ಕನ್ನಡಿಗರ ಹೆಮ್ಮೆಯ ಸರ್. ಎಂ. ವಿಶ್ವೇಶ್ವರಯ್ಯ

– ಹರ‍್ಶಿತ್ ಮಂಜುನಾತ್.

visvesvaraya-engineers-day_0

ನೀನು ಯಾವುದೇ ಕೆಲಸವನ್ನು ಮಾಡು. ಅದನ್ನು ಪ್ರೀತಿಯಿಂದ ಮಾಡು. ನೀನೊಬ್ಬ ರಸ್ತೆಯ ಕಸ ಗುಡಿಸುವವನೇ ಆಗಿರಬಹುದು. ಆದರೆ ನೀನು ಮಾಡಿದ ಕೆಲಸ ಹೇಗಿರಬೇಕೆಂದರೆ, ಬೇರೆ ಯಾವ ರಸ್ತೆಯೂ ನೀನು ಕಸಗುಡಿಸುವ ರಸ್ತೆಯಶ್ಟು ಸ್ವಚ್ಚವಾಗಿರಬಾರದು .

ನಾವು ಮಾಡುವ ಕೆಲಸದ ಬಗ್ಗೆ ನಮಗಿರಬೇಕಾದ ಶ್ರದ್ದೆಯ ಕುರಿತು ಸಣ್ಣ ಕಿವಿಮಾತೊಂದನ್ನು ಅತ್ಯಂತ ಪರಿಣಾಮಕಾರಿಯಾಗಿ ಹೇಳಿದವರು ಕನ್ನಡ ತಾಯಿಯ ಹೆಮ್ಮೆಯ ಮಗ ಡಾ. ಎಮ್. ವಿಶ್ವೇಶ್ವರಯ್ಯ ನವರು. ಇಂದು ಬಿಣಿಗೆಯರಿಗರ ನಾಳು (Engineers Day). ನಾಡಿನ ಅಬಿವ್ರುದ್ದಿ ಯಾವುದೇ ಗೊತ್ತು ಗುರಿ ಇಲ್ಲದೇ ಅಡ್ಡಾದಿಡ್ಡಿ ಸಾಗುತ್ತಿದ್ದಾಗ, ನಾಡಿಗೊಂದು ಯೋಜಿತ ರೂಪು ರೇಶೆಗಳನ್ನು ಮಾಡಿ, ನಾಡಿನ ಅಬಿವ್ರುದ್ದಿಯ ಯೋಜನೆಯೆಡೆಗೆ ಗಮನಾರ‍್ಹವಾಗಿ ಚಿಂತಿಸಿ, ಆ ಕುರಿತು ಮೊಟ್ಟ ಮೊದಲು ಮಾತನಾಡಿದವರು. ಕನ್ನಂಬಾಡಿ ಅಣೆಕಟ್ಟು, ಕಬ್ಬಿಣ ಮತ್ತು ಉಕ್ಕಿನ ಕಾರ‍್ಕಾನೆ, ಸಾಬೂನು ಕಾರ‍್ಕಾನೆಗಳನ್ನು ಕಟ್ಟುವ ಮೂಲಕ ನಾಡಿನ ಬಿಣಿಗೆಯರಿಗರ ಬಗೆಯೊತ್ತಾದ (Inspiration) ಪ್ರಾಮಾಣಿಕ ಆಡಳಿತಗಾರ. ದೀಮಂತ, ಹೆಸರಾಂತ ಬಿಣಿಗೆಯರಿಗ, ಬಾರತರತ್ನ, ಕನ್ನಡಿಗ ಸರ್. ಎಮ್. ವಿಶ್ವೇಶ್ವರಯ್ಯನವರು ಹುಟ್ಟಿದ ಈ ನಾಳನ್ನು ನಾಡಿನಾದ್ಯಂತ ಬಿಣಿಗೆಯರಿಗರ ನಾಳಾಗಿ ಆಚರಿಸುತ್ತಿರುವುದು ನಲಿವಿನ ಸಂಗತಿ.

ಕನ್ನಡ ತಾಯಿಯ ಈ ಪವಿತ್ರ ಮಣ್ಣಿನಲ್ಲಿ ಹುಟ್ಟಿ, ಕನ್ನಡ ನಾಡಿನ ಕೀರ‍್ತಿ ಪತಾಕೆಯನ್ನು ವಿಶ್ವ ಮಟ್ಟದಲ್ಲಿ ಎತ್ತಿ ಹಿಡಿದ ಮಹನೀಯ ವಿಶ್ವೇಶ್ವರಯ್ಯ ನವರ 154ನೇ ಹುಟ್ಟುಹಬ್ಬದ ದಿನ ಇಂದು. 1915ರಲ್ಲಿಯೇ ಕನ್ನಡ ಸಾಹಿತ್ಯ ಪರಿಶತ್ತನ್ನು ಶುರುವಿಡುವ ಮೂಲಕ ಕನ್ನಡ ನುಡಿಗೊಂದು ಗಟ್ಟಿ ಅಡಿಪಾಯವನ್ನು ಹಾಕಿಕೊಟ್ಟ ಈ ಮಹಾ ಚೇತನನ್ನು ಕಡ್ಡಾಯವಾಗಿ ಕನ್ನಡಿಗರು ನೆನೆಯಲೇಬೇಕಾದ ದಿನ. ಹೀಗೆ ಒಂದು ನಾಡಿನ ಏಳಿಗೆಗೆ ಏನೆಲ್ಲಾ ಬೇಕೊ ಆ ಎಲ್ಲಾ ದಿಕ್ಕಿನಲ್ಲೂ ಕೆಲಸ ಮಾಡಿ ಒಂದು ನಾಡಿನ ಏಳಿಗೆಗೆ ದಾರಿ ಹಾಕಿಕೊಟ್ಟ ಹರಿಕಾರ, ಮಹಾಮಹಿಮರ ಕುರಿತು ಅರಿಯುವ ಸಣ್ಣ ಪ್ರಯತ್ನವೇ ಈ ಬರಹ.

ಹುಟ್ಟು ಮತ್ತು ಕಲಿಕೆ :
ಸರ್. ಎಂ. ವಿ ಎಂದೇ ಹೆಸರುವಾಸಿಯಾಗಿದ್ದ ವಿಶ್ವೇಶ್ವರಯ್ಯನವರ ಪೂರ‍್ತಿ ಹೆಸರು ಮೋಕ್ಶಗುಂಡಂ ವಿಶ್ವೇಶ್ವರಯ್ಯ. ಸೆಪ್ಟೆಂಬರ್ 15ರಂದು ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನಹಳ್ಳಿಯಲ್ಲಿ ಶ್ರೀನಿವಾಸ ಶಾಸ್ತ್ರಿ ಮತ್ತು ಶ್ರೀಮತಿ ವೆಂಕಟಮ್ಮ ದಂಪತಿಗಳ ಮಗನಾಗಿ ಹುಟ್ಟಿದ ವಿಶ್ವೇಶ್ವರಯ್ಯನವರು, ಚಿಕ್ಕಬಳ್ಳಾಪುರದಲ್ಲಿಯೇ ತಮ್ಮ ಮೊದಲ ಹಂತದ ಕಲಿಕೆಯನ್ನು ಮುಗಿಸಿದರು. ಸರ್. ಎಮ್. ವಿ. ಅವರ ಕಲಿಕೆಯಲ್ಲಿದ್ದ ಪ್ರತಿಬೆಯನ್ನು ಕಂಡ ಅವರ ಸೋದರಮಾವ ಎಚ್. ರಾಮಯ್ಯನವರು ಸರ್. ಎಮ್. ವಿ. ಅವರನ್ನು ಬೆಂಗಳೂರಿಗೆ ಕರೆತಂದರು. ಆದ್ದರಿಂದ ತಮ್ಮ ಮುಂದಿನ ಹಂತದ ಕಲಿಕೆಯನ್ನು ಬೆಂಗಳೂರಿನಲ್ಲಿ ಮುಂದುವರೆಸಿದರು. ಬಳಿಕ ಬೆಂಗಳೂರಿನ ಸೆಂಟ್ರಲ್ ಕಲಿಕೆವೀಡಿನಲ್ಲಿ ಕಲಿಕೆ ನಡೆಸುವಾಗ, ಸರ್. ಎಮ್. ವಿ. ಅವರಿಗೆ ಸರಕಾರದಿಂದ ಹಣ ಸಹಾಯ ಸಿಕ್ಕುತ್ತಿತ್ತಾದರೂ ಬದುಕು ನಡೆಸಲು ಬೇಕಾದ ಹಣಕ್ಕೆ ಬೇರೆ ಏನಾದರೂ ಮಾಡಬೇಕಿತ್ತು. ಅದಕ್ಕಾಗಿ ಮನೆಯೊಂದರಲ್ಲಿ ಮಕ್ಕಳಿಗೆ ಪಾಟ ಹೇಳಿ ಕೊಡುತ್ತಿದ್ದರು. ಮುಂದೆ 1881ರಲ್ಲಿ ಮದರಾಸು ಕಲಿಕೆವೀಡಿನಲ್ಲಿ ಬಿ.ಎ ಪದವಿ ಪಡೆದರು. ಕೊನೆಯ ಹಂತದ ಕಲಿಕೆ ಮಾಡಲು ಹಣಸಹಾಯಕ್ಕಾಗಿ ಆಗಿನ ಮೈಸೂರು ದಿವಾನರಾಗಿದ್ದ ರಂಗಾಚಾರ‍್ಲು ಅವರನ್ನು ಬೇಟಿಯಾಗಿ ಸರಕಾರದ ಸಹಾಯದಿಂದ ಪುಣೆಯ ಕಲಿಕೆವೀಡಿನಲ್ಲಿ ಸಿವಿಲ್ ಇಂಜಿನಿಯರಿಂಗ್ ಪದವಿ ಪಡೆದರು.

ಕೆಲಸ ಮತ್ತು ಸಾದನೆ :

  • ಸರ್. ಎಮ್. ವಿ. ಯವರು ತಮ್ಮ ಕಲಿಕೆಯನ್ನು ಮುಗಿಸಿದ ಬಳಿಕ 1884ರಲ್ಲಿ ಅವರು ಮುಂಬಯಿಯ ಸಂಸ್ತಾನಕ್ಕೆ ಸೇರಿದ ನಾಸಿಕ ಜಿಲ್ಲೆಯಲ್ಲಿ ಲೋಕೋಪಯೋಗಿ ಇಲಾಕೆಯಲ್ಲಿ ಸಹಾಯಕ ಬಿಣಿಗೆಗಾರರಾಗಿ ನೇಮಕಗೊಂಡರು.
  • ಅಲ್ಲಿಂದ ಮುಂದೆ, 1888ರಲ್ಲಿ ಲೋಕೋಪಯೋಗಿ ಇಲಾಕೆಯ ಪರೀಕ್ಶೆ ಬರೆದು ಸಹಾಯಕ ಬಿಣಿಗೆಗಾರರ ಮೇಲು ಹಂತಕ್ಕೆ ಏರಿದರು. ಆ ಹೊತ್ತಿನಲ್ಲಿ ಅಲ್ಲಿನ ರಸ್ತೆ ಮತ್ತು ಕಟ್ಟಡಗಳ ವಿಬಾಗದಲ್ಲಿ ಕೆಲಸ ಮಾಡಿದರು.
  • 1894 ರಲ್ಲಿ ಸುಕ್ಕೂರು ನಗರಕ್ಕೆ ವಿಶೇಶ ಬಿಣಿಗೆಗಾರರಾಗಿ ಬಂದು ಅಲ್ಲಿಯ ಕೆಲಸವನ್ನು ಕಡಿಮೆ ಹೊತ್ತಿನಲ್ಲಿ ಕಡಿಮೆ ಕರ‍್ಚಿನಲ್ಲಿ ಪೂರ‍್ತಿಮಾಡಿ ಮುಂಬಯಿಯ ನಾಡಾಳ್ವ(Governor)ರಿಂದ ಮೆಚ್ಚುಗೆ ಗಳಿಸಿದರು.
  • ಸರ್. ಎಮ್. ವಿ. ಯವರು 1897ರಲ್ಲಿ ತಮ್ಮ ಸ್ವಂತ ಹಣದಿಂದ ಜಪಾನ್ ಪ್ರವಾಸ ಮಾಡಿ ಅಲ್ಲಿನವರು ಕೆಲಸ ಮಾಡುವ ರೀತಿಯನ್ನು ನೋಡಿ, ಅದನ್ನು ನಮ್ಮ ನಾಡಿನಲ್ಲೂ ಅಳವಡಿಸಿಕೊಳ್ಳುಲು ಹುಮ್ಮಸ್ಸು ತೋರಿಸಿದರು. ಇದು ಅವರಿಗೆ ತಮ್ಮ ಕೆಲಸದ ಮೇಲಿದ್ದ ನಿಶ್ಟೆ ಮತ್ತು ಆಸಕ್ತಿಗೆ ಹಿಡಿದ ಕನ್ನಡಿ.
  • 1899ರಲ್ಲಿ ಪುಣೆ ಇಲಾಕೆಯ ಮುಕ್ಯ ಅದಿಕಾರಿಯಾಗಿ ಬಡ್ತಿ ಪಡೆದರು. ಅಲ್ಲದೆ ನೀರು ಪೂರಯ್ಕೆಯಲ್ಲಿ ಹೊಸದೊಂದು ಏರ‍್ಪಾಡನ್ನು ಜಾರಿಗೆ ತಂದರು. ಇದರ ಉತ್ತಮ ನಿರ‍್ವಹಣೆಯಿಂದಾಗಿ 1905ರಲ್ಲಿ ನೀರಾವರಿ ಯೋಜನೆಗಳ ಕಟ್ಟುವಂತಹ ವಿಶೇಶ ಅದಿಕಾರಿಯಾಗಿ ನೇಮಕಗೊಂಡರು.
  • 1907ರಲ್ಲಿ ತಮ್ಮ ಕೆಲಸದಲ್ಲಿ ಮತ್ತೆ ಬಡ್ತಿ ಪಡೆದು ದಾರವಾಡ, ಬಿಜಾಪುರ ಜಿಲ್ಲೆಗಳ ಕುಡಿಯುವ ನೀರಿನ ಯೋಜನೆಗಳಲ್ಲಿ ಬದಲಾವಣೆಗಳನ್ನು ತಂದು, ಅಲ್ಲಿನ ಸಮಸ್ಯೆಗಳನ್ನು ದೂರಮಾಡಿದರು.
  • ಇವರ ಕೆಲಸದಲ್ಲಿದ್ದ ನಿಶ್ಟೆ, ಜಾಣತನವನ್ನು ಗುರುತಿಸಿದ ಬ್ರಿಟಿಶ್ ಸರಕಾರವು ಅವರನ್ನು ಇನ್ನಶ್ಟು ಉನ್ನತ ಮಟ್ಟದ ಹುದ್ದೆಗೇರಿಸಿತು. ಇದರಿಂದ ಕೆಲವು ಇತರೆ ಕೆಲಸಗಾರರಿಗೆ ಅಸಮಾದಾನಗಳು ಉಂಟಾಯಿತು. ಇದನ್ನರಿತ ಎಂ. ವಿ ಅವರು ತಾವಾಗಿಯೆ ತಮ್ಮ ಹುದ್ದೆಯಿಂದ ಹಿಂದೆ ಸರಿದು, ನಿವ್ರುತ್ತಿಗೆ ಮುಂಚೆಯೇ ರಜಾ ಪಡೆದು ತಮ್ಮ ಸ್ವಂತ ಕರ‍್ಚಿನಲ್ಲಿ ಇಂಗ್ಲೆಂಡ್, ಅಮೇರಿಕಾ ಮತ್ತು ರಶ್ಯಾ ಸೇರಿದಂತೆ ಜಗತ್ತಿನ ಹಲವು ಕಡೆ ಪ್ರವಾಸ ಮಾಡಿಬಂದರು.
  • 1917ರಲ್ಲಿ ಬೆಂಗಳೂರಿನಲ್ಲಿ ಬಿಣಿಗೆಗಾರರ ಕಲಿಕೆಮನೆಯನ್ನೂ ಸ್ತಾಪಿಸಿದರು. ಈ ಕಲಿಕೆಮನೆಗೆ ಬಳಿಕ ಅವರ ಹೆಸರನ್ನೇ ಇಡಲಾಯಿತು.
  • 1918ರಲ್ಲಿ ಶಿವಮೊಗ್ಗದ ಬದ್ರಾವತಿಯಲ್ಲಿ ಕಬ್ಬಿಣ ಮತ್ತು ಉಕ್ಕಿನ ಕಾರ‍್ಕಾನೆಯನ್ನು ಕಟ್ಟಿದರು. 1923ರಲ್ಲಿ ಬದ್ರಾವತಿ ಕಬ್ಬಿಣ ಮತ್ತು ಉಕ್ಕಿನ ಕಾರ‍್ಕಾನೆಯ ಮುಂದಾಳತ್ವವನ್ನು ವಹಿಸಿಕೊಂಡು ದೊಡ್ಡದಾದ ಕಾರ‍್ಕಾನೆಗಳ ನಿರ‍್ವಹಣೆಯು ಬ್ರಿಟೀಶರಿಂದಲೇ ಸಾದ್ಯ ಎಂಬ ತಪ್ಪು ಕಲ್ಪನೆಯನ್ನು ಹೋಗಲಾಡಿಸಿದರು. ಆ ಹೊತ್ತಿನಲ್ಲಿ ಒಂದು ವರುಶದ ತಮ್ಮ ಸೇವೆಗೆ ಪ್ರತಿಯಾಗಿ ಅವರು ಯಾವ ಸಂಬಾವನೆಯನ್ನೂ ಪಡೆಯಲಿಲ್ಲ.

ವಿಶ್ವೇಶ್ವರಯ್ಯನವರ ಮಯ್ಸೂರು ನಂಟು :

  • 1907ರಲ್ಲಿ ಬಡ್ತಿ ಪಡೆದು ದಾರವಾಡ ಮತ್ತು ಬಿಜಾಪುರಗಳಲ್ಲಿ ಕೆಲಸ ಮಾಡಿದ ಬಳಿಕ ಕೆಲದಿನ ವಿಶ್ರಾಂತಿ ಪಡೆದು 1909 ನವೆಂಬರ್ 15ರಂದು ಮಯ್ಸೂರಿನ ಮುಕ್ಯ ಬಿಣಿಗೆಗಾರರಾಗಿ ಅದಿಕಾರ ವಹಿಸಿಕೊಂಡರು.
  • 1912ರಲ್ಲಿ ಮಯ್ಸೂರು ಸಂಸ್ತಾನದ ದಿವಾನರಾಗಿ ನೇಮಕಗೊಂಡು 1913ರಲ್ಲಿ ಬ್ರಿಟಿಶ್ ಅದಿಕಾರಿ ವೈಸರಾಯ್ ಲಾರ‍್ಡ್ ಹಾರ‍್ಡಿಂಜ್ ರೊಂದಿಗೆ ಮಾತುಕತೆ ನಡೆಸಿ ‘ಮಯ್ಸೂರು ಕವ್ಲ್’ ಎಂಬ ಒಪ್ಪಂದಕ್ಕೆ ಸಹಿ ಹಾಕಿದರು.
  • ಕಾವೇರಿ ನದಿಗೆ ಅಡ್ಡವಾಗಿ ಕ್ರಿಶ್ಣರಾಜಸಾಗರ ಅಣೆಕಟ್ಟನ್ನು ನಿರ‍್ಮಿಸಿದರು. ಈ ಕೆಲಸ 1911ರಲ್ಲಿ ಮೊದಲ್ಗೊಂಡು 1931ರಲ್ಲಿ ಕೊನೆಗೊಂಡಿತು. ಆಗಿನ ಹೊತ್ತಿಗೆ ಇದು ಜಗತ್ತಿನಲ್ಲಿಯೇ ಗಾತ್ರದಲ್ಲಿ ಎರಡನೆಯದಾಗಿತ್ತು. ಇದು ಇವರ ಜೀವನದ ಒಂದು ಮಹತ್ತರದ ಸಾದನೆ. ಅಲ್ಲದೇ ಈ ಸಾದನೆ ಇಂದಿಗೂ ನಾಡಿನ ಮಂದಿಯ ಮನದಲ್ಲಿ, ಜಲಾಶಯದ ಬದಿಯಲ್ಲಿ ಕಟ್ಟಲಾಗಿರುವ ಬ್ರುಂದಾವನ ಉದ್ಯಾನದಂತೆಯೇ ಹಚ್ಚ ಹಸಿರಾಗಿಯೇ ಉಳಿದಿದೆ.
  • 1913 ರಲ್ಲಿ ಸ್ಟೇಟ್ ಬ್ಯಾಂಕ್ ಆಪ್ ಮಯ್ಸೂರು ಸ್ತಾಪನೆ, ಮೈಸೂರು ಸ್ಯಾಂಡಲ್ ಸೋಪ್ ಕಾರ‍್ಕಾನೆ ಅಲ್ಲದೇ ಮಯ್ಸೂರು ಕಲಿಕೆವೀಡು ಮತ್ತು ಕನ್ನಡ ಸಾಹಿತ್ಯ ಪರಿಶತ್ತುಗಳು ಕೂಡ ಎಮ್. ವಿ. ಯವರು ಮಯ್ಸೂರಿನ ದಿವಾನರಾಗಿದ್ದ ಹೊತ್ತಿನಲ್ಲಿಯೇ ನಿರ‍್ಮಿಸಲ್ಪಟ್ಟವು.

ಗವ್ರವಗಳು ಮತ್ತು ಸಂದ ಪ್ರಶಸ್ತಿಗಳು :

  • 1911ರಲ್ಲಿ ಬ್ರಿಟಿಶ್ ಸರಕಾರವು ಸಿಐಇ ಬಿರುದು ನೀಡಿ ಗೌರವಿಸಿತು.
  • ಕೊಲ್ಕತ್ತಾ ಕಲಿಕೆವೀಡು ಡಿ.ಎಸ್ಸಿ. ನೀಡಿ ಗೌರವಿಸಿತು.
  • ಮುಂಬಯಿಯ ಕಲಿಕೆವೀಡು ಎಲ್ ಎಲ್ ಡಿ ನೀಡಿತು.
  • ಬ್ರಿಟಿಶ್ ಸರಕಾರವು ಕೆ ಸಿ ಐ ಇ ಬಿರುದು ನೀಡಿ ಸನ್ಮಾನಿಸಿತು.
  • 1919ರಲ್ಲಿ ಅವರು ಜಪಾನ್, ಕೆನಡಾ, ಅಮೇರಿಕಾ ಪ್ರವಾಸದಲ್ಲಿದ್ದಾಗ ಸೆಕ್ರೆಟರಿ ಆಪ್ ಸ್ಟೇಟ್ ಮಾಂಟೆಗೋ ಅವರಿಂದ ಸಚಿವಸಂಪುಟಕ್ಕೆ ಸೇರುವ ಆಹ್ವಾನ ಬಂದಿತ್ತು. ಆದರೆ ಸರ್. ಎಮ್. ವಿ. ಯವರು ಅದನ್ನು ನಿರಾಕರಿಸಿದರು.
  • 1931ರಲ್ಲಿ ಬನಾರಸ್ ಹಿಂದೂ ಕಲಿಕೆವೀಡು ಅವರಿಗೆ ಡಿ. ಲಿಟ್ ಪದವಿ ನೀಡಿ ಗೌರವಿಸಿತು.
  • ಎಮ್. ವಿ. ಅವರ ಸಾದನೆಗಳನ್ನು ಗುರುತಿಸಿ ಮಯ್ಸೂರು ವಿಶ್ವವಿದ್ಯಾಲಯವು ಅವರಿಗೆ ಡಾಕ್ಟರೆಟ್ ನೀಡಿ ಗೌರವಿಸಿತು.
  • ಅವರು ದಿವಾನರಾಗಿದ್ದಾಗ ಬ್ರಿಟಿಶ್ ಸರಕಾರ ಅವರಿಗೆ ‘ಸರ‍್’ ಪದವಿಯನ್ನು ನೀಡಿತು.
  • 1955ರಲ್ಲಿ ಇಂಡಿಯಾ ಸರಕಾರ ಅತ್ತ್ಯುನ್ನತ ಗವ್ರವವಾದ ಬಾರತ ರತ್ನ ನೀಡಿತು.

ಇಶ್ಟೆಲ್ಲಾ ಸಾದನೆಗಳನ್ನು ಮಾಡಿ, ಸರಕಾರ, ಮಂದಿ ಸೇರಿದಂತೆ ಹಲವು ಸಂಗ ಸಂಸ್ತೆಗಳು, ಹೊರನಾಡಿನಿಂದ ಗವ್ರವ, ಪ್ರಶಂಸೆ, ಪ್ರಶಸ್ತಿಗಳನ್ನು ಪಡೆದೂ ಕೂಡ, ತಮ್ಮ ನಿವ್ರುತ್ತಿಯ ದಿನದಂದು ಸರಕಾರಿ ಕಾರಿನಲ್ಲಿ ಬಂದು, ಅದಿಕಾರವನ್ನು ಮತ್ತೊಬ್ಬರಿಗೆ ಬಿಟ್ಟುಕೊಟ್ಟು, ಮನಸ್ಪೂರ‍್ವಕ ಬೀಳ್ಕೊಡುಗೆಯನ್ನು ಪಡೆದು ತಮ್ಮ ಸ್ವಂತ ಕಾರನ್ನು ತಾವೇ ಚಲಾಯಿಸಿಕೊಂಡು ಮನೆಗೆ ಹಿಂತಿರುಗಿದ ಸರಳ ವ್ಯಕ್ತಿತ್ವ ನಿಜಕ್ಕೂ ವಿಶಿಶ್ಟ. ಈ ಕಾರಣಗಳಿಂದಲೇ ಅವರು ನಾಡಿನ ಪ್ರತಿಮಂದಿಗೂ ಬದಿಯೊತ್ತಾಗಿ ನಿಲ್ಲುವುದು. ಕೆಲವೊಮ್ಮೆ ವಿಶ್ವೇಶ್ವರಯ್ಯ ಅವರ ಬದುಕನೊಮ್ಮೆ ಗಮನಿಸಿದಾಗ ಒಬ್ಬರ ಬದುಕಿನಲ್ಲಿ ಇಶ್ಟೊಂದೆಲ್ಲಾ ಸಾದನೆಗಳನ್ನು ಮಾಡಲು ಸಾದ್ಯವೇ ಎಂದು ಉದ್ಗಾರವೂ ಮೂಡುತ್ತದೆ. ಇಂತಹ ಸಾರ‍್ತಕ ಜೀವನವೊಂದನ್ನು ನಡೆಸಿದ ಸರ್ ಮೋಕ್ಶಗೊಂಡಂ ವಿಶ್ವೇಶ್ವರಯ್ಯನವರು 1962ನೇ ಏಪ್ರಿಲ್ 14ರಂದು ಮುಂಜಾನೆ 2:15ಕ್ಕೆ ನಮ್ಮನ್ನಗಲಿದ್ದು ಮಾತ್ರ ಕನ್ನಡಿಗರಿಗೊಂದು ಅತಿದೊಡ್ಡ ನಶ್ಟವೆನ್ನಬಹುದು.

(ಇವರ ಕುರಿತ ಹೆಚ್ಚಿನ ಓದಿಗೆ ಸರ್ ಎಮ್ ವಿಯವರೇ 1951ರಲ್ಲಿ ಬರೆದಿರುವ ಮೆಮಾಯ್ರ್ಸ್ಆಪ್ ಮಾಯ್ ವರ‍್ಕಿಂಗ್ ಲಯ್ಪ್ (Memoirs of my working life) ಎಂಬ ಹೊತ್ತಗೆಯನ್ನು ನೋಡಬಹುದು.)

(ಚಿತ್ರಸೆಲೆ: ಇಂಜಿನಿಯರ್)

ನಿಮಗೆ ಹಿಡಿಸಬಹುದಾದ ಬರಹಗಳು

2 Responses

  1. Yoganand Shivakumar says:

    Hi,

    The Book name is “Memoirs of Working Life” . Does it mean same as “*Memories
    of my working life.*”

    Thank you,
    Yoganand

  2. ಯೋಗಾನಂದ್ ಅವರೇ,

    ಕ್ಶಮೆ ಇರಲಿ, ತಪ್ಪನ್ನು ಸರಿಪಡಿಸಲಾಗಿದೆ. ನಿಮ್ಮ ಸಲಹೆಗೆ ತುಂಬಾ ನನ್ನಿ.
    – ಹರ್ಶಿತ್ ಮಂಜುನಾತ್.

ಅನಿಸಿಕೆ ಬರೆಯಿರಿ: