ಸಾವಿನ ಬಳಿಕವೂ ಅರಿಮೆ ಸಾರಿದ ಆರ‍್ಕಿಮಿಡೀಸ್

ಗಿರೀಶ ವೆಂಕಟಸುಬ್ಬರಾವ್.

ಕಳೆದ ಬರಹದಲ್ಲಿ ರೋಮನರ ಹಿಡಿತಕ್ಕೆ ಸಿರಾಕಸ್ ಪಟ್ಟಣ ಸಿಲುಕಿದ್ದು ಹಾಗೂ ಮೇಲರಿಮೆಗಾರ ಆರ‍್ಕಿಮಿಡೀಸ್‍ರು ಅಲ್ಪನ(ರ) ಮದ ತುಂಬಿದ ನಡೆಯಿಂದ ಕೊನೆಯಾಗಿದ್ದು ಓದಿದೆವು.

sisero_romanಈ ಗ್ರೀಕರ ಹಿನ್ನಡವಳಿಯನ್ನು(History) ಜಗತ್ತಿಗೆ ಸಾರಿದವರಲ್ಲಿ ರೋಮನ್ ಹಿನ್ನಡವಳಿಯರಿಗ (Historian) ಮಾರ‍್ಕಸ್ ಟ್ಯುಲಿಯಸ್ ಸಿಸೆರೋ (106 BC – 43 BC, ಪಕ್ಕದಲ್ಲಿರುವ ತಿಟ್ಟವನ್ನು ನೋಡಿ) ಅವರ ಪಾತ್ರ ಬಲುದೊಡ್ಡದು. ರೋಮ್ ಪಟ್ಟಣದ ಸಿರಿವಂತ ಒಕ್ಕಲಿನಲ್ಲಿ(Family) ಹುಟ್ಟಿದ ಅವರು, ಬರಿ ಹಿನ್ನಡವಳಿಯರಿಗ ಅಶ್ಟೇ ಆಗಿರದೆ ಹಲಬದ್ದುಗೆಯನ್ನು (Multi-skilled) ಹೊಂದಿದ್ದ ಒಬ್ಬ ಅರಿವಿನರಿಗ (Philosopher), ಹೂಟಗಾರ (Politician), ಕಟ್ಟಲೆಯರಿಗ (Lawyer), ಮಾತುಗಾರ (Orator), ಹಿರಿಯಾಳು (Consul) ಹಾಗೂ ಇಟ್ಟಳಯರಿಗರಾಗಿಯೂ (Constitutionalist) ಹೆಸರುವಾಸಿಯಾಗಿದ್ದರು.

ಸಿಸೆರೋ ಹೊಂದಿದ್ದ ಈ ಬದ್ದುಗೆಗಳೇ (skills) ಅವರನ್ನು ಸಿರಾಕಸ್ ನಡುಗಡ್ಡೆಗೆ ರೋಮನರ ಆಳುವಿಕೆ ನಡೆಯುವ ದಿನಗಳಲ್ಲಿ, ಅಂದರೆ ಯೇಸುಹುಟ್ಟುವ 75 ವರುಶಗಳ ಹಿಂದೆ ಮಂದಿಯಾಳ್ವಿಗನಾಗಿ(Public Official) ಮಾಡುತ್ತದೆ. ಇವರನ್ನು ಕ್ವೆಸ್ಟರ್ (Quaestor) ಎಂದು ಕರೆಯಲಾಗುತ್ತದೆ. ನಾಡಿನ ಆಳ್ವಿಕೆ, ಕೊಳ್ಳುಮಾರುಗೆ (Commerce) ಹಾಗೂ ಹಣಕಾಸಿನ ಉಸ್ತುವಾರಿಕೆ ಈ ಕ್ವೆಸ್ಟರ‍್‌ಗಳದು.

ಆರ‍್ಕಿಮಿಡೀಸ್‍ರ ಹಿರಿಮೆಯನ್ನು ಅರಿತಿದ್ದ ಸಿಸೆರೋ ಆರ‍್ಕಿಮಿಡೀಸ್‍ರ ಹೂಳುಕಟ್ಟಡವನ್ನು (Tomb) ಹುಡುಕುವ ಕೆಲಸವನ್ನು ಕಯ್ಗೆತ್ತಿಕೊಳ್ಳುತ್ತಾರೆ. ಸಿರಾಕಸ್ ಪಟ್ಟಣದ ಉದ್ದಗಲಕ್ಕೂ ಅಲೆಯುತ್ತಾ, ಅಲ್ಲಿ ಕಂಡು ಬರುವ ಪಾಳುಬಿದ್ದ ಕಟ್ಟಡಗಳನೆಲ್ಲಾ ತಡಕುತ್ತಲೂ, ಹಲವು ಸಿರಾಕಸ್‌ ಮಂದಿಯನ್ನು ಕೇಳುತ್ತಲೂ, ದೊರಕುವ ಬರಹಗಳನ್ನು ಓದುತ್ತಲೂ, ಇದರ ಸುಳಿವು ಸಿಗಬಹುದೇನೋ ಎಂದು ಯತ್ನಿಸುತ್ತಾರೆ, ಅದರೆ ತುಂಬ ದಿನಗಳಾದರೂ ಆ ಕೆಲಸ ಕಯ್‌ಗೂಡುವುದಿಲ್ಲ. ಆದರೂ ಹಟಬಿಡದೆ ಹುಡುಕುವ ಸಿಸೆರೋರವರಿಗೆ, ಆರ‍್ಕಿಮಿಡೀಸ್‍ರು ಕೊನೆಯಾದ 135 ವರುಶಗಳ ಬಳಿಕ ಕೊನೆಗೂ ಸಿಗುತ್ತದೆ. ಆ ಹೂಳುಕಟ್ಟಡ ಕೂಡಾ ತನ್ನ ಸುಳಿವನ್ನು ಬಿಟ್ಟುಕೊಡುವುದು ಆರ‍್ಕಿಮಿಡೀಸ್‍ರ ಕಂಡುಹಿಡಿಕೆಯನ್ನು ಸಾರಿತೋರುವ ಪರಿಯಿಂದಲೇ!!

ಸಿಸೆರೋ ಇದನ್ನು ಕಂಡುಹಿಡಿದ ಬಳಿಕ ಅವರೇ ಬರೆದಿದ್ದನ್ನು ನೋಡೋಣ,

ಇಂದು ದೂಳು ತುಂಬಿರುವ ಪಟ್ಟಣವಾದ ಸಿರಾಕಸ್‌ನಲ್ಲಿ ಹಲವು ವರುಶಗಳಲ್ಲಿ ನೆಲೆಸಿ, ಗೆರೆಗಳನೆಳೆದು ಹೆಸರುಮಾಡಿದ್ದ ಆರ‍್‌ಕಿಮಿಡೀಸರ ಹೂಳುಕಟ್ಟಡವನ್ನು ನಾನು ಸಿರಾಕಸ್‌ನ ಕ್ವೆಸ್ಟೆರ್ ಆಗುತ್ತಿದಂತೆ ಹುಡುಕಲು ಹೊರಟೆ ಕೊನೆಗೂ ಹುಡುಕಿದೆ. ಸಿರಾಕಸ್ ಮಂದಿಗಂತೂ ಇದರ ಬಗೆಗೆ ಕೊಂಚವೂ ಅರಿವಿರಲಿಲ್ಲ, ಆದರೆ ಇಂತಹುದೊಂದು ಇದೆ ಎಂಬುದನ್ನೇ ಅವರು ಅಲ್ಲಗೆಳೆದರು. ಆದರೆ ಅದು ಇತ್ತು!!
ಇಂದು ಅಗ್ರಿಗೆಂಟಯ್ನ್ ಬಾಗಿಲು(Agrigentine Gate) ಬಳಿ ಸಿಕ್ಕಿದ್ದ ಹಲವು ಹೂಳುಕಟ್ಟಡಗಳ ನಡುವೆ, ಎಲ್ಲೆಡೆಯಿಂದಲೂ ಕಾಣದಂತೆ ಮುಳ್ಳುಕಂಟಿಗಳು ತುಂಬಿದ್ದ ಪೊದೆಗಳಿಂದ ಮುಚ್ಚಿಹೋಗಿದ್ದರೇನು, ನಾನು ಓದಿದ ಕೆಲವು ಕಟ್ಟೊರೆಯಲ್ಲಿ (Verses) ಸಾರಿದ್ದ ಆ ಒಂದು ಸುಳಿವೇ ನೆರವಿಗೆ ಬಂದಿತ್ತು. ಆ ಸಾಲುಗಳು ಹೂಳುಕಟ್ಟಡದ ಮೇಲೆ ಕೆತ್ತಿಟ್ಟ ಗುಂಡು(Sphere) ಹಾಗೂ ಉರುಳೆಯ (Cylinder) ಮಾದರಿ ಇದೆಯೆಂದಿತ್ತು.
ಇಂದು ಸಿಕ್ಕಿದ್ದ ಹಲವು ಹೂಳುಕಟ್ಟಡಗಳನ್ನು ಚೆನ್ನಾಗಿ ನೋಡತೊಡಗಿದಾಗ ಒಂದು ಪುಟ್ಟಕಂಬವು ತರಿದ ಪೊದೆಗಳ ನಡುವೆ ಕಂಡುಬಂತು. ಅದರ ಮೇಲೆ ಒಂದು ಉರುಳೆಯೂ ಹಾಗು ಗುಂಡೂ ಇತ್ತು. ಕೂಡಲೇ ನನ್ನೊಂದಿಗಿದ್ದ ಕೆಲವು ಸಿರಾಕಸ್ ಮಂದಿಗೆ ಹೇಳಿದೆ, ನಾನು ಹುಡುಕುತ್ತಾ ಇದ್ದಿದ್ದು ಇದೇ ಎಂದು.
ಆಳುಗಳು ಗುದ್ದಲಿಗಳೊಂದಿಗೆ ಆ ಜಾಗವನ್ನು ಮತ್ತಶ್ಟು ತರಿದಾಗ, ಆ ಹೂಳುಕಟ್ಟಡಕ್ಕೆ ಹೋಗುವ ಕಾಲುದಾರಿಯೊಂದು ಕಂಡುಬಂತು. ಆ ಕಾಲುದಾರಿಯಿಂದ ಆ ಹೂಳುಕಟ್ಟಡದ ಬಳಿ ನೇರವಾಗಿ ನಡೆದೆವು. ಅದರ ಮೇಲೆ ಆ ಕಟ್ಟೊರೆಯೂ ಕೆತ್ತಲ್ಪಟ್ಟಿತ್ತು, ಆದರೆ ಸಾಲಿನ ಕೊನೆಗಳು ಸವೆದುಹೋಗಿತ್ತು.

ಈ ಬರಹದ ನೆರವಿನಿಂದ ಅಂದಿನ ಆ ನೋಟವನ್ನು ಒಬ್ಬ ಕಲೆಗಾರ ಮಾರ‍್‌ಟಿನ್ ನೋಲೆರ‍್(Martin Knoller) 1775 ರಲ್ಲಿ ಬಣ್ಣದ ತಿಟ್ಟವಾಗಿ ಕಣ್ಣಿಗೆಕಟ್ಟಿದಂತೆ ಮಾಡಿರುವುದನ್ನು ಕೆಳಗೆ ನೋಡಿ.

West,_Benjamin_-_Cicero_and_the_magistrates_discovering_the_tomb_of_Archimedes

ನಾವು ಹಿಂದಿನ ಬರಹದಲ್ಲಿ ಓದಿ ಅರಿತಿದ್ದ ಆರ‍್ಕಿಮಿಡೀಸ್‍ರ ಹಿರಿಮೆಯ ಕಂಡುಹಿಡಿಕೆಯನ್ನು ಮತ್ತೆ ನೆನೆಪಿಸಿಕೊಳ್ಳಿ: ಗುಂಡು ಹಾಗೂ ಉರುಳೆಗಳ ಆಳವಿಗಳಿಗಿದ್ದ ಹೊಂದಿಕೆಯನ್ನು ಈಗ ಒಮ್ಮೆ ನೆನಪಿಸಿಕೊಳ್ಳಿ.

ಗೋಳದ ಆಳವಿ (Volume of Sphere) = (2/3) * ಉರುಳೆಯ ಆಳವಿ (Volume of Cylinder)

ತಾವು ಸತ್ತ ಬಳಿಕ ತಮ್ಮ ಹೂಳುಕಟ್ಟದ ಮೇಲೆ, ತಮ್ಮ ಈ ಕಂಡುಹಿಡಿಕೆಯನ್ನು ಸಾರಿ ಎಂದು ಆರ‍್ಕಿಮಿಡೀಸ್‍ರು ತಮ್ಮ ಆಪ್ತರಲ್ಲಿ ಹಲವು ಬಾರಿ ಹೇಳಿಕೊಂಡಿದ್ದರಂತೆ. ತನ್ನ ಮದತುಂಬಿದ ಅರಿವುಗೇಡಿ ಪಡೆಯಾಳಿನಿಂದ ಆರ‍್ಕಿಮಿಡೀಸ್‍ರು ಕೊಲ್ಲಲ್ಪಟ್ಟಾಗ ದಳವಾಯಿ (General) ಮಾರ‍್ಕಸ್ ಕ್ಲಾಡಿಯಸ್ ಮಾರ‍್‌ಸೆಲುಸ್ ನೊಂದುಕೊಳ್ಳುತ್ತಾನೆ. ಅವರ ಕಳೇಬರಕ್ಕೆ ತಕ್ಕಮೆಯನ್ನು (Respect) ಮಾಡಿ, ಒಂದು ಹೂಳುಕಟ್ಟಡವನ್ನು ಕಟ್ಟಿಸಿರುತ್ತಾನೆ. ಆಗ ಆರ‍್‌ಕಿಮಿಡೀಸರ ಬಯಕೆಯನ್ನು ಅವರ ಆಪ್ತರಿಂದ ಅರಿವ ಮಾರ‍್‌ಸೆಲುಸ್ ಅದನ್ನು ನೆರವೇರಿಸಿರುತ್ತಾನೆ.

ಕಟ್ಟಡದಲ್ಲಿ ಅದನ್ನು ಸಾರಿದ್ದೇ ಕೊನೆಗೆ ಆರ‍್ಕಿಮಿಡೀಸ್‍ರ ಹೂಳುಕಟ್ಟಡವನ್ನು ಗುರುತಿಸಲು ಸಿಸೆರೋ ನೆರವಿಗೆ ಬರುತ್ತದೆ. ಅದನ್ನು ಗುರುತಿಸಿದ ನಂತರ, ಸಿಸಿರೋ ಆ ಹೂಳುಕಟ್ಟಡವನ್ನು ಮತ್ತೊಂದೆಡೆ ಸಾಗಿಸಿ ಅದನ್ನು ಮತ್ತೆ ಚೆನ್ನಾಗಿ ಕಟ್ಟಿಸಿದರಂತೆ. ಇಂದಿನ ಸಿರಾಕಸ್‌ನ ನೆಕ್ರೊಪೊಲ್ಲಿ ಡಿ ಗ್ರೊಟ್ಟಿಸೆಲ್ಲಿಯಲ್ಲಿ (Necropoli dei Grotticelli) ಹೂಳುಕಟ್ಟಡವು ಇದೆಯೆಂದು ಮಿಂದಾಣಗಳು ಸಾರುತ್ತವೆ. ಹಾಗೆ ಕಂಡುಬಂದ ಒಂದು ಕೆಳಗಿನ ತಿಟ್ಟವನ್ನು ನೋಡಿ,

tomb-of-archimedes

ಕಟ್ಟಡಕ್ಕಳಿವಾದರೇನು ಆರ‍್ಕಿಮಿಡೀಸ್‍ರು ಹಾಗೂ ಅವರು ನಮಗಿತ್ತ ಅರಿಮೆಗೆ ಅಳಿವು ಉಂಟೆ? ಈ ಜಗತ್ತು ಇರುವವರೆಗೂ ಆರ‍್ಕಿಮಿಡೀಸ್‍ರು ಸಾವಿಲ್ಲದವರೇ..

ಆರ‍್ಕಿಮಿಡೀಸ್‍ರ ಹಿರಿಮೆಗೆ ಜಗವಿತ್ತ ಇನ್ನಶ್ಟು ತಕ್ಕಮೆಗಳು:
• ಅರಿಮೆಗಾರ ಗೆಲೆಲಿಯೋ ಗೆಲೆಲಿ ಆರ‍್ಕಿಮಿಡೀಸ್‍ರನ್ನು ಮೇಲರಿಮೆಗಾರನೆಂದೇ ಸಾರಿ ಹೇಳಿದ್ದರು
• ಚಂದಿರನ ಮೇಲೆ ಮೊದಲು ಕಂಡುಬಂದ ಕೊಳ್ಳಕ್ಕೂ (Crater) ಕ್ಕೂ ಆರ‍್ಕಿಮಿಡೀಸ್‍ರ ಹೆಸರನ್ನೇ ಇಡಲಾಯಿತು.

crater
• ಬಾನಬಂಡೆ (Asteroid) ಒಂದಕ್ಕೆ ಆರ‍್ಕಿಮಿಡೀಸ್‍ರ ಹೆಸರನ್ನೇ ಇಡಲಾಯಿತು.
• ಎಣಿಕೆಯರಿಮೆಯ ಗೆಲುವನ್ನು ಹೊಂದುವವರಿಗೆ ನೀಡುವ ಪದಕದಲ್ಲೂ ಆರ‍್ಕಿಮಿಡೀಸ್‍ರ ಮೊಗ ಮತ್ತು ಹೇಳಿಕೆ “ಮೇಲೆದ್ದು ನಿಲ್ಲಿ ಮತ್ತು ಜಗತ್ತನ್ನೇ ಹಿಡಿಯಿರಿ” ಎಂದು ಅಚ್ಚುಹಾಕಲಾಗಿದೆ.

medal
• ಜರ‍್ಮನಿ, ಗ್ರೀಸ್, ಇಟಲಿ, ನಿಕರಾಗುವಾ, ಸಾನ್ ಮಾರಿನೋ ಹಾಗೂ ಸ್ಪೇನ್ ನಾಡಿನ ಅಂಚೆಚೀಟಿಗಳಲ್ಲಿ ಆರ‍್ಕಿಮಿಡೀಸ್‍ರನ್ನು ಕಾಣಬಹುದು.

stamps
ಇವಶ್ಟೂ ಈ ಸರಣಿಯ ಬರಹಗಳಿಗೆ ನಿಲುಕಿದ್ದ ಆರ‍್ಕಿಮಿಡೀಸ್‍ರ ಹಿರಿಮೆ. ಇದನ್ನು ಜಗತ್ತಿಗಿತ್ತ ಆ ಮೇಲರಿಮೆಗಾರನಿಗೆ ನಮ್ಮ ತಕ್ಕಮೆಯನ್ನೂ ಒದವಿ ನೆನೆಪಿಸಿ (Thanks) ಈ ಸರಣಿಗೆ ಕೊನೆಹಾಡೋಣ. ಮುಂದಿನ ಬರಹದಲ್ಲಿ ಇನ್ನೊಬ್ಬರು ಮೇಲರಿಮೆಗಾರರನ್ನು ಕುರಿತು ಅರಿಯೋಣ.

(ತಿಟ್ಟಸೆಲೆಗಳು: en.wikipedia.org, progettomatematica.dm.unibo.it, home.swipnet.se, www.astro.uni.wroc.pl)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: