ದೊಂಬನ ಕೊಡುಗೆ

– ಸಿ.ಪಿ.ನಾಗರಾಜ.

domba
” ಡಂ-ಡಂ-ಡಂ-ಡಂ- ” ಎಂಬ ದೊಂಬನ ಡೋಲಿನ ನಾದ ಹಳ್ಳಿಗರನ್ನು ಒಂದೆಡೆಗೆ ಸೆಳೆದಿತ್ತು . ಊರ ಮುಂದಿನ ಆದಿಲಕ್ಶ್ಮಿ ದೇಗುಲದ ಬಯಲಿನಲ್ಲಿ ಜಾತ್ರೆಯಂತೆ ಜನಸಮೂಹ ನೆರೆದಿತ್ತು . ಗುಂಪಿನ ನಡುವೆ ಬಗೆಬಗೆಯ ಚಮತ್ಕಾರಗಳನ್ನು ತೋರಿಸುತ್ತಿದ್ದ ದೊಂಬನ ಕಯ್ಚಳಕಕ್ಕೆ ಮೆಚ್ಚಿದ ಹಳ್ಳಿಗರ ಹರುಶ ಮುಗಿಲನ್ನು ಮುಟ್ಟಿತ್ತು . ಊರಿನ ಪಟೇಲರಾದಿಯಾಗಿ ಗಂಡಸರು , ಹೆಂಗಸರು , ಮಕ್ಕಳೆಲ್ಲರೂ ಅವನ ಒಂದೊಂದು ಆಟಕ್ಕೂ ಚಪ್ಪಾಳೆ ತಟ್ಟಿ ಕೇಕೆ ಹಾಕುತ್ತಾ , ಆನಂದದ ಹೊನಲಿನಲ್ಲಿ ಮಿಂದೇಳುತ್ತಿದ್ದರು . ಉದ್ವೇಗ-ಉತ್ಸಾಹ-ಸಡಗರದ ಸೆಲೆ ಚಿಮ್ಮಿಸುತ್ತಾ ಆಟಗಳನ್ನು ಹೂಡುತ್ತಿದ್ದ ದೊಂಬನು ಊರಿನ ನೇತಾರರಾದ ಪಟೇಲರ ಮುಂದೆ ಬಂದು ನಿಂತು , ಡೋಲು ಬಾರಿಸುತ್ತಿದ್ದ ಹುಡುಗನ ಕಡೆಗೆ ಕಣ್ಸನ್ನೆ ಮಾಡಿದ . ಸನ್ನೆಯರಿತ ಆ ಹುಡುಗ-

” ನೋಡ್ರಿ…ನೋಡ್ರೀ…ನೋಡ್ರೀ…ಎಲ್ರೂ ಒಂದ್ ಸತಿ ಚಪ್ಪಾಳೆ ತಟ್ರೀ ” ಎಂದು ಕೂಗಿ ಹೇಳಿದ .

ಅವನು ಹೇಳಿದ್ದೇ ತಡ ಬಾನೇ ಬಿರಿಯುವಂತೆ ಚಪ್ಪಾಳೆ ನಾದ ಕೇಳಿ ಬಂತು. ಅದರ ಗದ್ದಲ ನಿಲ್ಲುತ್ತಿದ್ದಂತೆಯೇ ಪಟೇಲರು ಎತ್ತರದ ದನಿಯಲ್ಲಿ-

” ಏನ್ಲೇ…ನಿಂಗೇನ್ ಬೇಕು ಕೇಳ್ಲ…ಬೋ ಪಸಂದಾಗಿ ಮಾಡ್ತೀಯೆ ಕಣ್ಲೇ…ನಾವು ಹುಟ್ಟಿದ್ ತಾವಿಂದ ಇಂತಾ ಇದ್ಯೆ ನೋಡಿರ‍್ಲೂ ಇಲ್ಲ…ಕೇಳಿರ‍್ಲೂ ಇಲ್ಲ ಕಣ್ಲ ” ಎಂದು ಮೆಚ್ಚುಗೆಯನ್ನು ಸೂಚಿಸಿದರು . ಮತ್ತೆ ಚಪ್ಪಾಳೆಯ ಶಬ್ದ ಅನುರಣಿಸಿತು . ಡೋಲಿನವನು-

” ಸದ್ದು…ಸದ್ದು…ಈಗ ಗನಬಾರಿ ಆಟ ಶುರು ಆಯ್ತದೆ…ಸದ್ದು…ಸದ್ದು ”

ಎಂದು ಕೂಗುತ್ತಾ ಗುಂಪಿನ ಗುಜುಗುಜು ಗದ್ದಲವನ್ನು ಹತೋಟಿಗೆ ತಂದ . ಪಟೇಲರ ಮಾತಿಗೆ ದೊಂಬನು ತಲೆಬಾಗಿ ಕಯ್ ಮುಗಿದು-

” ನನ್ ಕುಲಕಸಬೇ ಇದಕನ್ ಸಾಮಿ . ತಾಯಿ ಕಣ್ಬುಟ್ಟು ನೋಡ್ತಿರುವತ್ಗೆ ನಾನೊಸಿ ಹಿಂಗ್ಮಾಡ್ತಾ…ಆಡ್ತಾ ಇವ್ನಿ ” . ದೊಂಬನ ವಿನಯವನ್ನು ಕಂಡು ಪಟೇಲರಿಗೆ ತುಂಬಾ ಆನಂದವಾಯಿತು .

” ಒಪ್ಪಿದೇ ಕಣ್ಲಾ ದೊಂಬ . ಶಹಬ್ಬಾಸ್ ಕಲೆ ! ನಿಂಗೆ ಆಂಕಾರ ಅನ್ನೋದು ರವಶ್ಟಾದ್ರೂ ಇಲ್ಲ ಕಲ . ನಿಂಗೆ ಅದೇನ್ ಬೇಕು ಕೇಳು ಕೊಡ್ತೀನಿ ” ಎಂದು ಒತ್ತಾಸೆಯಾಗಿ ನುಡಿದರು .

” ದಣೇರ…ಇಲ್ಲಿಗಂಟ ನಾನು ಮಾಡಿ ತೋರ‍್ಸಿದ್ದೆಲ್ಲಾ ನಮ್ಮ ಅಜ್ಜದೀರ್ ಕಾಲದಿಂದ ಮಾಡ್ತಿದ್ದ ಆಟ . ನಾನೇ ಕಲ್ತಿರೂ ಒಂದು ಆಟ ಅದೆ ಕನ್ ಸಾಮಿ…ಅದ ನಿಮ್ಮೂರಲ್ಲಿ ಮಾಡಿ ತೋರಿಸ್ಬೇಕು ಅನ್ನೋದು ನನ್ ಆಸೆ . ಅದ ನೋಡಿ ಆನಂದಪಟ್ಟು…ನೀವೊಬ್ರೆ ಅಲ್ಲ…ಊರೋರೆಲ್ಲಾ ಜೊತೆಯಾಗಿ ನಂಗೆ ದೊಡ್ಡದೊಂದು ಬೋಮಾನ ಕೊಡ್ಬೇಕು ಕಣ್ರಪ್ಪ ” .

ಆಟ ನಿಂತಿದ್ದರಿಂದ ಜನರ ಮಾತುಕತೆ ಜೋರಾಗಿತ್ತು . ದೊಂಬನು ಹತ್ತಿರದಲ್ಲೇ ನಿಂತು ಮಾತಾಡುತ್ತಿದ್ದರೂ ಪಟೇಲರಿಗೆ ಸರಿಯಾಗಿ ಕೇಳಿಸುತ್ತಿರಲಿಲ್ಲ .
” ಎಕ್ಕುಟ್ಟೋದವ…ಒಸಿ ಸುಮ್ನಿರ‍್ರೋ ” ಎಂದು ಡೊಂಬನ ಡೋಲಿನ ನಾದಕ್ಕಿಂತಲೂ ಗಟ್ಟಿಯಾಗಿ ಪಟೇಲರು ಅಬ್ಬರಿಸಿದರು . ಪಟೇಲರ ಸದ್ದು ಕೆಲಸ ಮಾಡಿತು . ಆಟದ ಕುತೂಹಲ ಈಗ ಮಾತಿನ ಕಡೆಗೆ ತಿರುಗಿತು . ಎಲ್ಲರೂ ಆ ಕಡೆ ಗಮನ ಕೊಟ್ಟರು .

” ಅದೇನ್ ನಿನ್ನ ಆಸೆ ಹೇಳೋ ” ಎಂದರು ಪಟೇಲರು .

” ಏನಿಲ್ಲ ಕಣ್ರಪ್ಪಾ . ಈಗ ನಾನೊಂದು ಹೊಸ ಆಟ ಮಾಡ್ತೀನಿ . ಅದ ನೋಡಿ , ನೀವೆಲ್ಲಾ ದೊಡ್ಡ ಬೋಮಾನ ಕೊಡ್ಬೇಕು ಬುದ್ದಿ .”

” ಕೇಳ್ಲೆ…ಏನ್ ಬೇಕೋ ಅದ ” .

” ನೀವೊಬ್ರೆ ಕೊಟ್ರೆ ಆಗಲ್ತು ಬುದ್ದಿ . ಊರೋರೆಲ್ಲಾ ಸೇರಿ ಕೊಡ್ಬೇಕು “.

” ಏನ್ ಕೊಡ್ಬೇಕು ಅಂತ ಸರಿಯಾಗಿ ಒದುರ‍್ಲೇ ” ಎಂದು ಪಟೇಲರು ತುಸು ಕಾರವಾದ ದನಿಯಲ್ಲಿ ಹೇಳಿದರು . ದೊಂಬನ ಮಾತುಗಳು ಅವರಿಗೆ ಕಿರಿಕಿರಿಯನ್ನು ಉಂಟುಮಾಡಿದ್ದವು . ತಮ್ಮೊಬ್ಬರ ಕಯ್ಯಲ್ಲಿ ಆಗದೆ , ತಮ್ಮ ಸಿರಿಗೆ ಸವಾಲಾಗುವಂತೆ ಊರೋರೆಲ್ಲಾ ಸೇರಿ ಕೊಡುವಂತಹುದು ಏನಿರಬಹುದೆಂದು ಬಗೆಬಗೆಯಲ್ಲಿ ಆಲೋಚಿಸುತ್ತಿದ್ದರು .

” ಸಾಮಿ … ಹೊತ್ತಾಯ್ತಾದೆ…ಹೊತ್ತು ಮುಳುಗು ಮೊದ್ಲು ಎಲ್ಲಾ ಮುಗುದೋಗ್ಲಿ . ನೋಡಿ ಬುದ್ದಿ…ನೀವು ಊರ ದಣಿ…ಊರಿನ ಪರವಾಗಿ ನೀವು ಬಾಸೆ ಕೊಡಿ ಬುದ್ದಿ ” .

” ಏನಂತ ಬಾಸೆ ಕೊಡನ್ಲಾ ? ಅದೇನ್ ನಿನ್ನ ಒಗಟ ಬಿಡ್ಸಿ ಹೇಳೋ ” .

ಸೇರಿದ್ದ ಜನರೆಲ್ಲರೂ ಪಟೇಲರು ಮತ್ತು ದೊಂಬನ ಮಾತುಗಳನ್ನು ಆಲಿಸುವುದರಲ್ಲಿ ಮಗ್ನರಾಗಿದ್ದರು . ಊರಿನ ಹುಲಿ ಪಟೇಲರು ಮಾತನಾಡುತ್ತಿರುವಾಗ , ನಡುವೆ ಬಾಯಿ ಹಾಕುವ ಕೆಚ್ಚು ಯಾರಿಗೂ ಇರಲಿಲ್ಲ. ದೊಂಬ ಮಾತು ಮುಂದುವರಿಸಿದ .

” ನೋಡಿ…ದಣೇರ…ನಾನೀಗ ಊರ ಮುಂದಿನ ಈ ಬಯಲಲ್ಲಿ ರೆಕ್ಕೆ ಕಟ್ಕೊಂಡು ಹಕ್ಕಿಯಂಗೆ ಹಾರ‍್ತೀನಿ . ನಾನು ಹಾರಿದಶ್ಟು ಬೂಮ್ತಾಯಿನ ನಂಗೇ ಬುಟ್ಬುಡಬೇಕು ? “.

” ಏನ್ಲೇ ನೀ ಕೇಳೋದು ? ”

” ಅದೇಕನ್ ಸಾಮಿ…ನಾ ಹಾರಿದಶ್ಟು ಜಾಗ ನನ್ನದೂ ಅಂದೆ ” .

” ತಡೀಲ ಒಸಿಯ … ಊರ ಜನ ಕೇಳ್ತೀನಿ ” ಎಂದು ಪಟೇಲರು ನೆರೆದಿದ್ದ ಮಂದಿಯ ಕಡೆಗೆ ತಿರುಗಿ –

” ಕೇಳಿಸ್ತೇನ್ರೋ ಇವ ಹೇಳಿದ್ದು … ಇವ ಹಾರ‍್ತಾನಂತೆ … ನಾವು ಊರೋರೆಲ್ಲಾ ಅವನು ಹಾರಿದಶ್ಟು ನೆಲವ ಅವನ್ಗೇ ಬುಟ್ಬುಡಬೇಕಂತೆ ! ಇದ್ಕೆ ಏನ್ರಲಾ ಹೇಳ್ಮಾ ” ಎಂದರು .

” ಹ ! ಹಾ !! ಹಾ !!! ” ಎಂದು ಜನರೆಲ್ಲರೂ ಉದ್ಗಾರವೆಳೆದರು . ಅಲ್ಲಿದ್ದವರೆಲ್ಲಾ ತಲಾಗಿ ಒಂದೊಂದು ಮಾತನಾಡತೊಡಗಿದರು . ಹಕ್ಕಿಯಂತೆ ಹಾರುವ ದೊಂಬನನ್ನು ನೋಡಲು ಎಲ್ಲರಿಗೂ ಆಸೆ . ಊರ ಮುಂದಿನ ಹೊಲಮಾಳದಲ್ಲಿ ಸುಮಾರಾಗಿ ಊರಿನವರಿಗೆಲ್ಲಾ ಅಶ್ಟೋ-ಇಶ್ಟೋ ಜಮೀನು ಇತ್ತು . ರಾಗಿ , ಆರಕ , ನವಣೆ , ಸಾಮೆ , ಅವರೆ , ತೊಗರಿ , ಕಡ್ಡಿಕಾಳು ಮೋಪಾಗಿ ಬೆಳೆಯುತ್ತಿದ್ದ ಒಳ್ಳೆಯ ಸಾರವತ್ತಾದ ಬಯಲು ಬೂಮಿ . ಊರಿನವರು ಈಗ ಇಕ್ಕಟ್ಟಿಗೆ ಸಿಕ್ಕಿ ಒದ್ದಾಡತೊಡಗಿದರು . ಇತ್ತ ಹಕ್ಕಿಯಾಗಿ ಹಾರುವ ದೊಂಬನನ್ನು ಕಣ್ತುಂಬ ನೋಡುವ ಆಸೆ…ಅತ್ತ ಬೂಮಿಯ ಮೇಲೂ ಆಸೆ . ಒಂದು ವೇಳೆ ದೊಂಬ ಹೇಳಿದಂತೆ ಹಾರಿದರೆ , ಒಳ್ಳೆಯ ಹೊಲಮಾಳವೆಲ್ಲಾ ಅವನ ಪಾಲಾಗುತ್ತದಲ್ಲ ಎಂಬ ಆತಂಕ . ದೊಂಬ ಏನನ್ನೂ ಮಾತನಾಡದೆ ಸುಮ್ಮನೆ ನಿಂತಿದ್ದ . ಪಟೇಲರು ಗುಂಪಿನ ಕಡೆಗೆ ನೋಡುತ್ತಿದ್ದರು . ನೆರೆದ ಮಂದಿ ಪಿಸುಗುಡುತ್ತಿತ್ತು .

” ಏನ್ರಲೇ…ಏನ್ ಹೇಳ್ಮಾ ಇವನ್ಗೆ ? ” ಪಟೇಲರು ಎತ್ತರದ ದನಿಯಲ್ಲಿ ಮತ್ತೊಮ್ಮೆ ಕೇಳಿದರು .

ಊರ ಜನರ ಮನಸ್ಸು ಅತ್ತ-ಇತ್ತ ಹೊಯ್ದಾಡುತ್ತಿತ್ತು . ಗುಂಪಿನಿಂದ ಒಬ್ಬ ಪಟೇಲರ ಹತ್ತಿರ ಬಂದು ದೊಂಬನಿಗೆ ಕೇಳಿಸಿದಂತೆ , ಪಟೇಲರಿಗೆ ಮಾತ್ರ ಕೇಳಿಸುವಂತೆ –

” ಇವನು ಹಾರಿದಾಗ ತಾನೇ ನಾವು ಕೊಡೂದು. ಮೊದ್ಲು ಅವನು ಹಾರ‍್ಲಿ…ಆಮ್ಯಾಲೆ ನೋಡ್ಮಾ ಕೊಡೂದು…ಬುಡೂದ ” ಎಂದ .

” ತೂ…ಅನ್ನಾಡಿ ನನ್ಮಗ್ನೆ … ನಿನ್ ಮಾತ ಕೇಳಿದರೆ ಊರಿನ ಮಾನಮರ‍್ವಾದೆ ಉಳ್ದದೇನ್ಲಾ ? ” ಎಂದು ಬಯ್ದು ಅವನನ್ನು ದೂರ ಅಟ್ಟಿದರು .

ಜನರ ಗುಸುಗುಸು ಮುಂದುವರಿದಿತ್ತು . ದೊಂಬನ ಬೇಡಿಕೆಯನ್ನು ಒಪ್ಪಿಕೊಳ್ಳದಿದ್ದರೆ … ಅದು ಊರಿಗೆ ಮಾತ್ರವಲ್ಲ…ತಮ್ಮ ಪಟೇಲಿಕೆಗೆ ಅವಮಾನವೆಂದು ಚಿಂತಿಸುತ್ತಾ ಪಟೇಲರು ಏನು ಮಾಡಬೇಕೆಂದು ತಿಳಿಯದೆ ಚಡಪಡಿಸುತ್ತಿದ್ದರು . ಅಶ್ಟರಲ್ಲಿ ಗುಂಪಿನಲ್ಲಿ ಯಾರೋ ಒಬ್ಬ –

” ಒಪ್ಪುರ‍್ಲಾ…ಆದಂಗಾಗ್ಲಿ ಮಾದಪ್ಪನ ಜಾತ್ರೆ ಅನ್ನೂವಂಗೆ … ಇದು ಒಂದು ಕತೆ ಆಗ್ಹೋಗ್ಲಿ … ಹಂಗೇನಾದ್ರೂ ದೊಂಬ ಹಾರುದ್ರೆ … ಬೂಮ್ತಾಯಿಯ ಕೊಟ್ಟೇಬುಡವಾ ” ಎಂದು ಕೂಗಿದ . ಗುಂಪಿನಲ್ಲಿ ಗೋವಿಂದ ಎನ್ನುವಂತೆ ಜನಸಮೂಹ ” ಓ ಓ ಓ ” ಎಂದು ಕೂಗುತ್ತಾ ಒಪ್ಪಿಗೆಯನ್ನು ಕೊಟ್ಟಿತು . ಅವರೆಲ್ಲರ ಕಣ್ಮನಗಳು ಹಕ್ಕಿಯಂತೆ ಹಾರುವ ದೊಂಬನಿಗಾಗಿ ಅರಸುತ್ತಿದ್ದವು . ಒಂದೆರೆಡು ಹೆಜ್ಜೆ ಮುಂದೆ ಬಂದು ಪಟೇಲರು ದೊಂಬನ ಕಯ್ಯನ್ನು ಎತ್ತಿ ಹಿಡಿದುಕೊಂಡು-

” ಊರಿನ ಪರವಾಗಿ ನಾ ಬಾಸೆ ಕೊಡ್ತಿವ್ನಿ . ನೀ ಹಾರಿದಶ್ಟು ಬೂಮಿ ನಿನ್ನದು ” ಎಂದರು .

ಊರವರ ಕೂಗು ಕೇಕೆ ಚಪ್ಪಾಳೆಯ ನಾದ ಮುಗಿಲನ್ನು ತಟ್ಟಿತು . ದೊಂಬ ಮೂಡಲ ಕಡೆಗೆ ತಿರುಗಿ ಬಕುತಿಬಾವದಿಂದ ಕಣ್ಮುಚ್ಚಿ ಏನನ್ನೋ ಜಪಿಸುತ್ತಾ ತುಟಿಗಳನ್ನಾಡಿಸಿದ . ಅನಂತರ ಪಡುವಣದ ಕಡೆಯಲ್ಲಿ ಉರಿಯುತ್ತಿರುವ ಸೂರ‍್ಯದೇವನ ಕಡೆ ತಿರುಗಿ ಕಯ್ಗಳೆರಡನ್ನು ಜೋಡಿಸಿ ನಮಿಸಿದ . ದೊಂಬನ ಮೊಗದಲ್ಲಿ ಹೊಸಬಗೆಯ ಕಾಂತಿಯೊಂದು ಬೆಳಗುತ್ತಿತ್ತು . ” ದೊಡ್ಡದೊಂದು ಕೆಲಸವನ್ನು ಮಾಡಬಲ್ಲೆನು ” ಎಂಬ ಗಟ್ಟಿಯಾದ ಮನಸ್ಸೇ ಅವನ ಮೊಗದಲ್ಲಿ ತೇಜಸ್ಸು ಹೊರಹೊಮ್ಮುವಂತೆ ಮಾಡಿತ್ತು . ಒಂದು ಬಾರಿ ನೆರೆದಿದ್ದ ಜನರೆಲ್ಲರ ಮುಂದೆ ದೊಂಬ ಕಯ್ ಮುಗಿಯುತ್ತಾ ಅತ್ತಿತ್ತ ಸುಳಿದಾಡಿದ . ಅನಂತರ ಗುಂಪಿನ ನಡುವೆ ಎಡೆಮಾಡಿಕೊಂಡು ಆದಿಲಕ್ಮ್ಶಿ ಗುಡಿಯ ಎಡ ಮಗ್ಗುಲಲ್ಲಿದ್ದ ವಿಸ್ತಾರವಾದ ಹೊಲಮಾಳದ ಕಡೆಗೆ ಅಡಿಯಿಟ್ಟ . ಒಂದು ಬಿದಿರಿನ ಪುಟ್ಟಿಯನ್ನು ತಲೆಯ ಮೇಲೆ ಹೊತ್ತುಕೊಂಡು , ಯಾಂತ್ರಿಕವಾಗಿ ಡೋಲು ಬಾರಿಸುತ್ತಾ ದೊಂಬನ ಹಿಂದೆ ಹಿಂದೆಯೇ ಸಾಗಿದ ಡೋಲಿನ ಹುಡುಗ . ಪಟೇಲರು ಡೋಲಿನವನನ್ನು ಹಿಂಬಾಲಿಸಿದರು . ಊರಿಗೆ ಊರೇ ಪಟೇಲರ ಹಿಂದೆ ಸಾಗಿತು . ಅಲ್ಲಲ್ಲಿ ಒಂದೊಂದು ಮಾತು ಕೇಳಿ ಬರುತ್ತಿತ್ತು . ಎಲ್ಲರ ಮನದಲ್ಲೂ ಕುತೂಹಲ ತಾಂಡವವಾಡುತ್ತಿತ್ತು . ಹೊಲಮಾಳಕ್ಕೆ ಬರುತ್ತಿದ್ದಂತೆಯೇ ಮೂಡಲ ತುದಿಯಲ್ಲಿ ಒಂದು ಚಿಕ್ಕ ಹಾಸುಬಂಡೆಯಿದೆ . ಅದರ ಬಳಿಗೆ ದೊಂಬ ಬಂದು ನಿಂತ . ತಲೆಯ ಮೇಲಿದ್ದ ಬುಟ್ಟಿಯನ್ನು ದೊಂಬನ ಮುಂದೆ ಇಳಿಸಿ , ಪಕ್ಕಕ್ಕೆ ಸರಿದು ಡೋಲಿನ ಹುಡುಗ ಮಂದಗತಿಯಲ್ಲಿ ಡೋಲನ್ನು ನುಡಿಸುತ್ತಿದ್ದ . ಜನ ಸುತ್ತುವರಿದಿತ್ತು . ಪುಟ್ಟಿಗೆ ಕಯ್ಯನ್ನು ಹಾಕಿ ದೊಂಬ ಒಂದು ಮೊರವನ್ನು ಮತ್ತು ಒಂದು ಬರಲನ್ನು ಹೊರಕ್ಕೆ ತೆಗೆದ . ಅಚ್ಚರಿಯ ಸಾವಿರಾರು ಕಣ್ಣುಗಳು ದೊಂಬನನ್ನೇ ದಿಟ್ಟಿಸುತ್ತಿದ್ದವು . ಎಡದ ಕಯ್ಯಿಗೆ ತಾನೇ ಬರಲನ್ನು ಬಿಗಿದು ಕಟ್ಟಿಕೊಂಡ. ಬಲದ ಕಯ್ಯಿಗೆ ಪಟೇಲರ ನೆರವಿನಿಂದ ಮೊರವನ್ನು ಕಟ್ಟಿಸಿಕೊಂಡ . ಪಟೇಲರಿಗೆ ಏನಾಯಿತೋ ಏನೋ ದೊಂಬನಿಗೆ ಕಯ್ ಮುಗಿದು ನಮಿಸಿದರು . ಜನರೆಲ್ಲಾ ದೊಂಬನಿಗೆ ” ಉಗೇ…ಉಗೇ…ಉಗೇ ” ಎಂದು ಜಯ್ಕಾರವನ್ನು ಹಾಕಿದರು .

ದೊಂಬ ಏನನ್ನೋ ಜಪಿಸುತ್ತಾ…ಒಂದು ಹೆಜ್ಜೆಯ ಮೇಲೆ ಮತ್ತೊಂದು ಹೆಜ್ಜೆಯನ್ನಿಡುತ್ತಾ ಹಾಸುಬಂಡೆಯ ಮೇಲೆ ಹೋಗಿ ನಿಂತ . ಬರಲು ಮತ್ತು ಮೊರದಿಂದ ಕೂಡಿದ್ದ ಕಯ್ಗಳನ್ನು ಮುಗಿಲಿನ ಕಡೆಗೆ ಎತ್ತಿದ . ಜನರೆಲ್ಲರಿಗೂ ಉಸಿರು ಕಟ್ಟಿದಂತಾಯಿತು . ಡೋಲಿನ ನಾದ ಹಂತಹಂತವಾಗಿ ತಾರಕಕ್ಕೆ ಏರತೊಡಗಿತು . ಡೋಲಿನ ದನಿಯನ್ನು ಹೊರತುಪಡಿಸಿ , ಉಳಿದಾವ ಶಬ್ದವೂ ಇರಲಿಲ್ಲ . ದೊಂಬ ಒಮ್ಮೆ ” ಜಯ್ ತಾಯೀ ” ಎಂದು ಕೂಗಿದವನೇ , ಮೊರ ಮತ್ತು ಬರಲಿನಿಂದ ಕೂಡಿದ ಕಯ್ಗಳನ್ನು ರೆಕ್ಕೆಯಂತೆ ಬಡಿಯುತ್ತಾ…ಬಾನ ಕಡೆಗೆ ಹಾರಿದ . ಮೇಲೆ ಮೇಲೆ ಹಾರುತ್ತಾ ಮುಗಿಲಲ್ಲಿ ಮುಂದೆ ಮುಂದೆ ಸಾಗಿದಂತೆಲ್ಲಾ ಓಡುವ ಕಸುವಿದ್ದ ಜನರೆಲ್ಲಾ ” ಉಗೇ…ಉಗೇ…ಉಗೇ ” ಎಂದು ಜಯ್ಕಾರವನ್ನು ಹಾಕುತ್ತಾ ಹೊಲಮಾಳದ ಉದ್ದಕ್ಕೂ ಓಡುತ್ತಿದ್ದರು .

ಗಗನದಲ್ಲೇ ಸುಮಾರು ದೂರ ಬಡಗಣದ ಕಡೆಗೆ ಹಾರಿದ ದೊಂಬನು … ಅಲ್ಲಿದ್ದ ಕೆರೆಯ ಕೋಡಿಯ ಬಳಿ ಇಳಿದ . ಜನ ಓಡಿ ಬಂದು ಮುತ್ತಿಕೊಳ್ಳುವಶ್ಟರಲ್ಲಿ ಮತ್ತೆ ಮೇಲೆ ಹಾರಿದ . ನಯ್ರುತ್ಯ ದಿಕ್ಕಿನ ಕಡೆಗೆ ನೇರವಾಗಿ ಹಾರಿ ಬಂದು…ಅಲ್ಲಿದ್ದ ಇಪ್ಪೆ ತೋಪಿನ ಬಳಿ ಮತ್ತೊಮ್ಮೆ ಇಳಿದ . ಓಡೋಡಿ ಸುಸ್ತಾಗಿದ್ದ ಜನಸಮೂಹ ಹೊಲಮಾಳದಲ್ಲೆಲ್ಲಾ ಚದುರಿಹೋಗಿತ್ತು . ಪಟೇಲರು ಮಾತ್ರ ಬಂಡೆಯ ಬಳಿ ಮೂಕರಾಗಿ ನಿಂತಿದ್ದರು . ಮುದುಕರು ಮೋಟರು , ಹೆಂಗಸರು , ಕಯ್ಯಲ್ಲಾಗದವರು ಈ ಸೋಜಿಗವನ್ನು ನೋಡುತ್ತಾ ಪಟೇಲರ ಬಳಿ ನಿಂತಿದ್ದರು . ಇಪ್ಪೆ ತೋಪಿನ ಬಳಿಗೆ ಜನ ಬರುವುದಕ್ಕೆ ಮುನ್ನವೇ ದೊಂಬ ಅಲ್ಲಿಂದ ಮತ್ತೆ ಮೇಲೆ ಹಾರಿದ . ಈಗ ದೊಂಬನು ಆಗಸದ ಹಾದಿಯಲ್ಲಿ ಹಾಸು ಬಂಡೆಯ ಬಳಿಗೆ ಹಿಂತಿರುಗಿ ಹಾರಿ ಬರುತ್ತಲಿದ್ದ . ಜನರು ಒಬ್ಬರ ಮೇಲೊಬ್ಬರು ಬಿದ್ದು ಬಂಡೆಯತ್ತ ಓಡೋಡಿ ಬರತೊಡಗಿದರು . ದೊಂಬ ಬಂಡೆಯನ್ನು ಸಮೀಪಿಸುತ್ತಿದ್ದಂತೆಯೇ , ಕಯ್ಗೆ ಕಟ್ಟಿಕೊಂಡಿದ್ದ ಮೊರ ಇದ್ದಕ್ಕಿದ್ದಂತೆ ಕಳಚಿ ಕೆಳಕೆ ಬಿತ್ತು . ದೊಂಬ ಆಯತಪ್ಪಿದಂತೆ ಮಗ್ಗುಲಾದ . ಬರಲನ್ನು ಕಟ್ಟಿಕೊಂಡಿದ್ದ ಕಯ್ಯನ್ನು ಬಲವಾಗಿ ಗಾಳಿಮಾರ‍್ಗದಲ್ಲಿ ಬೀಸಿದ . ಬಂಡೆಯ ಮೇಲೆ ಹಕ್ಕಿಯಂತೆ ಬಂದು ಇಳಿಯಲಾಗದೆ , ದೊಪ್ಪೆಂದು ಬಾನಿನಿಂದ ಬಂಡೆಯ ಮೇಲೆ ಅಪ್ಪಳಿಸಲ್ಪಟ್ಟ . ದೊಂಬನ ಮಯ್ ಮುದ್ದೆಯಾಯಿತು . ಬಂಡೆ ಕೆಂಪಾಯಿತು . ಮಿಲಮಿಲನೆ ಒದ್ದಾಡುತ್ತಿದ್ದ ದೊಂಬನ ಮಯ್ಯಿಂದ ಅರೆಗಳಿಗೆಯಲ್ಲೇ ಉಸಿರು ಹಾರಿಹೋಯಿತು . ” ಅಯ್ಯೋ…ಅಯ್ಯೋ…ಅಯ್ಯೋ ” ಎಂಬ ಜನರ ಕೂಗು ಮುಗಿಲನ್ನು ಮುಟ್ಟಿತ್ತಿತ್ತು . ಮೊರವನ್ನು ತನ್ನ ಕಯ್ಯಾರೆ ಕಟ್ಟಿದ್ದ ಪಟೇಲರು ಬಾಯಿ ಬಡಿದುಕೊಳ್ಳುತ್ತಾ ಅಳತೊಡಗಿದರು . ಡೋಲು ಬಾರಿಸುತ್ತಿದ್ದ ಹುಡುಗ ನೆಲದ ಮೇಲೆ ಉರುಳಿಬಿದ್ದುದ್ದನ್ನು ಯಾರೂ ಗಮನಿಸಲೇ ಇಲ್ಲ .

ಈ ಮೇಲ್ಕಂಡ ಪ್ರಸಂಗವು ಎಂದೋ ಒಂದು ಕಾಲದಲ್ಲಿ ಬಯಿರಾಪಟ್ಟಣ ಎಂಬ ಊರಿನಲ್ಲಿ ನಡೆಯಿತಂತೆ . ಬೆಂಗಳೂರು-ಮಯ್ಸೂರಿನ ಹೆದ್ದಾರಿಯಲ್ಲಿ ಚನ್ನಪಟ್ಟಣದ ಬಳಿಯಲ್ಲಿ ಈ ಊರು ಇದೆ . ದೊಂಬ ಹಾರಿದಶ್ಟು ಬೂಮಿಯನ್ನು ಊರಿನವರು ತಾವು ಕೊಟ್ಟ ಬಾಶೆಯಂತೆ ಅವನ ಹೆಸರಿನಲ್ಲಿ ಕೊಡುಗೆಯಾಗಿ ಬಿಟ್ಟರಂತೆ . ಅಂದಿನಿಂದ ದೊಂಬ ಹಾರಿದ ಜಾಗಕ್ಕೆ ” ದೊಂಬನ ಕೊಡುಗೆ ” ಎಂಬ ಹೆಸರು ಬಂದಿದೆಯೆಂದು ಊರಿನ ಜನ ಹೇಳುತ್ತಾರೆ . ಈಗ ಈ ಊರಿನಲ್ಲಿರುವ ಬಹಳ ವಯಸ್ಸಾದ ಮುದುಕರೂ ಕೂಡ ” ಇದು ನಮ್ಮ ಪೂರ‍್ವೀಕರ ಕಾಲದಲ್ಲಿ ನಡೆದದ್ದು…ಈ ಪ್ರಸಂಗವನ್ನು ನಮ್ಮ ಅಜ್ಜಂದಿರು ಹೇಳ್ತಾಯಿದ್ದರು ” ಎಂದು ನೆನಪಿಸಿಕೊಳ್ಳುತ್ತಾರೆ .

” ಬಯಿರಾಪಟ್ಟಣವನ್ನು ಬಯಿರೋಜಿ ಎಂಬ ದೊರೆ ಆಳುತ್ತಿದ್ದ . ಅದರಿಂದ ನಮ್ಮ ಊರಿಗೆ ಬಯಿರೋಜಿಪಟ್ಟಣ ಎಂಬ ಹೆಸರು ಬಂತು . ಕಾಲಕ್ರಮೇಣ ಅದೇ ಬಯಿರಾಪಟ್ಟಣವೆಂದಾಗಿದೆ . ಆ ದೊರೆಯ ಕಾಲದಲ್ಲಿ ಈ ಪ್ರಸಂಗ ನಡೆದಿರಬಹುದು ” ಎಂದು ಊರಿನ ಕೆಲವರು ಊಹಿಸುತ್ತಾರೆ . ಆದರೆ ಬಯಿರೋಜಿ ಆಳುತ್ತಿದ್ದ ಕಾಲ ಯಾವುದೆಂದು ಯಾರಿಗೂ ಗೊತ್ತಿಲ್ಲ . ಈ ಪ್ರಸಂಗವು ಒಂದು ದಂತಕತೆಯಾಗಿ ತಲೆಮಾರಿನಿಂದ ತಲೆಮಾರಿಗೆ ಹಬ್ಬಿ ಬಂದಿದೆ . ದೊಂಬನು ಮೂರು ಮೂಲೆಯಾಗಿ ಅಂದರೆ ತ್ರಿಕೋನಕಾರವಾಗಿ ಹಾರಿದ್ದರಿಂದ , ಅವನು ಹಾರಿ ಸಾಗಿದ ಜಾಗದಲ್ಲಿ ಯಾವ ಬೆಳೆಯು ಆಗುತ್ತಲೇ ಇರಲಿಲ್ಲವೆಂಬ ನಂಬಿಕೆಯು ಇಲ್ಲಿಯ ಜನರಲ್ಲಿತ್ತು . ಒಂದು ವೇಳೆ ಅಕ್ಕಪಕ್ಕದ ಹೊಲದವರು ಒತ್ತರಿಸಿಕೊಂಡು ಬೆಳೆಯೊಡ್ಡಿದರೆ , ಆ ಪಯಿರು ಮೊಳಕೆಯಲ್ಲೇ ಸೀದುಹೋಗುತ್ತಿತ್ತು ಮತ್ತು ಆ ರೀತಿ ಮಾಡಿದವರ ಮನೆಯ ಜನ ರಕ್ತ ಕಾರಿಕೊಂಡು ಸಾಯುತ್ತಿದ್ದರಂತೆ ! ಇಂತಹ ಅಂತೆಕಂತೆಗಳಿಂದ ಕೂಡಿ ಅಚಲವಾದ ನಂಬಿಕೆಯಿಂದಿದ್ದ ಈ ಊರಿನ ಜನರು ಸುಮಾರು ಒಂದು ನೂರ ಹತ್ತು ಎಕರೆಯಶ್ಟು ವಿಸ್ತಾರವಾದ ‘ ದೊಂಬನ ಕೊಡುಗೆ ‘ ಬೂಮಿಯನ್ನು ತಲತಲಾಂತರಗಳಿಂದಲೂ ಉಳುಮೆ ಮಾಡದೆ ಬಟ್ಟಬಯಲಾಗಿಯೇ ಬಿಟ್ಟಿದ್ದರು . ದನಗಳ ಹುಲ್ಲಿಗಾಗಿ , ಹೆಣಗಳನ್ನು ಹೂಳುವ ಜಾಗಕ್ಕಾಗಿ ಮತ್ತು ಮನೆಗಳನ್ನು ಕಟ್ಟುವ ಮಣ್ಣಿಗಾಗಿ ಈ ಪ್ರದೇಶವನ್ನು ಊರಿನ ಬಡವ ಬಲ್ಲಿದರೆಲ್ಲರೂ ಉಪಯೋಗಿಸಿಕೊಳ್ಳುತ್ತಿದ್ದರು . ಬೂಮಿಯನ್ನು ತಾನು ಪಡೆದರೂ , ಊರಿನ ಎಲ್ಲರ ಉಪಯೋಗಕ್ಕಾಗಿ ಬಿಟ್ಟು ಹೋದ ದೊಡ್ಡದಾನಿಯೆಂದೇ ದೊಂಬನನ್ನು ಎಲ್ಲರೂ ಗುಣಗಾನ ಮಾಡುತ್ತಿದ್ದರು . ಈ ರೀತಿ ದೊಂಬನು ಪವಾಡಪುರುಶನಾಗಿ ಬಹುಕಾಲದಿಂದಲೂ ಜನಮನದಲ್ಲಿ ಉಳಿದು ಬಂದಿದ್ದ . 1968 ನೆಯ ಇಸವಿಯವರೆಗೂ ದೊಂಬನ ಕೊಡುಗೆಯ ಪ್ರದೇಶವು ಬಟ್ಟಬಯಲಾಗಿಯೇ ಉಳಿದಿತ್ತು .

1968 ನೆಯ ಇಸವಿಯಲ್ಲಿ ಕರ‍್ನಾಟಕ ರಾಜ್ಯದ ತೋಟಗಾರಿಕೆ ಇಲಾಕೆಯವರು ನಲವತ್ತು ಎಕರೆ ಬೂಮಿಯನ್ನು ತಮ್ಮ ವಶಕ್ಕೆ ತೆಗೆದುಕೊಂಡು ಸಪೋಟ , ಸೀಬೆ , ಪರಂಗಿ , ತೆಂಗು ಮುಂತಾದ ಬಹುಬಗೆಯ ಸಸಿಗಳನ್ನು ನೆಟ್ಟು ದೊಂಬನ ಕೊಡುಗೆಯ ಜಮೀನಿನಲ್ಲಿ ಹಚ್ಚಹಸಿರಿನ ಸಿರಿಯು ಕಂಗೊಳಿಸುವಂತೆ ಮಾಡಿದರು . ಈ ಜಾಗದ ಬಗ್ಗೆ ಬಹುಕಾಲದಿಂದ ಬೇರೂರಿದ್ದ ಜನಮನದ ನಂಬಿಕೆಯು ಇಂದು ಇಲ್ಲವಾಗಿದೆ . ಇನ್ನುಳಿದ ಬೂಮಿಯಲ್ಲಿ ಹೆಚ್ಚಿನ ಜಾಗವನ್ನು ಗರೀಬಿ ಹಟಾವೋ ಯೋಜನೆಯಡಿಯಲ್ಲಿ ಬಡವರ ನಿವೇಶನಗಳಿಗಾಗಿ ಸರ‍್ಕಾರ ಬಳಸಿಕೊಂಡಿದೆ . ಮತ್ತಶ್ಟು ಜಾಗದಲ್ಲಿ ಸರ‍್ಕಾರಿ ಶಾಲಾ ಕಟ್ಟಡಗಳನ್ನು ಕಟ್ಟಿ , ಊರಿನ ಮಕ್ಕಳ ವಿದ್ಯೆಗಾಗಿ ನೀಡಲಾಗಿದೆ . ದೊಂಬನ ಕೊಡುಗೆಯ ಬೂಮಿಯು ಈಗಲೂ ಬಹು ಉಪಯೋಗಿಯಾಗಿ ತನ್ನನ್ನು ಸಾರ‍್ವಜನಿಕ ಸೇವೆಗಾಗಿ ಅರ‍್ಪಿಸಿಕೊಂಡಿದೆ . ದೊಂಬನ ಸಾಹಸವನ್ನು ಅಮರಗೊಳಿಸಲೆಂದು ಬಹಳ ಹಿಂದೆಯೇ ಆತನಿಗೆ ಒಂದು ನೆನಪಿನ ಮಂಟಪವನ್ನು ಕಟ್ಟಲಾಗಿದೆ . ಆತ ಬಿದ್ದು ಜೀವ ಬಿಟ್ಟ ಹಾಸುಬಂಡೆಯ ಮೇಲೆ ಮೂರು ಚಿಕ್ಕ ಗುಳಿಗಳಿವೆ . ಇವನ್ನು ದೊಂಬ ಬಿದ್ದ ರಬಸಕ್ಕೆ ಆದ ಆತನ ಎರಡು ಕಯ್ಗಳ ಮತ್ತು ಒಂದು ಮಂಡಿಯ ಗುರುತುಗಳೆಂದು ಊರಿನ ಜನ ನಂಬಿದ್ದಾರೆ . ಗೋರಿಯ ಮುಂದೆ ಒಂದು ಚಿಕ್ಕ ತುಳಸಿಕಟ್ಟೆಯಿದೆ . ದೊಂಬನ ಕೊಡುಗೆಯ ಜಮೀನು ಇಂದು ಪವಾಡದ ಬೂಮಿಕೆಯಾಗಿಲ್ಲದಿದ್ದರೂ , ದೊಂಬನ ಗೋರಿಯ ಮೇಲೆ ಪ್ರತಿನಿತ್ಯ ಸಂಜೆ ಹಣತೆಯನ್ನು ಬೆಳಗಿಸುತ್ತಾ , ಊರಿನ ಜನತೆ ಬಕುತಿಬಾವದಿಂದ ನಮಿಸುತ್ತಿರುತ್ತಾರೆ .

( ಕೊಡುಗೆ = ದಾನವಾಗಿ ಕೊಟ್ಟ ಬೂಮಿ , ಉಂಬಳಿ , ಮೆಚ್ಚುಗೆಯಾಗಿ / ದಾನವಾಗಿ ಏನನ್ನಾದರೂ ನೀಡುವುದು )

(ಚಿತ್ರಸೆಲೆ: odditymall.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: