ತಪ್ಪು ಮಾಡದವ್ರು ಯಾರವ್ರೆ?

– ವೆಂಕಟೇಶ ಚಾಗಿ.

ಪ್ರಶ್ನೆ, Question

ಬೂಮಿಯ ಮೇಲೆ ಜನಿಸಿದ ಪ್ರತಿಯೊಬ್ಬರೂ ಒಂದಲ್ಲಾ ಒಂದು ತಪ್ಪು ಮಾಡೇ ಮಾಡಿರ‍್ತಾರೆ ಅಲ್ಲವೇ? ನಾನು ತಪ್ಪೇ ಮಾಡಿಲ್ಲ ಎಂದು ಗಂಟಾಗೋಶವಾಗಿ ಹೇಳುವವರು ಯಾರಾದರೂ ಇದ್ದಾರೆಯೇ? ಇಲ್ಲ. ತಪ್ಪು ಮಾಡುವುದು ಮನುಶ್ಯನ ಸಹಜ ಗುಣ. ಚಿಕ್ಕ ವಯಸ್ಸಿನಲ್ಲೇ ಸಾಕಶ್ಟು ತಪ್ಪುಗಳನ್ನು ಮಾಡಿರುತ್ತೇವೆ. ಅವು ತಪ್ಪುಗಳಲ್ಲ. ಸ್ವಕಲಿಕೆಯ ಹಂತಗಳು. ತಪ್ಪುಗಳು ವಿಶಯಗಳನ್ನು ತಿಳಿಸುತ್ತಾ ಹೋಗುತ್ತವೆ. ಮಗು ಆಟವಾಡುವಾಗ, ಮಾತನಾಡುವಾಗ, ಬರೆಯುವಾಗ ಹೀಗೆ ಹಲವಾರು ಸನ್ನಿವೇಶಗಳಲ್ಲಿ ತನಗೆ ಅರಿವಿಲ್ಲದೆ ತಪ್ಪು ಮಾಡುತ್ತದೆ. ಆಗ ತಿಳಿದವರು ಮಗುವಿಗೆ ತನ್ನ ತಪ್ಪನ್ನು ಅರಿವಿಗೆ ತಂದಾಗ ಅತವಾ ಆ ತಪ್ಪಿನಿಂದ ಮಗುವಿಗೆ ನೋವುಂಟಾದಾಗ ಮುಂದೆ ಆ ತಪ್ಪನ್ನು ಮಾಡುವುದಿಲ್ಲ.

ಯುವಕರಾದಾಗ ಆಕರ‍್ಶಣೆ, ಆಮಿಶ, ಮೋಜು, ಅಗ್ನಾನ, ಕುತೂಹಲಕ್ಕೆ ಒಳಗಾಗಿ ಹಲವು ತಪ್ಪುಗಳನ್ನು ಮಾಡುತ್ತೇವೆ. ಆದರೆ ಆ ತಪ್ಪುಗಳು ನಮಗೆ ಅರಿವಾದಾಗ ಮತ್ತೊಮ್ಮೆ ಆ ತಪ್ಪುಗಳು ಮರುಕಳಿಸದಂತೆ ಎಚ್ಚರಿಕೆಯಿಂದ ಇರುತ್ತೇವೆ. ಸಂಸಾರದ ತಾಪತ್ರಯದಲ್ಲಿ ಕೆಲವರಿಗೆ ತಾವು ಮದುವೆಯಾದದ್ದೇ ತಪ್ಪಾಯಿತೇನೋ ಎಂದು ಅನಿಸಿಬಿಡುವುದುಂಟು. ಆದರೆ ಆ ತಪ್ಪುಗಳನ್ನು ಸರಿಪಡಿಸಿಕೊಂಡು ಜೀವನವನ್ನು ಸಂತೋಶದಿಂದ ಸಾಗಿಸುತ್ತಾರಲ್ಲ, ಅದು ನಿಜವಾಗಿಯೂ ಮೆಚ್ಚುವಂತದ್ದು.

ಪ್ರೀತಿಸಿ ತಪ್ಪು ಮಾಡಿದೆನಲ್ಲ ಎಂದುಕೊಂಡು ಜೀವನವನ್ನೇ ಅಂತ್ಯ ಮಾಡಿಕೊಳ್ಳುವವರೂ ಇದ್ದಾರೆ. ಇಂತ ದುಶ್ಟ ಮಕ್ಕಳನ್ನು ಹೆತ್ತು ತಪ್ಪು ಮಾಡಿದೆವಲ್ಲಾ ಎನ್ನುವ ಹೆತ್ತವರೂ ಇದ್ದಾರೆ. ಈ ಪಕ್ಶಕ್ಕೆ ಬಂದು ತಪ್ಪು ಮಾಡಿದೆನಲ್ಲಾ ಎನ್ನುವ ರಾಜಕಾರಣಿಗಳು ಇದ್ದಾರೆ. ಆ ಸಿನಿಮಾ ಒಪ್ಪಿಕೊಳ್ಳದೇ ತಪ್ಪು ಮಾಡಿದೆನಲ್ಲಾ ಎನ್ನುವ ಸಿನಿಮಾ ತಾರೆಯರೂ ಇದ್ದಾರೆ. ಒಟ್ಟಿನಲ್ಲಿ ತಪ್ಪು ಎಲ್ಲರ ಬೆನ್ನಿಗಂಟಿರುವುದಂತೂ ನಿಜ.

ತಪ್ಪುಗಳಾಗೋದು ಸಹಜ. ತಪ್ಪುಗಳಿಂದ ಕಲಿಕೆಗಳು ಉಂಟಾಗಬೇಕೆ ವಿನಹ, ಮತ್ತೆ ಮತ್ತೆ ತಪ್ಪುಗಳಾಗಬಾರದು. ಕೆಲವೊಮ್ಮೆ ನಮಗರಿವು ಇಲ್ಲದಂತೆಯೂ ತಪ್ಪಾಗಿಬಿಡುತ್ತದೆ. ಅದು ವಿದಿಲಿಕಿತ. ಆದರೆ ತಿಳಿದು ತಿಳಿದೂ ತಪ್ಪು ಮಾಡುವುದು ದೊಡ್ಡ ತಪ್ಪು ಅಲ್ಲವೇ?.  ತಪ್ಪಾಗಿದೆ ಎಂದು ಜೀವನಕ್ಕೆ ಕೊನೆ ಹಾಡುವುದು, ತಪ್ಪು ಎಂದು ಗೊತ್ತಿದ್ದರೂ ತಪ್ಪು ಮಾಡುವುದು ಎಲ್ಲದಕ್ಕಿಂತ ದೊಡ್ಡ ತಪ್ಪು. ತಪ್ಪುಗಳಿಂದ ಜೀವನ ಪಾಟ ಕಲಿಯೋಣ. ಇಂತಹ ತಪ್ಪುಗಳು ಮರುಕಳಿಸದಂತೆ ಜೀವಿಸುವುದು ಜಾಣತನ.

ಅದಕ್ಕೆ ಅಲ್ಲವೇ ಹಿರಿಯರು ಹೇಳಿರೋದು,  “ತಪ್ಪು ಮಾಡೋದು ಸಹಜ ಕಣೋ. ತಿದ್ದಿ ನಡೆಯೋನು ಮನುಜಾ ಕಣೋ” ಎಂದು.

( ಚಿತ್ರಸೆಲೆ: exitpromise.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks