲಿನಲ್ಲಿ ಪ್ರಯಾಣಿಸುವ ಕನ್ನಡಿಗರು ಹಿಂದಿ ಮತ್ತು ಇಂಗ್ಲೀಶಿನಲ್ಲಿ ಟಿಕೆಟ್ ಪಡೆಯುತ್ತಾರೆ. ಅಲ್ಲಿಗೆ ತಾವು ಕೊಂಡಿರುವ ಟಿಕೆಟ್ ಸರಿಯಾಗಿದೆಯೇ ಇಲ್ಲವೇ ಎಂದು ತಿಳಿದುಕೊಳ್ಳಲೂ ಅವರಿಗೆ ಆಗುವುದಿಲ್ಲ.

Rail_Gadag_Cheeti

(ಕರ‍್ನಾಟಕದ್ದೇ ಎರಡು ಊರುಗಳ ನಡುವೆ ಓಡುವ ರೈಲಿನಲ್ಲಿ ಕನ್ನಡವೇ ಕಣ್ಮರೆ. ತುರ‍್ತು ಪರಿಸ್ತಿಯ ಮಾಹಿತಿ ಕೂಡ ಕನ್ನಡದಲ್ಲಿ ಇಲ್ಲ)

ರೈಲ್ವೆ ಟಿಕೆಟಿನಲ್ಲಿ ಬಳಸಬೇಕಾದ ಬಾಶೆಗಳ ಕುರಿತು ಪ್ರಶ್ನೆ ಮಾಡಿ ಮಾಹಿತಿ ಹಕ್ಕಿನ ಅರ‍್ಜಿ ಸಲ್ಲಿಸಿದಾಗ, ತಮ್ಮ ಬಾಶಾನೀತಿಯನ್ನು ಸಮರ‍್ತಿಸಿಕೊಳ್ಳುವ ರೈಲ್ವೆ ಇಲಾಕೆಯು, 1989ರ ರೈಲ್ವೆ ಕಾಯ್ದೆಯ 50 -2 (A) ನಲ್ಲಿ ಈ ರೀತಿ ಹೇಳಿಕೊಂಡಿದೆ

“ಅತ್ಯಂತ ಕೆಳಗಿನ ದರ‍್ಜೆಯ ಪ್ರಯಾಣದ ಟಿಕೆಟ್ ಹಿಂದಿ, ಇಂಗ್ಲಿಶ್ ಮತ್ತು ಸ್ತಳೀಯ ಬಾಶೆಯಲ್ಲಿ ಇರತಕ್ಕದ್ದು. ಮಿಕ್ಕೆಲ್ಲಾ ದರ‍್ಜೆಯ ಟಿಕೆಟ್ ಹಿಂದಿ ಮತ್ತು ಇಂಗ್ಲೀಶಿನಲ್ಲಿ ಇರತಕ್ಕದ್ದು. ಯಾಂತ್ರಿಕ ಅತವಾ ಬೇರೆ ಯಾವುದೇ ಕಾರಣವಾಗಿ ಈ ರೀತಿಯಾದ ಅನುಶ್ಟಾನ ಮಾಡಲು ತೊಡಕಾದರೆ, ಈ ಮೂರರಲ್ಲಿ ಯಾವ ಬಾಶೆಯನ್ನು ಬೇಕಾದರೂ ಕೈಬಿಡಬಹುದು”

ಇಲ್ಲಿ ನಾವು ಗಮನಿಸಬೇಕಾದ ಅಂಶಗಳೇನೆಂದರೆ :

ಒಂದು – ದೇಶದ ಬೇರೆ ಬೇರೆ ರಾಜ್ಯಗಳಲ್ಲಿ ಅಲ್ಲಿನ ಸ್ತಳೀಯ ಬಾಶೆಯಲ್ಲೂ ಟಿಕೆಟ್ ಮುದ್ರಿಸಬೇಕು, ಆದರೆ ದೇಶದ ಯಾವುದೇ ಮೂಲೆಗೆ ಹೋದರು ಅಲ್ಲಿನ ಟಿಕೆಟಿನಲ್ಲಿ ಹಿಂದಿಯೂ ಇರಬೇಕು.

ಎರಡು – ಮೊದಲು ಹಿಂದಿಯೂ ಇರಲಿ ಎಂದು ಆರಂಬವಾದದ್ದು ಇಂದು “ಹಿಂದಿ/ಇಂಗ್ಲಿಶ್ ಸಾಕು, ಕರ‍್ನಾಟಕದಲ್ಲಿ ಕನ್ನಡ ಏಕೆ ಬೇಕು” ಎನ್ನುವಂತೆ ಕರ‍್ನಾಟಕದ ಎಲ್ಲಾ ರೈಲ್ವೆ ನಿಲ್ದಾಣಗಳಲ್ಲೂ ಕೊಡುವ ಟಿಕೆಟಿನಲ್ಲಿ ಕೇವಲ ಹಿಂದಿ-ಇಂಗ್ಲಿಶ್ ಇರುತ್ತದೆ. ಕರ‍್ನಾಟಕದಲ್ಲಿ ಪ್ರಯಾಣಿಸುವ ಒಬ್ಬ ಕನ್ನಡಿಗನಿಗೆ ಇದರಿಂದ ಏನು ಉಪಯೋಗ?

ಮೂರು – ರೈಲ್ವೆ ಕಾಯ್ದೆಯ ಪ್ರಕಾರ ಅತ್ಯಂತ ಕೆಳ ದರ‍್ಜೆಯ ಟಿಕೆಟ್ ಮಾತ್ರ ಪ್ರಾದೇಶಿಕ ಬಾಶೆಯನ್ನೂ ಹೊಂದಿರುತ್ತದೆ. ಅಂದರೆ “ಹಿಂದಿಯೇತರರು ಅತ್ಯಂತ ಕೆಳ ದರ‍್ಜೆಯಲ್ಲಿ ಮಾತ್ರ ಪ್ರಯಾಣಿಸುವರೇ?” ಎಂಬ ಪ್ರಶ್ನೆ ಕೇಳಬೇಕಾಗುತ್ತದೆ. ಇದೊಂದು ರೀತಿಯ ಜನಾಂಗೀಯ ನಿಂದನೆ (racism) ಎಂದರೂ ತಪ್ಪಿಲ್ಲ. ಇಶ್ಟೇ ಏಕೆ ರೈಲುಗಳಲ್ಲಿ ಸುರಕ್ಶತೆಯ ಮಾಹಿತಿಯೂ ಕೇವಲ ಹಿಂದಿ-ಇಂಗ್ಲಿಶ್ ನಲ್ಲಿ ಇರುತ್ತದೆ. ಅಲ್ಲಿಗೆ ಕರ‍್ನಾಟಕದಲ್ಲಿ ಕನ್ನಡಿಗರಿಗೆ ಕನ್ನಡ ಮಾತ್ರ ಗೊತ್ತಿದ್ದರೆ ಅಂತವರಿಗೆ ರೈಲಿನಲ್ಲಿ ಸುರಕ್ಶತೆಯ ಹಕ್ಕೂ ಇರುವುದಿಲ್ಲ!

ಎಲ್ಲಾ ಮುಂದುವರೆದ ನಾಡುಗಳೂ ಶಿಕ್ಶಣವನ್ನು ನಾಡಿನ ಏಳ್ಗೆಗೆ ಪರಿಕರವಾಗಿ ಬಳಸಿಕೊಂಡರೆ ನಮ್ಮ ದೇಶದಲ್ಲಿ ಶಿಕ್ಶಣವನ್ನು ಹಿಂದಿ ಹೇರಿಕೆಗೂ ಬಳಸಿಕೊಳ್ಳಲಾಗಿದೆ. ಬ್ರಿಟೀಶರಿಂದ ಬಿಡುಗಡೆ ಹೊಂದಿದ ಬಾರತ ತನ್ನ ಏಳ್ಗೆಗೆ ಉತ್ತಮ ಶಿಕ್ಶಣ ವ್ಯವಸ್ತೆ ಬೇಕೆಂದು ಕಂಡುಕೊಂಡು ಹಲವಾರು ದಿಗ್ಗಜರನ್ನು ಸೇರಿಸಿ ಕೊಟಾರಿ ಆಯೋಗ ರಚಿಸಿತು. ಕೊಟಾರಿ ಆಯೋಗ ತನ್ನ ವರದಿಯಲ್ಲಿ ಶಿಕ್ಶಣದಲ್ಲಿ ಅನುಸರಿಸಬೇಕಾದ ಬಾಶಾ ನೀತಿಯ ಕುರಿತು ಹೇಳುವಾಗ ಹಿಂದಿ ಬಾಶೆಯ ಬಳಕೆಯ ಕುರಿತು ಈ ರೀತಿ ತಿಳಿಸಿತು:

“ರಾಶ್ಟ್ರೀಯ ಮಟ್ಟದ ಶಿಕ್ಶಣ ಸಂಸ್ತೆಗಳಲ್ಲಿ ಇಂಗ್ಲಿಶ್ ಬಾಶೆಯ ಮಾದ್ಯಮದಲ್ಲಿ ಕಲಿಸಬೇಕು. ಮುಂದಿನ ದಿನಗಳಲ್ಲಿ ಹಿಂದಿ ಬಾಶೆ ಕಲಿಕಾ ಮಾದ್ಯಮವಾಗಬೇಕು; ಈ ಕೆಲಸವನ್ನು ಜೋಪಾನವಾಗಿ ಮಾಡತಕ್ಕದ್ದು. ಉನ್ನತ ಶೈಕ್ಶಣಿಕ ವಲಯದಲ್ಲಿ ಇಂಗ್ಲಿಶ್ ಬಾಶೆಯೇ ಸಂಪರ‍್ಕ ಬಾಶೆಯಾಗಿರಲಿ. ಆದರೆ ಮುಂದಿನ ದಿನಗಳಲ್ಲಿ ಆ ಸ್ತಾನವನ್ನು ಹಿಂದಿ ಬಾಶೆ ತುಂಬಬೇಕು ಏಕೆಂದರೆ ಹಿಂದಿ ಬಾಶೆಯು ಬಾರತದ ಆಡಳಿತ ಬಾಶೆ ಮತ್ತು ಸಂಪರ‍್ಕ ಬಾಶೆಯಾಗಿದೆ. ಹಾಗಾಗಿ ಹಿಂದಿ ಬಾಶೆಯನ್ನು ಹಿಂದಿಯೇತರ ಪ್ರದೇಶಗಳಿಗೂ ಹರಡಬೇಕು.”

ಅಲ್ಲಿಗೆ 1966ರ ಹೊತ್ತಿಗೆ ದೇಶದಾದ್ಯಂತ ಹಿಂದಿಯನ್ನು ಹರಡಬೇಕು ಎನ್ನುವ ಸಂಕಲ್ಪ ಆಗಿಹೋಗಿತ್ತು. ಇನ್ನು 70ರ ದಶಕದಲ್ಲಿ ತುರ‍್ತು ಪರಿಸ್ತಿತಿಯನ್ನು ಹೇರಿ ರಾಜ್ಯ ಪಟ್ಟಿಯಲ್ಲಿದ್ದ ಶಿಕ್ಶಣವನ್ನು ಜಂಟಿಪಟ್ಟಿಗೆ ಸೇರಿಸಿಕೊಂಡ ಕೇಂದ್ರ ಸರ‍್ಕಾರ ಶಿಕ್ಶಣದಲ್ಲಿ ತನ್ನ ಪ್ರಬಾವ ಇನ್ನಶ್ಟು ಹೆಚ್ಚಿಸ ತೊಡಗಿತು. ಅದರ ಪಲವಾಗಿ ನಮ್ಮ ಮಕ್ಕಳು ಇಂದು ಶಾಲೆಗಳಲ್ಲಿ ಕಡ್ಡಾಯವಾಗಿ ಹಿಂದಿ ಕಲಿಯಬೇಕಾಗಿದೆ.

ಇಶ್ಟಕ್ಕೂ ಬಾರತದಲ್ಲಿ ಬಹುತೇಕರಿಗೆ ಹಿಂದಿ ಬರುತ್ತದೆಯೇ ಎಂದು ನೋಡಿದರೆ ಅಚ್ಚರಿಯ ಸಂಗತಿಯೊಂದು ಕಾಣುತ್ತದೆ. ಹಿಂದಿಯನ್ನು ತಾಯ್ನುಡಿಯಾಗಿ ಹೊಂದಿರುವವರು ದೇಶದಲ್ಲಿ ಇರುವುದು ಕೇವಲ 25% ಮಂದಿ ಮಾತ್ರ! ಸ್ವಾತಂತ್ರ್ಯ ಬಂದ ದಿನಗಳಲ್ಲಿ ಈ ಎಣಿಕೆಯನ್ನು ಹೆಚ್ಚಿಸಬೇಕೆಂಬ ಕಾರಣದಿಂದ ಹಿಂದಿ ಮಾತನಾಡುವ ಸುತ್ತ ಮುತ್ತಲ ಪ್ರದೇಶಗಳಲ್ಲಿದ್ದ ಬೋಜಪುರಿ, ರಾಜಸ್ತಾನಿ, ಹರ‍್ಯಾಣವಿ, ಕಡಿಬೋಲಿ, ಗರ‍್ವಾಲಿ ಸೇರಿದಂತೆ ಸುಮಾರು 50 ನುಡಿಗಳನ್ನು ಸೇರಿಸಿ ಹಿಂದಿ ಎಣಿಕೆಗೆ ಸೇರಿಸಲಾಯಿತು. ಆಗಲೂ ಈ ಎಣಿಕೆ 41% ಆಗಲಶ್ಟೆ ಶಕ್ತವಾಯಿತು.

ಇಂದಿಗೂ ಹಿಂದಿಯೇತರ ನುಡಿ ಸಮುದಾಯಗಳೇ ಬಾರತದ 60% ಇರುವುದು. ಇದೆಲ್ಲಕ್ಕಿಂತ ಮುಕ್ಯವಾಗಿ, “ನಾವೆಲ್ಲಾ ಬಾರತೀಯರು – ನಾವೆಲ್ಲಾ ಸಮಾನರು” ಎಂದ ಮೇಲೆ ಕೇಂದ್ರ ಸರ‍್ಕಾರ ನಮ್ಮೆಲ್ಲರ ನುಡಿಗಳನ್ನೂ ಸಮಾನವಾಗಿ ಕಾಣಬೇಡವೇ? ಹಿಂದಿ ಬಾಶೆಗೆ ಮಾತ್ರ ಒತ್ತು ಕೊಡುವುದರಿಂದ ಹಿಂದಿಯೇತರ ನುಡಿ ಸಮುದಾಯಗಳು ಈ ದೇಶದ ಎರಡನೇ ದರ‍್ಜೆಯ ಪ್ರಜೆಗಳಾಗಿ ಬಾಳಬೇಕಾಗುತ್ತದೆ. ಹಲನುಡಿಗಳ ಒಕ್ಕೂಟವಾದ ಬಾರತದಲ್ಲಿ ಎಲ್ಲಾ ನುಡಿ ಸಮುದಾಯಗಳ ಜನರೂ ಮತ ಹಾಕಿ ರೂಪಿಸುವ ಸರ‍್ಕಾರ, ಎಲ್ಲಾ ನುಡಿ ಸಮುದಾಯಗಳ ಜನರೂ ತೆರಿಗೆ ಕಟ್ಟಿದ ಹಣದಿಂದ ಕೇವಲ ಒಂದೇ ಬಾಶೆಯ ಮೆರವಣಿಗೆ ನಡೆಸುತ್ತಿರುವುದು ಸಮರ‍್ತನೀಯವಲ್ಲ.

ಈ ಎಲ್ಲ ಸಮಸ್ಯೆಗಳ ಮೂಲ ಹುಡುಕಿದರೆ ಅದು ನಮ್ಮ ಸಂವಿದಾನದತ್ತ ಬೆರಳು ತೋರುತ್ತವೆ. ನಮ್ಮ ಸಂವಿದಾನದ 343ನೇ ವಿದಿಯಲ್ಲಿ ಹಿಂದಿ ಮತ್ತು ಇಂಗ್ಲಿಶ್ ಬಾಶೆಗಳಿಗೆ ಮಾತ್ರ ಅದಿಕ್ರುತ ಬಾಶೆಯ ಸ್ತಾನ ಕೊಟ್ಟಿರುವುದೇ ಈ ಅಸಮಾನತೆಗೆ ಕಾರಣವಾಗಿದೆ. ಸಂವಿದಾನದ ಎಂಟನೆ ಪರಿಚ್ಚೇದದಲ್ಲಿರುವ ಎಲ್ಲಾ 22 ಬಾಶೆಗಳನ್ನೂ ಅದಿಕ್ರುತ ಬಾಶೆಗಳೆಂದು ಗೋಶಿಸಿದರೆ ಆಗ ಈ ತಾರತಮ್ಯ ತಪ್ಪುತ್ತದೆ. ಎಲ್ಲಾ ಬಾಶೆಗಳನ್ನೂ ಸಮಾನವಾಗಿ ಕಾಣುವುದರಿಂದ ಎಲ್ಲಾ ನುಡಿ ಸಮುದಾಯಗಳ ನಡುವೆ ಸಮಾನತೆ ತಾನಾಗಿಯೇ ನೆಲೆಸುತ್ತದೆ. ಸಮಾನತೆಯೇ ಮಂದಿಯಾಳ್ವಿಕೆಯ ಜೀವಾಳ. ಸಮಾನ ಗೌರವದಿಂದ ದೇಶದ ಒಗ್ಗಟ್ಟು ಹೆಚ್ಚುತ್ತದೆ. ಸಮಾನತೆಯೇ ಒಗ್ಗಟ್ಟಿಗೆ ಅಡಿಪಾಯವಾಗಿರುವಾಗ, ನಮ್ಮ ದೇಶದ ಏಕತೆಗೆ ಆ ಅಡಿಪಾಯವನ್ನು ನಾವು ಕಾಪಾಡಿಕೊಳ್ಳಲೇಬೇಕಿದೆ.

(ಚಿತ್ರಸೆಲೆ: kulturum-uppsala.se )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: