ಪನಾಮ ಕಾಲುವೆಯತ್ತ ಒಂದು ಕಿರುನೋಟ

– ಹರ‍್ಶಿತ್ ಮಂಜುನಾತ್.

panam

ಜಗತ್ತಿನ ದೊಡ್ಡದಾದ ಹಾಗು ವಿಶೇಶವಾದ ಹಡುಗು ಕಾಲುವೆಗಳಲ್ಲಿ ಪನಾಮ ಕಾಲುವೆಯ ಹೆಸರು ಇದ್ದೇ ಇರುತ್ತದೆ. ತನ್ನ ವಿನ್ಯಾಸ, ಹಳಮೆ ಮತ್ತು ಅರಿಮೆಯ ವಿಶೇಶತೆಗಳಿಂದ ಪನಾಮ ಕಾಲುವೆಯು ಹೆಸರುವಾಸಿಯಾಗಿದೆ. ಕಡಲಿನ ವ್ಯಾಪಾರ-ವಹಿವಾಟಿನಲ್ಲಿ ತನ್ನದೇ ಆದ ಪ್ರಾಮುಕ್ಯತೆಯನ್ನು ಉಳಿಸಿಕೊಂಡು ಬಂದಿರುವ ಪನಾಮ ಕಾಲುವೆಯ ಕೆಲವು ವಿಶೇಶತೆಗಳನ್ನು ಅರಿಯೋಣ ಬನ್ನಿ.

ಆಗಸ್ಟ್ 15ಕ್ಕೆ ತನ್ನ ನೂರರ ನಲಿವನ್ನಾಚರಿಸಿಕೊಂಡಿರುವ ಪನಾಮ ಕಾಲುವೆ(Panama Canal)ಯತ್ತ ಇಡೀ ಜಗತ್ತು ಹಿಂದೆಂದೂ ನಡೆಯದ ಮೂರು ಮುಕ್ಯ ಬೆಳವಣಿಗೆಗಳಿಗಾಗಿ ಎದುರು ನೋಡುತ್ತಿದೆ.

  1. ಮುಂದಿನ ವರುಶದೊಳಗಾಗಿ ದೊಡ್ಡ ಸರಕು ಸಾಗಾಟದ ಹಡಗುಗಳಿಗೆ ಪೂರಕವಾಗುವಂತೆ, ಮೂರನೇ ನೀರು-ಏರಿಳಿಕೆ ಕಟ್ಟೆ(Canal Locks)ಯ ಕೆಲಸವನ್ನು ಪೂರ‍್ತಿಗೊಳಿಸಿ ಪನಾಮ ಕಾಲುವೆಯ ಅಳವನ್ನುಇಮ್ಮಡಿಗೊಳಿಸುವುದು.
  2. ಅಟ್ಲಾಂಟಿಕ್ ಮತ್ತು ಪೆಸಿಪಿಕ್ ಸೇರಿದಂತೆ ನಿಕರಾಗುವಾಗೆ ಅಡ್ಡಲಾಗಿ ಹೊಸ ಕಾಲುವೆಯ ಕೆಲಸವನ್ನು ಶುರುವಿಡುವುದು.
  3. ಮುಂಚಿನ ಪನಾಮಾ ಕಾಲುವೆಯನ್ನು ಎರಡು-ಹಾದಿಯುಳ್ಳ ಹಡಗುಗಳ ಹೆದ್ದಾರಿಯಂತೆ ಬದಲಾಯಿಸುವುದು.

ಇವೆಲ್ಲಾ ಪನಾಮ ಕಾಲುವೆಯ ಕುರಿತಾದ ಇತ್ತೀಚಿನ ಕೆಲವು ಬೆಳವಣಿಗೆಗಳು. ಸುಮಾರು ಇಪ್ಪತ್ತನೇ ಶತಮಾನದಲ್ಲಿ ಕಟ್ಟಲ್ಪಟ್ಟ, ಜಗತ್ತಿನಾದ್ಯಂತ ಕಡಲಿನ ವ್ಯಾಪಾರಕ್ಕೆ ಕೊಂಡಿಯಾಗಿ ನಿಂತಿರುವ, ಈ ಪ್ರಮುಕ ಕಾಲುವೆಯು ಬೆಳೆದು ಬಂದ ದಾರಿಯನ್ನು ತಿಳಿಯುವುದೊಂದು ರೋಚಕ ಅನುಬವ.

ಪನಾಮ ಕಾಲುವೆಯು ಪನಾಮದಲ್ಲಿರುವ ಒಂದು ಪ್ರಮುಕ ಹಡಗು ಕಾಲುವೆ. ಇದು ಅಟ್ಲಾಂಟಿಕ್ ಮಹಾಸಾಗರ ಮತ್ತು ಪೆಸಿಪಿಕ್ ಮಹಾಸಾಗರವನ್ನು ಸೇರಿಸುವ ನಾಲೆಯಾಗಿದೆ. ಹಾಗಾಗಿಯೇ ಇದು ಕಡಲಿನ ವ್ಯಾಪಾರದ ಸಲುವಾಗಿ ಬಹಳಶ್ಟು ಹೆಚ್ಚುಗಾರಿಕೆ ಪಡೆದುಕೊಂಡಿದೆ. 1904 ರಿಂದ 1914 ರವರೆಗೆ ಅಂದರೆ ಸುಮಾರು ಹತ್ತು ವರುಶಗಳ ಅವದಿಯಲ್ಲಿ ಈ ಕಾಲುವೆಯನ್ನು ಕಟ್ಟಲಾಯಿತು. ಮೊದಮೊದಲು ಈ ಕಾಲುವೆಯನ್ನು ಕಟ್ಟಿದಾಗ ವರುಶಕ್ಕೆ ಸುಮಾರು 1000 ಹಡಗುಗಳಶ್ಟು ದಟ್ಟಣೆಯಿತ್ತು. ಆದರೆ 2008ರ ಒಂದು ಲೆಕ್ಕಾಚಾರದಂತೆ ವರುಶಕ್ಕೆ 14,702 ರವರೆಗೆ ಏರಿಕೆ ಕಂಡಿದೆ! ಆ ಮೂಲಕ ಈ ಕಾಲುವೆಯಾದ್ಯಂತ ಒಟ್ಟು ಸುಮಾರು 8,15,000 ಹಡಗುಗಳು ಹಾದು ಹೋಗಿವೆ ಎಂದು ಹೇಳಲಾಗಿದೆ. ಈ ಕಾರಣಕ್ಕೆ ಇದು ಅಮೇರಿಕಾದ ಬಿಣಿಗೆಯರಿಗರ(American Engineers) ಸಂಗದಿಂದ, ಜಗತ್ತಿನ ಏಳು ಅದ್ಬುತಗಳಲ್ಲಿ ಒಂದೆಂಬ ಹೆಸರು ಪಡೆದಿದೆ. ಅಲ್ಲದೇ ಇದುವರೆಗೆ ಕಯ್ಗೊಂಡ ಅತಿದೊಡ್ಡ ಮತ್ತು ಅತಿ ಕಶ್ಟಕರ ಬಿಣಿಗೆಯರಿಮೆಯ ಹಮ್ಮುಗೆ(Engineering Project)ಗಳಲ್ಲಿ ಒಂದಾಗಿದೆ. ಪನಾಮ ಕಾಲುವೆಯು ಎರಡು ಸಾಗರಗಳ ನಡುವಿನ ಸರಕು ಸಾಗಾಣೆಯ ಮೇಲೆ ಬಾರೀ ಪರಿಣಾಮವನ್ನು ಬೀರಿದೆ.

ಪನಾಮದ ಬಳಿ ಕಾಲುವೆ ಒಂದನ್ನು ಕಟ್ಟಬೇಕೆಂಬ ಮಾತುಗಳು ಸುಮಾರು ಹದಿನಾರನೇ ಶತಮಾನಕ್ಕಿಂತ ಹಿಂದೆಯೇ ಕೇಳಿಬಂದಿದ್ದವು. ರೋಮನ್ ಚಕ್ರವರ‍್ತಿ ಚಾರ‍್ಲ್ಸ್, ಸ್ಪೇನ್ ನಿಂದ ಪೆರುವಿಗೆ ಮತ್ತು ಅಲ್ಲಿಂದ ಬೇರೆಡೆಗೆ ಸಾಗುವ ಹಡಗುಗಳ ಪ್ರಯಾಣವನ್ನು ಕಡಿತಗೊಳಿಸುವ ಸಲುವಾಗಿ, ಪನಾಮದ ಮೂಲಕ ಒಂದು ದಾರಿಯನ್ನು ಮಾಡುವ ಬಗ್ಗೆ ಸಮೀಕ್ಶೆಯೊಂದನ್ನು ಮಾಡಬೇಕೆಂದು ಆದೇಶಿಸಿದ್ದರು. ಆ ಮೂಲಕ ಪನಾಮದ ನೆಲದಲ್ಲಿ ಕಾಲುವೆಯೊಂದನ್ನು ಕಟ್ಟುವ ಬಗೆಗಿನ ಮೊದಲ ಸೂಚನೆಯನ್ನು 1534ರಲ್ಲಿ ನೀಡಲಾಯಿತು. 1534ರಲ್ಲಿ ಸ್ಪೇನ್ ದಂಡಯಾತ್ರೆಯ ಹೊತ್ತಿನಲ್ಲಿ ಅಲೆಸ್ಸಾಂಡ್ರೊ ಮಲಾಸ್ಪಿನಾ ಅವರು ಕಾಲುವೆಯೊಂದನ್ನು ಕಟ್ಟುವುದರ ಉಪಯೋಗನ್ನು ತೋರಿಸಿಕೊಟ್ಟರು ಮತ್ತು ಅದರ ನಿರ‍್ಮಾಣಕ್ಕಾಗಿ ಹಮ್ಮುಗೆಗಳನ್ನು ರೂಪಿಸಿದರು.

ಪನಾಮ ಮತ್ತು ಎರಡು ಪ್ರಮುಕ ಕಡಲುಗಳನ್ನು ಬೇರ‍್ಪಡಿಸುವ ಅದರ ನೆಲವು ಅನುಕೂಲಕರ ಜಾಗವನ್ನು ಒದಗಿಸಿದ್ದರಿಂದ, ನಂತರದ ವರುಶಗಳಲ್ಲಿ ಇತರ ಪ್ರಕಾರದ ವ್ಯಾಪಾರ ಸಂಪರ‍್ಕಗಳನ್ನು ಪ್ರಯತ್ನಿಸಲಾಯಿತು. ಮೊದಲು, ಪನಾಮ ನೆಲದಲ್ಲಿ ಹಳಿಬಂಡಿ(Train) ದಾರಿಯನ್ನು ಮಾಡಲಾಯಿತು, ಇದು 1855ರಲ್ಲಿ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿತು. ಈ ನೆಲಮಾರ‍್ಗದ ಸಂಪರ‍್ಕವು ಮೂಲಬೂತ ಏರ‍್ಪಾಡುಗಳ ಒಂದು ಪ್ರಮುಕ ಅಂಶವಾಯಿತು. ಇದು ಹೆಚ್ಚಿನ ಪ್ರಮಾಣದ ವ್ಯಾಪಾರಕ್ಕೆ ಅನುವು ಮಾಡಿಕೊಟ್ಟಿತು ಮತ್ತು ನಂತರದ ಕಾಲುವೆ ಮಾರ‍್ಗವನ್ನು ಕಟ್ಟುವಲ್ಲಿ ಹೆಚ್ಚುಗಾರಿಕೆಯ ಅಂಶವಾಯಿತು.

ಕಾಲುವೆಯನ್ನು ಕಟ್ಟುವ ಪ್ರಯತ್ನವು ಪ್ರೆಂಚ್ ಮುಂದಾಳತ್ವದಲ್ಲಿ 1880ರಲ್ಲಿ ಮೊದಲ್ಗೊಂಡಿತು ಆದರೆ ಕಾಯಿಲೆ ಮತ್ತು ನೆಲಕುಸಿತದ ಕಾರಣಗಳಿಂದಾಗಿ ಸುಮಾರು 21,900 ರಶ್ಟು ಕೆಲಸಗಾರರು ಅಸುನೀಗಿದರು. ಇದರಿಂದ ಕಾಲುವೆ ಕಟ್ಟುವ ಕೆಲಸವನ್ನು ಕಯ್ ಬಿಡಲಾಯಿತು. ಆ ಬಳಿಕ ಅಮೇರಿಕಾ ಸಂಯುಕ್ತ ಸಂಸ್ತಾನ(United States Of America)ವು ಎರಡನೇ ಪ್ರಯತ್ನವನ್ನು ಶುರುವಿಟ್ಟಿತು. ಇದರಲ್ಲಿ ಸುಮಾರು 5,600 ಮಂದಿ ಕೆಲಸಗಾರರು ಸಾವನ್ನಪ್ಪಿದರೂ, 1914ರಲ್ಲಿ ಈ ಕಾಲುವೆಯನ್ನು ಹಡಗುಗಳ ಓಡಾಟಕ್ಕೆ ಮುಕ್ತಗೊಳಿಸುವಲ್ಲಿ ಗೆಲುವು ಕಂಡಿತು.

ಈ ಕಾಲುವೆಯ ಮೇಲ್ವಿಚಾರಣೆಯನ್ನು 1977ರ ವರೆಗೆ ಅಮೇರಿಕ ಸಂಯುಕ್ತ ಸಂಸ್ತಾನವೇ ವಹಿಸಿಕೊಂಡಿತು. ಬಳಿಕ ಟೋರಿಜೋಸ್ – ಕಾರ‍್ಟರ್ ಒಪ್ಪಂದದ ಪ್ರಕಾರ ಅಮೇರಿಕಾ ಸಂಯುಕ್ತ ಸಂಸ್ತಾನ ಮತ್ತು ಪನಾಮ ಸರ‍್ಕಾರಗಳು ಜಂಟಿಯಾಗಿ 1999 ರವರೆಗೆ ಮೇಲ್ವಿಚಾರಣೆಯನ್ನು ವಹಿಸಿಕೊಂಡಿದ್ದವು. 1999ರಿಂದ ಈಚೆಗೆ ಪನಾಮ ಸರ‍್ಕಾರದ ಒಂದು ನಿಯೋಗವಾದ “ಪನಾಮ ಕಾಲುವೆ ಕೂಟ“ವು ಇದರ ನಿಯಂತ್ರಣವನ್ನು ಪಡೆದುಕೊಂಡಿದೆ.

ನೀರು-ಏರಿಳಿಕೆ ಕಟ್ಟೆ:
ನೀರು-ಏರಿಳಿಕೆ ಕಟ್ಟೆಗಳ ಗಾತ್ರವು ಅದರ ಮೂಲಕ ಸಾಗಿಸಬಹುದಾದ ಹಡಗುಗಳ ಹೆಚ್ಚಿನ ಗಾತ್ರವನ್ನು ನಿರ‍್ದರಿಸುತ್ತದೆ. ಈ ಕಾಲುವೆಯು ಬಹುನಾಡುಗಳ ವ್ಯಾಪಾರಕ್ಕೆ ಹೆಚ್ಚುಗಾರಿಕೆಯನ್ನು ಪಡೆದುದರಿಂದ, ಹೆಚ್ಚಿನ ಗಾತ್ರದ ಹಡಗುಗಳೇ ಇದರ ಮೂಲಕ ಸಂಚರಿಸುತ್ತವೆ. ಅವನ್ನು ಪನಾಮ್ಯಾಕ್ಸ್ ಹಡಗುಗಳೆಂದು ಕರೆಯಲಾಗುತ್ತದೆ. ಗಾತುನ್‌ನಲ್ಲಿನ ನೀರು-ಏರಿಳಿಕೆ ಕಟ್ಟೆಗಳನ್ನು ಅಗಲವಾಗಿ ಕಟ್ಟಲಾಗಿತ್ತು. 1908ರಲ್ಲಿ ಅಮೇರಿಕಾ ಸಂಯುಕ್ತ ಸಂಸ್ತಾನದ ಕಡಲಪಡೆಯು (Navy) ಅದರ ಅಗಲವನ್ನು ಹೆಚ್ಚಿಸಬೇಕೆಂದು ಕೇಳಿತು, ಆ ಮೂಲಕ ಅಮೇರಿಕಾ ಸಂಯುಕ್ತ ಸಂಸ್ತಾನದ ಕಡಲಪಡೆಯು ಹಡಗುಗಳ ಸಾಗಾಟಕ್ಕೆ ಅವಕಾಶ ಮಾಡಿಕೊಡಬಹುದೆಂದು ಸೂಚಿಸಿತು.

ಅಂತಿಮವಾಗಿ ಸಂದಾನವೊಂದನ್ನು ಮಾಡಿ, ಆ ನೀರು-ಏರಿಳಿಕೆ ಕಟ್ಟೆಗಳನ್ನು ಅಗಲವಾಗಿ ಕಟ್ಟಲಾಯಿತು. ಈ ನೀರು-ಏರಿಳಿಕೆ ಕಟ್ಟೆಗಳು ಪನಾಮ್ಯಾಕ್ಸ್ ಅಳತೆಯನ್ನು ನಿರ‍್ದರಿಸುತ್ತದೆ ಮತ್ತು ಕಾಲುವೆಯನ್ನು ಬಳಸುವ ಹಡುಗಗಳ ಗಾತ್ರವನ್ನು ಪರಿಮಿತಿಗೊಳಿಸುತ್ತದೆ. 2006ರ ಮೂರನೇ ನೀರು-ಏರಿಳಿಕೆ ಕಟ್ಟೆ ನಿರ‍್ಮಾಣ ಯೋಜನೆಯು, ದೊಡ್ಡ ನೀರು-ಏರಿಳಿಕೆ ಕಟ್ಟೆಗಳನ್ನು ಕಟ್ಟುವುದರ ಜೊತೆಗೆ ಆಳವಾದ ಮತ್ತು ಅಗಲವಾದ ನಾಲೆಗಳನ್ನು ಕಟ್ಟಿ, ದೊಡ್ಡ ಹಡಗುಗಳಿಗೆ ಸಾಗಲು ಅವಕಾಶ ಮಾಡಿಕೊಟ್ಟಿತು. ಹೊಸ ಪನಾಮ್ಯಾಕ್ಸ್ ನಿರೂಪಿಸಿದಂತೆ, ಅನುಮತಿ ನೀಡಿದ ಹಡಗುಗಳ ಅಳತೆಯು ಉದ್ದದಲ್ಲಿ ನೂರಕ್ಕೆ 25 ರಶ್ಟು, ಅಗಲದಲ್ಲಿ ನೂರಕ್ಕೆ 51 ರಶ್ಟು ಮತ್ತು ರೂಪರೇಕೆಯಲ್ಲಿ ನೂರಕ್ಕೆ 26ರಶ್ಟು ಹೆಚ್ಚಾಗುತ್ತದೆ.

ಮೂರನೇ ನೀರು-ಏರಿಳಿಕೆ ಕಟ್ಟೆ ಯೋಜನೆ:
ಹಳೆಯ ನೀರು-ಏರಿಳಿಕೆ ಕಟ್ಟೆಗಳಿಗೆ ಸಮಾಂತರವಾಗಿ ಎರಡು ಹೊಸ ನೀರು-ಏರಿಳಿಕೆ ಕಟ್ಟೆಗಳನ್ನು ಕಟ್ಟುವ ಹಮ್ಮುಗೆಯೊಂದನ್ನು ಮಾಡಲಾಗಿದೆ; ಒಂದನ್ನು ಈಗಿರುವ ಗಾತುನ್ ನೀರು-ಏರಿಳಿಕೆ ಕಟ್ಟೆಗಳ ಮೂಡಣಕ್ಕೆ, ಮತ್ತೊಂದನ್ನು ಮಿರಾಪ್ಲೋರ‍್ಸ್ ನೀರು-ಏರಿಳಿಕೆ ಕಟ್ಟೆಗಳ ತೆಂಕುಪಡುವಣ ದಿಕ್ಕಿಗೆ ಕಟ್ಟಲಾಗಿದೆ. ಇವೆರಡೂ ನೀರು-ಏರಿಳಿಕೆ ಕಟ್ಟೆಗಳು ಒಳಬರುವ ನಾಲೆಗಳಿಂದ ಆದಾರವನ್ನು ಪಡೆದಿವೆ. ಪ್ರತಿಯೊಂದು ಕಟ್ಟೆಯು ಸಮುದ್ರ ಮಟ್ಟದಿಂದ ನೇರವಾಗಿ ಗಾತುನ್ ಸರೋವರ ಮಟ್ಟಕ್ಕೆ ಏರುತ್ತದೆ.

ಹೊಸ ನೀರು-ಏರಿಳಿಕೆ ಕಟ್ಟೆಗಳ ನೀರ‍್ತೊಟ್ಟಿಗಳು(Chambers) ಜಾರುತಡೆ(Sliding Gate)ಗಳನ್ನು ಒಳಗೊಂಡಿರುತ್ತವೆ ಮತ್ತು ಎರಡು ಪಟ್ಟು ಗಟ್ಟಿತನವನ್ನು ಹೊಂದಿರುತ್ತವೆ. 427 ಮೀಟರ‍್‌ಗಳಶ್ಟು ಉದ್ದ, 55 ಮೀಟರ‍್‌ಗಳಶ್ಟು ಅಗಲ ಮತ್ತು 18.3 ಮೀಟರ‍್‌ಗಳಶ್ಟು ಆಳವಿರುತ್ತವೆ; ಇದು ಸುಮಾರು 49 ಮೀಟರ‍್‌ಗಳಶ್ಟು ಅಗಲ, 366 ಮೀಟರ‍್‌ಗಳಶ್ಟು ಉದ್ದ ಮತ್ತು 15 ಮೀಟರ‍್‌ಗಳಶ್ಟು ದೊಡ್ಡದಾದ ಹಡಗುಗಳು ತೇಲಲು ಬೇಕಾದ ಆಳವನ್ನು ಹೊಂದಿರುತ್ತದೆ. ಹೊಸ ನೀರು-ಏರಿಳಿಕೆ ಕಟ್ಟೆಗಳು 2015ರಲ್ಲಿ ಸಂಚಾರಕ್ಕೆ ತೆರೆದುಕೊಳ್ಳುತ್ತವೆ. ಆ ಹೊತ್ತಿನಲ್ಲಿ 100 ವರುಶಗಳಶ್ಟು ಹಳೆಯದಾಗುವ ಈಗಿನ ನೀರು-ಏರಿಳಿಕೆ ಕಟ್ಟೆಗಳು ನಿರ‍್ವಹಣೆಗೆ ಹೆಚ್ಚಿನ ಅವಕಾಶವನ್ನು ಹೊಂದಿರುತ್ತವೆ ಮತ್ತು ಅವನ್ನು ಹೆಚ್ಚಾಗಿ ಬಳಸುವುದನ್ನು ಮುಂದುವರಿಸಲು ಹಮ್ಮುಗೆಯನ್ನು ನಡೆಸಲಾಗಿದೆ.

ಹೊಸ ಕಾಲುವೆಯ ನಿರ‍್ಮಾಣ:
ಸ್ಪಾನಿಶ್ ಸ್ಯಾಸಿರ್ ವ್ಯಾಲೆಹರ‍್ಮೊಸೊ, ಇಟಲಿಯನ್ ಇಂಪ್ರೆಗಿಲೊ ಮತ್ತು ಪನಾಮದ ಸಂಸ್ತೆ ಕ್ಯೂಸಾ ಮೊದಲಾದವನ್ನೊಳಗೊಂಡ ಗುತ್ತಿಗೆದಾರರ-ಒಕ್ಕೂಟದೊಂದಿಗೆ ಜತೆಗೂಡಿ, ಬೆಲ್ಜಿಯಂನ ಹೂಳೆತ್ತುವ ಕಂಪನಿ ಜಾನ್ ಡಿ ನಲ್ ಅವರು ಆರು ಹೊಸ ನೀರು-ಏರಿಳಿಕೆ ಕಟ್ಟೆಗಳನ್ನು ನಿರ‍್ಮಿಸುವ ಗುತ್ತಿಗೆಯನ್ನು ವಹಿಸಿಕೊಂಡಿದೆಯೆಂದು 2009ರ ಜುಲೈನಲ್ಲಿ ಗೋಶಿಸಲಾಯಿತು. ಈ ಗುತ್ತಿಗೆ ಸಂಸ್ತೆಯು ಮುಂದಿನ ಕೆಲವು ವರುಶಗಳ ಹೊತ್ತು ಹೂಳೆತ್ತುವ ಕೆಲಸಗಳಿಗೆ ಲಕ್ಶಾಂತರ ಹಣ ಕರ‍್ಚು ಮಾಡುತ್ತದೆ, ಅಲ್ಲದೇ ಈ ಸಂಸ್ತೆಯ ನಿರ‍್ಮಾಣ ವಿಬಾಗಕ್ಕೆ ಇದೊಂದು ಉತ್ತಮ ಮಟ್ಟದ ಕೆಲಸವಾಗಿದೆ ಎಂದು ನಂಬಲಾಗಿದೆ. ಈ ನೀರು-ಏರಿಳಿಕೆ ಕಟ್ಟೆಗಳ ರಚನೆಯು 1980ರ ದಶಮಾನದಲ್ಲಿ ಡಿ ನಲ್ ಸಂಸ್ತೆಯು ಕಟ್ಟಿದ ಆಂಟ್‌ವರ‍್ಪ್ ಬಂದರಿನಲ್ಲಿರುವ ಬೆರೆಂಡ್ರೆಚ್ಟ್ ನೀರು-ಏರಿಳಿಕೆ ಕಟ್ಟೆಯ ಮಾದರಿಯಲ್ಲಿಯೇ ಇದೆ. ಆ ಹಮ್ಮುಗೆಯ ಬಾಗವಾಗಿದ್ದ ಬಿಣಿಗೆಯರಿಗರು ಮತ್ತು ವಿಶೇಶ ಅರಿಗರು ಈಗಲು ಈ ಸಂಸ್ತೆಯೊಂದಿಗೆ ಇದ್ದಾರೆ ಮತ್ತು ಹೊಸ ಕಾಲುವೆ ಕಟ್ಟುವಲ್ಲಿ ಇವರು ಪಾಲ್ಗೊಳ್ಳಲಿದ್ದಾರೆ. ಈ ತಂಡದಿಂದ ಹೊರಬರುವ ಆರು ನೀರು-ಏರಿಳಿಕೆ ಕಟ್ಟೆಗಳನ್ನು ನಾವು ಎದುರುನೋಡಬೇಕಿದೆ.

(ಮಾಹಿತಿ ಮತ್ತು ಚಿತ್ರ ಸೆಲೆ: wikipedia, economist.com)Categories: ಅರಿಮೆ

ಟ್ಯಾಗ್ ಗಳು:, , , , , , , , , , , , , , , , , , , , , , ,

ಅನಿಸಿಕೆ ಬರೆಯಿರಿ

Please log in using one of these methods to post your comment:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s