ಕಲಿಸುವ ಪರಿ ತಂದುಕೊಟ್ಟ ಗರಿ

– ವಲ್ಲೀಶ್ ಕುಮಾರ್.

higher-education-furniture
ಜಗತ್ತಿನೆಲ್ಲೆಡೆ ಈಗ ಎಂಬಿಎ ಪದವಿಗಳು ಹೆಚ್ಚು ಬೇಡಿಕೆಯಲ್ಲಿವೆ. ಅತ್ಯುತ್ತಮವಾದ ವಿವಿ(ವಿಶ್ವವಿದ್ಯಾಲಯ)ಗಳಿಂದ ಎಂಬಿಎ ಪಡೆದ ಹಲವಾರು ಮಂದಿ ತಮ್ಮ ಸಂಬಳವನ್ನು ದುಪ್ಪಟ್ಟು ಮಾಡಿಕೊಂಡ ಎತ್ತುಗೆಗಳೂ ಇವೆ. ಹೆಸರುವಾಸಿ ವಿವಿಗಳಿಂದ ಎಂಬಿಎ ಮಾಡಿದವರಿಗೆ ಅವಕಾಶ ಕೊಡಲು ದೊಡ್ಡ ದೊಡ್ಡ ಕಂಪನಿಗಳು ಮುಂದಾಗುತ್ತವೆ. ಅಲ್ಲದೇ ತಮ್ಮ ಕಂಪನಿಯ ಉದ್ಯೋಗಿಗಳು ಎಂಬಿಎ ಓದಬಯಸಿದರೆ ಕಂಪನಿಗಳು ತಾವೇ ಹಣ ತುಂಬಿ ಉದ್ಯೋಗಿಗಳನ್ನು ಹೆಸರುವಾಸಿಯಾಗಿರುವ ವಿವಿಗಳಿಗೆ ಸೇರಿಸುತ್ತಾರೆ.

ಬಾರತದ ಉದ್ಯೋಗ ಮಾರುಕಟ್ಟೆಯೂ ಈ ಅಲೆಗೆ ಹೊರತಾಗಿಲ್ಲ. “ದಿ ಎಕನಾಮಿಸ್ಟ್” ಪತ್ರಿಕೆ ಎರಡು ವಾರದ ಹಿಂದೆ ಜಗತ್ತಿನ ಅತ್ಯುತ್ತಮ ಎಂಬಿಎ ವಿವಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಅಹಮದಾಬಾದಿನ ಐಐಎಂ 48ನೇ ಮಟ್ಟ ಗಳಿಸುವ ಮೂಲಕ ಎಕನಾಮಿಸ್ಟ್ ಪಟ್ಟಿಯಲ್ಲಿ ಹೆಸರಿಸಲಾದ ಬಾರತದ ಒಂದೇ ಒಂದು ಎಂಬಿಎ ವಿವಿಯಾಗಿದೆ. ಚಿಕಾಗೊ ವಿವಿ (University of Chicago – Booth School of Business) ಈ ಪಟ್ಟಿಯ ಮುಂಚೂಣಿಯಲ್ಲಿದೆ.

ಈ ಪಟ್ಟಿಯ ಮುಂಚೂಣಿಯಲ್ಲಿರುವ ಕೆಲ ವಿವಿಗಳು ಕಲಿಸುವ ಪರಿಯೇ ವಿಶೇಶವಾಗಿದೆ. ಕಲಿಕೆಯ ಹೊಸ ಆಯಾಮಗಳನ್ನು ತೆರೆದಿಡುವಂತಿದೆ ಇವರ ಪದ್ದತಿಗಳು. ಅಚ್ಚುಕಟ್ಟಾದ ಮೂಲಬೂತ ಸೌಕರ‍್ಯ ಮತ್ತು ಅತ್ಯುತ್ತಮ ಕಲಿಸುಗರನ್ನು ಹೊಂದಿರುವಲ್ಲಿ ಸಹಜವಾಗಿಯೇ ಈ ವಿವಿಗಳು ಮೇಲುಗೈ ಪಡೆದಿವೆ. ಇದಕ್ಕೆ ಕಳಶವಿಟ್ಟಂತೆ ಕೆಲ ಹೊಸ ಕಲಿಕಾ ಬಗೆಗಳನ್ನೂ ಅಳವಡಿಸಿಕೊಳ್ಳಲಾಗಿದೆ. ಎತ್ತುಗೆಗೆ, ಚಿಕಾಗೊ ವಿವಿಯ ಕೋಣೆಯೊಂದರ ಹೆಚ್ಚುಗಾರಿಕೆ ಏನೆಂದರೆ ಒಂದೊಮ್ಮೆ ಕಲಿಸುಗರು ನಿಗದಿತ ವೇಳೆಗೆ ಇಲ್ಲಿ ಬರಲು ಆಗದಿದ್ದರೆ ಆಗ ದೂರದಿಂದಲೇ ಕಲಿಸುವ (Remote Teaching) ಚಳಕವನ್ನು ಬಳಸಬಹುದಾಗಿದೆ. ಈ ಚಳಕವನ್ನು ಬಳಸುವ ಮೂಲಕ ಕಲಿಸುಗರು ತಾವಿರುವೆಡೆಯಿಂದಲೇ ಕಾಲೇಜಿನ ವಿದ್ಯಾರ‍್ತಿಗಳಿಗೆ ಪಾಟ ಮಾಡಬಹುದು.

ಬೇರೆಲ್ಲಾ ವಿವಿಗಳಲ್ಲಿ ಹಲವಾರು ವಿಶಯಗಳನ್ನು ಕಲಿಯುವ ಆಯ್ಕೆ ಇದ್ದರೆ, ಡಾರ್ಟ್‍ಮೌತ್ ಕಾಲೇಜಿನಲ್ಲಿ – (Dartmouth College – Tuck School of Business) ಕೇವಲ ಒಂದೇ ವಿಶಯದಲ್ಲಿ ಎಂಬಿಎ ಪದವಿಯನ್ನು ನೀಡಲಾಗುತ್ತದೆ. ಹಾಗೆ ಒಂದೇ ವಿಶಯದಲ್ಲಿ ಕಲಿಸುವ ಮೂಲಕ ಪ್ರತಿಯೊಬ್ಬ ವಿದ್ಯಾರ‍್ತಿಗೂ ಆಳವಾಗಿ ವಿಶಯಗಳನ್ನು ಕಲಿಸಲು ನೆರವಾಗುತ್ತದೆ ಎಂದು ಅಲ್ಲಿಯ ಆಡಳಿತದವರು ನಂಬಿದ್ದಾರೆ. ವರ‍್ಜೀನಿಯಾ ವಿವಿ ತನ್ನ ಪರಿಸರದ ಸುತ್ತಲ ಹೊಸ ಹೊಳಹುಗಳನ್ನು (ideas) ಪೊರೆಯುವ ಒಂದು ಹೊಸ ಹೆಜ್ಜೆ ಇಟ್ಟಿದೆ. ಇಲ್ಲಿ ಉದ್ದಿಮೆಗಾರಿಕೆಯ ಚಿಂತನೆಗಳನ್ನು ಹಂಚಿಕೊಂಡು ಬೆಳೆಸಲು “ಉದ್ದಿಮೆದಾರಿಕೆ ಕೂಟ” (entrepreneurial hub) ಒಂದನ್ನು ಏರ‍್ಪಡಿಸಲಾಗಿದೆ. 2010ರಿಂದ “Original i.lab” ಎನ್ನುವ ಏರ‍್ಪಾಡನ್ನು ಹೊರಡಿಸಿರುವ ಈ ವಿವಿ, ತಮ್ಮ ಸುತ್ತ ಮುತ್ತಲ ಉದ್ದಿಮೆದಾರರು ವಿವಿಯ ವಿದ್ಯಾರ‍್ತಿಗಳೊಂದಿಗೆ ಬೆರೆಯಲು ಅವಕಾಶ ಮಾಡಿಕೊಟ್ಟಿದೆ.

HEC ಸ್ಕೂಲ್ ಆಪ್ ಮ್ಯಾನೇಜ್ಮೆಂಟ್ (ಪ್ಯಾರಿಸ್), ಇಲ್ಲಿಯೂ ಉದ್ದಿಮೆಗಾರಿಕೆಗೆ ಬೆಂಬಲಿಸುವ “Entrepreneurship Lab” ನಡೆಸಲಾಗುತ್ತದೆ. ಈ ವಿವಿಯ ಮತ್ತೊಂದು ಹೆಚ್ಚುಗಾರಿಕೆ ಏನೆಂದರೆ ಈ ವಿವಿಯಲ್ಲಿ ಇಂಗ್ಲೀಶ್ ಮಾತ್ರವಲ್ಲದೇ ಅಲ್ಲಿನ ನುಡಿಯಾದ ಪ್ರೆಂಚಿನಲ್ಲೂ ಎಂಬಿಎ ಕಲಿಯಬಹುದು. ಮ್ಯಾನೇಜ್ಮೆಂಟ್ ಪಾಟ ಕಲಿಸುವಲ್ಲಿ ನವರ‍್ರ ವಿವಿಯದ್ದು (University of Navarra – IESE Business School) ತನ್ನದೇ ಬೇರ‍್ಮೆ ಇದೆ. ಇಲ್ಲಿ ಕೇವಲ ತಿಯರಿ ಮಾತ್ರ ಕಲಿಸದೆ ನೂರಕ್ಕೆ 80 ರಶ್ಟು ಎತ್ತುಗೆಯೋದು(case study)ಗಳ ಮೂಲಕ ಕಲಿಸುವ ಪದ್ದತಿಯಿದೆ. ಈ ಮೂಲಕ ಕಲಿಯುವ ವಿದ್ಯಾರ‍್ತಿಗಳು case study ಗಳನ್ನು ಓದಿ ತಮ್ಮ ಅನಿಸಿಕೆಗಳನ್ನು ಇತರರೊಂದಿಗೆ ಹಂಚಿಕೊಳ್ಳುತ್ತಾ, ಚರ‍್ಚೆಗಳ ಮೂಲಕ ತೀರ‍್ಮಾನಗಳನ್ನು ತೆಗೆದುಕೊಳ್ಳುವುದನ್ನು ಕಲಿಯುತ್ತಾರೆ.

ಹಾರ‍್ವರ‍್ಡ್ ವಿವಿಯಲ್ಲಿ ಅನುಬವದ ಮೂಲಕ ಕಲಿಸುವಿಕೆ ಇನ್ನೊಂದು ಪರಿ. ಮುಂದಾಳ್ತನ, ಜಾಗತಿಕ ನೋಟ ಮತ್ತು ಒಗ್ಗೂಡಿಸುವಿಕೆ (leadership, globalization, and an integrative exercise) ಈ ಮೂರು ಪರಿಯಾಗಿ ವಿದ್ಯಾರ‍್ತಿಗಳಿಗೆ ಕಲಿಸುವ ಮೂಲಕ ಅವರು ತರಗತಿಗಳಲ್ಲಿ ಕಲಿತಿರುವುದನ್ನು ಬಳಸಿ ಹೊಸದೊಂದು ಪುಟ್ಟ ಉದ್ದಿಮೆಯನ್ನು (micro-business) ಹುಟ್ಟು ಹಾಕುವ ಕೆಲಸ ನೀಡಲಾಗುತ್ತದೆ. ಇದು ಅವರಲ್ಲಿ ಹೊಸ ಹುರುಪನ್ನು ಮೂಡಿಸಿ ಚನ್ನಾಗಿ ಕಲಿಸಲು ನೆರವಾಗುತ್ತದೆ. ಇಶ್ಟೇ ಅಲ್ಲದೇ ಇಲ್ಲಿ ಒಳ್ಳೆಯ ಕಲಿಕೆಯ ಮಿಂಬಲೆ ತಾಣ (Learning Management System) ಏರ‍್ಪಾಡು ಮಾಡಲಾಗಿದೆ. ಅದರ ಮೂಲಕ ವಿವಿಯ ಒಳಗೆ ಕಲಿಕೆ, ಅನಿಸಿಕೆ, ಅರಕೆಗಳನ್ನು ಸಲೀಸಾಗಿ ಹಂಚಿಕೊಳ್ಳಲು ನೆರವಾಗುತ್ತದೆ.

ಜಗತ್ತಿನೆಲ್ಲೆಡೆ ಹೊಸ ಹೊಸ ಅರಕೆಗಳ ಮೂಲಕ ಕಲಿಸುವ ಪದ್ದತಿಗಳನ್ನು ಹೊಸದಾಗಿಸುವ ಕೆಲಸಗಳಾಗುತ್ತಿರುವುದನ್ನು ನಾವು ಗಮನಿಸುತ್ತಿರುತ್ತೇವೆ. ಅಲ್ಲದೇ ತಂತ್ರಗ್ನಾನವನ್ನು ಕಲಿಕೆಯಲ್ಲಿ ಸರಿಯಾಗಿ ಬಳಸಿಕೊಳ್ಳುವ ಪ್ರಯತ್ನಗಳು ಗೆಲ್ಲುತ್ತಿರುವುದನ್ನೂ ಮೇಲಿನ ಎತ್ತುಗೆಗಳಲ್ಲಿ ಕಾಣಬಹುದಾಗಿದೆ. ಇಂತಹ ಮಾರ‍್ಪಾಡುಗಳನ್ನು ಕಲಿಕೆಯಲ್ಲಿ ಅಳವಡಿಸುವ ಮೂಲಕ ಕಲಿಕೆಯನ್ನು ಮೇಲ್ಮಟ್ಟಕ್ಕೆ ಏರಿಸುವ ಪ್ರಯತ್ನಗಳು ನಮ್ಮ ನಾಡಿನಲ್ಲೂ ಆಗಬೇಕಿದೆ. ಆಗಲೇ ಜಾಗತಿಕ ಮಟ್ಟದಲ್ಲಿ ನಾವು ಅತ್ಯುತ್ತಮ ವಿಶ್ವವಿದ್ಯಾಲಯಗಳಿಗೆ ಸರಿಸಾಟಿಯಾಗಿ ಬೆಳೆಯಲು ಆದೀತು.

(ಚಿತ್ರ ಸೆಲೆ: novadesk.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: